ರಬ್ಬರ್ ತೋಟ ಇರುವ ಕಡೆ ಸಂಚರಿಸುವಾಗ ಕಂಡುಬರುವ ಬಳ್ಳಿ ಸಸ್ಯ ಜೀವವೈವಿಧ್ಯಗಳನ್ನು ಸಾಕಷ್ಟು ನಾಶ ಮಾಡಿವೆ, ಇನ್ನೂ ಮಾಡುತ್ತಿವೆ. ರಬ್ಬರ್ ಬೆಳೆಯುವಾಗ ಮೊದಲ ಮೂರು ನಾಲ್ಕು ವರ್ಷ ಮಣ್ಣು ಸವಕಳಿ ತಡೆಗೆ ಅಗತ್ಯವೆಂದು ಬೆಳೆಸಿದ ಈ ಬಳ್ಳಿ ಮರ ಬೆಳೆದ ನಂತರ ತೋಟದಿಂದ ಹೊರಬಂದು ಇಡೀ ಸಸ್ಯವರ್ಗಗಳನ್ನು ಆಪೋಶಣ ತೆಗೆದುಕೊಳ್ಳುತ್ತಿದೆ. ಅದು ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಹಬ್ಬಿ ಅಲ್ಲಿನ ಸಸ್ಯಗಳು, ಮರಗಳ ಮೇಲೆ ಏರಿ ಅದರ ಬೆಳವಣಿಗೆಯನ್ನು ಹತ್ತಿಕ್ಕುವ ಮೂಲಕ ಜೀವವೈವಿಧ್ಯಕ್ಕೆ ಕುತ್ತು ತರುತ್ತದೆ. ಸರಕಾರ, ಅರಣ್ಯ ಇಲಾಖೆ, ಪರಿಸರ ಕಳಕಳಿ ಉಳ್ಳವರು ಇದನ್ನು ಗಂಭೀರ ವಿಷಯವಾಗಿ ಪರಿಗಣಿಸಬೇಕಾಗಿದೆ.
ಸಸ್ಯ ಜೀವ ವೈವಿಧ್ಯಗಳ ಅವನತಿ ಆಗುತ್ತಿದೆ ಎನ್ನುತ್ತೇವೆ. ಮರಮಟ್ಟುಗಳು ಕಡಿಮೆಯಾಗಿದೆ ಎನ್ನುತ್ತೇವೆ. ಯಾವ ಕಾರಣಕ್ಕೆ ಇವು ನಾಶವಾಗುತ್ತಿವೆ ಎಂದು ಸೂಕ್ಷ್ಮವಾಗಿ ಗಮನಿಸಿದ್ದೇ ಆದರೆ ಕಂಡು ಬರುವುದು ಬಳ್ಳಿ ಗೆಣಸು ಜಾತಿಗೆ ಸೇರಿದ (Dioscorea) ಒಂದು ಬಳ್ಳಿ ಹಾಗೂ ರಬ್ಬರ್ ಮರದ ಮುಚ್ಚಲು ಬೆಳೆಯ (Calopogonium mucunoides Desv Cover crop)ಬಳ್ಳಿಗಳು. ಇವು ಬೋರಲು ನೆಲವನ್ನು ಮುಚ್ಚಿ ಮರಗಿಡವನ್ನು ಏರಿ ಅವುಗಳನ್ನು ಬಗ್ಗಿಸುತ್ತವೆ. ಬೆಳವಣಿಗೆಗೆ ಬೇಕಾಗುವ ಬೆಳಕಿನ ಕೊರತೆ ಉಂಟು ಮಾಡಿ ಮರ ಗಿಡಗಳನ್ನು ಸಾಯುವ ಸ್ಥಿತಿಗೆ ತಲುಪಿಸುತ್ತವೆ.
ಮ್ಯೂಕುನ ಬಳ್ಳಿ ಇರುವಲ್ಲಿ ಅದರೆದ್ದೇ ಸರ್ವಾಧಿಕಾರ. ಇದು ಬೇರೆ ಯಾವ ಸಸ್ಯವನ್ನೂ ಬೆಳೆಯಲು ಬಿಡದ ಸಾರ್ವಭೌಮ ಎಂದೇ ಹೆಳಬಹುದು. ವಾಸ್ತವವಾಗಿ ಇದನ್ನು ರಬ್ಬರ್ ತೋಟದಲ್ಲಿ ಬರೇ ನೆಲಹಾಸು ಮಾತ್ರವಲ್ಲ, ನೆಲದಲ್ಲಿ ಬೆಳೆಯುವ ಎಲ್ಲಾ ತರಹದ ಗಿಡಗಂಟಿಗಳ ಬೆಳವಣಿಗೆಯನ್ನು ಹತ್ತಿಕ್ಕುವ ಉದ್ದೇಶಕ್ಕೂ ಬೆಳೆಯಲಾಗುತ್ತದೆ. ಒಮ್ಮೆ ಬೇರು ನೆಲದಲ್ಲಿ ಸ್ಥಾಪಿತವಾದರೆ ಅದು ಹೇಗಾದರೂ ಬದುಕಿಕೊಳ್ಳುವ ಅಸಾಮಾನ್ಯ ಬಳ್ಳಿಸಸ್ಯ. ನೆಲಕ್ಕೆ ಬಿಸಿಲು ಬೀಳದಂತೆ ತಡೆಯುವಲ್ಲಿ ಇದು ಅತ್ಯುತ್ತಮ. ಹಾಗೆಯೇ ನೆಲಕ್ಕೆ ಎಲ್ಲಿ ಹೆಚ್ಚು ಬಿಸಿಲು ಬೀಳುತ್ತದೆಯೋ ಅಲ್ಲೆಲ್ಲಾ ಬದುಕಿಕೊಳ್ಳುತ್ತದೆ. ನೆಲದಲ್ಲಿ ಹಬ್ಬುವಾಗ ಸಿಗುವ ಎಲ್ಲಾ ಗಿಡ, ಮರಗಳ ಮೇಲೇರಿ ಅದನ್ನು ದ್ವಂಸ ಮಾಡಿಯೇ ಮುಂದೆ ಸರಿಯುವುದು.ರಬ್ಬರ್ ತೋಟ ಮಾಡಿದ ಕಡೆಗಳಲ್ಲಿ ಈಗ ರಬ್ಬರ್ ತೋಟ ಇಲ್ಲದಿದ್ದರೂ ಈ ಮುಚ್ಚಲು ಬೆಳೆಯ ಅವಷೇಶ ಉಳಿದುಕೊಂಡಿದೆ.
ಕಾಡು ಪ್ರಾಣಿಗಳಿಗೆ ನೆಲೆತಪ್ಪಿಸಿದ ಬಳ್ಳಿ:
- ಬಹುತೇಕ ಕೃಷಿಕರಿಗೆ ಈಗ ಯಾವುದೇ ಬೆಳೆ ಬೆಳೆಸುವುದಿದ್ದರೂ ಕೋತಿ, ನವಿಲು, ಮುಳ್ಳು ಹಂದಿ, ಹಂದಿ ಮುಂತಾದ ಪ್ರಾಣಿಗಳದ್ದೇ ತಲೆಬಿಸಿ. ಕಾಡಿನಲ್ಲಿರಬೇಕಾದ ಕೋತಿಗಳು ನಾಡಿಗೆ ಬಂದಿವೆ.
- ಪ್ರಾಣಿ ಸಂಗ್ರಹಾಲದಲ್ಲಿ ಕಾಣಿಸುತ್ತಿದ್ದ ನವಿಲುಗಳು ಈಗ ಹಳ್ಳಿಗಳ ಪ್ರತೀ ಮನೆ ಬಾಗಿಲಿನಲ್ಲಿ ದಿನಾ ಸುಪ್ರಭಾತ ಕೂಗುತ್ತವೆ.
- ಹೆಬ್ಬಾವು,ಕಾಡು ಹಂದಿ, ಮುಳ್ಳು ಹಂದಿಗಳೂ ಹೆಚ್ಚಾಗಿವೆ. ಕೆಲವೆಡೆ ಆನೆ, ಕಾಡೆಮ್ಮೆಗಳು ಹೆಚ್ಚಾಗಿವೆ.
- ಇದಕ್ಕೆಲ್ಲಾ ಕಾರಣ ಅವುಗಳಿಗೆ ಆಹಾರದ ಕೊರತೆ ಒಂದೇ ಅಲ್ಲ.
- ನೆಲದಲ್ಲಿ ಅವುಗಳ ಸಹಜ ಓಡಾಟಕ್ಕೆ ಅಡ್ಡಿಯಾಗಿ ಪರಿಣಮಿಸಿದ ಈ ಬಳ್ಳಿಯ ಹೊದಿಕೆ. ಹಳ್ಳಿಗಳ ಬಹುಪಾಲು (60%ಕ್ಕೂ ಹೆಚ್ಚು) ಖಾಲಿ ಸ್ಥಳ ಸಾಮಾನ್ಯ ಮರಮಟ್ಟುಗಳಿರುವ ಅರಣ್ಯಗಳಲ್ಲಿ ಈಗ ಕಾಣಸಿಗುವುದು ಈ ಬಳ್ಳಿಯ ಹೊದಿಕೆ ಮಾತ್ರ.
- ಹಸುರು ಹೊದಿಕೆಯ ಪಾತ್ರವನ್ನು ಚೆನ್ನಾಗಿ ನಿಭಾಯಿಸಿ ಜೀವವೈವಿಧ್ಯಗಳ ಬದುಕಿನ ಮೇಲೆ ಭಾರೀ ಪ್ರಹಾರವನ್ನು ಮಾಡಿದೆ, ಮಾಡುತ್ತಿದೆ.
ಕೋತಿ, ನವಿಲು ಕಾಡೆಮ್ಮೆ, ಆನೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ, ಎನ್ನುತ್ತೇವೆ. ಆದರೆ ಯಾವ ಕಾರಣಕ್ಕೆ ಅವು ನಮ್ಮ ಬಳಿ ಬಂದಿದೆ ಎಂದು ನಮ್ಮನ್ನೇ ನಾವು ಪ್ರಶ್ನೆ ಮಾಡಿಕೊಂಡದ್ದಿದೆಯೇ?. ನಾವು ಯಾವಾಗಲೂ ಹೀಗೆ. ನಮ್ಮ ಹೊಲ, ನಮ್ಮ ಮನೆ ಸುರಕ್ಷಿತವಾಗಿದ್ದರಾಯಿತು , ನೆರೆಯವನು ಹೇಗಾದರೂ ಇರಲಿ ಎಂಬ ಮನೋಸ್ಥಿತಿಯವರು. ಈ ಮನೋಬಾವನೆಯ ಫಲದಿಂದಲೇ ನಾವೆಲ್ಲರೂ ಕಷ್ಟ ಅನುಭವಿಸುವಂತಾಗಿದೆ.
- ದಶಕದ ಹಿಂದೆ ಕಾಡಿನಂತೆ ಬೆಳೆಯುತ್ತಿದ್ದ ನಮ್ಮ ಸುತ್ತಮುತ್ತಲ ಸೊಪ್ಪಿನ ಬೆಟ್ಟ, ಕುಮ್ಕಿ ಜಮೀನುಗಳಲ್ಲಿ ಈಗ ನೈಸರ್ಗಿಕ ಮರಮಟ್ಟುಗಳಿಲ್ಲ.
- ಇರುವುದೆಲ್ಲಾ ರಬ್ಬರ್ ತೋಟ. ಇಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದ್ದ ಹಲಸು, ಹೆಬ್ಬಲಸು, ಮುರುಗಲು, ಸಳ್ಳೆ, ಉಂಡೆ ಹುಳಿ, ಚಳ್ಳೆಹಣ್ಣು, ಅತ್ತಿ, ಆಲ, ಸಂಪೆ, ಮಾವು, ರೆಂಜೆ, ನೇರಳೆ, ಕುಂಟುನೇರಳೆ, ಮುಳ್ಳುಹಣ್ಣು, ತೇರೆ ,ಈಚಲು ಮುಂತಾದ ಮರಮಟ್ಟುಗಳನ್ನು ಕಡಿದು ರಬ್ಬರ್ ತೋಟ ಮಾಡಿದೆವು.
- ಕಾಡು ಪ್ರಾಣಿಗಳಿಗೆ ಆಹಾರವಾಗಿದ್ದ ಹಣ್ಣು ಹಂಪಲುಗಳಿಲ್ಲದೆ ಅವು ಬದುಕುವ ಹಕ್ಕಿಗಾಗಿ ಆಹಾರ ಹುಡುಕಿ ಹೊಲಕ್ಕೆ ಬರುತ್ತಿವೆ.
- ನಾವು ಅದನ್ನು ವಿವಿಧ ಕ್ರಮಗಳಿಂದ ನಿಯಂತ್ರಿಸುತ್ತಿದ್ದೇವೆ. ಮನುಷ್ಯ ಜೀವ ವೈವಿಧ್ಯಗಳ ಮೇಲೆ ಸವಾರಿ ಮಾಡುವಂತೆ ಆಗಿದೆ.
ನಿರ್ಲಕ್ಷ್ಯ ಮತ್ತು ಬೇಜವಾಬ್ಧಾರಿ ಕಾರಣ:
- ರಬ್ಬರ್ ಬೆಳೆಸಿದರ ತಪ್ಪಿಲ್ಲ. ಅದು ರೈತರ ಆದಾಯಕ್ಕೆ ಪೂರಕ. ರಬ್ಬರ್ ಬೆಳೆಬೆಳೆಯುವಾಗ ಮುಚ್ಚಲು ಬೆಳೆ ಬೆಳೆಯಬೇಕಾದ್ದೂ ಅಗತ್ಯ.
- ಇದರಿಂದ ಮಣ್ಣಿನ ಸವಕಳಿ ತಡೆಯಲ್ಪಡುತ್ತದೆ. ಮಣ್ಣು ಫಲವತ್ತಾಗುತ್ತದೆ.
- ಇದು ಮರಗಳು ತಮ್ಮ ಗೆಲ್ಲುಗಳನ್ನು ಪರಸ್ಪರ ತಾಗಿಸಿಕೊಳ್ಳುವಷ್ಟು ಬೆಳವಣಿಗೆ ಆಗುವ ವರೆಗೆ ತೀರಾ ಅಗತ್ಯ.
- ಆ ನಂತರ ಅದು ನೆರಳು ಆದ ಕಾರಣ ಅಲ್ಲಿ ಬದುಕುವುದಿಲ್ಲ. ಹೊರಭಾಗಕ್ಕೆ ಮುಖಮಾಡಿ ಬೆಳೆಯುತ್ತದೆ.
- ಈ ಸಮಯದಲ್ಲಿ ಬೆಳೆಗಾರರು ನಿರ್ಲಕ್ಷ್ಯ ವಹಿಸಿ ಅದನ್ನು ಮನಬಂದಂತೆ ಬೆಳೆಯಲು ಬಿಡಬಾರದು.
- ಒಂದು ವೇಳೆ ಬೆಳೆಗಾರರು ಬೆಳೆಯಲು ಬಿಟ್ಟಿದ್ದರೆ ಅವರಿಗೆ ತಿಳುವಳಿಕೆ ಹೇಳುವ ಕೆಲಸವನ್ನು ಸ್ಥಳೀಯಾಡಳಿತ, ಅರಣ್ಯ ಇಲಾಖೆ ಮಾಡಬೇಕು.
- ಅದನ್ನು ಮಾಡದಿರುವುದು ಬೇಜವಾಬ್ಧಾರಿ. ಅರಣ್ಯ ನಾಶವಾಯಿತು ಎನ್ನುತ್ತೇವೆ.
- ಜೀವ ಜಂತುಗಳು, ಮೂಲಿಕ ಸಸ್ಯ ವೈವಿಧ್ಯಗಳು ಸಹ ನಾಶವಾಗುತ್ತಿದೆ. ನೀರು ಹರಿದುಹೋಗುವ ಚರಂಡಿಗಳೂ ಸಹ ಮುಚ್ಚಲ್ಪಟ್ಟು ನೀರು ದಾರಿಯಲ್ಲಿ ಹರಿಯುತ್ತಿದೆ.
- ಇದಕ್ಕೆ ಸ್ಥಳೀಯಾಡಳಿತ ಅಥವಾ ಕಾನೂನು ಪಾಲಕರ ಬೇಜವಾಬ್ಧಾರಿ ಎಂದರೆ ತಪ್ಪಿದೆಯೇ?
- ಕಾಲು ದಾರಿ, ಗ್ರಾಮೀಣ ರಸ್ತೆಗಳಲ್ಲಿ ಏನಾದರೂ ಮೂರು ನಾಲ್ಕಾರು ದಿನ ದಿನ ನಡೆದಾಡದಿದ್ದರೆ ಆ ದಾರಿಯೇ ಮುಚ್ಚುವಷ್ಟು ಈ ಬಳ್ಳಿ ಬೆಳೆಯುತ್ತದೆ .
- ಅಂದರೆ ಈ ಬಳ್ಳಿ ದಿನಕ್ಕೆ ಏನಿಲ್ಲವೆಂದರೂ 1/2 ಅಡಿ ಬೆಳೆಯುತ್ತದೆ.
- ರಬ್ಬರ್ ತೋಟಗಳಲ್ಲಿ ಮುಚ್ಚಲು ಬೆಳೆ ಪ್ರಸ್ತುತ ಇರಬಹುದು.
- ಅದಕ್ಕಾಗಿ ರಬ್ಬರ್ ಬೆಳೆಸುವಾಗ ಅಗತ್ಯವಾಗಿ ಮುಚ್ಚಲು ಬೆಳೆಗಳಾದ ಮ್ಯೂಕುನ ಇಲ್ಲವೇ ಪ್ಯುರೇರಿಯಾ ಬಳ್ಳಿಗಳ ಬೀಜವನ್ನು ಬಿತ್ತಬೇಕು ಎಂಬುದಾಗಿ ಹೇಳುತ್ತಾರೆ.
- ಇದರಿಂದ ಮಣ್ಣಿನ ಉಷ್ಣತೆ ಕಡಿಮೆಯಾಗಿ, ಹೊಲದಲ್ಲಿ ಅಳಿದುಳಿದು ಬೆಳೆಗೆ ಸ್ಪರ್ಧೆ ಮಾಡುವ ಗಿಡ ಗಂಟಿಗಳೆಂಬ ಕಳೆಗಳನ್ನು ಹತ್ತಿಕ್ಕಿ, ಅಂತರ್ಜಲ ವೃದ್ದಿಯಾಗಿ, ಸೂಕ್ಷ್ಮ ಜೀವಿಗಳ ಚಟುವಟಿಕೆ ಹೆಚ್ಚಿ, ನೀರಾವರಿ ಕ್ಷಾಮದಲ್ಲೂ ರಬ್ಬರ್ ಮರದಲ್ಲಿ ಉತ್ತಮ ಇಳುವರಿ ಪಡೆಯಬಹುದಂತೆ.
- ಪ್ರಾರಂಭಿಕ ವರ್ಷಗಳಲ್ಲಿ ರಬ್ಬರ್ ಸಸ್ಯಗಳು ಇನ್ನೂ ಗೆಲ್ಲು ಕೂಡಿರದ ಸಮಯದಲ್ಲಿ ಹೊಲದಲ್ಲೆಲ್ಲಾ ವ್ಯಾಪಿಸುತ್ತಾ ಬೆಳೆದು ನೋಡಲು ಹಚ್ಚ ಹಸುರಾಗಿ ಕಾಣುತ್ತದೆ.
- ಬೀಜ ಬಿತ್ತನೆ ಮಾಡಿ ಎರಡು ಮೂರು ವರ್ಷದಲ್ಲಿ ಇಡೀ ಹೊಲವನ್ನು ವ್ಯಾಪಿಸುತ್ತದೆ.
- ಬಳ್ಳಿಯ ಪ್ರತೀ ಗಂಟಿನಲ್ಲೂ ಬೇರು ಬಂದು ಅದು ಬೆಳೆಯುತ್ತಾ ಇರುತ್ತದೆ.
- ಸಸ್ಯ ಸಹಜ ಗುಣದಂತೆ ಎಲ್ಲಿ ಹೆಚ್ಚು ಬೆಳಕು ಲಭ್ಯವೋ ಅಲ್ಲೆಲ್ಲಾ ತನ್ನ ಬಾಹುಳ್ಯವನ್ನು ವಿಸರಿಸುತ್ತದೆ.
ಹೀಗೆ ಮುಂದುವರಿದ ಬಳ್ಳಿಗಳು ಯಾವುದೇ ಅಡ್ದಿ ಇಲ್ಲದ ಪಕ್ಷದಲ್ಲಿ ಎಷ್ಟು ದೂರಕ್ಕೂ ಹಬ್ಬುತ್ತದೆ. ಅಲ್ಲಿರುವ ಎಲ್ಲಾ ಸಸ್ಯ ಮರಮಟ್ಟುಗಳ ಮೇಲೆ ಬೆಳೆದು ಅದನ್ನು ಹತ್ತಿಕ್ಕಿ ಸಾಯಿಸಿ ತನ್ನ ಪ್ರಾಬಲ್ಯವನ್ನು ಮೆರೆಯುತ್ತದೆ. ಈ ಬಳ್ಳಿಗೂ ಸಹ ನಾನೊಬ್ಬನೇ ಬದುಕಬೇಕು, ಉಳಿದವರು ಬದುಕಬಾರದು ಎಂಬ ಮನೋಬಾವನೆಯೋ ಏನೋ?
ತಕ್ಷಣ ಗಮನಹರಿಸಿ ತೆರವು ಮಾಡಿಸಿ:
- ಸ್ಥಳೀಯ ಕಾನೂನು ಪಾಲಕರು ದಯವಿಟ್ಟು ಈ ಅವ್ಯವಸ್ಥೆಯನ್ನು ಗಮನಿಸಿ. ಭೂಮಿಗೆ ಹಸಿರು ಹೊದಿಕೆ ಎಷ್ಟು ಬೇಕೋ ಅಷ್ಟೇ ಸೂರ್ಯನ ಬೆಳಕಿನ ಸ್ಪರ್ಶವೂ ಬೇಕು.
- ಇವೆರಡರ ಅಸಮತೋಲನ ಮಣ್ಣಿನ ಮೇಲೆ ಕೆಲವು ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತದೆ.
- ಆದುದರಿಂದ ಇದನ್ನು ಸಮರೋಪಾದಿಯಲ್ಲಿ ತೆಗೆಸುವ ಕೆಲಸವನ್ನು ತುರ್ತಾಗಿ ಮಾಡಬೇಕಾಗಿದೆ.
- ಈ ಬಳ್ಳಿ ಇರುವಲ್ಲಿ ಕೋತಿಗಳಿಗೂ ನವಿಲುಗಳಿಗೂ ಹಾಗೇ ಕಾಲು ಉಳ್ಳ ಯಾವುದೇ ಜೀವಿಗೂ ಓಡಾಟ ಮಾಡುವುದಕ್ಕೆ ಆಗುವುದಿಲ್ಲ.
- ಹೆಚೇಕೆ ಪಕ್ಷಿಗಳಿಗೂ ಇದು ಆಸರೆಯಲ್ಲ. ರಬ್ಬರ್ ತೋಟ ಮಾಡಿದವರು ಈ ನಮೂನೆ ಬಳ್ಳಿ ಇರುವಾಗ ಅದರಲ್ಲಿ ಟ್ಯಾಪಿಂಗ್‍ಗಾಗಿ ನಸುಕಿನಲ್ಲಿ ಓಡಾಡುವಾಗ ಹಾವು- ಗೀವು ಸಿಗಲಾರದೇ ಎಂದರೆ ಇಲ್ಲಿ ಹಾವು ಬದುಕುವುದೇ ಇಲ್ಲ ಎನ್ನುತ್ತಾರೆ!
ಹೊಸ ಆಶಾಕಿರಣ:
- ಕಳೆಗಳಿಗೂ ಈಗ ಬೆಲೆ ಬಂದಿದೆ. ಹುಲ್ಲು, ಯಾವುದಕ್ಕೂ ಬೇಡದ ಕಳೆಗಳಿಗೂ ಹಸಿ ತೂಕಕ್ಕೆ ಕಿಲೋ ರೂ.1 ರ ದರದಲ್ಲಿ ಖರೀದಿ ಮಾಡುವ ವ್ಯವಸ್ಥೆ ಬರಲಾರಂಭಿಸಿದೆ.
- ಹಸುರು ಸಸ್ಯಗಳಿಂದ ಗ್ಯಾಸ್ ಉತ್ಪಾದಿಸುವ ಘ್ಹಟಕಗಳು ತಾಲೂಕು , ಹೋಬಳಿ ಮಟ್ಟದಲ್ಲಿ ತಲೆ ಎತ್ತಲು ಸಜ್ಜಾಗುತ್ತಿವೆ.
- ಇವರಿಗೆ ಪ್ಲಾಸ್ಟಿಕ್ ಸೇರಿದಂತೆ ಹಲವಾರು ತ್ಯಾಜ್ಯಗಳ ಮಹಾಪೂರವೇ ಬೇಕು.
- ಇವು ತೆರೆಯಲ್ಪಟ್ಟರೆ ಮುಂದೆ ಕಳೆ ಒಟ್ಟು ಸೇರಿಸಿದರೂ ಆದಾಯ ಸಿಗಲಿದೆ. ಇಂಧನಕಾಗಿ ಕಳೆ ಬೆಳೆಸುವ ಸ್ಥಿತಿ ಬರಲಿದೆ.
ಸಸ್ಯ, ಹಾವು, ಪ್ರಾಣಿ,ಪಕ್ಷಿ ಮುಂತಾದ ಜೀವ ವೈವಿದ್ಯಗಳ ಬದುಕಿಗೆ ಸಂಚಕಾರವಾದ ಮುಚ್ಚಲು ಬೆಳೆ, ಜೊತೆಗೆ ನೈಮಲ್ಯಕ್ಕೂ ತೊಂದರೆಯಾದ ಮುಚ್ಚಲು ಬೆಳೆ ಬಳ್ಳಿಯನ್ನು ಸಾರ್ವಜನಿಕ ಭೂಮಿಯಲ್ಲಿ ಬೆಳೆಯಲು ಬಿಡುವುದು ತಪ್ಪು. ಅದನ್ನು ಅವರವರ ಹೊಲದಲ್ಲಿ ವ್ಯವಸ್ಥಿತವಾಗಿ ಬೆಳೆಸುವ ಮೂಲಕ ಉದ್ದೇಶ ಸಾಧಿಸಿಕೊಳ್ಳಬಹುದೇ ಹೊರತು ಎಲ್ಲೆಲ್ಲೂ ತಮ್ಮ ಸಾರ್ವಭೌಮತ್ವವನ್ನು ಸ್ಥಾಪಿಸುವುದು ಶಿಷ್ಟಾಚಾರವೆನಿಸುವುದಿಲ್ಲ.