ಹವಾಮಾನ ಬದಲಾವಣೆ ಎಂದರೆ ಏನು ಎಂಬುದರ ಸಾಧಾರಣ ಚಿತ್ರಣ ನಮ್ಮ ಗಮನಕ್ಕೆ ಈಗಾಗಲೇ ಬಂದಾಗಿದೆ. ಇನ್ನು ಇದರ ಪರಿಣಾಮವನ್ನು ಒಂದೊಂದಾಗಿ ನಮ್ಮ ಅನುಭವಕ್ಕೆ ಬರಲಿದೆ. ಈ ಸನ್ನಿವೇಶದಿಂದಾಗಿ ಎಲ್ಲದಕ್ಕಿಂತ ಮುಂಚೆ ಅಂತರ್ಜಲದ ಮೇಲಿನ ಒತ್ತಡ ಹೆಚ್ಚಾಗಿ ಅದು ಭಾರೀ ಕುಸಿತವಾಗುವ ಸಂಭವ ಇದೆ. ಮುಂದಿನ ದಿನಗಳಲ್ಲಿ ಮಳೆ ಕಡಿಮೆಯಾಗುವುದು ಅಥವಾ ಮಳೆಯ ಹಂಚಿಕೆ ವ್ಯತ್ಯಾಸವಾಗುವುದು ಮಾಮೂಲಿಯಾಗುತ್ತದೆ. ಇದೆಲ್ಲದ ಪರಿಣಾಮ ಕುಡಿಯಲು ಮತ್ತು ಕೃಷಿಗೆ ನೀರಿನ ಕೊರೆತೆ. ನೀರಿಗಾಗಿ ಅಂತರ್ಜಲಕ್ಕೆ ಕೈಹಾಕಿ ಅದನ್ನು ಇನ್ನೂ ಇನ್ನೂ ಬರಿದು ಮಾಡಬೇಕಾಗುತ್ತದೆ.
ಅಂತರ್ಜಲವೇ ನೀರಿಗಾಗಿ ನಮ್ಮ ಆಯ್ಕೆಯಾಗಿದೆ. ಹಳ್ಳಿಗಳಲ್ಲಿ ಇದ್ದ ಬಾವಿಗಳು ಬತ್ತಿ ಹೋಗಿವೆ. ಹೊಳೆ, ಕೆರೆಗಳು ಮಳೆ ಕಡಿಮೆಯಾಗಿ ಬೇಗ ಬತ್ತುತ್ತಿವೆ. ಇದನ್ನು ನಂಬಿದರೆ ಕಷ್ಟ ಎಂದು ಕೋಟ್ಯಾಂತರ ವರ್ಷಗಳಿಂದ ಶೇಖರಣೆಯಾಗಿದ್ದ ಅಂತರ್ಜಲಕ್ಕೆ ಕೈ ಹಾಕಿಯಾಗಿದೆ. ಅದುವೇ ಮುಂದೆ ನಮಗೆ ನೀರಿಗೆ ಆಸರೆ. ಮಿಚಿಗನ್ ಯೂನಿವರ್ಸಿಟಿಯ (Univerasity of Michigan) ಅಧ್ಯಯನದಂತೆ ಭಾರತದಲ್ಲಿ ಇನ್ನು ಮುಂದಿನ ವರ್ಷಗಳಲ್ಲಿ 2030-40 ರ ಒಳಗೆ ಅಂತರ್ಜಲ ಎಂಬುದು 3 ಪಟ್ಟು ಕೆಳೆಗೆ ಇಳಿಯಲಿದೆ. ಈಗ ನಾವು 500-600 ಅಡಿಗೆ ನೀರು ಪಡೆಯುತ್ತಿದ್ದರೆ ನಮ್ಮ ಮಕ್ಕಳ ಕಾಲಕ್ಕೆ ಅದು 1800-2000 ಅಡಿ ಆದರೂ ಅಚ್ಚರಿ ಇಲ್ಲ. ಈಗ ನಮ್ಮಲ್ಲಿ 100 ಕುಟುಂಬಕ್ಕೆ 90 ಕುಟುಂಬಗಳು ಕುಡಿಯಲೂ ಸಹ ಕೊಳವೆ ಬಾವಿಯ ನೀರನ್ನು ಆಶ್ರಯಿಸಿವೆ. ಕೆಲವೇ ಸಮಯದಲ್ಲಿ ಇದು 100% ಆಗಲಿದೆ. ಅಂತರ್ಜಲ ಮಟ್ಟ ಕೆಳಗೆ ಹೋದಂತೆ ಮೇಲ್ಜಲ ಮಟ್ಟ ಇಳಿಯುತ್ತಾ ಬರುತ್ತದೆ ಅಥವಾ ಕ್ಷೀಣವಾಗುತ್ತದೆ. ಇದು ಈಗಾಗಲೇ ಭಾರತದ ಹೆಚ್ಚಿನ ಕಡೆ ಆಗಿದೆ.
ಎಲ್ಲದಕ್ಕೂ ಕಾರಣ ವಾತಾವರಣದ ಬಿಸಿ:
- ವಾತಾವರಣ ಬಿಸಿಯಾದಂತೆ ನೆಲದ ಮೇಲ್ಪದರು ಒಣಗಲಾರಂಭಿಸುತ್ತದೆ.
- ಆಗ ನೀರಿನ ಆವೀಕರಣ ಹೆಚ್ಚಾಗುತ್ತದೆ. ಮತ್ತೊಂದೆಡೆ ಸಸ್ಯಗಳ ಬಾಷ್ಪೀಭವನವೂ ಹೆಚ್ಚಾಗುತ್ತದೆ.
- ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗೆ ನೀರಿನ ಒತ್ತಡ ಹೆಚ್ಚಾಗುತ್ತದೆ.
- ಹೆಚ್ಚು ಹೆಚ್ಚು ನೀರಿನ ಅಗತ್ಯ ಬಂದಂತೆ ಕೊಳವೆ ಬಾವಿಗಳ ಮೂಲಕ ನೀರಿನ ಬಳಕೆ ಹೆಚ್ಚಾಗುತ್ತದೆ.
- ಮಳೆ ಇರಬೇಕಾದ ಸಮಯದಲ್ಲಿ ವಾತಾವರಣದ ಬಿಸಿಲು ಹೆಚ್ಚಾಗಿ 1 ಡಿಗ್ರಿ ತಾಪಮಾನ ಹೆಚ್ಚಳವಾದರೂ ಸಾಕು, ಬೆಳೆಗಳಿಗೆ 5.9 % ನೀರಿನ ಒತ್ತಡ ಹೆಚ್ಚಾಗುತ್ತದೆ (ಮಳೆಗಾಲದ ಬಿಸಿಲಿನ ಪ್ರಖರತೆ ಹೆಚ್ಚು)
- ಚಳಿಗಾಲದಲ್ಲಿ ಆದರೆ 3.5 % ನೀರಿನ ಅಗತ್ಯ ಹೆಚ್ಚಾಗುತ್ತದೆ.
- ಮಳೆಗಾಲದಲ್ಲಿ ಮಳೆ ಬಾರದೆ ಇದ್ದರೆ ಕೃಷಿಗೆ ಭಾರೀ ಹಾನಿ ಉಂಟಾಗುತ್ತದೆ.
- ಈ ಋತುಮಾನದ ಬಿಸಿಲಿನಲ್ಲಿ ವಿಕಿರಣ ಶಕ್ತಿ ಹೆಚಾಗಿರುವ ಕಾರಣ ಸಸ್ಯಗಳು ಅದನ್ನು ತಡೆದುಕೊಳ್ಳಲು ಹೆಚ್ಚಿನ ತೇವಾಂಶವನ್ನು ಬಯಸುತ್ತವೆ.
- ಹಾಗಾಗಿಯೇ ಪ್ರಕೃತಿ ಈ ಋತುಮಾನದಲ್ಲಿ ಇಳಿಗೆ ಮಳೆಯನ್ನು ಹರಿಸಿ ತಂಪಾದ ವಾತಾವರಣವನ್ನು ಉಂಟುಮಾಡುತ್ತದೆ.
ಎಲ್ಲೆಲ್ಲಿ ನೀರಿನ ಕ್ಷಾಮ ತಲೆದೋರಲಿದೆ:
- ದೇಶದಲ್ಲಿ ಕೆಲವು ಪ್ರದೇಶಗಳನ್ನು ಈಗಾಗಲೇ ಅಂತರ್ಜಲ ಕುಸಿದ ಪ್ರದೇಶಗಳು ಎಂದು ಗುರುತಿಸಲಾಗಿದೆ.
- ಅಲ್ಲೆಲ್ಲಾ ಹವಾಮಾನ ವ್ಯತ್ಯಯದಿಂದ ಭಾರೀ ಸಮಸ್ಯೆಗಳು ಎದುರಾಗಲಿದೆ.
- ದೇಶದ ವಾಯವ್ಯ ಭಾಗ, ನೈರುತ್ಯ ಭಾಗ, ಮಧ್ಯ ಭಾರತ, ಹಾಗೆಯೇ ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಈಗಾಗಲೇ ಅಂತರ್ಜಲಮಟ್ಟ ಭಾರೀ ಕೆಳಕ್ಕೆ ಹೋಗಿದೆ ಅಲ್ಲೆಲ್ಲಾ ಇನ್ನೂ ಪರಿಸ್ಥಿತಿ ಬಿಗಡಾಯಿಸಲಿದೆ.
- ನಮ್ಮ ಕರ್ನಾಟಕದ ಕೆಲವು ಬರ ಪಿಡಿತ ಪ್ರದೇಶಗಳು ಸಹ ಭಾರೀ ನೀರಿನ ಕ್ಷಾಮ ಎದುರಿಸಬೇಕಾಗಬಹುದು.
- ಕರಾವಳಿ ಕರ್ನಾಟಕದ ಪ್ರದೇಶಗಳು ಅತ್ಯಧಿಕ ಮಳೆ ಕಂಡರೂ ಹಂಚಿಕೆ ವ್ಯತ್ಯಯವಾಗಿ ಬೇಸಿಗೆಯ ಸಮಯದಲ್ಲಿ ನೀರಿನ ಬರವನ್ನು ಎದುರಿಸಬೇಕಾಗಬಹುದು.
- ನದಿಗಳು ಬೇಗನೆ ಬತ್ತುವುದನ್ನು ನಾವು ಈಗಾಗಲೇ ಗಮನಿಸಿದ್ದು, ಮುಂದಿನ ದಿನಗಳಲ್ಲಿ ಮಳೆ ಬಂದು ಕೆಲವೇ ತಿಂಗಳಲ್ಲಿ ನೀರಿನ ಹರಿವು ನಿಲ್ಲುವ ಸ್ಥಿತಿ ಉಂಟಾಗಲಿದೆ.
- ನದಿಗಳಲ್ಲಿ ನೀರು ತಳಕ್ಕಿಳಿಯಲು ಮರಳು ತುಂಬುವುದು ಒಂದು ಕಾರಣವಾದರೆ, ಮರಳು ತುಂಬಲು ಅವೈಜ್ಞಾನಿಕ ಭೂ ಅಗೆತವು ಕಾರಣವಾಗಿದೆ.
ಏನು ಮಾಡಬೇಕು?
- ಮುಂದಿನ ವರ್ಷಗಳಲ್ಲಿ ನೀರಿನ ಕ್ಷಾಮ ಉಂಟಾಗುವ ಸೂಚನೆಯನ್ನು ಈಗಾಗಲೇ ತಜ್ಞರು ವರದಿಮಾಡಿದ್ದಾರೆ.
- ಇದನ್ನು ಕೃಷಿ ಮಾಡುವವರು ಹಾಗೂ ಸರಕಾರ ಗಂಭೀರ ವಿಷಯವಾಗಿ ಪರಿಗಣಿಸಬೇಕು.
- ಸರಕಾರದ ಅಭಿವೃದ್ದಿ ಇಲಾಖೆಗಳು ಜನತೆಗೆ ಈ ವಿಷಯವನ್ನು ತಲುಪಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು.
- ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಳವೆ ಬಾವಿಗಳ ಶೋಷಣೆ, ಕೃಷಿ ಭೂಮಿ ವಿಸ್ತರಣೆ ಮುಂತಾದ ನೀರು ವ್ಯಯಮಾಡುವ ಕೆಲಸಕಾರ್ಯಗಳಿಗೆ ಸ್ವಲ್ಪವಾದರೂ ನಿಬಂಧನೆಗಳನ್ನು ವಿಧಿಸಬೇಕು.
- ಭೂಮಿಯ ಮೇಲ್ಮೈಗೆ ಬಿಸಿಲಿನ ಹೊಡೆತ ಬೀಳದ ತರಹ ಭೂ ಹೊದಿಕೆ ಇದ್ದಾಗ ನೀರಿನ ಆವೀಕರಣ ಕಡಿಮೆಯಾಗುತ್ತದೆ.
- ಅವ್ಯಾಹತ ಕಾಡಿನ ನಾಶ ಭೂಮಿಯ ಮೇಲಿನ ತಾಪಮಾನವನ್ನು ಹೆಚ್ಚಿಸುತ್ತದೆ.
- ನೀರಿನ ಅಗತ್ಯವನ್ನೂ ಹೆಚ್ಚಿಸುತ್ತದೆ. ಇದರಿಂದಾಗಿ ನೀರಿನ ಶೋಷಣೆ ಉಂಟಾಗುತ್ತದೆ.
- ಕೃಷಿಕರು ಸಾಧ್ಯವಾದಷ್ಟು ಮಳೆಯಾಶ್ರಿತ ಬೆಳೆಗೆ ಹೆಚ್ಚಿನ ಆದ್ಯತೆ ನೀಡಬೇಕು.
- ಕೊಳವೆ ಬಾವಿಯ ನೀರನ್ನು ಅವಲಂಭಿಸಿ ಕೃಷಿ ಮಾಡುವವರು ಅಗತ್ಯಕ್ಕಿಂತ ಹೆಚ್ಚಿನ ನೀರನ್ನು ಬಳಸಬಾರದು.
- ಮೇಲು ಹೊದಿಕೆ, ಸಾವಯವ ತ್ಯಾಜ್ಯಗಳ ಬಳಕೆ ಮಾಡಿ ಮಣ್ಣಿನ ಮೇಲ್ಪದರ ಬಿಸಿಯಾಗದಂತೆ ರಕ್ಷಿಸಬೇಕು.
- ನೀರಿನ ಕ್ಷಾಮ ಉಂಟಾದರೆ ಕೃಷಿ ನೀರಾವರಿ ಮೇಲೆ ಎಲ್ಲರ ಕಣ್ಣು ಬೀಳುತ್ತದೆ.
- ಕೃಷಿ ನಂತರ. ಮೊದಲ ಆದ್ಯತೆ ಕುಡಿಯುವ ನೀರಿಗೆ ಎಂಬ ಸ್ಥಿತಿ ಬರುತ್ತದೆ.
- ಸಾರ್ವಜನಿಕ ಕುಡಿಯುವ ನೀರು ವ್ಯವಸ್ಥೆಗಳಲ್ಲಿ ಹೆಚ್ಚಿನವು ಕೊಳವೆ ಬಾವಿಯ ನೀರಿನ ಮೂಲವನ್ನು ಅವಲಂಭಿಸಿರುವುದು ನಮಗೆಲ್ಲಾ ತಿಳಿದಿರುವ ವಿಚಾರ.
- ಅಲ್ಲಿಯೂ ಅವೈಜ್ಞಾನಿಕ ನೀರೆತ್ತುವಿಕೆ , ಬಳಕೆ ನಡೆಯುತ್ತಿದ್ದು, ಇಂತಹ ಬಾವಿಗಳು ಬೇಗನೆ ಬತ್ತಿ ಹೋಗುವುದು ಸಾಮಾನ್ಯ.
- ಆಗ ಕೃಷಿಕ ಹೊಲದ ಬಾವಿಗಳತ್ತ ದೃಷ್ಟಿ ಬೀಳುತ್ತದೆ.
- ಕೃಷಿ ವೃತ್ತಿಯನ್ನೇ ಜೀವನೋಪಾಯಕ್ಕಾಗಿ ತೊಂದರೆ ಉಂಟಾಗುತ್ತದೆ.
- ಸಂದಿಗ್ಧ ಪರಿಸ್ಥಿತಿಯೂ ಬರಬಹುದು. ಅಂತಹ ಸಂದರ್ಭಗಳು ಬಂದಾಗ ಕಡಿಮೆ ನೀರಿನಲ್ಲೂ ನಾವು ಬೆಳೆ ಉಳಿಸಿಕೊಳ್ಳುವ ಬಗ್ಗೆ ಮುಂಚಿತವಾಗಿ ಸಿದ್ದರಿರುವುದು ಅಗತ್ಯ.
ಮುಂದಿನ ದಿನಗಳು ಕೃಷಿಕರಿಗೆ ಕಷ್ಟದ ದಿನಗಳಾಗಲಿವೆ. ಒಂದೆಡೆ ಕೃಷಿ ಕೂಲಿ ಕಾರ್ಮಿಕರ ಕೊರತೆ, ಇನ್ನೋಂದೆಡೆ ನೀರಿನ ಅಭಾವ ಪ್ರಮುಖ ಸಮಸ್ಯೆ. ಇತ್ತೀಚೆಗೆ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿರುವುದು ತುಂಬಾ ದುಖಃದ ಸಂಗತಿ. ಕೃಷಿ ಎಂದರೆ ಸಾವಯವ ತ್ಯಾಜ್ಯಗಳನ್ನು ಮಣ್ಣಿಗೆ ಸೇರಿಸಿ ಅದರ ರಚನೆಯನ್ನು ಸುಧಾರಿಸುತ್ತಾ ಬೆಳೆ ಬೆಳೆಯುವುದಾಗಿದೆ. ರಸ ಗೊಬ್ಬರಗಳು ಇಳುವರಿ ಹೆಚ್ಚಳಕ್ಕೆ ಅಥವಾ ಆಯಾ ಬೆಳೆಯ ಕಾಲಾವಧಿ ಇಳುವರಿಗೆ ಮಾತ್ರ. ಮಣ್ಣು ಎಂಬ ಮಾದ್ಯಮದಲ್ಲಿ ಕೃಷಿ ಮಾಡುವಾಗ ಅದರ ರಚನೆ ಸುಧಾರಿಸುತ್ತಾ ಇರದಿದ್ದರೆ ಮುಂದೆ ಕೃಷಿ ಲಾಭದಾಯಕವಾಗುವುದಿಲ್ಲ. ಕೃಷಿ ಹೊಲ ಮತ್ತು ಅದಕ್ಕೆ ಬೇಕಾಗುವ ಸಾವಯವ ತ್ಯಾಜ್ಯಗಳ ಸರಬರಾಜು ವ್ಯವಸ್ಥೆ ಸಮತೋಲನದಲ್ಲಿರಬೇಕು. ಈಗ ಕೃಷಿ ಭೂಮಿ ಹೆಚ್ಚಾಗಲಾರಂಭಿಸಿದೆ. ಸಾವಯವ ಪರಿಕರ ಒದಗಿಸುವ ಭೂಮಿ ಕಡಿಮೆಯಾಗುತ್ತಿದೆ. ಮಣ್ಣಿನ ರಚನೆ ಸುಧಾರಿಸದೆ ಇರುವ ಕಾರಣ ಮಣ್ಣು ಸವಕಳಿ ಉಂಟಾಗಿ ಮರಳು , ನೊರಜು ಕಲ್ಲುಗಳ ಪ್ರಮಾಣ ಹೆಚ್ಚಾಗುತ್ತಿದೆ. ಕೃಷಿ ಮಾಡುವವರು ಮಣ್ಣಿನ ಫಲವತ್ತತೆ ಹೆಚ್ಚಳಕ್ಕೆ ಪ್ರಾಮುಖ್ಯತೆ ನೀಡಿದರೆ ಬರಗಾಲದಲ್ಲೂ ಸಸ್ಯಗಳು ಬದುಕಿ ಉಳಿಯಲು ಸಹಾಯವಾಗುತ್ತದೆ.