ಡ್ರಾಗನ್ ಹಣ್ಣಿನ ಬೆಳೆಗೆ ಭಾರೀ ಮಹತ್ವ ಬರುತ್ತಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆಯೂ ಉತ್ತಮವಾಗಿದೆ. ಈ ಬೆಳೆ ರೈತರ ಆದಾಯ ಹೆಚ್ಚಳಕ್ಕೆ ನೆರವಾಗುತ್ತಿದೆ. ನಮ್ಮ ದೇಶವಲ್ಲದೆ ಬೇರೆ ದೇಶಗಳಲ್ಲೂ ಡ್ರಾಗನ್ ಹಣ್ಣಿನ ಬೆಳೆ ಜನಪ್ರಿಅತೆ ಗಳಿಸುತ್ತಿದ್ದು, ಇದಕ್ಕೆ ಪ್ರಾಪಂಚಿಕ ಮಾರುಕಟ್ಟೆ ಇದೆ. ಇಲ್ಲೊಬ್ಬರು ಹೂವಿನ ಹಡಗಲಿಯ ಕಾಲ್ವಿ ಗ್ರಾಮದ ರೈತ ಡ್ರಾಗನ್ ಹಣ್ಣಿನ ಬೆಳೆ ಬೆಳೆದು ಹೇಗೆ ಆದಾಯ ಹೆಚ್ಚಿಸಿಕೊಂಡರು ನೋಡೋಣ.
ಕರ್ನಾಟಕ ರಾಜ್ಯ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕಾಲ್ವಿ ಗ್ರಾಮದ ಬಣಕಾರ ಶಿವನಾಗಪ್ಪ ದೊಡ್ಡತೋಟಪ್ಪ( 65) ಒಬ್ಬ ಚಿಕ್ಕ ಬಡರೈತ. ದೊಡ್ಡ ಅವಿಭಕ್ತ ಕುಟುಂಬದವರು. ಒಂದನೇ ತರಗತಿವರೆಗೆ ಓದಿದ್ದಾರೆ. ಬಡತನದಿಂದ ಅನಿವಾರ್ಯವಾಗಿ ಕೃಷಿಕಾರ್ಯದಲ್ಲಿ ತೊಡಗಿಸಿಕೊಂಡರು. ಒಟ್ಟು 5 ಎಕರೆ ಭೂಮಿಯಲ್ಲಿ ಪಾರಂಪರಿಕ ಮೆಕ್ಕೆಜೋಳ ಮತ್ತಿತರೆ ಬೆಳೆ ಬೆಳೆಯುತ್ತಿದ್ದರಿಂದ ಅಷ್ಟಕ್ಕಷ್ಟೇ ಆದಾಯ ಬರುತ್ತಿತ್ತು. ಪದವಿ ಮುಗಿಸದ ಮಗ ಪ್ರಕಾಶ ಈಗ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಪ್ರೇರಣೆಯಿಂದ ಈ ಹಣ್ಣಿನ ಬೇಸಾಯ ಕೈಗೊಂಡಿದ್ದರಿಂದ ಕುಟುಂಬದ ಆದಾಯ ಹೆಚ್ಚಲಾರಂಭಿಸಿದೆ.
ಎಷ್ಟು ಬೆಳೆ ಬೆಳೆದಿದ್ದಾರೆ?
- ತಮ್ಮ 2.5 ಎಕರೆ ಭೂಮಿಗೆ ಸಾವಯವ ಗೊಬ್ಬರ ಬೆರೆಸಿ ಭೂಮಿಯನ್ನು ಚೆನ್ನಾಗಿ ಹದಗೊಳಿಸಿದರು.
- ನಂತರ 2021 ರ ಏಪ್ರಿಲ್ ನಲ್ಲಿ ಹೈದ್ರಾಬಾದಿನಿಂದ ಪ್ರಕಾಶಮಾನವಾದ ಕೆಂಪು-ಗುಲಾಬಿ ಬಣ್ಣದ ಉತ್ತಮ ತುಂಡುಗಳನ್ನು ತಂದು ಕಂಬದಿಂದ ಕಂಬಕ್ಕೆ 8 ಅಡಿ ಮತ್ತು ಸಾಲಿನಿಂದ ಸಾಲಿಗೆ 12 ಅಡಿಯಂತೆ ಒಟ್ಟು 985 ಕಂಬಗಳಿಗೆ 4000 ಗಿಡಗಳನ್ನು ಹರಡಿಸಿದ್ದಾರೆ.
- ಪ್ರತಿ 2-3 ತಿಂಗಳಿಗೊಮ್ಮೆ ಬಳ್ಳಿಗಳಿಗೆ ಗೊಬ್ಬರ ಹಾಕಿ ವಾರಕ್ಕೊಮ್ಮೆ ನೀರುಣಿಸುವರು.
ನರೇಗಾ ಯೋಜನೆಯಂತೆ ಬೆಳೆದಿದ್ದಾರೆ:
- ಭಾರತ ಸರಕಾರದ ಮಹಾತ್ಮಾ ಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಬೆಳೆ ವಿಸ್ತರಣೆ, ಹೊಸ ಬೆಳೆ ಸ್ಥಾಪನೆ, ಅದಕ್ಕೆ ನೆಡು ಸಾಮಾಗ್ರಿ ನೀರಾವರಿ ಇತ್ಯಾದಿ ಅಭಿವೃದ್ದಿ ಕಾರ್ಯಗಳಿಗೆ ಲಭ್ಯವಿದೆ. ಇದನ್ನು ಈ ರೈತರು ಬಳಸಿಕೊಂಡಿದ್ದಾರೆ.
- ಬಹುವಾರ್ಷಿಕ ಈ ಫ್ರೂಟ್ ಬೇಸಾಯಕ್ಕಾಗಿ ತೋಟಗಾರಿಕೆ ಇಲಾಖೆಯಿಂದ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಂತೆ (ನರೇಗಾ ಯೋಜನೆಯಡಿ) ಗುಂಡಿ ತೋಡಲು ಮತ್ತು ಬಳ್ಳಿ ಹರಡುವಿಕೆಗಾಗಿ 1.25 ಲಕ್ಷ ರೂ. ಕಾರ್ಮಿಕರ ಖಾತೆಗೆ ನೇರವಾಗಿ ಮತ್ತು ಸಸಿಗಳ ಖರೀದಿ, ಸಾಗಣೆ, ಗೊಬ್ಬರ ಮತ್ತಿತರ ವೆಚ್ಚಗಳಿಗಾಗಿ 77581ರೂ.ಗಳನ್ನು ಪಾವತಿಸಲಾಗಿದೆ.
- ಇದಲ್ಲದೆ ಕೊಳವೆ ಬಾವಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲೂ 33000 ರೂ. ಸಹಾಯಧನ ನೀಡಲಾಗಿದೆ.
ಎಷ್ಟು ಬೆಳೆ – ಬೆಲೆ:
- ತೋಟಗಾರಿಕೆ ಅಧಿಕಾರಿಗಳ ತಾಂತ್ರಿಕ ಸಲಹೆ, ಮಾರ್ಗದರ್ಶನದೊಂದಿಗೆ ಡ್ರಾಗನ್ ಬೇಸಾಯ ಕ್ರಮಗಳನ್ನು ಅನುಸರಿಸಿದ್ದರಿಂದ 12 ತಿಂಗಳಿಂದಲೇ ಇಳುವರಿ ಪ್ರಾರಂಭವಾಗಿದೆ.
- ಈವರೆಗೆ 15 ಟನ್ ಡ್ರಾಗನ್ ಹಣ್ಣಿನ ಇಳುವರಿ ಪಡೆದು 6 ಲಕ್ಷ ರೂ. ಲಾಭ ಗಳಿಸಿದ್ದಾರೆ.
- ಪ್ರತಿ ಹಣ್ಣು 250-800 ಗ್ರಾಂ ಮತ್ತು ಒಂದು ಕೆ.ಜಿ.ಗೆ 120-150 ರೂ.ದಂತೆ ಮಾರಾಟವಾಗುತ್ತದೆ.
- ಹಣ್ಣು ಮಾರಾಟಗಾರರೇ ಇವರ ತೋಟದಿಂದ ನೇರವಾಗಿ ಡ್ರಾಗನ್ ಹಣ್ಣು ಖರೀದಿಸುತ್ತಿದ್ದಾರೆ.
- ಸದರಿ ಬೇಸಾಯಕ್ಕೆ ಒಟ್ಟು 8 ಲಕ್ಷ ರೂ. ಖರ್ಚಾಗಿದೆ.
- ಕ್ಯಾಕ್ಟಸ್ ಜಾತಿಗೆ ಸೇರಿದ ಡ್ರಾಗನ್ ಫ್ರೂಟ್ ಹೊಸ ತಳಿಯ ವಾಣಿಜ್ಯ ಮತ್ತು ವಿದೇಶಿ ಬೆಳೆಯಾಗಿದೆ.
- ತೋಟಗಾರಿಕೆ ಇಲಾಖೆಯ ಪ್ರೋತ್ಸಾಹದಿಂದ ಹಡಗಲಿ ತಾಲೂಕಿನ ಕಾಲ್ವಿ, ಇಟಿಗಿ, ಕೋಮಾರನಹಳ್ಳಿ ತಾಂಡಾ, ಮೀರಾಕರ‍್ನಹಳ್ಳಿ, ಮಹಾಜನದಹಳ್ಳಿ, ಹೊಳಲು ಮತ್ತು ಲಿಂಗನಾಯಕನಹಳ್ಳಿಯ ಹಲವಾರು ರೈತರು ಈ ಬೆಳೆಯತ್ತ ಆಕರ್ಷಿತರಾಗಿ ತಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳಿಸಿಕೊಳ್ಳುತ್ತಿದ್ದಾರೆ.
- ಒಟ್ಟು ಮೂರು ಬಣ್ಣಗಳಿಂದ ಕೂಡಿರುವ ಮತ್ತು ರುಚಿಕರವಾಗಿರುವ ಈ ಹಣ್ಣು
- ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವುದಲ್ಲದೆ ಡಯಾಬಿಟೀಸ್, ಡೆಂಗ್ಯೂ ಜ್ವರ, ಕ್ಯಾನ್ಸರ್ ಮತ್ತು ಹೃದ್ರೋಗ ಮುಂತಾದ ರೋಗಗಳಿಗೂ ಔಷಧಿ ರೂಪದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
“ಈ ಬೇಸಾಯ ಪ್ರಾರಂಭಿಸಿದಾಗ ಹಲವು ರೈತರು ಅಪಹಾಸ್ಯ ಮಾಡಿದ್ದರೂ ಎದೆಗುಂದದೆ ಬೇಸಾಯದಲ್ಲಿ ಯಶಸ್ಸು ಕಂಡು ಮೊದಲ ಬೆಳೆ ಪಡೆದಾಗ ನನ್ನ ಇಡೀ ಕುಟುಂಬ ಖುಷಿಪಟ್ಟಿತು ಮತ್ತು ಕುಟುಂಬದಲ್ಲಿ ನೆಮ್ಮದಿ ಕಾಣುವಂತಾಗಿದೆ. ಕಡಿಮೆ ನೀರು ಮತ್ತು ಅಲ್ಪಾವಧಿಯಲ್ಲೇ ಉತ್ತಮ ಇಳುವರಿ, 20-25 ವರ್ಷಗಳವರೆಗೆ ನಿರಂತರವಾಗಿ ಲಾಭ ನೀಡುವ ಬೆಳೆಯಾಗಿದೆ. ಇದರ ಬೇಸಾಯಕ್ಕೆ ತೋಟಗಾರಿಕೆ ಇಲಾಖೆಯ ಸಹಾಯ ಸಹಕಾರ ಸಂಪೂರ್ಣ ಸಿಕ್ಕಿದೆ. ವರ್ಷಕ್ಕೆ 10 ಲಕ್ಷ ರೂ. ಆದಾಯದ ನಿರೀಕ್ಷೆಯಿದೆ” ಎನ್ನುತ್ತಾರೆ ಪ್ರಕಾಶ ಬಣಕಾರ. ಇವರ ಸಂಪರ್ಕಕ್ಕಾಗಿ ಮೊಬೈಲ್ ಸಂಖ್ಯೆ 8150875058.
ವರದಿ:ಜಿ.ಚಂದ್ರಕಾಂತ, ನಿವೃತ್ತ ಉಪನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಲಬುರಗಿ