ಅಡಿಕೆ ಸಸಿ ನೆಡುವವರು ಗಮನಿಸಿ- ಇಂತಹ ಅಡಿಕೆ ಸಸಿ ನೆಡಬೇಡಿ.

ಅಡಿಕೆ ಸಸಿ ನೆಡುವವರು ಗಮನಿಸಿ- ಇಂತಹ ಅಡಿಕೆ ಸಸಿ ನೆಡಬೇಡಿ.

ಅಡಿಕೆ ತೋಟ ಮಾಡಿದರೆ ನಮ್ಮ ಆರ್ಥಿಕ ಸ್ಥಿತಿ ಸ್ವಲ್ಪವಾದರೂ ಸುಧಾರಿಸಬಹುದು ಎಂದು ಎಲ್ಲರೂ ಈ ಕೃಷಿ ಮಾಡಲಾರಂಭಿಸಿದ್ದಾರೆ. ಬೆಳೆಯುವವರು ಹೆಚ್ಚಾದಂತೆ ಅದಕ್ಕನುಗುಣವಾಗಿ ಸಸಿಗಳೂ ಲಭ್ಯವಾಗಬೇಕು. ಹಲವಾರು ನರ್ಸರಿಗಳು ಈ ಕೆಲಸವನ್ನು ಮಾಡುತ್ತಿವೆ. ಸಸಿ ನರ್ಸರಿಯದ್ದಿರಲಿ, ಸ್ವಂತ ತಯಾರಿಸಿದ್ದು ಇರಲಿ, ನೀವು ನೆಡಲು ಉದ್ದೇಶಿಸಿರುವ ಗಿಡದಲ್ಲಿ ಈ ಚಿನ್ಹೆಗಳಿದ್ದರೆ ಅಂತಹ ಸಸಿ ನೆಡಬೇಡಿ. ಇದು ಎಲೆ ಚುಕ್ಕೆ ರೋಗ ತಗಲಿದ ಸಸಿಯಾಗಿರುತ್ತದೆ. ಇದನ್ನು ನೆಟ್ಟರೆ ಎಲೆ ಚುಕ್ಕೆ ರೋಗ ನಿಮ್ಮ ತೋಟಕ್ಕೆ ಹೊಸ ಅತಿಥಿ ಬಂತೆಂದೇ ತಿಳಿಯಿರಿ.

ಅಡಿಕೆ ಬೆಳೆಗಾರರ ಪಾಲಿಗೆ ಅತ್ಯಂತ ಗಂಭೀರ ಸಮಸ್ಯೆಯಾಗಿ ಬಂದ ಸಾಂಕ್ರಾಮಿಕ ಪಿಡುಗು ಎಲೆ ಚುಕ್ಕೆ ರೋಗ. ಇದಕ್ಕೆ ಪರಿಹಾರ ಇಲ್ಲವೇ? ಇದೆ. ಅದು 100% ಖಾತ್ರಿಯೇ? ಇಲ್ಲ. ವಾಸಿಯಾದರೆ ಮತ್ತೆ ಬರುವುದಿಲ್ಲವೇ? ಬರುತ್ತದೆ.  ಒಮ್ಮೆ ಔಷಧಿ ಸಿಂಪಡಿಸಿದರೆ  ಸಾಕೇ? ಸಾಲದು. ನಿರಂತರ ಸಿಂಪಡಿಸುತ್ತಾ ಇರಬೇಕು.ಇಂತಹ ಒಂದು ರೋಗ ಬಂದಾಗಿದೆ. ಇದು ಹೊಸ ರೋಗ ಅಲ್ಲ. ಹವಾಮಾನ ವೈಪರೀತ್ಯದ ಕಾರಣ ಇದು ತೀವ್ರವಾಗುತ್ತಿದೆ. ಕರ್ನಾಟಕದ ಎಲ್ಲಾ ಅಡಿಕೆ ಬೆಳೆಯಲಾಗುವ ಪ್ರದೇಶಗಳಲ್ಲೂ ಇದು ಇದೆ.  ಕೆಲವು ಕಡೆ ಪ್ರಾರಂಭಿಕ ಹಂತದಲ್ಲಿದೆ. ಮತ್ತೆ ಕೆಲವು ಕಡೆ ಮಿತಿ ಮೀರುವ ಹಂತಕ್ಕೆ ತಲುಪಿದೆ. ಒಟ್ಟಿನಲ್ಲಿ ಇದು ಅಡಿಕೆ ಬೆಳೆಗಾರರ ನೆಮ್ಮದಿ ಕೆಡಿಸಲು ಬಂದ ಖಾಯಿಲೆ.

 • ರೋಗ ಎಂದರೆ ಹಾಗೆಯೇ. ಇದನ್ನು ಪೂರ್ಣವಾಗಿ ನಿಯಂತ್ರಣ ಮಾಡಲಿಕ್ಕೆ ಸಾಧ್ಯವಾಗುವುದಿಲ್ಲ.
 • ಅದರಲ್ಲೂ ಗಾಳಿಯ ಮೂಲಕ ಬೀಜದ ಮೂಲಕ ಪ್ರಸಾರವಾಗುವ ರೋಗಗಳನ್ನು ನಿಯಂತ್ರಿಸುವುದಂತೂ ಬಹಳ ತ್ರಾಸದಾಯಕ ಮತ್ತು ವೆಚ್ಚದಾಯಕ.
 • ಎಲೆ ಚುಕ್ಕೆ ರೋಗವೂ ಹಾಗೆಯೇ. ಈ ರೋಗ ಬೀಜದ ಮೂಲಕವೂ ಪ್ರಸಾರವಾಗುತ್ತದೆ ಎಂಬುದಾಗಿ ಈ ಹಿಂದೆಯೇ ನಾವು ಅನುಭವದ ಮೂಲಕ ಹೇಳಿದ್ದೇವೆ.
 • ಮೊಳಕೆ ಬರುವಾಗಲೇ ಅದಕ್ಕೆ ಚುಕ್ಕೆ ರೋಗ ಕಾಣಿಸಿಕೊಂಡ ವರದಿ ಇದೆ.
 • ಈ ಲೇಖನದಲ್ಲಿ ಅಡಿಕೆ ಸಸಿಗೆ ಎಲೆ ಚುಕ್ಕೆ ರೋಗ ಹೇಗೆ ಕಾಣಿಸಿಕೊಳ್ಳುತ್ತದೆ.
 • ಅದನ್ನು ಹೇಗೆ ಗುರುತಿಸಬಹುದು.ಇಂತಹ ಸಸಿಯನ್ನು ನೆಡಬಹುದೇ ಎಂಬ ಬಗ್ಗೆ ವಿವರವಾಗಿ ತಿಳಿಯೋಣ.
ಎಲೆ ಚುಕ್ಕೆ ಅಥವಾ ಎಲೆ ಸುಟ್ಟಂತಾಗುವ ರೋಗ ಎಂದರೆ ಎಲೆಯಲ್ಲಿ ಹಳದಿ ಬಣ್ಣದಲ್ಲಿ ಒಂದು ಬಿಂದುವಿನಷ್ಟು ಗಾತ್ರಕ್ಕೆ ಚುಕ್ಕೆಗಳು
ಎಲೆ ಚುಕ್ಕೆ ಅಥವಾ ಎಲೆ ಸುಟ್ಟಂತಾಗುವ ರೋಗ ಎಂದರೆ ಎಲೆಯಲ್ಲಿ ಹಳದಿ ಬಣ್ಣದಲ್ಲಿ ಒಂದು ಬಿಂದುವಿನಷ್ಟು ಗಾತ್ರಕ್ಕೆ ಚುಕ್ಕೆಗಳು

ಎಲೆ ಚುಕ್ಕೆ ರೋಗ ಎಂದರೆ ಏನು?

 • ಎಲೆ ಚುಕ್ಕೆ ಅಥವಾ ಎಲೆ ಸುಟ್ಟಂತಾಗುವ ರೋಗ ಎಂದರೆ ಎಲೆಯಲ್ಲಿ ಹಳದಿ ಬಣ್ಣದಲ್ಲಿ ಒಂದು ಬಿಂದುವಿನಷ್ಟು ಗಾತ್ರಕ್ಕೆ ಚುಕ್ಕೆಗಳು ಕಾಣಿಸುತ್ತಾ ಅದು ವಿಸ್ತಾರವಾಗುತ್ತಾ ಹೋಗುತ್ತದೆ. Brown to black spot surrounded by yellow holo.   
 • ಸುಮಾರು 2 ಇಂಚು ಸುತ್ತಳತೆಯಷ್ಟು ವಿಸ್ತಾರವಾಗುತ್ತದೆ.
 • ಅದರ ಮಧ್ಯ ಭಾಗ, ಎಲ್ಲಿಂದ ಹಳದಿ ಪ್ರಾರಂಭವಾಯಿತೋ ಅಲ್ಲಿ ಒಣಗುತ್ತದೆ.
 • ಅದರ ಸುತ್ತ ಹಳದಿಯಾಗುತ್ತದೆ.
 • ಒಂದು ಎಲೆಯಲ್ಲಿ ಒಂದು ಕಡೆ ಮಾತ್ರವಲ್ಲ  ಅಲ್ಲಲ್ಲಿ ಇಂತಹ ರಚನೆಗಳು  ಉಂಟಾಗಿ ಅವೆಲ್ಲಾ ಪರಸ್ಪರ ಸೇರಿಕೊಂಡು ಇಡೀ ಎಲೆಯೇ ಒಣಗಲಾರಂಭಿಸುತ್ತದೆ.
 • ಇದು ವರ್ಷದ ಎಲ್ಲ ಋತುಮಾನಗಳಲ್ಲೂ  ತೊಂದರೆ ಮಾಡುವ ಶಿಲೀಂದ್ರ. ಈ ಪರಾವಲಂಭಿ ಶಿಲೀಂದ್ರ 8 ತಿಂಗಳ ತನಕ ಬದುಕಿರುತ್ತವೆ.
 • ಆದಾಗ್ಯೂ ಹೆಚ್ಚಿನ ಆರ್ದ್ರ ವಾತಾವರಣ ಮತ್ತು ಕಡಿಮೆ ತಾಪಮಾನದ ಋತುಮಾನದಲ್ಲಿ ಇದು ಜಾಸ್ತಿ.
 • ಇದಕ್ಕೆ ಕಾರಣವಾದ  ಶಿಲೀಂದ್ರ ಕೊಲೆಟ್ರೋಟ್ರಿಕಂ Colletotrichum gloeosporiodes and phyllosticta arecae.  
 • ಇದು ಬರೇ ಅಡಿಕೆಗೆ ಮಾತ್ರವಲ್ಲ. ಕೊಕ್ಕೋ, ಮೆಣಸು,ಬಾಳೆ, ಟೊಮೇಟೋ, ತಂಬಾಕು, ಜೋಳ ಇನ್ನೂ ಹಲವಾರು ಬೆಳೆಗಳಿಗೆ ಬಾಧಿಸುವ ರೋಗವಾಗಿದೆ.
 • ಮಳೆ ಹೆಚ್ಚು ಬರುವ ಕಡೆ ಇದು ಜಾಸ್ತಿ. ರೋಗ ಯಾವುದೇ ಬಾಧಿಸಲಿ.
 • ರೋಗಕಾರಕವು ಒಂದು ಆಶ್ರಯ ಸಸ್ಯದಲ್ಲಿ ಪರಾವಲಂಭಿಯಾಗಿ (ಬದನಿಕೆ Parasite) ತರಹ ಬದುಕಿ ಅದರ ಜೀವ ಹಿಂಡುತ್ತಾ ಬದುಕಿರುತ್ತದೆ.
ಅಲ್ಲಲ್ಲಿ ಇಂತಹ ರಚನೆಗಳು ಉಂಟಾಗಿ ಅವೆಲ್ಲಾ ಪರಸ್ಪರ ಸೇರಿಕೊಂಡು ಇಡೀ ಎಲೆಯೇ ಒಣಗಲಾರಂಭಿಸುತ್ತದೆ.
ಅಲ್ಲಲ್ಲಿ ಇಂತಹ ರಚನೆಗಳು ಉಂಟಾಗಿ ಅವೆಲ್ಲಾ ಪರಸ್ಪರ ಸೇರಿಕೊಂಡು ಇಡೀ ಎಲೆಯೇ ಒಣಗಲಾರಂಭಿಸುತ್ತದೆ.

ಸಸಿಯಲ್ಲಿ ರೋಗದ ಲಕ್ಷಣಗಳು:

 • ಈ ಚಿತ್ರದಲ್ಲಿ ಕಾಣುವ ಸಸಿಯಲ್ಲಿ ಎಲೆಗಳಲ್ಲಿ ಅಲ್ಲಲ್ಲಿ ಹಳದಿ ಚುಕ್ಕೆಗಳನ್ನು ಗಮನಿಸಿ.
 • ಇದು  ಸಸಿ ಹಂತದಲ್ಲಿ ಎಲೆ ಚುಕ್ಕೆ ಬಾಧಿಸಿದ ಕುರುಹು. ಕೆಳಭಾಗದ ಎಲೆಗಳಲ್ಲಿ ಚುಕ್ಕೆಗಳು ಕಣ್ಣಿಗೆ ಕಾಣುವಂತಿವೆ.
 • ಮೇಲಿನ ಎಲೆಯಲ್ಲಿ ಕಾಣಿಸುತ್ತಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಮೇಲಿನ ಎಲೆಗೂ ಇದರ ಸೋಂಕು ತಗಲಿದೆ.
 • ಇದನ್ನು ಸೂಕ್ಷ್ಮವಾಗಿ ಗಮನಿಸಬೇಕು.  ಎಳೆಯ ಸಸಿಗೆ ಗಾಳಿಯ ಮೂಲಕವೂ ರೋಗ ಸೋಂಕು ಆಗಿರಬಹುದು.
 • ಅಥವಾ ಬೀಜ ಆಯ್ಕೆ ಮಾಡಿದ ಮರದಲ್ಲಿ ಈ ರೋಗ ಇದ್ದಿದ್ದರೆ  ಅದರ ಮೂಲಕವೂ ರೋಗ ಬಂದಿರಬಹುದು.
 • ಸಾಧಾರಣವಾಗಿ ಎಲ್ಲಾ ಕಡೆಯ ನರ್ಸರಿಗಳಲ್ಲಿ, ರೈತರೇ ಅವರ ಮರದಿಂದ ಆರಿಸಿ ಮಾಡಿದ ಗಿಡದಲ್ಲಿಯೂ ಈ ರೀತಿ ಸಸಿಗಳು ಆಗುವುದನ್ನು ನೋಡಬಹುದು.
 • ಇಂತಹ  ಸಸಿಗಳಲ್ಲಿ ಎಲೆ ಬೆಳೆದಂತೆ ಅದರಲ್ಲಿ ಚುಕ್ಕೆಗಳು ದೊಡ್ಡದಾಗುತ್ತಾ ಕಣ್ಣಿಗೆ ಕಾಣಿಸುತ್ತವೆ.
 • ಚುಕ್ಕೆಗಳು ಸಣ್ಣದಿದ್ದಾಗ ಅದು ತಿಳಿ ಹಳದಿ ಬಣ್ಣದಲ್ಲಿ ಅಸ್ಪಷ್ಟವಾಗಿ ಇರುತ್ತದೆ.
 • ಪ್ರಾರಂಭಿಕ ಹಂತದಲ್ಲಿ ಬರೇ ಹಳದಿ ಬಣ್ಣದ ಸೂಜಿ ಮೊನೆಯಷ್ಟು  (pin point) ಸಣ್ಣದಾದ ಚುಕ್ಕೆ ಉಂಟಾಗಿ ಅದು ಹಿರಿದಾಗುತ್ತಾ ಬರುತ್ತದೆ.
 • ಈ ಗಿಡವನ್ನು ನೆಟ್ಟರೆ ಅದಕ್ಕೆ ಸಿಂಪರಣೆ ಮಾಡುತ್ತಿದ್ದರೂ ಸಹ ಅದನ್ನು ಪೂರ್ತಿಯಾಗಿ  ನಿವಾರಣೆ ಮಾಡಲು ಸಾಧ್ಯವಾಗುವುದಿಲ್ಲ. 
 • ಆ ಶಿಲೀಂದ್ರ ಸಸಿಯ ಎಲ್ಲಾದರೂ ಒಂದು ಕಡೆ ಇದ್ದು  ಮತ್ತೆ ಮತ್ತೆ ನಾನಿದ್ದೇನೆ ಎಂದು ಗೋಚರಿಸುತ್ತದೆ.
ಪ್ರಾರಂಭಿಕ ಹಂತದಲ್ಲಿ ಬರೇ ಹಳದಿ ಬಣ್ಣದ ಸೂಜಿ ಮೊನೆಯಷ್ಟು (pin point) ಸಣ್ಣದಾದ ಚುಕ್ಕೆ ಉಂಟಾಗಿ ಅದು ಹಿರಿದಾಗುತ್ತಾ ಬರುತ್ತದೆ
ಪ್ರಾರಂಭಿಕ ಹಂತದಲ್ಲಿ ಬರೇ ಹಳದಿ ಬಣ್ಣದ ಸೂಜಿ ಮೊನೆಯಷ್ಟು (pin point) ಸಣ್ಣದಾದ ಚುಕ್ಕೆ ಉಂಟಾಗಿ ಅದು ಹಿರಿದಾಗುತ್ತಾ ಬರುತ್ತದೆ

ಯಾವ ಸಸಿಯನ್ನು ನೆಡಬಹುದು:

 • ನೆಡುವ ಸಸಿಯಲ್ಲಿ ಎಲೆಗಳೇ ಪ್ರಾಮುಖ್ಯ. ಚುಕ್ಕೆ ರೋಗ ಇರುವ ಎಲೆಯನ್ನು ತೆಗೆದು ನಾಟಿ ಮಾಡಲಿಕ್ಕೆ ಕಷ್ಟವಾಗುತ್ತದೆ.
 • ಹಾಗಾಗಿ ಎಲೆ ಹಚ್ಚ ಹಸುರಾಗಿದ್ದು, ಅದರಲ್ಲೂ ಕೆಳಬಾಗದ ಎಲೆಯಲ್ಲಿ ಹಳದಿ ಬಣ್ಣದ ಯಾವುದೇ ಕಲೆಗಳು ಇರಬಾರದು.
 • ಅಂತಹ ಗಿಡಗಳು ಇದ್ದರೆ ಮಾತ್ರ ಅದನ್ನು ನಾಟಿಗೆ ಬಳಕೆ ಮಾಡಿ.
 • ಒಂದು ವೇಳೆ ನೂರು ಗಿಡಗಳಲ್ಲಿ ಒಂದೆರಡು ಗಿಡಗಳಿಗೆ ಈ ಚಿನ್ಹೆ ಇದ್ದರೆ, ಅದನ್ನು ನೆಡದೆ, ಉಳಿದ ಸಸಿ ನೆಡಬಹುದೇ? ಇಲ್ಲ.
 • ಆ ಸಂಧರ್ಭದಲ್ಲಿ  ತಕ್ಷಣವೇ ಚುಕ್ಕೆ  ಕಾಣಿಸಿಕೊಂಡ ಗಿಡಗಳನ್ನು ಪ್ರತ್ಯೇಕಿಸಿ ದೂರ ಇಡಿ.
 • ಅದರಲ್ಲಿ ಚುಕ್ಕೆ ಇರುವ ಗರಿಗಳನ್ನು ತೆಗೆದು ಸೂಕ್ತ  ಔಷಧಿಯನ್ನು ಸಿಂಪಡಿಸಿ, ಚುಕ್ಕೆ ಇಲ್ಲ ಎಂದು ಖಾತ್ರಿಯಾಗುವ ತನಕ 3-4 ತಿಂಗಳ  ತನಕ ಕಾದು ನಾಟಿ ಮಾಡಬೇಕು.
 • ಸರಿ ಇದ್ದ ಗಿಡಗಳನ್ನು ತಕ್ಷಣವೇ ನೆಡಬೇಡಿ.
 • ಅದಕ್ಕೆ ಶಿಲೀಂದ್ರ ನಾಶಕವನ್ನು ಸಿಂಪಡಿಸಿ, 2-3 ತಿಂಗಳ ತನಕ ಯಾವುದೇ ಗಿಡದಲ್ಲಿ ಚುಕ್ಕೆ ಕಾಣಿಸಿಕೊಳ್ಳದಿದ್ದರೆ ಅದನ್ನು ನಾಟಿ ಮಾಡಿ.
 • ಬೀಜದ ಆಯ್ಕೆ ಮಾಡುವಾಗ ಆ ತೋಟದಲ್ಲಿ ಎಲೆ ಚುಕ್ಕೆ ರೋಗ ಇದ್ದರೆ ಅಂತಹ  ಬೀಜದ ಮೂಲಕ ರೋಗ ಹರಡುತ್ತದೆ. 
 • ಎಲೆ ಚುಕ್ಕೆ ಇಲ್ಲದ ಭಾಗವೇ ಇಲ್ಲದ ಕಾರಣ ಬೀಜದ ಆಯ್ಕೆ ಮಾಡುವುದು ಬಹಳ ಕಷ್ಟದ ಕೆಲಸವಾಗಿದೆ. 
 • ಬಹುತೇಕ ಸಸಿಗಳಲ್ಲಿ ಈ ಚಿನ್ಹೆ ಕಾಣಿಸುತ್ತಿದೆ. ಈಗ  ಕಾಣಿಸದಿದ್ದರೂ ನೆಟ್ಟ ಮೇಲೆ ಕಾಣಿಸುತ್ತದೆ.
ಇಡೀ ಎಲೆಯೇ ಒಣಗಲಾರಂಭಿಸುತ್ತದೆ
ಇಡೀ ಎಲೆಯೇ ಒಣಗಲಾರಂಭಿಸುತ್ತದೆ

ಏನು ಸಿಂಪರಣೆ ಮಾಡಬೇಕು:

 • ಮಣ್ಣಿನ ರಸ ಸಾರವನ್ನು ಪರೀಕ್ಷಿಸಿ, ಅಗತ್ಯವಿದ್ದರೆ ಸುಣ್ಣದ ಬಳಕೆ ಮಾಡಿ.
 • ಸತು ಮತ್ತು ಮೆಗ್ನೀಶಿಯಂ  ಅಂಶ ಅಗತ್ಯವೇ ಎಂದು ತಿಳಿದುಕೊಳ್ಳಿ.
 • ಸಾಮಾನ್ಯವಾಗಿ ಮಳೆ ಅಧಿಕ ಬೀಳುವ ಕಡೆ ಇದರ ಅವಶ್ಯಕತೆ ಇರುತ್ತದೆ. 
 • ಇದನ್ನು ಸಣ್ಣ ಗಿಡಗಳಿಗೆ ಪತ್ರ ಸಿಂಚನ (Folier spray) ಮೂಲಕ ಕೊಡಿ.
 • ಸಾಧ್ಯವಾದಷ್ಟು ಮೇಲ್ಭಾಗದಲ್ಲಿ ಸಸಿಯನ್ನು ನೆಡಿ. 
 • ಎಲೆ ಚುಕ್ಕೆ ಮುನ್ನೆಚ್ಚರಿಕೆಯಾಗಿ  1 ಮಿಲಿ. ಲೀ. ಪ್ರೊಪಿಕೊನೆಜ಼ೋಲ್ ಅಥವಾ ಟುಬೆಕೊನೆಝೊಲ್  ಮತ್ತು 2.5  ಗ್ರಾಂ ಅಂತ್ರೋಕಾಲ್  ಮತ್ತು ಸಿಲಿಕಾನ್ ಸ್ಪ್ರೆಡ್ಡರ್  ಬಳಸಿ ಸಿಂಪರಣೆ ಮಾಡಿ. 
 • ಇದನ್ನು ತಿಂಗಳಿಗೊಮ್ಮೆ ಸಿಂಪರಣೆ ಮಾಡಿದರೆ ಪರಿಣಾಮ ಸಿಗುತ್ತದೆ.

ಎಲೆ ಚುಕ್ಕೆ ರೋಗ ಅಡಿಕೆ ಬೆಳೆಗಾರರ ಪಾಲಿಗೆ  ದುರದೃಷ್ಟ. ಇದರ ನಿವಾರಣೆ ತುಂಬಾ ಕಷ್ಟ. ನಾನು ಸಿಂಪಡಿಸಿದರೆ ನನ್ನ ನೆರೆಯವರು ಸಿಂಪಡಿಸದಿರಬಹುದು. ಸಿಂಪಡಿಸುವ ಸಮಯ ಬೇರೆ ಬೇರೆ ಆಗಬಹುದು. ಇದು ಹರಡುವಿಕೆಯನ್ನು ಹೆಚ್ಚಿಸುತ್ತದೆ. ವಾತಾವರಣ ಇದನ್ನು ನಿಯಂತ್ರಿಸುವುದೇ ಪರಿಹಾರ. ಇಷ್ಟಕ್ಕೂ  ಇದು ಯಾವ ಕಾರಣಕ್ಕೆ ಉಲ್ಬಣವಾಯಿತು ಎಂಬ ಬಗ್ಗೆ ಅಧ್ಯಯನ ಆಗಬೇಕು. ಸಿಂಪರಣೆ , ಎಲೆ ಕತ್ತರಿಸುವಿಕೆ, ಇವೆಲ್ಲಾ ನಿರಂತರ ಮಾಡುತ್ತಾ ಇರುವುದು ಅಷ್ಟೊಂದು ಪ್ರಾಯೋಗಿಕವಲ್ಲ. ರೋಗ ಉಲ್ಬಣಕ್ಕೆ ಕಾರಣ ಹುಡುಕುವುದು ಈಗಿನ ತುರ್ತು ಅಗತ್ಯ ಎನ್ನಿಸುತ್ತದೆ.   

Leave a Reply

Your email address will not be published. Required fields are marked *

error: Content is protected !!