ಬಾಳೆ ಬೆಳೆಗಾರರಿಗೆ ಕಂದುಗಳ ನಿಯಂತ್ರಣ ಒಂದು ದೊಡ್ಡ ಸಮಸ್ಯೆ. ಕಂದುಗಳು ಕಡಿಮೆಯಾದಷ್ಟೂ ಬಾಳೆ ಗೊನೆ ಚೆನ್ನಾಗಿ ಬರುತ್ತದೆ.
ಬಾಳೆ ನೆಟ್ಟು ಸುಮಾರು 5-6 ತಿಂಗಳಿಗೆ ಕಂದುಗಳು ಬರಲಾರಂಭಿಸುತ್ತವೆ. ಕಂದುಗಳು ಬಂದ ನಂತರ ಇರುವ ಆಹಾರ ಅವುಗಳಿಗೂ ಹಂಚಿಕೆಯಾಗಬೇಕು. ಆಗ ಹೆಚ್ಚು ಹೆಚ್ಚು ಗೊಬ್ಬರಗಳನ್ನು ಕೊಡಬೇಕು. ಕಂದುಗಳನ್ನು ನಿಯಂತ್ರಿಸಿಕೊಂಡರೆ ಬಾಳೆಗೆ ಪೋಷಕಾಂಶ ಹಾಗೂ ನೀರಾವರಿ ಕಡಿಮೆ ಸಾಕಾಗುತ್ತದೆ. ಬಾಳೆ ಗೊನೆ ಪುಷ್ಟಿಯಾಗಿ ಬೆಳೆಯುತ್ತದೆ. ಹಾಗಾದರೆ ಬಾಳೆಯಲ್ಲಿ ಕಂದುಗಳನ್ನು ತೆಗೆಯುವ ವಿಧಾನ ಹೇಗೆ?
- ಕಂದುಗಳ ನಿಯಂತ್ರಣಕ್ಕೂ ಬಾಳೆಯ ಅಧಿಕ ಇಳುವರಿಗೂ ನೇರ ಸಂಬಂಧ.
- ಬಹಳ ಜನ ಅದನ್ನು ಕಡಿದು ನಿಯಂತ್ರಣ ಮಾಡುವ ಪ್ರಯತ್ನ ಮಾಡುತ್ತಾರೆ.
- ಆದರೆ ಅದು ಮತ್ತೆ ಮತ್ತೆ ಬರುತ್ತಿರುತ್ತದೆ.
- ಬೆಳವಣಿಗೆ ಆಗದಂತೆ ಕಂದುಗಳನ್ನು ನಿಯಂತ್ರಿಸಿಕೊಂಡರೆ ಮಾತ್ರ ಹೆಚ್ಚು ಪ್ರತಿಫಲ.
ಕಂದು ನಿಯಂತ್ರಣ ಸುಲಭವಲ್ಲ:
- ಬಾಳೆ ಬೆಳೆಯಲ್ಲಿ ಪುಟ್ಟು ಬಾಳೆಯಲ್ಲಿ ಅಧಿಕ ಪ್ರಮಾಣದಲ್ಲಿ ಕಂದುಗಳು ಬರುವುದು.
- ಹಾಗೆಂದು ಇತರ ಬಾಳೆಗಳಲ್ಲಿ ಬರುವುದಿಲ್ಲ ಎಂದಲ್ಲ.
- ಎಲ್ಲಾ ಬಾಳೆಯಲ್ಲೂ ಕಂದುಗಳು ಬರುತ್ತವೆ. ಇದು ವೇಗವಾಗಿ ಬೆಳೆಯುತ್ತದೆ.
- ಹಾಗೆಯೇ ಬಿಟ್ಟರೆ ಮುಖ್ಯ ಬಾಳೆಗೊನೆ ಹಾಕಲು ಸಿದ್ದವಾಗುವಾಗ ಇದೂ ಸಜ್ಜಾಗುವಷ್ಟು ಬೆಳೆದಿರುತ್ತದೆ.
- ಮೊದಲು ಬಂದ ಕಂದು ವೇಗವಾಗಿ ಬೆಳೆಯುತ್ತದೆ.
- ನಂತರದ ಕಂದುಗಳ ಬೆಳವಣಿಗೆ ನಿಧಾನಗತಿಯಲ್ಲಿರುತ್ತದೆ.
- ಇದನ್ನು ಕಡಿದು ನಿಯಂತ್ರಿಸಿದರೆ ಮತ್ತೆ ಮತ್ತೆ ಬೆಳವಣಿಗೆ ವೇಗವಾಗುತ್ತದೆ.
- ಮೆಟ್ಟಿದರೂ ಹಾಗೆಯೇ ಆಗುತ್ತದೆ.
ಇದನ್ನು ಬೆಳವಣಿಗೆ ಆಗದಂತೆ ನಿಯಂತ್ರಿಸುವ ಬಗ್ಗೆ ಗುಜರಾತ್ ನ ನವಸಾರಿಯ ಗುಜರಾತ್ ಕೃಷಿ ವಿಶ್ವವಿಧ್ಯಾನಿಲಯದ ವಿಜ್ಞಾನಿಗಳು ಶಿಫಾಸರು ಮಾಡುವುದು, ಕಂದುಗಳನ್ನು ಮತ್ತೆ ಬೆಳೆಯದಂತೆ ಅದರ ಬೆಳವಣಿಗೆಯ ಮೊಳಕೆ (Bud) ಅನ್ನು ಹತ್ತಿಕ್ಕುವ ವಿಧಾನ.
ಯಾವ ವಿಧಾನ:
- ಬಾಳೆಯ ಕಂದುಗಳನ್ನು ಸಾಧ್ಯವಾದಷ್ಟು ತಳ ಭಾಗದಿಂದ ತುಂಡರಿಸಬೇಕು.
- ತಳ ಭಾಗದಲ್ಲಿ ಗಡ್ಡೆಯ ಒಂದು ಬದಿಯಿಂದ ಕಂದು ಹುಟ್ಟಿಕೊಳ್ಳುತ್ತವೆ.
- ಆ ಭಾಗದಿಂದ ಲೇ ಬೇರ್ಪಡುವಂತೆ ಕಂದನ್ನು ಪ್ರತ್ಯೇಕಿಸುವುದರಿಂದ ಮತ್ತೆ ಮೊಳಕೆ ಒಡೆಯಲು ಸಮಯ ತಗಲುತ್ತದೆ.
- ಸಾಧ್ಯವಾದಷ್ಟೂ ಕಂದು ಮೊಳಕೆ ಕೊಡುವ ಹಂತದಲ್ಲೇ ಅದನ್ನು ತೆಗೆಯಬೇಕು.
- ಎಲ್ಲಿ ಮೊಳಕೆ ಕಾಣಿಸುತ್ತದೆಯೋ ಆ ಭಾಗದಲ್ಲಿ ಕಂದು ಮೊಳಕೆ ಇರುತ್ತದೆ.
- ಅಲ್ಲಿಗೇ ಭರ್ಚಿಯಂತಹ ಸಾಧನದಿಂದ ಕುಟ್ಟಿ ಅದನ್ನು ಬೇರ್ಪಡುವಂತೆ ಮಾಡಬೇಕು.
- ಎರಡನೆಯ ವಿಧಾನದಲ್ಲಿ ಕಂದುಗಳನ್ನು ಸಾಧ್ಯವಾದಷ್ಟು ಕೆಳ ಭಾಗದಿಂದ ಕಡಿಯಬೇಕು.
- ಕಡಿಯುವಾವಾಗ ಸಮತಟ್ಟಾಗಿ ಕಡಿಯುವುದು ಮುಖ್ಯ.
- ಕಡಿದ ಭಾಗದ ಮಧ್ಯದಲ್ಲಿ ಸುಳಿ ಭಾಗ ಇರುತ್ತದೆ.
- ಈ ಸುಳಿ ಭಾಗಕ್ಕೆ ಗಟ್ಟಿಯಾದ ಕೋಲಿನಿಂದ ಗಟ್ಟಿಯಾಗಿ ಒತ್ತಿ ತೂಲು ಮಾಡಬೇಕು.
- ಮತ್ತೆ ಅದೇ ಕೋಲನ್ನು ಕೆರೋಸಿನ್ ಎಣ್ಣೆ ಅಥವಾ ಡೀಸೆಲ್ ನಲ್ಲಿ ಅದ್ದಿ, ಮತ್ತೆ ತೂತು ಮಾಡಿದ ಭಾಗಕ್ಕೆ ಹಾಕಬೇಕು.
- ತೂತಿನ ಒಳಗೆ 3-4 ಮಿಲಿ ಯಷ್ಟು ಕೆರೋಸಿನ್ ಬೀಳಬೇಕು.
- ಆಗ ಕೆರೋಸಿನ್ ಅಥವಾ ಡೀಸೆಲ್ ಆ ಬಾಗಕ್ಕೆ ತಾಗಿ ಅಲ್ಲಿ ಮೊಳಕೆ ಬೆಳೆಯುವುದನ್ನು ಹತ್ತಿಕ್ಕುತ್ತದೆ.
- ಮೂರನೆಯ ವಿಧಾನ:
- ಕಂದುಗಳನ್ನು ಕಡಿದು ಎರಡನೇ ವಿಧಾನದಲ್ಲಿ ಮಾಡಿದಂತೆ ಕೋಲಿನಿಂದ ಸುಳಿ ಭಾಗವನ್ನು ತೂತು ಮಾಡುವುದು.
- ಮತ್ತೆ ಕೋಲನ್ನು 2-4 D ಕಳೆ ನಾಶಕದಲ್ಲಿ ಅದ್ದಿ ಮತ್ತೆ ಅದೇ ತೂತಿಗೆ ಹಾಕುವುದು.
- 100 ಗ್ರಾಂ 2-4 D ಕಳೆ ನಾಶಕದ ಹುಡಿಗೆ 160 ಗ್ರಾಂ ಅಥವಾ ಮಿಲಿ. ನೀರನ್ನು ಹಾಕಿ ಕಲಕಿರಬೇಕು.
- ಪ್ರಮಾಣವನ್ನು 1:16 ರಂತೆ ಮಾಡಿಕೊಳ್ಳಬೇಕು.
- ಈ ವಿಧಾನದಲ್ಲಿ 80% ಕಂದುಗಳ ನಿಯಂತ್ರಣ ಮಾಡಬಹುದು.
- ಕಂದುಗಳನ್ನು ಬಾಳೆ ಗೊನೆ ಹಾಕಿ ಅರ್ಧ ಪಾಲು ಬೆಳೆಯುವ ತನಕ ಹತ್ತಿಕ್ಕಿದರೆ ಬಾಳೆಗೊನೆ ದೊಡ್ಡದಾಗಿ ಬರುತ್ತದೆ.
- ಗೊನೆಯು ಪುಷ್ಟಿಯಾಗಿಯೂ ಬೆಳೆಯುತ್ತದೆ.
ನಂತರ ಬಂದ ಕಂದುಗಳಲ್ಲಿ ಬಲಿಷ್ಟವಾದ ಒಂದು ಕಂದನ್ನು ಉಳಿಸಿಕೊಂಡು ಉಳಿದ ಕಂದನ್ನು ಇದೇ ರೀತಿಯಲ್ಲಿ ನಿಯಂತ್ರಿಸಿದರೆ ಮತ್ತೆ 4 ತಿಂಗಳಲ್ಲಿ ಕಂದು ಗೊನೆ ಹಾಕಲು ಸಿದ್ದವಾಗುತ್ತದೆ. ಕಂದುಗಳ ನಿಯಂತ್ರಣ ಮಾಡಿದಷ್ಟೂ ಬಾಳೆಯ ಕಾಂಡ ದಪ್ಪವಾಗುತ್ತದೆ. ಕಾಂಡ ದಪ್ಪವಾದಷ್ಟೂ ಗೊನೆ ದೊಡ್ಡದಾಗಿ ಬರುತ್ತದೆ.
0 Comments
Trackbacks/Pingbacks