ಅಪಾರ ಔಷಧೀಯ ಸಸ್ಯ – ಕೊಡಸಾನ

by | Jan 18, 2020 | Floriculture (ಫುಷ್ಪ ಬೆಳೆ) | 0 comments

ಹೊಟ್ಟೆ  ಸರಿಯಿಲ್ಲವೇ? ಹುಳದ ಸಮಸ್ಯೆಯೇ, ನಮ್ಮ ಹಿರಿಯರು ವೈದ್ಯರ ಬಳಿಗೆ ಕರೆದೊಯ್ಯುತ್ತಿರಲಿಲ್ಲ. ಮನೆ ಹಿತ್ತಲ ಗುಡ್ಡಕ್ಕೆ ಹೋಗಿ ಸೊಪ್ಪು, ಹೂವು ಕೆತ್ತೆ  ತಂದು ಅದನ್ನು ಅರೆದು ಕಷಾಯವೋ, ಅಡುಗೆಯೋ ಚೂರ್ಣವೋ ಮಾಡಿಕೊಡುತ್ತಿದ್ದರು. ಕೆಲವೇ ಕ್ಷಣದಲ್ಲಿ  ಸಮಸ್ಯೆ  ನಿವಾರಣೆಯಾಗುತ್ತಿತ್ತು. ಈಗ ಅಂತಹ ಸಸ್ಯಗಳೇ ಇಲ್ಲದಾಗಿದೆ.  

ಸಸ್ಯ ವಿಷೇಶ:

  • ಕೊಡಸಾನ ಸಸ್ಯ, ಕುಟಜ ಸಸ್ಯ  ಎಂಬುದು ನಮ್ಮ ಬೆಟ್ಟ ಗುಡ್ಡಗಳಲ್ಲಿ ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳ ತನಕ ಕಾಣಸಿಗುವ  ಮಲ್ಲಿಗೆ ಹೂವಿನಂತಃ ಹೂ ಬಿಡುವ  ಸಾಮಾನ್ಯ ಎತ್ತರದ ಸಸ್ಯ.
  • ಇದನ್ನು ಒಂದು ಟಾನಿಕ್ ಸಸ್ಯ ಎಂತಲೇ ಹೇಳಬಹುದು. ಇದರ ವೈಜ್ಞಾನಿಕ ಹೆಸರು Holarrhena antidysenterica,Apocynaceae      ಕುಟುಂಬಕ್ಕೆ ಸೇರಿದೆ. ಇದರ ಹೊಸ ಹೆಸರು Holarrhena Pubescens.
  • ನಮ್ಮ ಪಶ್ಚಿಮ ಘಟ್ಟ ಮೂಲದ ಈ ಸಸ್ಯ ವರ್ಗದ ಉಪಯೋಗ ಭಾರತದಾದ್ಯಂತ ಇರುವುದು ಕಂಡು ಬರುತ್ತದೆ.
  • ಕುರ್ಚಿ ಎಂಬುದು ಇದರ ಸಾಮಾನ್ಯ ಹೆಸರು.
  • ಕರಾವಳಿ ಕರ್ನಾಟಕದ ಭಾಗಗಳಲ್ಲಿ  ಕೊಡಸಾನ ಎನ್ನುತ್ತಾರೆ.
  • ಕನ್ನಡದಲ್ಲಿ  ಕೊಡಸಾನ , ಕೊಡಮುರಿಕೆ, ಕೊಡಸ ಎಂಬುದಾಗಿ ಕರೆದರೆ, ಸಂಸ್ಕೃತದಲ್ಲಿ ಕುಟಜ, ಗಿರಿ ಮಲ್ಲಿಕಾ ಬೆಂಗಾಲಿಯಲ್ಲಿ ಕುರ್ಚಿ,ಗುಜರಾತಿಯಲ್ಲಿ  ಕಡಚಾಲಿ, ಮಲಯಾಳಿಯಲ್ಲಿ ಕುಡಕ್ಕ ಫಲ ಎನ್ನುತ್ತಾರೆ.
  • ತುಳುವಿನಲ್ಲಿ ಕೊಡೆಂಚ ಎನ್ನುತ್ತಾರೆ.
  • ಇದು ನಮ್ಮ ಗುಡ್ಡದಲ್ಲಿ ಬೆಳೆಯುವ ಸುಮಾರು 3 ಮೀಟರ್ ಎತ್ತರದ ಸಣ್ಣ ಗಿಡ.
  • ಸಾಮಾನ್ಯವಾಗಿ ಬೋಳು ಗುಡ್ಡೆಯಲ್ಲಿ  ಬೇಸಿಗೆ ಬಂತೆಂದರೆ ಸಾಕು ಚಿಗುರಲು  ಪ್ರಾರಂಭವಾಗಿ ಹೂ ಮೊಗ್ಗು ಬಿಡುತ್ತದೆ.
  • ಎಲೆ, ಗೆಲ್ಲು  ಮುರಿದಾಗ ಹಾಲು ಒಸರುತ್ತದೆ.
  • ಎಪ್ರೀಲ್ ತಿಂಗಳಿಗೆ ಸಸ್ಯದ ತುಂಬಾ ಹೂವುಗಳಾಗಿ ಹೂವು ಮಲ್ಲಿಗೆಯನ್ನು  ಅಥವಾ ನಂದಿ ಬಟ್ಟಲು ಹೂವನ್ನು  ಹೋಲುತ್ತದೆ.
  • ಉತ್ತಮ ಸುವಾಸನೆಯೂ ಇದೆ.
  •   ಬೂರುಗದ ಹತ್ತಿಯ ಕೊಡಿನ ತರಹ ಬೀಜಗಳಾಗಿ ಗಾಳಿಯಲ್ಲಿ  ಬೀಜ ಪ್ರಸಾರವಾಗಿ ಸಸ್ಯಾಭಿವೃದ್ದಿಯಾಗುತ್ತದೆ.

ಕೊಡಸಾನ ಹೂವು

ಔಷಧೀಯ ಬಳಕೆ:

  • ಇದನ್ನು ಕುಟಜಾರಿಷ್ಟ ಎಂಬ ಹೊಟ್ಟೆ ನೋವು, ಹೊಟ್ಟೆ ಹುಳ, ಅಲ್ಸರ್ ಸಂಭಂಧಿತ ಖಾಯಿಲೆಯನ್ನು ಗುಣಪಡಿಸುವ ಔಷಧಿ ತಯಾರಿಕೆಗೆ ಬಳಸುತ್ತಾರೆ.
  • ಒಟ್ಟಾರೆಯಾಗಿ ಆಯುರ್ವೇದ ಔಷದೋಪಚಾರಗಳಲ್ಲಿ 59 ಬಗೆಯ ಔಷಧಿಗಳಲ್ಲಿ ಬಳಕೆಯಾಗುವ ಸಸ್ಯ
  • ಕೊಡಸಾನ ಗಿಡದ ಚೆಕ್ಕೆ, ಹೂವು ಔಷಧೀಯ ಬಳಕೆಗಾಗುವ ವಸ್ತುಗಳು.
  • ಚೆಕ್ಕೆಯನ್ನು ಹೆಚ್ಚಾಗಿ ಔಷಧಿ ತಯಾರಕರು ಬಳಕೆ ಮಾಡಿದರೆ, ಹಳ್ಳಿಯ ಜನರು ಅನಾದಿ ಕಾಲದಿಂದಲೂ  ಸಸ್ಯದ ಹೂವನ್ನು ಬೇರೆ ಬೇರೆ ರೀತಿಯಲ್ಲಿ ಔಷಧಿಯಾಗಿ ಬಳಕೆ ಮಾಡುತ್ತಾ ಬಂದಿದ್ದಾರೆ.
  • ಕೊಡಸಿಗ ಹೂವನ್ನು  ಬೇಸಿಗೆ ಕಾಲದಲ್ಲಿ ಕೊಯಿದು ಅದನ್ನು ಒಣಗಿಸಿ ಇಡುವುದು ಸಾಮಾನ್ಯವಾಗಿ ಎಲ್ಲಾ ಗ್ರಾಮಾಂತರ ಪ್ರದೇಶಗಳ ಮನೆಯಲ್ಲಿ ಪ್ರತೀತಿ.
  • ವರ್ಷದುದ್ದಕ್ಕೂ ಹೂವು ಲಭ್ಯವಾಗುವುದಿಲ್ಲ.
  • ಅನಾರೋಗ್ಯ ಯಾವಾಗ ಬೇಕಾದರೂ ಬರಬಹುದು. ಆಗ ಉಪಯೋಗಕ್ಕೆ ಬರಲಿ ಎಂದು ಇದನ್ನು  ಕೊಯಿದು ಒಣಗಿಸಿಡುವುದು ವಾಡಿಕೆ.
  • ಇದನ್ನು ಹಸಿಯಾಗಿಯೇ ತಂಬುಳಿ ರೂಪದಲ್ಲಿ ಸೇವನೆ ಮಾಡುತ್ತಾರೆ.
  • ಹೂವನ್ನು ಒಮ್ಮೆ ಹದವಾಗಿ ಬೇಯಿಸುತ್ತಾರೆ.
  • ನಂತರ ಉಪ್ಪು ಹುಳಿ ಖಾರ ಓಮ ಅಥವಾ ಜೀರಿಗೆ ಹಾಕಿ ಅರೆದು ತಂಬುಳಿ ಮಾಡಿ ಉಣ್ಣುತ್ತಾರೆ.
  • ಒಣಗಿಸಿದ ಹೂವಾದರೆ ಹುರಿದು ಅರೆದು ಓಮ, ಅಥವಾ ಜೀರಿಗೆ ಹಾಕಿ ಉಪ್ಪು , ಹುಳಿ ಖಾರ ಸೇರಿಸಿ ತಂಬುಳಿ ಮಾಡುತ್ತಾರೆ. (ತಂಬುಳಿ ಎಂದರೆ ಊಟಕ್ಕೆ ಮೊದಲೇ ಕಲಸಿ ತಿನ್ನುವ ಪದಾರ್ಥ) ಸ್ವಲ್ಪ ಪ್ರಮಾಣದಲ್ಲಿ ತಿನ್ನುವಂತದ್ದು.
  • ಇದರ ಸೇವನೆಯಿಂದ ಹುಳ ಭಾದೆ ದೂರವಾಗುತ್ತದೆ.
  • ಅಲ್ಲದೇ ದೇಹಕ್ಕೆ ರೋಗಾಣುಗಳ ವಿರುದ್ದ ಹೋರಾಡುವ ಶಕ್ತಿ ಬರುತ್ತದೆ.
  • ಇದನ್ನು ಆ್ಯಂಟಿ ಆಕ್ಸಿಡೆಂಟ್ ಎಂಬುದಾಗಿ ಕರೆಯಬಹುದು.

ಈ ಮರವು ಭಾರೀ ಔಷಧೀಯ ಗುಣ ಹೊಂದಿದ್ದು ಭೇದಿ ನಿವಾರಣೆಗೆ ಪರಮ ಔಷಧಿ. ಇದನ್ನು ಟಾನಿಕ್ ಮತ್ತು ಮದ್ದು ಎನ್ನುತ್ತಾರೆ. ಇದನ್ನು ವರ್ಷದಲ್ಲಿ ಮೂರು ನಾಲ್ಕು ಬಾರಿ ಅಡುಗೆ ಮಾಡಿ ಸೇವಿಸುವುದರಿಂದ ಹೊಟ್ಟೆ ಸಂಬಂಧಿತ ಆರೋಗ್ಯ ಸಮಸ್ಯೆ ಬರಲಾರದು ಎಂಬುದು ನಮ್ಮ ಹಿರಿಯರು ಕಂಡುಕೊಂಡ ಸತ್ಯ.

  • ಕೊಡಸಿಗ ಸಸ್ಯದ ( 10-12 ವರ್ಷ ಬೆಳೆದ ) ತೊಗಟೆಯನ್ನು ತೆಗೆದು ಆಯುರ್ವೇದ ಮತ್ತು ನಾಟೀ ಔಷದೋಪಚಾರದಲ್ಲಿ ಬಳಕೆ ಮಾಡುತ್ತಾರೆ.
  • ಇದರಲ್ಲಿ 2% ದಷ್ಟು ಸಸ್ಯ ಕ್ಷಾರ ಇರುತ್ತದೆ.
  • ಇದು ಪದೇ ಪದೇ ಬರುವ ಮಲೇರಿಯಾದಂತಹ ಜ್ವರವನ್ನು ಹುಟ್ಟಡಗಿಸುವ ಗುಣ ಹೊಂದಿದೆ.
  • ಇದರಿಂದ ಸ್ಟಿರಾಯ್ಡ್ ಹಾರ್ಮೋನು ಉತ್ಪಾದಿಸುತ್ತಾರೆ.

ಕೊಡಸಿಗದ ಹೂವು ಅರಳುವ ಸಮಯದಲ್ಲಿ  ಹೂವನ್ನು  ಕೊಯಿದು ತಂದು ಒಣಗಿಸಿ ಇಡಿ.ಮನೆ ಮಕ್ಕಳಿಗೆ ಯಾವಾಗ ಹುಳ ಭಾಧೆ , ಅಜೀರ್ಣ ಉಂಟಾಗುತ್ತದೆ ಗೊತ್ತಿಲ್ಲ. ತಿಂಗಳಿಗೊಮ್ಮೆ ಇದರ ತಂಬುಳಿ ಮಾಡಿ ನಾಲ್ಕಾರು ಚಮಚವಾದರೂ ಸೇವಿಸಲಿ. ಕಹಿ ಇದೆ. ಆದರೆ ಕಹಿಯಲ್ಲೇ ಭಾರೀ ಔಷಧಿಯೂ ಇದೆ. ವೈದ್ಯರ ಮದ್ದಿಗಿಂತ ಇದು ಧೀರ್ಘಾವಧಿಯಲ್ಲಿ  ವ್ಯಾಧಿ ನಿವಾರಕ ಔಷಧಿ.

 ಅಳಿಯುತ್ತಿದೆ: ಉಳಿಸಿ:

  • ಹಿಂದೆ ಎಲ್ಲೆಂದರಲ್ಲಿ ಇರುತ್ತಿದ್ದ ಈ ಸಸ್ಯ ಈಗ ಬಹಳಷ್ಟು ಕಡಿಮೆಯಾಗಿದೆ.
  • ಕೃಷಿ ವಿಸ್ತರಣೆ, ಹಸು, ಆಡು ಮೇಯುವಿಕೆ, ಮಳೆ ಕಡಿಮೆಯಾಗಿ ಸಸ್ಯ ಅವನತಿಯಾಗುತ್ತಿದೆ.
  • ಇದು ಸ್ವಾಭಾವಿಕವಾಗಿ ಬೀಜದಿಂದ ಸಯಾಭಿವೃದ್ಧಿಯಾಗುವ ಗಿಡವಾಗಿದ್ದು, ಯಾರೂ ನೆಟ್ಟು ಬೆಳೆಸುವುದಿಲ್ಲ. ಆದ ಕಾರಣ ಇದು ಅವನತಿಯಾಗುತ್ತಿದೆ.
  • ನಿಮ್ಮ ತಿಳುವಳಿಕೆಯಲ್ಲಿ ಈ ಗಿಡ ಇದ್ದರೆ ಯಾರಿಗೂ ಇದನ್ನು ಕಡಿಯಲು ಬಿಡಬೇಡಿ. ಅದರ ಔಷಧೀಯ ಮಹತ್ವ ಹೇಳಿ.

 ಅನಾರೋಗ್ಯಕ್ಕೆ  ಅವರು ಇವರು ಎಂಬುದಿಲ್ಲ. ಅದು ನಮಗೂ ಬರಬಹುದು ಇನ್ನೊಬ್ಬರಿಗೂ ಬರಬಹುದು. ಆದರೆ ನಮ್ಮ ಬಳಿ ನಾಟಿ ಔಷಧಿಗಳು ಇರಲಿ. ಇದು ಎಲ್ಲರಿಗೂ ಉಪಯೋಗಕ್ಕೆ ಬರುತ್ತದೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!