ಕರಿಮೆಣಸು ಬೆಳೆಗೆ ಭಾರೀ ರೋಗ- ತಕ್ಷಣದ ಪರಿಹಾರಗಳು ಏನು?

ಕರಿಮೆಣಸು ಬೆಳೆಗೆ ಭಾರೀ ರೋಗ- ತಕ್ಷಣದ ಪರಿಹಾರಗಳು

ಕರಿಮೆಣಸಿಗೂ ಅತಿಯಾದ ಮಳೆಗೂ  ಬಾರೀ ವಿರೋಧ. ನೀರು ಮೆಣಸಿಗೆ ಆಗದೆಂದಲ್ಲ. ಬಳ್ಳಿಯ ಬುಡದಲ್ಲಿ ನೀರು ಹರಿದು ಹೋದರೂ ಬಳ್ಳಿ ಸಾಯಲಾರದು. ಆದರೆ ನೀರು ಬಳ್ಳಿ ಬುಡದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ನಿಂತಿರಬಾರದು. ಮಳೆಗೆ ನೀರು ಸರಿಯಾಗಿ ಬಸಿಯಲಾರದ ಕಡೆಗಳಲ್ಲಿ ರೋಗ ಬರುವುದು ಗ್ಯಾರಂಟಿ. ಈಗಾಗಲೇ ಬಹಳಷ್ಟು ಕಡೆಗಳಲ್ಲಿ ರೋಗ ಬಂದಿದ್ದು, ಬಳ್ಳಿಯಲ್ಲಿ ಎಲೆ ಹಳದಿಯಾಗಿದೆ. ಕೆಲವು ರೋಗದ ಅಮಲಿನಲ್ಲಿವೆ. ಈ ಸಮಯದಲ್ಲಿ ತಕ್ಷಣ ಯಾವ ಪರಿಹಾರ ಕ್ರಮ ಕೈಗೊಂಡರೆ ಅಲ್ಪ ಸ್ವಲ್ಪ ರೋಗ ರೋಗ ಸೋಂಕು ತಗಲಿದ ಬಳ್ಳಿಯನ್ನು ಉಳಿಸಬಹುದು?

ಕರಿಮೆಣಸಿಗೆ ಅತಿಯಾದ ಮಳೆಯ ಅವಧಿಯಲ್ಲಿ ಬರುವ ರೋಗ ಬುಡ ಕೊಳೆ ರೋಗ. ಇದನ್ನು ಶೀಘ್ರ ಸೊರಗು ರೋಗ ಎಂಬ ಹೆಸರಿನಿಂದ ಕರೆಯುತ್ತಾರೆ. ಈ ರೋಗ ಬಂದರೆ ಸಸ್ಯ ಬೇಗನೆ ಸೊರಗಿ ಸಾಯುತ್ತದೆ. ಇದು ಬುಡ ಭಾಗದಿಂದ ಪ್ರಾರಂಭವಾಗುವ ರೋಗ. ಬುಡ ಭಾಗದಲ್ಲಿ ಶಿಲೀಂದ್ರ  ಸೋಂಕು ಉಂಟಾಗಲು ಅನುಕೂಲಕರ ಸನ್ನಿವೇಶ ಮಳೆ ನೀರಿನ ಮೂಲಕ ಸೃಷ್ಟಿಯಾತ್ತದೆ. ಬಳ್ಳಿಯ ಬೇರುಗಳು ಕೊಳೆಯುತ್ತದೆ. ಆ ನಂತರ ಅದರ ಕಾಂಡಕ್ಕೆ ಆಹಾರ ಸರಬರಾಜು ಇಲ್ಲದಾಗಿ ಅದು ಶಿಲೀಂದ್ರ ಸೋಂಕಿಗೆ ತುತ್ತಾಗುತ್ತದೆ. ಮಳೆ, ತಂಪು ವಾತಾವರಣ ಇರುವ ಕಾರಣ, ಬಳ್ಳಿಯ ಗಂಟುಗಳಲ್ಲಿನ ಬೇರುಗಳು ಆಸರೆ ಸಸ್ಯದ ಮೇಲೆ ಬೆಳೆದಿರುವ ಹಾವಸೆಗೆ ಅಂಟಿಕೊಂಡ ಕಾರಣ ಬುಡ ಬುಡದ ಬೇರು, ಬುಡದ ಬಳ್ಳಿ ಎರಡು  ನಿರ್ಜೀವ ವಾದರೂ ಎಲೆಗಳು ಹಳದಿಯಾಗಿ ವಾರ ಎರಡು ವಾರ ತನಕವೂ ಇರುತ್ತದೆ. ನಂತರ ಉದುರುತ್ತದೆ. ರೋಗ ಬಾಧಿಸಿ ಅದು ತೀವ್ರವಾಗಿದ್ದರೆ ಆ ಬಳ್ಳಿಯನ್ನು ಬದುಕಿಸಲು ಕಷ್ಟ ಸಾಧ್ಯ. ಆದರೆ ಅಲ್ಪ ಸ್ವಲ್ಪ ಸೋಂಕು ತಗಲಿದ್ದರೆ ಅದನ್ನು ಬದುಕಿಸಬಹುದು. 

ಯಾವ ಬಳ್ಳಿ ಬದುಕುತ್ತದೆ?

 • ಕರಿಮೆಣಸಿನ ಬಳ್ಳಿಯನ್ನು ಸೂಕ್ಷ್ಮವಾಗಿ ನೋಡುತ್ತಾ ಬನ್ನಿ. ಅದರ ಎಲೆಗಳ ಬಣ್ಣವನ್ನು ಗಮನಿಸಿ.
 • ಆರೋಗ್ಯವಂತ ಬಳ್ಳಿಯ ಎಲೆಗಳ ಬಣ್ಣ ಹಚ್ಚ ಹಸುರಾಗಿ ಇರುತ್ತದೆ.
 • ಬಣ್ಣದ ಬದಲಾವಣೆ ಆಗಿದ್ದರೆ, ಕೆಲವು ಕರೆಗಳು  ಉದುರಿದ್ದರೆ, ಎಲೆಗಳು ಉದುರಿದ್ದರೆ ಆ ಬಳ್ಳಿಯನ್ನು ಮತ್ತೂ ಸೂಕ್ಷ್ಮವಾಗಿ ಗಮನಿಸಿ.
ಎಲೆಗಳು ಮತ್ತು ಕರೆಗಳು ಉದುರಿದ್ದರೆ ರೋಗ ತೀವ್ರವಾಗಿದೆ ಎಂದರ್ಥ.
ಕರಿಮೆಣಸು ಎಲೆ ಮತ್ತು ಕರೆಗಳು ಉದುರಿದ್ದರೆ ರೋಗ ತೀವ್ರವಾಗಿದೆ ಎಂದರ್ಥ.
 • ತಕ್ಷಣ ಗಮನಿಸಬೇಕಾದದ್ದು ಬಳ್ಳಿಯ ಬುಡ ಭಾಗವನ್ನು.
 • ಬುಡದ ಬಳ್ಳಿಯ ಕಾಂಡದಲ್ಲಿ ಹತ್ತಿಯಂತಹ ಬೂಸ್ಟ್  ಬೆಳೆದಿಯೇ ನೋಡಿ.
 • ಅದು ಇಲ್ಲವಾದರೆ ಆ ಬಳ್ಳಿಯ ಬುಡ ಭಾಗದಲ್ಲಿ ಸಿಪ್ಪೆಯನ್ನು ಸ್ವಲ್ಪ ಕೆರೆದು ನೋಡಿ.
 • ಆರೋಗ್ಯವಂತ ಬಳ್ಳಿಯ ಬಣ್ಣಕ್ಕಿಂತ ಭಿನ್ನವಾದ  ಬಣ್ಣ ( ಕಂದು ಬಣ್ಣ) ಕಂಡು ಬಂದರೆ ಆ ಬಳ್ಳಿಗೆ ರೋಗ ಪೂರ್ತಿಯಾಗಿ ತಗಲಿದೆ ಎಂದರ್ಥ.
 • ಅದನ್ನು ಎಳೆದರೆ ಕಿತ್ತು ಬರುತ್ತದೆ. ಬುಡ ಭಾಗದಲ್ಲಿ ಎಲ್ಲಾ ಬೇರುಗಳೂ ಸತ್ತು ಹೋಗಿರುತ್ತವೆ.
 • ಅಂತಹ ಬಳ್ಳಿಗೆ ಯಾವ ಉಪಚಾರವೂ ಫಲವಿಲ್ಲ ಅದು ಬದುಕುವುದೇ ಇಲ್ಲ. 
 • ಇದನ್ನು ಅಲ್ಲೇ ಉಳಿಸಬಾರದು.
 • ಅಡಿಕೆ ಬೆಳೆಗಾರರಾದರೆ ಅವರು ಅಡಿಕೆ ಸುಲಿದ ಸಿಪ್ಪೆಯನ್ನು  ಇಟ್ಟಿದ್ದರೆ ಅದಕ್ಕೆ ಬೆಂಕಿ ಹಾಕಿ ಅದರಲ್ಲಿ ಈ ರೋಗ ತಗಲಿದ ಬಳ್ಳಿ,  ಉದುರಿದ ಎಲೆ ಹಾಗೂ ಕಿತ್ತು ತೆಗೆದ ಬೇರಿನ ಬಾಗವನ್ನು ಹಾಕಿ ಸುಡಬೇಕು.
 • ಆಗ ಅದರ ಶಿಲೀಂದ್ರಗಳು ನಾಶವಾಗುತ್ತದೆ.
 • ಎಲ್ಲೆಂದರಲ್ಲಿ ಬಿಸಾಡಿದರೆ ಅದರಿಂದ ರೋಗ ಮತ್ತೆ ಹರಡುತ್ತದೆ.
ಕಾಂಡ ಹೀಗೆ ಆಗಿರುತ್ತದೆ.
ಕಾಂಡ ಹೀಗೆ ಆಗಿರುತ್ತದೆ.

ಅಕ್ಕ ಪಕ್ಕದ ಬಳ್ಳಿಗಳನ್ನು ಗಮನಿಸಿ:

 • ಸಾಮಾನ್ಯವಾಗಿ ಫೈಟೋಪ್ಥೆರಾ ಕ್ಯಾಪ್ಸಿಸಿ ಎಂಬ ಕರಿಮೆಣಸಿಗೆ ಬರುವ ಶಿಲೀಂದ್ರ ಸೋಂಕು ಗಾಳಿಯ ಮೂಲಕ, ನೀರಿನ ಮೂಲಕ ಮತ್ತು ರೋಗ ತಗಲಿದ ಎಲೆ ಕರೆಗಳ ಮೂಲಕ  ಮತ್ತೊಂದು ಗಿಡಕ್ಕೆ  ವರ್ಗಾವಣೆ ಆಗುತ್ತದೆ.
 • ಹಾಗಾಗಿ ಒಂದು ಬಳ್ಳಿಗೆ ರೋಗ ಬಂದರೆ ಅದರ ಅಕ್ಕಪಕ್ಕದ ಬಳ್ಳಿಗೆ ಬರುವ ಸಾಧ್ಯತೆ ಇರುತ್ತದೆ.
 • ಅದನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಅದಕ್ಕೆ ಅಗತ್ಯವಾಗಿ ಉಪಚಾರ ಮಾಡಬೇಕು.
 • ಎಲೆ ಸ್ವಲ್ಪ ಬಣ್ಣ ಬದಲಾಗಿದ್ದರೆ ಎಲ್ಲಾ ಬಳ್ಳಿಗಳಿಗೂ ಅಗತ್ಯವಾಗಿ ಉಪಚಾರ ಮಾಡಬೇಕು. 
 • ಆರೋಗ್ಯವಂತ ಬಳ್ಳಿಗಳಿಗೂ ಉಪಚಾರ ಮಾಡಬೇಕು.
ಬೇರು ಹೀಗೆ ಕೊಳೆತಿರುತ್ತದೆ
ಬೇರು ಹೀಗೆ ಕೊಳೆತಿರುತ್ತದೆ

ಏನು ಉಪಚಾರ:

 • ಮಳೆ ವಿಪರೀತ ಬರುವಾಗ ರೋಗ ಬಂದಿಲ್ಲದಿದ್ದರೆ ಸುಮ್ಮನಿರಿ.
 • ಆಗಲೇ ಒಂದು ಬಾರಿ ಆಥವಾ ಎರಡು ಬಾರಿ ಬೋರ್ಡೋ ದ್ರಾವಣವನ್ನು ಎಲೆಗಳಿಗೆ ಸಿಂಪಡಿಸಿ ಬುಡಕ್ಕೂ ಸ್ವಲ್ಪ  ಬೀಳುವಂತೆ ಮಾಡಿದ್ದರೆ, 
 • ಈಗ ಬುಡದಲ್ಲಿ ನೀರು ನಿಲ್ಲದಂತೆ ನೋಡಿಕೊಂಡರೆ ಸಾಕು.
 • ಒಂದು ವೇಳೆ ರೋಗದ ಚಿನ್ಹೆ ಇತ್ತೆಂದಾದರೆ ಎಲ್ಲಾ ಬಳ್ಳಿಗಳಿಗೂ ಒಮ್ಮೆ ಶಿಲೀಂದ್ರ ನಾಶಕದ ಉಪಚಾರ ಮಾಡಬೇಕಾಗುತ್ತದೆ.
 • ಸಾಮಾನ್ಯವಾಗಿ ಕಡಿಮೆ ಖರ್ಚಿನಲ್ಲಿ ಅಗುವ ರೋಗ ಮುನ್ನೆಚ್ಚರಿಕೆ ಔಷಧಿ ಎಂದರೆ ಬೋರ್ಡೋ ದ್ರಾವಣದ ಡ್ರೇಂಚಿಂಗ್ ಅಥವಾ ಕಾಪರ್ ಆಕ್ಸೀ ಕ್ಲೋರೈಡ್ ಡ್ರೆಂಚಿಂಗ್ ಮಾಡುವುದು. 
 • ಬಳ್ಳಿಯ  ಗಾತ್ರಕ್ಕನುಗುಣವಾಗಿ 5 -10 ಲೀ. ತನಕ ಈ ದ್ರಾವಣವನ್ನು  ಬುಡದ ಬೇರುಗಳಿಗೆ ತಾಗುವಂತೆ ತರಗೆಲೆ ಇತ್ಯಾದಿಗಳನ್ನು ಸ್ವಲ್ಪ ಸರಿಸಿ ಎಲ್ಲಾ ಭಾಗಗಳಿಗೂ ಬೀಳುವಂತೆ ಎರೆಯಬೇಕು.
ಇಂತದ್ದು ಕೆಲವೊಮ್ಮೆ ಬದುಕುತ್ತದೆ
ಇಂತದ್ದು ಕೆಲವೊಮ್ಮೆ ಬದುಕುತ್ತದೆ
 • ಇವೆರಡೂ ತಾಮ್ರ ಆಧಾರಿತ ಶಿಲೀಂದ್ರ ತಡೆ ಔಷಧಿಯಾಗಿರುತ್ತದೆ. ಶಿಫಾರಿತ ಔಷಧಿಯೂ ಇದೇ ಆಗಿರುತ್ತದೆ.
 • ಇನ್ನು ಕೆಲವು ಶಿಫಾರಿತವಲ್ಲದ ಔಷಧಿಗಳು ಶಿಲೀಂದ್ರ ಸೋಂಕನ್ನು ತಡೆಯುತ್ತವೆ ಎಂಬ ಬಗ್ಗೆ ರೈತರು ಕಂಡುಕೊಂಡಿದ್ದಾರೆ.
 • ಇನ್ ಫಿಂಟೋ INFINITO ಎಂಬ ಅಂತರ್ ವ್ಯಾಪೀ ಶಿಲೀಂದ್ರ ನಾಶಕವನ್ನು ಬಳಸಿದವರಿದ್ದಾರೆ.
 • ಹಾಗೆಯೇ FOLICURE ಫ್ಹೋಲಿಕ್ಯೂರ್ ಅನ್ನೂ ಬಳಸಿದವರಿದ್ದಾರೆ. ಇವು ಫಲಕೊಟ್ಟಿದೆ ಎನ್ನುತ್ತಾರೆ.
 • ಅಂತರ್ ವ್ಯಾಪೀ ಶಿಲೀಂದ್ರ ನಾಶಕವಾದ ಮೆಟಲಾಕ್ಸಿಲ್, ಸಹ  ಫಲ ಕೊಡುತ್ತದೆ.
ADVT 3
ADERTISEMENT

ಔಷದೋಪಚಾರಕ್ಕಿಂತ ಮೊದಲು ಇದು ಅಗತ್ಯ:

 • ಬರೇ ಶಿಲೀಂದ್ರ ನಾಶಕದ ಉಪಚಾರ ಸಾಲದು. ಶಿಲೀಂದ್ರರ ಬೆಳವಣಿಗೆಗೆ ಅನುಕೂಲವಾಗುವ ಯಾವ ಸನ್ನಿವೇಶವೂ ಇರಬಾರದು.
 • ಶಿಲೀಂದ್ರ ಸೋಂಕು ಉಂಟಾದ ಯಾವ ಶೇಷವೂ ಇರಕೂಡದು. ಕರಿಮೆಣಸು ಬೆಳೆಯುವಾಗ ಸಾಧ್ಯವಾದಷ್ಟು ಜೌಗು ಅಥವಾ ಒರತೆ ಆಗುವ ಸ್ಥಳಗಳಲ್ಲಿ ನಾಟಿ ಮಾಡುವುದು ಸೂಕ್ತವಲ್ಲ.
 • ಮಾಡುವುದಿದ್ದರೂ ಸಮರ್ಪಕ ಬಸಿಗಾಲುವೆ ಬೇಕು. ಅಂಟು ಮಣ್ಣು ಇರುವಲ್ಲಿ ನೀರು ಇಂಗುವಿಕೆ ನಿಧಾನವಾದ ಕಾರಣ  ಅಲ್ಲಿ ರೋಗ ಸಾಧ್ಯತೆ ಹೆಚ್ಚು.
 • ಇದನ್ನು ತಪ್ಪದೆ ಬೆಳೆಗಾರರು ಪಾಲಿಸಬೇಕು.
ಈ ತರಹದ ಎಲೆಗಳಿದ್ದರೆ ಆ ಬಳ್ಳಿ ರೋಗ ಮುಕ್ತ
ಈ ತರಹದ ಎಲೆಗಳಿದ್ದರೆ ಆ ಬಳ್ಳಿ ರೋಗ ಮುಕ್ತ
 • ಇದಲ್ಲದೆ ನೀರಿನ ಬಸಿಯುವಿಕೆ ಕಷ್ಟ ಇರುವಲ್ಲಿ ಬುಡ ಭಾಗದಿಂದ 2-2.5 ಅಡಿ ದೂರದಲ್ಲಿ ತಗ್ಗಿನ ಭಾಗದಲ್ಲಿ 2 ಅಡಿಯಷ್ಟು ಆಳಕ್ಕೆ ಅರ್ಥ್ ಆಗರ್ ಮೂಲಕ ಹೊಂಡವನ್ನು ತೋಡಿ ಅದಕ್ಕೆ ತೆಂಗಿನ ಸಿಪ್ಪೆಯನ್ನು ಹಾಕಿ ತುಂಬುವುದರಿಂದ ನೀರು ಆ ಕಡೆಗೆ ಚಲಿಸಿ ಅಲ್ಲಿ ಸಂಗ್ರಹವಾಗುತ್ತದೆ.
 • ಮಳೆ ನಿಂತ ತರುವಾಯ ಅದು ಮತ್ತೆ ಭೂಮಿಗೆ ಇಂಗಲ್ಪಟ್ಟು ಸಹಜ ಸ್ಥಿತಿಗೆ ಬರುತ್ತದೆ. ಇದು ಒರತೆ ಇರುವ ಸ್ಥಳಕ್ಕೆ ಹೇಳಿದ್ದಲ್ಲ.
 • ಕೊಳೆಯುವ ಸಾವಯವ ವಸ್ತುಗಳನ್ನು ಮಳೆಗಾಲದಲ್ಲಿ ಬುಡಕ್ಕೆ ಹಾಕಬೇಡಿ. 
 • ತೋಟದ ಮೆದು ಜಾತಿಯ ಕೆಸು, ಹುಲ್ಲುಸಸ್ಯಗಳನ್ನು ಸ್ವಚ್ಚ ಮಾಡಿ ಮೆಣಸು ಇರುವ ಬಳ್ಳಿ ಬುಡಕ್ಕೆ ಹಾಕುವು ನಾವೆಲ್ಲಾ ಮಾಡುವಂತದ್ದು.  
 • ಇದು ಮಳೆಗೆ ತೀವ್ರವಾಗಿ ಕೊಳೆಯುತ್ತದೆ. ಇದು ಶಿಲೀಂದ್ರ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ.
 • ಮಳೆಗಾಲದಲ್ಲಿ ತೋಟದಲ್ಲಿ ಓಡಾಡಲು ಸರಳವಾಗಬೇಕು ಎಂದು ಹೀಗೆ ಮಾಡುತ್ತೇವೆ.
 • ವಾಸ್ತವಾಗಿ ಮಳೆಗಾಲದಲ್ಲಿ ನೆಲದ ಹುಲ್ಲು ಕಳೆ ಇತ್ಯಾದಿಗಳನ್ನು ತೆಗೆಯಬಾರದು.
 • ಅದು ರೋಗ ತಡೆಯುವಲ್ಲಿ ಸಹಕಾರಿಯಾಗುತ್ತದೆ. ಮಣ್ಣಿನ ಮೂಲಕವೇ ಹೆಚ್ಚಿನ ರೋಗ ಬರುವುದು. ಮಣ್ಣಿನ ಮೇಲೆ ಹೊದಿಕೆ ಇದ್ದಾಗ ಮಣ್ಣು ಸಿಡಿಯುವಿಕೆ ಕಡಿಮೆಯಾಗುತ್ತದೆ.
 • ಜೇಡಿ ಮಣ್ಣು ಇರುವಲ್ಲಿ ಕರಿಮೆಣಸು ನೆಡುವುದು ತುಂಬಾ ರಿಸ್ಕ್.
ಬುಡದ ಬಳ್ಳಿಯ ಸಿಪ್ಪೆ ಕೆರೆದಾಗ ಈ ಬಣ್ಣ ಇದ್ದರೆ ಆದನ್ನು ಬದುಕಿಸಬಹುದು
ಬುಡದ ಬಳ್ಳಿಯ ಸಿಪ್ಪೆ ಕೆರೆದಾಗ ಈ ಬಣ್ಣ ಇದ್ದರೆ ಆದನ್ನು ಬದುಕಿಸಬಹುದು

ರೋಗ ಬಂದರೂ ಬೆಳೆ ಬೆಳೆಯಬಹುದು:

 • ವೈಜ್ಞಾನಿಕವಾಗಿ ರೋಗಕ್ಕೆ ಕಾರಣವಾದ ಶಿಲೀಂದ್ರ ಹರಡುತ್ತದೆ.
 • ನೀರು, ಮಣ್ಣು, ಕೃಷಿ ಸಲಕರಣೆ ಇತ್ಯಾದಿಗಳ ಮೂಲಕ ಹರಡುವ ಕಾರಣ ಜಾಗರೂಕತೆ ವಹಿಸಬೇಕು ಎನ್ನುತ್ತಾರೆ.
 • ಆದರೆ ಅದನ್ನೆಲ್ಲಾ ಮೀರಿ ಬಳ್ಳಿಗಳು ಉಳಿದ ಉದಾಹರಣೆ ಇದೆ. 
 • ರೋಗ ಬಂದ ಬುಡದಲ್ಲೇ ಮತ್ತೆ ಬಳ್ಳಿ ನೆಟ್ಟಾಗ  ಬದುಕುವುದು ನಮಗೆಲ್ಲಾ ಗೊತ್ತಿರುವಂತದ್ದು.
 • ಹಾಗಾಗಿ ರೋಗ ಬರುತ್ತದೆ, ಎಂದು ಬೆಳೆಗಾರರು ಅಂಜಬೇಕಾಗಿಲ್ಲ.
 • ಕರಿಮೆಣಸಿನಂತಹ ಬೆಳೆಗೆ ವಾರ್ಷಿಕ 5-10% ಬೆಳೆ ನಷ್ಟ ಸಾಮಾನ್ಯ.
 • ಬಳ್ಳಿ ಸತ್ತರೆ ಬೇರೆ ನೆಡಿ. ಬದುಕುತ್ತದೆ.
 • ಕೆಲವೊಮ್ಮೆ ಒಂದೇ ಆಧಾರಕ್ಕೆ ಹಬ್ಬಿದ ಬಳ್ಳಿಯಲ್ಲಿ ಒಂದು ಬುಡ ಪೂರ್ತಿ ರೋಗಕ್ಕೆ ತುತ್ತಾಗಿ ಮತ್ತೊಂದು ಉಳಿಯುವುದೂ ಇದೆ.

ಇಂತಹ ನಿರಂತರ ಮಳೆಗೆ ಕರಿಮೆಣಸು ಮಾತ್ರವಲ್ಲ ಎಲ್ಲಾ ಬೆಳೆಗಳಿಗೂ ರೋಗ ಬರುವ ಸಾಧ್ಯತೆ ಹೆಚ್ಚು. ಅಡಿಕೆಗೆ ಕೊಳೆ ರೋಗ ಬರುತ್ತದೆ. ತೆಂಗಿಗೂ ಬರುತ್ತದೆ. ಈ ವರ್ಷ ಹಲಸಿನ ಮರಗಳಿಗೂ ಭಾರೀ ರೋಗ ಬಂದಿದೆ. ವಾತಾವರಣದ ಅಥವಾ ಪ್ರಕೃತಿಯ ವೈಪರೀತ್ಯಗಳ ಮುಂದೆ ಮಾನವನ ಪ್ರಯತ್ನ ಫಲಿಸಿದರೂ ಫಲಿಸಬಹುದು, ಫಲಿಸದೆಯೂ ಇರಬಹುದು. ಪ್ಲಾಸ್ಟಿಕ್ ಮಲ್ಚಿಂಗ್ ಇತ್ಯಾದಿಗಳನ್ನು ಮಾಡುವಾಗಲೂ ನೀರು  ದೂರ ಹೋಗುವಂತೆ ಇಇಜಾರು ಇರಬೇಕು. ಇಲ್ಲವಾದ್ಅರೆ ಅಲ್ಲಿಯೂ ರೋಗ ಬರುತ್ತದೆ.

Leave a Reply

Your email address will not be published. Required fields are marked *

error: Content is protected !!