ಕೃಷಿ ಮತ್ತು ಮನುಕುಲಕ್ಕೆ ಆತಂಕ ಉಂಟುಮಾಡುತ್ತಿದೆ ಪ್ರಕೃತಿಯ ಮುನಿಸು.

ಕೃಷಿ ಮತ್ತು ಮನುಕುಲಕ್ಕೆ ಆತಂಕ ಉಂಟುಮಾಡುತ್ತಿದೆ ಪ್ರಕೃತಿಯ ಮುನಿಸು

ಪ್ರಕೃತಿ ಅನುಕೂಲಕರವಾಗಿದ್ದರೆ ಮಾತ್ರ ಮನುಕುಲ ಕ್ಷೇಮದಿಂದ ಇರಲು ಸಾಧ್ಯ. ಈಗ ಪ್ರಕೃತಿ ಮುನಿಸಿಕೊಂಡಂತಿದೆ. ಹವಾಮಾನ ಬದಲಾಗುತ್ತಿದೆ. ನಾವು ಹೊಟ್ಟೆ ಹೊರೆಯಲು ಬೆಳೆಸುವ ಬೆಳೆಗಳ ಮೇಲೆ ಹಾಗೂ ನಮ್ಮೆಲ್ಲರ ಆರೋಗ್ಯದ ಮೇಲೆ ಇದರ ದುಶ್ಪರಿಣಾಮ ಉಂಟಾಗಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಕೃಷಿ ಉತ್ಪಾದನೆ ಕುಂಠಿತವಾಗಲಿದೆ ಎಂಬುದಾಗಿ ತಜ್ಞರು ಸರಕಾರಕ್ಕೆ ವರದಿ ನೀಡಿದ್ದಾರೆ. ಜನ ಆನಾರೋಗ್ಯ ಸಮಸ್ಯೆಯಿಂದ  ಬಳಲು ಸ್ಥಿತಿ ಉಂಟಾಗಿದೆ.

ಹವಾಮಾನ ಬದಲಾವಣೆಯ ಬಿಸಿ ಈ ವರ್ಷ ಕೃಷಿ ಕ್ಷೇತ್ರಕ್ಕೆ ವಿಪರೀತವಾಗಿ ಬಾಧಿಸುವ ಸಾಧ್ಯತೆ ಇದೆ. ಶಿವರಾತ್ರೆ ಕಳೆದ ಮೇಲೆ ಚಳಿ ದೂರವಾಗಬೇಕು. ಆದರೆ ಚಳಿ ಹೆಚ್ಚಾಗುತ್ತಿದೆ. ವಾತಾವರಣದಲ್ಲಿ ತೇವಾಂಶ (ಆರ್ಧ್ರತೆ) ಹೆಚ್ಚಾಗಬೇಕಾದ ಈ ಸಮಯದಲ್ಲಿ ಒಣ ಹವೆಯೇ ಮುಂದುವರಿದಿದೆ. ಬಿಸಿಲಿನ ಪ್ರಖರತೆ ವಿಪರೀತವಾಗಿದ್ದು, ಮನುಷ್ಯ ಮಧ್ಯಾನ್ಹದ ಹೊತ್ತಿನಲ್ಲಿ ಹೊರಗೆ ಹೋಗುವುದೂ ಕಷ್ಟ ಎಂಬಂತಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೊರ ಹೋದರೆ ಬೆವರು ಬರುತ್ತದೆ. ಆದರೆ ಈ ವರ್ಷ ಬೆವರು ಕಡಿಮೆಯಾಗಿ ಮೈ ಒಣಗುವ ಸ್ಥಿತಿ ಉಂಟಾಗಿದೆ.ಒಟ್ಟಾರೆ ಕೃಷಿ ವ್ಯವಸ್ಥೆಯ ಮೇಲೆ ಇದರ ಪರಿಣಾಮ ಏನಾಗಬಹುದು ಎಂಬ ಆತಂಕ ಎದುರಾಗಿದೆ. ಹವಾಮಾನ ಅನುಕೂಲಕರವಾಗಿಲ್ಲದಿದ್ದರೆ ಕೃಷಿಕರು ಅಸಹಾಯಕರು.ಅವರ ಯಾವುದೇ ಶ್ರಮ ನಿರೀಕ್ಷಿತ ಫಲಕೊಡಲಾರದು.

ಎಲ್ ನಿನೋ El Niño  ಎಂಬ ಫೆಸಿಫಿಕ್ ಸಾಗರದಲ್ಲು ಉಂಟಾಗುವ ಸಾಗರದ ಮೇಲ್ಮೈ ನೀರು ಬಿಸಿ ಆಗುವುಕೆಯಿಂದ ಕೆಲವು ರಾಷ್ಟ್ರಗಳು  ಭಾರೀ ಹವಾಮಾನ ವೈಪರೀತ್ಯಗಳನ್ನು  ಎದುರಿಸಬೇಕಾಗುತ್ತದೆ. ಅಂತಹ ರಾಷ್ಟ್ರಗಳಲ್ಲಿ ಭಾರತವೂ ಒಂದು. ಇದರ ಫಲದಿಂದ ಮಳೆ ಹೆಚ್ಚಾಗುತ್ತದೆ ಹಾಗೆಯೇ ಸ್ವಾಭಾವಿಕ ಋತುಮಾನಗಳು ವ್ಯತ್ಯಯಕ್ಕೊಳಗಾಗುತ್ತದೆ. ಚಳಿಗಾಲಗಲ್ಲಿ ಸೆಖೆ. ಮಳೆಗಾಲದಲ್ಲಿ ವಿಪರೀತ ಮಳೆ, ಬೇಸಿಗೆಯಲ್ಲಿ ಚಳಿ ಹೀಗೆ ಹವಾಮಾನ ಕಾಲಚಕ್ರ ಬದಲಾಗುವುದೇ ಎಲ್ ನಿನೋ ಪರಿಣಾಮ. 2023  ರ ಈ ವರ್ಷದಲ್ಲಿ ಮಾರ್ಚ್ ತಿಂಗಳ ನಂತರ ಮೇ ತನಕ ಬೇಸಿಗೆಯ ತಾಪಮಾನ 3-5 ಡಿಗ್ರಿಯಷ್ಟು ಹೆಚ್ಚಳವಾಗಲಿದ್ದು, ಕೃಷಿ, ತೋಟಗಾರಿಕಾ ಬೆಳೆಗಳು ಸೇರಿದಂತೆ ಹಲವಾರು ಬೆಳೆಗಳು ಬಿಸಿಲಿನ ತಾಪಕ್ಕೆ ಸಿಲುಕಿ ನಷ್ಟವಾಗುವ ಸಂಭವ ಇದೆ. ಬೆಳೆಗಳ ಜೊತೆಗೆ ಜನ ಜಾನುವಾರುಗಳ ಆರೋಗ್ಯದ ಮೇಲೆಯೂ ಭಾರೀ ತೊಂದರೆ  ಉಂಟಾಗುವ ಸಾಧ್ಯತೆ ಇದೆ.  ಮುಂದಿನ ಮುಂಗಾರು ಸಹ ವ್ಯತ್ಯಯವಾಗುವ ಸಾಧ್ಯತೆ ಇದೆ.

 ಅಡಿಕೆ ತೆಂಗು ಬೆಳೆಗಳ ಮೇಲೆ ಪರಿಣಾಮ:

  • ಈಗಾಗಲೇ ನಾವೆಲ್ಲಾ ಗಮನಿಸಿದಂತೆ ಅಡಿಕೆ ತೆಂಗಿನ ಮರಗಳ ಗರಿಗಳು ಬಿಸಿಲಿನ ತಾಪಕ್ಕೆ ಸಿಕ್ಕಿ ಜೋತು ಬೀಳಲಾರಂಭಿಸಿದೆ.
  • ಮಾರ್ಚ್ ತಿಂಗಳ ನಂತರ ಸಾಮಾನ್ಯವಾಗಿ ಬಿಸಿಲಿನ ತಾಪ ಹೆಚ್ಚಾಗುವುದು ವಾಡಿಕೆ.
  • ಆದರೆ ವಾತಾವರಣದಲ್ಲಿ ತೇವಾಂಶ ಹೆಚ್ಚಳವಾಗುವ ಕಾರಣ ಅದು ಬೆಳೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿರಲಿಲ್ಲ.
  • ಚಳಿಗಾಲದ ಅವಧಿ ನವೆಂಬರ್ ನಿಂದ ಫೆಬ್ರವರಿ ತನಕ ಎಲೆಗಳು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದರೂ ನಂತರ ಅವು ಹಸುರಾಗುತ್ತವೆ.
  • ಆದರೆ ಈ ವರ್ಷ ಒಣ ವಾತಾವರಣದೊಂದಿಗೆ  ಬಿಸಿಲಿನ ಝಳ ಹೆಚ್ಚಾಗಿ ಮಾರ್ಚ್ ತಿಂಗಳಲ್ಲಿ ಎಲೆಗಳು ಹಳದಿಯಾಗಲಾರಂಭಿಸಿದೆ.
  • ಇದರಿಂದ   ಫಸಲು ಕುಂಠಿತವಾಗುವ ಸಾಧ್ಯತೆ ಹೆಚ್ಚಾಗಿದೆ. ಸಸ್ಯಗಳ ಆಹಾರ ಸಂಗ್ರಹಣೆಗೆ ಅಗತ್ಯವಾದ ಎಲೆಗಳು ಬಿಸಿಲಿನ ಝಳಕ್ಕೆ ಹರಿತ್ತನ್ನು ಕಳೆದುಕೊಂಡು ಸೊರಗುವ ಸಾಧ್ಯತೆ ಹೆಚ್ಚಾಗಿದೆ.
  • ಅಡಿಕೆಯ ಮಿಡಿಗಳು ಉದುರುವ ಪ್ರಮಾಣ ಹೆಚ್ಚಾಗುತ್ತಿದೆ. ತೆಂಗಿನ ಮರದ ಗರಿಗಳು ಕಾಂಡಕ್ಕೆ ಜೋತು ಬೀಳುತ್ತಿವೆ.
  • ಮಿಳ್ಳೆಗಳು ಸಿಕ್ಕಾಪಟ್ಟೆ ಉದುರುತ್ತಿವೆ.
  • ನೀರಾವರಿ ಎಷ್ಟೇ  ಮಾಡಿದರೂ ಹೊರ ವಾತಾವರಣ ಅನುಕೂಲಕರವಾಗಿರದ ಕಾರಣ ಸಸ್ಯಗಳು ಸ್ಪಂದಿಸದ ಸ್ಥಿತಿ ಉಂಟಾಗಿದೆ.
  • ರೈತರು ತಮ್ಮ ಬೆಳೆಗಳನ್ನು ಆರೋಗ್ಯವಾಗಿ ಉಳಿಸಿಕೊಳ್ಳಲು ಶತಪ್ರಯತ್ನಗಳನ್ನು ಮಾಡುತ್ತಿದ್ದಾರೆಯಾದರೂ ಪ್ರಕೃತಿ ಅವರ ಪ್ರಯತ್ನಗಳಿಗೆ ಸ್ಪಂದಿಸುತ್ತಿಲ್ಲ.
ಅಡಿಕೆ ಮರದ ಎಲೆಗಳು ಹಳದಿಯಾಗುತ್ತಿವೆ
ಅಡಿಕೆ ಮರದ ಎಲೆಗಳು ಹಳದಿಯಾಗುತ್ತಿವೆ

ಮುಂದಿನ ಹಂಗಾಮಿನ ಅಡಿಕೆ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ. ಹಾಗೆಯೇ ತೆಂಗಿನ ಇಳುವರಿಯೂ ಸಹ ಕಡಿಮೆಯಾಗಲಿದೆ.

  • ಬಿಸಿಲಿನ ಝಳದಿಂದಾಗಿ ಚಳಿಗಾಲದ ಬೆಳೆಯಲ್ಲಿ ಸಾಕಷ್ಟು ನಷ್ಟಗಳುಂಟಾಗಿದೆ.
  • ಮುಂದಿನ ಬೇಸಿಗೆ ಹಂಗಾಮಿನ ಬೆಳೆಗಳಿಗೂ  ಇದರ ಪರಿಣಾಮ ಮುಂದುವರಿಯಲಿದೆ.
  • ನೀರಿಗೆ ಹೆಚ್ಚಿನ ಒತ್ತಡ ಉಂಟಾಗಲಿದ್ದು ಅಂತರ್ಜಲದ ಶೋಷಣೆ  ಹೆಚ್ಚಾಗಲಾರಂಭಿಸಿದೆ.
  • ಈಗಾಗಲೇ ಕೊಳವೆಬಾವಿಗಳ ನೀರಿನ ಇಳುವರಿ ಕಡಿಮೆಯಾಗುತ್ತಿದೆ.
  • ಈ ಪರಿಸ್ಥಿತಿಯು ಮುಂದಿನ ವರ್ಷವೂ ಹೀಗೆ ಮುಂದುವರಿಯುವ ಸಾಧ್ಯತೆ ಇದೆ ಎಂಬುದಾಗಿ  US Government weather agency  ಮತ್ತು National Oceanic and Atmospheric Administration ತಿಳಿಸುತ್ತದೆ.
  • ಭಾರತೀಯ ಹವಾಮಾನ ಇಲಾಖೆ ಮುಂಗಾರು ಮಳೆ ಮುಂದೆ ಹೋಗುವ ಸೂಚನೆಯನ್ನು ನೀಡುತ್ತದೆ.

ಅತಿಯಾದ ಬಿಸಿಲಿನ ಕಾರಣದಿಂದಾಗಿ  sun burn ಹೆಚ್ಚಾಗಿ ಹಲವಾರು ಬೆಳೆಗಳು ನಿರೀಕ್ಷಿತ ಫಲ ನೀಡದ ಸ್ಥಿತಿ ಉಂಟಾಗಿದೆ. ಇದು ದೇಶದ ಆರ್ಥ ವ್ಯವಸ್ಥೆಯ ಮೇಲೆ ದೊಡ್ಡ ನಷ್ಟವನ್ನು ಉಂಟುಮಾಡುವ ಸಾಧ್ಯತೆ ಇದೆ.

ಜೋತುಬೀಳುತ್ತಿರುವ ತೆಂಗಿನ  ಗರಿಗಳು
ಜೋತುಬೀಳುತ್ತಿರುವ ತೆಂಗಿನ ಗರಿಗಳು

ಕೀಟ- ರೋಗಗಳು ಹೆಚ್ಚಾಗುವ ಸಾಧ್ಯತೆ:

  • ಹವಾಮಾನ ಆಧಾರಿತ ಕೆಲವು ಕೀಟಗಳು ಪ್ರಾಬಲ್ಯವನ್ನು ಪಡೆಯಲಿದ್ದು, ವಿಶೇಷವಾಗಿ ತಿಗಣೆಯಂತಹ (Mites) ಹೆಚ್ಚಾಗುವ ಸಾಧ್ಯತೆ ಇದೆ.
  • ಒಣ ಸೊರಗು ರೋಗಗಳು ಹೆಚ್ಚಾಗಲಿದೆ.
  • ಬೆಳೆ ಉಳಿಸಿಕೊಳ್ಳಲು ರೈತರು ಕೀಟನಾಶಕ , ಶಿಲೀಂದ್ರ ನಾಶಕಗಳನ್ನು ಹೆಚ್ಚು ಹೆಚ್ಚು ಬಳಸಬೇಕಾದ ಅನಿವಾರ್ಯತೆ ಬಂದಿದೆ.
  • ಸಸ್ಯಗಳು ತಮ್ಮ ಸ್ವಾಭಾವಿಕ ಬೆಳವಣಿಗೆಯಲ್ಲಿ ವ್ಯತ್ಯಾಸವನ್ನು ಹೊಂದುವ ಸಾಧ್ಯತೆ ಇದೆ.
  • ಇವೆಲ್ಲದರ ಪರಿಣಾಮವಾಗಿ ಆಹಾರ ವಸ್ತುಗಳು, ತೋಟಗಾರಿಕಾ ಬೆಳೆಗಳ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ.
ಅತಿಯಾದ ಬಿಸಿಲು,ಮತ್ತು ಶುಷ್ಕ ವಾತಾವರಣದಲ್ಲಿ ಈ ರೀತಿಯ ತಿಗಣೆ ಜಾತಿಯ ಕೀಟಗಳು ಭಾರೀ ತೊಂದರೆ  ಮಾಡುತ್ತವೆ
ಅತಿಯಾದ ಬಿಸಿಲು,ಮತ್ತು ಶುಷ್ಕ ವಾತಾವರಣದಲ್ಲಿ ಈ ರೀತಿಯ ತಿಗಣೆ ಜಾತಿಯ ಕೀಟಗಳು ಭಾರೀ ತೊಂದರೆ ಮಾಡುತ್ತವೆ

ಮಳೆಯ ಲಯ ತಪ್ಪುವ ಸಾಧ್ಯತೆ:

  • ಎಲ್ ನೀನೋ ಪರಿಣಾಮದಿಂದ ಮಳೆಯ ಹಂಚಿಕೆ ವ್ಯತ್ಯಯವಾಗುತ್ತದೆ.
  • ಈ ವರ್ಷ ಹಾಗೂ ಮುಂದಿನ ವರ್ಷಗಳಲ್ಲಿ ಮಳೆ ತಡವಾಗಬಹುದು ಮತ್ತು ಹಂಚಿಕೆ ವ್ಯತ್ಯಯವಾಗಬಹುದು.
  • ಅಕಾಲಿಕ ಮಳೆ , ಚಳಿ, ಸೆಖೆ ಉಂಟಾದರೆ ಮನುಷ್ಯರೂ ಸೇರಿದಂತೆ ಸಸ್ಯಗಳಿಗೆಲ್ಲಾ  ತೊಂದರೆ ಸಹಜ.
  • ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಆಹಾರ ಧ್ಯಾನ್ಯಗಳ ದಾಸ್ತಾನು ಹೆಚ್ಚಿಸಲು ಮುಂದಾಗಿದೆ.
  • ದೇಶದಲ್ಲಿ ಗೋಧಿಯ ಉತ್ಪಾದನೆ ಗಣನೀಯ ಕಡಿಮೆಯಾಗುವ ಸಂಭವವಿದ್ದು,  ದಾಸ್ತಾನು ಮತ್ತು ಪೋಲಾಗುವುದನ್ನು ತಡೆಯುವ ಬಗ್ಗೆ ತಜ್ಞರು ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಸಸ್ಯಗಳು ಮತ್ತು ಮರಮಟ್ಟುಗಳು:

  • ಅರಣ್ಯ, ಗುಡ್ಡ ಬೆಟ್ಟಗಳಲ್ಲಿ ಮರಮಟ್ಟುಗಳು  ಈಗ ಚಿಗುರುವ ಸಮಯ. ಅವು ಋತುಮಾನ ಸಹಜವಾಗಿ ತಮ್ಮ ಕ್ರಿಯೆಯನ್ನು ಮಾಡುತ್ತಿವೆ.
  • ಆದರೆ ಸಸ್ಯ ಮರಮಟ್ಟುಗಳು ಸಧೃಢವಾದ ಚಿಗುರುಗಳನ್ನು ಬಿಡಲು ಅನುಕೂಲವಾದ ಪರಿಸ್ಥಿತಿ ಇಲ್ಲದಾಗಿದೆ.
  • ಈ ಸಮಯದಲ್ಲಿ ಹೂವು ಬಿಡುವ ಅನೇಕ ಕಾಡು ಜಾತಿಯ ಸಸ್ಯಗಳಿವೆ. ಹೂವೇನೂ ಬಿಟ್ಟಿವೆ.
  • ಶುಷ್ಕ ವಾತಾವರಣದಿಂದಾಗಿ ಹೂ ಗೊಂಚಲಿನ ಶಕ್ತಿ ಕಡಿಮೆಯಾಗಿದೆ.
  • ವಾತಾವರಣದಲ್ಲಿ ಸಾಕಷ್ಟು ತೇವಾಂಶ  HUMIDITY ಇಲ್ಲದ ಕಾರಣ ಮಧು ಕಡಿಮೆಯಾಗಿದೆ.

ಪರಿಹಾರ ಏನು?

  • ಅತಿಯಾದ ತಾಪಮಾನ ಹಾಗೂ ವಾತಾವರಣದಲ್ಲಿ ತೇವಾಂಶ ಕಡಿಮೆ ಆದ ಸಮಯದಲ್ಲಿ ರೈತರು ಬೆಳೆ ಉಳಿಸಿಕೊಳ್ಳಲು ಮಾಡಬೇಕಾದ ಅಗತ್ಯ ಕೆಲಸ ಎಂದರೆ ಪತ್ರ ಸಿಂಚನದ ಮೂಲಕ ನೀರು ಮತ್ತು ಪೊಷಕಾಂಶಗಳನ್ನು ಪೂರೈಕೆ ಮಾಡುವುದು.
  • ಬಿಸಿಲು ಹೆಚ್ಚಾದಷ್ಟೂ ಸಸ್ಯಗಳು ನೀರು ಮತ್ತು ಪೊಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗ ಮಾಡಿಕೊಳ್ಳುತ್ತವೆ.
  • ಮಣ್ಣಿನಲ್ಲಿ ಇರುವ ಪೊಷಕಾಂಶಗಳನ್ನು  ಹೆಚ್ಚು ಹೆಚ್ಚು ಬಳಕೆ ಮಾಡಿಕೊಳ್ಳುವ ಕಾರಣದಿಂದ ಸಹಜವಾಗಿ ಕೊರತೆ ಉಂಟಾಗುತ್ತದೆ.
  • ವಾತಾವರಣವನ್ನು ಹೆಚ್ಚು ಆರ್ಧ್ರ ವಾಗಿ ಇರಿಸಿಕೊಂಡಲ್ಲಿ  ಈ ಸಂಧಿಗ್ಧ ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳಲು ಸಾಧ್ಯವಿದೆ.
  • ಪತ್ರ ಸಿಂಚನದ (Folier spray) ಮೂಲಕ ನೀರು ಹಾಗೂ ಕಡಿಮೆ ಸಾಂದ್ರತೆಯಲ್ಲಿ ಪೋಷಕಗಳನ್ನು ಒದಗಿಸುವುದರಿಂದ ಸಸ್ಯಗಳ ಸೊರಗುವಿಕೆಯನ್ನು  ಮಿತಿಗೊಳಿಸಬಹುದು.
  • ನೀರಿನ ಜೊತೆಗೆ ಪೊಷಕಾಂಶಗಳನ್ನು ಬಳಕೆ ಮಾಡಿದರೆ ಭಾರೀ ಫಲ ಇರುತ್ತದೆ.
  • ಇಂತಹ ಪರಿಸ್ಥಿತಿಗಳು ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ಮರಮಟ್ಟುಗಳನ್ನು ಕಡಿಯುವುದು ಸೂಕ್ತವಲ್ಲ.
  • ಅಡಿಕೆ ಸಸಿಗಳಿಗೆ, ಕರಿಮೆಣಸಿನ ಬಳ್ಳಿಗಳಿಗೆ ಶೇ..5 ರ ಸುಣ್ಣದ ದ್ರಾವಣವನ್ನು ಎಲೆ ಅಡಿ ಭಾಗಕ್ಕೆ ಸಿಂಪರಣೆ ಮಾಡುವುದರಿಂದ ಬಿಸಿಲಿನ ಹೊಡೆತವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.

ಬಿಸಿಲು ಎಲ್ಲಾ ಬೆಳೆಗಳ ಬೆಳವಣಿಗೆಗೆ ಅಗತ್ಯವಾದದ್ದು. ಆದರೆ ಪ್ರತೀಯೊಂದು ಬೆಳೆಗೂ ನಿರ್ದಿಷ್ಟ ಪ್ರಮಾಣದ ಬಿಸಿಲು ಬೇಕಾಗುತ್ತದೆ. ಹೆಚ್ಚಾದರೆ ಆದು ತೊಂದರೆಯೇ. ಬಿಸಿಲಿನ ಝಳದ ತೀವ್ರತೆಯನ್ನು  ತಗ್ಗಿಸಲು ಪ್ರಕೃತಿ ವಾತಾವರಣದಲ್ಲಿ ತೇವಾಂಶವನ್ನು ಹರಡುತ್ತದೆ. ಹವಾಮಾನ ವೈಪರೀತ್ಯದ ಕಾರಣ ಇದು ಇಲ್ಲದಾಗಿ ಬೆಳೆಗಳ ಮೇಲೆ ಭಾರೀ ತೊಂದರೆ ಉಂಟಾಗಿದೆ.    

Leave a Reply

Your email address will not be published. Required fields are marked *

error: Content is protected !!