ಅಡಿಕೆ – ಹೂ ಗೊಂಚಲು ಒಣಗಲು ಯಾವ ಕೀಟ ಕಾರಣ ಮತ್ತು ಪರಿಹಾರ ಏನು?.

ಸಿಂಗಾರ ತಿನ್ನುವ ಹುಳ ಮುಟ್ಟಿದ ಹೂ ಗೊಂಚಲು

ಶುಷ್ಕ ವಾತಾವರಣದ ವ್ಯತ್ಯಾಸವೋ ಏನೋ , ಈಗೀಗ ಅಡಿಕೆ -ಹೂ ಗೊಂಚಲು ಬಹಳ ಪ್ರಮಾಣದಲ್ಲಿ  ಒಣಗಿ ಹಾಳಾಗುತ್ತಿದೆ. ಒಂದು ಕಾಲದಲ್ಲಿ  ಮೈನರ್ ಪೆಸ್ಟ್ ಆಗಿದ್ದ ಈ ಕೀಟ, (ಹುಳ) ಈಗ ಮೇಜರ್ ಪೆಸ್ಟ್ ಆಗುತ್ತಿದೆ. ಇತ್ತೀಚೆಗೆ ಎಲ್ಲಾ ಅಡಿಕೆ ಬೆಳೆಗಾರರಲ್ಲಿಯೂ ಈ ಸಮಸ್ಯೆ ಹೆಚ್ಚಾಗುತ್ತಿದ್ದು, ಅಪಾರ ಬೆಳೆ ನಷ್ಟ ಉಂಟಾಗುತ್ತಿದೆ.

  • ಮಳೆಗಾಲ ಕಳೆದ ತಕ್ಷಣ ಅಡಿಕೆ ಮರದಲ್ಲಿ ಗೊಂಚಲು ಬಿಡಲು ಪ್ರಾರಂಭವಾಗುತ್ತದೆ.
  • ಹೊಸತಾಗಿ ಬರುವ ಬಹುತೇಕ ಹೂ ಗೊಂಚಲುಗಳಲ್ಲಿ ಈ ಹುಳದ  ಬಾಧೆ ಇದೆ.
  • ಮಳೆಗಾಲದಲ್ಲಿ ಸಂಖ್ಯಾಭಿವೃದ್ದಿಯಾದ ಕೀಟ ಅಡಿಕೆಯಲ್ಲಿ ಮತ್ತೆ ತನ್ನ ಆಹಾರ  ಹುಡುಕುತ್ತದೆ.
  • ಈ ಚಿತ್ರದಲ್ಲಿ ಕಂಡಂತೆ ಸಿಂಗಾರದಲ್ಲಿ ಕೀಟ ಹಾನಿ ಮಾಡಿದ ಲಕ್ಷಣ ಇರುತ್ತದೆ.
  • ಬಿಡಿಸಿ ನೋಡಿದಾಗ ಒಳಗೆ ಬಲೆ ತರಹ ಇರುತ್ತದೆ.
  • ಕೆಲವು ಹುಳಗಳು ಮಿಡಿ, ಹೂ ಗೊಂಚಲು ದಂಟು ತಿಂದು ಹಾನಿ ಮಾಡಿರುತ್ತವೆ.  

ಚಳಿಗಾಲದಲ್ಲಿ  ಹೆಚ್ಚು:

  • ಮಳೆಗಾಲದಲ್ಲಿ ಎಲ್ಲಾ ಸಸ್ಯಗಳಲ್ಲಿ ಬೇರೆ ಬೇರೆ ತರಹದ ಎಲೆ ತಿನ್ನುವ ಹುಳುಗಳನ್ನು ಕಾಣಬಹುದು.
  • ಇದು ಮಳೆಗಾಲ ಕಳೆಯುವ ಸಮಯಕ್ಕೆ ಪ್ಯೂಪೆ ಹಂತ ಮುಗಿಸಿ ಪತಂಗಗಳಾಗುತ್ತವೆ.
  • ಈಗ ಪತಂಗಗಳು ಚಿಟ್ಟೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವುದು ಅದೇ ಕಾರಣಕ್ಕೆ .
  • ಇವು ಸಂತಾನಾಭಿವೃದ್ದಿಗಾಗಿ ಮತ್ತೆ ಮೊಟ್ಟೆ ಇಡಲು ಅವಕಾಶವನ್ನು ಹುಡುಕುತ್ತಿರುತ್ತವೆ.
  • ಅಂತಹ ಒಂದು ಜಾತಿಯ ಪತಂಗ  Tirathabamundella Walker ಅಡಿಕೆ ಮರದ ಹಾಳೆಯಲ್ಲಿ ತೂತು ಕೊರೆದು ಅಲ್ಲಿ ಮೊಟ್ಟೆ ಇಡುತ್ತದೆ.
  • ಅದು ಹುಳುವಾಗಿ ಹೂ ಗೊಂಚಲನ್ನು ಕೊರೆದು ಒಳಗಿನ ಭಾಗವನ್ನು ಹಾನಿ ಮಾಡುತ್ತವೆ.
  • ಇದರಿಂದ ಹೂ ಗೊಂಚಲು ಬಿಡಿಸಿಕೊಳ್ಳದೆ , ಅಲ್ಲಿಗೇ ಒಣಗುತ್ತದೆ. ಆ ಸಿಂಗಾರ ಮುಗಿದಾಗ ಮತ್ತೊಂದು ಸಿಂಗಾರಕ್ಕೆ  ಹೋಗುತ್ತದೆ.
  • ಹೀಗೆ ಸಿಂಗಾರ ಒಣಗುವ ಸಮಸ್ಯೆ ಪ್ರಾರಂಭವಾಗುವುದು ಅಕ್ಟೋಬರ್ – ನವೆಂಬರ್ ತಿಂಗಳಲ್ಲಿ.
  •  ಈ ಸಮಯದಲ್ಲಿ ಹುಳವನ್ನು ಕೊಂದು ನಾಶ ಮಾಡಿದರೆ ಮತ್ತೆ ಸಿಂಪರಣೆ ಅಗತ್ಯ ಬೀಳದು.
ಸಿಂಗಾರ  ತಿನ್ನುವ ಹುಳ ಇಲ್ಲಿ ಇರುತ್ತದೆ.
ಸಿಂಗಾರ ತಿನ್ನುವ ಹುಳ ಇಲ್ಲಿ ಇರುತ್ತದೆ.

ಅಡಿಕೆ ಸಿಂಗಾರಕ್ಕೆ ಹಾನಿ ಮಾಡುವ  Inflorescence caterpillar  ಒಂದು ಹುಳದಿಂದ ತುಂಬಾ  ಬೆಳೆ ನಷ್ಟವಾಗುತ್ತದೆ. ಸಿಂಗಾರದ ಒಳಗೆ ಹುಳವಾಗಿ ಅದರ ಹೂವು , ದಂಟನ್ನು ಹಾಳು ಮಾಡುತ್ತದೆ. ಒಂದು ಸಿಂಗಾರ ಮುಗಿದ ನಂತರ ಮತ್ತೊಂದು ಸಿಂಗಾರಕ್ಕೆ ಹೋಗುತ್ತದೆ. ಹೆಚ್ಚಿನ ಅಡಿಕೆ ಬೆಳೆಗಾರರು ನಮ್ಮ ಅಡಿಕೆ ಮರದಲ್ಲಿ ಸಿಂಗಾರ ಒಣಗಿ ಹೋಗುತ್ತಿದೆ ಎನ್ನುತ್ತಾರೆ. 

ಸಿಂಗಾರ ಒಣಗುವುದಕ್ಕೆ ಕಾರಣ :

  • ಕೆಲವು ಅಡಿಕೆ ಬೆಳೆಗಾರರ ಅಡಿಕೆ ಮರಗಳಲ್ಲಿ ಸಿಂಗಾರ ಪೂರ್ತಿ ಒಣಗಿ ಕಾಂಡಕ್ಕೆ ಅಂಟಿಕೊಂಡಿರುತ್ತದೆ.
  • ಕೆಲವೊಮ್ಮೆ ಉದುರಿ ಬಿಳುವುದು ಅಥವಾ ಅಲ್ಲೇ ಒಣಗಿ ಜೋತಾಡಿಕೊಂಡಿರುವುದೂ ಇದೆ. ಇದಕ್ಕೆ ರೋಗ ಕಾರಕ ಶಿಲೀಂದ್ರ ಕಾರಣ ಎಂಬುದಾಗಿ ಕೆಲವರ ಭಾವನೆ. ಸಿಂಗಾರ ಒಣಗುವುದೆಲ್ಲಾ ರೋಗ ಬಾಧೆ ಅಲ್ಲ.
  • ಹೆಚ್ಚಿನ ಮಟ್ಟಿಗೆ ಬೇಸಿಗೆಯಲ್ಲಿ ಸಿಂಗಾರಕ್ಕೆ ರೋಗಾಣುಗಳು ಬಾಧಿಸುವುದಿಲ್ಲ. ಡೈ ಬ್ಯಾಕ್ ಎಂದು ನಾವು ಅದಕ್ಕೆ ಶಿಲೀಂದ್ರ ನಾಶಕ ಸಿಂಪರಣೆ ಮಾಡುವುದು ಹೆಚ್ಚಿನ ಸಂದರ್ಭಗಳಲ್ಲಿ ವ್ಯರ್ಥವೂ ಸಹ.
  • ಇದು ಕೀಟದ ಸಮಸ್ಯೆಯಾಗಿದ್ದು, ಮರದ ಬೆಳವಣಿಗೆ ಮತ್ತು ಕೆಲವು ಮರದ ಹುಟ್ಟು ಗುಣದ ಕಾರಣದಿಂದ ಆ ಮರಕ್ಕೆ ಈ ಕೀಟದಿಂದ ಹೆಚ್ಚು ಹಾನಿ ಉಂಟಾಗುತ್ತದೆ.
ಸಿಂಗಾರ  ತಿನ್ನುವ ಹುಳ ಹೀಗೆ ಇರುತ್ತದೆ.
ಸಿಂಗಾರ ತಿನ್ನುವ ಹುಳ ಹೀಗೆ ಇರುತ್ತದೆ.

ಹಾನಿ ಹೇಗೆ ಆಗುತ್ತದೆ:

  • ಅಡಿಕೆ ಮರದ ಹಾಳೆಯನ್ನು ಒಂದು ಪತಂಗ ಚುಚ್ಚಿ ಮೊಟ್ಟೆ ಇಡುತ್ತದೆ.
  • ಅದರ ಮರಿ ಒಳಗಡೆ ಬೆಳೆದು ಹೂ ಗೊಂಚಲನ್ನು ಭಕ್ಷಿಸಲು ಪ್ರಾರಂಭಿಸುತ್ತದೆ.
  • ಇದನ್ನು ಸಿಂಗಾರ ತಿನ್ನುವ ಕಂಬಳಿ ಹುಳ ಎನ್ನುತ್ತೇವೆ.
  • ಇದು ಸಿಂಗಾರದ ಒಳಗಡೆ ಬಲೆ ಹೆಣೆದು ವಾಸವಾಗಿರುತ್ತದೆ. ಆದ ಕಾರಣ ಸಿಂಗಾರದ ಹೂ ಕಡ್ಡಿಗಳು ಬಿಡಿಸಿಕೊಳ್ಳುವುದಿಲ್ಲ.
  • ಗಂಡು, ಹೆಣ್ಣು ಹೂವುಗಳನ್ನು, ಹೂ ದಂಟನ್ನು ತಿನ್ನುತ್ತಾ ಬದುಕುತ್ತದೆ.
  • ಒಂದೇ ಒಂದು ಕಾಯಿಯೂ ಫಲಿತಗೊಳ್ಳದೆ ಇಡೀ ಸಿಂಗಾರವೇ ಒಣಗುತ್ತದೆ.
  • ಇದು ಎಳೆ ಪ್ರಾಯದ ಅಡಿಕೆ ಮರಗಳ ಸಿಂಗಾರದಲ್ಲಿ ಜಾಸ್ತಿಯಾಗಿರುತ್ತದೆ.
  • ಈ ಹುಳವನ್ನು ನಾಶ ಮಾಡದೆ ಇದ್ದಲ್ಲಿ ಅದು ಬೇರೆ ಸಿಂಗಾರಕ್ಕೆ  ತೊಂದರೆ ಮಾಡುತ್ತದೆ.
  • ನವೆಂಬರ್ ,ಡಿಸೆಂಬರ್, ಜನವರಿ, ತಿಂಗಳಲ್ಲಿ ಜಾಸ್ತಿ. ಮೊದಲ ಹಂತದಲ್ಲಿ ನಿಯಂತ್ರಣ ಕೈಗೊಂಡರೆ ಫಸಲು ಉಳಿಯುತ್ತದೆ.

 ಕೆಲವು ಅಡಿಕೆ ಮರಗಳಲ್ಲಿ ಹಾಳೆ ಉದುರುವುದೇ ಇಲ್ಲ. ಹಾಳೆ ಉದುರಿದರೂ  ರಕ್ಷಾಕವಚ ಬಿಚ್ಚಿ ಕೊಳ್ಳುವುದಿಲ್ಲ.ಇಂತಹ ಹೂ ಗೊಂಚಲಿಗೆ ಈ ಕಂಬಳಿ ಹುಳು ಪ್ರವೇಶ ಮಾಡಿರುತ್ತದೆ ಒಳಗೊಳಗೇ ಹೂ ಗೊಂಚಲನ್ನು ತಿಂದು ಹಾನಿಮಾಡಿರುತ್ತವೆ.

ಸಿಂಗಾರ  ತಿನ್ನುವ ಹುಳ ಮಿಡಿಯನ್ನು ಹಾಗೂ ಹೂ ದಂಟನ್ನು ತಿನ್ನುವುದು
ಸಿಂಗಾರ ತಿನ್ನುವ ಹುಳ ಮಿಡಿಯನ್ನು ಹಾಗೂ ಹೂ ದಂಟನ್ನು ತಿನ್ನುವುದು

ಹೀಗೆ ಮಾಡಿದರೆ  ಉತ್ತಮ:

  • ಹಾಳೆ ಬಿದ್ದ ದಿನ ಇಲ್ಲವೇ ಮರು ದಿನ ಸಿಂಗಾರದ ರಕ್ಷಾ ಕವಚವನ್ನು ಬಿಡಿಸಬೇಕು. ಕತ್ತಿ ಒಳಗೊಂಡ ಕೊಕ್ಕೆ ಹಾಕಿ ಹದವಾಗಿ ಗೀರಿದರೆ ಅದು ಬಿಚ್ಚಿಕೊಳ್ಳುತ್ತದೆ. 
  • ಹಾಳೆ ಬೀಳದಿದ್ದರೆ ಅದನ್ನು ತೆಗೆಯಬೇಕು. ಹೂ ಗೊಂಚಲಿನ ರಕ್ಷಾ ಪೊರೆ ಹರಿದು ಬಿಡಿಸಬೇಕು.
ಹುಳು ತಿಂದ ಹೂ ಗೊಂಚಲು
ಹುಳು ತಿಂದ ಹೂ ಗೊಂಚಲು

ನಿವಾರಣೆ ಕ್ರಮ:

  • ಕೀಟ ಸಮಸ್ಯೆ ನಿವಾರಣೆಗೆ ಡೈಮಿಥೋಯೇಟ್ 2.5 ಮಿಲಿ. 1 ಲೀ ನೀರಿಗೆ ( ರೋಗರ್) ಅಥವಾ ಇಮಿಡಾ ಕ್ಲೋಫ್ರಿಡ್ .6 ಮಿಲಿ 1ಲೀ ನೀರಿಗೆ ( ಕಾನ್ಫಿಡಾರ್ ಅಥವಾ ಟಾಟಾಮಿಡಾ), ಅಥವಾ  ಕ್ಲೋರೋಫೆರಿಫೋಸ್  ಬೆರೆಸಿ ಸಿಂಪರಣೆ ಮಾಡಬೇಕು.
  •  ಮಳೆಗಾಲ ಮುಗಿದ ತಕ್ಷಣ ಬ್ಯಾಸಿಲಸ್ ತರುಂಜೆನ್ಸಿಸ್ ಉಳ್ಳ ಸುಕ್ಷ್ಮಾಣು ಜೀವಿ ಕೀಟನಾಶಕ ಸಿಂಪಡಿಸಬೇಕು.
  • ಸಿಂಪರಣೆ ಮಾಡುವಾಗ ಬಿಡಿಸಿಕೊಳ್ಳದ ಸಿಂಗಾರವನ್ನು ಬಿಡಿಸಿ ಅದರ ಒಳಗೆ ತಾಗುವಂತೆ ಸಿಂಪರಣೆ ಮಾಡಬೇಕು.
  • ಕೀಟನಾಶಕ ಬಳಕೆಗಿಂತ ನಿರ್ವಹಣೆಯಲ್ಲಿ ಹತೋಟಿ ಮಾಡುವುದು ಉತ್ತಮ. ಕೀಟನಾಶಕದ ಬಳಕೆಯಿಂದ ಪರಾಗಸ್ಪರ್ಶಕ್ಕೆ ತೊಂದರೆಯಾಗುತ್ತದೆ.
  • ಮಲೆನಾಡು ಮುಂತಾದ ಕಡೆ ಕೆಂಪಡಿಕೆಗೆ ಗೊನೆ  ಕೊಯಿಲು ಮಾಡುವಾಗ ಹಳೆಯ ಸಿಂಗಾರ ಸ್ವಚ್ಚ ಮಾಡುವ ಕಾರಣ ಹೊಸ ಸಿಂಗಾರಕ್ಕೆ ಹೆಚ್ಚು ಹಾನಿ ಉಂಟಾಗುವುದಿಲ್ಲ.
  • ಹಾನಿಗೊಳಗಾಗ ಸಿಂಗಾರವನ್ನು ಬುಡದಲ್ಲಿ ಹಾಕಿದರೆ ಎಷ್ಟು ಕೀಟನಾಶಕ ಸಿಂಪಡಿಸಿದರೂ ವ್ಯರ್ಥ. ಅದನ್ನು ಸುಡಬೇಕು.

ಕೀಟ ಬಾಧೆ ಪ್ರಾರಂಭದ ಸಮಯದಲ್ಲಿ ಸಿಂಪರಣೆ ಮಾಡಿದರೆ ಮಾತ್ರ ಅದು ಪರಿಣಾಮಕಾರೀ  ಬೆಳೆ ಸಂರಕ್ಷಣೆ ಎನ್ನಿಸುತ್ತದೆ. ತಡವಾದರೆ ಪ್ರಯೋಜನ ಇಲ್ಲ. ಸಮತೋಲನ ಪ್ರಮಾಣದಲ್ಲಿ ಗೊಬ್ಬರ ಕೊಡುವುದರಿಂದ, ಅಡಿಕೆ ಮರದ ಹಾಳೆ, ಹೂ ಗೊಂಚಲು ಕೀಟ ಬಾಧೆಯಿಂದ ಸ್ವಲ್ಪ ಮಟ್ಟಿಗೆ  ಮುಕ್ತವಾಗಿರಲು  ಅನುಕೂಲವಾಗುತ್ತದೆ. 

0 thoughts on “ಅಡಿಕೆ – ಹೂ ಗೊಂಚಲು ಒಣಗಲು ಯಾವ ಕೀಟ ಕಾರಣ ಮತ್ತು ಪರಿಹಾರ ಏನು?.

Leave a Reply

Your email address will not be published. Required fields are marked *

error: Content is protected !!