ಗೋವು ರಾಷ್ಟ್ರೀಯ ಪ್ರಾಣಿ ಎಂದು ಕೋರ್ಟು ಘೋಷಿಸಿದೆಯೇ ?

ಹಸು , ಕರು ಜೊತೆಯಾಗಿದ್ದ ಕಾಲವಿತ್ತು. ಈಗ ಕರು ಔಟ್

ಅಲಹಾಬಾದ್ ಹೈಕೋರ್ಟ್ ಗೋವುಗಳ ಕುರಿತಾಗಿ ಸ್ಪಷ್ಟವಾಗಿ ಹೇಳಿದೆ. ಆದರೆ ಅದನ್ನು ಕೆಲವರು ತಿರುಚಿ ತಮ್ಮ ಮನಸ್ಸಿಗೆ ತೋರಿದಂತೆ ಹೇಳುತ್ತಿದ್ದಾರೆ. ನಿಜವಾಗಿಯೂ ಕೋರ್ಟು ಹೇಳಿದ್ದೇನು?  

ಗೋವನ್ನು  ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಪರಿಗಣಿಸಬೇಕು.  ಗೋವುಗಳ  ಸಂರಕ್ಷಣೆ ಹಿಂದುಗಳ ಮೂಭೂತ ಹಕ್ಕು ಎಂದು ಘೋಷಿಸಬೇಕು.  ಗೋವುಗಳು ನಮ್ಮ ದೇಶದ ಸಂಸ್ಕೃತಿ ಮತ್ತು ಅದು ಮಾತೃ ಸಮಾನ. ವೇದ ಪುರಾಣಗಳ ಕಾಲದಿಂದಲೂ ಮಾನವನ  ಅದರಲ್ಲೂ ಹಿಂದುಗಳ  ಪೂಜನೀಯ ಸಾಕುಪ್ರಾಣಿಯಾಗಿ ಇದ್ದುದು ಗೋವು. ದೇಶದ ಸಾಂಸ್ಕೃತಿಕ ಮತ್ತು ನಂಬಿಕೆಯ ವಿಷಯದಲ್ಲಿ ನಾವು ತಾತ್ಸರ ಮಾಡಿದರೆ ದೇಶವೇ ದುರ್ಬಲವಾಗುತ್ತದೆ. ಮೂಲಭೂತ ಹಕ್ಕುಗಳು ಕೇವಲ ಗೋಮಾಂಸ ಭಕ್ಷಕರ ಪರಮಾಧಿಕಾರವಲ್ಲ. ಅದು ಹಸುವನ್ನು ಪೂಜಿಸುವ ಮತ್ತು ಆರ್ಥಿಕವಾಗಿ ಅವುಗಳ ಮೇಲೆ ಅವಲಂಬಿತವಾಗಿರುವವರ ಹಕ್ಕುಗಳೂ ಆಗಿವೆ. ಎಂದುದಾಗಿ  ಮಾನ್ಯ ನ್ಯಾಯಾಲಯದ  ನ್ಯಾಯಾಧೀಶರ ಅಭಿಪ್ರಾಯ. 

ಅಲಹಾಬಾದ್ ಉಚ್ಚ ನ್ಯಾಯಾಲಯವು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಶಿಸಿ ಎಂದಿದೆಯೇ ಹೊರತು ಘೋಷಿಸುವುದು ಸರಕಾರದ ಕೆಲಸವಾಗಿರುತ್ತದೆ.
ಗೋವು ಎಂಬ ಸಾಧು ಸಾಕು ಪ್ರಾಣಿ
ನ್ಯಾಯಾಲಯ ಬರೇ ಇಷ್ಟನ್ನೇ ಹೇಳಿದ್ದಲ್ಲ. ಜೊತೆಗೆ ನ್ಯಾಯಾಧೀಶರು ದೇಶದಾದ್ಯಂತ ಇರುವ ಗೋಶಾಲೆಗಳ ಸ್ಥಿತಿಯ ಬಗ್ಗೆ ಮತ್ತು ಹಸುವಿನ ರಕ್ಷಣೆಯ ಬಗ್ಗೆ ಮಾತನಾಡುವವರ ಮೇಲೆ ಮತ್ತು ಪ್ರಾಣಿಗಳ "ಶತ್ರುಗಳ" ಮೇಲೆ ನೋವನ್ನು ತೋಡಿಕೊಂಡಿದ್ದಾರೆ. ಸರ್ಕಾರವು ಗೋಶಾಲೆಗಳನ್ನು ನಿರ್ಮಿಸುತ್ತದೆ ಆದರೆ ಈ ಗೋಶಾಲೆಗಳಲ್ಲಿ ಕೆಲಸ ಮಾಡುವವರು ಹಸುಗಳನ್ನು ನೋಡಿಕೊಳ್ಳುವುದಿಲ್ಲ. ಅಂತೆಯೇ, ಈ ದಿನಗಳಲ್ಲಿ ಪ್ರದರ್ಶಿಸಲು ಖಾಸಗಿ ಗೋಶಾಲೆಗಳನ್ನು ನಿರ್ಮಿಸಲಾಗುತ್ತಿದೆ "ಎಂಬುದೂ ನ್ಯಾಯಾಧೀಶರ ಗಮನಕ್ಕೆ ಬಂದಿದೆ.
* ಪ್ರತೀಯೊಬ್ಬ ನಿಷ್ಟಾವಂತ ಗೋವು ಸಾಕಾಣಿಕೆದಾರನೂ ಹಸುವನ್ನು ಸಾಕುವಾಗ ಅದನ್ನು  ತಮ್ಮ ಮಕ್ಕಳಂತೆ  ಸಾಕುತ್ತಿದ್ದಾರೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.  
* ಕೆಲವು ವಾಣಿಜ್ಯ ಹಸು ಸಾಕಣೆದಾರರು ಎಲ್ಲವನ್ನೂ ಲೆಕ್ಕಾಚಾರ ಪ್ರಕಾರ ನೊಡುವುದೂ ಇಲ್ಲದಿಲ್ಲ. 
* ನ್ಯಾಯಾಲಯ ಅಥವಾ ಸರಕಾರ ಗೋವನ್ನು ನಿಮ್ಮ ಮಕ್ಕಳೆಂದೇ ಪರಿಗಣಿಸಿ ಸಾಕಿ ಎಂದಿದ್ದರೂ ಅದನ್ನು ಸ್ವೀಕರಿಸಲು ನೈಜ ಹಸು ಸಾಕಾಣಿಕೆದಾರರು ಸಿದ್ದರಿದ್ದಾರೆ. 
* ಆದರೆ ನಮ್ಮ ಸರಕಾರ , ನಮ್ಮ ವ್ಯವಸ್ಥೆ  ಜನರ ನಂಬಿಕೆ, ದೇಶದ ಸಾಂಸ್ಕೃತಿಕ ವೈಭವಕ್ಕೆ ಯಾವ ಕಿಮ್ಮತ್ತನ್ನೂ ನೀಡದೆ ಕಳ್ಳರಿಗೆ ನುಸುಳಲು ಸಾಕಷ್ಟು ದ್ವಾರಗಳನ್ನು ಇಟ್ಟೇ  ಇಂತಹ ಕಾನೂನನ್ನು ಮಾಡಿದರೆ ಪರಿಸ್ಥಿತಿ ಹಿಂದಿಗಿಂತ ಭಿನ್ನವಾಗಲಿದೆ. 
* ಹಿಂದುಗಳಿಗೆ  ರಾಷ್ಟ್ರೀಯ ಪ್ರಾಣಿ ಆಗಿದ್ದರೆ ಅದು ಇತರ ಧರ್ಮಗಳವರಿಗೆ ಆಗಬೇಕಾಗಿಲ್ಲ ಎಂಬುದಾಗಿ ವಾದಗಳೂ ಬರಬಹುದು. 
* ತಾರ್ಕಿಕವಾಗಿ ಅದನ್ನು ನ್ಯಾಯಾಲಯ ಮನ್ನಣೆ  ಮಾಡಿದರೂ ಮಾಡಬಹುದು.

ಗೋವು ಅಂದರೆ ಯಾವುದು:

ಅತ್ಯಧಿಕ ಬೆಲೆಬಾಳುವ ದೇಸೀ ಹಸು ಗೀರ್
ಅತ್ಯಧಿಕ ಬೆಲೆಬಾಳುವ ದೇಸೀ ಹಸು ಗೀರ್
 • ಈ ವಿಷಯದಲ್ಲಿ ಈಗಲೂ ಸಾಕಷ್ಟು ಗೊಂದಲಗಳಿವೆ. ನಮ್ಮ ದೇಶದ ತಳಿಯನ್ನು ಮಾತ್ರ ಗೋವು ಎಂದು ಪರಿಗಣಿಸಬೇಕು ಎಂಬುದಾಗಿ ಕೆಲವು ಅಭಿಪ್ರಾಯ ಇದೆ.
 • ನಿಜವಾಗಿ  ಹಸು ಅದು ಯಾವ ದೇಶದ್ದೇ ಆದರೂ ಸಹ ನಾವು ಸಾಕುವಾಗ ತೋರುವ ಪ್ರೀತಿಯಲ್ಲಿ ಅದು ನಮ್ಮ ಮನೆಯ ಸದಸ್ಯರಂತೇ ಆಗಿರುತ್ತದೆ.
 • ಭಾರತೀಯರು  ಹಾಲಿನ ಕಾರ್ಖಾನೆಯಾಗಿ ಗೋವನ್ನು ಸಾಕಿದವರೇ ಅಲ್ಲ.
 • ಈಗಲೂ ಸಾಕುತ್ತಿಲ್ಲ. ಪ್ರೀತಿಯಿಂದ ಸಾಕುವ ಪ್ರಾಣಿಗಳೆಲ್ಲಾ ಅದರಲ್ಲೂ ಅವುಗಳಿಂದ ಪ್ರಯೋಜನವನ್ನು ಪಡೆಯುವಂತಿದ್ದರೆ ಅದು ವಧಾರ್ಹ ಪ್ರಾಣಿಯಾಗಿರುವುದಿಲ್ಲ.
 • ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಉಪಕಾರ ಪಡೆದವನಿಗೆ  ಕೃತಜ್ಞರಾಗಿರುವುದು ಒಂದು ಸಂಪ್ರದಾಯ.
 • ಆದ ಕಾರಣ ದೇಸೀ ಹಸು ಒಂದೇ ಗೋವು ಎನಿಸದು, ನಾವು ಸಾಕುವ ಮಿಶ್ರ ತಳಿಯ, ಹಾಗೆಯೇ ವಿದೇಶದಿಂದ ತಳಿ ತಂದಿದ್ದರೂ ನಮ್ಮಲ್ಲೇ ಹಾಸುಹೊಕ್ಕಾಗಿವ ಎಲ್ಲಾ  ತಳಿಯ ಹಸುಗಳೂ ಗೋವುಗಳೆಂದೇ ಪರಿಗಣಿಸಲ್ಪಡಬೇಕು.

ದೇಸೀ  ಹಸುಗಳ ಹಾಲು ಶ್ರೇಷ್ಟ ಆರೋಗ್ಯಕ್ಕೂ ಉತ್ತಮ  ಅದರ ಗೋ ಮೂತ್ರ ಗೋ ಮಯ  ಹಾಗೂ ಗೋ ರಾಜನ ಎಲ್ಲದರಲ್ಲೂ ಔಷಧೀಯ ಗುಣ ಇದೆ. ಹೆಚ್ಚು ಕರು ಹಾಕುತ್ತದೆ. ಯಾರಿಗೂ ಸಮಸ್ಯೆಯಾಗದೆ, ಜೀವಮಾನ ಪೂರ್ತಿ ಆರೋಗ್ಯವಾಗಿಯೇ ಇದ್ದು ವಯೋ ಸಹಜವಾಗಿ ಮರಣವನ್ನೂ ಹೊಂದುತ್ತದೆ. ಈ ಬಗ್ಗೆ ಯಾವ ಭಿನಾಭಿಪ್ರಾಯವೂ ಇಲ್ಲ.

 • ಭಾರತೀಯ ಸಂಸ್ಕೃತಿಯಲ್ಲಿ ಹಾಲು ಎಂದರೆ ದೇಸೀ ಹಸುವಿನದ್ದು ಎಂದು ಹೇಳಿಯೇ ಇಲ್ಲ.
 • ಹಸುವಿನ ಹಾಲು ಎಂದಷ್ಟೇ ಹೇಳಿದೆ.
 • ನಮಗೆ ಹೈನೋದ್ಯಮಕ್ಕಾಗಿ ಹೆಚ್ಚು ಹಾಲು ಬೇಕು ಎಂಬ ಕಾರಣಕ್ಕೆ ನಾವು ವಿದೇಶಿ ತಳಿಗಳನ್ನು ಆಮದು ಮಾಡಿಕೊಂದಿದ್ದೇವೆ.
 • ಈಗ ಅದು ಮನೆಗೆ ಸೊಸೆ ಬೇಕು ಎಂದು ತಂದಂತೆ ಅನಿವಾರ್ಯವಾಗಿದೆ.
ಪ್ರಾಯದ, ನಿತ್ರಾಣದ ಗೋವುಗಳು ಗೋ ಶಾಲೆಯಲ್ಲಿ
ಪ್ರಾಯದ, ನಿತ್ರಾಣದ ಗೋವುಗಳು ಗೋ ಶಾಲೆಯಲ್ಲಿ

ಗೋಶಾಲೆಗಳ ಕಷ್ಟಗಳು:

 • ಗೋ ಶಾಲೆ ಎಂದರೆ ಅದು ಖಾಸಗಿಯವರದ್ದಾಗಲೀ. ಸರಕಾರದ್ದೇ ಆಗಲಿ. ಜನ ಗಂಡು ಕರು, ಮುದಿದನಗಳನ್ನು ಅಲ್ಲಿ ಬಿಡಲು ಇಚ್ಚೆ ಪಡುತ್ತಾರೆ.
 • ಅಲ್ಲಿ ಅವಕಾಶ ಇಲ್ಲದಾಗ ಕೆಲವರು ಹಗ್ಗ ಬಿಟ್ಟು ಕಣ್ಣು ಮುಚ್ಚುತ್ತಾರೆ!
 • ನಮ್ಮ ಗೋಶಾಲೆಗಳಲ್ಲಿ ಗಂಡು ಕರು ಮುದಿ ಕರುಗಳು ತುಂಬಿ ಹೋಗಿವೆ.
 • ಜನ ಪ್ರಚಾರಕ್ಕೆ ಎಷ್ಟು ಹಣ ಖರ್ಚು ಮಾಡುತ್ತಾರೆ.
 • ಆದರೆ ಇಂತದ್ದಕ್ಕೆ ಬಿಚ್ಚಲು  ಒಲ್ಲರು.
 • ಒಂದು ವೇಳೆ ಇನ್ನು ಸರಕಾರದ ಗೋಶಾಲೆಗಳಾದರೆ ಗೋವಿನ ಸ್ಥಿತಿ ಏನಾಗಬಹುದೋ?

ಯಾರು ವ್ಯವಸ್ಥೆ ಮಾಡಬೇಕು:

 • ಮನುಷ್ಯರಿಗೆ ಜೀವನ ನಡೆಸಲು ಅನುಕೂಲಮಾಡಿಕೊಡುವುದು ಸರಕಾರದ ಆದ್ಯ ಕರ್ತವ್ಯ ಹೇಗೆಯೋ ಹಾಗೆಯೇ ಮೂಕ ಪ್ರಾಣಿಗಳಿಗೆ ಜೀವನ ನಡೆಸಲು ಅವಕಾಶ ಮಾಡಿಕೊಡುವುದು ಸಹ ಸರಕಾರದ ಕರ್ತವ್ಯ.
 • ಇಂದು ಹಸು ಎಂಬುದು ಹುಲಿ, ಜಿಂಕೆ, ಕರಡಿ, ಸಿಂಹ, ಹಾವು, ಹೆಬ್ಬಾವು, ನವಿಲು, ಕಡಂಬಳ ಹಾವಿಗಿಂತ ಅಸುರಕ್ಷಿತವಾಗಿದೆ.
 • ಇದನ್ನು ಸರಕಾರ ಗಮನಿಸಬೇಕು. 
 • ಹಾಗೆ ನೊಡಿದರೆ ನಮ್ಮನ್ನು ಆಳಿದ ಮಾಂಸಾಹಾರಿಗಳಾಗಿದ್ದ, ಬ್ರಿಟೀಷರಿಗೂ ಗೋವುಗಳ ಮೇಲೆ ಕನಿಕರ ಇತ್ತು.
 • ಅವರು ಪ್ರತೀ ಗ್ರಾಮಗಳಲ್ಲಿ ಅಲ್ಲಲ್ಲಿ  ಗೋ ಮಾಳಗಳನ್ನು ಉಂಬಳಿ ಬಿಟ್ಟು ಗೋವುಗಳಿಗೆ ಅನುಕೂಲ ಮಾಡಿಕೊಟ್ಟಿದ್ದರು.
 • ನಾವು ಅದನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿ ಅದನ್ನೇ ಗೋ ಶಾಲೆ ಮಾಡಬಹುದಿತ್ತು.
 • ಆದರೆ ನಮ್ಮ ರಾಜಕಾರಣಿಗಳು ಅದನ್ನು  ಹರಿದು ಹಂಚಿ ಪುಣ್ಯ ಕಟ್ಟಿಕೊಂಡವರು.
ಹಸುಗಳನ್ನು ಅಧಿಕ ಸಾಂದ್ರತೆಯಲ್ಲಿ ಅನಿವಾರ್ಯವಾಗಿ ಕಟ್ಟಿ ಸಾಕುತ್ತಿವೆ ಗೋ ಶಾಲೆಗಳು
ಹಸುಗಳನ್ನು ಅಧಿಕ ಸಾಂದ್ರತೆಯಲ್ಲಿ ಅನಿವಾರ್ಯವಾಗಿ ಕಟ್ಟಿ ಸಾಕುತ್ತಿವೆ ಗೋ ಶಾಲೆಗಳು
 • ಇಂದು ಗೋ ಶಾಲೆಗಳನ್ನು ತೆರೆಯಲು ಜಾಗ ಇಲ್ಲ.
 • ನ್ಯಾಯಾಲಯ “ಪ್ರದರ್ಶನಕ್ಕಾಗಿ ಗೋಶಾಲೆ” ಎಂಬ ಮಾತನ್ನೂ ಹೇಳುತ್ತದೆ.
 • ಅನುಕೂಲ ಇದ್ದುದನ್ನು ಬಿಟ್ಟಿರುವುದು  ಯಾರು? ಗ್ರಾಮಿಣ ಪ್ರದೇಶದಲ್ಲಿ ಪಂಚಾಯತು ಮೂಲಕವೋ ಅಥವಾ ಹಸು ಸಾಕುವವರ ಸಂಘಟನೆಯ ಮೂಲಕವೋ  ಸಾರ್ವಜನಿಕ ಗೋ ಶಾಲೆಗಳನ್ನು ತೆರೆದು ನಡೆಸಬಹುದು.
 • ಸರಕಾರ ಮಾಡಿದ ತಪ್ಪನ್ನು ತಿದ್ದಿ, ಮತ್ತೆ ಗೋಮಾಳಗಳನ್ನು ಉಳಿಸುವ ಪ್ರಯತ್ನ ಮಾಡಿದರೆ ಗೋವುಗಳ ರಕ್ಷಣೆ ಸಾಧ್ಯವಾಗಬಹುದು.

ಇಂದು ಹಸು ಸಾಕುವವರಿಗೆ ಹೆಣ್ಣು ಕರುಗಳು ಭಾರವಾಗಿಲ್ಲ. ಗಂಡು ಕರುಗಳು ಭಾರವಾಗಿವೆ. ಮುದಿ ಹಸುಗಳು ಭಾರವಾಗಿವೆ. ಅವುಗಳನ್ನು ಸಾಕಲು ಮನಸ್ಸಿದ್ದರೂ ಆರ್ಥಿಕವಾಗಿ ನಾವು ದುರ್ಬಲರಾಗಿದ್ದೇವೆ. ಸ್ಥಳೀಯವಾಗಿ ಸರಕಾರ ಎಕ್ರೆಗಟ್ಟಲೆ ಸ್ಥಳವನ್ನು ಗೋ ಮಾಳವಾಗಿ ಬಿಟ್ಟದ್ದು ಹಾಗೆ ಇರುತ್ತಿದ್ದರೆ ಇಂದು ಗೋ ಶಾಲೆ ಕಟ್ಟಿಕೊಳ್ಳಿ ಎಂದು ಹೇಳಿದ್ದರೂ ಸಾಕಿತ್ತು. ಅದು ಹೇಗಾದರೂ ಆಗುತ್ತಿತ್ತು.

ಹಸು ಸಾಕಣೆ ಎಷ್ಟು ಲಾಭದ್ದು?

 • ಇಂದು ವ್ಯಾವಹಾರಿಕವಾಗಿ ಲೆಕ್ಕಾಚಾರ ಹಾಕುವವರು ಯಾರೂ ಹಸು ಸಾಕಣೆ ಮಾಡುವುದಿಲ್ಲ.
 • ಸ್ವಲ್ಪ ನಷ್ಟವಾದರೂ ನಮ್ಮ ತೋಟದ ಹುಲ್ಲು, ನಮ್ಮ ತೋಟಕ್ಕೆ ಗೊಬ್ಬರ  ಹಾಗೂ ಸ್ವಲ್ಪ  ಪಶು ಪ್ರೇಮ ಉಳ್ಳವರು ಹಸು ಸಾಕುವುದು.
 • ವಾಸ್ತವಿಕ ಪರಿಸ್ಥಿತಿ  ಹೇಗಿದೆ ಎಂದರೆ ಹೊಸ ತಲೆಮಾರಿನವರಿಗೆ ಹಸು ಸಾಕಣೆ ಬೇಡ.
 • ಹೆಣ್ಣು ಕರುಗಳಿದ್ದರೂ ಬೇಡ. 
 • ಗಂಡು ಕರುಗಳಂತೂ ಯಾರಿಗೂ ಬೇಡದ ಸ್ಥಿತಿ  ಬಂದಿದೆ.
 • ಹಸು ಸಾಕಣೆ ಮಾಡುವವನಿಗೆ  ಹೆಣ್ಣು ಕೊಡದ ಪರಿಸ್ಥಿತಿ ಇರುವಾಗ ಹೆಚ್ಚಿನವರು ಈ ಕೆಲಸಕ್ಕೆ ಕೈಹಾಕಲು ಆಲೋಚನೆ ಮಾಡುತ್ತಾರೆ.

ವಾಸ್ತವವಾಗಿ ಹಸು ಸಾಕುವಾಗ ತಗಲುವ ವೆಚ್ಚಗಳಾದ  ಸಣ್ಣ ಕರುವಿನಿಂದ ಕರು ಹಾಕುವ ಸಮಯದ ತನಕದ ಪಾಲನಾ ವೆಚ್ಚ, ಕರು ಹಾಕಿದ ನಂತರದ ಖರ್ಚುವೆಚ್ಚ. ಅದರಿಂದ ಬರುವ ಆದಾಯ. ಇವೆಲ್ಲಾ  ನಷ್ಟದ್ದೇ ಆಗಿರುತ್ತದೆ. ರೈತನ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಇದು ನಗಣ್ಯ.

ಹಸುಗಳನ್ನು ಸಾಕುತ್ತಿದ್ದ ಗತ ವೈಭವ ಈಗ ನೆನಪು
ಹಸುಗಳನ್ನು ಸಾಕುತ್ತಿದ್ದ ಗತ ವೈಭವ ಈಗ ನೆನಪು

ಗೋ ಸಾಕುವವನ ಕಷ್ಟಗಳು:

 • ಹಸು ಸಾಕಣೆ ಮಾಡುವುದೆಂದರೆ  ಅದಕ್ಕೆ ಮೇವು ಬೇಕು.
 • ಮೇವನ್ನು ತಂದು ಹಾಕಬೇಕು. ಅದಕ್ಕೆ ಖರ್ಚು ಇದೆ.
 • ಈ ತನಕ ಇದು ಭಾವನಾತ್ಮಕ ವೃತ್ತಿ ಎಂದು ಜನ ಪರಿಗಣಿಸಿದ್ದರೆ, ಮುಂದೆ ಹೀಗೆ ಮುಂದುವರಿಯದು. 
 • ಹಸು ಒಂದು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಆದರೆ  ಅದನ್ನು ಹಾಗೆಯೇ ಸಾಕಬೇಕು.
 • ಅದರ ಉಸ್ತುವಾರಿ ಸಹ ಸರಕಾರದ ಹೊಣೆಯಾಗುತ್ತದೆ.
 • ಸರಕಾರ ಹಸು ಸಾಕುವವರಿಗೆ ಕರು, ಗಂಡು ಕರು, ಮುದಿ ಹಸು ಸಾಕುವ ಖರ್ಚು ವೆಚ್ಚಗಳನ್ನು ಪಾವತಿಸಲೇ ಬೇಕಾಗುತ್ತದೆ.
 • ಇಲ್ಲವಾದರೆ ಹಸು ಸಾಕಣೆ ಮಾಡಿ ರೈತ ಇನ್ನೂ  ಬಡವನಾಗುವುದರಲ್ಲಿ ಸಂದೇಹವಿಲ್ಲ.

ಗೋ ಮಾಂಸ ಅನಿವಾರ್ಯವಲ್ಲ:

 • ನಮ್ಮ ಹೋರಾಟ ಗೋ ವನ್ನು ಮಾಂಸಕ್ಕಾಗಿ ಕೊಲೆ ಮಾಡುವುದರ ಮೇಲೆ ಎಂಬುದು ಸುಸ್ಪಷ್ಟ ತಾನೇ?
 • ಯಾರು ಗೊವಿನ ಮಾಂಸ ತಿನ್ನುತ್ತಾರೆಯೋ ಅವರಿಗೆ ಅದು ಅನಿವಾರ್ಯವಲ್ಲ.
 • ಗೋವನ್ನು ಸಂರಕ್ಷಿತ ಪ್ರಾಣಿ ಎಂದು ಘೋಷಿಸಿದರೆ ದನದ ಮಾಂಸ ತಿನ್ನುವವನಿಗೆ ಏನೂ ನಷ್ಟವಾಗುವುದಿಲ್ಲ.
 • ಯಾಕೆಂದರೆ ಬದುಕುವುದಕ್ಕಾಗಿ ತಿ‌ನ್ನುವುದು. ತಿನ್ನುವುದಕ್ಕಾಗಿ ಬದುಕು ಅಲ್ಲ.
 • ಅವನಿಗೆ ಬೇರೆ ಆಹಾರ ಇದೆ.
 • ಆಗ ನಮಗೆ ನಮ್ಮ ಗೋವುಗಳು ಭಾರವಾಗುವ ಸಾಧ್ಯತೆ ಇದೆ.
 • ಇಂದು ಕೆಲವು ಗೋ ಶಾಲೆಗಳಲ್ಲಿ ಈ ಪರಿಸ್ಥಿತಿ ಉಂಟಾಗಿದೆ.

ಪರಿಹಾರ ಏನು?

 • ವಿಜ್ಞಾನ ಮುಂದುವರಿದಿದೆ. ಹಸುಗಳನ್ನು ಕರು ಹಾಕದೆ ಹಾಲು ಕರೆಯುವ ತಂತ್ರಜ್ಞಾನವೂ ಬಂದಿದೆ.
 • ಹೆಣ್ಣು ಕರುಗಳೇ ಆಗುವ ಕೃತಕ ಗರ್ಭದಾರಣೆ ವಿಧಾನವೂ ಬಂದಿದೆ.
 • ಒಂದು ಹಸು ತನ್ನ ಸೂಲಿನಲ್ಲಿ 10 ಕರು ಹಾಕುತ್ತದೆ  ಎಂದಾದರೆ ಅದನ್ನು 3-4 ಕ್ಕೆ ಮಿತಿ ಗೊಳಿಸುವ,  ಈ ಅವಧಿಯಲ್ಲಿ ಸುರಕ್ಷಿತ ಹಾರ್ಮೋನು ಆಧಾರಿತ ಹಾಲು ಈಯುವ ವ್ಯವಸ್ಥೆಯನ್ನು ಪಶು ಸಂಗೋಪನೆ ಇಲಾಖೆಯ ಮೂಲಕ ಮಾಡಬೇಕಾಗಬಹುದು.
 • ಹಸುಗಳ ಸಂತತಿ ಒಂದು ಇತಿ ಮಿತಿಯಲ್ಲಿ ಇದ್ದಾಗ ಮಾತ್ರ ಅವುಗಳ ನಿರ್ವಹಣೆ ಸಾಧ್ಯ.
 • ಇದನ್ನು ಮಾಡಿದರೆ ಗೋವು ಎಂಬ ಪೂಜ್ಯ ಪ್ರಾಣಿಯ ರಕ್ಷಣೆ ಸುಲಭವಾಗುತ್ತದೆ.
 • ಎಲ್ಲರೂ ಯೋಚಿಸಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ. 

Leave a Reply

Your email address will not be published. Required fields are marked *

error: Content is protected !!