ಈ ಸಸ್ಯಗಳಲ್ಲಿ ವಿಶೇಷ ಗುಣಗಳು ಇವೆ.

ಕಳೆ ಸಸ್ಯಗಳೆಂದು ನಾವು ನಿರ್ಲಕ್ಷ್ಯ ಮಾಡುವ ಕೆಲವು ಸಸ್ಯಗಳು ಮಣ್ಣೀನ ಫಲವತ್ತತೆ  ಹೆಚ್ಚಿಸಲು ಸಹಕಾರಿ. ಅವುಗಳಲ್ಲಿ ಒಂದು ಕ್ರೊಟಲೇರಿಯಾ ಜಾತಿಯ ಸಸ್ಯ.

ಸಸ್ಯಗಳು ಮತ್ತು ಮಣ್ಣು:

  •  ಅಲ್ಪಾವಧಿಯ ಸಸ್ಯಗಳಾದ ಇವುಗಳನ್ನು ಹೊಲದಲ್ಲಿ ಬೆಳೆಯುವುದರಿಂದ ಮಣ್ಣಿನ ಭೌತಿಕ ಮತ್ತು ಜೈವಿಕ ರಚನೆ ಅಭಿವೃದ್ದಿಯಾಗುತ್ತದೆ.
  • ಇಂತವುಗಳು  ನಮ್ಮ ಸುತ್ತಮುತ್ತ ಹಲವಾರು ಇವೆ. ಯಾವುದು ದ್ವಿದಳ ಕಾಳುಗಳನ್ನು ಕೊಡುವ ಸಸ್ಯಗಳಿವೆಯೋ ಅವೆಲ್ಲಾ ಪೋಷಕಾಂಶ ಕೊಡುವ ಸಸ್ಯಗಳು. 
  • ಮಣ್ಣು  ಈ ತನಕ ಜೀವಂತವಾಗಿ ಉಳಿದುಕೊಂಡು ಬಂದುದು ಅದರಲ್ಲಿ ಆಶ್ರಯಿಸಿರುವ ಸೂಕ್ಷ್ಮ ಜೀವಿಗಳು, ಸಸ್ಯಗಳು ಕ್ರಿಮಿಕೀಟಗಳು ಹಾಗೂ ಪ್ರಾಣಿಗಳಿಂದ. ಇವೆಲವೂ ಸೇರಿ ಮಣ್ಣಿನ ರಚನೆಯನ್ನು ಸುಧಾರಿಸುತ್ತಾ ಬಂದಿವೆ.
  • ಮಣ್ಣಿನಲ್ಲಿ ಇವೆಲ್ಲಾ ಒಂದಲ್ಲ ಒಂದು ದಿನ ವಿಲೀನವಾಗಿ ಮಣ್ಣಿಗೆ ತಮ್ಮ ಕೊಡುಗೆ ಕೊಡುತ್ತವೆ.  
  • ಮಾನವರಾದ ನಾವು ತಮ್ಮ ಹೊಟ್ಟೆಪಾಡಿಗಾಗಿ ಬೆಳೆಗಳನ್ನು  ಬೆಳೆಯುವಾಗ ಮಣ್ಣಿನಲ್ಲಿ ಸಂಗ್ರಹವಾಗಿರುವ ಒಂದಷ್ಟು ಪೋಷಕಾಂಶಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ. 
  • ವಿವಿಧ ಕೊಚ್ಚಣೆಗಳಿಂದಲೂ ಸಾಕಷ್ಟು ಪೋಷಕಾಂಶಗಳು ಬರಿದಾಗುತ್ತವೆ.
  • ಮಣ್ಣಿನಲ್ಲಿ  ಬಹುತೇಕ ಪೋಷಕಾಂಶಗಳು ಸುಮಾರು 1/2  ದಿಂದ 1 ಅಡಿ ತನಕದ ಮೇಲುಮಣ್ಣಿನಲ್ಲಿ ಮಾತ್ರ ಇರುತ್ತವೆ.
  • ಅವುಗಳು ಬೇರೆ ಬೇರೆ ರೀತಿಯಲ್ಲಿ ಖಾಲಿಯಾಗುವುದನ್ನು ಮರಳಿ ತುಂಬಲು ಪರಿಸರ ಅದಕ್ಕೆಂದೇ ಕೆಲವು ವ್ಯವಸ್ಥೆಗಳನ್ನು ಹೊಂದಿದೆ.
  • ಅದುವೇ ಭೂಮಿಯ ಮೇಲೆ ಸಸ್ಯಗಳು. ಇವು ಪೋಷಕಾಂಶಗಳನ್ನು ಹೆಚ್ಚಿಸಿಕೊಡುತ್ತವೆ.

ವಾತಾವರಣದಿಂದ ಪೋಷಕಾಂಶ:

  • ಮಳೆ ಹಾಗೂ ಹಿಮ ನೆಲಕ್ಕೆ ಬೀಳುವಾಗ ತಮ್ಮೊಡನೆ ವಾತಾವರಣದಲ್ಲಿನ ಅಮೋನಿಯಾ ಮತ್ತು ನೈಟ್ರೇಟುಗಳನ್ನು  ಭೂಮಿಗೆ ತರುತ್ತವೆ.
  • ಮಿಂಚುಗಳಿಂದ ಆಕಾಶದಲ್ಲಿ ನೈಟ್ರೇಟ್ ಲವಣಗಳಾಗಿ ಅವು ಮಳೆಯೊಂದಿಗೆ  ಭೂಮಿಯನ್ನು ತಲುಪುತ್ತದೆ.
  • ಮಳೆಯಿಂದ ಒಂದು ಎಕ್ರೆ  ಭೂಮಿಗೆ 1-70 ಪೌಂಡ್ ಸಾರಜನಕ ದೊರೆಯುತ್ತದೆ.
  • ಅದಕ್ಕಾಗಿಯೇ ನಮ್ಮ ಹಿರಿಯರು ಮಿಂಚು, ಸಿಡಿಲು ಹೆಚ್ಚು ಬಂದ ವರ್ಷ ಫಸಲು ಹೆಚ್ಚುತ್ತದೆ ಎಂದು ಹೇಳುವುದು.

ಇದೆಲ್ಲವೂ ಪ್ರಕೃತಿ ಕೊಡುವ ವರ. ಆದರೆ ಮಾನವನು ಈಗ ಮಿತಿಗಿಂತ ಹೆಚ್ಚು ಭೂಮಿಯನ್ನು ಸಾಗುವಳಿಗೊಳಪಡಿಸಿ ಭೂಮಿಯ ಫಲವತ್ತೆಯನ್ನು ಮಿತಿಗಿಂತ ಹೆಚ್ಚು ಬರಿದು ಮಾಡುತ್ತಿದ್ದಾನೆ. ಇದನ್ನು  ಮಾನವ ಶ್ರಮದಲ್ಲೇ  ಮರಳಿ ಭರಿಸಿಕೊಡುವುದು ಅತೀ ಅಗತ್ಯ. ಇದಕ್ಕೆ ಇರುವ ಉಪಾಯ ಮಣ್ಣಿನ ಮೇಲ್ಭಾಗದಲ್ಲಿ ಹಸಿರೆಲೆ ಗೊಬ್ಬರದ ಸಸ್ಯಗಳನ್ನು ಬೆಳೆಸುವುದು.

  • ಇವುಗಳು ವಾತಾವರಣದಲ್ಲಿ  ಇರುವ ಸಾರಜನಕದಂತ ಪೋಷಕಾಂಶವನ್ನು  ಮಣ್ಣಿಗೆ ದೊರಕಿಸಿಕೊಡಲು ಸಹಕರಿಸುತ್ತವೆ.
  • ಇಷ್ಟೇ ಅಲ್ಲದೆ ಮಣ್ಣಿಗೆ ಉತ್ತಮ ಸಾವಯವ ವಸ್ತುಗಳನ್ನು  ಪೂರೈಕೆ ಮಾಡಿ ಮಣ್ಣಿನ ಭೌತಿಕ ಮತ್ತು  ಜೈವಿಕ ರಚನೆಯನ್ನು ಸುಧಾರಿಸುತ್ತದೆ.

 ಎಲ್ಲಾ ಸಸ್ಯಗಳೂ ಈ ಕ್ರಿಯೆಯನ್ನು ಮಾಡಲಾರವು. ದ್ವಿದಳ ಸಸ್ಯಗಳು ಈ ಕಾರ್ಯಕ್ಕೆ  ಹೆಚ್ಚು ಸಹಕಾರಿ. ಈ ಸಸ್ಯಗಳ ಬೇರಿನ ಸನಿಹದಲ್ಲಿ ಬ್ಯಾಕ್ಟೀರಿಯಾಗಳು ಸಹಜೀವನ ನಡೆಸುತ್ತವೆ. ಆ ಬ್ಯಾಕ್ಟೀರಿಯಾಗಳು ಆಶ್ರಯಧಾತ ಸಸ್ಯಗಳ ಬೇರಿನ ಸನಿಹದಲ್ಲಿ ಗಂಟು ಗಂಟು ರೂಪದ ಗ್ರಂಥಿಗಳಲ್ಲಿ  ಸಾರಜನಕವನ್ನು ಸಂಗ್ರಹಿಸುತ್ತವೆ.

ಕ್ರೊಟಲೇರಿಯಾ ಸಸ್ಯ:

  • ಕ್ರೊಟಲೇರಿಯಾ ಎಂಬ ದ್ವಿದಳ ಸಸ್ಯ ಸುಲಭವಾಗಿ ಲಭ್ಯವಾಗುವ ಅಧಿಕ ವೇಗದಲ್ಲಿ ಬೆಳೆಯುವ ಒಂದು ಕಳೆ ಸಸ್ಯ.
  • ರಾಜ್ಯದ ಎಲ್ಲಾ ಕಡೆ ಇದರ ಬೇರೆ ಬೇರೆ ವರ್ಗಗಳು ಕಂಡುಬರುತ್ತವೆ.
  • ಕ್ರೊಟಲೇರಿಯಾ ಸಸ್ಯಗಳಲ್ಲಿ 37 ಉಪ ಜಾತಿಗಳಿದ್ದು, ಅವೆಲ್ಲವೂ ಸುಮಾರಾಗಿ ಸಾರಜನಕ ಸ್ಥಿರೀಕರಣಕ್ಕೆ ನೆರವಾಗುವಂತದ್ದು.
  • ಕರಾವಳಿ ಮಲೆನಾಡಿನಲ್ಲಿ ಕ್ರೊಟಲೇರಿಯಾ ಪಲ್ಲಿಡಾ (Crotalaria pallida) ಎಂಬ ಸಸ್ಯವು ಎಲ್ಲಾ ಕಡೆಗಳಲ್ಲೂ ಕಾಣಸಿಗುತ್ತದೆ.
  • ಮಳೆಗಾಲ ಬಂತೆಂದರೆ ಸಾಕು ಎಂಥಃ ಬಂಜರು ಭೂಮಿಯಲ್ಲಿ  ಮೊಳೆತರೂ ಕೆಲವೇ ಸಮಯದಲ್ಲಿ  ಹುಲುಸಾಗಿ ಬೆಳೆದು ವಿಫುಲ ರೆಂಬೆಗಳನ್ನು ಬಿಡುತ್ತವೆ.
  • ಸುಮಾರು ಎರಡು ತಿಂಗಳಲ್ಲಿ ಹೂ ಬಿಟ್ಟು ಕಾಯಿಯಾಗುತ್ತದೆ. ಹಳದಿ ಬಣ್ಣದ ಹೂವುಗಳು.
  • ಕೋಡಿನೊಳಗೆ ಬೀಜಗಳು. ಬೀಜದ ಕೋಡು ಬಲಿತ ತಕ್ಷಣ ಒಡೆದು ಬೀಜ ಪ್ರಸಾರವಾಗುತ್ತದೆ.
  • ಒಮ್ಮೆ ಬೀಜ ಬಿತ್ತನೆ ಮಾಡಿದರೆ  ನಂತರ ಆ ಕೆಲಸ ಇಲ್ಲ.
  • ಪ್ರತೀ ವರ್ಷ ಬಿದ್ದು ಹುಟ್ಟಿದ ಬೀಜಳಿಂದಲೇ ಮಳೆಗಾಲದಲ್ಲಿ ಸಸ್ಯಾಭಿವೃದ್ದಿಯಾಗುತ್ತದೆ.
  •  ಸಸ್ಯವು ಮಳೆ ನಿಂತೊಡನೇ ಒಣಗುತ್ತದೆ.
  • ಆ ಸಮಯದಲ್ಲಿ ಅದನ್ನು  ಬುಡದಿಂದ ಸವರಿದರೆ ಮತ್ತೆ ಅದು ಚಿಗುರಿಕೊಳ್ಳ್ಳುವುದಿಲ್ಲ.
  • ನೀರಿನ ಕೊರತೆಯಾಗಿ ಒಣಗಿದ ಸಸ್ಯಗಳೂ ಮತ್ತೆ ಚಿಗುರುವುದಿಲ್ಲ.
  • ಇದನ್ನು  ಋತುಮಾನದ ಸಸ್ಯ  ಎಂದೇ ಹೇಳಬಹುದು.
  • ಸಡಿಲ ಮಣ್ಣು ಮತ್ತು ಸ್ವಲ್ಪ ಹೆಚ್ಚು ಫಲವತ್ತಾದ ಮಣ್ಣಿನಲ್ಲಿ ಒಂದು ಸಸ್ಯ ಕವಲುಗಳೊಡೆದು ಸುಮಾರು 2 ಮೀಟರಿನಷ್ಟು ವಿಸ್ತಾರಕ್ಕೆ  ಪಸರಿಸಬಲ್ಲುದು.

ಈ ಸಸ್ಯವನ್ನು ಬೇರು ಸಮೇತ ಕಿತ್ತು  ನೋಡಿದರೆ ಬೇರಿನ ಸುತ್ತಲೂ ಸಹಜೀವನ ನಡೆಸುವ ಸಾರಜನಕ ಸ್ಥಿರೀಕರಿಸುವ ಬ್ಯಾಕ್ಟೀರಿಯಾಗಳನ್ನು  ಗುರುತಿಸಬಹುದು. ಒಂದು ಸಸ್ಯದ ಬೇರಿನಲ್ಲಿ ಸುಮಾರು 25 ಗ್ರಾಂ ಗೂ ಹೆಚ್ಚಿನ ಪ್ರಮಾಣದಲ್ಲಿ ಇಂಥಃ ಬ್ಯಾಕ್ಟೀರಿಯಾಗಳಿರಬಹುದು.

  • ಈ ಸಸ್ಯವನ್ನು  ಸವರಿ ಮಣ್ಣಿಗೆ ಸೇರಿಸಿದರೆ ಬೆಳೆಗಳು ಹಚ್ಚ ಹಸುರಾಗಿ ಬೆಳೆಯುತ್ತವೆ ಮತ್ತು ಉತ್ತಮ ಫಸಲನ್ನೂ ನೀಡುತ್ತವೆ.

 ಹಸುರೆಲೆ ಸಸ್ಯಗಳು ಹೀಗಿರಬೇಕು:

  • ಹಸುರೆಲೆ ಗೊಬ್ಬರ ಒದಗಿಸುವ ಸಸ್ಯಗಳು ಬೇಗ ಕಳಿಯುವಂತವುಗಳಾಗಿರಬೇಕು.
  • ಅಧಿಕ ಸಾರಜನಕ ಅಂಶ ಒಳಗೊಂಡಿರಬೇಕು.
  • ಬೇರುಗಳು ವಿಶಾಲವಾಗಿ ಪ್ರವಹಿಸಿ ಮಣ್ಣಿಗೆ ಹೆಚ್ಚಿನ ಪ್ರಮಾಣದಲ್ಲಿ ಗಾಳಿಯಾಡುವಿಕೆಗೆ (  soil aeration, oxygen circulation) ನೆರವಾಗುವಂತಿರಬೇಕು.
  • ಇದೆಲ್ಲಾ ಗುಣಗಳು ಕ್ರೊಟೆಲೇರಿಯಾ ಸಸ್ಯಕ್ಕೆ ಇದೆ.

ಇದನ್ನು ರೈತರು ತಾತ್ಸಾರ ಮಾಡದೆ ಹಸುರೆಲೆ ಗೊಬ್ಬರದ ಗಿಡವಾಗಿ ಹೊಲದಲ್ಲಿ  ಬೆಳೆಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬಹುದು. ನಮ್ಮಲ್ಲಿ ರೈತರು ಹಸುರು ಸೊಪ್ಪು ಉದ್ದೇಶಕ್ಕೆ  ಕಾಡು , ಬೆಟ್ಟ ಬರಿದು ಮಾಡುತ್ತಾರೆ. ಇವುಗಳನ್ನು  ಕಳೆ ನಾಶಕ ಹೊದೆದು ನಾಶ ಮಾಡುತ್ತಾರೆ. ಅದು ಮಾಡಬಾರದು.

Leave a Reply

Your email address will not be published. Required fields are marked *

error: Content is protected !!