ಬಾಳೆ- ಈ ರೀತಿ ಆದರೆ ಆ ಬಾಳೆಯನ್ನು ತೆಗೆದು ಬಿಡಿ

ಬಾಳೆಯ ನಂಜಾಣು ರೋಗ

ಬಾಳೆಯನ್ನು ಎಲ್ಲರೂ ಬೆಳೆಯುತ್ತಾರೆ.ಕೆಲವರು ಮನೆ ಹಿತ್ತಲಿನ ಬೆಳೆಯಾಗಿ ಬೆಳೆದರೆ ಮತ್ತೆ ಕೆಲವರು ವಾಣಿಜ್ಯಿಕವಾಗಿ ತೋಟ ಮಾಡಿ ಬೆಳೆಯುತ್ತಾರೆ. ಇವರೆಲ್ಲರಿಗೂ ಅತೀ ದೊಡ್ದ ಸಮಸ್ಯೆ ಎಂದರೆ ಬಾಳೆ ಸಸ್ಯದ ಎಲೆ ಗುಛ್ಛವಾಗುವಿಕೆ. ಇದರ ಪ್ರಾರಂಭಿಕ ಚಿನ್ಹೆ ಮತ್ತು ಪತ್ತೆ ಹೀಗೆ.

  • ನಮ್ಮಲ್ಲಿ ಬಹಳಷ್ಟು ಜನ ಕೇಳುವುದುಂಟು. ಈ ರೀತಿ ಗುಚ್ಚ ತಲೆ ಅದದ್ದಕ್ಕೆ  ಏನು ಪರಿಹಾರ ಎಂದು?
  • ಇದಕ್ಕೆ  ಪರಿಹಾರ ಇಲ್ಲ. ಇದು ಒಂದು ವೈರಾಣು ರೋಗವಾಗಿದೆ.
  • ಇದು ಬಂದರೆ ತಕ್ಷಣ ಗುರುತಿಸಿ ಆ ಬಾಳೆಯ ಎಲ್ಲಾ ಬಾಗಗಳನ್ನೂ ತೆಗೆದು ಸ್ವಚ್ಚ ಮಾಡಿ.
  • ಇಲ್ಲವಾದರೆ ಅದು ಬೇರೆ ಬಾಳೆಗೆ ಪ್ರಸಾರವಾಗುತ್ತದೆ.ಕೊನೆಗೆ ಹಿತ್ತಲಲ್ಲಿ ಬಾಳೆಯೇ ಇಲ್ಲದಾದರೂ ಅಚ್ಚರಿ ಇಲ್ಲ.

ಏನಿದು ರೋಗ:

  • ಬಾಳೆ ಬೆಳೆಗೆ ಆರ್ಥಿಕವಾಗಿ ಗಣನೀಯವಾಗಿ ಹಾನಿ ಮಾಡುವ ವೈರಸ್ ಖಾಯಿಲೆ ಬನಾನಾ ಬಂಚೀ ಟಾಪ್ .
  • ಬಾಳೆಯ ಎಲೆ ಗುಚ್ಚ ರೋಗ ಎಂದು ಕರೆಯಲ್ಪಡುವ ಈ ರೋಗ  ಬಂದರೆ  ಬಾಳೆಯ ಕತೆ ಮುಗಿಯಿತು.
  • ಬಾಳೆಯ ಎಲೆಯಲ್ಲದೆ,ಅದರ ಕಾಂಡದಲ್ಲಿ (Bract music virus) ಅಸಹಜ ಬಣ್ಣ ಮತ್ತು ಬೆಳವಣಿಗೆ ಆಗುವುದು ಸಹ ಒಂದು ನಂಜಾಣು ರೋಗ. ಇದು ಮೊಳಕೆ ಬರುವಾಗ, ಬೆಳೆಯುತ್ತಿರುವಾಗ, ಗೊನೆ ಹಾಕುವ ಸಮಯದಲ್ಲಿ ಯಾವಾಗಲೂ ಗೋಚರಕ್ಕೆ ಬರಬಹುದು.
  • ಬಾಳೆಯೆ ಬೆಳವಣಿಗೆಯ ಯಾವುದೇ ಹಂತದಲ್ಲಿ ಇದು ಬರಬಹುದು.
  • ಈ ರೋಗವು ಒಂದು ಜಾತಿಯ ಎಫಿಡ್ ಪೆಂಟಲೋನಿಯಾ ನೆಗ್ರೋವೋಸಾ ( pentalonia nigronervosea) ದಿಂದ  ಪ್ರಸಾರವಾಗುತ್ತದೆ.
ರೋಗಕ್ಕೆ ತುತ್ತಾದ ಬಾಳೆ ಕಂದುಗಳ ಬಣ್ಣ
ರೋಗಕ್ಕೆ ತುತ್ತಾದ ಬಾಳೆ ಕಂದುಗಳ ಬಣ್ಣ

ಚಿನ್ಹೆಗಳು:

  • ಈ ರೋಗ ತಗಲುತ್ತಿರುವಾಗ ಬಾಳೆ ಗಿಡಗಳು ಗಿಡ್ಡವಾಗಿ ಗುಚ್ಚದಂತೆ ಎಲೆಗಳನ್ನು ಬಿಡುತ್ತಿರುತ್ತದೆ.
  • ಪ್ರಾರಂಭದಲ್ಲಿ ಶಕ್ತಿ ಹೀನ ಅಥವಾ ಮುರುಟು ಎಲೆ ಹೊರ ಬರುತ್ತಿದೆ ಎಂದರೆ ರೋಗದ ಸಂಶಯ ವ್ಯಕ್ತಪಡಿಸಬಹುದು.
  •  ಎಲೆಗಳು ಬರುವ ಕ್ರಮವು ಸರಿಯಾಗಿರುವುದಿಲ್ಲ.
  • ಎಲೆಗಳ ಅಗಲವು ಕಡಿಮೆಯಾಗಿರುತ್ತದೆ
ಹೂ ಗೊಂಚಲಿನಲ್ಲಿ ರೋಗದ ಲಕ್ಷಣ
ಹೂ ಗೊಂಚಲಿನಲ್ಲಿ ರೋಗದ ಲಕ್ಷಣ
  • ಸಾಮಾನ್ಯವಾಗಿ ಎಲೆಗಳು ಒಂದರ ನಂತರ ಒಂದರಂತೆ  ಬರುವುದುತ್ತವೆ,
  • ಗಾತ್ರದಲ್ಲಿ ಒಂದರಿಂದ ಒಂದು ದೊಡ್ದದಾಗಿರುತ್ತದೆ.
  • ಈ ರೋಗ ಬಂದಾಗ ಎಲೆಗಳು ಸಣ್ಣದಾಗಲಾರಂಭಿಸುತ್ತವೆ.
  • ತೀವ್ರವಾದಂತೆ ಹೆಚ್ಚು ಅನಿಯಮಿತವಾಗಿ ಬರತೊಡಗುತ್ತದೆ.
  • ಕಂದುಗಳ ಬಣ್ಣ ಮತ್ತು ಲಕ್ಷಣ ಬದಲಾಗಿರುತ್ತದೆ.
ವೈರಸ್ ರೋಗ ತಗಲಿದ ಬಾಳೆಯ ಎಲೆ ದಂಟುಗಳಲ್ಲಿ ಈ ಲಕ್ಷಣ ಇರುತ್ತದೆ.
ವೈರಸ್ ರೋಗ ತಗಲಿದ ಬಾಳೆಯ ಎಲೆ ದಂಟುಗಳಲ್ಲಿ ಈ ಲಕ್ಷಣ ಇರುತ್ತದೆ.
  • ಎಲೆಯನ್ನು ಹಿಚುಕಿ ಹುಡಿ ಮಾಡುವಷ್ಟು ಶಕ್ತಿ ಕಳಕೊಂಡಿರುತ್ತದೆ.
  • ಎಲೆ ಬಣ್ಣ ತಿಳಿ ಹಸುರು ಬಣ್ಣಕ್ಕೆ ತಿರುಗುತ್ತದೆ. 
  • ಎಲೆ ದಂಟಿನಲ್ಲಿ ಕೆಂಪು ಗೆರೆ ಕಂಡು ಬರುತ್ತದೆ.
  •  ಗೊನೆ  ಹಾಕುವ ಸಮಯದಲ್ಲಿ  ಬಂದರೆ ಗೊನೆ  ಮೇಲ್ಮುಖವಾಗಿ ಬಿಡುತ್ತದೆ.
  • ಹೂ ಗೊಂಚಲು ಬಿಡುವಾಗ ನಂಜಾಣು ರೋಗ ಬಾಧಿಸಿದಲ್ಲಿ  ಆ ಹೂಗೊಂಚಲಿನ  ಎಲೆಗಳು ಅಸಹಜ ಬಣ್ಣದಲ್ಲಿ ಇರುತ್ತವೆ.
  • ಒಂದೊಂದಾಗಿ  ಎಲೆ ಬಿಡಿಸಿಕೊಳ್ಳುವ ಬದಲು ಎಲ್ಲವೂ ಬಿಡಿಸಿಕೊಳ್ಳುತ್ತದೆ.
  • ಗೊನೆ  ಹಾಕಿದ ನಂತರ ಬಂದರೆ ಕಾಯಿಯ ಗಾತ್ರ ಸಣ್ಣದಾಗುತ್ತದೆ.
  • ಕಾಯಿಗೆ ಶಕ್ತಿ ಇಲ್ಲದೆ ರುಚಿಯೂ ಇಲ್ಲದೆ ಕಾಯಿಯಲ್ಲಿ  ಅಸಹಜತೆ ಕಾಣಿಸುತ್ತದೆ,
  • ಈ ರೋಗಕ್ಕೆ ನಿರೋಧಕ ಶಕ್ತಿ ಪಡೆದ ತಳಿಗಳೇ ಇಲ್ಲ. ನಾವು ಬೆಳೆಸುವ ಎಲ್ಲಾ ಬಾಳೆಗೂ ಈ ರೋಗ ಬರುತ್ತದೆ.
ವೈರಸ್ ರೋಗದ ಪ್ರಾರಂಭಿಕ ಲಕ್ಷಣ
ವೈರಸ್ ರೋಗದ ಪ್ರಾರಂಭಿಕ ಲಕ್ಷಣ

ನಾವು ಏನು ಮಾಡುತ್ತೇವೆ?

  • ಬಾಳೆಯನ್ನು ಬೆಳೆಸುತ್ತೇವೆ. ಅದರ ಸುಳಿ ಭಾಗವನ್ನು ಗಮನಿಸುವುದೇ  ಇಲ್ಲ.
  • ಗಡ್ಡೆ ಮೂಲದಿಂದಲೋ ಅಥವಾ ಇನ್ಯಾವುದದರೂ ರೋಗ ಪೀಡಿತ ಬಾಳೆಯ ರಸ ಸ್ಪರ್ಶದಿಂದ ರೋಗ ತಗಲಿದ್ದು ಗಮನಕ್ಕೆ  ಬರುವುದಿಲ್ಲ.
  •  ಗಮನಿಸಿದರೂ ವಾಸಿಯಾಗಬಹುದು ಎಂದು ಹಾಗೆಯೇ ಬಿಡುತ್ತೇವೆ.
  • ಕೀಟ ನಾಶಕ ಹಾಕುತ್ತೇವೆ.
  • ಇದು ಯಾವುದೂ ಪ್ರಯೋಜನ ಇಲ್ಲ.
ಮಾಮೂಲು ಬಂಚಿ ಟಾಪ್  ರೋಗ
ಮಾಮೂಲು ಬಂಚಿ ಟಾಪ್ ರೋಗ

ಹೆಚ್ಚು ಸಮಯ ಇದನ್ನು ಬಿಟ್ಟರೆ ಇದರ ರಸ ಹೀರಿದ ಕೀಟ ಮತ್ತೊಂದು ಆರೋಗ್ಯವಂತ ಗಿಡದ ರಸ ಹೀರುವಾಗ ಅದಕ್ಕೆ ಈ ರೋಗ ತಗಲುತ್ತದೆ. ಒಂದು ಕಾಲದಲ್ಲಿ ಈ ರೋಗದಿಂದ ಬಾಳೆ ಬೆಳೆ ನಾಶವಾದ ವರದಿಯೂ ಇದೆ.

ಗೊನೆ ಹಾಕುವ  ಸಮಯದಲ್ಲಿ ವೈರಸ್ ರೋಗ ತಗಲಿದಾಗ ಹೀಗೆ ಆಗುತ್ತದೆ.
ಗೊನೆ ಹಾಕುವ ಸಮಯದಲ್ಲಿ ವೈರಸ್ ರೋಗ ತಗಲಿದಾಗ ಹೀಗೆ ಆಗುತ್ತದೆ.

ಏನು ಮಾಡಬೇಕು:

  •  ತಕ್ಷಣ ಅದನ್ನು ಕಿತ್ತು ತೆಗೆಯಬೇಕು ಮತ್ತು ಅದನ್ನು ಹೂಳಬೇಕು.
  • ಬಾಳೆ  ತೆಗೆಯಲು ಬಳಸಿದ ಹಾರೆ ಗುದ್ದಲಿಯಿಂದ ಮತ್ತೊಂದು ಆರೋಗ್ಯವಂತ ಬಾಳೆಯನ್ನು ಸ್ಪರ್ಶಿಸಬಾರದು.  ಸ್ವಲ್ಪ ಬೆಂಕಿಗೆ ಹಿಡಿದು ಬಿಸಿ ಮಾಡಬೇಕು.
  • ತೋಟವನ್ನು ಹುಲ್ಲು ಇತ್ಯಾದಿ ತೆಗೆದು ಸ್ವಚ್ಚವಾಗಿಡಬೇಕು. ಎಫೀಡ್ ಹಾವಳಿಗೆ ರೋಗರ್,ಮೊನೋಕ್ರೋಟೋಫೋಸ್ ಸಿಂಪಡಿಸಬೇಕು ಎನ್ನುತ್ತಾರೆಯಾದರೂ ಇವುಗಳಿಗೆ ಕೀಟಗಳು ನಿರೋಧಕ ಶಕ್ತಿ ಹೊಂದಿದೆ ಎನ್ನಲಾಗುತ್ತಿದೆ.
  • ಇದರ ಬದಲಿಗೆ ಇಮಿಡಾ ಕ್ಲೋಫ್ರಿಡ್ ಕೀಟನಾಶಕದ ಸಿಂಪರಣೆ ಸೂಕ್ತ.  ಕೀಟ ನಾಶಕ, ಸಿಂಪಡಿಸಬೇಕು.
  • ರೋಗ ಬರದಿರುವಂತೆ ಆರೋಗ್ಯವಂತ ಕಂದನ್ನು ಆಯ್ಕೆ  ಮಾಡಬೇಕು. ರೋಗ ಇಲ್ಲದಲ್ಲಿಂದ ನೆಡು ಸಾಮಾಗ್ರಿ ತರಬೇಕು.
  • ಈ ರೋಗ ಬಾರದಂತೆ ತಡೆಯುವುದು ಬಹುಷಃ ಅಸಾಧ್ಯ. ಗಡ್ಡೆ ಮೂಲದಿಂದ ಬರುತ್ತದೆ.
  • ಒಂದರಿಂದ ಮತ್ತೊಂದಕ್ಕೆ ಹರಡುತ್ತದೆ.
  • ಒಂದು ವೇಳೆ ನಾವು ಉತ್ತಮ ನೆಡು ಸಾಮಾಗ್ರಿ ತಂದಿದ್ದರೂ  ಅದಕ್ಕೂ ಹೇಗಾದರೂ ಈ ರೋಗ ತಗಲಬಹುದು. 
  • ಆದ  ಕಾರಣ ನಿರ್ವಹಣೆಯಿಂದ ಹರಡುವುದನ್ನು ತಡೆಯಬಹುದು.

 ಬಾಳೆ ಬೆಳೆಸುತ್ತೀರೆಂದಾದರೆ  ನಿಮಗೆ ಬಾಳೆಗೆ ಬರುವ ಈ ವೈರಸ್ ರೋಗ ಲಕ್ಷಣಗಳ ಬಗ್ಗೆ ಗೊತ್ತಿರಬೇಕು. ಇದನ್ನು ತಕ್ಷಣ ಗುರುತಿಸಿ ತೆಗೆದರೆ ಉಳಿದ ಬಾಳೆ ಸೇಫ್.

Leave a Reply

Your email address will not be published. Required fields are marked *

error: Content is protected !!