ಅಂತರ್ಜಲ ಯಾಕೆ ಬರಿದಾಯಿತು? ಮುಂದಿನ ಸ್ಥಿತಿ ಏನಾಗಬಹುದು?

ಅಂತರ್ಜಲ ಯಾಕೆ ಬರಿದಾಯಿತು? ಮುಂದಿನ ಸ್ಥಿತಿ ಏನಾಗಬಹುದು?

ಈ ವರ್ಷ ಕರಾವಳಿ ಮಲೆನಾಡಿನಲ್ಲಿ ಅಂತರ್ಜಲ ಬರಿದಾಗಲಾರಂಭಿಸಿದೆ. ಕೆಲವು ಮೂಲಗಳ ಪ್ರಕಾರ ಸುಮಾರು 25% ಕೊಳವೆ ಬಾವಿಗಳು ಬರಿದಾಗಿವೆ. ಈ ವರ್ಷ ಕೊರೆದಷ್ಟು ಕೊಳವೆ ಬಾವಿ ಈ ಹಿಂದೆ ಯಾವ ವರ್ಷದಲ್ಲೂ ಆದದ್ದಿಲ್ಲ ಎನ್ನುತಾರೆ ಜಲ ಶೋಧಕರು ಮತ್ತು ರಿಗ್ ಏಜೆಂಟರು. ಯಾಕೆ ಇಷ್ಟೊಂದು ಕೊಳವೆ ಬಾವಿ ಬರಿದಾಯಿತು? ಮುಂದೆ ಕೊಳವೆ ಬಾವಿ ನೀರಿನ ಮೂಲವನ್ನು ಆಶ್ರಯಿಸಿ ಕೃಷಿ ಮಾಡುವವರ ಸ್ಥಿತಿ ಏನಾಗಬಹುದು? ಯಾವ ಮುನ್ನೆಚ್ಚರಿಕೆ ವಹಿಸಬೇಕು ಈ ಬಗ್ಗೆ ಮಾಹಿತಿ ಇಲ್ಲಿದೆ.


ಕರಾವಳಿ ಮತ್ತು ಮಲೆನಾಡಿನ ಭೂ ಪ್ರಕೃತಿ ಬಯಲು ನಾಡಿನದ್ದಕ್ಕಿಂತ ಭಿನ್ನ. ಇಲ್ಲಿ ಇರುವ ಹಳ್ಳ, ಹೊಳೆ, ನದಿ ಬೇರೆ ಕಡೆ ಇರಲಿಕ್ಕಿಲ್ಲ. ಸುಮಾರು 6 ತಿಂಗಳುಗಳ ಕಾಲ ಮಳೆಗಾಲ ಇರುವುದು ಈ ಭಾಗದ ವಿಶೇಷ.ಬಯಲು ನಾಡಿನ ಜನ ಈಗಲೂ ಹೇಳುವುದು ನಿಮಗೆ ಮಳೆ ಯತೇಚ್ಚವಾಗಿ ಬರುವ ಕಾರಣ ನೀರಿಗೆ ಬರವಿಲ್ಲವಲ್ಲ ಎಂದು. ಆದರೆ ಇಲ್ಲಿನ ಸ್ಥಿತಿ ಹಾಗಿಲ್ಲ. ಎಷ್ಟೇ ಮಳೆ ಬರಲಿ, ನಿರಂತರ 5-6 ತಿಂಗಳು ಮಳೆ ಇಲ್ಲವೆಂದಾದರೆ ನೀರಿಗೆ ಕ್ಷಾಮ. ಕೊಳವೆ ಬಾವಿ ಎಂಬ ವ್ಯವಸ್ಥೆ ಇದ್ದುದರಿಂದ ಜನ ಕುಡಿಯುವ ನೀರಿಗೆ ಕಷ್ಟ ಪಡುವ ಸ್ಥಿತಿ ಇಲ್ಲ. ಇಲ್ಲವಾದರೆ ತೋಟಕ್ಕೆ ನೀರಿನ ಬಳಕೆ ಬಿಡಿ ಕುಡಿಯುವುದಕ್ಕೂ ಇಲ್ಲಿ ನೀರು ಕಷ್ಟ ಎಂಬ ಸ್ಥಿತಿ ಇದೆ. ಕೊಳವೆ ಬಾವಿ ಎಂಬ ವ್ಯವಸ್ಥೆ ಬರುವ ಮುಂಚೆ ಇಲ್ಲಿನ ಜನ ಕುಡಿಯುವ ನೀರಿಗಾಗಿ ಹೊಳೆ ಹಳ್ಳ ತೋಡುಗಳಲ್ಲಿ ಮರಳು ತೋಡಿ ಅದರಲ್ಲಿ ತೂತು ಮಾಡಿದ ಮಣ್ಣಿನ ಗಡಿಗೆಯನ್ನು ಹೂತಿಟ್ಟು ಅದರಲ್ಲಿ ತುಂಬಿದ ನೀರನ್ನು ಮನೆಗೊಯ್ಯುತ್ತಿದ್ದರು. ಸ್ನಾನ, ಬಟ್ಟೆ ಒಗೆಯಲು ಹೊಳೆ ಹಳ್ಳಗಳಲ್ಲಿ ನೀರು ಸಂಗ್ರಹವಾಗಿರುವ ಹೊಂಡಗಳಿಗೆ ಹೋಗುತ್ತಿದ್ದರು. ಈಗ ಹೊಳೆ ಹಳ್ಳಗಳಲ್ಲಿ ಗಡಿಗೆ ಇಟ್ಟು ನೀರು ತೆಗೆಯಲಿಕ್ಕೂ ನೀರಿಲ್ಲ. ಹೊಳೆಯಲ್ಲಿ ಹಿಂದೆ ಇದ್ದ ನೀರೇ ಬತ್ತದ ಹೊಂಡಗಳು ಇಂದು ತಳ ಕಾಣುವಷ್ಟು ಬತ್ತಿದೆ. ಇದಕ್ಕೆಲ್ಲಾ ಕಾರಣ ಇಲ್ಲಿನ ಭೂ ಪ್ರಕೃತಿ ಮತ್ತು ನೀರಿನ ಅತಿ ಬಳಕೆ ಎನ್ನಬೇಕು.


ಕರಾವಳಿಯ ಭೂ ಪ್ರಕೃತಿ:

 • ಕರಾವಳಿ ಭಾಗದ ಭೂ ಪ್ರಕೃತಿ ರಾಜ್ಯದ ಉಳಿದ ಭಾಗಗಳಿಗೆ ಹೋಲಿಸಿದರೆ ಸಂಪೂರ್ಣ ಭಿನ್ನ.
 • ಮಲೆನಾಡಿಗೂ ಸ್ವಲ್ಪ ಕರಾವಳಿಯ ಹೋಲಿಕೆ ಇದೆ.
 • ಬಯಲು ಸೀಮೆ ಪ್ರದೇಶ ಅಥವಾ ಮೈದಾನ ಪ್ರದೇಶ ಇಲ್ಲಿ ಮಳೆಯೇ ಬಾರದಿದ್ದರೆ ನೀರಿಗೆ ಕ್ಷಾಮವೇ ಹೊರತು ಕರಾವಳಿ ಮಲೆನಾಡಿನಲ್ಲಿ ಬಂದ ಮಳೆಯ ಅರ್ಧ ಪಾಲು ಬಂದರೂ ಇಲ್ಲಿ ನೀರಿಗೆ ಬರ ಇಲ್ಲ.
 • ಕರಾವಳಿಯಲ್ಲಿ ಮಳೆ ಬಂದಾಗ ಭೂಮಿಗೆ ಬೀಳುವ ನೀರಿನ 90 % ಕ್ಕೂ ಹೆಚ್ಚು ಸಮುದ್ರ ಸೇರುತ್ತದೆ.
 • ಇದನ್ನು ಹಿಡಿದಿಡುವುದಕ್ಕೆ ಸಾಧ್ಯವೇ ಇಲ್ಲ.
 • ಇಲ್ಲಿ ತಿಂಗಳಾನುಗಟ್ಟಲೆ ನಿರಂತರವಾಗಿ ಮಳೆ ಸುರಿಯುವ ಕಾರಣ ಮಳೆಗಾಲದಲ್ಲಿ ಎಲ್ಲಾ ಭೂಪ್ರದೇಶವೂ ನೀರು ಕುಡಿದು ಸಂತೃಪ್ತವಾಗಿ ಹೊರಗೆ ಹಾಕುವ ಸ್ಥಿತಿಯಲ್ಲಿ ಇರುತ್ತವೆ.
 • ಸುಮಾರಾಗಿ ಇಲ್ಲಿನ ಮಣ್ಣಿನಲ್ಲಿ ಮೇಲ್ಪದರ ಗರಿಷ್ಟ ½ ಅಡಿಯಷ್ಟು ಮೆಕ್ಕಲು ಮಣ್ಣು ಇರುತ್ತದೆ.
 • ಆ ನಂತರ ಸಿಗುವುದು ಕೆಲವು ಕಡೆ ಜಂಬಿಟ್ಟಿಗೆ ಕಲ್ಲು, ಇನ್ನು ಕೆಲವು ಕಡೆ ಕೆಂಪು ಮಣ್ಣು.
 • ಇದು ಸುಮಾರಾಗಿ 10 ಅಡಿ ತನಕ ಇರುತ್ತದೆ.
 • ಆ ನಂತರ ಸಿಗುವುದು ಬಿಳಿ ಜೇಡಿ ಮಣ್ಣು.
 • ಇದು 15-20 ಅಡಿ ತನಕವೂ ಇರುತ್ತದೆ.
 • ಅದು ಕಳೆದ ಮೇಲೆ ಮೆದು ಶಿಲೆಗಳು, ಅ ನಂತರ ಬಿರುಕು ಶಿಲೆಗಳು , ತದನಂತರ ಗಟ್ಟಿ ಶಿಲೆಗಳು ಇರುತ್ತವೆ.
 • ಇದು ಸುಮಾರಾಗಿ 45-100 ಅಡಿ ತನಕವೂ ಇರುತ್ತದೆ.( ನಾವೆಲ್ಲಾ ಕೊಳವೆ ಬಾವಿ ತೋಡುವಾಗ ಕೇಸಿಂಗ್ ಪೈಪು ಹಾಕುವ ಆಳವೇ ಗಟ್ಟಿ ಶಿಲೆ ಸಿಗುವ ಆಳ)
 • ಕೆಲವು ಕಡೆ ಶಿಲೆ ಕಲ್ಲುಗಳು ಇರುವಲ್ಲಿ ಜೇಡಿ ಮಣ್ಣಿನ ಬದಲಿಗೆ ಶಿಲೆ ಕಲ್ಲುಗಳೇ ಸಿಗುತ್ತವೆ.
 • ಮೇಲ್ಮಣ್ಣಿಗೆ ಬಿದ್ದ ಮಳೆ ನೀರು ಕೆಳಕ್ಕೆ ಇಳಿದು ಅಲ್ಲೇ ಹೆಚ್ಚು ಹೊತ್ತು ತಂಗಿದರೆ ಕೆಳಭಾಗದ ಮಣ್ಣಿಗೆ ಜಿನುಗುತ್ತಾ ಮೆದು ಶಿಲೆ, ಬಿರುಕು ಶಿಲೆ, ಗಟ್ಟಿ ಶಿಲೆಗಳ ಅವಕಾಶಗಳ ಎಡೆಯಲ್ಲಿ ಜಿನುಗುತ್ತಾ ಅದು ಅಂತರ್ಜಲವಾಗುತ್ತದೆ.
 • ಮಳೆ ನೀರು ಭೂಮಿಗೆ ಬಿದ್ದಾಗ ಈ ರೀತಿ ನೀರು ಅಂತರ್ಜಲಕ್ಕೆ ಸೇರಿವುದಕ್ಕಿಂತ ಹೆಚ್ಚು, ಹೊಳೆಯಲ್ಲಿ ನೀರು ತಂಗುವ ಹೊಂಡ, ಕೆರೆ, ಮುಂತಾದ ಕಡೆ ನೀರು ವಿಶ್ರಮಿಸಿದಾಗ ಹೆಚ್ಚಿನ ಪ್ರಮಾಣದಲ್ಲಿ ನೀರು ಶಿಲಾಪದರದತ್ತ ಸಾಗುತ್ತದೆ.
 • ಕರಾವಳಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ನೀರು ತಂಗುವ ಜಾಗಗಳು ಮುಚ್ಚಿಕೊಂಡು ಹೋಗುತ್ತಿವೆ.
 • ಹೊಳೆ, ಹಳ್ಳಗಳಲ್ಲಿ ನೀರು ತಂಗುತ್ತಿದ್ದ ಕಡೆ ಕೃಷಿ ಉದ್ದೇಶಕ್ಕೆ ನೀರೆತ್ತಿ ಅದೂ ಸಹ ಬರಿದಾಗುತ್ತಿದೆ.
 • ಕೆರೆ ಎಂಬ ನೀರು ಸಂಗ್ರಹ ಪಾತ್ರೆ ಮಾಯವಾಗುತ್ತಿದೆ.
 • ಮಣ್ಣು ಸವಕಳಿ ಹೆಚ್ಚಾಗಿ ಮೇಲ್ ಮಣ್ಣು ಕೊಚ್ಚಣೆಯಾಗಿ ನೀರಿನ ಹರಿವಿನ ವೇಗ ಹೆಚ್ಚಾಗುತ್ತಿದೆ.
 • ಸಾಗರದತ್ತ ನೀರು ವೇಗವಾಗಿ ಹರಿಯುವ ಕಾರಣ ನೀರು ಅಂತರ್ಜಲಕ್ಕೆ ಸೇರಿಕೊಳ್ಳಲು ಆಸ್ಪದ ಕಡಿಮೆಯಾಗಿದೆ.
 • ಇದಷ್ಟೇ ಅಲ್ಲದೆ ಇಲ್ಲಿ ನದಿ, ಹಳ್ಳಗಳ ನೀರು ಪೂರ್ವದಿಂದ ಪಶ್ಚಿಮಕ್ಕೆ ಹರಿಯುವಂತವುಗಳು.
 • ಪೂರ್ವಕ್ಕೆ ಇರುವ ಪಶ್ಚಿಮ ಘಟ್ಟ ಎಲ್ಲಾ ನದಿ, ಹೊಳೆಗಳ ಉಗಮಸ್ಥಾನವಾಗಿರುತ್ತದೆ.
 • ಅಲ್ಲಿ ಉಗಮವಾಗಿ ಅದು ಸುಮಾರು 60-70 ಕಿಲೋ ಮೀಟರು ದೂರದ ಅರಬ್ಬೀ ಸಮುದ್ರಕ್ಕೆ ಸೇರುತ್ತದೆ.
 • ಸಮುದ್ರಕ್ಕೂ , ಘಟ್ಟಭಾಗಕ್ಕೂ ಸುಮಾರು 1000 ಅಡಿಗೂ ಹೆಚ್ಚು ಎತ್ತರ ಇರುವ ಕಾರಣ ಸಹಜವಾಗಿ ನೀರಿನ ಹರಿವಿನ ವೇಗ ಹೆಚ್ಚು.
 • ನೀರು ಹರಿವಿನ ವೇಗ ಹೆಚ್ಚಾದಷ್ಟೂ ಮಣ್ಣಿನ ಮೂಲಕ ನೀರು ಇಂಗಿ ಶಿಲಾಪದರದ ಬಿರುಕುಗಳಿಗೆ ಜಿನುಗುವ ಪ್ರಮಾಣ ಕಡಿಮೆಯಾಗುತ್ತದೆ.
 • ಸಮುದ್ರದಿಂದ ಸ್ವಲ್ಪ ಮಟ್ಟಿಗೆ ಶಿಲಾ ಪದರಕ್ಕೆ ಸೇರ್ಪಡೆಯಾಗಬಹುದು.
ಎಷ್ಟು ಆಳಕ್ಕೆ ಹೋದರೂ ಬರೇ ಕಲ್ಲಿನ ಹುಡಿ ಹೊರತು ನೀರಿಲ್ಲ. ಇದು ಈಗ ಕೊಳವೆ ಬಾವಿ ತೋಡುವವರ ದುರಾದೃಷ್ಟ
ಎಷ್ಟು ಆಳಕ್ಕೆ ಹೋದರೂ ಬರೇ ಕಲ್ಲಿನ ಹುಡಿ ಹೊರತು ನೀರಿಲ್ಲ. ಇದು ಈಗ ಕೊಳವೆ ಬಾವಿ ತೋಡುವವರ ದುರಾದೃಷ್ಟ


ಆದದ್ದು ಏನು?

 • ಕರಾವಳಿಯಲ್ಲಿ ಈಗಾಗಲೇ ಅಂತರ್ ಜಲ ಮಟ್ಟ 750 ಅಡಿಗಿಂತ ಕೆಳಕ್ಕೆ ಹೋಗಿದೆ.
 • ಆ ಮಟ್ಟದಲ್ಲೂ ಯಥೇಚ್ಚ ನೀರು ಇಲ್ಲ.
 • ಇನ್ನು ಮುಂದಿನ ಒಂದೆರಡು ವರ್ಷಗಳಲ್ಲಿ ಇದು 1000-1200 ಈ ರೀತಿಯಲ್ಲಿ ಕೆಳಕ್ಕೆ ಹೋಗುವುದೇ ಹೊರತು ಮೇಲೆ ಬರುವ ಸಾಧ್ಯತೆ ಇಲ್ಲ.
 • ಕಾರಣ ಇಲ್ಲಿ ಮೇಲಿನ ಶಿಲಾಪದರದ ಬಿರುಕುಗಳಲ್ಲಿ ಶೇಖರಣೆಯಾದ ನೀರು ಕಡಿಮೆಯಾಗಿದೆ.
 • ತಳ ತಳಕ್ಕೆ ಹೋಗಿ ಅದನ್ನು ತೆಗೆಯಬೇಕಾಗಿದೆ.
 • ಮಣ್ಣಿನಲ್ಲಿ ಮಣ್ಣು ಕೊಚ್ಚಣೆಯ ದಿಶೆಯಿಂದ ಮರಳಿನ ಪ್ರಮಾಣ ಹೆಚ್ಚಾಗಿ, ನೀರು ನಿಲ್ಲುವುದು ಕಡಿಮೆಯಾಗಿದೆ.
 • ಕಿಂಡಿ ಅಣೆಕಟ್ಟುಗಳಲ್ಲೂ ನೀರು ಬೇಗ ಆರಿ ಹೋಗುತ್ತಿದೆ.
 • ಪ್ರಖರ ಬಿಸಿಲಿಗೆ ಒಂದು ಚದರ ಅಡಿಯಿಂದ 100-150 ಮಿಲಿ ನೀರು ಆವಿಯಾಗುತ್ತದೆ. ( ನೀವೂ ಇದನ್ನು ಪರೀಕ್ಷಿಸಿ- ಒಂದು ಚದರ ಅಡಿಯ ಟಬ್ ಗೆ 100 ಮಿಲಿ ಲೀ ನೀರು ಹಾಕಿ ಬಿಸಿಲಿಗಿಟ್ಟರೆ ಅದು ಸಂಜೆಗೆ ಆವಿಯಾಗಿರುತ್ತದೆ)
 • ಹಾಗಾಗಿಯೂ ನೀರು ಪೋಲಾಗುತ್ತಿವೆ. ಎಲ್ಲಾ ಕಡೆ ಬಿಸಿ ಹೆಚ್ಚಾಗಿ ಆವೀಕರಣ ಹೆಚ್ಚಾಗಿದೆ.
 • ನೀರಿನ ಬಳಕೆ ಅತಿಯಾಗಿದೆ. ಮಣ್ಣಿಗೆ ಇಂಗುವ ನೀರಿಗಿಂತ ಬಳಕೆ ಮಾಡುವ ನೀರು ಹೆಚ್ಚಾಗಿದೆ.
 • ಈ ಕಾರಣದಿಂದ ನೀರಿನ ಕೊರತೆ ಉಂಟಾಗಿದೆ. ಹೀಗೇ ಮುಂದುವರಿದಲ್ಲಿ ಮುಂದೊಂದು ದಿನ ನೀರು ಮರೀಚಿಕೆಯಾಗಬಹುದು!
ಇಂತಹ ಮಣ್ಣು, ಮೆದು ಶಿಲೆ ಮತ್ತು ಗಟ್ಟಿಶಿಲೆಯ ಬಿರುಕುಗಳ ಮೂಲಕ ನೀರು ಭೂಮಿಯ ಆಳಕ್ಕೆ ಸೇರಿಕೊಳ್ಳುತ್ತದೆ.
ಇಂತಹ ಮಣ್ಣು, ಮೆದು ಶಿಲೆ ಮತ್ತು ಗಟ್ಟಿಶಿಲೆಯ ಬಿರುಕುಗಳ ಮೂಲಕ ನೀರು ಭೂಮಿಯ ಆಳಕ್ಕೆ ಸೇರಿಕೊಳ್ಳುತ್ತದೆ.


ಬಯಲು ಸೀಮೆಯಲ್ಲಿ ಸ್ಥಿತಿ ಭಿನ್ನ:

 • ಕಳೆದ ಎರಡು ವರ್ಷಗಳಿಂದ ಬಯಲು ನಾಡಿನ ಹೆಚ್ಚಿನ ಕಡೆ ಮಳೆ ಚೆನ್ನಾಗಿ ಬಿದ್ದಿದೆ. ಕೆರೆ ಕಟ್ಟೆ ತುಂಬಿದೆ.
 • ನದಿಯಲ್ಲೂ ನೀರಾಗಿದೆ. ಹಾಗಾಗಿ ಇಲ್ಲಿ ಈಗ ನೀರಿಗೆ ಬರ ಇಲ್ಲ.
 • ಇಲ್ಲಿ ಮಳೆ ಚೆನ್ನಾಗಿ ಬಂದರೆ ಅಂತರ್ಜಲ ವೃದ್ದಿಯಾಗುತ್ತದೆ.
 • ಕಾರಣ ಇಲ್ಲಿನ ಶಿಲಾಪದರದ ಕ್ರಮವೇ ಹಾಗೆ.
 • ಜೊತೆಗೆ ನೀರು ಸಮುದ್ರ ಸೇರಲು (ಬಂಗಾಳ ಕೊಲ್ಲಿಗೆ) ಸುಮಾರು 200-300 ಕಿಲೋ ಮೀಟರು ಕ್ರಮಿಸಬೇಕು.
 • ಅದು ನಿಧಾನವಾಗಿ ಹರಿದು ತಂಗುತ್ತಾ ಸಾಗುವ ಕಾರಣ ಅಂತರ್ಜಲಕ್ಕೆ ಅದು ಹೆಚ್ಚಿನ ಪ್ರಮಾಣದಲ್ಲಿ ಜಿನುಗಲ್ಪಡುತ್ತದೆ.
 • ಹಾಗಾಗಿ ಮಳೆಚೆನ್ನಾಗಿ ಬಂದರೆ ಇಲ್ಲಿ ನೀರಾಗುತ್ತದೆ.


ಏನು ಮಾಡಿದರೆ ಬಚಾವಾಗಬಹುದು?

 • ಅಂತರ್ಜಲ ಇಲ್ಲದೆ ಕೃಷಿ ಮಾಡುವುದೇ ಸಾಧ್ಯವಿಲ್ಲ ಎಂಬ ಸ್ಥಿತಿಗೆ ನಾವು ಈಗಾಗಲೇ ತಲುಪಿ ಆಗಿದೆ.
 • ಇದರಿಂದ ಹೊರಬರಲು ಸಾಧ್ಯವಿಲ್ಲ. ಒಂದೋ ಕೃಷಿ ಬಿಡಬೇಕು. ಇದು ಅಸಾಧ್ಯ.
 • ಕೃಷಿ ಮಾಡುವಾಗ ಬೆಳೆಗಳಿಗೆ ಎಷ್ಟು ಬೇಕೋ ಅಷ್ಟು ಮಾತ್ರ ನೀರಾವರಿ ಮಾಡುವ ನಿರ್ಧಾರ ಮಾಡಬೇಕು.
 • ನೀರಿನ ಆವೀಕರಣವನ್ನು ಕಡಿಮೆ ಮಾಡಬೇಕು.
 • ನೆಲಕ್ಕೆ ಮುಚ್ಚಿಗೆ ಮಾಡಿ ಆವೀಕರಣ ತಡೆಯಲೇ ಬೇಕು. (ಸಾವಯವ ತ್ಯಾಜ್ಯ ಅಥವಾ ಮಲ್ಚಿಂಗ್ ಶೀಟ್ ಹಾಕಿ)
 • ಮನಬಂದಂತೆ ನೀರಾವರಿ ಮಾಡುವುದನ್ನು ನಿಲ್ಲಿಸಬೇಕು.
 • ಸಸ್ಯಗಳಿಗೆ ನೀರು ಬೇಡ.ಮಣ್ಣಿನಲ್ಲಿ ತೇವಾಂಶ ಇರಬೇಕು ಅಷ್ಟೇ ಇದು ಗರಿಷ್ಟ 50% ಮಾತ್ರ.
 • ಇದಕ್ಕಿಂತ ಹೆಚ್ಚಾದರೆ ಅದು ವೃಥಾ ಪೋಲು.
 • ಇದು ಬಹುತೇಕ ಕೃಷಿಕರಿಗೆ ಗೊತ್ತಿಲ್ಲ.
 • ಹೊಲವನ್ನು ಅಗೆದಾಗ ತೇವಾಂಶ ಇರುವ ಮಣ್ಣು ಇದ್ದರೆ ಆ ಮಣ್ಣಿಗೆ ಸ್ವಲ್ಪ ಸ್ವಲ್ಪವೇ ನೀರಾವರಿ ಮಾಡುತ್ತಾ ತೇವಾಂಶವನ್ನು ಉಳಿಸಿಕೊಳ್ಳಬೇಕು.
 • ಸಸ್ಯಗಳಿಗೆ ಬೇಕಾಗುವಷ್ಟೇ ನೀರು ಕೊಡಿ. ಬೇಕಾದಷ್ಟು ಗೊಬ್ಬರ ಕೊಡಿ. ಇಳುವರಿ ಚೆನ್ನಾಗಿರುತ್ತದೆ.
 • ಬರೇ ನೀರು ಒಂದೇ ಇಳುವರಿ ಹೆಚ್ಚಿಸಿಕೊಡಲಾರದು.
 • ಮಣ್ಣಿನ ರಚನೆಯನ್ನು ಸುಧಾರಿಸಿ ಮಣ್ಣು ನೀರು ಹಿಡಿದಿಟ್ಟುಕೊಳ್ಳುವಂತೆ ಮಾಡಿ.
 • ಇದನ್ನು ಒಬ್ಬ ಮಾಡಿದರೆ ಸಾಲದು ಎಲ್ಲರೂ ಮಾಡಬೇಕು.
 • ಒಂದು ಅಡಿಕೆ ಮರಕ್ಕೆ ದಿನಕ್ಕೆ ಕೇವಲ 10 ಲೀ. ನೀರು ಸಾಕು.
 • ಅದು ಹೇಗೆಂದರೆ ನೆಲದಿಂದ ಆವಿಯಾಗುವ ನೀರನ್ನು ತಡೆದರೆ ಮಾತ್ರ.
 • ನೆಲದ ಕೆಳಭಾಗದಿಂದ ತೇವಾಂಶ ನಷ್ಟವಾಗುವುದಿಲ್ಲ. ಅಲ್ಲಿಂದ ತೇವಾಂಶ ಮೇಲೆ ಬರುತ್ತಿರುತ್ತದೆ. ( ಬೆಳಗ್ಗೆ ಹೊತ್ತು ನೆಲವನ್ನು ಗಮನಿಸಿ) ಹಾಗಾದ ಕಾರಣ ವೃಥಾ ನೀರಾವರಿ ಮಾಡುವ ಅವಶ್ಯಕತೆ ಇರುವುದಿಲ್ಲ.
 • ಹನಿ ನೀರಾವರಿ ಮಾಡಿ, ಸ್ಪ್ರಿಂಕ್ಲರ್ ನೀರಾವರಿ ಮಾಡಿ ಅಥವಾ ಹೋಸ್ ಪೈಪಿನಲ್ಲಿ ಬಿಡಿ.
 • ನೆಲ ನೆನೆಯುವಂತೆ ನೀರಾವರಿ ಮಾಡಬೇಡಿ. ನೆಲ ತೇವವಾಗುವಷ್ಟು ಮಾತ್ರ ಕೊಡಿ.


ಇನ್ನು ಅಡಿಕೆ ತೋಟ ಹೆಚ್ಚಿಸಬೇಡಿ:

 • ನೀರಿನ ಕ್ಷಾಮದ ಭಯಾನಕ ಚಿತ್ರಣ ಈಗಾಗಲೇ ನಮಗೆ ಗೊತ್ತಾಗಿದೆ.
 • ಮುಂದಿನ ವರ್ಷ ಚೆನ್ನಾಗಿ ಮಳೆ ಬಂದರೆ ಎಲ್ಲಾ ಸರಿ ಹೋಗುತ್ತದೆ ಎಂದು ತಿಳಿಯಬೇಡಿ.
 • ನಮ್ಮ ಕರಾವಳಿಯ ಪ್ರದೇಶದಲ್ಲಿ ಎಷ್ಟೇ ಮಳೆ ಬರಲಿ, ತಳಕ್ಕಿಳಿದ ಅಂತರ್ಜಲ ಇನ್ನು ಹೆಚ್ಚಾಗಬೇಕಾದರೆ ಅದರ ಬಳಕೆ ನಿಲ್ಲಿಸಬೇಕು.
 • ಈಗ ಬಳಕೆ ಮಾಡಿದಂತೆ ಮುಂದುವರಿಸಿದರೆ ಅದು ಹೆಚ್ಚಾಗುವುದಿಲ್ಲ.
 • ಹಾಗಾಗಿ ಇರುವ ತೋಟವನ್ನು ಚೆನ್ನಾಗಿ ನೋಡಿಕೊಳ್ಳಿ.
 • ಇನ್ನೂ ಇನ್ನೂ ತೋಟ ಹೆಚ್ಚು ಮಾಡಿ ಕೊಳವೆ ಬಾವಿ ತೋಡಿ, ನೀರೇ ಇಲ್ಲದ ಸ್ಥಿತಿ ಉಂಟಾಗುವಂತೆ ಮಾಡಿಕೊಳ್ಳುವುದು ಬೇಡ.
 • ಅಂತರ್ಜಲ ಕೋಟ್ಯಾಂತರ ವರ್ಷಗಳಿಂದ ಭೂಮಿಯ ಶಿಲಾ ಪದರದೆಡೆಗೆ ಜಿನುಗಿದ ನೀರು ಆದ ಕಾರಣ ಅದು ಮುಗಿದು ಹೋಗುವ ಸಂಪನ್ಮೂಲ.
 • ಇದು ನಮ್ಮ ಗಮನದಲ್ಲಿ ಇರಲಿ.


ಪ್ರತೀಯೊಬ್ಬ ಕೃಷಿಕರೂ ತಿಳಿಯಬೇಕಾದ ಪ್ರಾಮುಖ್ಯ ಸಂಗತಿ, ಕೃಷಿ ಎಂದರೆ ಅದು ಒಂದು ವಿಜ್ಞಾನ. ಜ್ಞಾನ ಇಲ್ಲದವನು ಕೃಷಿ ಮಾಡುವುದು ವ್ಯರ್ಥ. ಸಸ್ಯ ಏನು, ಅದರ ಅವಶ್ಯಕತೆ ಏನು ಎಂಬುದನ್ನು ಸರಿಯಾಗಿ ತಿಳಿದುಕೊಂಡು ಕೃಷಿ ಮಾಡಿದರೆ ಮಾತ್ರ ಅದು ಸುಸ್ಥಿರ. ನೀರು ಸಿಕ್ಕಿದೆ ಎಂದು ಅದನ್ನು ಬೇಜವಾಬ್ಧಾರಿಯಿಂದ ಬಳಕೆ ಮಾಡುವುದು ಬಾರದು. ಮಣ್ಣು ಹಾಳು ಮಾಡದೆ ಸೂಕ್ತ ಜ್ಞಾನ ಪಡೆದು ಕೃಷಿ ಮಾಡುವುದು ಅಗತ್ಯ. ತಿಳುವಳಿಕೆ ಇಲ್ಲದವರು ಇದ್ದವರ ಸಲಹೆ ಪಡೆದು ಕೃಷಿ ಮಾಡುವುದನ್ನು ಪ್ರಾರಂಭಿಸಿ.

Leave a Reply

Your email address will not be published. Required fields are marked *

error: Content is protected !!