ಗೊಬ್ಬರ ಮಾಡಿಕೊಡುವ ನೈಜ ಎರೆಹುಳು ಯಾವುದು ಗೊತ್ತೇ?

ಗೊಬ್ಬರ ಮಾಡಿಕೊಡುವ ನೈಜ ಎರೆಹುಳು

ವಿದೇಶೀ ಪ್ರವರ್ಗದ ಎರೆಹುಳುಗಳಿಂದ  ತಯಾರಿಸಿದ ಮಾರಾಟಕ್ಕೆ ಲಭ್ಯವಿರುವ ಎರೆ ಗೊಬ್ಬರ ಬಳಸಿದರೆ  ಅದ್ಭುತ ಇಳುವರಿ ಎಂದೆಲ್ಲಾ ಪ್ರಚಾರದ ಹಿಂದೆ ಸಾಕಷ್ಟು ಉತ್ಪೇಕ್ಷೆಗಳು ಇವೆ. ವಿದೇಶೀ ಎರೆಹುಳುಗಳು ಸಾವಯವ ವಸ್ತುಗಳನ್ನು ಪುಡಿ ಮಾಡಿಕೊಡುವ ಒಂದು ಜೀವಿಗಳು ಎಂಬುದಾಗಿ ಹೇಳಲ್ಪಟ್ಟಿದೆ. ನಮ್ಮೆಲ್ಲರ ಹೊಲದಲ್ಲಿ  ಇರುವ ಎರೆಹುಳುಗಳ ಕೆಲಸಕ್ಕೆ ಅವು ಸಹಕರಿಸುವ ಜೀವಿಗಳು ಅಷ್ಟೇ. ಮಣ್ಣಿನಲ್ಲಿ ಕೆಲಸ ಮಾಡಿ ಸಸ್ಯ ಬೆಳವಣಿಗೆ ಮತ್ತು ಮಣ್ಣಿನ ಸುಧಾರಣೆ ಮಾಡುವವುಗಳು  ಮಣ್ಣು ಜನ್ಯ ಎರೆ ಹುಳುಗಳು ಮಾತ್ರ.

  • ಎರೆಹುಳು ಗೊಬ್ಬರ ಬಳಸಿದರೆ ಹಾಗಾಗುತ್ತದೆ , ಹೀಗಾಗುತ್ತದೆ ಎಂದೆಲ್ಲಾ ಹೇಳಿ ಚೀಲದಲ್ಲಿ ತುಂಬಿ ಮಾರಾಟ ಮಾಡುವ  ಗೊಬ್ಬರ ಕೆಲಸ ಮಾಡಬೇಕಾದರೆ ಮಣ್ಣು ಜನ್ಯ (Humus feeders) ಎರೆಹುಳುಗಳು ಅಗತ್ಯವಾಗಿ ಬೇಕು.
  • ವಿದೇಶದ ಈ ಎರೆಹುಳುಗಳು ಸಾವಯವ ತ್ಯಾಜ್ಯವನ್ನು ಬರೇ ಹುಡಿ ಮಾಡುವ (Humus formers) ಕೆಲಸ ಮಾಡುವಂತವುಗಳು.
  •  ಆಧುನಿಕ ಎರೆಹುಳು ಗೊಬ್ಬರ ಎಂದರೆ ಅದು ನೇರವಾಗಿ ತಿನ್ನುವುದನ್ನು ಸುತ್ತು ಬಳಸಿ ತಿನ್ನುವುದು ಎಂದೇ ಹೇಳಬಹುದು.
  • ಎರೆ ಗೊಬ್ಬರವು ಕೇವಲ ನಾವು  ನೀಡಿದ ಸೇಂದ್ರೀಯ ವಸ್ತುಗಳೆಲ್ಲದರ ಹುಡಿ ರೂಪ ಅಷ್ಟೇ.
ನಮ್ಮೆಲ್ಲರ ಹೊಲದಲ್ಲಿ ಇರುವ ಎರೆಹುಳು.Humus feeder worms
ನಮ್ಮೆಲ್ಲರ ಹೊಲದಲ್ಲಿ ಇರುವ ಎರೆಹುಳು ಇದರ ಬಣ್ಣ ಸ್ವಲ್ಪ ಕಪ್ಪು.

ನಿಜವಾಗಿ  ಗೊಬ್ಬರ ಅಥವಾ ಮಣ್ಣಿಗೆ ಸಾರವನ್ನು ಒದಗಿಸಿಕೊಡುವ ಜೀವಿಗಳು ಮಣ್ಣು ಜನ್ಯ ಎರೆಹುಳುಗಳು. ಅವು ಪ್ರತೀಯೊಬ್ಬರ ಹೊಲದ ಮಣ್ಣಿನಲ್ಲೂ ಇರುತ್ತವೆ.  ಇವು  ಮಾಡುವ ಕೆಲಸ ಅಪರಿಮಿತ. ನೆಲದಲ್ಲಿ ತೇವಾಂಶ ಇದ್ದಾಗ ನೆಲದ ಮೇಲೆ ಬರುತ್ತವೆ. ಸಾವಯವ ವಸ್ತುಗಳು ದೊರೆತಾಗ ಹೆಚ್ಚು ಹೆಚ್ಚು ಸಂಖ್ಯಾಭಿವೃದ್ದಿಯಾಗುತ್ತವೆ. ಆಹಾರ ಸಿಕ್ಕಿದಷ್ಟೂ ಅವು ಹೆಚ್ಚು ಹೆಚ್ಚು ಚಟುವಟಿಕೆಯಲ್ಲಿರುತ್ತವೆ. ನೆಲದ ಉಳುಮೆಗಾರ ಜೀವಿ ಎಂದರೆ ಇದು.

ನಡೆಯುತ್ತಿರುವುದು ಏನು?

  • ಖರೀದಿಸಿ ತಂದದ್ದನ್ನು ಜಾಗರೂಕತೆಯಲ್ಲಿ ಬಳಸಿದಂತೇ, ಖರ್ಚು ಮಾಡಿ ವ್ಯವಸ್ಥಿತವಾಗಿ ಮಾಡುವ ಎರೆ ಗೊಬ್ಬರದಲ್ಲಿ ಉತ್ತಮ ಪೋಷಕಗಳು ಇರಬಹುದು.
  • ಆದರೆ ನಮ್ಮಲೇ ಇರುವ ಕೊಟ್ಟಿಗೆ ಗೊಬ್ಬರ ಉಚಿತವಾದ ಕಾರಣ ನಮಗೆ ಅದರ ಮಹತ್ವ ಗೊತ್ತಾಗುವುದಿಲ್ಲ.
  • ಕೊಟ್ಟಿಗೆ ಗೊಬ್ಬರವನ್ನೂ ಎರೆಗೊಬ್ಬರದಂತೇ  ಹೆಚ್ಚು ನಿಗಾದಲ್ಲಿ ತಯಾರಿಸಿ ಬೆಳೆಗಳಿಗೆ ಬಳಸಿದರೆ ಎರೆಗೊಬ್ಬರ ನೀಡಿದ ಪರಿಣಾಮವನ್ನು ಅದೂ ನೀಡುತ್ತದೆ.
  • ಇದು ಮಣ್ಣಿನ ನಿವಾಸೀ ಎರೆ ಹುಳುಗಳ ಅಭಿವೃದ್ದಿಗೆ ಉತ್ತಮವಾಗಿ ಸಹಕರಿಸುತ್ತವೆ.

ಖರ್ಚಿಲ್ಲದ ಎರೆಹುಳು ಸಾಕಣೆ:

ಎರೆಹುಳು ಗೊಬ್ಬರ ಕಡಿಮೆ ಖರ್ಚಿನಲ್ಲಿ ಆಗಬೇಕಾದರೆ ಹುಡಿಯಾದ ಕೊಟ್ಟಿಗೆ ಗೊಬ್ಬರವನ್ನು ಹೊಲದಲ್ಲಿ ರಾಶಿ ಹಾಕಿ. ಅಥವಾ ಕುರಿ, ಮೇಕೆ ಹಿಕ್ಕೆಯನ್ನು ರಾಶಿ ಹಾಕಿ. ಅದಕ್ಕೆ ತೇವಾಂಶ ಸೇರಲಿ. ಒಂದೆರಡು ವಾರದಲ್ಲಿ ಅಲ್ಲಿಗೆ ಎರೆಹುಳುಗಳು ಬಂದು ಸೇರುತ್ತವೆ.ಮತ್ತೆ ಒಂದೆರಡು ವಾರದಲ್ಲಿ ಅಲ್ಲೇ ಎರೆಗೊಬ್ಬರ ಸಿದ್ಧವಾಗುತ್ತದೆ. ಇದು ಕಣ್ಣಿಗೆ ಕಾಣುವ ಎರೆಗೊಬ್ಬರ ಅಲ್ಲದೆ ಇರಬಹುದು. ಆದರೆ ಅದು ಸಂಪೂರ್ಣವಾಗಿ ಬೆಳೆಗಳು ಸ್ವೀಕರಿಸುವ ಸ್ಥಿತಿಯ ಎರೆ ಗೊಬ್ಬರ ಆಗಿರುತ್ತದೆ.

  • ಎರೆ ಹುಳುವನ್ನು ಸಾಕಿ ಗೊಬ್ಬರ ಮಾಡುವುದಕ್ಕೆ ಶ್ರಮ ಹಾಗೂ ಖರ್ಚು ಅಧಿಕ. ಆದರೆ ಮಣ್ಣಿನಲ್ಲೇ ಎರೆ ಹುಳುಗಳನ್ನು  ಅಭಿವೃದ್ದಿಪಡಿಸಲು ಖರ್ಚು ಇಲ್ಲ.
  • ಸಾವಯವ ವಸ್ತುಗಳನ್ನು ಒಂದೆಡೆಯಿಂದ ತಂದು ಮತ್ತೊಂದೆಡೆ ಎರೆ ಹುಳುಗಳಿಗೆ ಹಾಕಿ, ರಕ್ಷಿಸಿ ಅಲ್ಲಿ ತಯಾರಾದ ಹುಡಿ ಹಿಕ್ಕೆಯನ್ನು ಮತ್ತೆ ಬೆಳೆಗಳಿಗೆ ಬಳಸುವುದರ ಬದಲು ನೇರವಾಗಿ ಬೆಳೆಗಳ ಬುಡಕ್ಕೇ ಬಳಸಿದರೆ ಸಾಕಷ್ಟು ಶ್ರಮ ಉಳಿತಾಯವಾಗುತ್ತದೆ.
  • ಎರೆ ಹುಳು ಹಿಕ್ಕೆಯಲ್ಲಿ ಸಾಕಷ್ಟು ಅರ್ಧ್ರತೆ ಇರುತ್ತದೆ.
  • ಆ ಕಾರಣ ಅದರಲ್ಲಿ ಸೂಕ್ಷ್ಮ ಜೀವಿಗಳು ಸಾಕಷ್ಟು ಬೆಳೆದಿರುತ್ತವೆ.
  • ಅದು ಗೊಬ್ಬರವನ್ನು ಕಳಿಯುವಂತೆ ಮಾಡುವುದರಿಂದ ಕೆಲವು ಪೋಷಕಗಳು ವಿಮೋಚನೆಗೊಂಡು ಸಸ್ಯಗಳಿಗೆ ದೊರೆಯುತ್ತದೆ.
  • ಅದನ್ನು ನಾವು ಬೆಳೆಗಳ ಬುಡದಲ್ಲೇ ಮಾಡಲು ಕಷ್ಟವಿಲ್ಲ.
  • ಎರೆ ಜಲವೆಂದರೆ ಅದು ಅದರ ಮೂತ್ರವಲ್ಲ. ಅದು ಕಳಿತ, ಕಳಿಯಲಿರುವ  ವಸ್ತುಗಳಲ್ಲಿನ ಹೆಚ್ಚುವರಿ ನೀರು.
  • ಇದು ಹಿಕ್ಕೆಯುಳ್ಳ ತೊಟ್ಟಿಗೆ ಅಗತ್ಯ ತೇವಾಂಶ ಸಂರಕ್ಷಣೆಗಾಗಿ ಹಾಕಿದ ಹೆಚ್ಚುವರಿ ನೀರು ಡಿಕಾಕ್ಷನ್ ಆಗಿ ಬಂದಿರಬಹುದು.
ನಮ್ಮೆಲ್ಲರ ಹೊಲದಲ್ಲಿ ಇರುವ ಎರೆಹುಳು ಹೀಗೆ ಗೊಬ್ಬರ ಮಾಡಿಕೊಡುತ್ತವೆ.Humus feedr worms make this type of manure
ನಮ್ಮೆಲ್ಲರ ಹೊಲದಲ್ಲಿ ಇರುವ ಎರೆಹುಳು ಹೀಗೆ ಗೊಬ್ಬರ ಮಾಡಿಕೊಡುತ್ತವೆ

ಕೊಂಡು ತರುವ ಎರೆ ಗೊಬ್ಬರ:

  • ಕೊಂಡು ತರುವ ಎರೆ ಗೊಬ್ಬರವು ಒಂದು ರೀತಿಯಲ್ಲಿ ಹೆಡ್ಡತನವೆಂದೇ ಹೇಳಬಹುದು.
  • ಎರೆ ಹುಳುಗಳಿಗೆ ಸಾವಯವ ವಸ್ತುಗಳನ್ನು ಪೂರೈಸುವುದು, ಅಲ್ಲಿ ಅದಕ್ಕೆ ರಕ್ಷಣೆ, ನಿರ್ವಹಣೆ ಮಾಡಿ ಉತ್ಪಾದನೆಯಾಗುವ ಎರೆ ಗೊಬ್ಬರಕ್ಕೆ ಲೆಕ್ಕಾಚಾರ ಹಾಕಿದರೆ  ಕಿಲೋಗೆ  ಕನಿಷ್ಟ 20 ರೂ. ಖರ್ಚು ತಗಲುತ್ತದೆ.
  • ಅಂತದ್ದನ್ನು 7-10 ರೂ. ಗಳಿಗೆ ಮಾರಾಟಮಾಡಲಾಗುತ್ತಿದೆ.
  • ಇದು ನೈಜ ಎರೆ ಗೊಬ್ಬರವಾಗಿರಲು ಸಾಧ್ಯವಿಲ್ಲ.
  • ನಮ್ಮಲ್ಲಿ ಕೊಟ್ಟಿಗೆ ಗೊಬ್ಬರಕ್ಕಿಂತ ಎರೆ ಗೊಬ್ಬರದಲ್ಲಿ ಸತ್ವಾಂಶಗಳು ಅಧಿಕ ಎಂಬ ಭ್ರಮೆ ಇದೆ.
  • ಆ ಭ್ರಮೆಯಿಂದ  ತುಲನೆ ಮಾಡದೇ ಇದೇ ಉತ್ತಮ ಎಂಬ ತೀರ್ಮಾನಕ್ಕೆ  ಬರುವುದನ್ನು ಕಾಣಬಹುದು.
  • ಕೊಂಡು ತರುವ ಎರೆ ಗೊಬ್ಬರದಲ್ಲಿ ರೋಗ ಕಾರಕ ಜೀವಿಗಳು ಮತ್ತು ಮಣ್ಣಿಗೆ  ಹಾನಿಯನ್ನು ಉಂಟು ಮಾಡುವ ವಸ್ತುಗಳೂ ಸೇರಿರುವ ಸಾಧ್ಯತೆ ಇರುತ್ತದೆ.
  • ಎರೆ ಹುಳುಗಳು ತಾವು ತಿಂದು ಜೀರ್ಣಿಸಿ ಹೊರ ಹಾಕುವ ಜಿನುಗು ಪುಡಿಯನ್ನು ತಮ್ಮ ಶರೀರದಲ್ಲಿ ಶುದ್ಧೀಕರಿಸಲಾರವು.

ಆಳವಾದ ಅಧ್ಯಯನ ಆಗಿಲ್ಲ:

ವಿದೇಶಿ ಎರೆಹುಳುಗಳು,ಇವು ಸಾವಯವ ವಸ್ತುಗಳನ್ನು ಹುಡಿ ಮಾಡಿಕೊಡುವವುಗಳು.Humus former make only powdering of organic matter.
ವಿದೇಶಿ ಎರೆಹುಳುಗಳು,ಇವು ಸಾವಯವ ವಸ್ತುಗಳನ್ನು ಹುಡಿ ಮಾಡಿಕೊಡುವವುಗಳು. ಇವುಗಳ ಬಣ್ಣ ಕೆಂಪು.
  • ಎರೆಗೊಬ್ಬರ ಮತ್ತು ಅದರಲ್ಲಿರುವ ಪೋಷಕಗಳ ಕುರಿತಂತೆ ಆಳವಾದ ಸಂಶೋಧನೆಗಳು ನಡೆದಿಲ್ಲ.
  • ಕೆಲವು ಪೋಷಕಗಳು ಇರುವಿಕೆಯ ಬಗ್ಗೆ ಹೇಳಲಾಗುತ್ತಿದೆಯಾದರೂ ಅದು ಹುಳುಗಳಿಗೆ ನೀಡಿದ ಆಹಾರದ ಮೇಲೆಯೇ ಅವಲಂಭಿತವಾಗಿದೆ.
  • ಮಣ್ಣಿನ ಗುಣ ಧರ್ಮ  ಉತ್ತಮವಾಗಿ ಮಣ್ಣು ಫಲವತ್ತಾಗಲು  ಸ್ಥಾನೀಯ ಎರೆಹುಳುಗಳೇ ಪ್ರಧಾನ ಪಾತ್ರಧಾರಿಗಳಾದ ಕಾರಣ ಅವುಗಳ ಅಭಿವೃದ್ದಿಗೆ ಬೇಕಾದ ಬೇಸಾಯ ಕ್ರಮಗಳನ್ನು ಅನುಸರಿಸುವುದು ಉಚಿತ.
  • ವಿದೇಶೀ ಹುಳುಗಳನ್ನು  ಬಳಸಿದರೆ ಧೀರ್ಘಾವಧಿಯಲ್ಲಿ  ಆಗಬಹುದಾದ ಪರಿಣಾಮ ಗೊತ್ತಿಲ್ಲ!
  • ಇಷ್ಟಕ್ಕೂ ಈ ತಂತ್ರಜ್ಞಾನವನ್ನು ಪರಿಚಯಿಸಿದವರು ಯಾವುದೋ ವ್ಯವಹಾರ ಧಂಧೆಯ ಹಿಂದೆ ಹೋಗಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ರೈತರು ಶ್ರಮಪಟ್ಟು ಎರೆ ಗೊಬ್ಬರ ತಯಾರಿಸುವ ಬದಲು  ತಮ್ಮ ಕಾಂಪೋಸ್ಟನ್ನೇ ಎರೆ ಗೊಬ್ಬರವನ್ನಾಗಿ ಮಾಡುವುದು  ಉತ್ತಮ.  ಸಮೃದ್ದ ಸಾವಯವ ವಸ್ತುಗಳಿಗೆ 60 % ತೇವಾಂಶ ಒದಗಿಸಿ,  ಹೊಲದಲ್ಲೇ ಒಣಗದಂತೆ ಗುಪ್ಪೆ ಹಾಕಿದರೆ ಅದರಲ್ಲೇ ಸಾಕಷ್ಟು ಎರೆಹುಳು ಉತ್ಪತ್ತಿಯಾಗುತ್ತದೆ. ಮಣ್ಣು ಜನ್ಯವಾದ ಎರೆಹುಳು ಮಾತ್ರ ಸಾವಯವ ವಸ್ತುಗಳನ್ನು ಭಕ್ಷಿಸಿ 90 % ಎರೆ ಮಣ್ಣುಮಾಡಿಕೊಡುವ ಜೀವಿಗಳು. ಅದು ಮಣ್ಣಿನಲ್ಲೇ ಇದ್ದು ಹೊರಗೆ ಮತ್ತು ಒಳಗೆ ಸಂಚರಿಸುತ್ತಿರುತ್ತದೆ.ಇದು ಧೀರ್ಘಕಾಲಿಕ ಎರೆಹುಳು ಸಂಖ್ಯೆ ವೃದ್ದಿಸುವ ಮಾರ್ಗೋಪಾಯ.

ಎಲ್ಲಿಗೆ ಅಗತ್ಯ:

  • ಸಾರ್ವಜನಿಕ ವಲಯಗಳಲ್ಲಿ , ಕೃಷಿ ಉದ್ದಿಮೆಗಳ ಸಾವಯವ ತ್ಯಾಜ್ಯ ವಿಲೇವಾರಿಗೆ ಎರೆಹುಳು ಗೊಬ್ಬರ ತಯಾರಿಕೆ ಒಂದು ತ್ಯಾಜ್ಯ ನಿರ್ವಹಣಾ ತಾಂತ್ರಿಕತೆಯೇ ಹೊರತು ರೈತರ ಹೊಲಕ್ಕೆ ಅಲ್ಲ.
  • ಆದ ಕಾರಣ ಗೊಬ್ಬರವಾಗಿ ಎರೆಹುಳು ಗೊಬ್ಬರ ಬಳಸುವ ಬದಲು ನಿಮ್ಮಲ್ಲಿರುವ ಸಾವಯವ ತ್ಯಾಜ್ಯಗಳನ್ನು ಮಣ್ಣಿನಲ್ಲಿ ಸೇರಿಸಿ ಅಲ್ಲೇ ಇರುವ ಎರೆಹುಳುಗಳ ಸಂಖ್ಯಾಭಿವೃದ್ದಿಗೆ ಅನುಕೂಲ ಮಾಡಿ ಕೊಡಿ.
  • ಅದೇ ನಿಜವಾದ ಎರೆಹುಳು ಗೊಬ್ಬರ ಘಟಕ.
ಸಾಕುವ ಎರೆಹುಳುಗಳು ತಿಂದು ಸಾವಯವ ವಸ್ತುಗಳು ಹುಡಿಯಾದ ರೂಪ. Humus former made powdered of organic matter.
ಸಾಕುವ ಎರೆಹುಳುಗಳು ತಿಂದು ಸಾವಯವ ವಸ್ತುಗಳು ಹುಡಿಯಾದ ರೂಪ

ವಿದೇಶಿ ಎರೆಹುಳುಗಳನ್ನು ಸಾಕಿ. ನಿಮ್ಮ ಗೊಬ್ಬರದ ರಾಶಿಗೆ ಅದನ್ನು ಬಿಡಿ. ಅದು ನಿಮ್ಮಲ್ಲೇ ಗೊಬ್ಬರ ಮಾಡಿಕೊಡಲಿ. ಆದರೆ ಎರೆ ಗೊಬ್ಬರ ಎಂದು ಕೊಡು ತರುವ ಕೆಲಸಕ್ಕೆ ಹೋಗಬೇಡಿ.

ಸತ್ಯ  ಮರೆಮಾಚಲಾಗುತ್ತಿದೆ:

ರಾಸಾಯನಿಕ ಗೊಬ್ಬರದ ಬಳಕೆ ಅತಿಯಾದ ಕಾರಣ ಮಣ್ಣಿನಲ್ಲಿ ಎರೆಹುಳುಗಳು ಸತ್ತು ಹೋಗಿ ಜೀವ ಕಳೆದುಕೊಂಡಿದೆ ಎಂಬುದಾಗಿ ಕೆಲವು  ಬುದ್ಧಿಜೀವಿಗಳು ಹೇಳಿಕೆ ಕೊಡುತ್ತಾರೆ.

  • ಕೆಲವು ಜನ ಅದನ್ನು ನಂಬಿ ಅವರ ಬೆಂಬಲಿಗಳಾಗುತ್ತಾರೆ.
  • ವಾಸ್ತವವಾಗಿ ಎರೆ ಹುಳುಗಳ ಶರೀರಕ್ಕೆ ರಸಗೊಬ್ಬರ ತಗಲಿದರೆ  ಮಾತ್ರ ಆ ಹುಳುವಿನ ಶರೀಕ್ಕೆ ಸುಡು ಗಾಯವಾಗಬಹುದು ಇಲ್ಲವೇ ಸಾಯಲೂ ಬಹುದು.
  • ಆದರೆ ರಸಗೊಬ್ಬರಗಳನ್ನು ಮಣ್ಣಿಗೆ ಸೇರಿ ಅದು ಕರಗಿದ ತರುವಾಯ ಅದು ಎರೆಹುಳುಗಳಿಗೆ ಯಾವ ಹಾನಿಯನ್ನೂ ಮಾಡುವುದಿಲ್ಲ.
  • ಒಂದು ವೇಳೆ ಅದು ಅವುಗಳಿಗೆ ಕಿರುಕುಳದಾಯಕವೆಂದು ಕಂಡಾಗ ಅವು ಸ್ವಾಭಾವಿಕವಾಗಿ ಸ್ವಲ್ಪ ಆಳಕ್ಕೆ ಅಥವಾ ದೂರಕ್ಕೆ ಹೋಗುತ್ತವೆ.
  • ಅವು ಸಾಯುವುದಿಲ್ಲ. ವಿಷ ರಾಸಾಯನಿಕ ಕೀಟನಾಶಕಗಳನ್ನು ಮಣ್ಣಿಗೆ ಡ್ರೆಂಚಿಂಗ್ ಮಾಡಿದಾಗ ಎರೆಹುಳುಗಳು ಸಾಯುವ ಸಾಧ್ಯತೆ ಇದೆ.

ಭೂವಾಸಿ ಎರೆಹುಳುಗಳು ಮಳೆಗಾಲದಲ್ಲಿ ಮಣ್ಣಿನ ಮೇಲುಭಾಗದಲ್ಲೇ ಇರುತ್ತವೆ. ಬೇಸಿಗೆಯಲ್ಲಿ ತೇವಾಂಶ ಅರಸಿ ತಳಕ್ಕೆ ಇಳಿಯುತ್ತವೆ. ಸಾಕಷ್ಟು ತೇವಾಂಶ ಇದ್ದಾಗ  ಅವು ಮೇಲು ಭಾಗದಲ್ಲೇ ಇದ್ದು ಸಾವಯವ ವಸ್ತುಗಳನ್ನು ಕಳಿಯಿಸಿ ಕೊಡುತ್ತವೆ.  ಬೂವಾಸೀ ಎರೆಹುಳುಗಳಿಲ್ಲದೆ ಮಣ್ಣಿನ ಜೈವಿಕ ಕ್ರಿಯೆ ನಡೆಯಲಾರದು.

Leave a Reply

Your email address will not be published. Required fields are marked *

error: Content is protected !!