ಅಡಿಕೆಯ ಕಥೆ ಏನಾಗಿದೆ? ಯಾಕೆ ದಿನದಿಂದ ದಿನಕ್ಕೆ ದರ ಇಳಿಯುತ್ತಿದೆ?

ಅಡಿಕೆಯ ಕಥೆ ಏನಾಗಿದೆ? ಯಾಕೆ ದಿನದಿಂದ ದಿನಕ್ಕೆ ದರ ಇಳಿಯುತ್ತಿದೆ?

ಅಡಿಕೆಯ ಕಥೆ ಹೇಳತೀರದಾಗಿದೆ. ದಿನದಿಂದ ದಿನಕ್ಕೆ ದರ ಕುಸಿಯುತ್ತಿದೆ.  ಅಡಿಕೆ ಕೊಳ್ಳುವ ವರ್ತಕರಿಗೆ ಅಡಿಕೆ ತರುವವರನ್ನು ನೋಡಿದರೆ ಸಿಟ್ಟು ಬರುವಂತ ಸ್ಥಿತಿ. ಎಲ್ಲರಲ್ಲೂ ಅಷ್ಟೋ ಇಷ್ಟೋ ದಾಸ್ತಾನು ಇದೆ.  ಮಾರಾಟ  ಆಗದೆ ಖರೀದಿಗೆ ದುಡ್ಡಿಲ್ಲದ ಸ್ಥಿತಿ ಈ ಮಧ್ಯೆ  ಬೆಳೆಗಾರರು ದುಂಬಾಲು ಬಿದ್ದು ಮಾರಾಟಕ್ಕೆ ಮುಂದಾಗಿದ್ದಾರೆ. ಮಾರುಕಟ್ಟೆಗೆ ತಾಳಿಕೊಳ್ಳಲಾಗದ ಸ್ಥಿತಿಯಲ್ಲಿ ಅಡಿಕೆ ಮಾರಾಟಕ್ಕೆ ಬಂದರೆ ದರ ಮತ್ತಷ್ಟು ಕುಸಿಯುತ್ತದೆ.ಇದು ಸತ್ಯ. ಈಗ ಇದೇ ಆಗಿರುವುದು.

ಸತ್ಯವೋ ಸುಳ್ಳೋ ಒಟ್ಟಾರೆಯಾಗಿ ಹಳೆ ಚಾಲಿಯನ್ನು ಉತ್ತರ ಭಾತರದ ವ್ಯಾಪಾರಿಗಳು ಬೇಡ ಎನ್ನುತ್ತಾರಂತೆ.  ಹಾಗಾಗಿ ಹಳೆ ಚಾಲಿಗೆ ಮನ ಬಂದಂತೆ ದರ ಹಾಕಿ ಖರೀದಿ ಮಾಡಲಾಗುತ್ತದೆ.ದಿನದಿಂದ ದಿನಕ್ಕೆ ಸರಾಸರಿ ಖರೀದಿ ದರ ಕಡಿಮೆಯಾಗುತ್ತಲೇ ಇದೆ. ಗುಣಮಟ್ಟ ಪ್ರಮಾಣೀಕರಣದಲ್ಲಿ  ಬೆಳೆಗಾರರ ಅದೃಷ್ಟ ಪರೀಕ್ಷೆ ನಡೆಯುತ್ತಿದೆ. ಹಾಳಾದನ್ನೇ  ಹುಡುಕಿ ಕತ್ತರಿಸಿ ಬೆಳೆಗಾರರ ಮುಖಕ್ಕೆ ಹಿಡಿದು ಅಪಹಾಸ್ಯ ಮಾಡಿ ಸಾಧ್ಯವಾದಷ್ಟು ಕಡಿಮೆ ದರಕ್ಕೆ ಖರೀದಿ ನಡೆಯುತ್ತಿದೆ. ಖಾಸಗಿ ವ್ಯಾಪಾರಿಗಳು ಬೇಡ ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಸಹಕಾರಿಗಳ  ಏಕಸ್ವಾಮ್ಯ ಎಷ್ಟು ಸಮಯದ ವರೆಗೆ ಗೊತ್ತಿಲ್ಲ.

ಬೇಡಿಕೆ ಇಲ್ಲವಾದರೆ ಯಾಕೆ ದರ ಏರಿತು?

  • ಕಳೆದ ಸಂಕ್ರಾಂತಿ ತನಕ ಬೇಡಿಕೆ ಇಲ್ಲ ಎಂಬ ಯಾವ ಸುದ್ದಿಯೂ ಎಲ್ಲಿಯೂ ಹರಿದಾಡುತ್ತಿರಲಿಲ್ಲ.
  • ಸಂಕ್ರಾಂತಿಯ ತರುವಾಯ ಬೆಲೆ ಏರಲಿದೆ ಎಂಬ ಸುದ್ದಿ ಬಾರೀ ಸದ್ದು ಮಾಡಿತ್ತು.
  • ಆ ಮಾತಿಗೆ ಬದ್ದರಾಗಿ ದರವನ್ನು ಹೇಗೋ 50,000 ಏರಿಸಿದ್ದೂ ಆಗಿದೆ.
  • ಆದರೆ ಆ ದರದಲ್ಲಿ ಯಾರು ಎಲ್ಲಿ ಖರೀದಿ ಮಾಡಿದ್ದಾರೋ ಗೊತ್ತಿಲ್ಲ.
  • ಅದರೆ ಇಂದಿಗೂ ಗರಿಷ್ಟ ದರ ಅಷ್ಟೇ ಇದೆ. ಆದರೆ ಖರೀದಿ ದರ ಮಾತ್ರ 41000 ದಿಂದ 46500 ದ ಆಸುಪಾಸು.
  • ಗರಿಷ್ಟ ದರಕ್ಕೆ ಹೊಂದುವ ಗುಣಮಟ್ಟದ ಅಡಿಕೆ ಯಾವ ಪ್ರದೇಶದ ಬೆಳೆಗಾರರಲ್ಲಿ ಇದೆಯೋ ಎಂಬುದು ತಿಳಿಯದಾಗಿದೆ.

ದರ ಕುಸಿಯಲು ಪ್ರಮುಖ ಕಾರಣ ಏನು?

  • ಅಡಿಕೆ ಬೇಡ ಎಂದು ಉತ್ತರ ಭಾರತದ ವ್ಯಾಪಾರಿಗಳು ಹೇಳುತ್ತಾರೆ ಎಂಬ ಮಾತನ್ನು ಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ.
  • ಗ್ರಾಹಕರು ಕಡಿಮೆಯಾಗಿದ್ದಾರೆ ಎಂದರೆ ಒಪ್ಪಿಕೊಳ್ಳುವ ಮಾತು.
  • ಕೆಲವು ಮೂಲಗಳ  ಪ್ರಕಾರ ಖರೀದಿ ಮಾಡುವ ಸ್ಥಳೀಯ ವ್ಯಾಪಾರಿಗಳು (ದೈತ್ಯ ಕುಳಗಳು) ಉತ್ತಮ ಅಡಿಕೆ ಎಂದು ಕಳುಹಿಸಿದ ಉತ್ಪನ್ನ  ಅವರ ಬೇಡಿಕೆಗೆ ಅನುಗುಣವಾಗಿ ಇಲ್ಲದ ಕಾರಣ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ ಎಂಬ ಸುದ್ದಿ ಇದೆ.
  • ಬೆಳೆಗಾರರು ಅಡಿಕೆಯನ್ನು ಕೊಯಿಲು ಮಾಡಿ,50-60 ದಿನ ಬಿಸಿಲಿನಲ್ಲಿ ಒಣಗಿಸುತ್ತಾರೆ.
  • ವಾರಕ್ಕೊಂದಾವರ್ತಿ ತಿರುವಿ ಹಾಕುತ್ತಾ ಆಗಾಗ ಮಳೆ ಬರುವ ಮುನ್ಸೂಚನೆಗೆ ಹೆದರಿ ರಾಶಿ ಮಾಡಿ ರಕ್ಷಣೆ ಮಾಡುತ್ತಾರೆ.
  • ಒಣಗಿದ ನಂತರ ಅದನ್ನು ಗಾಳಿಯಾಡದಂತೆ ಪ್ಲಾಸ್ಟಿಕ್ ಹಾಕಿ ತುಂಬಿಸಿಟ್ಟು ಮಾರಾಟ ಮಾಡುವ ಸಮಯದಲ್ಲಿ ಸುಲಿದು ಮತ್ತೆ ವಾರ ಎರಡು ವಾರ ಹಾಳಾಗದಂತೆ ಯಾವುದೇ ದಾಸ್ತಾನು ಕೀಟ ಸೋಂಕದಂತೆ ರಕ್ಷಣೆ ಮಾಡಿ ಮಾರಾಟ ಮಾಡುತ್ತಾರೆ.
  • ಕೊಳ್ಳುವ ವ್ಯಾಪಾರಿಗೆ ಅದರಲ್ಲಿ ಯಾವ ಪ್ರೀತಿಯೂ ಇಲ್ಲ.ಬೆಳೆಗಾರರ ಚೀಲದಿಂದ ಗಾಳಿಯಾಡುವ ಸೆಣಬಿನ ಚೀಲಕ್ಕೆ ಹೋಗುತ್ತದೆ.
  • ದಾಸ್ತಾನು ಕೋಣೆಯಲ್ಲಿ (ಬಹುತೇಕ ತೆರೆದ ವಾತಾವರಣದ ಕೋಣೆ) ತಿಂಗಳ ತನಕವೂ ಅಟ್ಟಿ ಹಾಕಿ ಇರುತ್ತದೆ. (ಕಳೆದ ಒಂದು ತಿಂಗಳಿನಿಂದ ಅಡಿಕೆ ಖರೀದಿ ಕೇಂದ್ರದಲ್ಲಿ ಅಟ್ಟಿಯ ಮೇಲೆ ಅಟ್ಟಿ ಇಟ್ಟ ಚಿತ್ರಣವನ್ನು ಎಲ್ಲಾ ಬೆಳೆಗಾರರೂ ಗಮನಿಸಿರಬಹುದು)
  • ಬರೇ ನೆಲದ ಮೇಲೆ ಇಟ್ಟ ಆ  ಅಡಿಕೆ ವ್ಯಾಪಾರಿಗಳ ದಾಸ್ತಾನು ಕೋಣೆಯಲ್ಲಿ ಹಾಳಾಗದೇ ಇರುವುದು ಅಧ್ಭುತಗಳಲ್ಲಿ ಒಂದು ಎನ್ನಬಹುದು.
  • ಇಂತಹ ಅಡಿಕೆಯನ್ನು ಉತ್ತರ ಭಾರತದ ವ್ಯಾಪಾರಿಗೆ ಮಾರಾಟ ಮಾಡಿದರೆ ಅವರು ಅದಕ್ಕೆ ಕಡಿಮೆ ಬೆಲೆಗೆ ಕೇಳದಿರುತ್ತಾರೆಯೇ?
  • ಬೆಳೆಗಾರರು ಹೀಗೆ ದಾಸ್ತಾನು ಇಟ್ಟ ಅಡಿಕೆಯನ್ನು ಕೊಳ್ಳುವಾಗ ಸ್ಥಳೀಯ ವ್ಯಾಪಾರಿಗಳು ಗರಿಷ್ಟ ಬೆಲೆ ಅಥವಾ ಸರಾಸರಿ ಬೆಲೆಯನ್ನು ಕೊಡಲು ಸಿದ್ದರಿರುತ್ತಾರೆಯೇ?
  • ವಾಸ್ತವವಾಗಿ ಉತ್ತಮ ಅಡಿಕೆಗೆ ಬೇಡಿಕೆಯೂ ಇದೆ. ಬೆಲೆಯೂ ಇದೆ.
  • ಆದರೆ ಬೆಳೆಗಾರರ ಉತ್ತಮ ಗುಣಮಟ್ಟದ ಅಡಿಕೆಯನ್ನು ವ್ಯಾಪಾರಿಗಳು ಹಾಳು ಮಾಡಿ ಮಾರಾಟ ಮಾಡಿ ಒಟ್ಟಾರೆ ಮಾರುಕಟ್ಟೆಯನ್ನು ಹಾಳು ಮಾಡಿದಂತಿದೆ.
ದಾಸ್ತಾನು ಸರಿ ಇಲ್ಲದಿದ್ದರೆ ಅಡಿಕೆ ಹಾಳಾಗುತ್ತದೆ.

ಕೆಲವು ವರ್ತಮಾನಗಳ ಪ್ರಕಾರ ಈಗ  ಕೆಲವರಲ್ಲಿ ಇರುವ ದಾಸ್ತಾನಿನಲ್ಲಿ ಅರ್ಧಕ್ಕೂ ಹೆಚ್ಚಿನ ಅಡಿಕೆ ಸಮರ್ಪಕವಾಗಿ ದಾಸ್ತಾನು ಮಾಡದ ಕಾರಣದಿಂದ ಬೂಸ್ಟ್ ಬಂದು ಹಾಳಾಗಿದೆ ಎನ್ನಲಾಗುತ್ತಿದೆ. ಎಕ್ರೆಗೂ ಹೆಚ್ಚಿನ ಪ್ರದೇಶದಲ್ಲಿರುವ ದಾಸ್ತಾನು ವ್ಯವಸ್ಥೆಯ ಒಳಗೆ  ಏನಾಗಿದೆಯೋ ಬಲ್ಲವರಾರು? ಈ ಅಡಿಕೆಗೆ ಗಿರಾಕಿ ಇದ್ದರೂ  ಕೇಳುವ ಬೆಲೆ ಖರೀದಿ ಬೆಲೆಗಿಂತ ತುಂಬಾ ಕಡಿಮೆಯಾದ ಕಾರಣ ಅಡಿಕೆ ಮಾರಾಟ ಕಷ್ಟವಾಗಿದೆ.

ಬೆಳೆಗಾರರು ಸಧ್ಯಕ್ಕೆ ಮಾರಾಟ ಮಾಡಬೇಡಿ:

  •  ಬೆಲೆ ಕಡಿಮೆಯಾಗುತ್ತದೆ ಎಂಬ ಸುದ್ದಿಗೆ ವಿಚಲಿತರಾಗಿ ಮಾರಾಟಕ್ಕೆ ಮುಂದಾದರೆ ಕೊಳ್ಳುವವರಿಗೆ  ತಾಳಿಕೊಳ್ಳಲು ಕಷ್ಟವಾಗುತ್ತದೆ.
  • ಮೊದಲೇ ಕಳಪೆ ಅಡಿಕೆ ಮಾರಾಟ ಮಾಡಿ  ಹಣಬಾರದೆ, ಪೇಚಾಟದಲ್ಲಿರುವ ವ್ಯಾಪಾರಿಗಳು ಈ ಸಮಯದಲ್ಲಿ ಸಾದ್ಯವಾದಷ್ಟು ಕಡಿಮೆ ಬೆಲೆಗೆ ಖರೀದಿ ಮಾಡುತ್ತಾರೆ.
  • ಚಾಲಿ ಅಡಿಕೆಯ ಈ ಸ್ಥಿತಿ ಕೆಂಪಡಿಕೆಗೂ ಸೋಂಕು ಹಾರಡಿದಂತಿದೆ.
  • ಕೆಂಪಡಿಕೆ ದರವೂ ಕಡಿಮೆಯಾಗಲಾರಂಭಿಸಿದೆ. ಆದ ಕಾರಣ ದುಂಬಾಲು ಬಿದ್ದು ಮಾರಾಟ ಮಾಡಬೇಡಿ.
  • ನೀವು ಅಡಿಕೆ ಮಾರಾಟ ಮಾಡುವ ಕಡೆ ಅವರ ದಾಸ್ತಾನು ಕೊಣೆಯಲ್ಲಿ ಗೋಣಿ ಚೀಲಗಳ ರಾಶಿ ಎಂದಿಗಿಂತ ಹೆಚ್ಚಾಗಿ ಇದೆಯೇ ಆ ಸಮಯದಲ್ಲಿ  ಮಾರಾಟಕ್ಕೆ ಮುಂದಾಗಬೇಡಿ.
  • ಖಾಲಿ ಖಾಲಿ ಇರುವಾಗ ಮಾರಾಟ ಮಾಡಿ. ಆದ ಹಸಿವು ಇದ್ದ ಕಾರಣ ನಿಮ್ಮ ಅಡಿಕೆಗೆ ಪರಾಖು ಕಡಿಮೆ.
  • ಬೆಲೆಯೂ ಹೆಚ್ಚು ಇರುತ್ತದೆ. ಈಗ ಅವಕಾಶ ನೋಡಿಕೊಂಡು ಬೆಲೆ ಕಡಿಮೆ ಮಾಡುವುದೇ ಹೆಚ್ಚು.

ಮುಂದೆ ಏನಾಗಬಹುದು?

  • ಈಗ ದಾಸ್ತಾನಿನಲ್ಲಿರುವ ಅಡಿಕೆಯನ್ನು ಒಳ್ಳೆಯದಿರುವುದನ್ನು ಹಾಗೆಯೇ ಹಾಳಾಗಿರುವುದನ್ನು ಪ್ರತ್ಯೇಕಿಸುವ ಕೆಲಸವೂ ಭಾರೀ ಶ್ರಮದಾಯಕ.
  • ಯಾಕೆಂದರೆ ಚೀಲಗಳ ರಾಶಿ ಆ ಮಟ್ಟಿಗೆ ಇದೆ. ಒಂದು ವೇಳೆ ಖರೀದಿದಾರರು ಖರೀದಿಗೆ ಒಪ್ಪಿದರೆ ದರ ಸ್ಥಿರವಾಗಿ ಉಳಿಯಬಹುದು.
  • ಕೊಳ್ಳುವವರು ಪಟ್ಟು ಹಿಡಿದು ಕುಳಿತರೆ ಏನಾಗಬಹುದು  ಎಂಬುದನ್ನು ಎಲ್ಲರೂ ಊಹಿಸಬಹುದು!.
  • ಒಮ್ಮೆ ಈಗ ಇರುವ ದಾಸ್ತಾನು ಮುಗಿಯುವ ತನಕ ಇನ್ನು ದರ ಏರಿಕೆ ಆಗುವ ಸಾಧ್ಯತೆ ಇಲ್ಲ.
  • ಇದು ಎರಡು ಮೂರು ತಿಂಗಳ ತನಕವೂ ಮುಂದುವರಿಯಬಹುದು.
  • ಒಂದು  ವೇಳೆ  ಭಾರೀ ಕಡಿಮೆ ದರಕ್ಕೆ ವಿಲೇವಾರಿಯಾದರೆ ಆ ನಷ್ಟವನ್ನು ಭರ್ತಿಮಾಡಿಕೊಳ್ಳಲು ಹಲವು ಸಮಯದ ತನಕ ದರ ಏರಿಕೆಯಾಗಲಾರದು.
  • ಕೆಲವು ವ್ಯಾಪಾರಿಗಳು ನಾಪತ್ತೆಯಾಗಲೂಬಹುದು. ಕೆಲವು ಸಂಸ್ಥೆಗಳು ಭಾರೀ ನಷ್ಟಕ್ಕೆ ಒಳಗಾಗಲೂ ಬಹುದು.

ಅಡಿಕೆ ವರ್ತಕರಿಗೆ ಹಣಕಾಸಿನ  ಅಡಚಣೆ ಉಂಟಾದರೆ ಬೆಳೆಗಾರರಿಗೆ ಭಾರೀ ನಷ್ಟ. ಅಂತಹ ಸ್ಥಿತಿ ಬಾರದೆ ಇರಲಿ ಎಂದು ಆಶಿಸೋಣ.

ಇದು ತಪ್ಪು:

  • ಬೆಳೆಗಾರರ ಅಡಿಕೆಗೆ ಬೆಲೆ ಕಟ್ಟುವವರು, ಅದರ ಗುಣಮಟ್ಟ ನಿರ್ಧರಿಸುವವರು ವ್ಯಾಪಾರಿಗಳು.
  • ಬೆಳೆಗಾರರು ಎಷ್ಟೇ ವ್ಯವಸ್ಥಿತವಾಗಿ ಕೊಯಿಲು ಮಾಡಿ, ಒಣಗಿಸಿ, ಸುಲಿದು, ಹೆಕ್ಕಿ ವರ್ಗೀಕರಣ ಮಾಡಿ ಮಾರಾಟಕ್ಕೆ ಒಯ್ದಾಗ ಅದರ ಗುಣಮಟ್ಟ ಸರಿಯಿಲ್ಲ.
  • ಸಣ್ಣ ಅಡಿಕೆ ಪ್ರಮಾಣ ಜಾಸ್ತಿ ಇದೆ. ಒಳಗೆ ಹಾಳಾಗಿದೆ. ಒಡೆದ ಅಡಿಕೆ ಸೇರಿದೆ. ಕಣ್ಣು ತೂತಾದ ಅಡಿಕೆ ಮಿಶ್ರಣ ಇದೆ ಎಂಬೆಲ್ಲಾ ಸಬೂಬುಗಳ ಮೂಲಕ ಎಷ್ಟು ಸಾಧ್ಯವೋ ಅಷ್ಟು ದರ ಇಳಿಕೆಮಾಡುವ ಜಾಯಮಾನ ವ್ಯಾಪಾರಿಗಳದ್ದು.
  • ಅಡಿಕೆಯನ್ನು ಮಾರಾಟಕ್ಕೆ ಕೊಂಡು ಹೋದಾಗ ಅದನ್ನು ಕತ್ತರಿಸಿ ಗುಣಮಟ್ಟ ನಿರ್ಧರಿಸಲಾಗುತ್ತದೆ.
  • ಒಂದು ವೇಳೆ ಅವರು ನಿರ್ಧರಿಸುವ ದರ ಹೊಂದಾಣಿಕೆ ಆಗದಿದ್ದಲ್ಲಿ ಕತ್ತರಿಸಿದ ಅಡಿಕೆಯನ್ನು  ತೆಗೆದು ಬೇರೆ ಮಾಡಿ ಮತ್ತೊಂದು ವ್ಯಾಪಾರಿಗಳಿಗೆ ಮಾರಾಟ ಮಾಡಬೇಕು.
  • ಆಗ ಕತ್ತರಿಸಿದ ಅಡಿಕೆಯಷ್ಟು ತೂಕವನ್ನು ಬೆಳೆಗಾರ ನಷ್ಟ ಮಾಡಿಕೊಳ್ಳಬೇಕಾಗುತ್ತದೆ.
  • ಯಾವುದೇ ಬೆಳೆಗಾರರೂ ತಮ್ಮ ಸ್ವತ್ತನ್ನು ಹಾಳು ಮಾಡಿಕೊಂಡು ಮಾರಾಟಕ್ಕೆ  ತರುವುದಿಲ್ಲ ಎಂಬುದು ಸತ್ಯ ವಿಚಾರ.
  • ಇಷ್ಟಕ್ಕೂ ಬೆಳೆಗಾರರು ಅಡಿಕೆಯನ್ನು ಪ್ರತ್ಯೇಕಿಸುವಾಗ ಕಣ್ಣು ತಪ್ಪಿನ ಕಾರಣದಿಂದ ಒಂದೆಡು ಶೇ. ಗುಣಮಟ್ಟಕ್ಕೆ ಹೊಂದಿಕೆಯಾಗದ ಅಡಿಕೆ ಮಿಶ್ರಣ ಆಗುವ ಸಾಧ್ಯತೆ ಇಲ್ಲದಿಲ್ಲ. 
  • ಅಡಿಕೆ ವಿಂಗಡನೆ ಮಾಡುವ ಜನ ಮಾಡಿದರೂ ಸಹ ಹೀಗೆಯೇ ಆಗುತ್ತದೆ. ಇಲ್ಲಿ ಇನ್ನೋಂದು ವಿಚಾರವೂ ಇದೆ.
  • ಯಾವುದೇ ಬೆಳೆಗಾರನಿಗೆ ಅವನ ಉತ್ಪನ್ನ ಕಷ್ಟಪಟ್ಟು ಪಡೆದದ್ದೇ ಆಗಿರುತ್ತದೆ.
  • ಹೆತ್ತ ತಾಯಿಗೆ ಹೆಗ್ಗಣ ಮುದ್ದು ಎಂಬಂತೆ. ಹಾಗಾಗಿ ಅವರೇ ವಿಂಗಡನೆ ಮಾಡುವಾಗ ಅದರಲ್ಲಿ ಎಲ್ಲವೂ ಒಳೆಯದೇ ಕಾಣುತ್ತದೆ.
  • ಹಾಗೆಯೇ ವ್ಯಾಪಾರಿಗೆ ಬೆಳೆಗಾರನ ಉತ್ಪನ್ನದಲ್ಲಿ ಹಾಳೇ ಕಾಣಿಸುತ್ತದೆ ಇದು ವಾಸ್ತವ.

ಇನ್ನಾದರೂ ಮಾರುಕಟ್ಟೆ ವ್ಯವಸ್ಥೆ ತಮ್ಮ ತಪ್ಪು ತಿದ್ದಿಕೊಳ್ಳಲಿ:

ಅಡಿಕೆಗೆ ಆರೋಗ್ಯಕ್ಕೆ ಹಾನಿಕರ ಎಂಬ ಕಪ್ಪ ಚುಕ್ಕಿ ಬಂದಿರುವುದು ಹಾಳಾದ ಅಡಿಕೆಯ ಕಾರಣದಿಂದ. ಅಡಿಕೆ ಹಾಳಾಗುವುದು ಬೆಳೆಗಾರರ ಕೈಯಲ್ಲಿ  ಅಲ್ಲ.ಅದು ವ್ಯಾಪಾರಿಗಳ ಕೈಯಲ್ಲಿ. ವ್ಯಾಪಾರಸ್ಥರು  ವೈಜ್ಞಾನಿಕ ದಸ್ತಾನು ವ್ಯವಸ್ಥೆ ಹೊಂದುವ ತನಕ ಅಡಿಕೆ ಬೆಳೆಗಾರರಿಗೆ ಇಂತಹ ಸ್ಥಿತಿಗಳು ಆಗಾಗ ಆಗುತ್ತಲೇ ಇರುತ್ತದೆ. ಅಡಿಕೆ ಮಾರುಕಟ್ಟೆಯಲ್ಲಿ ವ್ಯಾಪಾರಿ ಸೋತರೆ ಆವರು ಬೇರೆ ವ್ಯವಹಾರಕ್ಕೆ ಇಳಿಯಬಹುದು. ಬೆಳೆಗಾರ ಸೋತರೆ ಎಲ್ಲರೂ ಸೋತಂತೆ. ಹಾಗಾಗಿ ಗುಣಮಟ್ಟ ಎಂಬುದನ್ನು ಬೆಳೆಗಾರರ ತಲೆಗೆ ಕಟ್ಟುವ ಮುನ್ನ  ಖರೀದಿದಾರರು ಪಾಲಿಸುವುದು ಅತ್ಯಗತ್ಯ.

Leave a Reply

Your email address will not be published. Required fields are marked *

error: Content is protected !!