ಅತೀ ದೊಡ್ಡ ಗಾತ್ರದ ನೇಂದ್ರ ಬಾಳೆ ಕಾಯಿ

ಅತೀ ದೊಡ್ಡ ಗಾತ್ರದ ನೇಂದ್ರ ಬಾಳೆ ಕಾಯಿ

ನೇಂದ್ರ   ಬಾಳೆಯ ಬಹು ಉಪಯೋಗದ ಕಾರಣ ಇದಕ್ಕೆ ಉಳಿದೆಲ್ಲಾ ಬಾಳೆಗಳಿಗಿಂತ ಅಧಿಕ ಬೆಲೆ. ಮತ್ತು ನಿರಂತರ ಬೇಡಿಕೆ. ಇದರಲ್ಲಿ ಒಂದು ಕಾಯಿ ¾ ಕಿಲೋಗೂ ಹೆಚ್ಚು ತೂಗುವ ಅತೀ ದೊಡ್ಡ ಗಾತ್ರದ  ಬಾಳೆ ಕಾಯಿ ಇದೆ.ಇದನ್ನು ಎಲ್ಲರೂ ಬೆಳೆಸಬಹುದು. ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ.

ಒಂದು  ಬಾಳೆಗೊನೆಯಲ್ಲಿ ಸರಾಸರಿ 3 ಹೆಣಿಗೆಗಳು, 30  ಕಾಯಿಗಳು ಸರಾಸರಿ 15  ಕಿಲೋ ತೂಕ, (20 ಕಿಲೋ ತನಕವೂ ಬರುತ್ತದೆ)ಇರುವ ಬಹು ಉಪಯೋಗಿ ಬಾಳೆ ಎಂಬುದು ಇದ್ದರೆ ಅದು ನೇಂದ್ರ ಬಾಳೆಯಲ್ಲಿ. ಈ ಬಾಳೆಗೆ ಉಳಿದ ಬಾಳೆಗಳಂತೆ ಕುಂಡಿಗೆ ಇಲ್ಲ. ಹೂ ಗೊಂಚಲು ಬಿಟ್ಟು, ಕಾಯಿ ಹೆಣಿಗೆ ತೆರೆದುಕೊಂಡ  ನಂತರ  ಅಲ್ಲಿಗೆ ಬೆಳವಣಿಗೆ ಸ್ಥಬ್ಧ. ಇದನ್ನು ಹಣ್ಣಾಗಿಯೂ ತಿನ್ನಬಹುದು. ಚಿಪ್ಸ್ ಎಂಬ ತಿನಿಸನ್ನೂ ತಯಾರಿಸಬಹುದು.  ದೊಡ್ದ ದೊಡ್ಡ ಚಿಪ್ಸ್. ಹಚ್ಚ ಹಳದಿ ಬಣ್ಣ. ಹಣ್ಣಿನ ಹಲ್ವಾ, ಪಾಯಸ, ಹೀಗೆ ಹಲವಾರು ಅಡುಗೆ ಗಳಲ್ಲೂ ಇದರ ಬಳಕೆ ಇದೆ. ಇದು ಕೇರಳ ಅಲ್ಲದೆ ಕರ್ನಾಟಕದ, ಮಹಾರಾಷ್ಟ್ರದ ಬಹುತೇಕ ಪ್ರದೇಶಗಳಲ್ಲಿ ಬೆಳೆಯಲ್ಪಡುತ್ತದೆ. ಇದನ್ನೇ ಜಾಂಜೀಬಾರ್ ಎನ್ನುತ್ತಾರೆ.

ನೇಂದ್ರದ ಮೂಲ:

  • ನೇಂದ್ರ ಅಥವಾ ನೇಂದ್ರನ್ ಇದು ಕೇರಳ ಮೂಲದದ್ದು.
  • ತ್ರಿಶೂರು ಜಿಲ್ಲೆಯ  ಚಂಗಝಿಕೋಡು ಅಥವಾ ಚೆಂಗಲಿಕೊಂಡನ್  (Chengazhikudu or Changalikodan )ಎಂಬ  ಗ್ರಾಮದಲ್ಲಿ  ಬೆಳೆಯುತ್ತಿದ್ದ ಬಾಳೆ ತಳಿ. 
  • ಚೆಂಗಲಿಕೋಡನ್ ನೇಂದ್ರನ್ ಬನನಾ ಎಂಬುದು ಇದರ ಹೆಸರು. 
  • ಇದರ ಮೂಲ ಕೊಚ್ಚಿ ಅಥವಾ ಎರ್ನಾಕುಲಂ ಜಿಲ್ಲೆಯ ಹೊನೊಲುಲು  (Honolulu) ಪ್ರದೇಶದಿಂದ ತಂದದ್ದು ಎನ್ನಲಾಗುತ್ತದೆ.
  • ಇದು ಕೇರಳದ ಪ್ರವಿತ್ರ ದೇಗುಲವಾದ  ಗುರುವಾಯೂರು ಗೋಪಾಲ ಕೃಷ್ಣ  ದೇವರಿಗೆ ಪ್ರಿಯವಾದ ಹಣ್ಣು ಎನ್ನಲಾಗುತ್ತದೆ. 
  • ತ್ರಿಶೂರು ಜಿಲ್ಲೆಯ ಚಂಗಲಿಕೊಂಡನ್ ಪ್ರದೇಶಕ್ಕೆ ಈ ಬಾಳೆಯ ಬೌಗೋಳಿಕ ಸ್ಥಾನಮಾನವೂ ದೊರೆತಿದೆ. ಇವರು ಈ ಬಾಳೆಯ ಬೆಳೆಗಾರರ ಸಂಘವನ್ನೂ ಮಾಡಿಕೊಂಡಿದ್ದಾರೆ.

ಬಾಳೆಯ ವಿಶೇಷ:

ಈ ಬಾಳೆ ಹಣ್ಣು ಎಷ್ಟು ಹಣ್ಣಾದರೂ ಗೊನೆಯಿಂದ ಉದ್ದುರುವುದಿಲ್ಲ. ಹೆಚ್ಚು ಹಣ್ಣಾದಷ್ಟೂ  ಸಿಹಿ ಹೆಚ್ಚು. ಸಿಪ್ಪೆ ಕಪ್ಪಾದರೂ ಒಳಗೆ ಹಾಳಾಗುವುದಿಲ್ಲ. ಗಟ್ಟಿ ತಿರುಳು. ಇದರ ಕಾಯಿಯಿಂದ ಧೀರ್ಘ ಕಾಲ ಕಾಪಿಡಬಹುದಾದ ಅತ್ಯುತ್ತಮ ಚಿಪ್ಸ್ ತಯಾರಿಸಲಾಗುತ್ತದೆ.  ಬೆಳೆಯಲ್ಪಡುವ ಬಾಳೆಯಲ್ಲಿ 75 % ಕ್ಕೂ ಹೆಚ್ಚು ಬಾಳೆ ಕಾಯಿ ಚಿಪ್ಸ್ ತಯಾರಿಕೆಗೇ ಬಳಕೆಯಾಗುತ್ತದೆ. ಚಿನ್ನದ ಬಣ್ಣದ ಚಿಪ್ಸ್ ಇದರಲ್ಲಿ ಮಾತ್ರ ಅಗುವುದು. ಈ ಚಿಪ್ಸ್ ಗೆ ದೇಶ ವಿದೇಶಗಳಲ್ಲಿ ಬೇಡಿಕೆ ಇದೆ. ಆ ಕಾರಣದಿಂದ ಈ ಬಾಳೆಗೆ ಯಾವಾಗಲೂ ಬೇಡಿಕೆ ಇರುತ್ತದೆ.

  • ಬಾಳೆ ನೆಟ್ಟು 9-10 ತಿಂಗಳಲ್ಲಿ  ಕಠಾವಿಗೆ ಬರುತ್ತದೆ.
  • ಈ ಬಾಳೆಯ ಹಣ್ಣಿನಿಂದ ಪ್ರಸಿದ್ದ ಬಾಳೆ ಹಣ್ಣಿನ ಹಲ್ವಾ ತಯಾರಿಸಲಾಗುತ್ತದೆ.
  • ಇದನ್ನು ಪಾಯಸಕ್ಕೂ ಬಳಕೆ ಮಾಡಲಾಗುತ್ತದೆ.
  • ಇದನ್ನು ಕಾಯಿ ಬಾಳೆ (ಪ್ಲಾಂಟೈನ್ ಬನಾನ (Plantain banana) ಎಂದು  ವರ್ಗೀಕರಿಸಲಾಗಿದೆ.

ನೇಂದ್ರದ ತಳಿಗಳು:

ನೇಂದ್ರದಲ್ಲಿ ಸುಮಾರು ನಾಲ್ಕು ತಳಿಗಳು ಚಾಲ್ತಿಯಲ್ಲಿದೆ. ಅದರ ಎರಡು ವಿಧಗಳು. ಒಂದು ಗಿಡ್ಡ ಮತ್ತು ಅಲ್ಪಾವಧಿಯ ತಳಿ. ಮತ್ತೊಂದು ದೊಡ್ಡ  ಧೀರ್ಘಾವಧಿಯ ತಳಿ. ಈ ವಿಧಗಳಲ್ಲಿ ಎರಡು  ಪರಸ್ಪರ ಪರಿವರ್ತನೆಯಿಂದ ಆದದ್ದು ಇರಬಹುದು. ಜಾಂಜೀ ಬಾರ್ ಇದು ಬೇರೆ ದೇಶದ ತಳಿ.

ಮಂಜೇರಿ ನೇಂದ್ರ
ಮಂಜೇರಿ ನೇಂದ್ರ

 ಮಂಜೇರಿ ನೇಂದ್ರ:

  • ಅಲ್ಪಾವಧಿಯ ತಳಿ  ಗಡ್ಡೆ ನೆಟ್ಟು ಸರಿಯಾದ ಆರೈಕೆಯಲ್ಲಿ  6  ತಿಂಗಳಲ್ಲಿ  ಗೊನೆ ಹಾಕಿ 8 ತಿಂಗಳಲ್ಲಿ ಕಠಾವಿಗೆ ಬರುತ್ತದೆ.
  • ಬಾಳೆ ಸುಮಾರು 6-7 ಅಡಿ ಎತ್ತರ. ಗೊನೆಯಲ್ಲಿ 3-4 ಹೆಣಿಗೆಗಳು ಮಾತ್ರ.
  • ಒಂದು ಹೆಣಿಗೆಯಲ್ಲಿ 8-10 ಕಾಯಿಗಳು ಮಾತ್ರ ಇರುತ್ತವೆ.
  • ಗೊನೆಯ ತೂಕ ಸರಾಸರಿ 12 ಕಿಲೋ. ಇದನ್ನು ಮಂಜೇರಿ ಎನ್ನುತ್ತಾರೆ.
  • ಮಂಜೇರಿ ಇದು ಕೇರಳದ ಮಲಪ್ಪುರಂ ಜಿಲ್ಲೆಯ ಒಂದು ಪಟ್ಟಣ.

ಮೈಂದೋಲಿ ನೇಂದ್ರ:

ಮೈಂದೊಲಿ ನೇಂದ್ರ
ಮೈಂದೊಲಿ ನೇಂದ್ರ
  • ಎತ್ತರದ ಬಾಳೆ ಸುಮಾರು 8 ಅಡಿ ತನಕವೂ ಬೆಳೆಯುತ್ತದೆ.
  • ಸುಮಾರು 4-5 ಹೆಣಿಗೆ ಇರುತ್ತದೆ. ಪ್ರತೀ ಹೆಣಿಗೆಯಲ್ಲಿ 8-10  ಕಾಯಿಗಳಿರುತ್ತವೆ.  
  • ಗೊನೆ ಹಾಕಲು ಮತ್ತು ಬೆಳೆಯಲು ಗಿಡ್ದ ನೇಂದ್ರಕ್ಕಿಂತ 1 ತಿಂಗಳು ಹೆಚ್ಚು ಸಮಯಾವಧಿ ಬೇಕು.
  • ಗೊನೆಯ ತೂಕ ಸರಾಸರಿ 15 ಕಿಲೋ ಬರುತ್ತದೆ. ಉತ್ತಮ ಆರೈಕೆಯಲ್ಲಿ 20 ಕಿಲೋ ತನಕವೂ ಬರುತ್ತದೆ.
  • ಇದನ್ನು ಮೈಂದೋಲಿ ಎನ್ನುತ್ತಾರೆ. ಇದನ್ನು ಕೇರಳದಲ್ಲಿ, ತಮಿಳುನಾಡಿನಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಕರ್ನಾಟಕದಲ್ಲೂ ಬೆಳೆಯುತ್ತಾರೆ.

ಶತಮಾನ ನೇಂದ್ರ:

ಶತಮಾನ ನೇಂದ್ರ
ಶತಮಾನ ನೇಂದ್ರ
  • ಇದು ಹೆಚ್ಚು ಹೆಣಿಗೆಗಳ ಜೊತೆಗೆ ಹೆಚ್ಚು ತೂಕ ಬರುವ ಬಾಳೆ.
  • ಇದನ್ನು ಬೆಳೆಸಿ ಸರಾಸರಿ 25 ಕಿಲೋ . ಇಳುವರಿ ಪಡೆದವರಿದ್ದಾರೆ.
  • ಬಾಳೆಯ ಎತ್ತರ ಸುಮಾರು 8-9 ಅಡಿ.  ವಾಣಿಜ್ಯಿಕ ಉದ್ದೇಶಕ್ಕೂ ಸೂಕ್ತವಾದದು. 
  • ಇದರಲ್ಲಿ 100 ರಷ್ಟು ಕಾಯಿಗಳು ಆಗಬಹುದು ಎಂಬ ಲೆಕ್ಕಾಚಾರ ಸುಮಾರು 50-70  ತನಕ ಆಗುತ್ತದೆ.

ಜಾಂಜೀಬಾರ್:

ಜಾಂಜೀಬಾರ್
ಜಾಂಜೀಬಾರ್
  • ಇದು  ಶ್ರೀಲಂಕಾ ಮೂಲದ ಬಾಳೆ ಎನ್ನಲಾಗುತ್ತದೆ.
  • ಇದಕ್ಕೆ ಕುಂಡಿಗೆ ಇರುವುದಿಲ್ಲ. ಹಾರ್ನ್ ಪ್ಲಾಂಟೇನ್ ಎಂಬುದಾಗಿ ಕರೆಯುತ್ತಾರೆ. 
  • ಕಾಯಿ ಅತೀ ದೊಡ್ದದು. ಒಂದು ಕಾಯಿ 3/4  ಕಿಲೋ ತನಕವೂ ತೂಗಬಲ್ಲುದು. 
  • ಬಾಳೆ ಸಾಧಾರಣ ಎತ್ತರ. ಸರಾಸರಿ  3 ಹೆಣಿಗೆಗಳು ಇರುತ್ತವೆ.
ಹೆಸರು ಇಲ್ಲದ ತಳಿ

ಹೊಸ ತಳಿ NCR-17.

  • ನೇಂದ್ರ ಬಾಳೆಯಲ್ಲಿ ಈಗ ಚಾಲ್ತಿಯಲ್ಲಿರುವ ತಳಿಗಳ ಸಾಲಿಗೆ ಹೊಸ ಬಾಳೆ ತಳಿ ರಾಷ್ಟ್ರೀಯ ಬಾಳೆ ಸಂಶೊಧನಾ  ಸಂಸ್ಥೆ (NRCB Trichi National Research Centere for Banana Tichi Tamilunadu) ಬಿಡುಗಡೆ ಮಾಡಿದ ವರದಿ ಇದೆ.
  • ಈ ಬಾಳೆಯ ಗೊನೆ 20 ಕಿಲೋ ತನಕ ತೂಗಬಲ್ಲದು.
  • ಗಾಳಿಯ ಹೊಡೆತಕ್ಕೆ ಬೀಳದಷ್ಟು ಗಟ್ಟಿಯಾದ ಬಾಳೆ. ಉತ್ತಮ ಆರೈಕೆಯಲ್ಲಿ ಇನ್ನೂ ಹೆಚ್ಚಿನ ತೂಕದ ಗೊನೆಯನ್ನು ಪಡೆಯಬಹುದು.
  • ಇದಕ್ಕೆ ನಮ್ಮ ಮಾಮೂಲು ಬಾಳೆಯ ರೋಗ, ಕೀಟ ಸಮಸ್ಯೆ ಕಡಿಮೆ ಇರುತ್ತದೆ.
ADVT 4
ADERTISEMENT

ನೇಂದ್ರ ಬೆಳೆಯುವಾಗ ಸಮಸ್ಯೆಗಳು:

  • ಈ ಬಾಳೆಗೆ ಬೇಡಿಕೆ ಯಾವಾಗಲೂ ಇರುತ್ತದೆ.  ಬೆಲೆಯೂ ಚೆನ್ನಾಗಿರುತ್ತದೆ. ಇದು ಲಾಭದಾಯಕ ಬೆಳೆ.
  • ಆದರೆ ಮಳೆಗಾಲ ಪ್ರಾರಂಭದಲ್ಲಿ ಸಿಗಾಟೋಕಾ ರೋಗ ಮತ್ತು ಮಳೆ ಪ್ರಾರಂಭವಾಗುವ ಸಮಯದಲ್ಲಿ ಕಾಂಡ ,ಗಡ್ದೆ ಕೊರೆಯುವ ಹುಳದ ಬಾಧೆ ಹೆಚ್ಚು.
  • ಇದಕ್ಕೆ ಮುಂಜಾಗ್ರತಾ ಕ್ರಮವಾಗಿ ಮಳೆಗಾಲ ಪ್ರಾರಂಭದಲ್ಲಿ ಶಿಲೀಂದ್ರ ನಾಶಕ ಸಿಂಪರಣೆ ಅಗತ್ಯ.
  • ಕೀಟ ಸಮಸ್ಯೆಗೆ ಕೀಟನಾಶಕ ( ಡೆಲ್ಟ್ರಾಮೆಥ್ರಿನ್ ಅಥವಾ ಕ್ಲೋರೋಫೆರಿಫೋಸ್) ಕಾಂಡಕ್ಕೆ ಸಿಂಪರಣೆ ಮತ್ತು ಬುಡಕ್ಕೆ ಡ್ರೆಂಚಿಂಗ್ ಮಾಡಲೇ ಬೇಕು. 
  • ಜೈವಿಕವಾಗಿಯೂ ಇದರ ನಿಯಂತ್ರಣ ಮಾಡಬಹುದು.

ನೇಂದ್ರ ಬಾಳೆಯನ್ನು ಕರ್ನಾಟಕ,ಕೇರಳ, ತಮಿಳುನಾಡಿನಲ್ಲಿ ಅಧಿಕವಾಗಿ ಬೆಳೆಯುತ್ತರೆ. ಜಾಂಜೀಬಾರ್ ಹೊರತಾಗಿ ಉಳಿದ ಬಾಳೆಗೆ ಕಾಂಡ ಕೊರಕ ಹುಳುವಿನ ಉಪಟಳ ಅಧಿಕ. ಅಧಿಕ ಸಾವಯವ ಗೊಬ್ಬರ ಅಥವಾ ರಾಸಾಯನಿಕ ಗೊಬ್ಬರ ಕೊಟ್ಟರೆ  ಉತ್ತಮ ಇಳುವರಿ ಪಡೆಯಬಹುದು.

ಗಡ್ಡೆ ನಾಟಿ ಮಾಡುವಾಗ ಬಾಳೆ ತೋಟವನ್ನು ನೋಡಿ ಗಡ್ಡೆ ಆಯ್ಕೆ ಮಾಡಬೇಕು. ಈಗ ಅಂಗಾಂಶ ಕಸಿಯ ಮೂಲಕವೂ ಸಸಿ ತಯಾರಿಸಲಾಗುತ್ತದೆ. ಸಮರ್ಪಕ ಕೀಟ ನಿರ್ವಹಣೆ ಮತ್ತು ಉತ್ತಮ ನೆಡು ಸಾಮಾಗ್ರಿ ಆಯ್ಕೆ  ಮಾಡಿದರೆ  ಇತರ ಬಾಳೆಗಿಂತ  ಉತ್ತಮ ಆದಾಯ ಕೊಡಬಲ್ಲುದು.

Leave a Reply

Your email address will not be published. Required fields are marked *

error: Content is protected !!