ಹೊಲದಲ್ಲಿ ಎರೆಹುಳಗಳು ಕಡಿಮೆಯೇ ? ಕಾರಣ ಏನು?

ಹೊಲದಲ್ಲಿ ಎರೆಹುಳ

ಮಣ್ಣು  ಅಥವಾ ಹೊಲ ಅನೇಕ ತರಹದ ಕಶೇರುಕ ಮತ್ತು ಅಕಶೇರುಕ ಜೀವಿಗಳಿಗೆ ಆಶ್ರಯತಾಣ. ಇಲಿ ಹೆಗ್ಗಣ ,ಅಳಿಲುಗಳಿಂದ ಹಿಡಿದು, ಇರುವೆ ಗೆದ್ದಲು, ಜೇಡ, ನುಶಿ, ಮೈಟ್, ಬಸವನ ಹುಳು ಎರೆಹುಳು, ಕಪ್ಪೆ ಚಿಪ್ಪಿನ ಹುಳು, ಶತಪದಿಗಳು, ಸಹಸ್ರಪದಿಗಳು,  ಎರೆಹುಳುಗಳು ಹಾಗೆಯೇ ಹಲವಾರು ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳು ಎಲ್ಲವೂ ಮಣ್ಣಿನಲ್ಲಿಯೇ ಬದುಕುವ ಜೀವಿಗಳು. ಮಣ್ಣು ಇಲ್ಲದಿದ್ದರೆ ಅವು ಇಲ್ಲ. ಅವು ಇಲ್ಲದಿದ್ದರೆ ಮಣ್ಣಿಗೆ ಜೀವಂತಿಕೆ ಇಲ್ಲ. ಹೊಲ ಎರೆಹುಳಗಳಿಗೆ ಆಹಾರ ಕೊಡದ ಸ್ಥಿತಿಯಲ್ಲಿ ಇದ್ದರೆ ಅಲ್ಲಿ ಅವುಗಳ ಸಂಖ್ಯೆ  ಕಡಿಮೆಯಾಗುತ್ತವೆ.

  • ರಾಸಾಯನಿಕ ಗೊಬ್ಬರ ಬಳಸಿದರೆ  ಎರೆಹುಳುಗಳು ನಾಶವಾಗುತ್ತದೆ. ಮಣ್ಣು ಬರಡಾಗುತ್ತದೆ ಎಂಬುದು ಶುದ್ಧ ಸುಳ್ಳು.
  • ಮಣ್ಣಿನಲ್ಲಿ ಸಾವಯವ ಅಂಶ ಇದ್ದಾಗ ರಾಸಾಯನಿಕ ಗೊಬ್ಬರ ಹಿತಮಿತವಾಗಿ ಬಳಸಿದರೆ ಎರೆಹುಳುಗಳಿಗೆ ಯಾವ ತೊಂದರೆಯೂ ಆಗಲಾರದು.
  • ಅತಿಯಾದ ರಾಸಾಯನಿಕ ಅಥವಾ ಬರೇ ರಾಸಾಯನಿಕ ಬಳಸಿ ಕೃಷಿ ಮಾಡುವುದು ನಮ್ಮಲ್ಲಿ ಅಪರೂಪ.
  • ಬಹುತೇಕ ಕೃಷಿಕರು ಸಾಧ್ಯವಾದಷ್ಟು ಸಾವಯವ ವಸ್ತುಗಳನ್ನು  ಮಣ್ಣಿಗೆ ಸೇರಿಸುತ್ತಾರೆ.
  • ಒಂದು ವೇಳೆ ಹಿತಮಿತವಾಗಿಯಾದರೂ ಸಾವಯವ ವಸ್ತುಗಳನ್ನು ಬಳಸುವ ರೈತರ ಹೊಲದಲ್ಲಿ ಎರೆಹುಳುಗಳು ಇದ್ದೇ ಇರುತ್ತವೆ.

ಹೊಲದಲ್ಲಿ ಎರೆಹುಳುಗಳ ಪ್ರಮಾಣ ಯಾಕೆ ಕಡಿಮೆಯಿರುತ್ತದೆ:

  • ಮಣ್ಣು ತೀರಾ ಒಣಗಿದ್ದರೆ ಆ ಮಣಿನಲ್ಲಿ ಎರೆಹುಳುಗಳು ತುಂಬಾ ಕಡಿಮೆ ಇರುತ್ತದೆ.
  • ಮಣ್ಣು ಹುಳಿ  ಇದ್ದರೆ ಅಲ್ಲಿಯೂ ಎರೆಹುಳುಗಳು ಕಡಿಮೆ  ಇರುತ್ತದೆ.
  • ಮರಳು ಮಣ್ಣು ಇರುವ ಕಡೆ, ಜೇಡಿ ಮಣ್ಣು ಇರುವ ಕಡೆ ಎರೆಹುಳುಗಳು ತುಂಬಾ ಕಡಿಮೆ.
  • ನೀರು ಯಾವಾಗಲೂ ನಿಂತಿರುವ ಜೌಗು ಜಾಗದಲ್ಲಿ ಎರೆಹುಳುಗಳಿಗೆ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಜೌಗು ಕಡಿಮೆಯಾಗುವ ತನಕ ಅವು ಅಲ್ಲಿ ಇರುವುದಿಲ್ಲ.
  • ಕೀಟ ನಾಶಕಗಳನ್ನು ವಿಷೇಶವಾಗಿ ಮಣ್ಣುಗೆ ಬಳಸುವ ಫೋರೇಟ್ , ಕಾರ್ಬೋಫ್ಯುರಾನ್, ಕ್ಲೋರೋಫೆರಿಫೋಸ್, ಜಂತು ಹುಳ ನಾಶಕಗಳನ್ನು ಬಳಸುವ ಕಡೆ ಅದರ ಪರಿಣಾಮ ಕ್ಷೀಣವಾಗುವ  ತನಕ ಅವು ಅಲ್ಲಿ ಇರುವುದಿಲ್ಲ.
  • ಯಾವುದೇ ತೀಕ್ಷ್ಣ  ರಾಸಾಯನಿಕ ಗೊಬ್ಬರಗಳು ಎರೆಹುಳಗಳ ದೇಹಕ್ಕೆ ತಗಲಿದರೆ ಅದಕ್ಕೆ ಹಾನಿಯಾಗುತ್ತದೆ.
  • ಹಾಗೆಂದು ಅದರ ಸಂಪರ್ಕಕ್ಕೆ ಬಂದ ಹುಳುಗಳಿಗೆ ಮಾತ್ರ ಹೀಗಾಗುತ್ತದೆ.
  • ಮಣ್ಣು ಕೊಚ್ಚಣೆ ಆಗುವ ಕಡೆಯಲ್ಲಿ ಎರೆಹುಳುಗಳ ಸಂಖ್ಯೆ ಕಡಿಮೆ ಇರುತ್ತದೆ.
ಸವಕಳಿ ತಡೆಯಲು ಮಲ್ಚಿಂಗ್ ಮಾಡಿದರೆ ಎರೆಹುಳ ಹೆಚ್ಚುತ್ತದೆ
ಸವಕಳಿ ತಡೆಯಲು ಮಲ್ಚಿಂಗ್ ಮಾಡಿದರೆ ಎರೆಹುಳ ಹೆಚ್ಚುತ್ತದೆ

ಎರೆಹುಳು ಹೆಚ್ಚಲು ಏನು ಮಾಡಬೇಕು:

  • ಹೊಲದ ಮಣ್ಣಿಗೆ ಬೆಳೆ ತ್ಯಾಜ್ಯಗಳನ್ನು ಹೇರಳವಾಗಿ ಹಾಕಬೇಕು. ರಾಸಾಯನಿಕ ಗೊಬ್ಬರಗಳನ್ನು ಸಾಧ್ಯವಾದಷ್ಟು ವಿಭಜಿತ ಕಂತುಗಳಲ್ಲಿ ಕಡಿಮೆ ಸಾಂದ್ರತೆಯಲ್ಲಿ ಬಳಕೆ ಮಾಡಬೇಕು.
  • ಮಣ್ಣಿನ ಮೇಲ್ಭಾಗದಲ್ಲಿ ಯಾವಾಗಲೂ ಹೊದಿಕೆ ಇರುವಂತೆ ನೊಡಿಕೊಂಡರೆ ತಂಪು ಮತ್ತು ತೇವ ದೊರೆತು,ಎರೆಹುಳುಗಳು ಹೆಚ್ಚಾಗುತ್ತದೆ.
  • ಮರದ ಕೆಳಭಾಗದ ಮಣ್ಣು ತೆರೆದಿರಬಾರದು.
  • ತರಗೆಲೆ ತೆಗೆದು ಸ್ವಚ್ಚ ಮಾಡುವುದು, ಮಾಡಬಾರದು.
  • ಅಂತಹ ಕಡೆ ಮಣ್ಣು ಸವಕಳಿ ಆಗದಂತೆ ನಿರುಪಯುಕ್ತ ಗೋಣಿ ಚೀಲಗಳನ್ನು  ಮುಚ್ಚಬೇಕು.
  • ಅಲ್ಲಲ್ಲಿ ಮೇಲ್ಮಣ್ಣು ಸವಕಳಿಯಾದ  ರೀತಿಯಲ್ಲಿ .ಅರ್ಧಚಂದ್ರಾಕೃತ  ಒಡ್ಡುಗಳನ್ನು ಮಾಡಿ ಮೇಲ್ಮಣ್ಣು  ಕೊಚ್ಚಿ ಹೋಗುವುದನ್ನು ತಡೆಯಬೇಕು.
  • ಮಳೆ ಕಳೆದ ನಂತರ ನೆಲಕ್ಕೆ ಸಾಧ್ಯವಾದಷ್ಟು ಹುಲ್ಲು, ತರಗೆಲೆ ಮುಂತಾದ ಸಾವಯವ ತ್ಯಾಜ್ಯಗಳನ್ನು ಹೊದಿಕೆ ಹಾಕಬೇಕು.
  • ವರ್ಷ ವರ್ಷವೂ ಮಣ್ಣಿಗೆ ಸುಣ್ಣವನ್ನು ಹಾಕುವುದರಿಂದ ಎರೆಹುಳುಗಳು ಹೆಚ್ಚಾಗುತ್ತವೆ.
  • ನಿರುಪಯುಕ್ತ ಜಾಗದಲ್ಲಿ ಮಳೆಗಾಲ ಕಳೆದ ತಕ್ಷಣ ಲಭ್ಯವಾಗುವ ಮೆಕ್ಕಲು ಮಣ್ಣನ್ನು  ಹಾಕಿದರೆ ಅಲ್ಲಿ ತೇವಾಂಶದ ಅನುಕೂಲ ದೊರೆತು ಎರೆಹುಳುಗಳು ಅಲ್ಲಿ ಉಳಿಯುತ್ತವೆ.

ಎರೆಹುಳಗಳು ಏನು ಮಾಡುತ್ತವೆ:

 ಕೆಸು, ಸುವರ್ಣಗಡ್ಡೆ ಇರುವಲ್ಲಿ ಎರೆಹುಳುಗಳ ಸಂಖ್ಯೆ ಅಧಿಕವಾಗಿರುತ್ತದೆ. ನಿರುಪಯುಕ್ತ  ಗೋಣಿ ಚೀಲಗಳನ್ನು ನೆಲಕ್ಕೆ ಹಾಸಿದ್ದರೆ ಅದರ ಅಡಿಯಲ್ಲಿ ಎರೆಹುಳುಗಳು ಹೆಚ್ಚು ಇರುತ್ತವೆ. ಇದು ನಮಗೆ ಪಾಠ. ಸಾಧ್ಯವಾದಷ್ಟು ಸಾವಯವ ಗೊಬ್ಬರ, ಮಣ್ಣಿನ ಸವಕಳಿ ತಡೆ ಯಲು ಸಾವಯವ ಮಲ್ಚಿಂಗ್  ಎರೆಹುಳುಗಳಿಗೆ ರಕ್ಷಣೆ ದೊರೆಯುತ್ತದೆ.  

  • ಎರೆಹುಳುಗಳು ಸಾವಯವ ತ್ಯಾಜ್ಯಗಳ ಅಡಿ  ಭಾಗದಲ್ಲಿ ಮೆಕ್ಕಲು ಮಣ್ಣಿನಲ್ಲಿ ವಾಸವಾಗಿರುತ್ತವೆ.
  • ತೇವಾಂಶ   ಮತ್ತು ಬ್ಯಾಕ್ಟೀರಿಯಾಗಳ ಸಹಕಾರದಿಂದ ಕಳಿಯುವ ಸಾವಯವ ವಸ್ತುಗಳನ್ನು ಅವು ತಿಂದು ಹಿಕ್ಕೆಯ ರೂಪದಲ್ಲಿ ಮೆಕ್ಕಲು ಮಣ್ಣನ್ನಾಗಿ ಪರಿವರ್ತಿಸಿ  ಹೊರಹಾಕುತ್ತವೆ.
  • ಮೆಕ್ಕಲು ಮಣ್ಣು ಇದ್ದರೆ ಅದರಲ್ಲಿ ನೀರು ಚೆನ್ನಾಗಿ ಇಂಗಿ ತೇವಾಂಶ ಹೆಚ್ಚು ಸಮಯದ ತನಕ ಉಳಿಯುತ್ತದೆ.
  • ಎರೆಹುಳುಗಳು ತೇವಾಂಶ ಇದ್ದಾಗ ಭೂಮಿಯ ಮೇಲ್ಭಾಗದಲ್ಲೂ. ತೇವಾಂಶ ಕಡಿಮೆಯಾದಾಗ ಕೆಳಕೆಳಗೂ ಹೋಗುವ ಕಾರಣ ಭೂಮಿಯಲ್ಲಿ ಸೂಕ್ಷ್ಮ  ರಂದ್ರಗಳು ಉಂಟಾಗಿ ಸಸ್ಯಗಳ ಬೇರುಗಳಿಗೆ ಉಸಿರಾಟಕ್ಕೆ ಅನುಕೂಲವಾಗುತ್ತದೆ.
  • ಎರೆಹುಳು ತೊಂದು ಹೊರ ಹಾಕಿದ ಮಣ್ಣಿನಲ್ಲಿ ಸಾರಜನಕ, ಸುಣ್ಣ, ಮೆಗ್ನೀಶಿಯಂ, ಪೊಟ್ಯಾಶ್ , ರಂಜಕ, ಪ್ರತ್ಯಾಮ್ಲ, ಸಂತೃಪ್ತತೆ ಆ ಮಣ್ಣಿನಲ್ಲಿ ಇರುತ್ತದೆ.
  • ಯಾರ ಹೊಲದಲ್ಲಿ ಕಳೆಗಳು( ಹುಲ್ಲು ಇತ್ಯಾದಿ ಸತ್ತು ಹುಟ್ಟುತ್ತಿರುವ ಸಸ್ಯಗಳು) ಇರುತ್ತವೆಯೋ ಅಲ್ಲಿ ಎರೆಹುಳುಗಳು ಇರುತ್ತವೆ.

ರೈತರು ಸಾವಯವ ಕೃಷಿ ವಿಧಾನ ಒಂದರಲ್ಲೇ ಎರೆಹುಳು ಉಳಿಯುತ್ತದೆ ಎಂದು ತಿಳಿಯಬೇಕಾಗಿಲ್ಲ. ಅಲ್ಪ ಸ್ವಲ್ಪ ಪ್ರಮಾಣದಲ್ಲಿ ರಾಸಾಯನಿಕ ಬಳಸಿದರೂ ಗರಿಷ್ಟ ಸಾವಯವ ವಸ್ತುಗಳ ಪೂರೈಕೆಯಿಂದ ಎರೆಹುಳುಗಳು ಹೆಚ್ಚಾಗುತ್ತದೆ. ಕಡಿಮೆ ಸಾಂದ್ರತೆಯ ರಾಸಾಯನಿಕ ಗೊಬ್ಬರಗಳು( 1-4%) ಎರೆಹುಳುಗಳಿಗೆ ಪೌಷ್ಟಿಕ ಆಹಾರವನ್ನೇ ಕೊಡುತ್ತವೆ.

Leave a Reply

Your email address will not be published. Required fields are marked *

error: Content is protected !!