ಸಾವಯವ ಕೃಷಿಯನ್ನು ಅರ್ಥ ಮಾಡಿಕೊಂಡರೆ ಮಾತ್ರ ಅದು ಕೈಹಿಡಿಯುತ್ತದೆ.

ತೋಟಗಾರಿಕೆ ಮತ್ತು ಪ್ಲಾಂಟೇಶನ್ ಬೆಳೆಗಳು

ಶ್ರೀಲಂಕಾ ದೇಶವು ಸಾವಯವ ಕೃಷಿಗೆ ಒತ್ತುಕೊಟ್ಟ ಪರಿಣಾಮ ಈಗ ದಿವಾಳಿ ಹಂತಕ್ಕೆ ತಲುಪಿದೆ ಎಂಬ ವರದಿಗಳು ಕೇಳಿ ಬರುತ್ತಿವೆ.  ಸಾವಯವ ಕೃಷಿ ಅಸಾಧ್ಯ ಎಂಬ ಸಂದೇಶವನ್ನು ಸಾರುವುದಕ್ಕಾಗಿ ಈ ಸುದ್ದಿಯೋ ಅಥವಾ ನಿಜವೋ ತಿಳಿಯದು. ಆದರೆ ಸಕಲ ಸಿದ್ದತೆ ಇಲ್ಲದೆ ಸಾವಯವ ಕೃಷಿಯಲ್ಲಿ ಅಧಿಕ ಉತ್ಪಾದನೆ ಸಾಧ್ಯವಿಲ್ಲ. ಕೃಷಿ ಮತ್ತು ಮೂಲವಸ್ತುಗಳ ಲೆಕ್ಕಾಚಾರ ಇಲ್ಲದೆ ಸಾವಯವ ಕೃಷಿ ಪದ್ದತಿಗೆ ಇಳಿದರೆ ಶ್ರೀಲಂಕಾ ಯಾಕೆ ಯಾವ ಕೃಷಿ ಪ್ರಧಾನ ದೇಶವೂ  ದಿವಾಳಿ ಹಂತಕ್ಕೆ ಬರಬಹುದು.

ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬ ಮಾತನ್ನು ನಾವೆಲ್ಲಾ ಕೇಳಿದ್ದೇವೆ. ಸಾವಯವ ಕೃಷಿ ಮಾಡುವಾಗ ಆನೆಯ ಹೊಟ್ಟೆ ತುಂಬಿಸಿದಂತೆ  ಮಣ್ಣಿಗೆ  ಸಾವಯವ  ಪೋಷಕಾಂಶಗಳನ್ನು ಕೊಡಲು ಸಾಧ್ಯವಿದ್ದರೆ ಅದು  ಅಸಾಧ್ಯವೇನಲ್ಲ.  ನಮ್ಮಲ್ಲಿರುವ ಸೊಪ್ಪಿನ ಬೆಟ್ಟ, ನಾವು ಸಾಕುವ ಹಸು, ಅಡು, ಕುರಿ ಕೋಳಿ  ಇತ್ಯಾದಿಗಳು ಅಥವಾ ಒಟ್ಟಾರೆ ನಮ್ಮಲ್ಲಿರುವ ಪಶು ಸಂಪತ್ತಿನ ತ್ಯಾಜ್ಯಗಳ ಲೆಕ್ಕಾಚಾರ  ಹಾಕಿ ಅದಕ್ಕನುಗುಣವಾಗಿ ಕೃಷಿ ಮಾಡಿದರೆ ಸಾವಯವ ಕೃಷಿಯಲ್ಲೂ ಅಧಿಕ ಉತ್ಪಾದನೆ ಸಾಧ್ಯವಿದೆ.   ಒಂದು ಹಸುವೂ ಇಲ್ಲ.  ಸಾವಿರಾರು ಅಡಿಕೆ ಗಿಡ. ಕೊಂಡು ತರಲೂ ಗೊಬ್ಬರ ಲಭ್ಯವಿಲ್ಲ ಎಂದಾದರೆ  ಕೃಷಿ  ಕೈಕೊಡುತ್ತದೆ. ಕೃಷಿ ಕೈ ಕೊಟ್ಟರೆ ಜನರ ಖರೀದಿ ಸಾಮರ್ಥ್ಯ ಕಡಿಮೆಯಾಗುತ್ತದೆ. ಆಹಾರ ವಸ್ತುಗಳ ಬೆಲೆ ಏರಿಕೆಯಾಗುತ್ತದೆ,. ಇದೆಲ್ಲಾ  ದೇಶದ ಆರ್ಥ ವ್ಯವಸ್ಥೆಗೆ ಹೊಡೆತವನ್ನು ಉಂಟು ಮಾಡುತ್ತದೆ.

 • ನಮ್ಮ ಹಿರಿಯರು ರಸ ಗೊಬ್ಬರ ಇಲ್ಲದೆ ಕೃಷಿ ಮಾಡಿದ್ದರು.
 • ಆಗ ಕೃಷಿಗೆ ಒಳಪಟ್ಟ ಭೂಮಿ ಈಗಿನದ್ದಕ್ಕಿಂತ ಅರ್ಧ ಅಥವಾ ಅದಕ್ಕಿಂತ ಕಡಿಮೆ ಇತ್ತು.
 • ಕೃಷಿಗೆ ಬೇಕಾಗುವ ಎಲ್ಲಾ ಉತ್ಪಾದನಾ ಸಾಮಾಗ್ರಿಗಳೂ  ಆಗ ಅಗ್ಗವಾಗಿತ್ತು.
 • ಫಲವತ್ತಾದ ಮಣ್ಣಿನಲ್ಲಿ ಮಾತ್ರ ಕೃಷಿ ಇತ್ತು.
 • ಹಾಗಾಗಿ ಸಾವಯವ ವಸ್ತುಗಳಲ್ಲೇ ಕೃಷಿ ಮಾಡಲು ಸಾಧ್ಯವಿತ್ತು.
 • ಈಗ ಹಾಗಿಲ್ಲ. ಆದರೂ ಸಾವಯವ ವಸ್ತುಗಳು ಮಿತ ದರದಲ್ಲಿ ಲಭ್ಯವಾದರೆ  ಒಟ್ಟು ಹಾಕುವುದಕ್ಕೆ ಕಷ್ಟವಿಲ್ಲ.
ಸಾವಯವದ ಭತ್ತ ತೆಂಗು ಇತ್ಯಾದಿ ಬೆಳೆ

ಸಾವಯವದಲ್ಲೇ ಅಧಿಕ ಇಳುವರಿ ಪಡೆಯುವವರಿದ್ದಾರೆ:

 • ನಮ್ಮ ಮಿತ್ರರೊಬ್ಬರು ಯಾವುದೇ ರಸ ಗೊಬ್ಬರವನ್ನು ಬಳಕೆ ಮಾಡುವುದಿಲ್ಲ.
 • ಆದರೆ ಹಾಕುವ ಸಾವಯವ ಗೊಬ್ಬರವನ್ನು ಸಕತ್ತಾಗಿ ಹಾಕುತ್ತಾರೆ.
 • ಮರವೊಂದಕ್ಕೆ ಎರಡು  ಬುಟ್ಟಿಗಳಷ್ಟು  ಕುರಿ ಗೊಬ್ಬರ, ಹಾಗೆಯೇ  ವರ್ಷಕ್ಕೊಮ್ಮೆ 1-2 ಕಿಲೋ ಪ್ರಮಾಣದಲ್ಲಿ ಹರಳು ಹಿಂಡಿ ಹಾಕುತ್ತಾರೆ.
 • ಇಳುವರಿ ಚೆನ್ನಾಗಿಯೇ ಇದೆ. ಖರ್ಚು ಹೆಚ್ಚಾದರೂ ಪರವಾಗಿಲ್ಲ.
 • ನನಗೆ ಈ ಗೊಬ್ಬರದಿಂದ ಅನುಕೂಲ ಆಗಿದೆ ಎಂದು ಅದನ್ನು ಮುಂದುವರಿಸುತ್ತಿದ್ದಾರೆ.
 • ಇವರಂತೆ ಕೃಷಿಗೆ ಸಾವಯವ ಗೊಬ್ಬರ ಹಾಕುವವರಿಗೆ ಸಾವಯವ ಕೃಷಿ ಕೈ ಹಿಡಿಯಬಹುದು.

ನನ್ನಲ್ಲಿ ಅಷ್ಟೆಲ್ಲಾ ಗೊಬ್ಬರ ಹಾಕಲು ಸಾಧ್ಯವಿಲ್ಲ. ಅದು ಒಟ್ಟಾರೆ ಖರ್ಚು ನೋಡಿದರೆ ಉತ್ಪತ್ತಿಗೆ ಸಮನಾಗುತ್ತದೆ. ಗೊಬ್ಬರ ಹಾಕುವ ಕೆಲಸ ಜಾಸ್ತಿಯಾಗುತ್ತದೆ  ಎಂದು ಬಾಟಲಿಗಳಲ್ಲಿ  ಬರುವ  ದ್ರವ ಗೊಬ್ಬರ, ಒಂದೆರಡು ಸೇರು ಕೊಟ್ಟಿಗೆ ಗೊಬ್ಬರ ಕೊಡುತ್ತಾ ಸಾವಯವ ಕೃಷಿ ಮಾಡುತ್ತೇನೆ ಎನ್ನುವವರಿಗೆ ಅದು ಕೈ ಕೊಡುತ್ತದೆ.

 • ಎಲ್ಲರೂ ಅಧಿಕ ಇಳುವರಿ ಬೇಕು ಎಂದು ಗರಿಷ್ಟ ಪ್ರಮಾಣದಲ್ಲಿ  ಸಾವಯವ ಗೊಬ್ಬರಗಳನ್ನು ಬಳಕೆ ಮಾಡುತ್ತಾ ಬಂದರೆ ಅದು ಕೊರತೆಯಾಗಿ  ದುಬಾರಿಯಾಗುತ್ತದೆ. 
 • ಬಹುಶಃ ಶ್ರೀಲಂಕಾದಲ್ಲಿ ಇದೇ ಆದದ್ದು.  ಸಾಕಷ್ಟು ಸಾವಯವ ಮೂಲವಸ್ತುಗಳಿಲ್ಲದೆ  ಕೃಷಿ ಮಾಡಲು ಪ್ರಾರಂಭಿಸಿದರೆ  ಅದು ಕೈಕೊಡುತ್ತದೆ.

ಪೋಷಕಗಳು ಮುಗಿಯುವ ಸಂಪನ್ಮೂಲಗಳು:

 • ನಮ್ಮ ಮಣ್ಣು ಫಲವತ್ತಾಗಿದೆ. ಇದಕ್ಕೆ ಕಡಿಮೆ ಪ್ರಮಾಣದಲ್ಲಿ ಗೊಬ್ಬರ ಸಾಕಾಗುತ್ತದೆ ಎಂದು ಹೇಳುವವರು ಇದ್ದಾರೆ.
 • ಹಾಗೆ ಏನೂ ಇಲ್ಲ. ಮಣ್ಣು ಏಷ್ಟೇ ಫಲವತ್ತಾಗಿದ್ದರೂ ಬೆಳೆ ಬೆಳೆಯುವಾಗ ಅದರ ಫಲದ ಮೂಲಕ ಪೊಷಕಗಳು ವ್ಯಯವಾಗುತ್ತದೆ.
 • ಒಂದು ತೆಂಗಿನ ಮರ ಈ ವರ್ಷ 200 ಕಾಯಿ ಬಿಟ್ಟರೆ ಮುಂದಿನ ವರ್ಷ ಅದು 100 ಕ್ಕೂ ಕಡಿಮೆ ಬಿಡುತ್ತದೆ.
 • ಕಾರಣ ಅಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ.  ಫಸಲಿನೊಂದಿಗೆ ಪೋಷಕಾಂಶಗಳು ವ್ಯಯವಾಗುತ್ತದೆ.
 • ಮಳೆಗೆ ಕೊಚ್ಚಿ ಹೋಗುತ್ತದೆ. ನೀರಿನಲ್ಲಿ ಇಳಿದು ಹೋಗುತ್ತದೆ. ಅಲ್ಪ ಸ್ವಲ್ಪ ಆವಿಯೂ ಆಗುತ್ತದೆ.
 • ಸಸ್ಯಗಳು ಯಾವ ಪೋಷಕಗಳನ್ನೂ ಬಾಷ್ಪೀಭವನದಲ್ಲಿ ಹೊರ ಹಾಕುವುದಿಲ್ಲ. 
 • ನಷ್ಟ ಆಗುವಷ್ಟು ಪ್ರಮಾಣವನ್ನು ಒದಗಿಸುತ್ತಾ ಇದ್ದರೆ ಅದು ನವೀಕರಣ ಆಗುತ್ತದೆ.
 • ಕೊಡದೆ ಇದ್ದರೆ ಕೊರತೆಯಾಗಿ ಪರಿಣಮಿಸುತ್ತದೆ.
 • ನಿರೀಕ್ಷೆಯ ಫಸಲಿಗೆ  ಅನುಗುಣವಾಗಿ ಪೋಷಕಗಳನ್ನು ಸಾವಯವ ಮೂಲದಲ್ಲಿ ಅಥವಾ ರಸಗೊಬ್ಬರವಾಗಿಯೂ ಕೊಡುತ್ತಾ ಇದ್ದರೆ ಯಾವ ಸಮಸ್ಯೆಯೂ ಆಗುವುದಿಲ್ಲ. ಒಂದು ಮನೆಯಲ್ಲಿ ಇರುವ ಆಹಾರ ವಸ್ತುಗಳು ಎಷ್ಟು ಜನಕ್ಕೆ ಹೊಟ್ಟೆ ತುಂಬಿಸಲು ಸಾಕು ಅಷ್ಟಕ್ಕೆ ಅದು  ಬರುವುದು. ಅಲ್ಲಿ ಬಳಕೆದಾರರು ಹೆಚ್ಚಾದರೆ ಎಲ್ಲರೂ ಅರೆಹೊಟ್ಟೆಯಲ್ಲೇ ಇರಬೇಕಾಗುತ್ತದೆ.  ನಾವೂ ಲೆಕ್ಕಾಚಾರ ಇಲ್ಲದೆ  ಸಾವಯವ ಕೃಷಿಯೇ ಆದೀತು ಎಂದು ಅದನ್ನು ಅನುಸರಿಸಲು ಹೊರಟರೆ  ನಾವೂ ಸಹ ದಿವಾಳಿ ಆಗಲೇ ಬೇಕಾಗುತ್ತದೆ.

ಎಲ್ಲರೂ ಸಾವಯವ ಕೃಷಿ ಮಾಡಿದರೆ..

 • ಮೇಲೆ ಹೇಳಿದಂತೆ ಎಲ್ಲರೂ ಸಾವಯವ ಕೃಷಿ ಮಾಡಲು ಪ್ರಾರಂಭಿಸಿದರೆ ಸಗಣಿ ಗೊಬ್ಬರ ಅಥವಾ ಇನ್ಯಾವುದೇ ಗೊಬ್ಬರಗಳಿಗೆ ಒತ್ತಡ ಹೆಚ್ಚಾಗಬಹುದು.
 • ಎಲ್ಲರೂ ಹಸು ಸಾಕಬೇಕಾಗಬಹುದು. ಕೋಳಿ ಸಾಕುವುದು, ಕುರಿ ಆಡು ಸಾಕುವುದು ಮಾಡುತ್ತಾ ತಮ್ಮ ಹೊಲಕ್ಕೆ ಬೇಕಾಗುವ ಸಾವಯವ ಗೊಬ್ಬರಗಳನ್ನು ತಾವೇ ಉತ್ಪಾದಿಸಬೇಕಾಗಿ ಬರಬಹುದು. 
 • ಈ ವೃತ್ತಿಗಳೂ ಸಹ ಕೃಷಿ ಪೂರಕಗಳೇ. ನೆಲದಲ್ಲಿ ಸಾಕಷ್ಟು ಪೋಷಕಗಳು ಇದ್ದರೆ ಹುಲ್ಲು ಬೆಳೆಯುತ್ತದೆ.
 • ಹೊಲದಲ್ಲಿ ಜೋಳ ಇತ್ಯಾದಿ ಬೆಳೆ ಬೆಳೆದರೆ ಕೋಳಿಗಳಿಗೆ ಆಹಾರ ಸಿಗುತ್ತದೆ.
 • ಎಲ್ಲವೂ ಪರಸ್ಪರ ಕೊಂಡಿಗಳು. ಇದೂ ಆಗದೆಂದೇನೂ ಇಲ್ಲ.
 • ಆದರೆ ಇವೆಲ್ಲವೂ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಬೇಕು. ಅಷ್ಟೇ.

ಕೃಷಿಕರಿಗೆ ಶಿಕ್ಷಣ ಬೇಕು:

 • ಇಂದು ಕೃಷಿ ಮತ್ತು ಮಣ್ಣು ಇದರ ಪೂರ್ವಾಪರ ಗೊತ್ತಿಲ್ಲದ  ಹಲವಾರು  ಜನ ಕೃಷಿಗೆ ಇಳಿದವರಿದ್ದಾರೆ.
 • ಇವರಿಗೆ ನಾನು ಹೇಳಿದ್ದೂ ಸರಿ , ನೀವು ಹೇಳಿದ್ದೂ ಸರಿ.
 • ಯಾರು ಚೆನ್ನಾಗಿ ಬ್ರೈನ್ ವಾಶ್ ಮಾಡುವರೋ ಅವರ ಮಾತನ್ನೇ ನಂಬುವವರು ಹೆಚ್ಚಾಗಿದ್ದಾರೆ.
 • ಸ್ವಂತದ್ದಾದ  ತಿಳುವಳಿಕೆ ಇಲ್ಲ.
 • ಅಪ್ಪಟ ಸಾವಯವ ಕೃಷಿಕರಾಗಲು ಹಂಬಲಿಸುವ ಇವರು ಸಾವಯವ ವಸ್ತುಗಳನ್ನು ಕೊಂಡು ತರುವವರು. ಸಾವಯವ ವಸ್ತು ಕೊಂಡು ತರುವವರೇ ಆದರೆ ಅದು ರಸ ಗೊಬ್ಬರಕ್ಕಿಂತ ದುಬಾರಿಯಾಗುತ್ತದೆ.
 • ಸಾವಯವ ಕೃಷಿ ಏನು, ಅದನ್ನು ನಮ್ಮ ಹಿರಿಯರು ಹೇಗೆ ಮಾಡಿ ಯಶಸ್ವಿಯಾಗಿದ್ದರು, ನಮಗೆ ಅದನ್ನು ಮಾಡಲು ಸಾಧ್ಯವೇ ಎಂದು ಯೋಚಿಸುವಷ್ಟು ನಮ್ಮ ಕೃಷಿಕರು ಬುದ್ಧಿಶಕ್ತಿ ಬೆಳೆಸಿಕೊಳ್ಳಬೇಕು.

ನಮ್ಮ ಸರಕಾರವೂ ತಪ್ಪು ಹೆಜ್ಜೆ ಇಡುತ್ತಿದೆ:

 • ಕೊರೋನಾ ಬರುವುದಕ್ಕೆ ಮುಂಚೆ ನಮ್ಮ ರಾಜ್ಯ ಸರಕಾರ, ಕೇಂದ್ರ ಸರಕಾರ  ಸಾವಯವ ಕೃಷಿ ಕ್ರಮದ ಬಗ್ಗೆ ಭಾರೀ ಆಸಕ್ತಿಯನ್ನು  ತೋರಿತ್ತು.
 • ಆ ಎಲ್ಲಾ ಆಸಕ್ತಿಗೆ  ಕೊರೋನಾ ಒಂದು ಬ್ರೇಕ್ ಹಾಕಿತ್ತು.
 • ಸಾವಯವ ಕೃಷಿ ಪದ್ದತಿಗೆ ಸರಕಾರದ ಹಸ್ತಕ್ಷೇಪ ಆದರೆ ಅದು ನಮ್ಮನ್ನು ದಿವಾಳಿ ಅಂಚಿಗೆ ಒಯ್ಯುತ್ತದೆ ಎಂಬುದರಲ್ಲಿ ಅನುಮಾನ ಇಲ್ಲ.
 • ಇಲ್ಲಿ ರೈತ ಉದ್ದಾರಕ್ಕಿಂತ ಅದರ ಅನುಷ್ಟಾನಕ್ಕ ಮಾಡುವ ಖರ್ಚು ಹೆಚ್ಚಾಗುತ್ತದೆ.
 • ಆದ ಕಾರಣ ಸರಕಾರದ ಅಭಿವೃದ್ದಿ ಇಲಾಖೆ ಅಥವಾ ಯಾರೋ ನಿಯೋಜಿತ ಕೃಷಿ ವಿಜ್ಞಾನಿಗಳು ಹೇಳುತ್ತಾರೆ ಎಂದು ಸಾವಯವ ಕೃಷಿಗೆ ಇಳಿಯಬೇಡಿ.
 • ಅವರಿಗೆಲ್ಲಾ ಇದು ಒಂದು ನಿಯೋಜಿತ ಕೆಲಸ. ನಾಳೆ ಅವರು ಬೇರೆಯೇ ಹೇಳಲೂ ಬಹುದು.
 • ನಮಗೆ ಅದು ಬದುಕಿನ ವೃತ್ತಿ. ಸಾಕಷ್ಟು ಕಚ್ಚಾ ವಸ್ತುಗಳಿದ್ದರೆ, ಅದನ್ನು ರಾಸಾಯನಿಕ ಗೊಬ್ಬರ ಒಟ್ಟು ಹಾಕುವುದಕ್ಕಿಂತ ಮಿತವ್ಯಯದಲ್ಲಿ  ಒಟ್ಟು ಸೇರಿಸಲು ಸಾಧ್ಯವಿದರೆ  ಮಾತ್ರ ಸಾವಯವ ಕೃಷಿ ಮಾಡಿ. ಅದು ಅಸಾಧ್ಯವಂತೂ ಅಲ್ಲ.

ಶ್ರೀಲಂಕಾ ಸಾವಯವ ಕೃಷಿ ಮಾಡಿ ದಿವಾಳಿಯಾಗಿದೆ ಎಂದು ನಾವು ಅಂಜಬೇಕಾಗಿಲ್ಲ. ಸಾಕಷ್ಟು ಸಾವಯವ ಒಳಸುರಿಗಳು ಇದ್ದರೆ ಅದು ಅಗ್ಗದಲ್ಲಿ ದೊರೆಯುತ್ತದೆ ಎಂದಾದರೆ  ಅದರಲ್ಲೇ ಕೃಷಿ ಮಾಡಿ ಉತ್ತಮ ಇಳುವರಿ ಪಡೆಯಬಹುದು. ರಸ ಗೊಬ್ಬರ ಎಂಬುದು ಸಾವಯವ  ವಸ್ತು ಕಡಿಮೆಯಾದಾಗ ಪೋಷಕಗಳ ಕೊರೆತೆಯನ್ನು ನೀಗಿಸಲು ಬಂದ ವ್ಯವಸ್ಥೆಯೇ ಹೊರತು ಅದು ಸಾವಯವ ಗೊಬ್ಬರಕ್ಕೆ ಪರ್ಯಾಯ ಅಲ್ಲವೇ ಆಲ್ಲ. ಸಾವಯವ ಅಂಶ ಇಲ್ಲದೆ ರಸ ಗೊಬ್ಬರವೂ ಕೆಲಸ ಮಾಡಲಾರದು ಇದು ಸತ್ಯ.

Leave a Reply

Your email address will not be published. Required fields are marked *

error: Content is protected !!