ಅಡಿಕೆ ಸಸಿ ನೆಡುವಾಗ ಬಾಳೆ ನೆಟ್ಟರೆ ಏನು ಪರಿಣಾಮ?

by | Jun 9, 2022 | Arecanut (ಆಡಿಕೆ) | 0 comments

ಅಡಿಕೆ ತೋಟದಲ್ಲಿ ಅನುತ್ಪಾದಕ ಮರಗಳ ಪ್ರಮಾಣ  ಹೆಚ್ಚಳವಾಗಲು ಮುಖ್ಯ ಕಾರಣ ಸ್ಪರ್ಧೆ ಕೊಡುವ ಮಿಶ್ರ ಬೆಳೆ. ಅಡಿಕೆ ಸಸಿಗಳಲ್ಲಿ ಅಸಮತೋಲನ ಬೆಳವಣಿಗೆ, ಸಣಕಲು ಸಸ್ಯ , ಎಲೆಗಳು ಕಡಿಮೆ ಯಾಗುವುದು ಸರಿಯಾಗಿ ಬೆಳವಣಿಗೆ ಹೊಂದರೆ ಇರುವುದು,ಬಿಸಿಲಿನ ತಾಪಕ್ಕೆ ಹೊಂದಿಕೊಳ್ಳುವ ಶಕ್ತಿ ಕಡಿಮೆಯಾಗುವುದು  ಎಲ್ಲದಕ್ಕೂ ಕಾರಣ ಸೂಕ್ತವಲ್ಲದ ಮಿಶ್ರ ಬೆಳೆ. ಮೊದಲ ಒಂದೆರಡು ವರ್ಷ  ಮಿಶ್ರ ಬೆಳೆಯಾಗಿ ಬಾಳೆ ಬೆಳೆಯುವುದು.

 • ಸಾಮಾನ್ಯವಾಗಿ ಹೆಚ್ಚಿನವರು ಅಡಿಕೆ ಸಸಿ ನೆಡುವಾಗ ಬಾಳೆ ನಾಟಿ ಮಾಡಲು ಬಯಸುತ್ತಾರೆ.
 • ಬಾಳೆ ಬೆಳೆದರೆ ಅಡಿಕೆ ತೋಟದ ಸ್ವಲ್ಪ ಖರ್ಚು ಹುಟ್ಟುತ್ತದೆ ಎಂಬುದು ಸರಿಯಾದರೂ ಅಡಿಕೆ ತೋಟವೇ ಮುಂದೆ ಹಾಳಾಗುತ್ತದೆ..
 • ಅಡಿಕೆ ಸಸಿ ನಾಟಿ ಮಾಡುವ ಸಮಯದಲ್ಲಿ ಬಾಳೆ  ಬೆಳೆಸಿದರೆ ಅಡಿಕೆ ತೋಟದಲ್ಲಿ ಅನುತ್ಪಾದಕ ಮರಗಳ ಸಂಖ್ಯೆ ಹೆಚ್ಚುತ್ತದೆ.
 • ಅಂತಹ ಅಡಿಕೆ ತೋಟದಲ್ಲಿ  ಉತ್ತಮ ಫಸಲು ಬರುವುದಿಲ್ಲ.
 • ಮೊದಲ ಎರಡು ಮೂರು ವರ್ಷ  ಬಾಳೆಗಿಂತ ಎರಡು ಪಾಲು ಹೆಚ್ಚು ಆದಾಯ ಕೊಡಬಲ್ಲ ಮಿಶ್ರ ಬೆಳೆಗಳು ಇವೆ.
 • ಅನನಾಸು, ಶುಂಠಿ, ಅರಶಿನ ಹಾಗೆಯೇ ಸಾಧ್ಯವಿದರೆ ಸ್ಪರ್ಧೆ ಮಾಡದಂತಹ ತರಕಾರಿ ಬೆಳೆಗಳನ್ನು ಬೆಳೆಯಬಹುದು.
ಅಡಿಕೆ ತೋಟದಲ್ಲಿ ಬಾಳೆ ಬೆಳೆದರೆ 2 ವರ್ಷವಾದರೂ ಬೆಳವಣಿಗೆ ಇಷ್ಟೇ.

ಅಡಿಕೆ ತೋಟದಲ್ಲಿ ಬಾಳೆ ಬೆಳೆದರೆ 2 ವರ್ಷವಾದರೂ ಬೆಳವಣಿಗೆ ಇಷ್ಟೇ.

ಅಡಿಕೆ – ಬಾಳೆ ಹೊಂದಿಕೆ ಇಲ್ಲ:

 • ಅಡಿಕೆ ಮತ್ತು ಬಾಳೆ ಎಲ್ಲಾ ಸಮಯದಲ್ಲೂ ಹೊಂದಾಣಿಕೆಯಾಗುವ ಬೆಳೆಗಳಲ್ಲ.
 • ಅಡಿಕೆ ಸಸಿಯ ಎಳೆ  ಪ್ರಾಯದಲ್ಲಿ  ಬಾಳೆಯನ್ನು  ಬೆಳೆಸಿದರೆ ಎಳೆ ಪ್ರಾಯದ ಅಡಿಕೆ ಸಸಿಗಳ  ಕೆಲವು ಅಗತ್ಯ ಬೆಳೆವಣಿಗೆಗೆ ತೊಂದರೆ  ಉಂಟಾಗುತ್ತದೆ.
 • ಅಡಿಕೆ, ತೆಂಗು ಮುಂತಾದ ಧೀರ್ಘಾವಧಿಯ ಬೆಳೆಗಳಲ್ಲಿ ರೈತರು ಅನುಸರಿಸಬೇಕಾದ ಮಹತ್ವದ ಬೇಸಾಯ ಕ್ರಮ, ಎಳೆ ಪ್ರಾಯದ ಸೂಕ್ತ ನಿರ್ವಹಣೆ.
 • ಒಂದು ಅಡಿಕೆ ಸಸಿ ಒಂದು ವರ್ಷಕ್ಕೆ ಇಷ್ಟೇ ಬೆಳವಣಿಗೆ ಹೊಂದಬೇಕು, ಎರಡು ವರ್ಷಕ್ಕೆ ಇಷ್ಟು ಬೆಳವಣಿಗೆ ಹೊಂದ ಬೇಕು. ಮೂರನೇ ವರ್ಷಕ್ಕೆ ಹೂ ಗೊಂಚಲು ಬಿಡಬೇಕು ಎಂಬುದು ಅದರ ಬೆಳೆ ಶಾಸ್ತ್ರ.
 • ಪ್ರಾರಂಭದ ಎರಡುಮೂರು ವರ್ಷದ ಆರೈಕೆ ಮತ್ತು ಸಮಯದಲ್ಲಿ ಸಸಿಯ ಅಂತರ್ಗತ ಶಕ್ತಿ, ಅದರ ಜೀವಮಾನದ   ಉತ್ಪಾದಕತೆಯನ್ನು ನಿರ್ಧರಿಸುತ್ತದೆ.
 • ಎಳೆ, ಪ್ರಾಯದಲ್ಲಿ  ಅದನ್ನು ನಾವು ಹೆಚ್ಚು ನಿಗಾ ಕೊಟ್ಟು ಸಾಕಬೇಕು. ನಂತರ ಅದು ನಮ್ಮನ್ನು ಸಾಕುತ್ತದೆ.
 • ಬಾಳೆ ನೆಟ್ಟರೆ ಅಡಿಕೆ ಸಸ್ಯಕ್ಕೆ ಬೆಳವಣಿಗೆಗೆ ಬೇಕಾಗುವ ಬೆಳಕಿನ ಕೊರತೆ ಆಗುತ್ತದೆ. ಬೆಳಕು ಕಡಿಮೆ ಆದರೆ ಅಡಿಕೆ ಗಿಡದ  ಬೆಳವಣಿಗೆಯನ್ನು  ಹತ್ತಿಕ್ಕಲ್ಪಡುತ್ತದೆ.
 • ಬಹಳಷ್ಟು ಜನರ ಅಡಿಕೆ ತೋಟಗಳಲ್ಲಿ ಸಪುರ, ಅನುತ್ಪಾದಕ ಮರಗಳು ಹೆಚ್ಚಾಗಿದ್ದರೆ ಅಲ್ಲಿ ಬಾಳೆ ನೆಡಲಾಗಿದೆ ಎಂದು ತಿಳಿಯಬಹುದು.
ಅಡಿಕೆ -ಬಾಳೆ ಬೆಳೆದಲ್ಲಿ 2 ವರ್ಷದ ಗಿಡ.

ಅಡಿಕೆ -ಬಾಳೆ ಬೆಳೆದಲ್ಲಿ 2 ವರ್ಷದ ಗಿಡ.

ಬಾಳೆ  ಬೆಳೆಸಿದರೆ ಏನಾಗುತ್ತದೆ:

 • ಬಾಳೆಗೆ ತಾಯಿ ಬೇರು ಇಲ್ಲ. ಅಡಿಕೆಗೂ ತಾಯಿ ಬೇರು ಇಲ್ಲ. ಬಾಳೆಯ ಬೇರು ನೆಲದ ಪೂರ್ತಿ ಕೇವಲ 3-4 ತಿಂಗಳಲ್ಲಿ ಆವರಿಸುತ್ತದೆ. ಅಡಿಕೆ ಅದರ 5% ವೂ ಇಲ್ಲ.
 • ಬಾಳೆ ಬೆಳೆ ಕೆಲವೇ ಸಮಯದಲ್ಲಿ ಬಾರೀ ಬೆಳವಣಿಗೆಯಾಗುವ ಸಸ್ಯ. ಸುಮಾರು 6-7 ತಿಂಗಳಿಗೆ ಕನಿಷ್ಟ 6 ಅಡಿ ಸುತ್ತಳತೆಯನ್ನು ವ್ಯಾಪಿಸುತ್ತದೆ.
 • ಅಷ್ಟು ಬೆಳೆಯಬೇಕಿದ್ದರೆ ಅದು ಅಷ್ಟೇ ವೇಗವಾಗಿ ಲಭ್ಯವಿರುವ ಎಲ್ಲಾ ಪೋಷಕಾಂಶಗಳನ್ನೂ  ಹೀರಿಕೊಳ್ಳುತ್ತದೆ.
 • ಬಾಳೆಯ ಬೇರಿನ ಬೆಳೆವಣಿಗೆ ದಿನಕ್ಕೆ 1-2 ಇಂಚಿನಷ್ಟು. ಅಡಿಕೆ ಸಸ್ಯದ ಬೇರಿನ ಬೆಳೆವಣಿಗೆ  ದಿನಕ್ಕೆ ಹೆಚ್ಚೆಂದರೆ 1-2  ಮಿಲಿ ಮೀಟರುಗಳಷ್ಟು.
 • ಅಡಿಕೆ  ಸಸ್ಯಕ್ಕೆ  ನಾವು ಕೊಡುವ ಎಲ್ಲಾ ಪೋಷಕಾಂಶಗಳನ್ನೂ ಬಾಳೆ ಸಸ್ಯವು ತನ್ನ ಆಹಾರ ದಾಹೀ ಬೇರುಗಳ ಮೂಲಕ ಮೊದಲು ಬಳಸಿಕೊಳ್ಳುತ್ತವೆ.
 • ಅಡಿಕೆ ಸಸಿಗಳಿಗೆ ಬೇಕಾದಾಗ ಪೋಷಕಗಳ ಲಭ್ಯತೆ ಇಲ್ಲದಾಗುತ್ತದೆ.
 • ಯಾವುದೇ ಸಸ್ಯವು ಉತ್ತಮವಾಗಿ ಬೆಳೆಯಲು ಅಗತ್ಯ ಪ್ರಮಾಣದಲ್ಲಿ ಬೆಳೆಕು ಬೇಕು. ಬಾಳೆಯನ್ನು  ಬೆಳೆಸಿದಾಗ ಅವಶ್ಯಕತೆಗಿಂತ ಕಡಿಮೆ ಬಿಸಿಲು ಲಭಿಸಿ ಸರಿಯಾಗಿ ದ್ಯುತಿಸಂಸ್ಲೇಷಣ ಕ್ರಿಯೆ ನಡೆಯದೆ ಸಸ್ಯ ಬಡವಾಗುತ್ತದೆ.
 • ಬಾಳೆ ಬೆಳೆಗೆ ಅಧಿಕ ಪ್ರಮಾಣದಲ್ಲಿ ಜಂತು ಹುಳ( ನಮಟೋಡು) ಬಾಧೆ ಇರುತ್ತದೆ. ಇದು ಬಾಳೆಯಲ್ಲದೆ ಅಡಿಕೆ ಸಸ್ಯಕ್ಕೂ ವ್ಯಾಪಿಸುವ ಸಾಧ್ಯತೆ  ಇದ್ದು, ಇದು ಅಡಿಕೆ ಸಸ್ಯದ ಬೇರಿನ ಬೆಳೆವಣಿಗೆಯನ್ನು ಹತ್ತಿಕ್ಕುತ್ತದೆ.
 • ಇನ್ನೂ ಬಾಳೆಯ ಕಾರಣದಿಂದ ( ಕಂದು, ಮಗುಚಿ ಬೀಳುವುದು ಇತ್ಯಾದಿ) ಉಂಟಾಗುವ ನಷ್ಟ ಬೇರೆ ಇದೆ.
 • ಮಳೆಗಾಲದಲ್ಲಿ ನೀರು ಹೆಚ್ಚಾಗಿ ಅಡಿಕೆ ಸಸಿಗಳ ಕೊಳೆಯುವಿಕೆಗೂ ಕಾರಣವಾಗುತ್ತದೆ.

ಅಡಿಕೆಗೆ ಬೆಳೆಕಿನ ಕೊರತೆ ಹೀಗೆ

ಅಡಿಕೆ ಸಸಿಯೊಂದಿಗೆ ಸೂಕ್ತ ಮಿಶ್ರ ಬೆಳೆ:

 • ಅಡಿಕೆ ಸಸಿ ನೆಟ್ಟು ಮೊದಲನೇ ವರ್ಷ ಬೆಳೆಸಬಹುದಾದ ಮಿಶ್ರ ಬೆಳೆಗಳಲ್ಲಿ ಅರಶಿನ – ಶುಂಠಿ ಅಥವಾ ಅನನಾಸು.
 • ಈ ಮೂರೂ ಬೆಳೆಗಳನ್ನೂ ಸಸಿ ಬೆಳೆಸಿದ ನಂತರ ಯಾವುದೇ ವರ್ಷದಲ್ಲೂ ಮಿಶ್ರ ಬೆಳೆಯಾಗಿ ಬೆಳೆಸಬಹುದು.
 • ಬಾಳೆಯನ್ನು ಅಡಿಕೆ ಸಸಿಗೆ  ಸುಮಾರು 5 ವರ್ಷ ಕಳೆದ ನಂತರ ನಾಟಿ ಮಾಡಬೇಕು. ಈ ಸಮಯದಲ್ಲಿ ಬಾಳೆಗೆ  ನೆರಳು – ಬೆಳೆಕು ಸಮನಾಗಿ ಹಂಚಿಕೆಯಾಗಿ  ದೊರೆತು ಬಾಳೆಯ ಗೊನೆ ಉತ್ತಮ ಗಾತ್ರದಲ್ಲಿ  ದೊರೆಯುತ್ತದೆ.
 • ಈ ಸಮಯದಲ್ಲಿ ಅಡಿಕೆ ಸಸಿ ಬಾಳೆಗಿಂತ ಎತ್ತರಕ್ಕೆ ಬೆಳೆದು ಬೆಳಕಿನ ಕೊರತೆ ಅನುಭವಿಸುವುದಿಲ್ಲ.
ಅಡಿಕೆ ಗಿಡ ಇಷ್ಟು ಬೆಳೆದ ಮೇಲೆ ಬಾಳೆ ಹಾಕಿದರೆ ಎರಡಕ್ಕೂ ತೊಂದರೆ ಇಲ್ಲ.

ಅಡಿಕೆ ಗಿಡ ಇಷ್ಟು ಬೆಳೆದ ಮೇಲೆ ಬಾಳೆ ಹಾಕಿದರೆ ಎರಡಕ್ಕೂ ತೊಂದರೆ ಇಲ್ಲ.

 • ನಾವು ತಿಳಿದಂತೆ ಬಾಳೆಗೆ ಸ್ವಲ್ಪ ಮಟ್ಟಿನ ನೆರಳು ಉತ್ತಮ ಇಳುವರಿಗೆ ಸಹಾಯಕವಾಗುತ್ತದೆ. ಅಡಿಕೆ ತೋಟಕ್ಕೂ  ಫಲ ಕೊಡುವ ಸಮಯದಲ್ಲಿ ಇದು ಸೂಕ್ತಸೂಕ್ಷ್ಮ  ವಾತಾವರಣವನ್ನು  ಕೊಡುತ್ತದೆ.
 • ಗೊನೆ ಹಾಕಿದಾಗ  ಬಾಳೆ ಯನ್ನು ಆಧರಿಸಲು ಅಡಿಕೆ ಮರಗಳು ನೆರವಾಗುತ್ತವೆ.
 • ಕೆಲವರು ಅಡಿಕೆ ಸಸಿಯ ಜೊತೆಗೆ ಬಾಳೆ ನಾಟಿ ಮಾಡಿದರೆ ಅಡಿಕೆಗೆ ನೆರಳು ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ ಎಂದು ವಾದಿಸುತ್ತಾರೆ. ಅಡಿಕೆ ಸಸಿಗೆ ಅಂತಹ ನೆರಳು ಬೇಕಾಗಿಲ್ಲ. ಮಣ್ಣಿನ ಫಲವತ್ತತೆ ನಷ್ಟವಾಗದಂತೆ  ಅಡಿಕೆ ಜೊತೆಗೆ ತೊಗರಿ ಸಸ್ಯವನ್ನು ನಾಟಿ ಮಾಡಿದರೆ ಸಾಕಾಗುತ್ತದೆ.ಅಡಿಕೆ ಸಸಿಗೆ ಮಕರ ಸಂಕ್ರಮಣದ ತನಕ ನೆರಳು ಹೆಚ್ಚು ಬೇಕಾಗುತ್ತದೆ. ನಂತರ ವಾತಾವರಣದಲ್ಲಿ ಅರ್ಧ್ರತೆ ಹೆಚ್ಚು ಇರುವ ಕಾರಣ ಅಂತಹ ತೊಂದರೆ ಇರುವುದಿಲ್ಲ.
 • ಸರಿಯಾದ ಪೋಷಕಾಂಶ ನಿರ್ವಹಣೆ ಮತ್ತು ಬೇಸಾಯ ಕ್ರಮದಲ್ಲಿ ನೆರಳು ರಹಿತವಾಗಿ ಚೆನ್ನಾಗಿ ಸಸಿ ಬೆಳೆಸಬಹುದು.
ಅನನಾಸು ಮತ್ತು ಅಡಿಕೆ 2 ವರ್ಷದಲ್ಲಿ ಅಡಿಕೆ ಗಿಡದ ಬೆಳವಣಿಗೆ.

ಅನನಾಸು ಮತ್ತು ಅಡಿಕೆ 2 ವರ್ಷದಲ್ಲಿ ಅಡಿಕೆ ಗಿಡದ ಬೆಳವಣಿಗೆ.

 • ಯಾರು ಮೊದಲ ಎರಡು – ಮೂರು ವರ್ಷ ಕಾಲ ಬಾಳೆಯನ್ನು ಮಿಶ್ರ ಬೆಳೆಯಾಗಿ ಬೆಳೆಸಲಿಲ್ಲವೋ ಅಲ್ಲೆಲ್ಲಾ ಅಡಿಕೆ ತೋಟ ದಲ್ಲಿ ಅನುತ್ಪಾದಕ ಮರಗಳು ತುಂಬಾ ಕಡಿಮೆ.
 • ಅಡಿಕೆ – ತೆಂಗಿನ ಮರಕ್ಕೆ ಎಳೆಯ ಪ್ರಾಯದಲ್ಲಿ ಬುಡ ಭಾಗದಲ್ಲಿ ಬೊಡ್ಡೆ (Bole) ಬೆಳೆದರೆ  ಅದರ ಶಕ್ತಿಯೇ ಬೇರೆ ಇರುತ್ತದೆ. ಅಧಿಕ ನೆರಳು, ಆಹಾರದ ಕೊರೆತೆ ಇದರಿಂದ ಬಹುತೇಕ ಅಡಿಕೆ ಸಸ್ಯಗಳು ಬೊಡ್ಡೆ ಬಿಡುವುದೇ ಇಲ್ಲ.

ಅಡಿಕೆ  ಬೆಳೆಸುವ ರೈತರು ಸೂಕ್ತ ಮಿಶ ಬೆಳೆಯನ್ನು ಆರಿಸಿಕೊಂಡರೆ ಮೂರೇ ವರ್ಷದಲ್ಲಿ  ಜಾಗದ ಮತ್ತು ಅಡಿಕೆ  ತೋಟದ ಖರ್ಚನ್ನು ಅದರಲ್ಲಿ ಗಳಿಸಬಹುದು. ಸಸಿಯಾಗಿ ತಿಳಿದುಕೊಳ್ಳದೆ ಯಾರೋ ಹೇಳಿದರು ಎಂದು ಬಾಳೆ ಬೆಳೆದರೆ ಅಡಿಕೆ ತೋಟದ ಭವಿಷ್ಯ ಹಾಳಾಗುತ್ತದೆ.

end of the article:————————————————————————-
search words: Areca intrecrop# Banana and arecanut palm# Ginger and areca#  Pinaple and arecanut palm# good growth of areca plant in innitial stage# suitable intercrop with areca palm# areca

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!