ಎರೆಗೊಬ್ಬರ ಎಂದರೆ ಅದು ಸಂಪಧ್ಭರಿತ ಗೊಬ್ಬರ ಅಲ್ಲ. ಅದು ಒಂದು ಸಾವಯವ ವಸ್ತುಗಳನ್ನು ಹುಡಿ ಮಾಡಿದ ಮಿಶ್ರಣ ಅಷ್ಟೇ. ಇದು ಬೆಳೆಗೆ ದೊರೆಯಬೇಕಾದರೆ ಮಣ್ಣಿನಲ್ಲಿರುವ ಸ್ಥಳೀಯ ಎರೆಹುಳುಗಳು ಕೆಲಸ ಮಾಡಲೇ ಬೇಕು.
ಎರೆಹುಳ ಏನು?
- ಎರೆಹುಳು ಎಂಬ ದುಂಡು ಹುಳ (ಅನೆಲಿಡಾ) ಜಾತಿಗೆ ಸೇರಿದ ಜೀವಿಯು ಸಾವಯವ ತ್ಯಾಜ್ಯಗಳನ್ನು ರೂಪಾಂತರಿಸಿ ಕೊಡುತ್ತದೆ.
- ಇದನ್ನು ಬೆಳೆಗಳಿಗೆ ಗೊಬ್ಬರವಾಗಿ ಬಳಕೆ ಮಾಡಿದಾಗ ಅಧ್ಬುತ ಇಳುವರಿ ಬರುತ್ತದೆ, ಮಣ್ಣು ಶ್ರೀಮಂತವಾಗುತ್ತದೆ.
- ಸಾವಯವ ಕೃಷಿ ಎಂಬ ಅಹಿಂಸಾತ್ಮಕ ಕೃಷಿ ವಿಧಾನಕ್ಕೆ ಇದು ಒಂದು ಸರಳ ವಿಧಾನ ಎಂಬ ವಿಚಾರವನ್ನು ರೈತರ ಕಿವಿಗೆ ತುಂಬಿ ಅವರನ್ನು ಗೊಂದಲಕ್ಕೀಡುಮಾಡಲಾಗುತ್ತದೆ.
- ವಾಸ್ತವವಾಗಿ ಇದರಲ್ಲಿ ಅರ್ಧ ಸತ್ಯವಾದರೆ ಮತ್ತರ್ಧ ಉತ್ಪ್ರೇಕ್ಷೆ.
ಎರೆಹುಳು ಪ್ರಕಾರಗಳು:
- ಎರೆ ಹುಳುಗಳಲ್ಲಿ ಎರಡು ಪ್ರಕಾರಗಳು.
- ಸಾಕಣೆ ಮಾಡುತ್ತಿರುವ ಹುಳುಗಳು, ಸಾವಯವ ವಸ್ತುಗಳನ್ನು ಭಕ್ಷಿಸಿ ಹುಡಿ ಮಾಡಿ ಹಿಕ್ಕೆಯಾಗಿ ಹೊರ ಹಾಕುವವುಗಳು.
- ಇದನ್ನು Humus formers ಎಂದು ಕರೆಯುತ್ತಾರೆ.
- ಇದು ಭೂಮಿಯ ಮೇಲ್ಭಾಗದಲ್ಲಿ ವಾಸಿಸುತ್ತವೆ.
- ನಮ್ಮೆಲ್ಲರ ಹೊಲದಲ್ಲಿ ಕಾಣಸಿಗುವ ಇನ್ನೊಂದು ಭೂವಾಸಿ ಹುಳು ನೆಲದಲ್ಲಿ ಹುಡಿಯಾಗಿ ಹಿಕ್ಕೆಯಾದ ಸಾವಯವ ವಸ್ತುಗಳನ್ನು ಭಕ್ಷಿಸಿ ಅದನ್ನು ಮಣ್ಣಿನ ರೂಪಕ್ಕೆ ಪರಿವರ್ತಿಸಿ ಕೊಡುತ್ತವೆ.
- ಇವುಗಳನ್ನು Humus feeders ಎನ್ನುತ್ತಾರೆ.
- ಇವು ಮಣ್ಣಿನ ಮೇಲೂ ಆಳದಲ್ಲೂ ಮಣ್ಣಿನ ಸ್ಥಿತಿಗೆ ಅನುಗುಣವಾಗಿ ಸ್ಥಳ ಬದಲಾಯಿಸುತ್ತಾ ಇರುತ್ತದೆ.
- ಮಣ್ಣನ್ನಾಗಿ ಮಾಡಿಕೊಡುವ ಎರೆಹುಳು ಕೆನ್ನೆತ್ತರು ಬಣ್ಣದಲ್ಲಿರುತ್ತದೆ.
- ಸಾವಯವ ವಸ್ತುಗಳನ್ನು ಪುಡಿ ಮಾಡುವವು ತಿಳಿ ಕೆಂಪು ಬಣ್ಣದಲ್ಲಿರುತ್ತವೆ.
ವಿದೇಶೀ ಎರೆ ಹುಳು:
- ನಮ್ಮಲ್ಲಿ ಕೆಲವು ಬುದ್ಧಿ ಜೀವಿಗಳು ಎರೆಹುಳು ಗೊಬ್ಬರ ಎಂಬ ತಂತ್ರಜ್ಞಾನವನ್ನು ನಮ್ಮೆಲ್ಲರಿಗೂ ಪರಿಚಯಿಸಿದರು.
- ಇವರ ಪ್ರಕಾರ ನಮ್ಮ ನೆಲದಲ್ಲಿ ಸಹಸ್ರಮಾನಗಳಿಂದ ಮಣ್ಣಿನಲ್ಲಿ ವಾಸವಿದ್ದು ಅದು ಮಾಡಿದ ಕೆಲಸ ಬರೇ ನಗಣ್ಯ.
- ಅವರ ತಿಳುವಳಿಕೆಯ ಅಧ್ಯಾಯದಲ್ಲಿ ಭೂವಾಸಿ ಎರೆಹುಳುಗಳ ಸುದ್ದಿಯೇ ಇಲ್ಲ.
- ನಾಲ್ಕು ವಿಧದ ಎರೆ ಹುಳುಗಳು ಗೊಬ್ಬರ ತಯಾರಿಕೆಗೆ ಸೂಕ್ತವಾದವುಗಳು ಅವುಗಳಲ್ಲಿ ಯುಡ್ರಿಲಸ್ ಯುಜೆನೀ Eudrilus eugeniae ಎಂಬುದು ದಕ್ಷಿಣ ಆಫ್ರಿಕಾದಿಂದ ತರಲಾಗಿದೆ.
- ಅಯ್ಸೀನಿಯಾ ಪೊಟಿಡಾ Eisenia fetida ಇದು ಜರ್ಮನಿ ಮೂಲದ್ದೂ ಆಗಿದೆ.
- ಮತ್ತೆರಡು ಪೆರಿಯೋನಿಕ್ಸ್ ಎಕ್ಸ್‍ಕಾವೇಟಸ್ Perionyx excavatus ಮತ್ತು ಲ್ಯಾಂಪಿಟೋ ಮೌರಿಟ್ಟಿ Lampito mauritii ಇವು (ಹಿಮಾಲಯ ಮೂಲದ)ದೇಶಿಯ ಹುಳುಗಳು.
- ಇವು ಹೆಚ್ಚು ಆಹಾರವನ್ನು ಕಡಿಮೆ ಅವಧಿಯಲ್ಲಿ ಭಕ್ಷಿಸಿ ಹಿಕ್ಕೆಯಾಗಿ ಹೊರಹಾಕುತ್ತವೆ.
- ಸಾವಯವ ತ್ಯಾಜ್ಯಗಳನ್ನು ಹುಡಿ ಮಾಡಿ ಕೊಡಲು ಇವು ಸೂಕ್ತ ಎಂದು ವಿದೇಶೀ ಮೂಲದ ಎರೆಹುಳುಗಳನ್ನೇ ಅಧಿಕ ಪ್ರಮಾಣದಲ್ಲಿ ಎರೆ ಗೊಬ್ಬರ ತಯಾರಿಕೆಗಾಗಿ ಬಳಸಲಾಗುತ್ತದೆ.
ಎರೆ ಗೊಬ್ಬರದ ಬಗ್ಗೆ:
- ಎರೆಹುಳುಗಳು ಸಾವಯವ ವಸ್ತು ಭಕ್ಷಕಗಳು. ಅದನ್ನು ಅವು ತಿಂದು ಸ್ವಲ್ಪ ಪ್ರಮಾಣವನ್ನು ತಮ್ಮ ದೇಹ ಪೋಷಣೆಗಾಗಿ ಜೀರ್ಣಿಸಿಕೊಂಡು ಉಳಿದವುಗಳನ್ನು ಹಿಕ್ಕೆಯಾಗಿ ಹೊರ ಹಾಕುತ್ತವೆ.
- ಈ ರೀತಿ ಹೊರ ಹಾಕಿದ ಹಿಕ್ಕೆಗೆ ಎರೆಹುಳದ ಶರೀರದಿಂದ ಯಾವುದೇ ಹೆಚ್ಚುವರಿ ಬೆಳೆ ಪೋಷಕವಾಗಲೀ, ಪ್ರಚೋದಕವಾಗಲೀ ಸೇರ್ಪಡೆಗೊಳ್ಳುವುದಿಲ್ಲ.
- ಅದು ತಿಂಡಿಯಂತೆ ಲದ್ದಿ, ಸಂಗದಂತೆ ಬುದ್ದಿ ಎಂಬಂತೆ. ನಾವು ಹಾಕುವ ಆಹಾರ ವಸ್ತುಗಳಾದ ಸಗಣಿ, ಸೊಪ್ಪು ತರಗೆಲೆ, ಕಸ ಕಡ್ಡಿ, ಮತ್ತು ಇನ್ನಿತರ ಕಳಿಯಬಲ್ಲ ತ್ಯಾಜ್ಯಗಳಲ್ಲಿರುವ ಸಾರವೇ ಅದರಲ್ಲಿ ಸೇರಿರುತ್ತವೆ.
- ಅವು ನಾವು ತಯಾರಿಸುವ ಕೊಟ್ಟಿಗೆ ಗೊಬ್ಬರದಲ್ಲೂ ಇರುತ್ತವೆ. ಇದು ದೊಡ್ದ ಪ್ರಮಾಣದ ಅರ್ಧ ಕಳಿತ ಸಾವಯವ ವಸ್ತುಗಳನ್ನು ಬೇಗ ಹುಡಿ ಮಾಡಿಕೊಡುವ ಜೈವಿಕ ಯಂತ್ರಗಳು ಅಷ್ಟೇ.
ಹುಳುಗಳ ಶರೀರದಲ್ಲಿ ನಡೆಯುವುದೇನು:
- ಎರೆ ಹುಳುಗಳ ಶರೀರದಲ್ಲಿ ಅದಕ್ಕೆ ನೀಡಿದ ಸಾವಯವ ವಸ್ತುಗಳ ಚರ್ವಣ ಕ್ರಿಯೆ ನಡೆದು ಭೌತಿಕ ಬದಲಾವಣೆ ಮಾತ್ರವೇ ನಡೆಯುತ್ತದೆ.
- ಅದನ್ನು ಸಸ್ಯಗಳು ಹೀರಿಕೊಳ್ಳುವುದಿಲ್ಲ. ಸಸ್ಯ ಪೋಷಕವಾಗಿ ಪರಿವರ್ತನೆಯಾಗಲು ಅದು ಮತ್ತೆ ರೂಪಾಂತರ ಹೊಂದಬೇಕಾದರೆ,
- ಮಣ್ಣಿನಲ್ಲೇ ಇರುವ ಸ್ಥಳೀಯ ಮಣ್ಣಿನ ನಿವಾಸಿ ಎರೆಹುಳುಗಳು, ಬ್ಯಾಕ್ಟೀರಿಯಾಗಳು, ಶಿಲೀಂದ್ರಗಳು ಹಾಗೂ ಇನ್ನಿತರ ಭೂವಾಸಿ ಹುಳುಗಳ ಸಹಕಾರ ಅಗತ್ಯ.
- ಎರೆ ಗೊಬ್ಬರ ಎಂಬುದರ ಫಲಿತಾಂಶ ದೊರೆಯಲು ಭೂವಾಸೀ ಎರೆ ಹುಳುಗಳೇ ಬೇಕು.
- ಭೂವಾಸೀ ಎರೆಹುಳುಗಳಿಗೆ ಎರೆ ಗೊಬ್ಬರವೇ ಆಗಬೇಕೆಂದೇನೂ ಇಲ್ಲ. ಕಚ್ಚಾ ಕೊಟ್ಟಿಗೆ ಗೊಬ್ಬರ, ಕುರಿ, ಆಡು, ಕೋಳಿ ಗೊಬ್ಬರ, ಸಸ್ಯ ತ್ಯಾಜ್ಯ, ಸಸ್ಯ ಜನ್ಯ ಹಿಂಡಿಗಳೂ ಆಗುತ್ತವೆ.
- ಇವು ಜೀರ್ಣಿಸಿ ಹೊರ ಹಾಕುವ ಮಣ್ಣು ರೂಪದ ತ್ಯಾಜ್ಯ , ಜೈವಿಕವಾಗಿ ಸ್ವಲ್ಪವಾದರೂ ಉತ್ಕೃಷ್ಟ.
ಗೊಬ್ಬರವನ್ನು ಕೊಡದೇ ಬೆಳೆಯುವ ಬೆಳೆಗಿಂತ ಎರೆ ಗೊಬ್ಬರ ಕೊಟ್ಟು ಬೆಳೆದ ಬೆಳೆಯಲ್ಲಿ ಇಳುವರಿ ಅಧಿಕ ಬಂದರೆ ಅಚ್ಚರಿ ಇಲ್ಲ.
end of the article:——————————————————————————————————
search words: falsehood of Wormi compost # indigenous worms# soil born worms #soil conditioner worms# soil # humus feeder worms#