ಅಡಿಕೆ ಬೆಳೆ ಮುಂದಿನ ದಿನಗಳಲ್ಲಿ ಏನಾಬಗಬಹುದು, ಭವಿಷ್ಯದಲ್ಲಿ ಹೀಗೇ ಬೆಲೆ ಉಳಿಯಬಹುದೇ? ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಎಚ್ಚರ! ಅಡಿಕೆ ಭವಿಷ್ಯ ಭಾರೀ ಅತಂತ್ರವಾಗಿದೆ.ಪ್ರತೀಯೊಬ್ಬ ಕೃಷಿಕನ ಮನಸ್ಸಿನಲ್ಲೂ ಈ ಒಂದು ವಿಚಾರ ಕೊರೆಯುತ್ತಿದೆಯಾದರೂ ಹೆಚ್ಚಿನವರು ಇನ್ನೂ ಪ್ರದೇಶ ವಿಸ್ತರಣೆ ಮಾಡುತ್ತಲೇ ಇದ್ದಾರೆ. ಆದರೆ ಅಡಿಕೆ ಈಗಾಗಲೇ ಸಂತೃಪ್ತ ಸ್ಥಿತಿಗೆ ಮುಟ್ಟಿದಂತಿದೆ.
ಈ ಹಿಂದೆಯೂ ಮುಂದೆ ಅಡಿಕೆಗೆ ಭವಿಷ್ಯವಿಲ್ಲ. ನೆಡಬೇಡಿ ಎಂದು ಹೇಳುತ್ತಿದ್ದರು. ಆದರೆ ಒಮ್ಮೆ ಬೆಲೆ ಕುಸಿದದ್ದೂ ಮತ್ತೆ ಮೇಲೇರಿತು. ಶ್ರೀಯುತ ಅಶೋಕ್ ಕುಮಾರ್ ಕರಿಕಳ ಅವರ ಪ್ರಕಾರ ಪ್ರತೀ 14 ವರ್ಷಗಳಿಗೊಮ್ಮೆ ಅಡಿಕೆ ಬೆಲೆ ಉತ್ತುಂಗಕ್ಕೆ ಏರುತ್ತದೆ. ಮತ್ತೆ ಪಾತಾಳಕ್ಕೆ ಇಳಿಯುತ್ತದೆ ಇದು ಅವರು ಅಧ್ಯಯನ ಮಾಡಿದ ವಿಚಾರ. ಹಿಂದೆ ಬೆಲೆ ಕುಸಿದದ್ದು ಮತ್ತೆ ಏರಲಾರಂಭಿಸಿತು. ಅಂದು ಸಾಂಪ್ರದಾಯಿಕ ಪ್ರದೇಶಗಳಲ್ಲಿ ಮಾತ್ರ ಅಡಿಕೆ ಇತ್ತು. ಈಗ ಅದರ ಪರಿಧಿ ಹೆಚ್ಚಾಗಿದೆ.ಅಡಿಕೆಗೆ ಬೇಡಿಕೆ ಇರಬಹುದು. ಆದರೆ ತೀರಾ ಕಡಿಮೆ ಬೆಲೆಗೆ ಅಡಿಕೆ ಕೊಡುವವರು ಮುಂದೆ ಬಂದರೆ ಏನಾಗಬಹುದು ಯೋಚಿಸಿ!
ಕೆಲವು ಪ್ರದೇಶಗಳ ರೈತರು ಭತ್ತ, ಗೋಧಿ ಮುಂತಾದ ಆಹಾರ ಬೆಳೆಗಳಿಂದ ಬರುವ ಆದಾಯಕ್ಕಿಂತ ಅಡಿಕೆಗೆ ಕಿಲೋಗೆ 100 ರೂ. ಸಿಕ್ಕಿದರೂ ಲಾಭದಾಯಕ ಎಂದು ಹೇಳುತ್ತಾರೆ. ಇದು ಓರ್ವ ಪಶ್ಚಿಮ ಬಂಗಾಲದ ಮಿತ್ರರ ಅಭಿಪ್ರಾಯ. ಅಲ್ಲೆಲ್ಲಾ ಭತ್ತ ಪ್ರಧಾನ ಕೃಷಿ. ಒಂದು ಎಕ್ರೆಗೆ ಸರಾಸರಿ 2೦ ಕ್ವಿಂಟಾಲು ಭತ್ತ ಇಳುವರಿಯಂತೆ. ಇದನ್ನು ಮಾರಾಟ ಮಾಡಿದಾದ ಖರ್ಚು ಕಳೆದು ಉಳಿಕೆ ಗರಿಷ್ಟ ರೂ.10,000. ಅದೇ ಒಂದು ಎಕ್ರೆಯಲ್ಲಿ ಅಡಿಕೆಯಿಂದ ಎಕ್ರೆಗೆ 10 ಕ್ವಿಂಟಾಲು ಬಂದರೂ ಖರ್ಚು ಕಳೆದು 50,000 ಉಳಿಕೆಯಾಗುತ್ತದೆ. ಈ ಲೆಕ್ಕಾಚಾರದಲ್ಲಿ ಇಲ್ಲೆಲ್ಲಾ ಭಾರೀ ಪ್ರಮಾಣದಲ್ಲಿ ಅಡಿಕೆ ವಿಸ್ತರಣೆ ಆಗುತ್ತಿದೆ. ಪಶ್ಚಿಮ ಬಂಗಾಲ, ಅಸ್ಸಾಂ, ತ್ರಿಪುರ ಇಲ್ಲೆಲ್ಲಾ ಅಡಿಕೆ ಕೃಷಿ ಹೆಚ್ಚಾಗುತ್ತಿದ್ದು, ಹಸಿ ಅಡಿಕೆ ಕ್ವಿಂಟಾಲಿಗೆ 3000 ರೂ. ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಈ ಬೆಲೆಗೆ ಅಡಿಕೆ ಸಿಕ್ಕಿದರೆ ಅದರ ಬೆಲೆ ಈಗಿನ ಬೆಲೆಗಿಂತ 50% ಇಳಿಕೆಯಾಗುವುದು ನಿಶ್ಚಿತ. ಈ ಕಾಲ ಸದ್ಯವೇ ಬರುವ ಮುನ್ಸೂಚನೆ ಕಾಣಿಸುತ್ತಿದೆ!
ಎಲ್ಲೆಲ್ಲಿ ಬೆಳೆ ಪ್ರದೇಶ ವಿಸ್ತರಣೆಯಾಗುತ್ತಿದೆ:
- ಕರ್ನಾಟಕದಲ್ಲಿ ನೋಡಿದರೆ ದಕ್ಷಿಣ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಅಡಿಕೆ ವಿಸ್ತರಣೆಯಾಗುತ್ತಿದೆ.
- ಉತ್ತರ ಕರ್ನಾಟಕದಲ್ಲೂ ಕೆಲವು ಜಿಲ್ಲೆಗಳು ಸೇರಿಕೊಳ್ಳುತ್ತಿದೆ.
- ನಮ್ಮ ರಾಜ್ಯದಲ್ಲೇ ಕಳೆದ 3 ವರ್ಷಗಳಿಂದ ಸಾಂಪ್ರದಾಯಿಕ ಪ್ರದೇಶಗಳನ್ನು ಬಿಟ್ಟು 50% ಹೆಚ್ಚುವರಿ ಪ್ರದೇಶಗಳು ಸೇರಿಕೊಂಡಿವೆ.
- ನೆರೆಯ ತಮಿಳುನಾಡಿನಲ್ಲಿ ಸಾವಿರಾರು ಹೆಕ್ಟೇರು ಭೂಮಿಯಲ್ಲಿ ಅಡಿಕೆ ವಿಸ್ತರಣೆಯಾಗುತ್ತಿದೆ ಎಂಬುದಾಗಿ ಪೊಲ್ಲಾಚಿಯ ಮಿತ್ರರೊಬ್ಬರು ನಿನ್ನೆತಾನೇ ಹೇಳಿದ್ದರು.
- ಆಂದ್ರಪ್ರದೇಶದಲ್ಲೂ ತಮಿಳುನಾಡಿನಷ್ಟೇ ಪ್ರದೇಶ ಹೆಚ್ಚಾಗಿದೆ.
- ಕೇರಳದಲ್ಲಿಯೂ ಬೆಳೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದ ಕೆಲವು ಕಡೆ ನಮ್ಮ ಕರ್ನಾಟಕದವರೇ ಅಡಿಕೆ ಬೆಳೆಸಿದ್ದಿದೆ.
- ತಮಿಳುನಾಡು, ಆಂದ್ರ ಇಲ್ಲೆಲ್ಲಾ 10-20 ಎಕ್ರೆ ಲೆಕ್ಕದಲ್ಲಿ ಬೆಳೆದವರಿದ್ದಾರೆ.
- ಒಂದು ಮೂಲದ ಪ್ರಕಾರ ಈ ವರ್ಷದಿಂದ ಅಲ್ಲಿ ಫಸಲು ಪ್ರಾರಂಭವಾಗುತ್ತದೆಯಂತೆ.
- ನಮ್ಮ ರಾಜ್ಯದಲ್ಲೂ ಅಡಿಕೆ ಗೌರಿ ಬಿದನೂರು, ಹೊಸೂರು ತನಕ ತಲುಪಿದೆ.
- ನಿಖರ ಲೆಕ್ಕಾಚಾರ ಇಲ್ಲದಿದ್ದರೂ ಅಂದಾಜು ಕಳೆದ 4-5 ವರ್ಷಗಳಿಂದ ಅಡಿಕೆ ಪ್ರದೇಶ ದುಪ್ಪಟ್ಟಾಗಿದೆಯಂತೆ.
- ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ದಕ್ಷಿಣ ಕರ್ನಾಟಕದಲ್ಲಿ ಇಳುವರಿ ಸಾಂಪ್ರದಾಯಿಕ ಪ್ರದೇಶಗಳಿಗಿಂತ ಹೆಚ್ಚು ಇದೆ. ಖರ್ಚು ಕಡಿಮೆ.
ಏನಾಗಬಹುದು ಮಾರುಕಟ್ಟೆ:
- ನಮ್ಮ ದೇಶದಲ್ಲಿ ಮಾತ್ರ ಅಡಿಕೆಯ ಬಳಕೆ ಹೆಚ್ಚು. ಅದರಲ್ಲೂ ಉತ್ತರ ಪ್ರದೇಶ ಮತ್ತು ಗುಜರಾತ್ ಗಳಲ್ಲಿ ಅತ್ಯಧಿಕ.
- ಜನ ಅಡಿಕೆ ತಿನ್ನುವುದನ್ನು ಬಿಟ್ಟಿಲ್ಲ.
- ಗುಟ್ಕಾ ಎಂಬ ಸಿದ್ದ ಉತ್ಪನ್ನ ಮಾರುಕಟ್ಟೆಗೆ ಬಂದ ಕಾರಣ ಅಡಿಕೆಗೆ ಈ ತನಕ ಮರ್ಯಾದೆ ಉಳಿದಿದೆ.
- ಗುಟ್ಕಾ ಎಂಬುದು ಆರೋಗ್ಯಕ್ಕೆ ಹಾನಿಕರ ಉತ್ಪನ್ನವಾದ ಕಾರಣ ಯಾವಾಗಲೂ ಇದಕ್ಕೆ ಕಂಟಕ ಬರಬಹುದು.
- ಅದೇನೇ ಇದ್ದರೂ ಮಾರುಕಟ್ಟೆಗೆ ಬೇಕಾಗುವಷ್ಟು ಅಂದರೆ ಬೇಡಿಕೆಗೆ ಅನುಗುಣವಾಗು ಪೂರೈಕೆ ಇದ್ದಷ್ಟು ಸಮಯ ಮಾತ್ರ ಬೆಲೆ.
- ಬೆಳೆಪ್ರದೇಶ ಹೆಚ್ಚಾದಾಗ ಏನಾಗುತ್ತದೆ ಎಂಬುದನ್ನು ನಾವೆಲ್ಲಾ ಬಲ್ಲವರು.
- ಅಧಿಕ ಉತ್ಪಾದನೆಯೇ ಅಡಿಕೆ ಕೃಷಿಕರ ಪಾಲಿಗೆ ಕಂಟಕವಾಗುವುದು.
- ಇಲ್ಲಿ ಎಷ್ಟು ಕಡಿಮೆ ಬೆಲೆ ಸಿಕ್ಕರೂ ಆಗಬಹುದು ಎಂದುಕೊಂಡವರು ಬಚಾವಾಗುತ್ತಾರೆ.
- ಮೇಲೆ ಹೇಳಿದಂತೆ ಕಡಿಮೆ ಬೆಲೆಗೆ ಅಡಿಕೆ ಕೊಡುವವರು ನಮ್ಮ ದೇಶದಲ್ಲೇ ಇದ್ದಾರೆ.
- ಅಡಿಕೆ ಮಾರುಕಟ್ಟೆ ಭವಿಷ್ಯದಲ್ಲಿ ಎಲ್ಲಿ ಕಡಿಮೆ ಬೆಲೆಗೆ ಲಭ್ಯವೋ ಅತ್ತ ಕೇಂದ್ರೀಕೃತವಾಗುತ್ತದೆ. (ಉದಾ.ಆಮದು ಮಾಡಿಕೊಳ್ಳುವ ಗೋಡಂಬಿ ಅಗ್ಗವಾದ ಕಾರಣ ಈಗ ಗೋಡಂಬಿ ತಯಾರಿಕಾ ಘಟಕಗಳು ದೇಶೀಯ ಉತ್ಪಾದನೆಯನ್ನು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ.
- ಆಮದು ಆಗುವ ಅಡಿಕೆ ಕಡಿಮೆ ಬೆಲೆಗೆ ಸಿಗುವ ಕಾರಣ ಅಡಿಕೆ ಬೆಲೆ ಆಗಾಗ ಅನಿಶ್ಚಿತವಾಗುತ್ತದೆ.)
- ಅಡಿಕೆ ಬೆಳೆಗಾರರು ಚುನಾವಣೆಯಲ್ಲಿ ತಿರುಗಿಬಿದ್ದರೆ ( ಅಭ್ಯರ್ಥಿ ಗೆಲ್ಲಿಸುವ) ಎಂಬ ಕಾರಣದಿಂದ ಆಮದು ನಿಯಂತ್ರಣ, ಗುಟ್ಕಾ ಮೇಲೆ ಮೆದು ಧೋರಣೆ ಮುಂದುವರಿಯುತ್ತಾ ಇದೆ.
- ಹಾಗಾಗಿ ಬೆಲೆ ಚೆನ್ನಾಗಿದೆ. ಅದೆಲ್ಲವೂ ನಮಗೆ ಬೆಂಬಲವಾಗಿದ್ದರೂ ಸಹ ದೇಶೀಯವಾಗಿಯೇ ಉತ್ಪಾದನೆ ಹೆಚ್ಚಾದರೆ ಯಾರೂ ಏನೂ ಮಾಡುವುದಕ್ಕೆ ಆಗುವುದಿಲ್ಲ.
- ಕರ್ನಾಟಕದ ಬೆಳೆಗಾರರ ಅಡಿಕೆ ಮಾತ್ರ ಭಾರತದಲ್ಲಿ ಬಳಸಬೇಕು ಎಂದು ಹೇಳಲಿಕ್ಕಾಗುತ್ತದೆಯೇ?
![ತ್ರಿಪುರದಲ್ಲಿ ಅಡಿಕೆ ಬೆಲೆ ಇಲ್ಲಿಗಿಂತ 50% ಕಡಿಮೆ](https://kannada.krushiabhivruddi.com/wp-content/uploads/2023/10/1696527572832-FILEminimizer.jpg)
![ಈ ಪ್ರಕಟಣೆ ಗಮನಿಸಿ](https://kannada.krushiabhivruddi.com/wp-content/uploads/2023/10/Screenshot_2023-10-05-17-53-04-619_com.facebook.katana-FILEminimizer-795x1024.webp)
ಗುಣಮಟ್ಟ ಸರಿಯಿಲ್ಲದಿದ್ದರೆ ಯಾವಾಗಲೂ ತೊಂದರೆ:
- ಅಡಿಕೆ ಬೆಳೆಗಾರರ ಪಾಲಿಗೆ ಒಂದಲ್ಲ ಒಂದು ದಿನ ಕಂಟಕವಾಗುವುದು ಅಡಿಕೆಯ ಗುಣಮಟ್ಟದ ವಿಚಾರ.
- ಬೆಳೆಗಾರರಲ್ಲಿ ಅಡಿಕೆ ಗುಣಮಟ್ಟಕ್ಕೆ ಕುಂದು ಬಂದದ್ದು ಕಡಿಮೆ.
- ಅಡಿಕೆಯನ್ನು ನಾವು ಯಾರಿಗೆ ಮಾರಾಟ ಮಾಡಿದ್ದೇವೆಯೋ ಅವರು ಅದನ್ನು ಹಾಂಡಲ್ ( Pacakage and Trasport) ಮಾಡುವ ವಿಧಾನ ಏನೇನೂ ಸರಿ ಇಲ್ಲ.
- ಇದನ್ನು CSIR ಈಗಾಗಲೇ ಗುರುತಿಸಿದೆ. ಬೆಳೆಗಾರರು ಚೆನ್ನಾಗಿ ಬೇಯಿಸಿ, ಒಣಗಿಸಿ ದಾಸ್ತಾನು ಇಟ್ಟು ಮಾರಾಟ ಮಾಡುತ್ತಾರೆ.
- ಯಾಕೆಂದರೆ ಅವರಿಗೆ ಗರಿಶ್ಟ ಬೆಲೆ ಬೇಕು.ಅದೇ ಅಡಿಕೆಯನ್ನು ಖರೀದಿಸಿ ( ತೇವ ಇರುವ ವಾತಾವರಣದಲ್ಲಿ ನೆಲದ ಮೇಲೆ ಸೆಣಬಿನ ದೋಣಿ ಚೀಲದಲ್ಲಿ ತುಂಬಿಸಿ ವಾರಕ್ಕೂ ಹೆಚ್ಚು ಸಮಯ ದಾಸ್ತಾನು ಇಡಲಾಗುತ್ತದೆ)
- ಸಂಗ್ರಹಿಸಿಡುವ ವ್ಯವಸ್ಥೆ ನೋಡಿದರೆ ಆ ಅಡಿಕೆಗೆ ಉಗ್ರಾಣ ಕೀಟ ಹುಡುಕಿಕೊಂಡು ಬರಬಹುದು.
- ಶಿಲೀಂದ್ರ ಸೋಂಕು ಉಂಟಾಗಲು ಸಮಯ ಬೇಡ. ಇದು ಕೊರತೆ ಹೇಳುವುದಲ್ಲ.
- ಇಂದಿಗೂ ಗುಣಮಟ್ಟದ ಅಡಿಕೆಗೆ ಬೇಡಿಕೆ ಇದೆ. ಬೆಲೆ ಇದೆ.
- ಆದರೆ ನಾವು ಕೊಡುವ ಅಡಿಕೆಯಲ್ಲಿ ಅವರ ನಿರೀಕ್ಷೆಯ ಗುಣಮಟ್ಟ ಇಲ್ಲದಾಗಿದೆ.
- ಅದೇ ಕಾರಣಕ್ಕೆ ಈಗ ಹಳೆ ಅಡಿಕೆ ಬೇಡ ಎಂಬ ಸ್ಥಿತಿ ಉಂಟಾದದ್ದು.
- ಮುಂದಿನ ದಿನಗಳಲ್ಲಿ ಅಡಿಕೆ ಮಾರುಕಟ್ಟೆ ನಿಲ್ಲುವುದು ಗುಣಮಟ್ಟದ ಮೇಲೆ.
- ಉತ್ತಮ ಗುಣಮಟ್ಟದ ಅಡಿಕೆಗೆ ಬೇಡಿಕೆಯೂ ಇರುತ್ತದೆ. ಬೆಲೆಯೂ ಇರುತ್ತದೆ.
- ಬೆಳೆಗಾರರ ಹಿತಕ್ಕಾಗಿ ಖರೀದಿಸುವವರೂ ವರ್ಗೀಕರಣ ಮಾಡಿದ ಅಡಿಕೆಯನ್ನು ಉತ್ತಮವಾಗಿ ಗಾಳಿಯಾಡದಂತೆ, ಕೀಟ ಬಾರದಂತೆ ದಾಸ್ತಾನು ಇರಿಸುವಂತಾಗಬೇಕು.
![ನಮ್ಮಲ್ಲಿ ಹಸಿ ಅಡಿಕೆ ಬೆಲೆ ಇಷ್ಟಿದೆ](https://kannada.krushiabhivruddi.com/wp-content/uploads/2023/10/Screenshot_2023-10-07-00-07-04-172_com.facebook.katana-FILEminimizer.jpg)
ಅಕ್ಕಿಗೆ ಬೆಲೆ ಹೆಚ್ಚಾದರೆ- ಅಡಿಕೆ ಮಾನ ಉಳಿಯುತ್ತದೆ:
- ಅಡಿಕೆ ಪ್ರದೇಶ ನಾಗಾಲೋಟದಿಂದ ವಿಸ್ತರಣೆ ಆದದ್ದು, ಅದಕ್ಕೆ ಸರಿಸಾಟಿಯಾದ ಬೆಲೆ ಬೇರೆ ಉತ್ಪನ್ನಕ್ಕೆ ಇಲ್ಲದ ಕಾರಣಕ್ಕೆ.
- ಪರಿಸ್ಥಿತಿ ಸ್ವಲ್ಪ ಬದಲಾಗುತ್ತಾ ಬರಲಾರಂಭಿಸಿದೆ.
- ಅಕ್ಕಿಯ ಬೆಲೆ ಸಧ್ಯವೇ ಕ್ವಿಂಟಾಲು 7000 ಕ್ಕೆ ಏರಲಿದೆ.
- ಮುಂದಿನ ವರ್ಷ ಇನ್ನೂ ಏರಲಿದೆ.
- ಈ ರೀತಿ ಅಕ್ಕಿ- ಭತ್ತದ ಬೆಲೆ ಏರಿದರೆ ಭತ್ತದ ಹೊಲಗಳು ಅಡಿಕೆ ತೋಟಗಳಾಗುವುದು ತಪ್ಪುತ್ತದೆ.
- ಅಡಿಕೆಯೇ ಕಡಿಯಲ್ಪಟ್ಟು ಭತ್ತ ಮತ್ತೆ ಬಂದರೂ ಅಚ್ಚರಿ ಇಲ್ಲ.
- ಯಾಕೆಂದರೆ ಭತ್ತದ ಸಾಗುವಳಿ ಮಾಡಲು ಈಗ ಯಾಂತ್ರೀಕರಣ ಬಂದು ಕಷ್ಟ ದೂರವಾಗಿದೆ.
- ಅಡಿಕೆಗೆ ಕಷ್ಟಗಳು ಹೆಚ್ಚಾಗುತ್ತಿವೆ. ಭತ್ತ ವರ್ಷಕ್ಕೆ 2 ಬೆಳೆಯಾದ ಕಾರಣ ಲಾಭವಾಗುತ್ತದೆ.
ಬೆಳೆಗಾರರು ಏನು ಮಾಡಬೇಕು?
- ಎಲ್ಲಾ ರೈತರಲ್ಲಿ ವಿನಂತಿ ಏನೆಂದರೆ ಇನ್ನೂ ಇನ್ನೂ ಅಡಿಕೆ ಪ್ರದೇಶ ವಿಸ್ತರಣೆಗೆ ಹೋಗಬೇಡಿ.
- ಇರುವ ತೋಟವನ್ನು ಉತ್ತಮವಾಗಿ ನೋಡಿಕೊಳ್ಳಿ.
- ಅಡಿಕೆ ಈಗ ನಮಗೆ ಜಗಿಯಲಾಗದ ಕಡಲೆಯಾಗುವ ಸ್ಥಿತಿ ಬಂದಿದೆ.
- ಎಲೆ ಚುಕ್ಕೆ ರೋಗ (Leaf spot) ಇನ್ನೂ ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ.
- ಹಳದಿ ಎಲೆ ರೋಗವೂ ಸಹ. ಕೀಟಗಳೂ ಹೆಚ್ಚಾಗುತ್ತಿವೆ.
- ಎಲ್ಲಾ ಉತ್ಪಾದನಾ ಪರಿಕರಗಳು (Factors of Production) ದುಬಾರಿಯಾಗುತ್ತಿದೆ.
- ಮುಂದಿನ ವರ್ಷಗಳಲ್ಲಿ ಕೆಲಸಗಾರರ ಮಜೂರಿ, ಕೆಲಸಗಾರರ ಲಭ್ಯತೆ ಹಾಗೆಯೇ ನೈಪುಣ್ಯತೆ, ಗೊಬ್ಬರ, ನಿರ್ವಹಣೆಯನ್ನು ಒಮ್ಮೆ ಯೋಚಿಸಿ ಊಹಿಸಿ.
- ಆಗ ನಿಮಗೇ ಅರ್ಥವಾಗುತ್ತದೆ.
- ಹಾಗಾಗಿ ಮಿಶ್ರ ಬೆಳೆಗಳ ಮೂಲಕ ಅಡಿಕೆಯನ್ನು ಉಪಬೆಳೆಯಾದರೂ ಮುನ್ನಡೆಸುವ ಮಟ್ಟಕ್ಕೆ ಬಂದರೆ ನಾವು ಬಚಾವಾಗಲು ಸಾಧ್ಯ.
ಅಡಿಕೆ ದರ ಇಳಿಕೆಯಾದರೆ ನಮ್ಮ ಖರೀದಿ ಸಾಮರ್ಥ್ಯ ಕಡಿಮೆಯಾಗುತ್ತದೆ. ಆರ್ಥಿಕತೆಗೆ ಇದರಿಂದ ಹೊಡೆತ ಬೀಳುತ್ತದೆ. ಅದು ನಮಗೇ ತಿರುಗಿ ಬೀಳುತ್ತದೆ. ಹಾಗಾಗಿ ಅಡಿಕೆ ಬೆಳೆ ಇರಲಿ. ಆದರೆ ವಿಸ್ತರಣೆ ಬೇಡ. ಬೆಲೆ ಕುಸಿಯುವುದನ್ನು ತಡೆಯಲೂ ನಮ್ಮಿಂದ ಸಾಧ್ಯ. ಆದರೆ ನಾವೇ ಬೆಲೆ ಕುಸಿತಕ್ಕೆ ತುಪ್ಪ ಎರೆಯುವುದು ಬೇಡ. ಈ ತನಕ ಸಹಕಾರಿ ಮಾರಾಟ ವ್ಯವಸ್ಥೆಗಳು ಬೆಳೆಗಾರರ ಬೆನ್ನೆಲುಬಾಗಿ ನಿಂತಿವೆ. ಅವರು ಸೋತರೆ ನಮ್ಮ ಗತಿ ಅಧೋಗತಿ.