ಬಾಳೆ ನೆಡುವ ಸಾಂಪ್ರದಾಯಿಕ ಪದ್ದತಿ ಗಡ್ಡೆ ಅಥವಾ ಕಂದು ನಾಟಿ. ಇತ್ತೀಚೆಗೆ ಹೆಚ್ಚು ಸಂಖ್ಯೆಯ ಸಸಿಗಳ ಅಗತ್ಯಕ್ಕಾಗಿ ಅಂಗಾಂಶ ಕಸಿಯಲ್ಲಿ ಸಸ್ಯೋತ್ಪಾದನೆ ಪ್ರಾರಂಭಿಸಲಾಯಿತು. ಅಂಗಾಂಶ ಕಸಿಗೂ, ಗಡ್ಡೆ ನೆಟ್ಟು ಬಾಳೆ ಗೊನೆ ಪಡೆಯುವುದಕ್ಕೂ ವ್ಯತ್ಯಾಸ ಹೆಚ್ಚು ಏನೂ ಇಲ್ಲ. ಗಡ್ಡೆ ಸ್ವಲ್ಪ ಬೇಗ ಇಳುವರಿ ಕೊಡುತ್ತದೆ. ತೆರೆದ ವಾತಾವರಣದಲ್ಲಿ ಎರಡಕ್ಕೂ ರೋಗ ಬರಬಹುದು.
ಬಾಳೆಯ ಸಸ್ಯಾಭಿವೃದ್ದಿ ಅದರ ಜೀವ ಕೋಶಗಳ ಮೂಲಕ ಆಗುತ್ತದೆ ಇದೇ ತತ್ವದಲ್ಲಿ ಅಂಗಾಂಶ ಕಸಿಯ ಸಸ್ಯವನ್ನು ಉತ್ಪಾದಿಸಲಾಗುತ್ತದೆ. ಅಂಗಾಂಶ ಕಸಿ ಮಾನವ ಮಾಡುವಂತದ್ದು. ಕಂದುಗಳು ಬಾಳೆಯಲ್ಲಿ ಸಹಜ ಕ್ರಿಯೆಯಲ್ಲಿ ಬೆಳೆಯುವಂತದ್ದು. ಇದು ತಲತಲಾಂತರದಿಂದ ಬಂದ ಪದ್ದತಿ. ಅಂಗಾಶ ಕಸಿ ಇತ್ತೀಚಿನದ್ದು. ಎರಡೂ ಶುದ್ಧ ಸಸ್ಯೋತ್ಪಾದನೆ.
ಅಂಗಾಂಶ ಕಸಿ ಹೇಗೆ ಮಾಡುತ್ತಾರೆ?
- ಅಂಗಾಂಶ ಕಸಿಯನ್ನು ಬಾಳೆಯ ಗಡ್ಡೆಯ ಸಣ್ಣ ಸಣ್ಣ ಚೂರುಗಳನ್ನು ಕೆಲವು ಪ್ರಚೋದಕಗಳಲ್ಲಿ ಉಪಚರಿಸಿ ಅದರ ಜೀವ ಕೋಶಗಳನ್ನು ಮೊಳಕೆ ಬರಿಸಿ ಸಸಿ ಮಾಡುತ್ತಾರೆ.
- ಕೆಲವರು ಬಾಳೆಯ ಕುಂಡಿಗೆಯಲ್ಲಿ ಬರುವ ಹೂವುಗಳ ಪರಾಗವನ್ನು ಮೊಳಕೆ ಬರಿಸಿ (Anther culture) ಅದರಲ್ಲೂ ಸಸ್ಯಾಭಿವೃದ್ದಿ ಮಾಡುತ್ತಾರೆ.
- ಈ ರೀತಿ ಮೊಳಕೆ ಬರಿಸುವಿಕೆ ಒಂದು ಮುಚ್ಚಿದ ಪಾತ್ರೆಯ ಒಳಗೆ ನಡೆಯುತ್ತದೆ.
ಇಲ್ಲಿ ಮೊಳಕೆ ಬಂದ ಸಸಿಗಳನ್ನು ನಿರ್ದಿಷ್ಟ ಹಂತದ ವರೆಗೆ ಬೆಳೆಸಿ ನಂತರ ಅದನ್ನು ಹೊರ ವಾತಾವರಣದಲ್ಲಿ ( ನಿಯಂತ್ರಿತ) ವಾಗಿ ಬೆಳೆಸಿ ನಂತರ ಸ್ವಲ್ಪ ಸ್ವಲ್ಪವೇ ಹೊರ ವಾತಾವರಣಕ್ಕೆ ಹೊಂದಿಕೆ ಮಾಡಿ ಕೊನೆಗೆ ದ್ವಿತೀಯ ಸ್ಥರದ ಸಸಿಯಾಗಿ ಬೆಳೆಸಿ( ಇದನ್ನು ಹಾರ್ಡನಿಂಗ್ ಎನ್ನುತ್ತಾರೆ) ರೈತರಿಗೆ ಬೆಳೆಸಲು ಕೊಡುತ್ತಾರೆ.
ಕಂದು ಮತ್ತು ಸಸಿಗೆ ವ್ಯತ್ಯಾಸ:
- ಕಂದುಗಳು ಬಾಳೆಯ ಸಸ್ಯದಲ್ಲಿ ಸಹಜ ವಾಗಿ ಗಡ್ಡೆಯ ಮೊಳಕೆಗಳ ಮೂಲಕ ಬೆಳೆಯುವಂತದ್ದು.
- ಮಾತೃ ಗಡ್ಡೆಯು ಬೆಳೆದಂತೆ ಅದರಲ್ಲಿ ಕೆಲವು ಮೊಳಕೆಗಳ ರಚನೆಯಾಗುತ್ತದೆ.
- ಅದರಲ್ಲಿ ಬಲವಾದ ಮೊಳಕೆ ಬೇಗ ಬೆಳೆದು ಹೊರ ಬರುತ್ತದೆ. ಆ ನಂತರದಲ್ಲಿ ಒಂದೊಂದೇ ಹೊರ ಬರಲಾರಂಭಿಸುತ್ತದೆ.
- ಇದರಲ್ಲಿ ಕೆಲವು ಕತ್ತಿ ಕಂದುಗಳು ಇದ್ದರೆ ಶಕ್ತಿ ರಹಿತ ಮೊಳಕೆಗಳಿಂದ ಹೊರ ಬಂದುದು ನೀರ್ ಕಂದುಗಳಾಗಿರುತ್ತವೆ.
- ಕತ್ತಿ ಕಂದುಗಳ ಬುಡ ಭಾಗದ ಮೊಳಕೆ ಭಾಗ ಮತ್ತು ಅದನ್ನು ಪ್ರತ್ಯೇಕಿಸುವಾಗ ಅದರ ಜೊತೆಗೆ ಬರುವ ಗಡ್ಡೆ ಭಾಗ ದೊಡ್ದದಿರುವ ಕಾರಣ ಅದನ್ನು ನಾಟಿ ಮಾಡಬೇಕು ಎಂದು ಶಿಫಾರಸು ಮಾಡಲಾಗುತ್ತದೆ.
ಅಂಗಾಂಶ ಕಸಿ ಸಸಿಗಳು ಸಾಮಾನ್ಯವಾಗಿ ಏಕ ಪ್ರಕಾರದಲ್ಲಿ ಇರುತ್ತವೆ. ಇದು ಗಡ್ಡೆಯ ತರಹ ದೊಡ್ಡದಿರುವುದಿಲ್ಲ.ಸಾಮಾನ್ಯವಾಗಿ ನೀರ್ ಕಂದುಗಳ ತರಹವೇ ಇರುತ್ತದೆ. ಸುಮಾರು 3-4 ಎಲೆಗಳು ಇರುತ್ತವೆ.
ಕಂದು ನಾಟಿ ಮಾಡುವುದು?
- ಕಂದುಗಳನ್ನು ನಾಟಿ ಮಾಡುವಾಗ ಸುಮಾರು ½ ಕಿಲೋಕ್ಕಿಂತ ಹೆಚ್ಚು ತೂಕ ಇರಬಲ್ಲ ಗಡ್ಡೆಯನ್ನು ನೆಡಲು ಬಳಕೆ ಮಾಡಬೇಕು.
- ಗಡ್ಡೆ ಭಾಗವನ್ನು ಸಂಪೂರ್ಣವಾಗಿ ಯಾವುದೇ ಕೀಟಗಳು ತಿಂದ ಗುರುತು ಕಾಣದಂತೆ ಕೆತ್ತಿ ತೆಗೆದು ನಾಟಿಗೆ ಬಳಕೆ ಮಾಡಬೇಕು.
- ಕಾಂಡ ಒರಕ ಹುಳದ ಬಾಧೆ ಇದ್ದಲ್ಲಿಂದ ಬಾಳೆ ಕಂದು ಆಯ್ಕೆ ಮಾಡದಿದ್ದರೆ ಒಳ್ಳೆಯದು.
- ಗಡ್ಡೆ ನಾಟಿ ಮಾಡಿದಾಗ ಗಡ್ಡೆಯ ತೂಕಕ್ಕನುಗುಣವಾಗಿ 5-6 ತಿಂಗಳಿಗೆ ಗೊನೆ ಹಾಕುತ್ತದೆ.
- ಗಡ್ಡೆಯನ್ನು ಆಯ್ಕೆ ಮಾಡುವಾಗ ಆರೋಗ್ಯವಂತ ತೋಟದಿಂದ ಒಂದು ಗೊನೆ ಹಾಕಿದ ಬಾಳೆಯಿಂದಲೇ ಆಯ್ಕೆ ಮಾಡಬೇಕು.
- ಕೂಳೆ ಹೆಚ್ಚಾದರೆ ಜಾಗರೂಕತೆ ಬೇಕು.
ಕಂದು ಆಯ್ಕೆ ಮಾಡುವಾಗ ಬಾಳೆಯ ಸಸ್ಯದ ಆರೋಗ್ಯವನ್ನು ಕುದ್ದು ಪರಿಶೀಲಿಸಬೇಕು. ಪರಿಶೀಲಿಸುವವರಿಗೆ ವೈರಸ್ ರೋಗದ ಹಲವು ಚಿನ್ಹೆಗಳ ಪರಿಚಯ ಇರಬೇಕು.
- ಗಡ್ಡೆ ನಾಟಿ ಮಾಡಿದರೆ ಗಡ್ಡೆ ಆರೋಗ್ಯವಾಗಿದ್ದರೂ ಬೆಳೆಯುವ ಸಮಯದಲ್ಲಿ ವಾಹಕಗಳ ಮೂಲಕ ರೋಗ ಬರಬಾರದು ಎಂದಿಲ್ಲ.
- ಗಡ್ಡೆಯ ಬಾಳೆಗೂ ಸಸಿಯ ಬಾಳೆಗೂ ಗಾತ್ರದಲ್ಲಿ ಗೊನೆಯಲ್ಲಿ ಯಾವುದೇ ವೆತ್ಯಾಸ ಇಲ್ಲ.
- ಗಡ್ಡೆ ಗಾತ್ರ ವ್ಯತ್ಯಾಸವಾದರೆ ಬಾಳೆ ಸಸ್ಯದ ಗಾತ್ರವೂ ವ್ಯತ್ಯಾಸವಾಗಿ ಗೊನೆ ಒಟ್ಟೊಟ್ಟಿಗೆ ಹಾಕುವುದಿಲ್ಲ.
- ಹಾಗೆಂದು ತುಂಬಾ ವ್ಯತ್ಯಾಸ ಬರಲಾರದು. ಹೆಚ್ಚುವರಿ ಗೊಬ್ಬರ ಕೊಡುವ ಮೂಲಕ ಅದನ್ನು ಸರಿಪಡಿಸಬಹುದು.
ಅಂಗಾಂಶ ಕಸಿಗಿಡ ನಾಟಿ ಮಾಡುವುದು:
- ಅಂಗಾಂಶ ಕಸಿ ಸಸಿಗಳನ್ನು ನಾಟಿ ಮಾಡುವಾಗ ಆ ಸಸಿಗೆ ಪ್ರಾರಂಭದಿಂದಲೇ ತುಂಬಾ ನಿಗಾ ಕೊಡಬೇಕಾಗುತ್ತದೆ.
- ಎಳೆ ಸಸಿಗಳಿಗೆ ಮೊದಲು ನೆರಳು ಒದಗಿಸಬೇಕು. ತಕ್ಷಣ ನೀರಾವರಿ ಬೇಕು.
- ಬಾಳೆಯ ಸಸಿಗಳು ಏಕ ಪ್ರಕಾರ ಪೊಷಕಾಂಶ ಒದಗಿಸಿದಾಗ ಏಕ ಪ್ರಕಾರವಾಗಿ ಬೆಳೆದು ಒಟ್ಟಿಗೆ ಗೊನೆ ಹಾಕುತ್ತವೆ.
- ರೋಗ ಬರುವ ಸಾಧ್ಯತೆಗಳು ಸಸಿಗೂ ಇರುತ್ತವೆ. ಗಡೆಯನ್ನು ವೈರಸ್ ಸ್ಕ್ರೀನಿಂಗ್ ಮಾಡಬಹುದಾದರೂ ಕೆಲವೇ ಕೆಲವು ಪ್ರತಿಷ್ಟಿತ ತಯಾರಕರಲ್ಲಿ ಮಾತ್ರ ಈ ವ್ಯವಸ್ಥೆ ಇದೆ.
- ಅಂಗಾಂಶ ಕಸಿಯ ಸಸಿಗಳು ಗೊನೆ ಹಾಕಲು ಸುಮಾರು 8 ತಿಂಗಳು ಸಮಯ ಬೇಕಾಗುತ್ತದೆ. ತಳಿಗೆ ಅನುಗುಣವಾಗಿ ಗೊನೆ ಬರುವುದು.
ಯಾವುದು ಉತ್ತಮ:
- ನಿಮ್ಮಲ್ಲಿ ಯಾವ ಸಸ್ಯ ಮೂಲ ಲಭ್ಯವಿದೆಯೋ ಅದನ್ನು ನಾಟಿ ಮಾಡಬಹುದು. ಸಾಕಷ್ಟು ಕಂದುಗಳು ಇದ್ದರೆ ಅದು ಉತ್ತಮವೇ.
- ಕಂದುಗಳ ಲಭ್ಯತೆ ಕಡಿಮೆ ಇದ್ದಲ್ಲಿ ಅಂಗಾಂಶ ಕಸಿಗೆ ಹೋಗಬಹುದು.
- ಯಾವಾಗಲೂ ಗುಣಮಟ್ಟದ ತಯಾರಕರಿಂದ ಸಸಿಗಳನ್ನು ಖರೀದಿಸಿರಿ.
- ಇಲ್ಲಿಯೂ ಹೆಚ್ಚು ಹೆಚ್ಚು ಸಸ್ಯಾಭಿವೃದ್ದಿ ಮಾಡಿದಂತೇ ಅದರ ಗುಣ ವ್ಯತ್ಯಾಸ ಆಗುವ ಸಾಧ್ಯತೆ ಇಲ್ಲದಿಲ್ಲ.
ಸಸಿಗೆ ಸುಮಾರು 14-15 ರೂ ಬೆಲೆ ಇದ್ದರೆ ಗಡ್ಡೆಗೆ 5-8 ರೂ ಇರುತ್ತದೆ.
ಗಡ್ಡೆಗೂ ಸಸಿಗೂ ಯಾವ ವೆತ್ಯಾದವೂ ಇಲ್ಲ. ಇದು ಸಸ್ಯಾಭಿವೃದ್ದಿ ವಿಧಾನದ ಗಿಡವೇ ಹೊರತು ಉನ್ನತೀಕರಿಸಿದ ಸಸಿ ಅಲ್ಲ. ಅಧಿಕ ಪ್ರಮಾಣದಲ್ಲಿ ಸಸಿ ಬೇಕಾಗುವ ಉದ್ದೇಶಕ್ಕೆ ಅಂಗಾಂಶ ಕಸಿ ಯನ್ನು ಮಾಡಲಾಗುತ್ತದೆ. ಇಂದಿಗೂ ದೇಶದಲ್ಲಿ 75% ಗಡ್ಡೆ ನಾಟಿಯಿಂದಲೇ ಬೆಳೆ ಬೆಳೆಯಲಾಗುತ್ತಿದೆ.
Please tell me what fertilizer do I give for 2 months banna plan
https://kannada.krushiabhivruddi.com/?p=276
https://kannada.krushiabhivruddi.com/?p=495
https://kannada.krushiabhivruddi.com/?p=901
https://kannada.krushiabhivruddi.com/?p=912
please read above articles for all types of information