ಜಾಯಿ ಸಾಂಬಾರ ಬೆಳೆಸಲು ಕಸಿ ಗಿಡದ ಅವಶ್ಯಕತೆ ಇದೆಯೇ?

by | Nov 11, 2022 | Spice Crop (ಸಾಂಬಾರ ಬೆಳೆ), Nutmeg (ಜಾಯೀ ಕಾಯಿ) | 2 comments

ಜಾಯೀ ಕಾಯಿ ಅಥವಾ ಜಾಯೀ ಸಾಂಬಾರದ ಸಸ್ಯಾಭಿವೃದ್ದಿಯಲ್ಲಿ ಕಸಿ ತಂತ್ರಜ್ಞಾನ ತೀರಾ ಅವಶ್ಯವೋ  ಅಥವಾ ಸಾಂಪ್ರದಾಯಿಕ ಬೀಜದ ಸಸಿಗಳಿಂದಲೇ ಸಸ್ಯಾಭಿವೃದ್ದಿ ಸಾಕೇ ಎಂಬುದರ ಬಗ್ಗೆ ಇಲ್ಲಿ ಚರ್ಚಿಸೋಣ. ಜಾಯೀ ಕಾಯಿ ಬೆಳೆಯನ್ನು ಅಂತರ ಬೆಳೆಯಾಗಿ ಅಡಿಕೆ, ತೆಂಗಿನ ತೋಟದಲ್ಲಿ ಬೆಳೆದು ಮರವೊಂದರ ವಾರ್ಷಿಕ 10000 ದಷ್ಟು ಆದಾಯ ಪಡೆಯುವ ಕೆಲವು ರೈತರು ಏನೆನ್ನುತ್ತಾರೆ. ಹಾಗೆಯೇ ಕಸಿ ಗಿಡದ ಬಗ್ಗೆ ಯಾಕೆ ಇಷ್ಟೊಂದು ಪ್ರಚಾರ ಎಂಬುದನ್ನು ಇಲ್ಲಿ ವಿವರವಾಗಿ ತಿಳಿಯೋಣ.

ಕಸಿ ತಾಂತ್ರಿಕತೆ ಎಂಬುದು ಎಲ್ಲಿ ಬೇಕೋ ಆಲ್ಲಿಗೆ  ಮಾತ್ರ ಸೂಕ್ತ. ಅನವಶ್ಯಕವಾದ ಕಡೆ ಈ ತಂತ್ರಜ್ಞಾನವನ್ನು ಬಳಕೆ ಮಾಡುವುದು ದುಬಾರಿ ಎನ್ನಿಸುತ್ತದೆ. ಬಾಳೆಯ ಅಂಗಾಂಶ ಕಸಿ ಅಗತ್ಯವೇ? ಬೇಕಾದಷ್ಟು ಪ್ರಮಾಣದಲ್ಲಿ ಕಂದುಗಳು ಸಿಗದೆ ಇದ್ದರೆ ಇದು  ಅಗತ್ಯವಾಗಿ ಬೇಕು. ರೋಗ ಇತ್ಯಾದಿಗಳ ನಿಯಂತ್ರಣಕ್ಕೆ  ಕಸಿ ತಾಂತ್ರಿಕತೆ ನಿರೀಕ್ಷಿತ ಫಲ ಕೊಡುವುದಿಲ್ಲ. ಬೆಳೆ ಬೆಳೆಸುವುದು ಹೊರ ವಾತಾವರಣದಲ್ಲಿ ಆದ ಕಾರಣ ರೋಗ ಇತ್ಯಾದಿಗಳು ಸಸ್ಯ ಸಾಮಾಗ್ರಿಯಲ್ಲಿ ಇಲ್ಲದಿದ್ದರೂ ಮತ್ತೆ ಬರಬಾರದು ಎಂದಿಲ್ಲ. ಮಾವು, ಗೇರು ಮುಂತಾದ ಬೆಳೆಗಳ ಸಸ್ಯಾಭಿವೃದ್ದಿಯಲ್ಲಿ ಕಸಿ ಬೇಕೇ? ಅಗತ್ಯವಾಗಿ ಬೇಕು. ಇಲ್ಲಿ ಬೀಜದ ಸಸಿ ಫಲಕೊಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಬೀಜವು ಮಾತೃಗುಣವನ್ನು ಯಥಾವತ್ ಪಡೆದಿರುವುದಿಲ್ಲ.  ಕೆಲವು ಸಸ್ಯಗಳಲ್ಲಿ ಅಗತ್ಯವಾಗಿ ಕಸಿ ತಾಂತ್ರಿಕತೆ ಬೇಕಾಗುತ್ತದೆ. ಕೆಲವು ಕಡೆ ಅದು ಅನವಶ್ಯಕವಾಗಿರುತ್ತದೆ. ಇಲ್ಲಿ ಜಾಯೀ ಕಾಯಿ ಎಂಬ ಮರ ಸಾಂಬಾರ ಬೆಳೆಯಲ್ಲಿ ಕಸಿ ತಾಂತ್ರಿಕತೆ ಬಳಸಿ ಮಾತೃಗುಣವನ್ನು ಯಥಾವತ್ ಪಡೆಯಲಾಗುತ್ತದೆ ಎನ್ನುತ್ತಾರೆ ಸಸ್ಯ ಸರಬರಾಜುದಾರರು. ವಾಸ್ತವವಾಗಿ ಇದು ಮರ ಸಾಂಬಾರ. ಮರ ಬೆಳೆದಷ್ಟೂ ಇಳುವರಿ ಹೆಚ್ಚು. ಮರದ ಗಾತ್ರಕ್ಕೆ ಅನುಗುಣವಾಗಿ ಇಳುವರಿ ಬರುವ  ಕಾರಣದಿಂದ ಮರ ದೈತ್ಯಾಕಾರದಲ್ಲಿ ಬೆಳೆಯಲೇ ಬೇಕು. ಇಲ್ಲಿ ಬರೇ ತಳಿ ಶುದ್ಧತೆಗಾಗಿ ದುಬಾರಿ ಬೆಲೆಯ ಕಸಿ ಗಿಡಗಳ ತೀರಾ ಅಗತ್ಯ ಇಲ್ಲ ಎನ್ನುತ್ತಾರೆ ಹಿರಿಯ ಬೆಳೆಗಾರರು. ಇಷ್ಟಕ್ಕೂ ಮಾವು, ಗೇರು ಹಾಗೆಯೇ ಇನ್ನಿತರ ಕಸಿ ತಾಂತ್ರಿಕತೆಯಲ್ಲಿ ಉತ್ಪಾದಿಸಲಾಗುವ ಸಸ್ಯಗಳಿಗಿಂತ ಇದು ತುಂಬಾ ದುಬಾರಿ, ಹಾಗೆಯೇ ಇದು ಬಡ್ಡಿಂಗ್ (ಕಣ್ಣು ಕಸಿ) ಮೂಲಕ ತಯಾರಿಸಲ್ಪಡುತ್ತದೆ. ಇದಕ್ಕೆ ಕಣ್ಣು ಕಸಿ ಇತರ ಗಿಡಗಳಂತೆ ಸರಳ ಅಲ್ಲದ ಕಾರಣ ಇದು ಬಹಳ ದುಬಾರಿಯಾಗಿರುತ್ತದೆ.

ಜಾಯೀ ಸಾಂಬಾರದ ಬೆಳೆ ಹೇಗೆ?

ಜಾಯೀ ಸಾಂಬಾರದ ಬೀಜದ ಗಿಡದ ಬೆಳವಣಿಗೆ ಲಕ್ಷಣ (೫ ವರ್ಷ)
ಬೀಜದ ಗಿಡದ ಬೆಳವಣಿಗೆ ಲಕ್ಷಣ (೫ ವರ್ಷ)
  • ಜಾಯಿ ಸಾಂಬಾರ ಎಂಬುದು ಒಂದು ಮರ ಸಾಂಬಾರವಾಗಿರುತ್ತದೆ. ಮರದಲ್ಲಿ ನಿರ್ದಿಷ್ಟ ಪ್ರಾಯಕ್ಕೆ (5-7 ವರ್ಷ)ಕ್ಕೆ ಇಳುವರಿ ಪ್ರಾರಂಭವಾಗುತ್ತದೆ.  
  • ಮರ ಬೆಳೆದು ಗೆಲ್ಲುಗಳು ಹೆಚ್ಚಾದಂತೆ ಇಳುವರಿ ಹೆಚ್ಚಾಗುತ್ತಾ ಬರುತ್ತದೆ.  
  • ಇದು ಕಸಿ ಮಾಡದ ಗಿಡಕ್ಕೂ ಅನ್ವಯ. ಮರ ಫಲ ಕೊಡುವ ಸಮಯಕ್ಕೆ  ಒಂದು  ಕೆನೆಬಣ್ಣದ ಕಾಯಿಯಾಗುತ್ತದೆ.
  • ಈ ಕಾಯಿಯ ಒಳಗೆ ಒಂದು ಬೀಜ ಮತ್ತು ಅದರ ಮೇಲ್ಮೈಯಲ್ಲಿ ಬೀಜ ಪೊರೆ ಇರುತ್ತದೆ.
  • ಬೀಜವನ್ನು ಜಾಯಿ ಕಾಯಿ, (Nutmeg seed)  ಬೀಜ ಪೊರೆಯನ್ನು ಪತ್ರೆ (mace) ಎನ್ನುತ್ತಾರೆ.
  • ಇದರಲ್ಲಿ ಸ್ವಲ್ಪ ದೊಡ್ಡ ಕಾಯಿ, ಸಾಧಾರಣ ಕಾಯಿ ಹೀಗೆಲ್ಲಾ ಕಾಯಿಯ ಗಾತ್ರ ಇರುತ್ತದೆ. ಕೆಲವು ತಳಿಗಳಲ್ಲಿ  ಪತ್ರೆ ತೆಳುವಾಗಿ ಕಾಯಿಗೆ ಭಾಗಶಃ ಆವರಿಸಿರುತ್ತದೆ.
  • ಮತ್ತೆ ಕೆಲವು ತಳಿಗಳಲ್ಲಿ ಸ್ವಲ್ಪ ದಪ್ಪ ಇದ್ದು, ಕಾಯಿ ಪೂರ್ತಿ ಆವರಿಸಿರುತ್ತದೆ. 
  • ಇದು ನೈಸರ್ಗಿಕ ತಳಿ ಪರಿವರ್ತನೆಯಲ್ಲಿ ಆದದ್ದು. ಕಾಯಿ ದೊಡ್ಡದು ಇರಬೇಕು, ಪತ್ರೆ ದಪ್ಪ ಮತ್ತು ಹೆಚ್ಚು ಇರಬೇಕು.
  • ಆಗ ಹೆಚ್ಚು ಲಾಭ ಎಂದು ಕೆಲವು ಬೆಳೆಗಾರರ ಅಭಿಪ್ರಾಯ.

ಜಾಯಿ ಸಾಂಬಾರದಲ್ಲಿ ಬೀಜದಿಂದ ಸಸ್ಯಾಭಿವೃದ್ದಿಮಾಡುವಾಗ  ಗಂಡು ಮತ್ತು ಹೆಣ್ಣು  ಆಗುತ್ತದೆ. ಇದು ಸುಮಾರು 2:8 ಅನುಪಾತದಲ್ಲಿ ಬರುತ್ತದೆ. ಇದು ಬೀಜದಿಂದ ಸಸ್ಯಾಭಿವೃದ್ದಿ ಮಾಡಿದರೆ ಮಾತ್ರ ಹೀಗೆ . ಕಸಿ ಮಾಡಿದಾಗ ಕಸಿ ಕಣ್ಣನ್ನು ಹೆಣ್ಣು ಮರದಿಂದಲೇ ಆಯ್ಕೆ ಮಾಡುವುದರಿಂದ ಅದು ಹೆಣ್ಣು  ಸಸ್ಯವೇ ಆಗಿರುತ್ತದೆ.

ಬೀಜದಿಂದ ಮಾಡಿದ ಸಸಿ  50-60 ಅಡಿ ಎತ್ತರದ ತನಕವೂ ಬೆಳೆಯುತ್ತದೆ. ಆಗ ಕೊಯಿಲು ಮಾಡಲು ಕಷ್ಟ ಎಂಬುದು ಒಂದು ಅಭಿಪ್ರಾಯ.

ಕಸಿ ಗಿಡ ಲಾಭದಾಯಕವೇ?

ಕಣ್ಣು ಕಸಿ ಗಿಡದ ಬೆಳವಣಿಗೆ ಲಕ್ಷಣ (೫ ವರ್ಷ)
ಕಣ್ಣು ಕಸಿ ಗಿಡದ ಬೆಳವಣಿಗೆ ಲಕ್ಷಣ (೫ ವರ್ಷ)
  • ಕಣ್ಣು ಕಸಿ ಮಾಡಿದ ಒಂದು ಬಲಿತ ಗಿಡಕ್ಕೆ 500 ರೂ. ತನಕ ಬೆಲೆ ಇರುತ್ತದೆ.
  • ಈ ಬೆಲೆಗೆ ಖರೀದಿಸಿ ತಂದ ಗಿಡವೂ ಬೆಳವಣಿಗೆ ಆದ ನಂತರವೇ (ಅಂದರೆ ಸುಮಾರು 3-4 ವರ್ಷ ಬೆಳೆದ) ಇಳುವರಿ ಪ್ರಾರಂಭವಾಗುವುದು.
  • ಬೀಜದಿಂದ ಮಾಡಿದ ಸಸಿಯೂ ಸಹ ಇಳುವರಿಗೆ ಪ್ರಾರಂಭವಾಗುವುದು 5-6 ವರ್ಷದ ನಂತರ.
  • ಹಲವಾರು ಕಡೆ ಕಂಡಂತೆ ಬೀಜದಿಂದ ಮಾಡಿದ ಸಸಿಯ ಶಕ್ತಿ (Vigor) ಕಸಿ ಗಿಡಕ್ಕೆ ಇಲ್ಲ.

ಕಸಿ ಮಾಡಿದ ಗಿಡದ ಬೆಳವಣಿಗೆ ಹಲವಾರು ಕಡೆ ಕಂಡಂತೆ  ಬೀಜದ ಸಸಿಯಂತೆ  ಇರುವುದಿಲ್ಲ. ಬೀಜದ ಸಸಿಗಳು ಗೆಲ್ಲುಗಳನ್ನು ಬಿಡುವ ಕ್ರಮವೂ ಕಸಿ ಗಿಡ ಬಿಡುವ ಕ್ರಮವೂ ಭಿನ್ನವಾಗಿರುತ್ತದೆ.  ಬೀಜದಿಂದ ಮಾಡಿದ ಸಸಿಗೆ 50 ವರ್ಷಕ್ಕೂ ಹೆಚ್ಚಿನ ಆಯುಶ್ಯ ಇದೆ. ಕಸಿ ಗಿಡದ ಆಯುಸ್ಸು ಇನ್ನು ಗಮನಿಸಬೇಕಷ್ಟೇ.

  • ಜಾಯಿ ಫಸಲನ್ನು ಕೊಯಿಲು ಮಾಡಲು ದೊಡ್ಡ ಮರ ಆದರೆ ಕಷ್ಟ ಎಂದು ಭಾವಿಸಬೇಕಾಗಿಲ್ಲ.
  • ಸಾಮಾನ್ಯವಾಗಿ 95% ಕ್ಕೂ ಹೆಚ್ಚಿನ ಕಾಯಿಗಳು ಬಲಿತ ನಂತರ  ತುದಿ ಭಾಗ ಸೀಳಿಕೊಂಡು ಕೆಳಗೆ ಉದುರುತ್ತದೆ.
  • ಅದನ್ನು ಹೆಕ್ಕಿದರೆ ಸಾಕಾಗುತ್ತದೆ. ಹಾಗಾಗಿ ಕೊಯ್ಯುವ ಕೆಲಸ ಇಲ್ಲ.
  • ಕೊಯ್ಯಬೇಕಾದ ಸಂದರ್ಭ ಬಂದರೂ ಸಹ ಕೊಕ್ಕೆಯಲ್ಲಿ ಅಲುಗಾಡಿಸಿದಾಗ ಅದು ಉದುರುತ್ತದೆ.

ಕಾಯಿ ಚಿಕ್ಕದಾಗಾದರೆ ನಷ್ಟ ಏನೂ ಇಲ್ಲ. ಚಿಕ್ಕ ಗಾತ್ರದ ಕಾಯಿ ಬಿಡುವ ಮರಗಳಲ್ಲಿ ಫಸಲು ಹೆಚ್ಚು ಬಿಡುತ್ತದೆ.ಆ ನಷ್ಟವು ಇದರಲ್ಲಿ ಹೊಂದಾಣಿಕೆಯಾಗುತ್ತದೆ.

ಬೀಜದಿಂದ ಮಾಡಿದ ಮರದ ಒಂದು ಗೆಲ್ಲಿನಲ್ಲಿ ಇಳುವರಿ
ಬೀಜದಿಂದ ಮಾಡಿದ ಮರದ ಒಂದು ಗೆಲ್ಲಿನಲ್ಲಿ ಇಳುವರಿ

ಪತ್ರೆಗೆ ಹೆಚ್ಚು ಪ್ರಾಶಸ್ತ್ಯ ಕೊಡಬೇಕಾಗಿಲ್ಲ.

  • ಯಾಕೆಂದರೆ ಪತ್ರೆಯನ್ನು ಜಾಗರೂಕತೆಯಲ್ಲಿ ಯಾವುದಾದರೂ ಡ್ರೈಯರ್ ಮೂಲಕವೇ ಒಣಗಿಸಬೇಕು.
  • ಅದಕ್ಕೆ ಆಯಾ ದಿನವೇ ಬಿದ್ದ ಕಾಯಿಗಳನ್ನು ಆರಿಸಿ ತೆಗೆಯಬೇಕು. ದಿನ ಕಳೆದರೆ ಪತ್ರೆ ಕೊಳೆಯುತ್ತದೆ.
  • ಪತ್ರೆ ಹೋದರೂ ಕಾಯಿಗೆ ಬೆಲೆ ಇದೆ. 1000 ದಷ್ಟು ಕಾಯಿಗಳಿಂದ 1 ಕಿಲೋ ಪತ್ರೆ ಸಿಗಬಹುದು.
  • ಅದಕ್ಕೆ ಸುಮಾರು 1000 ರೂ. ಸಿಗಬಹುದು. ಅದೇ 1000 ಕಾಯಿ ಸುಮಾರು 7 ಕಿಲೋ ತೂಗಬಲ್ಲದು.
  • ಇದಕ್ಕೆ ಕಿಲೋಗೆ 200 ರೂ ತನಕ ಬೆಲೆ ಇದೆ.  ಹಾಗಾಗಿ ಪತ್ರೆ ದಪ್ಪ ಎಂಬೆಲ್ಲಾ ಪ್ರಚಾರಕ್ಕೆ ಮರುಳಾಗಬೇಡಿ.
ಕಾಯಿ ಬೆಳೆದು ಈ ಹಂತ ಆದಾಗ ತನ್ನಷ್ಟಕ್ಕೆ ಉದುರುತ್ತದೆ.
ಕಾಯಿ ಬೆಳೆದು ಈ ಹಂತ ಆದಾಗ ತನ್ನಷ್ಟಕ್ಕೆ ಉದುರುತ್ತದೆ.
  • ಬೀಜದ ಸಸಿಗಳನ್ನು ನೆಟ್ಟರೆ ಅದರಲ್ಲಿ 10 ಗಿಡಕ್ಕೆ 2-3  ಮಾತ್ರ ಗಂಡು ಬರಬಹುದು.
  • ಅದನ್ನು ಕಡಿದು ತೆಗೆಯಬಹುದು. ಒಂದು ಬೀಜದ ಸಸಿಗೆ 30-40 ರೂ . ತನಕ ಬೆಲೆ ಇರುತ್ತದೆ.
  • 1 ಕಸಿ ಗಿಡ ಕ್ಕೆ 10 ಬೀಜದ ಸಸಿಗಳು ಸಮ. 10 ರಲ್ಲಿ 2-3 ನಷ್ಟವಾದರೂ 8 ಗಿಡ ಇರುತ್ತದೆ.
  • ಕಣ್ಣು ಕಸಿ ಹೆಚ್ಚಾಗಿ ಕೇರಳದಿಂದ ಬರುವ ಸಸಿಗಳಾಗಿದ್ದು, ಇವು ಗುಣಮಟ್ಟದಲ್ಲಿ ಹೇಗಿರುತ್ತದೆ ಎಂಬ ಬಗ್ಗೆ ಏನೂ ಹೇಳುವಂತಿಲ್ಲ.
  • ಅವರವರೇ ಕಸಿ ಮಾಡುವುದಾದರೆ ಅದು ಉತ್ತಮ.
  • ತಂದ ಸಸಿ, ಅದರ ಬೆಲೆ ಮತ್ತು ಬೀಜದ ಗಿಡ ಬೆಲೆ ಹೋಲಿಕೆ ಮಾಡಿದರೆ ಬೀಜದ  ಗಿಡವೇ ಲಾಭದಾಯಕ.
  • ಯಾವುದೇ ಬೆಳೆಯಲ್ಲೂ ಎಲ್ಲಾ ಗಿಡಗಳೂ ಏಕ ಪ್ರಕಾರವಾಗಿ ಇರುವುದಿಲ್ಲ. 2-3 ಗಿಡ ಗಂಡು ಆದರೆ ಅದನ್ನು ಕಡಿದು ಬೇರೆ ನೆಡಬಹುದು. 
  • ಇಷ್ಟಕ್ಕೂ ಬೀಜದ ಸಸಿ ಮಾಡಿದರೆ ಅದರಲ್ಲಿ ಪ್ರಾಕೃತಿಕವಾಗಿಯೂ ಮಾರ್ಪಾಡುಗಳಾಗಿ ಉತ್ತಮ ಗುಣಮಟ್ಟದ ಕಾಯಿ ಮತ್ತು ಪತ್ರೆ ಸಿಗುವ ಸಾಧ್ಯತೆ ಇದೆ.
  • ಹಾಗಾಗಿ ಬೀಜದ ಗಿಡವನ್ನು ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ತೋಟದಲ್ಲಿ ಮರ ಇದ್ದರೆ  ಅದರ ಬುಡದಲ್ಲಿ ಹುಟ್ಟಿದ ಗಿಡ ಇದ್ದರೆ ಅದನ್ನೇ ನೆಟ್ಟರೂ ಯಾವ ತೊಂದರೆಯೂ ಇಲ್ಲ.

ಬೆಲೆ ಹೆಚ್ಚಾಗಿದ್ದರೂ ತೊಂದರೆ ಇಲ್ಲ ಎಂದು ಮನೋಸ್ಥಿತಿಯವರು ಕಸಿ ಮಾಡಿದ ಗಿಡಗಳನ್ನು ನೆಡಬಹುದು. ಬೆಳೆಯುವಾಗ  ಪ್ರಾರಂಭಿಕ  ವೆಚ್ಚವನ್ನು ಕಡಿಮೆ ಮಾಡಿಕೊಂಡು ಬೆಳೆಸಬೇಕು ಎಂಬ ಯೋಚನೆ ಉಳ್ಳವರು  ಉತ್ತಮ  ಗುಣಮಟ್ಟದ ಕಾಯಿ , ಪತ್ರೆ ಕೊಡಬಲ್ಲ ಮರ ಮೂಲದಿಂದ ಮಾಡಿದ ಸಸಿಯನ್ನೇ ನೆಟ್ಟು ಬೆಳೆಸಿ. ಉತ್ತಮ ಆರೈಕೆಯಲ್ಲಿ ಬೀಜದ ಸಸಿಯೂ 7 ವರ್ಷದ ಒಳಗೆ ಫಲ ಕೊಡಲು ಪ್ರಾರಂಭವಾಗುತ್ತದೆ.

2 Comments

  1. Shivaraju

    Hi,
    Please also share where we will get best seeds for plantation.

    Reply

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!