ಮ್ಯಾಂಗೋಸ್ಟಿನ್- ಇದು ಭಾರೀ ಬೆಲೆ-ಬೇಡಿಕೆಯ ಹಣ್ಣು- ನಾವೆಲ್ಲಾ ಬೆಳೆಯಬಹುದು

ಮ್ಯಾಂಗೋಸ್ಟಿನ್- ಇದು ಭಾರೀ ಬೆಲೆ- ಬೇಡಿಕೆಯ ಹಣ್ಣು
ಮ್ಯಾಂಗೋಸ್ಟಿನ್ ಹಣ್ಣಿಗೆ ಇರುವ ಬೇಡಿಕೆಯನ್ನು ಗಮನಿಸಿ ಕೆಲವರು ದೊಡ್ಡ ಪ್ರಮಾಣದಲ್ಲಿ ಇದನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಇದು ಹೊಸ ಹಣ್ಣು ಅಲ್ಲ. ಬಹಳ ಹಿಂದಿನಿಂದಲೂ ಇತ್ತು. ಈ ಹಣ್ಣಿಗೆ ಕಿಲೋ ರೂ.200 ಕ್ಕಿಂತ ಮೇಲೆ ಇರುತ್ತದೆ. ವಿದೇಶದಿಂದ : Moluccas Island, ಇಂಡೀನೇಶಿಯಾದಿಂದ ಕೇರಳದವರೊಬ್ಬರು ಉನ್ನತ ವ್ಯಾಸಂಗಕ್ಕೆ ಹೋಗಿದ್ದಾಗ ಬೀಜ ತಂದು ಬೆಳೆಸಿದ ತರುವಾಯ (90 ವರ್ಷಕ್ಕೆ ಹಿಂದೆ) ಇಲ್ಲಿ ಪ್ರಾರಂಭವಾಯಿತು. ಇತ್ತೀಚೆಗೆ ಇದಕ್ಕೆ ಬೇಡಿಕೆ ಮತ್ತು ಬೆಲೆ ಹೆಚ್ಚಾದ ಕಾರಣ ಕೇರಳದಲ್ಲಿ ಇದನ್ನು ಬೆಳೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಮಿಶ್ರ ಬೆಳೆಯಾಗಿ ಬೆಳೆಸಬಹುದು. ನೆರಳಿನ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತದೆ.ಸಾಧಾರಣ ಕಾಡು ಮರಗಳ ಎಡೆಯಲ್ಲೂ ಬೆಳೆಯಬಹುದು.
ಇದು ಉಷ್ಣವಲಯದ ಹಣ್ಣಿನ ಬೆಳೆ. ದಕ್ಷಿಣ ಭಾರತದ ಎಲ್ಲಾ ಕಡೆಗಳಲ್ಲೂ ಬೆಳೆಸಬಹುದು. ಇದನ್ನು  ಹಣ್ಣುಗಳ ರಾಣಿ ಎಂದು ಕರೆಯಲಾಗುತ್ತದೆ. ತಿನ್ನಲು ಸುಲಭ. ಬಹಳ ರುಚಿಕಟ್ಟು. ಹಾಗೆಯೇ ಹೆಚ್ಚು ದಿನಗಳ ತನಕ  ಉಳಿಯುತ್ತದೆ. ನಾವೆಲ್ಲರೂ ತಿಳಿದಿರುವ ಮುರುಗನ ಹುಳಿ, ಪುನರ್ಪುಳಿ ಜಾತಿಗೆ ಸೇರಿದ ಸಿಹಿಯಾದ ತಿರುಳುಳ್ಳ ಹಣ್ಣು.  ಇದರ ವೈಜ್ಞಾನಿಕ ಹೆಸರು (Garcinia mangostana L ನಮ್ಮ ದೇಶವಲ್ಲದೆ ಬೇರೆ ಬೇರೆ ದೇಶಗಳಲ್ಲೂ ಇದರ ಬೆಳೆ ಇದೆ. ಇದನ್ನು ಬೇರೆ ಬೇರೆ ರಾಷ್ಟ್ರಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಇದರ ಬೇರೆ ಬೇರೆ ಹೆಸರುಗಳು ಹೀಗಿವೆ. mangostanier, mangoustanier, mangouste, mangostier (French), mangostan (Spanish), manggis, mesetor, semetah, sementah (Malaysian), manggustan, mangis, mangostan (Philippine), mongkhut (Cambodian), mangkhut (Thai), cay mang cut (Vietnamese), manggis, manggistan (Dutch), and mangostao, mangosta, or mangusta (Portuguese) ಪ್ರಪಂಚದ ಎಲ್ಲಾ ಕಡೆ ಭಾರೀ ಬೇಡಿಕೆ ಉಳ್ಳ ಹಣ್ಣಾಗಿರುತ್ತದೆ.

ಹಣ್ಣು ಹೇಗಿರುತ್ತದೆ:

ಮರ ದೈತ್ಯ ಮರವಾಗಿ ಬೆಳೆಯುತ್ತದೆ. ಎಲೆಗಳು ದಪ್ಪ ಹಾಗೂ ಉದ್ದವಾಗಿರುತ್ತದೆ. ಹೆಚ್ಚಿನ ಬಿಸಿಲಿಗೆ ಎಲೆಗಳು ಸ್ವಲ್ಪ ಮಟ್ಟಿಗೆ ಒಣಗುತ್ತವೆ. 50% ದಷ್ಟು ನೆರಳು ಇದ್ದಾಗ ಸಮಸ್ಯೆ ಇಲ್ಲ. ಗಿಡದ ಬೆಳವಣಿಗೆ ತುಂಬಾ ನಿಧಾನವಾಗಿದ್ದು, ನೆಟ್ಟು 6-7 ವರ್ಷದ ತರುವಾಯ ಹೂ ಬಿಡಲು ಪ್ರಾರಂಭವಾಗುತ್ತದೆ.ಮರಕ್ಕೆ ಧೀರ್ಘಾಯುಸ್ಸು. ಗಿಡ ಬೆಳೆದಂತೆ ಇಳುವರಿ ಹೆಚ್ಚಾಗುತ್ತದೆ. ಇದರ ವಿಶೇಷ ಏನೆಂದರೆ ಈ ಸಸ್ಯದಲ್ಲಿ ಹೂವು ಕಾಯಿ ಕಚ್ಚಲು ಪರಾಗಸ್ಪರ್ಷ ಬೇಕಾಗಿಲ್ಲ. ಹಾಗಾಗಿ ಹೂವಾದಷ್ಟೂ ಮಿಡಿಯಾಗುತ್ತದೆ.
ಹಣ್ಣಾದ  ಮ್ಯಾಂಗೋಸ್ಟಿನ್
ಹಣ್ಣಾದ ಮ್ಯಾಂಗೋಸ್ಟಿನ್
ಇದರ ಕಾಯಿಗಳು ಬಲಿಯುವ ಮುಂಚೆ ತಿಳಿ ಹಸುರು ಬಣ್ಣದಲ್ಲಿರುತ್ತದೆ. ಬಲಿತಾಗ ಅದು ಕೆನ್ನೆತ್ತರು ಬಣ್ಣಕ್ಕೆ ತಿರುಗುತ್ತದೆ. ಆಗ ಒಳಭಾಗದ ತಿರುಳಿಗೆ ಸಿಹಿರುಚಿ ಸೇರಿಕೊಳ್ಳುತ್ತದೆ. ಕಾಯಿ ಇರುವಾಗ ಇದನ್ನು ತಿನ್ನಲು ಸಾಧ್ಯವಿಲ್ಲ. ಮೇಣ ಇರುತ್ತದೆ ಹಾಗೆಯೇ ಕಹಿ ರುಚಿ ಇರುತ್ತದೆ.ಕೆಲವು ರೈತರ ಪ್ರಕಾರ ಇದು ಕಾಯಿ ಇರುವಾಗ ಕಹಿ ರುಚಿ ಆದ ಕಾರಣ ಮಂಗಗಳ ಕಾಟ ಇಲ್ಲ. ಹಣ್ಣಿನ ಗಾತ್ರ ಕೆಲವು ಸಾಧಾರಣ ಕಿತ್ತಳೆ ಹಣ್ಣಿನಷ್ಟೂ ಕೆಲವು ಸಣ್ಣ ಕಿತ್ತಳೆ ಹಣ್ಣಿನಷ್ಟೂ ಮಿಶ್ರವಾಗಿ ಇರುತ್ತದೆ. ಕಡಿಮೆ ಫಸಲು ಬಂದರೆ ಕಾಯಿ ಸ್ವಲ್ಪ ದೊಡ್ಡದಿರುತ್ತದೆ. ಈಗ ಕೆಲವು ಆಯ್ಕೆ ತಳಿಗಳನ್ನು ಪತ್ತೆ ಮಾಡಿ ಅದರ ಸಸ್ಯಾಭಿವೃದ್ದಿ ಮಾಡಲಾಗುತ್ತದೆ. ಇದರ ಗಾತ್ರ ಸ್ವಲ್ಪ ದೊಡ್ದದಿರುತ್ತದೆ. ಗಾತ್ರ ವ್ಯತ್ಯಾಸ ಇದ್ದರೂ ರುಚಿಯಲ್ಲಿ ವ್ಯತ್ಯಾಸ ಇರುವುದಿಲ್ಲ. ಹಾಗೆಯೇ ಒಳ ಭಾಗದ ತಿರುಳು ಸಹ ವ್ಯತ್ಯಾಸ ಇರುವುದಿಲ್ಲ. 

ಬೆಳೆಸುವುದು ಹೇಗೆ?

ಇದರ ಸಸ್ಯಾಭಿವೃದ್ದಿ ಈಗಲೂ ಬೀಜದಿಂದಲೇ ಮಾಡಲಾಗುತ್ತಿದೆ.  ಕಸಿ ತಾಂತ್ರಿಕತೆ ಇದಕ್ಕೆ ಹೊಂದಿಕೆಯಾಗುವುದಿಲ್ಲ ಎನ್ನುತ್ತಾರೆ ನರ್ಸರಿ ಮಾಡುವವರು.ಉತ್ತಮ ಇಳುವರಿ ನೀಡುವ ಉತ್ತಮ ಗಾತ್ರದ ಕಾಯಿ ಕೊಡಬಲ್ಲ ಮರದ ಹಣ್ಣುಗಳನ್ನು ಬೀಜಕ್ಕೆ ಉಪಯೋಗಿಸಲಾಗುತ್ತದೆ. ಮಿಶ್ರ ಪರಾಗಸ್ಪರ್ಶ  ಆಗುವ ಅವಕಾಶ ಇಲ್ಲದ ಕಾರಣ ಬೀಜದ ಸಸಿಯಲ್ಲಿ ತಾಯಿಗುಣದ ವ್ಯತ್ಯಾಸ ಬರುವುದಿಲ್ಲ. ಈಗ ಸಸ್ಯೋತ್ಪಾದನಾ ನರ್ಸರಿಗಳಲ್ಲಿ ಎರಡು ಮೂರು ಅಡಿ ಬೆಳೆದ ಗಿಡಗಳು ಲಭ್ಯವಿದ್ದು, ಅವುಗಳನ್ನು ನಾಟಿ ಮಾಡಿದಾಗ ಸ್ವಲ್ಪ ಬೇಗ ಫಲ ಕೊಡುತ್ತದೆ. 
ಮ್ಯಾಂಗೋಸ್ಟಿನ್  ಹಣ್ಣುಗಳನ್ನು ಅಂಗಡಿಯಿಂದ ಖರೀದಿಸಿ ತಂದಾಗ ಅದರ ಗಾತ್ರ ಮತ್ತು ರುಚಿ ನಿಮಗೆ ತೃಪ್ತಿಕರವಾಗಿಕಂಡರೆ ಅದರ ಬೀಜವನ್ನು ನುಂಗುವ ಬದಲು ಚೀಪಿ ಅದೇ ಬೀಜವನ್ನು ಸಸಿ ಮಾಡಿಕೊಂಡು ಸ್ವಲ್ಪ ಎತ್ತರ ಬೆಳೆಯುವ ತನಕ ಪೋಷಿಸಿ ನಾಟಿ ಮಾಡಬಹುದು. ಅದೇ ರೀತಿಯ ಹಣ್ಣು ಕೊಡುತ್ತದೆ. ಇದರಲ್ಲಿ ಗಂಡು ಹೆಣ್ಣು ಎಂಬ ಭಿನ್ನತೆ ಬರುವುದಿಲ್ಲ.
ನೆಲವನ್ನು ಸುಮಾರು 2-3 ಅಡಿ ಸಡಿಲ ಮಾಡಿ ನೀರು ನಿಲ್ಲದಂತೆ ಕೇವಲ ಪಾಲೀ ಬ್ಯಾಗ್ ಮುಳ್ಳುಗುವಷ್ಟು ಆಳದಲ್ಲಿ ಸಸಿಯನ್ನು ನಾಟಿ ಮಾಡಬೇಕು. ತಳದಲ್ಲಿ ನಾಟಿ ಮಾಡಬಾರದು.ತಾಯಿ ಬೇರು ರುವ ಮರವಾದ ಕಾರಣ ಸಡಿಲ ಮಣ್ಣಿನಲ್ಲಿ ಬೇರುಗಳು ತಳಕ್ಕೆ ಇಳಿದು ಗಟ್ಟಿಯಾಗುತ್ತದೆ. ನೆಟ್ಟ ಮೇಲೆ ಬುಡದ ಮಣ್ಣು ಏರಿಸಿ ನೀರು ಇಳಿದು ಹೋಗುವಂತೆ ನೋಡಿಕೊಳ್ಳಬೇಕು. 
ಹಣ್ಣಿನ ಇಳುವರಿ
ಹಣ್ಣಿನ ಇಳುವರಿ

ಸಸ್ಯ ಆರೈಕೆ:

ತೋಟದಲ್ಲಿ ಬೆಳೆಸುವುದಾದರೆ ಪ್ರತ್ಯೇಕ ನೀರಾವರಿ ಬೇಕಾಗಿಲ್ಲ. ಬೇರೆ ಕಡೆ ಬೆಳೆಸುವುದಾದರೆ ಪ್ರಾರಂಭದ 3-4 ವರ್ಷ ಕಾಲ ತೇವಾಂಶಕ್ಕಾಗಿ ನೀರಾವರಿ ಮಾಡಬೇಕು. ನೆರಳು ಅಗತ್ಯವಾಗಿ ಬೇಕು. ಕಾಡು ಮರಗಳ ಮಧ್ಯೆಯೂ ನಾಟಿ ಮಾಡಬಹುದು. ನೆಟ್ಟು 2 ವರ್ಷದ ತರುವಾಯ ಮರಕ್ಕೆ ಒಂದೇ ಕಾಂಡ ಇರುವಂತೆ ನೋಡಿಕೊಳ್ಳಬೇಕು. ಹೆಚ್ಚಾಗಿ ಒಂದು ಕಾಂಡವೇ ಇರುತ್ತದೆ. ಕೆಳಭಾಗದ 5-6 ಅಡಿ ತನಕದ ಗೆಲ್ಲುಗಳನ್ನು ಮರ ಬೆಳೆದಂತೆ ತೆಗೆಯುತ್ತಾ ಮೇಲೆ ಬೆಳವಣಿಗೆ ಆಗುವಂತೆ ನೋಡಿಕೊಳ್ಳಬೇಕು ಮರದ ಗೆಲ್ಲುಗಳು ಅಗಲಕ್ಕೆ ಬೆಳೆಯುತ್ತಾ ಇರಬೇಕು, ಮೇಲ್ಮುಖ ಬೆಳವಣಿಗೆ ಆಗದಂತೆ ಭಾರ ತುದಿ ಭಾಗವನ್ನು 7-8 ವರ್ಷದ ನಂತರ ಕತ್ತರಿಸಿದರೆ  ಮುಂದೆ ಹಣ್ಣು ಕೊಯಿಲು ಮಾಡಲು ಸುಲಭವಾಗುತ್ತದೆ.  
ಉತ್ತಮ ಗಾತ್ರದ ಹಣ್ಣು
ಉತ್ತಮ ಗಾತ್ರದ ಹಣ್ಣು

ಮಾರುಕಟ್ಟೆ ಬೆಲೆ:

ಈ ಹಣ್ಣಿಗೆ ಕಿಲೋಗೆ ಸರಾಸರಿ 150 ರೂ ಇದೆ. ಮಾರಾಟವಾಗುವ ಅಂಗಡಿಗಳಲ್ಲಿ ರೂ.300 ಮತ್ತೂ ಅದಕ್ಕೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಕಡಿಮೆ ಪ್ರಮಾಣದಲ್ಲಿ ಇರುವ ಹಣ್ಣು. ಇದಕ್ಕೆ ಸ್ಥಳೀಯ ಮಾರುಕಟ್ಟೆಯಲ್ಲೂ ಬೇಡಿಕೆ ಇದೆ. ಜೊತೆಗೆ ಮಹಾನಗರಗಳಾದ ಬೆಂಗಳೂರು, ಮುಂಬೈ , ಚೆನ್ನೈ ಹೀಗೆಲ್ಲಾ ಭಾರೀ ಬೇಡಿಕೆ ಇದೆ. ಕೇರಳ ತ್ರಿಶೂರಿನ ಚಾಲಕುಡಿ ಎಂಬಲ್ಲಿ ಪೆರಿಯಾರಂ ಎಂಬ ಊರಿನಲ್ಲಿ ಕೆಲವು ರೈತರು  ಬೆಳೆಯನ್ನು ಬೆಳೆದು 1 ಕೋಟಿಗೂ ಹೆಚ್ಚಿನ ವ್ಯವಹಾರ ಮಾಡುತ್ತಿದ್ದಾರೆ ಎಂಬ ವರದಿ ಇದೆ. ಇಲ್ಲಿ ಮಾತ್ರವಲ್ಲದೆ ವಿದೇಶೀ ಹಣ್ಣು ಬೆಳೆಗಳ ತವರೂರು ಎಂದೇ ಖ್ಯಾತವಾದ ಪತ್ತನಂತಿಟ್ಟ , ಎರನಾಕುಲಂ ಮುಂತಾದೆಡೆಯೂ ಈ  ಬೆಳೆ ಸಾಕಷ್ಟು ಪ್ರಮಾಣದಲ್ಲಿ ಇದೆ. ಇಲ್ಲಿನ ರೈತರು ಸಂಘಟನೆ ಮಾಡಿಕೊಂಡು ಇದನ್ನು ಚೆನ್ನೈ ನಗರಕ್ಕೆ ಮಾರಾಟ ಮಾಡುತ್ತಾರೆ. ಬರೇ ಕೇರಳ ಮಾತ್ರವಲ್ಲ, ನೆರೆಯ ತಮಿಳುನಾಡಿನ ಪೊಲ್ಲಾಚಿ,ಪಳನಿ, ಕೂನೂರು ಇಲ್ಲಿಯೂ ಬೆಳೆ ಇದೆ. ಕರ್ನಾಟಕದಲ್ಲೂ ಸುಮಾರು 100 ಟನ್ ಗೂ ಹೆಚ್ಚಿನ ಉತ್ಪಾದನೆ ಇದೆ.ಸ್ಥಳೀಯ ಮಾರುಕಟ್ಟೆಯಲ್ಲಿ ಸಿಗುವ ಹಣ್ಣಿನ ಗಾತ್ರ ಸಣ್ಣದಾಗಿರುತ್ತದೆ. ಹಣ್ಣುಗಳನ್ನು ವರ್ಗೀಕರಣ ಮಾಡಿ ದೊಡ್ಡ ಗಾತ್ರದ್ದನ್ನು ಹೆಚ್ಚಿನ ಬೆಲೆಗೆ ಮಹಾನಗರಗಳಿಗೆ ಮಾರಾಟ ಮಾಡುತ್ತಾರೆ.
ಮ್ಯಾಂಗೋಸ್ಟಿನ್ ಮರ
ಮ್ಯಾಂಗೋಸ್ಟಿನ್ ಮರ

ಯಾವ ಪ್ರದೇಶಗಳಲ್ಲಿ ಬೆಳೆಯಬಹುದು?

ಕರಾವಳಿ, ಮಲೆನಾಡು ಅರೆಮಲೆನಾಡಿನಲ್ಲಿ ಇದನ್ನು ಯಶಸ್ವಿಯಾಗಿ ಬೆಳೆಯಬಹುದು. ತಾಪಮಾನ 35 ಡಿಗ್ರಿಗಿಂತ ಹೆಚ್ಚು ಇರುವ ಪ್ರದೇಶಗಳಲ್ಲಿ  ಹೆಚ್ಚು ನೆರಳು ಬೇಕಾಗಬಹುದು. ಇಂದಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಬೆಳೆಗಳಿಗೆ ಪ್ರಾದೇಶಿಕ ಇತಿಮಿತಿಗಳನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡು ಬೆಳೆಯುವ ಅನುಕೂಲ ಇರುವ ಕಾರಣ ತೀರಾ ಬಿಸಿಲಿನ ವಾತಾವರಣ ಹೊರತಾಗಿ ತಂಪು ಇರುವ ಎಲ್ಲಾ ಕಡೆಯೂ ಬೆಳೆಯಬಹುದು. ಇದನ್ನು ತೆಂಗಿನ ತೋಟದಲ್ಲಿ ಚೆನ್ನಾಗಿ ಬೆಳೆಸಬಹುದು. ಮಹಾರಾಷ್ಟ್ರದ ವೆಂಗುರ್ಲಾ ಹಣ್ಣಿನ ಸಂಶೋಧನಾ ಕೇಂದ್ರದಲ್ಲಿ ಇದನ್ನು ತೆಂಗಿನ ತೋಟದಲ್ಲಿ ಬೆಳೆಯುತ್ತಾರೆ.
ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಸ್ವಲ್ಪ ಪ್ರಮಾಣದಲ್ಲಿ ಬೆಳೆಸುವುದು ಹೆಚ್ಚುವರಿ ಆದಾಯಕ್ಕೆ ಪೂರಕ. ಇದಕ್ಕೆ ಭಾರೀ ಔಷಧೀಯ ಗುಣ ಇದೆ ಎನ್ನುತ್ತಾರೆ. ಇದರ ಬಗ್ಗೆ ವೈಜ್ಞಾನಿಕ ಅಧ್ಯಯನ ಹೆಚ್ಚು ಇಲ್ಲ ಆದರೂ ಆರೋಗ್ಯಕ್ಕೆ ಯಾವ ತೊಂದರೆ ಇಲ್ಲದ  ರುಚಿಕರ ಹಣ್ಣು.

Leave a Reply

Your email address will not be published. Required fields are marked *

error: Content is protected !!