ಕೆಲವು ಬೆಳೆಗಳು ನಮಗೆ ಉತ್ತಮ ವರಮಾನ ತಂದು ಕೊಡುತ್ತವೆ. ಸೂಕ್ತ ಮಾರ್ಗದರ್ಶನ ಇಲ್ಲದೆ ನಾವು ಯಾವ್ಯಾವುದೋ ಬೆಳೆಗಳ ಹಿಂದೆ ಹೋಗುತ್ತೇವೆ.
ಮಲೆನಾಡಿನಲ್ಲಿ ಏನು ಬೆಳೆ ಬೆಳೆಯಬಹುದು. ಅಡಿಕೆ, ತೆಂಗು, ತಪ್ಪಿದರೆ ಇನ್ನೇನಾದರೂ ವಾರ್ಷಿಕ ಬೆಳೆಗಳನ್ನು ಬೆಳೆಯಬಹುದು ಎಂಬುದು ಎಲ್ಲರ ತಿಳುವಳಿಕೆ. ಆದರೆ ಇಲ್ಲೊಬ್ಬರು ಇದಕ್ಕಿಂತೆಲ್ಲಾ ಭಿನ್ನವಾದ ಪುಷ್ಪ ಬೆಳೆಯನ್ನು ಬೆಳೆದು ಉತ್ತಮ ವರಮಾನ ಪಡೆಯುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ನಾಡಕಲಸಿ ಊರಿನಲ್ಲಿ ಶ್ರಿಯುತ ಹುಚ್ಚಪ್ಪ ಎಂಬವರೇ ಈ ಚಾಲೆಂಜಿಂಗ್ ಕೃಷಿಕ. ಇವರು ತಮ್ಮ ಇತರ ಬೆಳೆಗಳ ಜೊತೆಗೆ ಒಂದು ಎಕ್ರೆಯಲ್ಲಿ ತೆರೆದ ವಾತಾವರಣದಲ್ಲಿ ಗುಲಾಬಿ ಬೆಳೆ ಬೆಳೆದಿದ್ದಾರೆ. ಇದರಿಂದ ತಿಂಗಳಿಗೆ ಕನಿಷ್ಟ 50,000 ಸಂಪಾದನೆ ಮಾಡುತ್ತಾರೆ.
- ಕೃಷಿಕರಿಗೆ ವಾರ್ಷಿಕ ಆದಾಯ ಮೂಲ ಒಂದೇ ಇದ್ದರೆ ಸಾಲದು. ಕನಿಷ್ಟ ವಾರಕ್ಕೊಮ್ಮೆಯಾದರೂ ಆದಾಯ ಕೊಡಬಲ್ಲ ಬೆಳೆ ಬೇಕು.
- ಹಾಗಿದ್ದರೆ ಮಾತ್ರ ಅವರು ನೆಮ್ಮದಿಯ ಜೀವನ ನಡೆಸಬಹುದು.
- ಕೃಷಿಕರೂ ಸೇರಿದಂತೆ ಎಲ್ಲರಿಗೂ ನಿತ್ಯವೂ ಖರ್ಚಿಗೆ ಹಣ ಬೇಕು.
- ನಿರ್ಧರಿತ ಸಂಬಳ ಬರುವುದಾದರೆ ಅದು ಬರುತ್ತದೆ ಎಂಬ ಧೈರ್ಯ ಇರುತ್ತದೆ.
- ಆದರೆ ವಾರ್ಷಿಕ ಆದಾಯ ಮತ್ತು ಬೆಲೆ ಅಸ್ಥಿರತೆ ಇರುವ ಕೃಷಿ ವೃತ್ತಿಯವರಿಗೆ ಕೊನೆಗೆ ಸಾಲವೇ ಆಸರೆ.
- ಅದಕ್ಕಾಗಿಯೇ ಲಾಭ ಇರಲಿ ಇಲ್ಲದಿದರಿ ಜನ ಹೈನುಗಾರಿಕೆ ಮಾಡುವುದನ್ನು ಬಿಡುವುದಿಲ್ಲ.
- ಅದೇ ರೀತಿಯಲ್ಲಿ ತರಕಾರಿ, ವೀಳ್ಯದೆಲೆ ಬೆಳೆಯುವುದನ್ನು ಬಿಡುವುದಿಲ್ಲ.
- ರೇಶ್ಮೆ ವ್ಯವಸಾಯ ಮಾಡುವವರೂ ಹಾಗೆಯೇ.
- ಇವೆಲ್ಲಾ ಉಪ ವೃತ್ತಿಗಳು ದಿನಕ್ಕೆ, ವಾರಕ್ಕೆ, ತಿಂಗಳಿಗೆ ಎಂಬಂತೆ ಆದಾಯದ ಮೂಲವನ್ನು ಕೊಡುತ್ತಿರುತ್ತವೆ.
- ಇದು ಕೆಲಸದವರ ಸಂಬಳ, ದೈನಂದಿನ ಖರ್ಚಿಗೆ ಸಹಾಯಕವಾಗುತ್ತದೆ.
ಗುಲಾಬಿ ಬೆಳೆಯ ಯಶೋಗಾಥೆ:
- ಶ್ರೀಯುತ ಹುಚ್ಚಪ್ಪನವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಒಬ್ಬ ನಿಷ್ಟಾವಂತ ಫಲಾನುಭವಿ.
- ಮಾತು ಮಾತಿಗೂ ಧರ್ಮಸ್ಥಳ ಸಂಘದ ಕಾರಣದಿಂದ ನನ್ನ ಜೀವನದ ದಿಕ್ಕು ಬದಲಾಯಿತು ಎನ್ನುತ್ತಾರೆ.
- ಎರಡು ವರ್ಷಕ್ಕೆ ಹಿಂದೆ ಯೋಜನೆಯ ವತಿಯಿಂದ ಕೆಲವು ಕಡೆಗೆ ಪ್ರವಾಸ ಹೋಗಿದ್ದರಂತೆ.
- ಆಗ ಆನವಟ್ಟಿ ಸುತ್ತಮುತ್ತ ಗುಲಾಬಿ ಬೆಳೆಯುವುದನ್ನು ಕಂಡರಂತೆ.
- ಹಾಗೆಯೇ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿಧಾನಿಲಯದಲ್ಲಿ ಕಳೆದ ವರ್ಷ ಒಂದು ತರಬೇತಿಯಲ್ಲಿಯೂ ಪಾಲ್ಗೊಂಡರಂತೆ.
- ಬರೇ ತರಬೇತಿ, ಕ್ಷೇತ್ರ ವೀಕ್ಷಣೆ ಮಾಡಿದರೆ ಸಾಲದು. ಅದನ್ನು ಕಾರ್ಯಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತನ್ನಲ್ಲಿರುವ ಹೊಲದಲ್ಲಿ ಗುಲಾಬಿ ಬೆಳೆಯುವವರೇ ನಿರ್ಧರಿಸಿಬಿಟ್ಟರು.
- ಮಲೆನಾಡಿನಲ್ಲಿ ಗುಲಾಬಿ ಬೆಳೆಯುವುದೇ, ಅದು ಆಗಿ ಹೊಗುವ ಕೆಲಸವೇ.
- ಕೈ ಸುಟ್ಟುಕೊಳ್ಳಬೇಕಾದೀತು ಎಂದು ಎಲ್ಲರೂ ಹೆದರಿಕೆ ಹುಟ್ಟಿಸಿದರೂ ಇವರು ಧೃತಿಗೆಡಲಿಲ್ಲ.
- ಮಾಡುವುದು ಮಾಡುವುದೇ ಎಂದು, ಯಾರೋ ಒಬ್ಬ ಏಜೆಂಟರ ಮೂಲಕ ತಮಿಳುನಾಡಿನಿಂದ ಸಸಿ ತರಿಸಿಕೊಂಡರು.
- ಮೇರಬುಲ್ ಬಟನ್ ರೋಸ್ ( Merabul )ಹೆಸರಿನ ತಳಿ. ಒಂದು ಗಿಡಕ್ಕೆ 20 ರೂ. ಕೊಟ್ಟು ಖರೀದಿಸಿದ್ದರು.
- ನಂತರ ತಾವೇ ಮೂಲ ಹುಡುಕಿ ಸ್ವತಹ ತಮಿಳುನಾಡಿಗೆ ಹೋಗಿ ಗಿಡ ತಂದು ಬೆಳೆಸಿದ್ದಾರೆ.
- ಇವರ ಗುಲಾಬಿ ಸಸಿಗಳಿಗೆ ಈಗ ಎರಡು ವರ್ಷ.
- ಸುಮಾರು 8 ಅಡಿ ಎತ್ತರಕ್ಕೆ ಬೆಳೆದಿದೆ. ಸಸಿ ನೋಡಿದರೆ ಹೊಟ್ಟೆ ತುಂಬುತ್ತದೆ.
- ಒಂದೊಂದು ಚಿಗುರಿನಲ್ಲಿ ನೂರಕ್ಕೂ ಹೆಚ್ಚು ಮೊಗ್ಗುಗಳಿರುತ್ತವೆ.
ಏನು ಆದಾಯವಿದೆ:
- ಒಂದು ಎಕ್ರೆ ಗುಲಾಬಿ ಬೆಳೆಯಲು ಬೇಕಾಗುವ ಸಸಿಗಳು ಸುಮಾರು 2000-2500.
- ಅದು ಅಂತರದ ಮೇಲೆ ಅವಲಂಭಿಸಿದೆ.
- ಹೆಚ್ಚು ಅಂತರ ಇಟ್ಟು ಕಡಿಮೆ ಸಸಿಗಳನ್ನು ಬೆಳೆಸಿದ್ದೇ ಆದರೆ ಗಿಡಕ್ಕೆ ಬೆಳವಣಿಗೆಗೆ ಅನುಕೂಲ ಹೆಚ್ಚು.
- ಹೂ ಹೆಚ್ಚು. ಗಾಳಿ ಬೆಳಕು ಆಡುತ್ತದೆ. ಗಿಡಕ್ಕೆ ಸುಮಾರು 20 ರೂ. ಗಳು.
- ಒಂದು ಅಡಿ ಏರಿ ಸಾಲು ಮಾಡಿ, ಮಲ್ಚಿಂಗ್ ಶೀಟು ಹಾಕಿ ಇನ್ ಲೈನ್ ಡ್ರಿಪ್ ಹಾಕಿ ನೆಟ್ಟು ಉತ್ತಮವಾಗಿ ಬೆಳೆದಿದ್ದಾರೆ.
- 7X2.5 -2500 ಗಿಡ, 8×2.5 -2000 ಗಿಡ ಹಿಡಿಯುತ್ತದೆ.
ಇದಕ್ಕೆಲ್ಲಾ ಹೊಲದ ಸಿದ್ದತೆಗೆ ಗರಿಷ್ಟ 50-60 ಸಾವಿರ ಖರ್ಚು ಬರಬಹುದು. ಗಿಡ ನೆಟ್ಟು 6 ತಿಂಗಳಿಗೆ 20 ಕಿಲೋ , 8 ತಿಂಗಳಿಗೆ 60 ಕಿಲೊ, 12 ತಿಂಗಳಿಗೆ 1 ಕ್ವಿಂಟಾಲು ದಿನಕ್ಕೆ ಹೂ ಸಿಗುತ್ತದೆ. ಹೂವಿಗೆ ಸಾಗರದಲ್ಲಿ ಕಿಲೋ 100 ರೂ. ಶಿವಮೊಗ್ಗದಲ್ಲಿ ಕಿಲೋ 125 ರೂ. ಸಿಗುತ್ತದೆ.
ವರ್ಷಪೂರ್ತಿ ಏಕಪ್ರಕಾರ ಇಳುವರಿ ;
- ಆದರೆ ಇವರಿಗೆ ಸೂಕ್ತ ಸಲಹೆ ಕೊಡುವವರು ಇಲ್ಲ.
- ಗಿಡದ ಪ್ರೂನಿಂಗ್ ಗೊತ್ತಿಲ್ಲ.ಆದ ಕಾರಣ ಒಮ್ಮೆ ಕ್ವಿಂಟಾಲಿಗೂ ಹೆಚ್ಚು ಆಗುತ್ತದೆ.
- ಮತ್ತೆ ಸ್ವಲ್ಪ ಸಮಯದ ನಂತರ ಅದರ ಅರ್ಧ ಆಗುತ್ತದೆ.
- ಸರಿಯಾದ ಪ್ರೂನಿಂಗ್ ಮಾಡುವ ವಿಧಾನ ಗೊತ್ತಿದ್ದರೆ ಏಕಪ್ರಕಾರ ಇಳುವರಿ ಪಡೆಯಬಹುದು.
- ಹಾಗೆಯೇ ಈ ಬೆಳೆಗೆ ಯಾವ ಯಾವ ಕೀಟ ಬರುತ್ತದೆ, ಯಾವ ಔಷಧಿ ಹೊಡೆಯಬೇಕು , ಯಾವ ಗೊಬ್ಬರ ಹಾಕಬೇಕು ಎಂಬ ಬಗ್ಗೆ ಯಾರಲ್ಲಿಯೂ ಸಮರ್ಪಕವಾದ ಮಾಹಿತಿ ಇಲ್ಲ.
- ಅಂಗಡಿಯವರ ಸಲಹೆಯ ಮೇರೆಗೆ ಬಳಕೆ ಮಾಡಬೇಕು.
- ವಾರಕ್ಕೆ 40-50 ಸಾವಿರ ತನಕವೂ ತಂದದ್ದುಂಟು.
- ಕೆಲವೊಮ್ಮೆ 15-20 ಸಾವಿರ ತಂದದ್ದೂ ಉಂಟು.
- ಒಂದು ಎಕ್ರೆ ಗುಲಾಬಿ ಬೆಳೆದರೆ ಹೊರ ಊರಿಗೆ ಹೋಗಿ ಮಾಸಿಕ 50-60 ಸಾವಿರ ಸಂಪಾದನೆ ಮಾಡಬೇಕಾಗಿಲ್ಲ.
- ಊರಲ್ಲೇ ಅಷ್ಟು ಸಂಪಾದನೆ ಮಾಡಬಹುದು ಎನ್ನುತ್ತಾರೆ.
- ಸರಾಸರಿ ಇವರು ಮಾಸಿಕ 50 ಸಾವಿರ ಸಂಪಾದನೆ ಮಾಡುತ್ತಾರೆ.
- ಇದರಲ್ಲಿ 5-6 ಸಾವಿರ ಖರ್ಚು ಕಳೆದರೆ ಉಳಿದದ್ದು ಲಾಭ.
- ಒಂದು ಸಾವಿರ ಗಿಡ ಇದ್ದರೆ ದಿನಕ್ಕೆ 1 ಕ್ವಿಂಟಾಲು ಹೂ ಪಡೆಯಬಹುದು.
- ಉಳಿದ ಭಾಗಗಳಿಗಿಂತ ಮಲೆನಾಡಿನಲ್ಲೇ ಗುಲಾಬಿ ಚೆನ್ನಾಗಿ ಬರುತ್ತದೆ.
- ನನಗೆ ಜೀವನದಲ್ಲಿ ಒಂದು ಆಕಾಂಕ್ಷೆ ಎಂಬುದು ಬಂದಿದ್ದರೆ ಅದು ಈ ಗುಲಾಬಿ ಬೆಳೆಯಿಂದ.
- ಅದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಫಲದಿಂದ ಎನ್ನುತ್ತಾರೆ.
ಮಳೆಗಾಲದಲ್ಲೂ ಹೂ ಕಡಿಮೆಯಾಗದು:
- ಗುಲಾಬಿ ಬೆಳೆದರೆ ವರ್ಷದುದ್ದಕ್ಕೂ ಆದಾಯ ಇರುತ್ತದೆಯೇ? ಮಳೆಗಾಲದಲ್ಲಿ ಹೂ ಬಿಡುತ್ತದೆಯೇ , ಬಿಟ್ಟರೆ ಉಳಿಯುತ್ತದೆಯೇ ಎಂಬ ಸಂದೇಹ ಎಲ್ಲರದ್ದೂ.
- ಆದರೆ ಹಾಗಿಲ್ಲ. ಮಲೆನಾಡಿನ ಮಳೆಗೆ ಗಿಡ ಕೊಳೆಯುತ್ತದೆ. ಎಲೆ ಉದುರುತ್ತದೆ. ಎಂದೆಲ್ಲಾ ಹೇಳಿದವರಿದ್ದಾರೆ.
- ಆದರೆ ಇವರಿಗೆ ಅದರ ಅನುಭವ ಆದರೂ ಸಹ ತನ್ನ ಬುದ್ಧಿವಂತಿಕೆಯಿಂದ ಅದನ್ನು ನಿಭಾಯಿಸಿಕೊಂಡಿದ್ದಾರೆ.
- ವಿಪರೀತ ಮಳೆ ಇರುವಾಗ ವಾರಕ್ಕೊಮ್ಮೆ ಒಪೇರಾ – ಟ್ಯಾಗ್ರಾನ್ (metalaxil), ಮತ್ತು ಕರ್ಜೆಟ್ ಎಂಬ ರೋಗ ನಾಶಕಗಳನ್ನು ಸಿಂಪಡಿಸುವ ಮೂಲಕ ಒಂದೂ ಎಲೆ ಕಪ್ಪಾಗದೆ ಹೂವು ಹಾಳಾಗಲಾರದು.
- ಪ್ರೂನಿಂಗ್ ಗೊತ್ತಿಲ್ಲದ ಕಾರಣ ಗಿಡ 8 ಅಡಿ ತನಕವೂ ಎತ್ತರವಾಗಿ ಬೆಳೆದಿದೆ.
- ಲಾಕ್ ಡೌನ್ ಸಮಯದಲ್ಲಿ ಸ್ವಲ್ಪ ತೊಂದರೆ ಆಗಿದೆಯಾದರೂ ನಂತರ ಅದೆಲ್ಲಾ ಸರಿಯಾಯಿತು.
ಇವರು ಈ ಬೆಳೆಯನ್ನು ಒಂದು ಚಾಲೆಂಜ್ ಆಗಿ ಸ್ವೀಕರಿಸಿದ್ದಾರೆ. ಇದರಲ್ಲಿ ಏನಾದರೂ ಸಾಧಿಸಬೇಕು ಎಂಬ ಆಕಾಂಕ್ಷೆ. ಇವರ ಹೊಲಕ್ಕೆ ತಿಂಗಳಿಗೆ ಏನಿಲ್ಲವೆಂದರೂ ನೂರಕ್ಕೂ ಹೆಚ್ಚು ಜನ ರೈತರು ಬಂದು ನೋಡಿ ಹೋಗುತ್ತಾರೆ.ಸುಮಾರು 38 ವರ್ಷ ಪ್ರಾಯದ ಶ್ರೀ ಹುಚ್ಚಪ್ಪನವರು , 9 ನೇ ತರಗತಿ ತನಕ ವ್ಯಾಸಂಗ ಮಾಡಿದವರು.ಸುಮಾರು ½ ಎಕ್ರೆ ಅಡಿಕೆ ಬೆಳೆ ಇದೆ. ಬೋರ್ವೆಲ್ ನೀರು. ಇವರ ಈ ಸಾಧನೆ ಶ್ಲಾಘನಾರ್ಹ.
ಮಾಹಿತಿ ನೀಡಿ ಸಹಕರಿಸಿದ ಕೃಷಿ ಅಭಿವೃದ್ದಿ ಪತ್ರಿಕೆಯ ಪೋಷಕರು ಆದ ಶ್ರೀ ಶೇಷಗಿರಿ ಶರ್ಮ ನಾಡಕಲಸಿ ಸಾಗರ ಇವರಿಗೆ ಕೃತಜ್ಞತೆಗಳು.