ಅಡಿಕೆ ಮರಕ್ಕೆ ನೀರು ಎಷ್ಟು ಬೇಕು? ಹೆಚ್ಚು ಕೊಟ್ಟರೆ ಏನಾಗುತ್ತದೆ?

ಕಡಿಮೆ ನೀರಿನಲ್ಲಿ ಅಧಿಕ ಫಸಲು

ಅಡಿಕೆ ಮರಕ್ಕೆ ನೀರು ಹೆಚ್ಚು ಬೇಕು ಎನ್ನುತ್ತಾರೆ ಅದು ತಪ್ಪು. ಹೆಚ್ಚು ನೀರು ಕೊಟ್ಟರೆ ಬೆಳೆ ಕಡಿಮೆ. ಯಾವುದೇ ಸಸ್ಯವಿರಲಿ ಅದಕ್ಕೆ ನೀರು ಬೇಡ. ಮಣ್ಣು ಹಸಿಯಾಗಿದ್ದರೆ ಸಾಕು. ಆಗ ಮರದ ಆರೋಗ್ಯ ಹಾಕಿದ ಗೊಬ್ಬರ ಎಲ್ಲವೂ ಸಮರ್ಪಕವಾಗಿ ಲಭ್ಯವಾಗುತ್ತದೆ.

ಅಡಿಕೆ ಬೆಳೆಗಾರರು ಹೆಚ್ಚಾಗಿ ತೋಟಕ್ಕೆ  ಸ್ಪ್ರಿಂಕ್ಲರ್ ನೀರಾವರಿ ಮಾಡುತ್ತಾರೆ. ಮಳೆಗಾಲದ ತರಹವೇ ಅಥವಾ ಅದಕ್ಕಿಂತ ಹೆಚ್ಚಾಗಿ ನೆಲವನ್ನು ತೇವವಾಗಿ ಇಡುತ್ತಾರೆ. ಇದರಿಂದಾಗಿ ರೋಗ ರುಜಿನಗಳು ಹೆಚ್ಚಾಗುತ್ತದೆ. ಸುಳಿ ಕೊಳೆ, ಕಾಯಿ ಕೊಳೆ, ಮಿಡಿ ಉದುರುವುದೂ ಆಗುತ್ತದೆ. ಮಣ್ಣು ಸತ್ವ ಕಳೆದುಕೊಳ್ಳುತ್ತದೆ.ಏಕದಳ ಸಸ್ಯಗಳು ನೀರು ಹೆಚ್ಚು ಕೊಟ್ಟಷ್ಟೂ ಅದನ್ನು ಬಾಷ್ಪೀಭವನದ ಮೂಲಕ ಹೊರ ಹಾಕುತ್ತವೆ. ಇದು ಅನವಶ್ಯಕ  ನಷ್ಟ. ನಾವು ಕೊಡುವ ಪೋಷಕಗಳು ನೀರಿನ ಜೊತೆಗೆ ಕರಗಿ ಬೇರಿಗಿಂತ ಕೆಳಗೆ ಇಳಿದಾಗ ಅದರ ಜೊತೆಗೆ ಇದೂ ಕೆಳಗೆ ಇಳಿದು ಸಸ್ಯಕ್ಕೆ ಲಭ್ಯವಾಗುವುದಿಲ್ಲ.  ಹೆಚ್ಚಿನವರು ಸಮತೋಲನ ಪ್ರಮಾಣದಲ್ಲಿ ಗೊಬ್ಬರ ಕೊಟ್ಟರೂ ಸಹ ಹೆಚ್ಚುಕಡಿಮೆ ಆಗಲು ಇದೇ ಕಾರಣ. ನೆಲದ ಮೇಲೆ ಬೆಳೆಯುವ ಹುಲ್ಲು ಸಸ್ಯಗಳು ಬಾಡಿದಂತೆ ಕಂಡುಬಂದಾಗ ನೀರಾವರಿ ಮಾಡಿದರೆ  ಸಾಕಾಗುತ್ತದೆ.  ಹುಲ್ಲು ಸಸ್ಯದ ಬೇರು ಎಷ್ಟು ಆಳಕ್ಕೆ ಇಳಿದಿರುತ್ತದೆಯೋ ಅಲ್ಲಿ ತನಕ ತೇವಾಂಶ ಆದರೆ ಸಾಕು. ಅದರ ಕೆಳಗೆ ತೇವಾಂಶ ಇರುತ್ತದೆ.

  • ಅಡಿಕೆ, ತೆಂಗು ಮುಂತಾದ ಏಕದಳ ಸಸ್ಯಗಳು  ನೆಲದ ಮೇಲ್ಪಾಗದಲ್ಲಿ ಬೇರು ಬಿಡುವ ಸಸ್ಯಗಳು.
  • ನಾವು ಎಷ್ಟೇ ಆಳದ ಹೊಂಡ ಮಾಡಿ ಅದರ ತಳದಲ್ಲಿ ನಾಟಿ ಮಾಡಿದರೂ ಸಹ ಬೇರುಗಳು ಮೇಲೆಯೇ ಬರುವುದು.
  • ನೆಲದ ಸುಮಾರು 1 -1.5 ಅಡಿ ಆಳದ ವರೆಗೆ ಇರುವ ಬೇರುಗಳು ಅಲ್ಲಿ ತೇವಾಂಶದೊಂದಿಗೆ ಸೇರಿಕೊಂಡಿರುವ ಪೋಷಕಗಳನ್ನು ಸ್ವಲ್ಪ ಸ್ವಲ್ಪವೇ ಹೀರಿಕೊಂಡು ಧೀರ್ಘಾವಧಿ ತನಕ  ಬಳಕೆ ಮಾಡುತ್ತಾ ಇರುತ್ತವೆ.
  • ನಾವು ಬೇಸಿಗೆಯಲ್ಲಿ ಹಿತ ಮಿತ ತೇವಾಂಶ ಉಳಿಸುವುದರಿಂದ ಪೊಷಕಗಳು ಅಲ್ಲೇ ಪಸರಿಸಿ ಉಳಿದು ಸಸ್ಯಗಳು ಬಳಸಿಕೊಳ್ಳಲು ಅನುಕೂಲವಾಗುತ್ತದೆ.
  • ತೇವಾಂಶ ಹೆಚ್ಚಾದರೆ ಅದು ತಳಕ್ಕಿಳಿಯುತ್ತದೆ, ಜೊತೆಗೆ ಪೋಷಕಗಳೂ ಸಹ ತಳಕ್ಕೆ ಇಳಿದು ಸಸ್ಯಗಳಿಗೆ ದೊರೆಯುವುದಿಲ್ಲ.
ಅಡಿಕೆ ಮರಕ್ಕೆ 8-10ಲೀ ನೀರು ಕೊಟ್ಟು ಬೆಳೆದಿರುವುದುನೀರು

 ಹಿಂದೆ ನೀರಾವರಿ ಹೇಗಿತ್ತು?

  • ಸುಮಾರು 30-40 ವರ್ಷದ ಹಿಂದೆ ನೀರುಣಿಸುತ್ತಿದ್ದುದು ಹರಿ ನೀರಾವರಿಯ ಮೂಲಕ. 
  • ತೋಟದಲ್ಲಿ ಎರಡು ಅಡಿಕೆ ಮರಗಳ ಮಧ್ಯೆ ಒಂದು ಕಾಲುವೆ.
  • ಈ ಕಾಲುವೆಗೆ ನೀರು ಹರಿಸುವುದು. ಅದನ್ನು ಅಡಿಕೆ ಹಾಳೆಯನ್ನು ತುಂಡು ಮಾಡಿ ಅದರಲ್ಲಿ  ಸ್ವಲ್ಪ ಬುಡಕ್ಕೆ ಎರಚುವುದು ಮಾಡುತ್ತಿದ್ದರು. ಅದು ವಾರಕ್ಕೆ ಒಮ್ಮೆ ಮಾತ್ರ.
  • ಇದು ವಾರಕ್ಕೊಂದಾವರ್ತಿ. ಆಗ ಅಡಿಕೆ ಮರಗಳಲ್ಲಿ ಈ ರೀತಿ ಮಿಳ್ಳೆ ಉದುರುವುದು  ಹೆಚ್ಚಿನ ರೋಗ ರುಜಿನಗಳು ಇದ್ದಿರಲಿಲ್ಲ.
  • ಕಾರಣ ಇಷ್ಟೇ ಅಡಿಕೆ ಮರದ ಬೇರುಗಳು ಎಲ್ಲಿ ಇರುತ್ತದೆಯೋ ಆ ಭಾಗದಲ್ಲಿ ಮಾತ್ರ ಮಣ್ಣು ತೇವವಾಗಿದ್ದರೆ ಸಾಕು ಎಂಬುದು. 
  • ನೆಲದ ಮಣ್ಣು ಯಾವಾಗಲೂ ನೀರು ಕುಡಿದು ಮೆತ್ತಗೆ ಆಗಬಾರದು. ನೀರು ಬೇಕು, ಅದು ಮಣ್ಣು ಹಸಿಯಾಗಿ ಇರುವಷ್ಟೇ ಸಾಕು.

ಬದಲಾವಣೆ:

  • ಆಗಲೇ ಪಿವಿಸಿ ಪೈಪು ಬಂತು. ಸ್ಪ್ರಿಂಕ್ಲರ್ ಬಂತು.  
  • ಆಗಲೂ ಜನ ಸ್ಪ್ರಿಂಕ್ಲರ್ ಚಾಲೂ ಮಾಡಿದರೆ ಸುಮಾರು 1 ಗಂಟೆ ನೀರುಣಿಸುತ್ತಿದ್ದರು ಅಷ್ಟೇ.
  • ಆಗ ಈಗಿನಂತೆ ಕೊಳವೆ ಬಾವಿಯ ನೀರಲ್ಲ. ಕೆರೆ ನೀರು, ಹೊಳೆ ನೀರು, ಕಟ್ಟ ಇದ್ದುದು. ಇದು ಸಾಮಾನ್ಯವಾಗಿ ಎಪ್ರೀಲ್ ತಿಂಗಳಿಗೆ ಬತ್ತುತ್ತಿತ್ತು.
  • ಆ ನಂತರ ನೀರು ತೋರಿಸುವುದು ಮಾತ್ರ.
  • ಕೊಳವೆ ಬಾವಿ ಅಥವಾ ಬೋರ್ ವೆಲ್ ಹೆಚ್ಚು ಪ್ರಚಲಿತಕ್ಕೆ ಬಂದ ಮೇಲೆ ನಮ್ಮ ನೀರಾವರಿಯ ಕ್ರಮವೇ ಬದಲಾಯಿತು.
  • ಎರಡು-ಮೂರು ಕೊಳವೆ ಬಾವಿ ತೋಡಿ, ತೋಟವನ್ನು ತೋಯಿಸಲು ಪ್ರಾರಂಭಿಸಿದರು.
ಒಂದು ಮರಕ್ಕೆ ಎರಡು ಲಾಟರಲ್ ಮತ್ತು ನಾಲ್ಕು ಡ್ರಿಪ್ಪರು

ಇಲ್ಲಿಂದಲೇ  ತೊಂದರೆ ಪ್ರಾರಂಭ:

  • ಹಿಂದೆ  ಅಡಿಕೆ ಮರಗಳಿಗೆ ಕೊಡುತ್ತಿದ್ದ ನೀರು, ಗೊಬ್ಬರ ಕಡಿಮೆ.  ಬರೇ ಕೊಟ್ಟಿಗೆ ಗೊಬ್ಬರದಲ್ಲೇ  ಬೆಳೆ ತೆಗೆಯುವವರೂ ಇದ್ದರು.
  • ಆಗ ಈಗಿನಂತೆ ರೋಗಗಳು ಇರಲಿಲ್ಲ. ಫಸಲೂ ಚೆನ್ನಾಗಿತ್ತು. ಮರ ಆರೋಗ್ಯವಾಗಿತ್ತು.
  • ಈಗ ಹೆಚ್ಚಿನ ಫಸಲಿಗೆ ಅತೀ ಹೆಚ್ಚು ಗೊಬ್ಬರ ಕೊಡುವ ಪರಿಸ್ಥಿತಿ ಉಂಟಾಗಿದೆ.
  • ವರ್ಷಕ್ಕೆ ಇಂತಿಷ್ಟೇ ನಿರ್ಧರಿತ ಗೊಬ್ಬರ ಕೊಡುವುದು ಇಲ್ಲ.
  • ವರ್ಷದಿಂದ ವರ್ಷ ಹೆಚ್ಚು ಹೆಚ್ಚು ಮಾಡುತ್ತಾ ಬರಬೇಕಾಗುತ್ತದೆ.
  • ಇದು  ಅಧಿಕ ನೀರಾವರಿಯ ಕಾರಣದಿಂದ. ಅಧಿಕ ನೀರಾವರಿ ಮಾಡಿದ ಕಾರಣದಿಂದ  ತೋಟದಲ್ಲಿ ವರ್ಷ ಪೂರ್ತಿ ಹುಲ್ಲು, ಕಳೆಸಸ್ಯ ಬೆಳೆಯುತ್ತಿರುತ್ತದೆ.
  • ಇದು ನಾವು ಕೊಡುವ ಎಲ್ಲಾ ಪೋಷಕಾಂಶಗಳನ್ನೂ ತಾವೇ ಬಳಸಿಕೊಳ್ಳುತ್ತವೆ.
  • ಅದು ಒಂದಾದರೆ ಬೇರು ಇರುವ ಜಾಗದಿಂದ ಒಂದು ಮಿಲಿ ಮೀಟರ್ ಕೆಳಗೆ ಪೋಷಕಾಂಶ ಇಳಿದು ಹೋದರೂ ಸಹ ಅದು ಸಸ್ಯಕ್ಕೆ ಲಭ್ಯವಾಗುವುದಿಲ್ಲ,
  • ನಾವು ನೀರಾವರಿ ಹೆಚ್ಚು ಮಾಡಿದರೆ ನೀರಿನೊಂದಿಗೆ ಪೋಷಕಾಂಶವು ವಿಲೀನವಾಗಿ ಅದರ ಜೊತೆಗೆ ಇಳಿದು ಹೋಗುತ್ತದೆ.
  • ಅದು ಬೇರಿನ ಸನಿಹಕ್ಕೆ ಬಂದ ತಕ್ಷಣ ಅದನ್ನು ಬೇರುಗಳು ಹೀರಿಕೊಳ್ಳುವುದಿಲ್ಲ.
  • ಅದಕ್ಕೆ ಒಂದೆರಡು ದಿನಗಳಾದರೂ ಬೇಕಾಗುತ್ತದೆ.
  • ಆ  ಸಮಯದಲ್ಲಿ ಮತ್ತೆ  ನೀರಾವರಿ ಮಾಡಿದಾಗ ಅದು ಹಿಂದಿನ ಮಟ್ಟಕ್ಕಿಂತ ಕೆಳಕ್ಕೆ ಇಳಿಯುತ್ತದೆ.
  • ಅದು ಅನವಶ್ಯಕವಾಗಿ  ಇಳಿದು ಹೋಗಿ ನಷ್ಟವಾಗುತ್ತದೆ.
  • ಸ್ಪ್ರಿಂಕ್ಲರ್ ನೀರಾವರಿಯಲ್ಲೂ ಹೀಗೇ ಆಗುತ್ತದೆ, ಹನಿ ನೀರಾವರಿಯಲ್ಲೂ ಲೆಕ್ಕಕ್ಕಿಂತ ಹೆಚ್ಚು ನೀರುಣಿಸಿದಾಗ ಅದು ತಳಕ್ಕೆ ಇಳಿದು ಹೋಗುವ ಸಾಧ್ಯತೆ ತುಂಬಾ ಹೆಚ್ಚು.
  • ಹೆಚ್ಚು ನೀರು ಹೊರ ಸೂಸುವ ಡ್ರಿಪ್ಪರುಗಳಲ್ಲಿ ನೀರಿನೊಂದಿಗೆ ಪೋಷಕಾಂಶಗಳು ಇಳಿದು ಹೋಗುವ ಸಾಧ್ಯತೆ ಅಧಿಕ.

ಅಡಿಕೆ ಮರದ ಬೇರುಗಳಿಗೆ ತೇವಾಂಶ  ಮಾತ್ರ ಸಾಕು. ತೊಯ್ದುಕೊಂಡು ಇರಬಾರದು.  ಇದರಿಂದ ಎಲ್ಲಾ ಪೊಷಕಗಳೂ ಇಳಿದು ಹೋಗಿ ಅಸಮತೋಲನ ಉಂಟಾಗುತ್ತದೆ. ಸಾವಯವವೂ ಇದಕ್ಕೆ ಹೊರತಲ್ಲ. ಕೆಲವರು ನಾನು ಪೊಟ್ಯಾಶ್ ಕೊಟ್ಟಿದ್ದೇನೆ ಎನ್ನುತ್ತಾರೆ. ಸಸ್ಯಗಳ ಬೆಳವಣಿಗೆ ನೋಡಿದರೆ ಪೊಟ್ಯಾಶ್ ಕಡಿಮೆಯಾದಂತೆ ಕಾಣಿಸುತ್ತದೆ. ಕಾರಣ ಪೊಟ್ಯಾಶ್ ಕೊಟ್ಟಿರಬಹುದು.ಆದರೆ ಹೆಚ್ಚು ನೀರಾವರಿ ಮಾಡಿದ ಕಾರಣ ಅದು ಇಳಿದು ಹೋಗಿ ಸಸ್ಯಕ್ಕೆ ಲಭ್ಯವಾಗದೆ ಹೋಗಿದೆ.

ಬೇಸಿಗೆಯಲ್ಲಿ ಇಷ್ಟು ಕಳೆ ಇದ್ದರೆ ನೀರು, ಪೋಷಕ ಇದಕ್ಕೇ ಬೇಕು.
ಬೇಸಿಗೆಯಲ್ಲಿ ಇಷ್ಟು ಕಳೆ ಇದ್ದರೆ ನೀರು, ಪೋಷಕ ಇದಕ್ಕೇ ಬೇಕು.

ನೀರು ಎಷ್ಟು ಬೇಕು:

  • ಬಂಟ್ವಾಳ ತಾಲೂಕು ಕಾವಳಕಟ್ಟೆ ಎಂಬಲ್ಲಿ ಗಣೇಶ್ ಭಟ್ ಎಂಬ ರೈತ ತನ್ನ ಅಡಿಕೆ ಮರಗಳಿಗೆ  ದಿನಕ್ಕೆ ಬರೇ 8-10 ಲೀ ಮಾತ್ರ ನೀರು ಕೊಡುತ್ತಾರೆ.
  • ಅದು ತೀರಾ ಖುಷ್ಕಿ ಭೂಮಿ ಸಹ. ಬೇಸಿಗೆಯ ದಿನಗಳಲ್ಲಿ ಒಂದು ಬೆಂಕಿ ಕಡ್ಡಿ ಗೀರಿದರೂ ಹೊತ್ತಿ ಉರಿಯುವಷ್ಟು ನೆಲ ಒಣಗಿರುತ್ತದೆ.
  • ಇಲ್ಲಿ ಅಧಿಕ ನೀರಾವರಿ  ಮಾಡುವವರ ತೋಟದಿಂದ ದುಪ್ಪಟ್ಟು ಇಳುವರಿ ಇದೆ.
  • ಕಾರಣ ಇಷ್ಟೇ ಕೊಡವ ನೀರನ್ನು ಕಬಳಿಸುವ ಬೇರೆ ಸಸ್ಯಗಳಿಲ್ಲ. ಬೇರು ವಲಯ ಇರುವಷ್ಟು ಸ್ಥಳಕ್ಕೆ  ಮಾತ್ರ ಬೀಳುವ ಕಾರಣ ಅವೀಕರಣ ಸಹ ಇಲ್ಲ.
  • ಹೆಚ್ಚುವರಿಯಾದುದು ಇಳಿದು ಹೋಗುವುದಕ್ಕೂ ಆಸ್ಪದ ಇಲ್ಲ.
  • ಎರಡು ಸಾಲು ಡ್ರಿಪ್ಪರನ್ನು  ಹಾಕಿ ಪ್ರತೀ ಅಡಿಕೆ ಮರಕ್ಕೆ  2 ಲೀ. ತೊಟ್ಟಿಕ್ಕುವ  4  ಡ್ರಿಪ್ಪರಿನ ಮೂಲಕ  ದಿನಕ್ಕೆ 1 ಗಂಟೆ ನೀರಾವರಿ ಮಾಡುತ್ತಾರೆ.
  • ಇಷ್ಟರಲ್ಲಿ ಅಡಿಕೆ ಮರಗಳು ಯಾವ ನೀರಿನ ಕೊರತೆಯನ್ನೂ ತೋರಿಸುತ್ತಿಲ್ಲ.

ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡವರು ಯಾವಾಗಲೂ ಸಸ್ಯಕ್ಕೆ ದಿನಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ನೀರಾವರಿ ಮಾಡಬೇಕು. ಹೆಚ್ಚು ಮಾಡಿದರೆ ಅದು ಪೋಷಕಗಳನ್ನು ತಳಕ್ಕೆ ಸಾಗಿಸುತ್ತದೆ. ಸ್ಪ್ರಿಂಕ್ಲರ್ ನೀರಾವರಿ ಮಾಡುವವರು  ನೀರು ಬೀಳುವ ಕಡೆ ಒಂದು ಬಕೆಟ್ ಇಡಿ. 1 ಗಂಟೆ ನೀರಾವರಿ ಮಾಡಿದಾಗ ಅದರಲ್ಲಿ ಶೇಖರಣೆ ಆಗುವ ನೀರನ್ನು ಲೆಕ್ಕಾಚಾರ ಹಾಕಿ ಅದಕ್ಕೆ ಅನುಗುಣವಾಗಿ ನೀರಾವರಿ ಮಾಡಿ. ಹೆಚ್ಚು ಮಾಡಬೇಡಿ.

ನಮ್ಮ ಹಿರಿಯರು ಹೇಳುತ್ತಿದ್ದರು ಒಂದು ತೆಂಗಿನ ಮರಕ್ಕೆ ದಿನಕ್ಕೆ  1 ಕೊಡ ನೀರು ಹಾಕಿ. ಸಾಕಾಗುತ್ತದೆ ಎಂದು. ಅದು ಮತ್ತೇನಕ್ಕೂ ಅಲ್ಲ. ದಿನಾ ನೀರುಣಿಸುವಾಗ ಹಿಂದಿನ ನೀರಿನ ತೇವಾಂಶಕ್ಕೆ ಟಾಪ್ ಅಪ್ ಮಾಡಿದರೆ ಸಾಕಾಗುತ್ತದೆ.ಒಂದು ಅಡಿಕೆ ಮರಕ್ಕೆ  ದಿನಕ್ಕೆ 20 ಲೀ. ನೀರು ಸಾಕೆನ್ನುತ್ತಾರೆ ಅಧ್ಯಯನ ಮಾಡಿದವರು. ಇದು ಗರಿಷ್ಟ. ಇದರಲ್ಲೂ ಉಳಿತಾಯ ಮಾಡಬಹುದು ಎನ್ನುತ್ತಾರೆ ಗಣೇಶ್ ಭಟ್ ರವರು.

ಮುಚ್ಚಿಗೆ ಮಾಡುವುದರಿಂದ ನೀರು ಉಳಿತಾಯ ಸಾಧ್ಯ.
ಮುಚ್ಚಿಗೆ ಮಾಡುವುದರಿಂದ ನೀರು ಉಳಿತಾಯ ಸಾಧ್ಯ.
  • ಒಂದು ಅಡಿಕೆ ಮರ ಬಳಸುವುದು ಬರೇ  8-10- ಗರಿಷ್ಟ 20 ಲೀ.
  • ಹೆಚ್ಚುವರಿಯಾದುದು ಮಣ್ಣಿನಲ್ಲಿ ಇಳಿದು ಕೆಳಕ್ಕೆ ಹೋಗುತ್ತದೆ. 
  • ಬೇರುಗಳ ಮೂಲಕ ಹೆಚ್ಚು ಸ್ವೀಕರಿಸಿದರೂ ಅದನ್ನು ಸಸ್ಯ ತನ್ನ ಎಲೆಗಳ ಮೂಲಕ ಬಾಷ್ಪೀಭವನ ಕ್ರಿಯೆಯಲ್ಲಿ ಹೊರ ಹಾಕುತ್ತದೆ.
  • ನೆಲದ ಮೇಲೆ ಹೆಚ್ಚು ನೀರು ಇದ್ದರೆ ಅದು  ಆವಿಯಾಗಿ ವಾತಾವರಣ ಸೇರುತ್ತದೆ.
  • ಬಹುತೇಕ ತೋಟಗಳಲ್ಲಿ ಬಿಸಿಲಿಗೆ ಆವಿಯಾಗಿ ಹೋಗುವುವೇ ಜಾಸ್ತಿ.

ನೀರಾವರಿ ವ್ಯವಸ್ಥೆ ಯಾವುದೇ ಇರಲಿ. ಬೋರಲು ನೆಲಕ್ಕೆ ಅಧಿಕ ನೀರಾವರಿ ಮಾಡಬೇಡಿ. ಗಾಳಿಯ ಮೂಲಕ ಎಲ್ಲಾಕಳೆ ಬೀಜಗಳೂ ಬಂದು ಅಲ್ಲಿ ಹುಟ್ಟುತ್ತವೆ. ಒಂದು ಅಡಿಕೆ ಮರದ ಬೇರಿನ ಭಾಗದಲ್ಲಿ  ಹುಲ್ಲೂ ಸೇರಿ 100 ಕಳೆ ಸಸ್ಯಗಳಿದ್ದರೆ ಅದಕ್ಕೆ ಅಡಿಕೆ ಮರದಷ್ಟೇ ನೀರು ಬೇಕು. ಅಷ್ಟೇ ಗೊಬ್ಬರವೂ ಬೇಕು.

ಹಿತ ಮಿತ ನೀರಾವರಿ ಮಾಡಿದರೆ ಮರಗಳು ಅದಕ್ಕೆ ಹೊಂದಿಕೊಳ್ಳುತ್ತವೆ. ಅಡಿಕೆ ಮರ ಒಂದು ಕಾಡು ಮರವಾಗಿದ್ದು, ಸ್ವಲ್ಪ ಮಟ್ಟಿಗೆ ಬರ ತಡಕೊಳ್ಳುವ ಶಕ್ತಿ ಹೊಂದಿರುತ್ತವೆ. ಬುಡಕ್ಕೆ ಬೇಸಿಗೆಯಲ್ಲಿ ಆವೀಕರಣ ತಡೆಯಲು ಸೊಪ್ಪು, ತರಗೆಲೆ, ಹುಲ್ಲು ಮುಚ್ಚಿಗೆ ಮಾಡಿದರೆ ಬಹಳಷ್ಟು ನೀರು ಉಳಿತಾಯ ಮಾಡಬಹುದು.

ಯಾವಾಗಲೂ ಅಡಿಕೆ ಮರದ ಬುಡ ನೋಡಬೇಡಿ. ಶಿರ  ಭಾಗ ನೋಡಿ. ಅದು ಹಸುರಾಗಿದ್ದು, ಮಿಡಿಗಳು  ಸೆಟ್ ಆಗಿದ್ದರೆ ನೀರು ಸಾಕಾಗುತ್ತದೆ ಎಂದರ್ಥ. ಬೇಸಿಗೆಯಲ್ಲಿ ನೆಲ ಒಣಗಿಯೇ ಇರಬೇಕು. ಹಿತ ಮಿತ ತೇವಾಂಶದಿಂದಿಗೆ ನೆಲ ಸ್ವಲ್ಪ ಬೆಚ್ಚಗೆ ಇದ್ದರೆ  ಬೇರುಗಳಿಗೆ ಅದು ಉತ್ತಮ ವಾತಾವರಣ.ಬಿಸಿ ಅದು ಮಳೆ ಬಂದ ತಕ್ಷಣ  ಮೆದುವಾಗಬೇಕು ಇದು ಪ್ರಕೃತಿ ನಿಯಮ.

Leave a Reply

Your email address will not be published. Required fields are marked *

error: Content is protected !!