ಅಡಿಕೆ ಮರದ ಅಣಬೆ ರೋಗ- ನಿಯಂತ್ರಣ.

ಅಣಬೆ ರೋಗದ ಅಂತಿಮ ಚಿನ್ಹೆ

ಇತ್ತೀಚೆಗೆ ಅಡಿಕೆ ಮರಗಳು ಅಣಬೆ ರೋಗ ಎಂಬ ಖಾಯಿಲೆ ಯಿಂದಾಗಿ ಕಾಂಡದಲ್ಲಿ ರಸ ಸೋರಲು ಪ್ರಾರಂಭವಾಗಿ ನಿಧಾನವಾಗಿ ಮರದ ಗರಿ ಹಳದಿಯಾಗುತ್ತಾ ಕಾಂಡದ ಬುಡ ಭಾಗದಲ್ಲಿ ಅಣಬೆ ಬೆಳೆದು ಮರ ಸಾಯುತ್ತಿದೆ. ಇದು ಒಂದು ಶಿಲೀಂದ್ರ ಸೋಂಕು ಆಗಿದ್ದು, ಇದು ಹರಡುತ್ತದೆ. ಇಂತಹ ಚಿನ್ಹೆ ಕಂಡು ಬಂದಾಗ ಮೊದಲ ಹಂತದಲ್ಲಿ ಉಪಚಾರ  ಮಾಡಬೇಕು. ತಡವಾದರೆ ಪ್ರಯೋಜನ ಇಲ್ಲ.

ಯಾವುದೇ ಒಂದು ಮರದಲ್ಲಿ ಅಣಬೆ ಬೆಳೆಯಬೇಕಾದರೆ ಅದರ ಅಂಗಾಂಶ ಸತ್ತಿರಬೇಕು. ಅಣಬೆ ಬೆಳೆಯುವುದು ಸೆಕೆಂಡರಿ( ದ್ವಿತೀಯ ಹಂತದ ಹಾನಿ). ಅಣಬೆ ಬೆಳೆಯಬೇಕಾದರೆ ಅಲ್ಲಿ ಮೊದಲು ಕಾಂಡಕ್ಕೆ ಶಿಲೀಂದ್ರ ಸೋಂಕು ಉಂಟಾಗಿ ಮರದ ಅಂಗಾಣ್ಶ ಸಾಯುವ ಹಂತಕ್ಕೆ ಬಂದಿರಬೇಕು. ಅಡಿಕೆ ಮರದ ವಿಷಯದಲ್ಲೂ ಹೀಗೆಯೇ.

 • ಅಣಬೆ  ಎಂಬುದು  ಒಂದು ಕಣ್ಣಿಗೆ ಕಾಣುವ ಶಿಲೀಂದ್ರ. ಶಿಲೀಂದ್ರ ಬೆಳೆಯಬೇಕಾದರೆ ಮುಂಚೆ ಅದು ಅ ವಸ್ತುವಿಗೆ ಪ್ರಾರಂಭಿಕವಾಗಿ ಸೊಂಕು ರೂಪದಲ್ಲಿ ತಾಗಿರಬೇಕು.
 • ಅಡಿಕೆ ಮರದ ಕಾಂಡಕ್ಕೆ ಶಿಲೀಂದ್ರ ಸೋಂಕು ತಗಲಿ ಅಲ್ಲಿ ರಸ ಸೋರುವಿಕೆ ಉಂಟಾಗಿ ಅಂತಿಮವಾಗಿ ಅಣಬೆ ರೂಪದಲ್ಲಿ ಅದು ನಮಗೆ ಗೊತ್ತಾಗುತ್ತದೆ.
 • ಅಣಬೆ ಬೆಳೆಯುವ ಹಂತಕ್ಕೆ ಬಂದ ನಂತರ ಆ ಮರದ  ಆಯಸ್ಸು ಮುಗಿದಂತೆ ಎಂದು ತಿಳಿಯಬಹುದು.
ಅಡಿಕೆ ಮರದ ಕಾಂಡದಲ್ಲಿ ಅಣಬೆ ರೋಗ
ಅಡಿಕೆ ಮರದ ಕಾಂಡದಲ್ಲಿ ಅಣಬೆ ರೋಗ

ಅಣಬೆ ರೋಗಕೆ GANODERM ರೋಗ ಎಂದೂ ಕರೆಯುತ್ತಾರೆ.  ಇದಕ್ಕೆ ಕಾರಣ  Ganoderma lucidum. ಇದು ಅಡಿಕೆ ಅಲ್ಲದೆ  ತೆಂಗು, ತಾಳೆ, ಹೊಂಗೆ, ಹುಣಸೆ, ಹಲಸು ಮುಂತಾದ ಮರಗಳಿಗೂ ಬರುತ್ತದೆ. ಇದು ಮೈಸೂರು ಪ್ರಾಂತದಲ್ಲಿ ಮೊತ್ತ ಮೊದಲಾಗಿ ಬೆಳೆಕಿಗೆ ಬಂತು. ಈಗ ಅದು ಹಾಸನ ಜಿಲ್ಲೆ, ಕಡೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ  ಮುಂತಾದ ಕಡೆ  ಹೆಚ್ಚಾಗಿ ಕಂಡು ಬರುತ್ತಿದೆ.

 • ಈ ಕಾರಣದಿಂದ 2-3 %  ಮರಗಳು ಹಾನಿಯಾಗುತ್ತವೆ. ಅಡಿಕೆ ತೋಟಗಳಲ್ಲಿ ವರ್ಷಕ್ಕೆ ಒಂದೋ ಎರಡೋ ಹೆಚ್ಚೋ ಮರಗಳು ಸಾಯುತ್ತವೆ.
 • ಮೊದಲಾಗಿ  ಕಾಂಡದಲ್ಲಿ ಅಲ್ಲಲ್ಲಿ ರಸ ಸೋರುವಿಕೆ ಉಂಟಾಗುತ್ತದೆ
 • ಅಂತಹ ಮರವನ್ನು ಹಾಗೆ ಬಿಟ್ಟರೆ ಅದರ ಕಾಂಡದಲ್ಲಿ ಅಣಬೆ ಬೆಳೆಯುತ್ತದೆ. ಬೇರುಗಳಲ್ಲಿಯೂ ಅಣಬೆ ಬೆಳೆಯುತ್ತದೆ.

ಅಣಬೆ ರೋಗ ಹೇಗೆ ಬರುತ್ತದೆ:

 • ಅಡಿಕೆ ಬೆಳೆಯಲಾಗುವ ಎಲ್ಲಾ ಭಾಗಗಳಲ್ಲೂ ಆಣಬೆ ರೋಗ ಎಂಬ ಸಮಸ್ಯೆಯನ್ನು ಕಾಣಬಹುದು.
 • ಕಳೆದ ವರ್ಷ ಮತ್ತು ಈ ವರ್ಷ ಕರಾವಳಿ ಮಲೆನಾಡಿನಲ್ಲಿ  ಸಾಕಷ್ಟು ಮರಗಳು ಅಣಬೆ ರೋಗಕ್ಕೆ ತುತ್ತಾಗಿವೆ ಎನ್ನುತ್ತಾರೆ. ಅದು ಅಣಬೆ ರೋಗ ಅಲ್ಲ.
 • ಬಯಲು ಸೀಮೆಯ ಚಿತ್ರದುರ್ಗ, ದಾವಣಗೆರೆ , ಮುಂತಾದ ಕಡೆ ಅತ್ಯಧಿಕ ಪ್ರಮಾಣದಲ್ಲಿ ಈ ರೋಗ ಇದೆ ಎನ್ನುತ್ತಾರೆ ಬೆಳೆಗಾರರು.
 • ವಾಸ್ತವವಾಗಿ ಇದು ಮರದ ಸುಳಿ ಭಾಗ ಒಣಗುವ ಹಂತದಲ್ಲಿ ಕಾಂಡದ ಕೆಳಭಾಗದಲ್ಲಿ ಅಣಬೆ ಬೆಳೆಯುವುದೂ ಇರುತ್ತದೆ. ಬೇರು ಭಾಗಕ್ಕೆ ಹಾನಿಯಾಗಿ ಕಾಂಡದಲ್ಲಿ ರಸ ಸೊರಿ ಕೊನೆಗೆ ಅಣಬೆ ಬೆಳೆಯುತ್ತದೆ.
 • ಕಳೆದ ಎರಡು ವರ್ಷಗಳಲ್ಲಿ ಕೊಳೆ ( ಮಹಾಳಿ) ರೋಗದ ಕಾರಣದಿಂದ ಬೇರು ಕೊಳೆ ಹೆಚ್ಚಾಗಿದ್ದು, ಮರದ ಬೇರುಗಳು ಸತ್ತು, ಮರಕ್ಕೆ ಆಹಾರ ಸರಬರಾಜು ನಿಂತು ಮರದ ಎಲೆಗಳೆಲ್ಲಾ ಹಳದಿಯಾಗಿ ಒಂದೊಂದೇ ಎಲೆಗಳು ಸಾಯುತ್ತಾ ಬರುತ್ತವೆ.
 • ಆ ಸಮಯದಲ್ಲಿ  ಮರ ಸತ್ತಾಗಲೂ ಕಾಂಡದಲ್ಲಿ ಅಣಬೆ ಬೆಳೆಯಲಾರಂಬಿಸುತ್ತದೆ.
 • ಮರದ ಬುಡ ಭಾಗದಲ್ಲಿ ಅಣಬೆ ಬೆಳೆದ ಕಾರಣದಿಂದ ಮರದ ಶಿರದ ಎಲೆಗಳು ಸತ್ತಿದೆ ಎಂದು ನಾವು ಭಾವಿಸುತ್ತೇವೆ.
 • ನೈಜ ಅಣಬೆ ರೋಗ ಬೇರಿನ ಮೂಲಕ ಕಾಂಡಕ್ಕೆ ಶಿಲೀಂದ್ರ ಸೋಂಕು ಹರಡಿ ರಸ ಸೋರುವುದರ ಮೂಲಕ ಹೆಚ್ಚಾಗುತ್ತಾ ಮರದ ಕಾಂಡದಲ್ಲಿ ಅಣಬೆ ಬೆಳೆಯಲಾರಂಭಿಸುತ್ತದೆ.
ಅಣಬೆ ರೋಗ ಬಾಧಿತ ಮರಗಳ ನೋಟ
ಅಣಬೆ ರೋಗ ಬಾಧಿತ ಮರಗಳ ನೋಟ

ಮರದ ಬುಡದ ಬೇರು ಕೊಳೆತು , ಮರ ಸತ್ತಾಗ ಅದರ ಕಾಂಡದಲ್ಲಿ ಅಣಬೆ ಬೆಳೆಯುತ್ತಿದ್ದರೆ ಅದು ಅಣಬೆ ರೋಗ ಅಲ್ಲ. ಅದು ಬೇರು ಕೊಳೆ ರೋಗ. ಕೆಲವು ಕಡೆ ಅಡಿಕೆ ಮರದಲ್ಲಿ ಅಣಬೆ ಬೆಳೆದದ್ದು ಶಿರ ಕೋಳೆ ಮತ್ತು ಬುಡ ಕೊಳೆಯಿಂದಾಗಿ. ಮರದಲ್ಲಿ  ಹಸುರು ಗರಿಗಳು ಇರುವಾಗ ಕಾಂಡದಲ್ಲಿ ರಸ ಸೋರುವುದಿಲ್ಲ. ಅಣಬೆ ಬೆಳೆಯುವುದಿಲ್ಲ.

ಹೇಗೆ ಬರುತ್ತದೆ:

 • ಅಡಿಕೆ ಮರಗಳ ಬೇರಿನ ಭಾಗದಲ್ಲಿ ನೀರು ನಿಂತು ಆದಕ್ಕೆ ಉಸಿರಾಟಕ್ಕೆ  ತೊಂದರೆಯಾದಾಗ ಆ ಮರದ ಕೆಲವು ಬೇರುಗಳು ಸತ್ತು
 • ಗುತ್ತವೆ.ತೆಂಗಿನ ಮರಕ್ಕೆ ಕಾಂಡದಲ್ಲಿ ರಸ ಸೋರುವಿಕೆ ಉಂಟಾದರೆ ಅದು ಅಡಿಕೆಗೂ ಪ್ರಸಾರವಾಗುತ್ತದೆ.
 • ಆಗ ಮರದ ಕೆಳಭಾಗದ ಎಲೆಗಳು ಹಳದಿಯಾಗಲಾರಂಭಿಸುತ್ತವೆ.
 • ಹೂ ಗೊಂಚಲು ಮತ್ತು ಅಡಿಕೆ ಇದ್ದರೆ, ಅದೆಲ್ಲಾ ಉದುರುತ್ತದೆ. ಒಂದೊಂದೇ ಗರಿ ಉದುರುತ್ತದೆ, ಅಥವಾ ಅದು ಮರಕ್ಕೆ ಜೋತು ಬಿದ್ದಿರುತ್ತದೆ.
 • ಕ್ರಮೇಣ ಅದು  ಸುಳಿಯ ತನಕವೂ ವ್ಯಾಪಿಸಿ ಸುಳಿಯೇ ಒಣಗುತ್ತದೆ.
 • ಇಷ್ಟಾಗಲು ಸುಮಾರು 3-4 ತಿಂಗಳು ಬೇಕಾಗುತ್ತದೆ.
 • ಮೊದಲು ಕಾಂಡದಲ್ಲಿ ಮೇಣ ಸ್ರಾವವಾಗುತ್ತದೆ.
 • ಈ ಸಮಯದಲ್ಲಿ  ಕಾಂಡವನ್ನು ಕಡಿದು ನೋಡಿದಾಗ ಮೇಲಿನ ಶಿಲೀಂದ್ರ ಕಂಡು ಬರುತ್ತದೆ. ವಾಸನೆಯೂ ಇರುತ್ತದೆ.

ನಿಯಂತ್ರಣ:

ಅಣಬೆ ರೋಗ ಬಾಧಿತ ಮರಗಳ ಬೇರು
ಅಣಬೆ ರೋಗ ಬಾಧಿತ ಮರಗಳ ಬೇರು
 • ಅಣಬೆ ರೋಗ ಬರುವುದಕ್ಕೆ ಮುಂಚೆ ಮಾತ್ರ ಇದನ್ನು ನಿಯಂತ್ರಣ ಮಾಡಲು ಸಾಧ್ಯ. ಬಂದ ನಂತರ ಅದರ ಕಥೆ ಮುಗಿದಂತೆ.
 • ಅಡಿಕೆ ತೋಟಕ್ಕೆ ವಿಪರೀತ ನೀರಾವರಿ ಮಾಡಬೇಡಿ. ತೀರಾ ಕೊಳೆಯುವ ಸಾವಯವ ವಸ್ತುಗಳನ್ನು ಬುಡಕ್ಕೆ ಹಾಕಬೇಡಿ.
 • ಕೊಳೆಯುವ ವಸ್ತುಗಳಲ್ಲಿ ಕೊಳೆತಿನಿ ಶಿಲೀಂದ್ರಗಳು ಇರಬಹುದು.
 • ಸಾವಯವ ಗೊಬ್ಬರಗಳನ್ನು  ಬುಡದಿಂದ 1 ಮೀ. ದೂರದಲ್ಲಿ ಹಾಕಿ.
 • ಪ್ರತೀ ಎರಡು ಮರಗಳ ಮಧ್ಯಂತರದಲ್ಲಿ ನೀರು ಬಸಿಯಲು, ಅಥವಾ ಶ್ವಾಸೋಛ್ವಾಸಕ್ಕೆ ಆನುಕೂಲವಾಗುವಂತೆ ಬಸಿ ವ್ಯವಸ್ಥೆಇರಲಿ.
 • ಹೊಲವನ್ನು ಪ್ರತೀ ವರ್ಷ ಅಗತೆ, ಅಥವಾ ಉಳುಮೆ ಮಾಡಿ ಬೇರುಗಳಿಗೆ ಘಾಸಿ ಮಾಡಬೇಡಿ. ಪ್ರಾರಂಭದ ಹಂತದಲ್ಲಿ ತುಸು ರಸ ಸೋರುವುದು ಕಂಡು ಬಂದರೆ ಅಲ್ಲಿಗೆ ಶಿಲೀಂದ್ರ ನಾಶಕ ಲೇಪಿಸಿ. ಹಸಿ ಸಹಣಿಯನ್ನೂ ಲೇಪಿಸಿದರೆ ಆಗುತ್ತದೆ ಎನ್ನುತ್ತಾರೆ. ಸಗಣಿ ಮೂತ್ರಕ್ಕೆ ರೋಗ ನಿವಾರ ಶಕ್ತಿ ಇದೆ ಎಂಬುದು ಪ್ರಚಲಿತ ಮಾಹಿತಿ

ತೋಟದಲ್ಲಿ ಮರಗಳ ಎಲೆಯು ತಿಳಿ ಹಸಿರು ಬಣ್ಣಕ್ಕೆ ತಿರುಗಿದ ಲಕ್ಷಣ ಕಂಡು ಬಂದರೆ ಅದಕ್ಕೆ ಬುಡ ಭಾಗಕ್ಕೆ ಶಿಲೀಂದ್ರ ನಾಶಕ (sectin 2.5 ಗ್ರಾಂ /೧ ಲೀ. ನೀರು ಮಿಶ್ರಣ ಮಾಡಿ) ವನ್ನು 5 ಲೀ ನಷ್ಟು ಬುಡದ ಸುತ್ತ 1 ಮೀ. ಸುತ್ತಳತೆಗೆ  ತನಕ ಬೀಳುವಂತೆ  ಹಾಕಿರಿ. ಹೆಕ್ಸಾಕೊನೆಜ಼ೋಲ್ ಅನ್ನು ಬಳಸುವುದಕ್ಕೆ  ತಿಳಿಸುತ್ತದೆ. ತೆಂಗಿಗೆ ಬೇರಿನ ಮೂಲಕ ಕೊಡಬಹುದು ಎನ್ನುತ್ತಾರೆ CPCRI  ವಿಜ್ಞಾನಿಗಳು

 • ಬುಡಕ್ಕೆ ನಾಲ್ಕೂ ದಿಕ್ಕಿನಲ್ಲಿ ಹ್ಯೂಮಿಕ್ ಅಸಿಡ್ ಹರಳನ್ನು ಒಂದು ಮರಕ್ಕೆ 10  ಗ್ರಾಂ ಪ್ರಕಾರ ತೂತು ಮಾಡಿ ಹಾಕಿ. ( ಬೇರು ಬರಲು)
 • ಬುಡ ಭಾಗಕ್ಕೆ ಸುಡುಮಣ್ಣು ಅಥವಾ ಭತ್ತದ ಸುಟ್ಟ ಕರಿಯನ್ನು ಹಾಕಿ ಹೊಸ ಬೇರು ಬರುವಂತೆ  ಮಾಡಿ.
 • ಶಿಫಾರಿತ ಪ್ರಮಾಣದ ಗೊಬ್ಬರವನ್ನು ಕೊಡಿ.
 • ಸತ್ತ ಮರಗಳನ್ನು ಅಲ್ಲೇ  ಉಳಿಸದೆ ಅದನ್ನು ಕಡಿದು ಬುಡ ಸಮೇತ ತೆಗೆದು ಸುಡಬೇಕು.
 • ಇಂತಹ ಚಿನ್ಹೆ ಕಂಡು ಬಂದಾಗ ಮೊದಲ ಹಂತದಲ್ಲಿ ಉಪಚಾರ  ಮಾಡಬೇಕು.
 • ತಡವಾದರೆ ಪ್ರಯೋಜನ ಇಲ್ಲ. ರಸ ಸ್ರಾವ ಅಗುವ  ಜಾಗಕ್ಕೆ ಹೆಕ್ಸಾಕೊನೆಜಾಲ್ Hexaconazole5EC @ 2% (100 ml solution per palm  ಅನ್ನು ಹಚ್ಚಬಹುದು ಎನ್ನುತ್ತಾರೆ ವಿಜ್ಞಾನಿಗಳು.
 • ಗೇರು ಬೀಜದ ಎಣ್ಣೆ, ಟಾರ್. ಮಡ್ ಆಯಿಲ್ ಅನ್ನು ರಸ ಸೋರುವ ಜಾಗಕ್ಕೇ ಹಚ್ಚಿದರೆ ಕೆಲವೊಮ್ಮೆ ವಾಸಿಯಾಗುತ್ತದೆ.
 • ಮರದ ಎಲೆ ಹಳದಿ ಆಗುವ ಹಂತಕ್ಕೆ ಬಂದ ನಂತರ ಅದಕ್ಕೆ ಉಪಚಾರ ಮಾಡಬೇಡಿ. ಬೇರು ಸಮೇತ ತೆಗೆದು, ಅದನ್ನು ತೋಟದಿಂದ ದೂರ ಒಯ್ದು ಸುಡಿ. ಬೇರುಗಳು ಉಳಿದರೆ ಅದರ ಮೂಲಕವೂ  ರೋಗ ಹರಡುತ್ತದೆ. 
 • ಇಂತಹ ಸಮಸ್ಯೆ ಇರುವ ತೋಟಕ್ಕೆ ಪ್ರತೀ ವರ್ಷ ಟ್ರೈಕೋಡರ್ಮಾ ಹಾರ್ಜಿಯಾನಂ T. harzianum ಅನ್ನು ಮಣ್ಣಿಗೆ ಸೇರಿಸುತ್ತಾ ಇದ್ದರೆ ರೋಗ ಸಾಧ್ಯತೆ ಕಡಿಮೆಯಾಗುತ್ತದೆ.
 • ತೆಂಗಿನ ಮರಗಳಿಗೆ ರಸ ಸೋರುವ ರೋಗ ಉಂಟಾದರೆ ಅದು ಅಡಿಕೆಗೂ ಪ್ರಸಾರವಾಗುತ್ತದೆ.
 • ಅದನ್ನೂ ಉಪಚಾರ ಮಾಡದೆ ಹಾಗೆ ಉಳಿಸಬೇಡಿ.

ಅಣಬೆ ರೋಗ ಎಂಬುದು ಒಂದು ಹರಡುವ ರೋಗವಾಗಿದ್ದು, ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಅದನ್ನು ನಿಯಂತ್ರಣ ಮಾಡಿದರೆ ಮಾತ್ರ ಹತೋಟಿ ಮಾಡಲು ಸಾಧ್ಯ.  ಇದುವೇ ಒಂದು ರೋಗ ಅಲ್ಲ.  ಇತರ ಕೊಳೆಯುವ ರೋಗ ಇದನ್ನು ಹೆಚ್ಚಾಗುವಂತೆ ಮಾಡುತ್ತದೆ. ಕರಾವಳಿ , ಮಲೆನಾಡಿನಲ್ಲಿ ಮಳೆಗಾಲದ ಅಧಿಕ ಮಳೆ ಬೇರು ಕೊಳೆಯಲು ಕಾರಣವಾಗಿ ಹೀಗೆ ಆಗಬಹುದು. ಬಯಲು ಸೀಮೆಯಲ್ಲಿ ಉಳುಮೆ, ನೀರು ಬಸಿಯದಿರುವಿಕೆ, ಮತ್ತು ಬೇರಿಗೆ ಉಸಿರಾಟಕ್ಕೆ ತೊಂದರೆ ಆಗಿ ಆಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!