ಕರಿಮೆಣಸು ರೋಗ ಬಾರದಂತೆ ತಡೆಯಲು ಏನು ಮಾಡಬೇಕು?

ಕರಿಮೆಣಸಿಗೆ ರೋಗ ಬಾರದಂತೆ ತಡೆಯುವ ವಿಧಾನ

ಮಳೆಗಾಲ ಬಂದಿದೆ. ಇನ್ನು ಅಡಿಕೆ ಕರಿಮೆಣಸು ಬೆಳೆಗಾರರಿಗೆ ಬೆಳೆ ಉಳಿಸಿಕೊಳ್ಳುವುದೇ ಚಿಂತೆ. ಕೆಲವರು ಒಂದು ಬಾರಿ ಔಷಧಿ ಸಿಂಪಡಿಸಿದ್ದಾರೆ. ಕೆಲವರು ಸಿಂಪರಣೆ ಮಾಡಿಯೇ ಇಲ್ಲ. ಇತ್ತಂಡಕ್ಕೂ ಒಂದೇ ಚಿಂತೆ ರೋಗ ಬರಬಹುದೇ ಎಂದು. ಅಡಿಕೆ ಬೆಳೆಗೆ ರೋಗ ಹೇಗೆ ಬರುತ್ತದೆಯೋ ಹಾಗೆಯೇ ಅಡಿಕೆಯ ಮಿಶ್ರ ಬೆಳೆಯಾದ ಕರಿಮೆಣಸಿಗೆ ಮಳೆಗಾಲದಲ್ಲಿ ರೋಗ ಸಾಧ್ಯತೆ ಹೆಚ್ಚು. ರೋಗ ತಡೆಯುವ ವಿಧಾನಗಳನ್ನು ಚಾಚೂ ತಪ್ಪದೆ ಅನುಸರಿಸಿದರೆ  ರೋಗ ಸಾಧ್ಯತೆಯನ್ನು ಕಡಿಮೆ ಮಾಡಬಹುದು.

ಮಳೆಗಾಲ ಪ್ರಾರಂಭದಲ್ಲಿ ಕರಿಮೆಣಸಿಗೆ ಬರುವ ಪ್ರಮುಖ ರೋಗ ಎಂದರೆ ಶೀಘ್ರ ಸೊರಗು  ರೋಗ. ಶೀಘ್ರ ಸೊರಗು ರೋಗ ಎಂದರೆ ಗೊತ್ತೇ ಆಗದಂತೆ ಬಳ್ಳಿ ಸಾಯುತ್ತದೆ. ಬೇರಿನ ಬಾಗ ಕೊಳೆತು ಆ ಪರಿಣಾಮ ಎಲೆಗಳು ಉದುರಿ ಬಳ್ಳಿ ಸಾಯುತ್ತದೆ. ತಕ್ಷಣದಲ್ಲಿ ಅಗುವ ಕಾರಣ ಇದಕ್ಕೆ ಶೀಘ್ರ ಸೊರಗು ರೋಗ ಎಂದು ಹೆಸರಿಸಲಾಗಿದೆ.ಈ ರೋಗ ಯಾವಗ ಬರುತ್ತದೆ, ಬರುವುದಿಲ್ಲ ಎಂದಿಲ್ಲ. ಆದರೆ  ರೋಗ ಬಾರದಂತೆ ಮುನ್ನೆಚ್ಚರಿಕೆ ಮಾತ್ರ ವಹಿಸಲೇ ಬೇಕಾಗುತ್ತದೆ. ಯಾವ ಕಾರಣಕ್ಕೂ ರೋಗ ಬಂದ ನಂತರ ಬಳ್ಳಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವೇ ಅಂತಿಮ.

ಕರಿಮೆಣಸಿಗೆ ರೋಗ ಹೇಗೆ ಬರುತ್ತದೆ?

  • ಕರಿಮೆಣಸಿನ ಬಳ್ಳಿಗೆ ಬೇರುಗಳು ಬಲು ಸೂಕ್ಷ್ಮ. ಇದನ್ನು ಕೂದಲು ಬೇರುಗಳು ಎಂದು ಕರೆಯುತ್ತಾರೆ. (ಉದಾಹರಣೆ:ವೀಳ್ಯದೆಲೆ, ಕೆಲವು ಹುಲ್ಲು ಇತ್ಯಾದಿ)
  • ಯಾವುದೇ ಒಂದು ಕೂದಲು ಬೇರುಗಳುಳ್ಳ ಸಸ್ಯಗಳು ನೀರು ಹೆಚ್ಚಾದರೂ ತೊಂದರೆಗೆ ಒಳಗಾಗುತ್ತವೆ.
  • ಕಡಿಮೆಯಾದರೂ ತೊಂದರೆಗೆ ಒಳಗಾಗುತ್ತವೆ. ನೀರು ಹೆಚ್ಚಾದಾಗ ಅವು ಬೇಗನೇ ಕೊಳೆಯುತ್ತವೆ.
  • ಕೊಳೆಯುವಿಕೆ ಬಾಹ್ಯ ಕಾರಣದಿಮ್ದಲೂ ಆಗಬಹುದು. ಆಂತರಿಕ ಕಾರಣದಿಂದಲೂ ಆಗಬಹುದು.
  • ಬಾಹ್ಯ ತೊಂದರೆ ಉಂಟಾಗುವುದು ಮಳೆಗಾಲದ ಹೆಚ್ಚುವರಿ ನೀರಿನ ಕಾರಣದಿಂದ.
  • ಬುಡ ಭಾಗದಲ್ಲಿ ನೀರು ಸುಮಾರು 20 ನಿಮಿಷಕ್ಕೂ ಹೆಚ್ಚು ಸಮಯದ ತನಕ ನಿಂತರೆ ಬೇರಿನ ಉಸಿರಾಟಕ್ಕೆ ತೊಂದರೆ ಉಂಟಾಗುತ್ತದೆ.
  • ಆಗ ಅದು ಕೊಳೆಯಲಾರಂಭಿಸುತ್ತದೆ. ಕೊಳೆಯಲು ಪ್ರಾರಂಭವಾದಾಗ ಅದಕ್ಕೆ ಶಿಲೀಂದ್ರ ಸೋಂಕು ಉಂಟಾಗುತ್ತದೆ.
  • ಹೆಚ್ಚು ಹೆಚ್ಚು ಕೊಳೆಯುತ್ತಾ ಬರುತ್ತದೆ. ಬುಡ ಭಾಗ ಕೊಳೆತರೆ ಮೇಲಿನ ಭಾಗಕ್ಕೆ ಆಹಾರ ಸರಬರಾಜು ಸ್ಥಗಿತವಾಗುತ್ತದೆ.
  • ಬಳ್ಳಿಯ ಎಲೆಗಳು, ಕರೆಗಳು ಮೊದಲು ಉದುರಿ ಬಳ್ಳಿಯೇ ಕೊಳೆತು ಸಾಯುತ್ತದೆ.
ರೋಗ ಬಂದ ಲಕ್ಷಣ
ರೋಗ ಬಂದ ಲಕ್ಷಣ
  • ಆಂತರಿಕ ಕಾರಣಕ್ಕೂ ಬಾಹ್ಯ ಕಾರಣಕ್ಕೂ ಸಂಬಂಧ ಇದೆ. ಕೊಳೆಯುವುಕೆಯನ್ನು ಹೆಚ್ಚಿಸುವ ಶಿಲೀಂದ್ರ ಆಂತರಿಕವಾಗಿ ಹೆಚ್ಚಾದಾಗ ಅದು ನೀರು ಮತ್ತು ಮಣ್ಣಿನ ಮೂಲಕ ಪ್ರಸಾರವಾಗುತ್ತದೆ.
  • ಆಗ ಶಿಲೀಂದ್ರ ಸೋಂಕು ಬೇರೆ ಆರೋಗ್ಯವಂತ ಬೇರುಗಳಿಗೂ ಪ್ರಸಾರವಾಗುತ್ತದೆ.
  • ರೋಗ ಹರಡುತ್ತದೆ. ಒಮ್ಮೆ ರೋಗ ಬಂದರೆ ಆ ತೋಟದಲ್ಲಿ ರೋಗ ಕಾರಕ ಶಿಲೀಂದ್ರ ಆಗಾಗ ಮೊಳಕೆಒಡೆಯುತ್ತಾ ಬಳ್ಳಿಗಳನ್ನು ಕೊಲೆ ಮಾಡುತ್ತಾ ಇರುತ್ತದೆ.
  • ಹಾಗಾಗಿ ನಿಯಂತ್ರಣ ಕ್ರಮವನ್ನು ತೆಗೆದುಕೊಳ್ಳುವಲ್ಲಿ ಉದಾಸೀನ ಮಾಡಬಾರದು.

ನಿಯಂತ್ರಣ ವಿಧಾನ:

  • ನೆಲದಲ್ಲಿ ಹಬ್ಬಿದ ಬಳ್ಳಿಯನ್ನು ತೆಗೆಯಬೇಕು. ಎಲೆಗಳಿಗೆ ಮಣ್ಣಿನ ಕಣಗಳು ಸಿಡಿದು ಅಲ್ಲಿ ಕಪ್ಪು ಚುಕ್ಕೆ ಉಂಟಾಗಿ ಅದು ರೋಗ ಕಾರಕ ಶಿಲೀಂದ್ರದ ಬೆಳವಣಿಗೆ ಅವಕಾಶ ಮಾಡುತ್ತದೆ.
  • ಅಲ್ಲಿ ಪ್ರಾರಂಭವಾದ ರೋಗ ಸೋಂಕು ಹೆಚ್ಚಾಗುತ್ತಾ ಬಳ್ಳಿಗೆ ಬುಡಭಾಗಕ್ಕೆ ವ್ಯಾಪಿಸುತ್ತದೆ.
ಕರಿಮೆಣಸಿಗೆ ರೋಗ ಬಾರದಂತೆ ಹೀಗೆ  ಬೋರ್ಡೊ ದ್ರಾವಣ ಸಿಂಪಡಿಸಬೇಕು.
ಕರಿಮೆಣಸಿಗೆ ರೋಗ ಬಾರದಂತೆ ಹೀಗೆ ಬೋರ್ಡೊ ದ್ರಾವಣ ಸಿಂಪಡಿಸಬೇಕು.
  • ಬುಡ ಭಾಗವನ್ನು ಎರಡು ಅಡಿ ತನಕ ಎಲೆಗಳು ಬಳ್ಳಿಗಳು ಇರದಂತೆ ನೋಡಿಕೊಳ್ಳಬೇಕು. 
  • ಬುಡದಲ್ಲಿ ಕವಲು ಬಳ್ಳಿಗಳು ಇದ್ದರೆ ಅದಕ್ಕೆ ಮಣ್ಣಿನ ಮೂಲಕ ಬರುವ ರೋಗ ಕಾರಕ ಶಿಲೀಂದ್ರ ಪ್ರವೇಶವಾಗಲು ಅನುಕೂಲವಾಗುತ್ತದೆ.
  • ಎಲೆಗಳ ಅಡಿ ಭಾಗಕ್ಕೆ ತಗಲುವಂತೆ ಬೋರ್ಡೋ ದ್ರಾವಣವನ್ನು(bourdex mixture) ಚೆನ್ನಾಗಿ ಸಿಂಪಡಿಸಿರಿ.
  • ಎಲೆಯ ಮೇಲ್ಭಾಗದಲ್ಲಿ ರಕ್ಷಣೆಗೆ ಒಂದು ಪರೆ ಇರುತ್ತದೆ.
  • ಅಡಿ ಭಾಗದಲ್ಲಿ ಇರುವುದಿಲ್ಲ. ಹಾಗಾಗಿ ಶಿಲೀಂದ್ರ ಸೋಂಕು ಉಂಟಾಗುವುದು ಎಲೆ ಅಡಿಯಲ್ಲಿ ಕಪ್ಪಗಿನ ಚುಕ್ಕೆಯಿಂದ ಪ್ರಾರಂಭವಾಗಿ.
  • ಎಲೆ ಅಡಿಗೆ ಬೋರ್ಡೋ ದ್ರಾವಣ ಸಿಂಪರಣೆಯಿಂದ ಅದನ್ನು ತಡೆಯಬಹುದು.
  • ಕರೆಗಳು ಇರುವ ಕಾರಣ ಕರೆಗಳಿಗೂ ತಾಗುವಂತೆ ಬೋರ್ಡೋದ್ರಾವಣವನ್ನು ಸಿಂಪಡಿಸಬೇಕು.
  • ಮೆಣಸಿನ ಬಳ್ಳಿಯ ಬುಡ ಭಾಗಕ್ಕೆ ಬೋರ್ಡೋ ಪೇಸ್ಟ್ ಲೇಪನ ಮಾಡುವುದರಿಂದ ರೋಗ ಸಾಧ್ಯತೆಯನ್ನು ತುಂಬಾ ಕಡಿಮೆ ಮಾಡಬಹುದು.
  • 1 ಕಿಲೋ ಮೈಲುತುತ್ತೆ, 1 ಕಿಲೋ ಸುಣ್ಣ  10 ಲೀ. ನೀರಿನಲ್ಲಿ ಕರಗಿಸಿದಾಗ ಶೇ.10  ರ ಬೋರ್ಡೋ ಪೇಸ್ಟ್ ಆಗುತ್ತದೆ.
  • ಇದನ್ನು ಬುಡದಿಂದ 1 ಮೀ. ತನಕ ಹಚ್ಚಬಹುದು.
ಹೀಗೆ ಬೋರ್ಡೊ  ಪೇಸ್ಟ್ ಲೇಪಿಸಬೇಕು.
ಹೀಗೆ ಬೋರ್ಡೊ ಪೇಸ್ಟ್ ಲೇಪಿಸಬೇಕು.
  • ಬುಡಕ್ಕೆ ನೀರು ಹೆಚ್ಚಾಗದಂತೆ ಕವರ್ (Plastic mulching) ಹಾಕಿದರೆ ಒಳ್ಳೆಯದು.
  • ಪ್ಲಾಸ್ಟಿಕ್ ನ 1.5 -2 ಮೀ. ಉದ್ದ ಅಗಲದ ಪ್ಲಾಸ್ಟಿಕ್ ಶೀಟನ್ನು ಬುಡ ಭಾಗಕ್ಕೆ  ಹೊದಿಸುವುದರಿಂದ  ಮಣ್ಣಿನ ಸವಕಳಿ ಆಗುವುದಿಲ್ಲ.
  • ಬುಡ ಭಾಗದ ಬೇರುಗಳು ನೀರಿನ ಹೊಡೆತಕ್ಕೆ ಹೊರಗೆ ಕಾಣಿಸುವುದಿಲ್ಲ.(Expose) ಇದರಿಂದ ರೋಗ ಸೋಂಕು ಕಡಿಮೆಯಾಗುತ್ತದೆ.
  • ಉದುರಿದ ಎಲೆ ಮತ್ತು ಕರೆಗಳನ್ನು ಸಾಧ್ಯವಾದಷ್ಟು ತೆಗೆದು ದೂರ ಹಾಕಿ ಅಥವಾ ಸುಡಿ.
  • ಇವು ಉದುರುವುದು ಹೆಚ್ಚಾಗಿ ರೋಗ ಬಂದ ಕಾರಣದಿಂದ.
  • ಎಲೆಗಳಲ್ಲಿ ಕಪ್ಪು ಚುಕ್ಕೆ ಇರಲೂ ಬಹುದು. ಉದುರಿದ ಕರೆಗಳಲ್ಲಿ ಅಲ್ಲಲ್ಲಿ ಕಾಳುಗಳು ಕಪ್ಪಾಗಿರಬಹುದು.
  • ಅದು ರೋಗ ಬಂದ ಚಿನ್ಹೆ ಆಗಿರುತ್ತದೆ. ನೆಲಕ್ಕೆ ಬಿದ್ದ ತಕ್ಷಣ ಅದು ಹೆಚ್ಚಾಗುತ್ತದೆ.
  • ಹಾಗಾಗಿ ಅದನ್ನು ತೆಗೆದು ಸುಡಬೇಕು.
  • ಮಳೆಗಾಲ ಪ್ರಾರಂಭವಾಗುವ ಈ ಸಮಯದಲ್ಲಿ ಬುಡಕ್ಕೆ ಬಳ್ಳಿಯ ಗಾತ್ರವನ್ನು ಹೊಂದಿ 5-10 ಲೀ. ನಷ್ಟು ಬೋರ್ಡೋ ದ್ರಾವಣವನ್ನು ಬೇರಿನ ಭಾಗ ನೆನೆಯುವಂತೆ ಎರೆಯಬೇಕು(Drenching) 
  • ಇದು ರೋಗ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
  • ಬೋರ್ಡೋ ಬದಲಿಗೆ ಕಾಪರ್ ಆಕ್ಸಿ ಕ್ಲೋರೈಡ್ ಸಹ ಬಳಸಬಹುದು.
  • ಕೆಲವರು ಪೊಟ್ಯಾಶಿಯಂ ಫೋಸ್ಪೋನೇಟ್ ಬಳಸುತ್ತಾರೆ.ಅದೂ ಆಗಬಹುದು.
  • ಬುಡ ಭಾಗವನ್ನು ಏರಿ ಮಾಡಿದಂತೆ ಇರಿಸಬೇಕು. ಹೊಂಡ ಇರಬಾರದು.
  • ಪ್ರತೀ ಬಳ್ಳಿಯ ಬುಡದಿಂದ ನೀರು ಬಸಿದು ಹೋಗುವಂತೆ ಕಾಲುವೆ ಇರಬೇಕು.
  • ತಳ ಒರತೆ ಇರುವ ಕಡೆ ಆಳದ ಬಸಿಗಾಲುವೆ ಮಾಡಬೇಕು.
  • ಸಾಧ್ಯವಾದಷ್ಟು ಕೊಳೆಯುವ ಪದಾರ್ಥಗಳನ್ನು ಬುಡಕ್ಕೆ ಈಗ ಹಾಕಬಾರದು.
ನೆಲಕ್ಕೆ ತಾಗುವ ಬಳ್ಳಿಗಳನ್ನು ತೆಗೆಯಬೇಕು
ನೆಲಕ್ಕೆ ತಾಗುವ ಬಳ್ಳಿಗಳನ್ನು ತೆಗೆಯಬೇಕು

ಒಂದು ವೇಳೆ ಎಲೆ ಉದುರುವಿಕೆ, ಕರೆ ಉದುರುವಿಕೆ ಪ್ರಾರಂಭವಾಗಿದ್ದರೆ, ತಕ್ಷಣ ಆ ಬಳ್ಳಿಯ ಬುಡಕ್ಕೆ 5-10 ಲೀ. ಬೋರ್ಡೋ ದ್ರಾವಣ, ಅಥವಾ ಕಾಪರ್ ಆಕ್ಸೀ ಕ್ಲೋರೈಡ್ ಅಥವಾ ಮೆಟಲಾಕ್ಸಿಲ್  ದ್ರಾವಣವನ್ನು ಎರೆಯಬೇಕು.  ಅದಕ್ಕೂ ಮುಂಚೆ ಬಳ್ಳಿಯ ಬುಡದ ಸಿಪ್ಪೆಯನ್ನು ಸ್ವಲ್ಪ ಕೆರೆದು ಜೀವ ಇದೆಯೇ ಇಲ್ಲವೇ ಎಂದು ಪರಿಶೀಲಿಸಬೇಕು. ರೋಗ ಕಡಿಮೆ ಇರುವ ತಳಿ ಹೆ಼ಚ್ಚು ಇರಬೇಕು.

ನೆಲಕ್ಕೆ ತಾಗುವ ಬಳ್ಳಿಗಳನ್ನು ತೆಗೆಯಬೇಕು
ನೆಲಕ್ಕೆ ತಾಗುವ ಬಳ್ಳಿಗಳನ್ನು ತೆಗೆಯಬೇಕು

ಹೊಸತಾಗಿ ನಾಟಿ ಮಾಡುವ ವಿಧಾನ:

  • ಅಡಿಕೆ ತೆಂಗಿನ ತೋಟದಲ್ಲಿ ಕರಿಮೆಣಸು ಬಳ್ಳಿ ನೆಡುವಾಗ ಅದು ಸಸಿ ಇರಲಿ, ಬಳ್ಳಿ ತುಂಡುಗಳಿರಲಿ ನೆಡುವಾಗ ಅಡಿಕೆ ಮರದಿಂದ 1.5 ಅಡಿ ದೂರದಲ್ಲಿ ನೆಡಬೇಕು.
  • ಮರದ ವಾಲುವಿಕೆಯನ್ನು ಗಮನಿಸಿ ಮರದ ನೀರು ಬೀಳುವ ಜಾಗದಲ್ಲಿ ನಾಟಿ ಮಾಡಬಾರದು. 
  • ನಾಟಿ ಮಾಡುವಾಗ ಬುಡದ ಎಲೆಗಳನ್ನು ತೆಗೆದು ಅದನ್ನು ದೂರ ಹಾಕಬೇಕು ಇಲ್ಲವೇ ಸುಡಬೇಕು.
  • ಬೇರು ಬರಲು ಅನುಕೂಲವಾಗುವ ಕಾಂಪೋಸ್ಟ್ ಆದ ಗೊಬ್ಬರವನ್ನು ಹಾಕಬೇಕು.
  • ತೆಂಗಿನ ಮರಕ್ಕೆ ನೆಡುವಾಗ 3-4 ಅಡಿ ದೂರದಲ್ಲಿ ನೆಟ್ಟು ಅದಕ್ಕೆ ಸಪೋರ್ಟ್ ಕೊಟ್ಟು ಕಾಂಡಕ್ಕೆ ಹಬ್ಬುವಂತೆ ಮಾಡಬೇಕು.
  • ಬುಡ ಭಾಗದಲ್ಲಿ ನೆಟ್ಟರೆ ಅಲ್ಲಿ ಅದರ ಬೇರುಗಳ ಬಾಗದಲ್ಲಿ  ಮಣ್ಣು ಇರುವುದಿಲ್ಲ.
  • ಹಾಗಾಗಿ ಮೆಣಸಿನ ಬಳ್ಳಿಯ ಬೇರು ಬೆಳೆಯಲು ಅನುಕೂಲವಾಗುವುದಿಲ್ಲ.

ಬಳ್ಳಿ ಉತ್ತಮವೇ  ಅಥವಾ ಸಸಿಯೇ?

  • ಅವರವರ ತೋಟದಲ್ಲಿ ರೋಗ ಮುಕ್ತ ಮೆಣಸ್ನ ಬಳ್ಳಿಗಳು ಇದ್ದರೆ ಅದನ್ನೇ ಸಸ್ಯಾಭಿವೃದ್ದಿ ಮಾಡಿಕೊಳ್ಳುವುದು ಸೂಕ್ತ.
  • ಬಳ್ಳಿಯನ್ನೇ ನಾಟಿ ಮಾಡಿದರೆ ಯಾವ ಅನನುಕೂಲವೂ ಇಲ್ಲ.
  • ಬಳ್ಳಿ ನಾಟಿ ಮಾಡಿದರೆ ಬೇರು ಬಿಟ್ಟ ತರುವಾಯ ವೇಗವಾಗಿ ಬೆಳೆದು ಹಬ್ಬುತ್ತದೆ.

ಗಿಡ ನಾಟಿ ಮಾಡುವುದು ಹಾಳಲ್ಲ. ಆದರೆ ಖರೀದಿ ಮಾಡುವ ಗಿಡಗಳು ಹೊರ ವಾತಾವರಣಕ್ಕೆ ಹೊಂದಿಕೆಯಾಗಿದ್ದು ಆಗಿರಬೇಕು.(Hardening) ಬಹುತೇಕ ಸಸ್ಯೋತ್ಪಾದಕರು ಗಿಡಗಳನ್ನು ಪ್ಲಾಸ್ಟಿಕ್ ಮನೆಗಳ ಒಳಗೆ ಇಟ್ಟಿರುತ್ತಾರೆ. ಅದರೊಳಗಿನ ವಾತಾವರಣದಲ್ಲಿ ಅದು ಚೆನ್ನಾಗಿ ಕಾಣಿಸುತ್ತದೆ. ಆದರೆ ಅಂತಹ ಗಿಡಗಳು ನೇರವಾಗಿ ನಾಟಿ ಮಾಡುವಾಗ ಹೊರವಾತಾವರಣಕ್ಕೆ  ಹೊಂದಿಕೊಳ್ಳದೆ ಸಾಯುವುದೂ ಇರುತ್ತದೆ. ತೆರೆದ ವಾತಾವರಣದಲ್ಲಿ ಇರುವ ಗಿಡಗಳು ನಿಮ್ಮ ತೋಟದ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ.

ಅಡಿಕೆ ತೋಟ ಒಂದಕ್ಕೇ ಗಮನ ಕೊಡಬೇಡಿ. ಕರಿಮೆಣಸು ಕರಾವಳಿ, ಮಲೆನಾಡು, ಬಯಲು ಸೀಮೆ ಎಲ್ಲಾ ಕಡೆಯಲ್ಲೂ ಬೆಳೆಯುವ ಉತ್ತಮ ಸಾಂಬಾರು ಬೆಳೆಯಾದ ಕಾರಣ  ಬೇಡಿಕೆ ಇಲ್ಲ ಎಂದಾಗುವುದಿಲ್ಲ. ಹಾಗಾಗಿ ಮೆಣಸಿನ ಬಳ್ಳಿಯ ಬೆಳೆ ಎಲ್ಲರಲ್ಲೂ ಇರಲಿ.

Leave a Reply

Your email address will not be published. Required fields are marked *

error: Content is protected !!