ನೀರು, ಗೊಬ್ಬರ  ಉಳಿತಾಯದ ಬಾಳೆ ಬೇಸಾಯ ವಿಧಾನ

ಬಾಳೆ ಹೀಗೆ ಬೆಳೆದರೆ ಖರ್ಚು ಕಡಿಮೆ

ಸಾಂಪ್ರದಾಯಿಕ ವಿಧಾನದ ಬಾಳೆ ಬೇಸಾಯದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಬೆಳೆ ಬೆಳೆದರೆ ನೀರು, ಗೊಬ್ಬರ  ಉಳಿಸಿ ಖರ್ಚು ಕಡಿಮೆ ಮಾಡಿ ಉತ್ತಮ ಇಳುವರಿಯನ್ನು ಪಡೆಯಬಹುದು. ಅಷ್ಟೇ ಸ್ಥಳಾವಕಾಶದಲ್ಲಿ ಒಳಸುರಿಗಳ ಬಳಕೆಯಲ್ಲಿ, ಮಿತವ್ಯಯ ಮಾಡಿ ಅಧಿಕ ಉತ್ಪಾದನೆ ಪಡೆಯುವುದು ಈ ವಿಧಾನದಲ್ಲಿ ಸಾಧ್ಯ. 

  • ಬಾಳೆಯ ಸಾಂಪ್ರದಾಯಿಕ ನಾಟಿ ವಿಧಾನದಲ್ಲಿ ಪರಸ್ಪರ 6  ಅಡಿ ಅಂತರದಲ್ಲಿ ನಾಟಿ ಮಾಡಲಾಗುತ್ತದೆ.
  • ಈ ವಿಧಾನದಲ್ಲಿ ಎಕ್ರೆಗೆ ಸುಮಾರು  750 ರಷ್ಟು ಬಾಳೆ ಸಸಿ ಹಿಡಿಸಬಹುದು.
  • ಅಧಿಕ ಸಾಂದ್ರದಲ್ಲಿ ನಾಟಿ ಮಾಡುವುದಿದ್ದರೆ ಎಕ್ರೆಗೆ 2500-3000 t ತನಕವೂ  ಸಸಿ ನಾಟಿ ಮಾಡಬಹುದು.
  • ಇನ್ನು ಕೆಲವು ಬದಲಾವಣೆಯ ನಾಟಿ ವಿಧಾನದಲ್ಲಿ ಸಸಿ ಹೆಚ್ಚು ಮಾಡಿ,  ಗೊಬ್ಬರ ನೀರಿನಲ್ಲಿ  ಉಳಿತಾಯ ಮಾಡಿ ಇಳುವರಿಯನ್ನೂ ಹೆಚ್ಚು ಪಡೆಯಬಹುದು.

ಬಾಳೆ ಎಂಬುದು ಎಷ್ಟು  ಹೆಚ್ಚು ಗೊಬ್ಬರ  ಕೊಟ್ಟರೂ ಸ್ಪಂದಿಸುವ ಬೆಳೆ . ಕೃಷಿ  ವಿಜ್ಞಾನ ಶಿಫಾರಸು ಮಾಡಿರುವ ಪ್ರಮಾಣವನ್ನು ದುಪ್ಪಟ್ಟು  ಮಾಡಿದಾಗ ಅತ್ಯಧಿಕ  ಇಳುವರಿ ಪಡೆದ ಹಲವು ರೈತರಿದ್ದಾರೆ.

ಸಾಂಪ್ರದಾಯಿಕ ವಿಧಾನ:

ಸಾಂಪ್ರದಾಯಿಕ ವಿಧಾನದ ಬಾಳೆ ಬೇಸಾಯ
ಸಾಂಪ್ರದಾಯಿಕ ವಿಧಾನದ ಬಾಳೆ ಬೇಸಾಯ

ಬಾಳೆಯನ್ನು ನಾಟಿ ಮಾಡುವಾಗ ಸಾಮಾನ್ಯವಾಗಿ ಹೊಂಡ ಮಾಡಿ ನಾಟಿ ಮಾಡಲಾಗುತ್ತದೆ. ಸುಮಾರು 1.5 ರಿಂದ 2 ಅಡಿ ತನಕದ ಹೊಂಡವನ್ನು ಮಾಡಿ ಗಡ್ಡೆ ಅಥವಾ ಕಂದನ್ನು ನಾಟಿ  ಮಾಡಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕೂಳೆಗೆ ಬಿಡುವ ಕ್ರಮ ಇಲ್ಲದವರು ಹೆಚ್ಚು ಹೊಂಡ ಮಾಡದೆ ನಾಟಿ  ಮಾಡುತ್ತಾರೆ.

ಹೊಂಡ ಮಾಡಿ ನೆಡುವುದು ಗೊಬ್ಬರ ಮತ್ತು ನೀರು  ಕೊಡಲು ಮತ್ತು ಗಾಳಿಯ ಹೊಡೆತದಿಂದ ಬಾಳೆಯನ್ನು ರಕ್ಷಿಸಲು ಸಹಕಾರಿ.

ಆಧುನಿಕ ವಿಧಾನ:

ತಮಿಳುನಾಡಿನ ತಿರುಚಿಯಲ್ಲಿರುವ ಕೇಂದ್ರಿಯ ಬಾಳೆ ಸಂಶೊಧನಾ ಕೇಂದ್ರದಲ್ಲಿ ನಾಟಿ ಮಾಡುವಾಗ ಕೆಲವು ಮರ್ಪಾಡುಗಳನ್ನು ಮಾಡಿಕೊಂಡು ಬೆಳೆ ಬೆಳೆದಾಗ ಅಧಿಕ ಇಳುವರಿ ಮತ್ತು ನೀರು ಮತ್ತು ಗೊಬ್ಬರದಲ್ಲಿ ಶೇ.25 ಕ್ಕೂ  ಹೆಚ್ಚು ಉಳಿತಾಯವಾಗಿದೆ ಎನ್ನುತ್ತಾರೆ.

  • ಸಾಂಪ್ರದಾಯಿಕ ವಿಧಾನದ ಹೊಂಡಗಳಲ್ಲಿ  ಒಂದಕ್ಕಿಂತ ಹೆಚ್ಚು ಬಾಳೆ ಸಸಿ ನೆಡುವುದೇ ಹೊಸ ವಿಧಾನ.

ಒಂದು ಹೊಂಡ 2 ಸಸಿ:

ಒಂದು ಹೊಂಡದಲ್ಲಿ ಎರಡು ಸಸಿ
ಒಂದು ಹೊಂಡದಲ್ಲಿ ಎರಡು ಸಸಿ
  • 2X2  ರ ಹೊಂಡದ ಬದಲಿಗೆ 2X4  ಅಡಿಯ ಹೊಂಡವನ್ನು ಮಾಡಬೇಕು.
  • ಬೇಕಾದರೆ  1 ಅಡಿ ಹೊಂಡದ ಉದ್ದವನ್ನು ಹೆಚ್ಚು ಮಾಡಬಹುದು.
  • ಅದರಲ್ಲಿ  ಎರಡು ಬದಿಗೆ ಒಂದೊಂದು ಸಸಿಗಳನ್ನು ಅಥವಾ ಕಂದುಗಳನ್ನು ನಾಟಿ ಮಾಡಬೇಕು.
  • ಇವೆರಡೂ ಸಸಿಗಳಿಗೆ ಕೊಡುವ ಗೊಬ್ಬರದಲ್ಲಿ ಸುಮಾರು 20 %  ಉಳಿತಾಯವಾಗುತ್ತದೆ. ನೀರು ಸಹ 25 % ಉಳಿತಾಯ ಮಾಡಬಹುದು.

ಇದರಲ್ಲಿ ಬಂದ ಗೊನೆಯು ಒಂದು ಹೊಂಡದಲ್ಲಿ ಒಂದು ಸಸಿ ನೆಟ್ಟು ಪಡೆದ ಗೊನೆಯ ತೂಕದಷ್ಟೇ  ಬಂದಿರುವುದು ವರದಿಯಾಗಿದೆ .ಈ  ರೀತಿ ನಾಟಿ ಮಾಡಿದಾಗ ಗೊನೆಗೆ ಬಿಸಿಲಿನ ಹೊಡೆತ ಬೀಳುವುದು ತುಂಬಾ ಕಡಿಮೆಯಾಗುತ್ತದೆ.

ಒಂದು ಹೊಂಡ 3 ಸಸಿ:

  •  ಈ ವಿಧಾನದಲ್ಲಿ  ಒಂದು ಹೊಂಡದಲ್ಲಿ ಮೂರೂ  ಮೂಲೆಗಳಲ್ಲಿ ಒಂದೊಂದು ಸಸಿಯನ್ನು ನಾಟಿ ಮಾಡಲಾಗುತ್ತದೆ.
  • ಒಟ್ಟು ಒಂದು ಹೊಂಡದಲ್ಲಿ ಮೂರು ಸಸಿಗಳು. ಇದಕ್ಕೆ   ಹಾಕುವ ಗೊಬ್ಬರದಲ್ಲಿ 30% ಉಳಿತಾಯ ಮಾಡಬಹುದು.
  • ನೀರನ್ನೂ 30 % ಉಳಿತಾಯ ಮಾಡಬಹುದು.
ಒಂದು ಹೊಂಡದಲ್ಲಿ ಮೂರು ಸಸಿ
ಒಂದು ಹೊಂಡದಲ್ಲಿ ಮೂರು ಸಸಿ

ಹೊಂಡ ತೆಗೆಯಲು ಖರ್ಚು ಉಳಿತಾಯವಾಗುತ್ತದೆ.  ಇದರಲ್ಲಿ ಹೊಂಡ ಕಡಿಮೆ ಸಾಕಾಗುತ್ತದೆ.ಖರ್ಚು ಉಳಿತಾಯವಾಗುತ್ತದೆ.

  • ಒಂದು ಹೊಂಡದಲ್ಲಿ 3 ಬಾಳೆ ನಾಟಿ ಮಾಡಿದಾಗ ಹೊಂಡಗಳು ಇನ್ನೂ ಕಡಿಮೆ ಸಾಕಾಗುತ್ತದೆ.
  •  ಈ ವಿಧಾನದಲ್ಲಿ ಬಾಳೆಯ ಬೇಸಾಯ ಖರ್ಚಿನಲ್ಲಿ ಮತ್ತು ಪೋಷಕಾಂಶ ನಿರ್ವಹಣೆಯಲ್ಲಿ  15-20 % ಉಳಿತಾಯವಾಗುತ್ತದೆ.
  • ಬಾಳೆ ನಾಟಿ ಮಾಡುವಾಗ ಗಡ್ಡೆಯನ್ನು ಆಯ್ಕೆ ಮಾಡುವುದೇ ಆದರೆ ಏಕ ಪ್ರಕಾರ ತೂಕದ ಗಡ್ಡೆಗಳನನ್ನೇ ಆಯ್ಕೆ ಮಾಡಬೇಕು.

ಗಡ್ಡೆಗಳನ್ನು  ತುದಿಭಾಗ ವನ್ನು ಕವುಚಿ ಹಾಕಿ ನಾಟಿ  ಮಾಡಬೇಕು. ಹೀಗೆ ಮಾಡುವುದರಿಂದ ಎಲ್ಲಾ ಬಾಳೆಯಲ್ಲೂ ಹೊಸ ಮೊಳಕೆಗಳೇ ಬರುವ ಕಾರಣ  ಎಲ್ಲಾ  ಬಾಳೆಗಳೂ ಏಕ ಪ್ರಕಾರವಾಗಿ ಬೆಳೆಯುತ್ತವೆ. ಏಕ ಪ್ರಕಾರವಾಗಿ ಬೆಳೆಯದಿದ್ದರೆ ಬೆಳಕಿನ ಕೊರತೆಯಿಂದ ಕೆಲವು ಬಾಳೆ ಸಸ್ಯಗಳ ಬೆಳೆವಣಿಗೆ ಕುಂಠಿತವಾಗಬಹುದು. ಇದು ಬಾಳೆ ಬೆಳೆಯುವ ರೈತರಿಗೆ ಮಿತವ್ಯಯದ ಬೇಸಾಯ ತಾಂತ್ರಿಕತೆ.

Leave a Reply

Your email address will not be published. Required fields are marked *

error: Content is protected !!