ಕಳೆದ ವರ್ಷ ಈ ಸಮಯದಲ್ಲಿ ಹಸಿ ಅಡಿಕೆಗೆ 7500 ರೂ. ಬೆಲೆಗೆ ಖರೀದಿ ಮಾಡಲಾಗುತ್ತಿತ್ತು. ಈ ವರ್ಷ ಪ್ರಾರಂಭಿಕ ದರ 6500, ಇನ್ನೂ ಇಳಿಕೆಯಾಗಿ 6300 ಕ್ಕೆ ಬಂದಿದೆ. ಇನ್ನೂ ಇಳಿಯುವ ಸಂಭವ. ಇದು ಮುಂದಿನ ಅಡಿಕೆ ಧಾರಣೆಯ ಅಸ್ಥಿರತೆಯನ್ನು ತೋರಿಸುತ್ತಿದೆ. ಕೆಂಪಡಿಕೆಯ ಉತ್ಪಾದನೆ ಭಾರೀ ಹೆಚ್ಚಳವಾಗುತ್ತಿದ್ದು, ಸಾಂಪ್ರದಾಯಿಕ ಪ್ರದೇಶಗಳ ಇಳುವರಿಯನ್ನು ಹೊಸ ಪ್ರದೇಶಗಳು ಹಿಂದಿಕ್ಕುತ್ತಿದೆ. ಜೋಳ, ರಾಗಿ, ಭತ್ತ ತರಕಾರಿ ಬೆಳೆಯುತ್ತಿದ್ದ ಬಯಲು ಸೀಮೆ ಪ್ರದೇಶಗಳಲ್ಲಿ ಉತ್ತಮ ಇಳುವರಿ ಕಾಣಿಸುತ್ತಿದ್ದು, ಮಾರುಕಟ್ಟೆ ಈ ಉತ್ಪಾದನೆಯನ್ನು ತಾಳಿಕೊಳ್ಳಬಹುದೇ ಎಂಬ ಸಂಶಯ ಮೂಡುತ್ತಿದೆ.
ಕಳೆದ ಎರಡು ಮೂರು ವಾರಗಳಿಂದ ಕೆಂಪಡಿಕೆ ಬೆಳೆಗಾರರ ಆತಂಕ ದರ ಬೀಳಬಹುದೇ ಎಂದು. ಹೌದು ಒಮ್ಮೆ ಭೂತಾನ್ ನಿಂದ ಹಸಿ ಅಡಿಕೆ ಆಮದು ಆಗುತ್ತದೆ ಎಂಬ ಸುದ್ದಿ ಬಂದ ತಕ್ಷಣವೇ ದರ ಕುಸಿಯಲು ಪ್ರಾರಂಭವಾಯಿತು. ಬರೇ ಅನುಮತಿ ಮಾತ್ರ. ಅಡಿಕೆ ಬಂದಿಲ್ಲ. ಆದರೂ ದರ ತಕ್ಷಣ ಇಳಿಕೆಯಾಯಲಾರಂಭಿಸಿತು. ಈಗ ಬೇರೆ ಕಡೆಯಿಂದಲೂ ಅಡಿಕೆ ಕಳ್ಳ ಮಾರ್ಗದಲ್ಲಿ ಭಾರತಕ್ಕೆ ಬರುತ್ತಿದೆ ಎಂಬ ಸುದ್ದಿಗಳಿವೆ. ದರ ಇಳಿಕೆಗೆ ನಿಜವಾದ ಕಾರಣ ಆಮದು ಅಲ್ಲ. ಆಮದು ಆಗಿದ್ದು ಗೊತ್ತಾಗುವುದು ಅದನ್ನು ಸೀಸ್ ಮಾಡಿದರೆ ಮಾತ್ರ. ಸೀಸ್ ಆದರೆ ಸ್ಥಳೀಯ ಮಾರುಕಟ್ಟ್ಗೆಗೆ ಸಮಸ್ಯೆ ಇಲ್ಲ. ಆಮದು ಎಂಬ ನೆವದಲ್ಲಿ ಬೆಲೆ ಇಳಿಕೆಮಾಡುವ ಒಂದು ತಂತ್ರ ಅಷ್ಟೇ.ವ್ಯಾಪಾರ ಎಂದ ಮಾತ್ರಕ್ಕೆ ದರ ಇಳಿಕೆ, ಏರಿಕೆ ಆಗಲೇ ಬೇಕು. ಇದರಲ್ಲೇ ವ್ಯಾಪಾರಿಗಳಿಗೆ ಲಾಭವಾಗುವುದು. ಹಾಗೆಂದು ಇವರ ವ್ಯಾಪಾರಿ ತಂತ್ರಗಾರಿಕೆಯಲ್ಲಿ ರೈತರು ಲಾಭಮಾಡಿಕೊಳ್ಳುವುದು ಕೆಲವೊಮ್ಮೆ ಅದೃಷ್ಟ . ಕೆಲವೊಮ್ಮೆ ಬುದ್ದಿವಂತಿಕೆ.
ಕೆಂಪಡಿಕೆ ಮಾರುಕಟ್ಟೆ:
ಹಸಿ ಅಡಿಕೆ ಖರೀದಿ ದರ 6500 ರಿಂದ 6300 ಕ್ಕೆ ಇಳಿದದ್ದು, ಇನ್ನೂ ಇಳಿಯುವ ಸಾಧ್ಯತೆ ಕೆಂಪು ಅಡಿಕೆ ಮಾರುಕಟ್ಟೆ ಕೆಳಗೆ ಬರುವ ಒಂದು ಸೂಚನೆ.ಚೆನ್ನಗಿರಿ, ಭದ್ರಾವತಿ, ಸಿರ್ಸಿ, ಸಾಗರ, ಹೊಸನಗರ, ಚಿತ್ರದುರ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಅತ್ಯಧಿಕ ದರ 50,000 ದ ಆಸುಪಾಸಿನಲ್ಲಿ ಇದೆ. ಆದರೆ ಸರಾಸರಿ ದರ ಮಾತ್ರ 47,000-48,000 ಇದೆ. ಸರಾಸರಿ ದರಕ್ಕೂ, ಗರಿಷ್ಟ ದರಕ್ಕೂ ಭಾರೀ ವ್ಯತ್ಯಾಸ ಇಲ್ಲ. ಮಾರುಕಟ್ಟೆಗೆ ಬರುವ ಪ್ರಮಾಣವೂ ಹೆಚ್ಚು ಇಲ್ಲ. ಹಾಗಾಗಿ ಬೆಳೆಗಾರರು ದರ ಕುಸಿಯಬಹುದು ಎಂದು ಆತಂಕ ಪಡಬೇಕಾಗಿಲ್ಲ. ಸ್ವಲ್ಪ ಸಮಯದ ತನಕ ಇದೇ ತರಹ ಮುಂದುವರಿಯಬಹುದು. ಹಾಗೆಂದು ಬೆಳೆಗಾರರು ಈ ವರ್ಷದಲ್ಲಿ 60,000 -65,000 ಈ ದರದ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಅಡಿಕೆ ಬೆಳೆ ಪ್ರದೇಶ ಹೆಚ್ಚಾಗಿದೆ. ಅದಕ್ಕನುಗುಣವಾಗಿ ಉತ್ಪಾದನೆಯೂ ಹೆಚ್ಚಾಗಿದೆ. ಕೆಲವು ಹೊಸ ಪ್ರದೇಶಗಳಲ್ಲಿ ಮರಗಳಲ್ಲಿ 4-5 ಗೊನೆ ಅಡಿಕೆಯೂ ಇದೆ. ಹೊಸ ಅಡಿಕೆ ಬೆಳೆ ಪ್ರದೇಶಗಳಲ್ಲಿ ವರ್ಗೀಕರಣ ರಹಿತವಾಗಿ ಅಡಿಕೆಯನ್ನು ಸ್ವಲ್ಪ ಕಡಿಮೆ ದರಕ್ಕೆ ಖರೀದಿ ಮಾಡಲಾಗುತ್ತಿದೆ. ಹಾಗಾಗಿ ಬೆಳೆಗಾರರು ತಮ್ಮ ಗರಿಷ್ಟ ನಿರೀಕ್ಷೆ 55,000 ಎಂದೇ ಇಟ್ಟುಕೊಳ್ಳಬೇಕು. ಆದರೆ ಮುಂದಿನ ಅಕ್ಟೋಬರ್ ತನಕ ಕೆಂಪಡಿಕೆ ದರ ಇನ್ನೂ ಸ್ವಲ್ಪ ಕಡಿಮೆ ಆಗುವ ಮುನ್ಸೂಚನೆ ಇದೆ.
ಯಾಕೆ ದರ ಕುಸಿಯಿತು?
ಜುಲೈ ತಿಂಗಳಲ್ಲಿ ರಾಶಿ ಅಡಿಕೆ ಧಾರಣೆ ಏರಿತ್ತು. ಬೆಳೆಗಾರರು ಇನ್ನೂ ಏರಿಕೆ ಆಗಬಹುದು ಎಂದು ಮಾರಾಟವನ್ನು ಮುಂದೂಡಿದ್ದರು. ಆದರೆ ದರ ಏರುತ್ತಾ 55,000 ತನಕವೇ ಏರಿತು. ಹಾಗೆಯೇ ಕುಸಿತವೂ ಆಗಲಾರಂಭಿಸಿತು. ದಿನದಿಂದ ದಿನಕ್ಕೆ 500-1000 ದಂತೆ ಇಳಿಕೆಯಾಗುತ್ತಾ ಬರಲಾರಂಭಿತು. ಖರೀದಿಯಲ್ಲಿ ಸ್ಪರ್ಧೆಯೂ ಕಡಿಮೆಯಾಗಲಾರಂಭಿಸಿತು. ಇದೆಲ್ಲಾ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸಹಜ. ಬೆಲೆ ಏರಿಕೆಯಾಗುವ ಸಮಯದಲ್ಲಿ ವ್ಯಾಪಾರಿಗಳಿಗೆ ಬೇಡಿಕೆ ಇರುತ್ತದೆ. ಹಿಂದಿನ ವ್ಯವಹಾರದ ಹಣವೂ ಬಂದಿರುತ್ತದೆ. ಆ ಸಮಯದಲ್ಲಿ ಖರೀದಿಸಿದ ಉತ್ಪನ್ನ ಮತ್ತು ಹಿಂದಿನ ಸ್ಟಾಕನ್ನು ಸೇರಿಸಿ ಮತ್ತೆ ಖರೀದಿದಾರರಿಗೆ ಮಾರಾಟ ಮಾಡಬೇಕಾಗುತ್ತದೆ. ಅಲ್ಲಿಂದ ಪಾವತಿ ಬರುವುದು ನಿಧಾನವಾದರೆ ದರ ಇಳಿಕೆಯಾಗುತ್ತದೆ. ಅಡಿಕೆ ಬೆಳೆಗಾರರೆಲ್ಲಾ ತಿಳಿದಿರಿ. ನಮ್ಮಿಂದ ಖರೀದಿ ಮಾಡಿದ ಅಡಿಕೆಯನ್ನು ಉತ್ತರ ಭಾರತದ ಯಾವುದೇ ಖರೀದಿದಾರನೂ ತಕ್ಷಣ ಹಣ ಪಾವತಿ ಮಾಡಿ ಖರೀದಿ ಮಾಡುವುದಿಲ್ಲ. ಕಳೆದ 10-15 ವರ್ಷಗಳಿಂದ ಖಾಸಗಿಯವರೂ ಸೇರಿದಂತೆ ಸಾಂಸ್ಥಿಕ ಮಾರುಕಟ್ಟೆಯಲ್ಲೂ ತಕ್ಷಣ ಪಾವತಿ ವ್ಯವಸ್ಥೆ ಇಲ್ಲ. ಯಾವುದೇ ಉತ್ತರ ಭಾರತದ ಖರೀದಿದಾರ ನೇರವಾಗಿ ಖರೀದಿ ಮಾಡುವುದಿಲ್ಲ. ಸ್ಥಳೀಯ ಖರೀದಿದಾರರ ಮೂಲಕ ಮಾಡುತ್ತಾರೆ.ಹಾಗಾಗಿ ಇದು ನಮಗೆ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಪಾವತಿ ತಿಂಗಳು ಗಟ್ಟಲೆ ಮುಂದೂಡಲ್ಪಡುವುದೂ ಇದೆ. ಕೆಲವೊಮ್ಮೆ ಬೇಗ ಆಗುವುದೂ ಇದೆ. ಬೇಗ ಆದರೆ ಮತ್ತೆ ಉಮೇದಿನಲ್ಲಿ ಖರೀದಿ ನಡೆದು ದರ ಏರಿಕೆಯಾಗುತ್ತದೆ.
ಚಾಲಿ ಅಡಿಕೆ ಮಾರುಕಟ್ಟೆ:
ಚಾಲಿ ಅಡಿಕೆಯ ಮಾರುಕಟ್ಟೆಯಲ್ಲೂ ಆಗಸ್ಟ್ ತಿಂಗಳಲ್ಲಿ ಸ್ವಲ್ಪ ಹಿನ್ನಡೆ ಉಂಟಾಗಿದೆ. ಆದರೆ ಅದು ದೊಡ್ಡದಲ್ಲ. ಹಾಗೆಂದು ಕಳೆದ ಮೂರು ನಾಲ್ಕು ತಿಂಗಳಿಂದ ಮಲಗಿದ್ದ ಹಳೆ ಅಡಿಕೆ ಧಾರಣೆ ಸ್ವಲ್ಪ ಏರಿಕೆಯಾಗಿದೆ. ಹೊಸತು ಕ್ವಿಂಟಾಲಿಗೆ 500 ರೂ. ನಷ್ಟು ಕಡಿಮೆಯಾಗಿದೆ. ಹೊಸತು ಮಾರುಕಟ್ಟೆಗೆ ಬರುವ ಪ್ರಮಾಣ ಕಡಿಮೆ. ಹಳತು ಸ್ವಲ್ಪ ಹೆಚ್ಚು ಇದೆ. ಬೆಳೆಗಾರರ ನಿರೀಕ್ಷೆ ಈ ವರ್ಷ 50000 ಆಗುತ್ತದೆ ಎಂಬುದು. ಹಾಗಾಗಿ ಮಾರುಕಟ್ಟೆಗೆ ಬರುವ ಪ್ರಮಾಣ ಕಡಿಮೆಯಾಗಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರಗಳಲ್ಲಿ ಸ್ವಲ್ಪ ಹೆಚ್ಚು ಆವಕ ಇದೆ. ಅಂದರೆ ಮಾರಾಟದ ಒತ್ತಡ ಕಾಣಿಸುತ್ತದೆ. ಕರಾವಳಿಯಲ್ಲಿ ಅಂತಹ ಮಾರಾಟದ ಒತ್ತಡ ಕಾಣಿಸುವುದಿಲ್ಲ. ಚಾಲಿ ಅಡಿಕೆಗೆ ಭಾರೀ ಸ್ಪರ್ಧೆ ಇಲ್ಲದ ಕಾರಣ ಈ ವರ್ಷವೂ ಸ್ವಲ್ಪ ದರ ಏರಿಕೆ ಆಗುವ ಸಾಧ್ಯತೆ ಇದೆ. ಮಂಗಳೂರು ಚಾಲಿ, ವಿಟ್ಲ ಚಾಲಿ ಎಂಬುದಕ್ಕೆ ಅದರದ್ದೇ ಆದ ಮಾರುಕಟ್ಟೆ ಇದೆ ಹಾಗಾಗಿ ಬೇಡಿಕೆ ಇಲ್ಲದಾಗುವುದಿಲ್ಲ. ಚಾಲಿ ಮಾರುಕಟ್ಟೆಯಲ್ಲಿ ಈಗ ಚೊಲ್ ಅಡಿಕೆಗೆ ಬೇಡಿಕೆ ಎಂಬುದು ಸ್ವಲ್ಪ ಬದಲಾದಂತಿದೆ. ಗ್ರಾಹಕರು ಯಾವುದು ಕಡಿಮೆ ದರಕ್ಕೆ ಸಿಗುವುದೋ ಅದನ್ನು ಆಯ್ಕೆ ಮಾಡುವ ಸ್ಥಿತಿ ಉಂಟಾಗಿದೆ.
ಉತ್ಪಾದನೆ ಕಡಿಮೆ ಇದೆ-ಅಡಿಕೆ ಕಡಿಮೆ ಇಲ್ಲ:
ಈ ವರ್ಷ ಕೆಲವು ಕಡೆ ಉತ್ಪಾದನೆ ತುಂಬಾ ಕಡಿಮೆ ಇದೆ. ಹಾಗೆಂದು ಮಾರುಕಟ್ಟೆಗೆ ಕೊರೆತೆಯಾಗುವಷ್ಟು ಅಡಿಕೆ ಕಡಿಮೆ ಇಲ್ಲ ಎನ್ನುತ್ತಾರೆ. ಕರಾವಳಿ ಯಲ್ಲಿ, ಮಲೆನಾಡಿನಲ್ಲಿ ಮಾತ್ರ ಚಾಲಿ ಮಾಡುವುದು. ಅದರಲ್ಲೂ ಕರಾವಳಿಯ ಉತ್ತಮ ಅಡಿಕೆ ಮತ್ತು ಸಿರ್ಸಿ, ಯಲ್ಲಾಪುರದ ಸ್ವಲ್ಪ ದೊಡ್ಡ ಗಾತ್ರದ ಅಡಿಕೆ ಮಾತ್ರ ಪಾನ್ ಬೀಡಾ ಉದ್ದೇಶದ ಬಳಕೆಕ್ಕೆ ಬಳಕೆಯಾಗುವಂತದ್ದು. ಇಲ್ಲೆಲ್ಲಾ ಬೆಳೆ ಕಡಿಮೆ ಇದ್ದರೂ ಬೆಳೆ ಪ್ರದೇಶ ವಿಸ್ತರಣೆ ಆಗಿ ಮಾರುಕಟ್ಟೆಗೆ ಕೊರೆತೆ ಆಗುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ಕೆಲವು ಬೆಳೆಗಾರರು. ಒಂದೆಡೆ ಕಚ್ಚಾ ಚಾಲಿ ಅಡಿಕೆಯ ಬಳಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದೆ, ಸಿದ್ದ ಪಾನ್ ಮಸಾಲಾಗಳತ್ತ ಜನ ಬದಲಾಗುತ್ತಿದ್ದಾರೆ ಎಂಬುದಾಗಿಯೂ ಹೇಳಿಕೆಗಳಿವೆ. ಇದೇ ಕಾರಣಕ್ಕೆ ಈಗ ಹೊಸ ಚಾಲಿ , ಹಳೆ ಚಾಲಿ, ಡಬ್ಬಲ್ ಚೋಲ್ ಎಂಬುದಕ್ಕೆ ಪ್ರಾಧಾನ್ಯತೆ ಕಡಿಮೆಯಾಗುತ್ತಿದೆ ಎನ್ನುವವರೂ ಇದ್ದಾರೆ. ಇವೆಲ್ಲದರ ನಿಖರ ಅಧ್ಯಯನ ಆಗಿಲ್ಲ. ಆದರೂ ಸುಲಭ ಮತ್ತು ಮಿತವ್ಯಯ ದೃಷ್ಟಿಯಿಂದ ನೋಡಿದರೆ ಪಾನ್ ಮಸಾಲ ( ಗುಟ್ಕಾ ಎಂಬ ಔದ್ಯಮಿಕ ಉತ್ಪನ್ನ) ಸೇವನೆ ಹೆಚ್ಚಿನವರಿಗೆ ಅನುಕೂಲವಂತೆ. ಈ ಕಾರಣದಿಂದ ಚಾಲಿ ಅಡಿಕೆಗೆ ಗರಿಷ್ಟ 50,000 ಕ್ಕಿಂತ ಹೆಚ್ಚಿನ ದರ ನಿರೀಕ್ಷೆ ಮಾಡುವಂತಿಲ್ಲ.ಆದಾಗ್ಯೂ ಕೆಲವು ದಿನಗಳ ಒಳಗೆ ತಾತ್ಕಾಲಿಕವಾಗಿ ಸ್ವಲ್ಪ ಮಾರುಕಟ್ಟೆ ಹಿಂಜರಿಕೆ ಆಗುವ ಸಾಧ್ಯತೆಯೂ ಇದೆ. ಆಗಸ್ಟ್ ತಿಂಗಳಲ್ಲಿ ಪೂರ್ತಿ ಬಿಸಿಲು ಇದ್ದ ಕಾರಣ ಅಡಿಕೆ ಬೇಗ ಹಣ್ಣಾಗುವ ಮುನ್ಸೂಚನೆ ಇದೆ. ಇದು ಕರಾವಳಿ ಮಾತ್ರವಲ್ಲ. ಮಲೆನಾಡಿನಲ್ಲೂ. ಈ ಸಮಯಕ್ಕೆ ಕೊಯಿಲಿಗೆ ಜನ ಸಿಗದ ಕಾರಣ (ದಾವಣಗೆರೆ, ಚಿತ್ರದುರ್ಗದ ಕೊಯಿಲು ಮುಗಿಯುವ ತನಕ ಜನರ ಅಭಾವ ಇರುತ್ತದೆ) ಚಾಲಿ ಉತ್ಪಾದನೆ ಈ ವರ್ಷವೂ ಹೆಚ್ಚಾಗುವ ಸಂಭವ ಇದೆ.
ಕರಿಮೆಣಸು ಇನ್ನೂ ಏರುವ ಸಾಧ್ಯತೆ ಇದೆ:
ಕೊಚ್ಚಿ ಮಾರುಕಟ್ಟೆಯಲ್ಲಿ ಕರಿಮೆಣಸಿನ ಧಾರಣೆ ಸ್ವಲ್ಪ ಏರಿದೆ. ಆಯದ ಮೆಣಸಿಗೆ 64,000, ಆಯ್ದ ಮೆಣಸಿಗೆ 66,000 ಇದೆ. ಇದು ಮಾರುಕಟ್ಟೆಯ ಸಹಜ ಬೇಡಿಕೆಯೇ ಆಗಿರುವ ಲಕ್ಷಣವಾಗಿದ್ದು, ಅಕ್ಟೋಬರ್ ತನಕವೂ ಸ್ವಲ್ಪ ಸ್ವಲ್ಪ ಏರಿಕೆ ಆಗಬಹುದು.
ರಬ್ಬರ್ ದರ ಇನ್ನೂ ಇಳಿಕೆ ಸಾಧ್ಯತೆ:
ರಬ್ಬರ್ ಮಾರುಕಟ್ಟೆ ಬಹಳ ಅಸ್ಥಿರವಾಗಿದ್ದು, ಏರಿಕೆ ಲಕ್ಷಣಗಳು ಕಾಣಿಸುತ್ತಿಲ್ಲ. ವಿದೇಶಗಳಿಂದ ಸ್ಕ್ರಾಪ್ ರಬ್ಬರ್ ಹೆಸರಿನಲ್ಲಿ ಉತ್ತಮ ರಬ್ಬರ್ ಆಮದು ಆಗುತ್ತಿದ್ದು, ದೇಶೀಯ ರಬ್ಬರ್ ಬೆಳೆಗಾರರಿಗೆ ಇದರಿಂದ ಬಹಳ ತೊಂದರೆ ಆಗಿದೆ.ಮಳೆ ಬಿಟ್ಟಿದೆ. ಟ್ಯಾಪಿಂಗ್ ಪ್ರಾರಂಭವಾಗಿದೆ. ಹಾಗಾಗಿ ಸ್ಥಳೀಯ ಉತ್ಪಾದನೆಯೂ ಹೆಚ್ಚಳವಾಗಲಿದೆ.
ಅಡಿಕೆ ಬೆಳೆಗಾರರು ಹಳತು ಮಾಡಿ ಇಟ್ಟುಕೊಂಡರೆ ದರ ಹೆಚ್ಚು ಸಿಗಬಹುದು ಎಂದು ಅದರ ಆಸೆಗೆ ಹೋಗುವುದು ಲಾಭದಾಯಕವಲ್ಲ. ಮಾರುಕಟ್ಟೆ ಏರಿಕೆ ಸ್ಥಿತಿಯಲ್ಲಿದ್ದಾಗ ಸ್ವಲ್ಪ ಸ್ವಲ್ಪ ಮಾರಾಟ ಮಾಡುತ್ತಾ ಇಳಿಕೆ ಗತಿಯಲ್ಲಿದ್ದಾಗ ಸುಮ್ಮನೆ ಇದ್ದರೆ ಲಾಭ. ಇಳಿದದ್ದು ಏರಿಕೆ ಆಗಲೇ ಬೇಕು. ಇಳಿಕೆ ಸಮಯದಲ್ಲಿ ಮಾರಾಟ ಮಾಡಿದರೆ ದರ ಮತ್ತೆ ಇಳಿಕೆಯಾಗುತ್ತದೆ. ಇಳಿಕೆ ಮಾಡುವುದೇ ಮಾರುಕಟ್ಟೆಗೆ ಹೆಚ್ಚು ಮಾಲು ಬರಲಿ ಎಂದು. ಅದಕ್ಕೆ ಬೆಳೆಗಾರರ ಸಹಕಾರ ಇಲ್ಲದಿದ್ದರೆ ಮತ್ತೆ ಬೇಗ ದರ ಏರಿಕೆಯಾಗುತ್ತದೆ.