ಅಡಿಕೆ ಧಾರಣೆ ಏರಿಕೆಯಾಗುತ್ತಿರುವಾಗ ಬೆಳೆಗಾರರ ನಡೆ ಹೇಗಿರಬೇಕು?

ಒಣಗುತ್ತಿರುವ ಚಿನ್ನ- ರಾಶಿ ಅಡಿಕೆ

 ಒಂದು ವಾರದ ಅವಧಿಯಲ್ಲಿ ನಾಗಾಲೋಟದಲ್ಲಿ ಏರಿಕೆಯಾಗುತ್ತಿರುವ ಕೆಂಪಡಿಕೆ ಧಾರಣೆ, ಚಾಲೀ ಧಾರಣೆಯಿಂದ ರೈತರಿಗೆ ಒಂದೆಡೆ ಖುಷಿ ಮತ್ತೊಂದೆಡೆ ಆತಂಕ. ಕಡಿಮೆ ಬೆಲೆಗೆ ಕೊಟ್ಟೆ ಎಂಬ ಪಶ್ಚಾತ್ತಾಪ ಇಲ್ಲದೆ  ಉತ್ತಮ ದರ ಪಡೆಯುವ ತಂತ್ರ ಯಾವುದು?

ಬೆಳೆಗಾರ ಅಡಿಕೆ ಮಾರಿದ ಮರುದಿನ ಬೆಲೆ ಏರಿಕೆಯಗುತ್ತದೆ. ಅಡಿಕೆ ನಾಳೆ ಮಾರೋಣ ಎಂದು ಇಟ್ಟರೆ ಮರುದಿನ ಬೆಲೆ ಇಳಿಕೆಯಾಗುತ್ತದೆ.  ಯಾರಿಗೂ ತಿಳಿಯದ ಈ ಮಾರುಕಟ್ಟೆ ಇಷ್ಟೊಂದು ಜಟಿಲವೇ?ಹೌದು. ಅಡಿಕೆ ಮಾರುಕಟ್ಟೆಯ  ಯಾವ ಲಯವನ್ನೂ ಕೆಲವೇ ಕೆಲವರನ್ನು ಬಿಟ್ಟು ಉಳಿದವರಿಗೆ ಅಂದಾಜು ಮಾಡುವುದು ಸಾಧ್ಯವಾಗುತ್ತಿಲ್ಲ.

  • ನಾವು ಕಳೆದ ವಾರ ಕೆಂಪಡಿಕೆ ಮೇಲೆ ಚಾಲಿ ಕೆಳಗೆ ಎಂಬುದಾಗಿ ಬರೆದಿದ್ದೆವು.
  • ಕೆಂಪು ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ.
  • ಕೆಂಪಿನ ಸೆಖೆಯಲ್ಲಿ ಚಾಲಿಯೂ ಏರಿಕೆಯಾಗಿದೆ.
  • ಹಾಗೆಂದು ಹಳೆ ಚಾಲಿ ಇಳಿಕೆಯೇ ಆಗಿದೆ.
  • ಕೆಂಪಡಿಕೆಯ ದರ ಏರಿಕೆ ಮಾತ್ರ ಯಾರಿಗೂ ಯಾವ ಊಹನೆಗೂ ಸಿಕ್ಕದೆ ಮೇಲೇರಿದ್ದು ಮಾತ್ರ  ಅಚ್ಚರಿಯ ಸಂಗತಿ.
  • ಮುಂದೆ ಏನಾಗಬಹುದು  ಎಂಬುದೂ ಸಹ ಯಾರಿಂದಲೂ ಊಹಿಸಲು ಸಾಧ್ಯವಿಲ್ಲ.
  • ಮುಂದಿನ ಅಂದರೆ ಹಾಲೀ ಬೆಳೆಯ ಪರಿಸ್ಥಿತಿಯನ್ನು ಗಮನಿಸಿದರೆ  ದರ ಇಳಿಕೆ ಆಗುವುದಿದ್ದರೂ  ದೊಪ್ಪನೆ ಬೀಳುವ ಸಾಧ್ಯತೆ ಕಡಿಮೆ ಎನ್ನಿಸುತ್ತದೆ.
ಒಣಗುತ್ತಿರುವ ಕೆಂಪಡಿಕೆ
ಒಣಗುತ್ತಿರುವ ಕೆಂಪು ಅಡಿಕೆ

ಬೆಳೆ ಕಡಿಮೆ ಇದೆ:

  • ಕಳೆದ ವರ್ಷ ಈ ಸಮಯಕ್ಕೆ ದಾವಣಗೆರೆ, ಚಿತ್ರದುರ್ಗ, ತುಮಕೂರು ಶಿವಮೊಗ್ಗದ  ಕೆಲವು ಭಾಗಗಳಲ್ಲಿ ಒಂದು ಕೊಯಿಲು ಮುಗಿದಿತ್ತು.
  • ಈ ವರ್ಷವೂ ಕೊಯಿಲು ನಡೆದಿದೆಯಾದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೊಯಿಲು ಅಗಿದೆ ಎಂದಷ್ಟೇ ಹೇಳಬಹುದು.
  • ಬೆಳೆ ಅರ್ಧಕ್ಕೂ ಕಡಿಮೆ. ಇನ್ನೂ ಅಡಿಕೆ ಬೆಳೆದಿಲ್ಲ.  ಕಳೆದ ಜನವರಿಯಿಂದ ಪ್ರಾರಂಭವಾಗಿ ಪ್ರತೀ ತಿಂಗಳೂ 1-2 ಮಳೆ ಈ ಭಾಗಗಳಲ್ಲಿ ಬಂದಿದ್ದು,
  • ಅಡಿಕೆಯ ಇಳುವರಿ ಮೇಲೆ ಭಾರೀ  ಪರಿಣಾಮ ಬೀರಿದೆ.
  • ಚಿತ್ರದುರ್ಗ, ತುಮಕೂರು ಸುತ್ತಮುತ್ತ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಡಿಕೆಯ ಉತ್ಪಾದನೆ 50% ಕ್ಕೂ ಕಡಿಮೆ ಎನ್ನುತ್ತಾರೆ.
  • ದಾವಣಗೆರೆಯಲ್ಲೂ ಇದೇ ರೀತಿ ಪರಿಸ್ಥಿತಿ ಎನ್ನುತ್ತಾರೆ ಕೆಲವು ರೈತರು.
  • ಇದೇ ಕಾರಣಕ್ಕೆ ಚೇಣಿ ಗುತ್ತಿಗೆ ಮಾಡುವವರು ಪ್ರಾರಂಭದಲ್ಲೇ ತಮ್ಮ  ಖರೀದಿ ದರ ರೂ. 7000  ತನಕ ಒಯ್ದಿದ್ದರು.
  • ಈಗ ಮತ್ತೆ ರೂ. 300-400  ಏರಿಕೆಯಾಗಿದೆ. ಬೆಳೆಗಾರರಲ್ಲಿ ಅಡಿಕೆ ಕಡಿಮೆ ಇದ್ದು, ಅಡಿಕೆ ಖರೀದಿಯಲ್ಲೂ  ಸ್ಪರ್ಧೆ ಏರ್ಪಟ್ಟಿದೆ.
  • ಹಾಗಾಗಿ ಕೊಯಿಲು ಎಲ್ಲಾ ಕಡೆ ಪ್ರಾರಂಭವಾಗುವ ತನಕ  ಅಂದರೆ ಡಿಸೆಂಬರ್ ತನಕ ದರ ಏರಿಕೆ ತುಸು ಇಳಿಕೆ, ಮತ್ತೆ ಏರಿಕೆ ಆಗುತ್ತಾ ಮುಂದುವರಿಯುವ ಸಾಧ್ಯತೆ ಇದೆ.
  • ಮಳೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಕೆಲವು ಕೀಟದ ಹಾವಳಿ ಹೆಚ್ಚಾಗಿದ್ದು, ಹೂ ಗೊಂಚಲು ಒಣಗಿ ಬೆಳೆ ನಷ್ಟವಾಗಿದೆ.
ADVERTISEMENT 35
ADVERTISEMENT

ಎಲ್ಲಿ ತನಕ ಏರಿಕೆಯಾಗಬಹುದು?

  • ದರ ಏರಿಕೆ ಪ್ರಾರಂಭವಾದಾಗಿನಿಂದ ಅಡಿಕೆ ಬರುವುದು ತುಂಬಾಯಾಗಿದೆ.
  • ಅಡಿಕೆ ವರ್ತಕರಿಗೆ ಬೇಕಾಗಿದೆ.  ಹಾಗಾಗಿ ದರ ಸ್ವಲ್ಪ ಹೆಚ್ಚು ಹೆಚ್ಚು ಬೆಲೆಗೆ  ಖರೀದಿ ಮಾಡುತ್ತಾರೆ ಎಂದು ಗ್ರಹಿಸಬಹುದು.
  • ಉತ್ತರ ಭಾರತದಲ್ಲಿ ಬೇಡಿಕೆ ಹೆಚ್ಚಾಗಿದ್ದು, ವರ್ತಕರು ಇಲ್ಲಿ ಅವರ ಬೇಡಿಕೆಗೆ ಅನುಗುಣವಾಗಿ  ಖರೀದಿ ಮಾಡುತ್ತಿದ್ದಾರೆ ಎಂಬುದಾಗಿ ಕೆಲವು ಅನುಭವಿಗಳು ಹೇಳುತ್ತಾರೆ.
  • ಇನ್ನೂ ಕೆಲವರು ಕಳೆದ ಒಂದು ವರ್ಷದಿಂದ ಅಡಿಕೆ ಕೆಲವೇ ಕೆಲವು ವರ್ತಕರಲ್ಲಿ  ಸಂಗ್ರಹ ಇದ್ದು, ಅವರು ಈ ಬೇಡಿಕೆಯ ಸಮಯದಲ್ಲಿ ತಮ್ಮ ಸ್ಟಾಕನ್ನು ವಿಲೇವಾರಿ ಮಾಡುತ್ತಿದ್ದಾರೆ ಎಂಬುದಾಗಿಯೂ ಹೇಳುತ್ತಿದ್ದಾರೆ.
  • ವ್ಯಾಪಾರಿಗಳು ದಾಸ್ತಾನು ಇಡುವುದೂ ಸಹ ಅಷ್ಟು ಸರಳ ಅಲ್ಲ.
  • ಕಾರಣ ಇದು ಕೋಟ್ಯಾಂತರ ರೂಪಾಯಿಗಳ ವ್ಯವಹಾರ ಆದ ಕಾರಣ ಅಷ್ಟೊಂದು ಫಂಡ್  ಹೊಂದಾಣಿಕೆ ಮಾಡುವುದು ಸಹ  ಸಮಾನ್ಯ ವಿಚಾರ ಅಲ್ಲ. 
  • ವ್ಯಾಪಾರಿಗಳೂ ಬೇಡಿಕೆಗೆ ಅನುಗುಣವಾಗಿಯೇ  ದರ ಹಾಕಿ ಖರೀದಿ ಮಾಡುತ್ತಿದ್ದಾರೆ ಎಂದು ಗ್ರಹಿಸಬಹುದು.
ರಾಶಿ ಅಡಿಕೆ
ರಾಶಿ ಅಡಿಕೆ

ರೈತರು ಏನು ಮಾಡಬೇಕು?

  • ಬೆಳೆಗಾರರು ದರ ಏರಿಕೆ ನಿರೀಕ್ಷೆ ಮಾಡುತ್ತಾರೆ.
  • ದರ ಎರಿದಾಗ ಖುಷಿ ಪಡುತ್ತಾರೆ. ಆದರೆ  ಎಲ್ಲಿ ತುದಿ ಎಂದು ತಿಳಿಯದೆ ಸದಾ ಆತಂಕದಲ್ಲೇ  ಇರುತ್ತಾರೆ.
  • ಈ ರೀತಿ ನಾಗಾಲೋಟದಿಂದ ಏರಿಕೆಯಾಗುವುದರ ಹಿಂದೆ  ಯಾವುದೋ ಒಂದು ಆಟ ಇರಬಹುದೋ, ದರ ಬೀಳಬಹುದೋ ಎಂಬ ಅಂಜಿಕೆಯಲ್ಲೇ  ಇರುತ್ತಾರೆ.
  • ಬಹಳಷ್ಟು ಜನ ಬೆಳೆಗಾರರು ಅಡಿಕೆ ದರ ಏರಿಕೆ ಆಗುವಾಗ ಮುಂದೇನಾಗಬಹುದು ಎಂದು ಚರ್ಚೆಯಲ್ಲೇ ಇರುತ್ತಾರೆ.
  • ಕೊಡುವುದನ್ನು ನಾಳೆಗೆ ಮುಂದೂಡುತ್ತಾರೆ.
  • ನಾಳೆ ದರ ಇಳಿಕೆಯಾದರೆ  ಬೇಸರ ಮಾಡಿಕೊಳ್ಳುತ್ತಾರೆ.
  • ಇಂತಹ ಸಂದರ್ಭದಲ್ಲಿ ಬೆಳೆಗಾರರು ತಮ್ಮ  ಮನೋದುಗುಡವನ್ನು ಕಡಿಮೆ ಮಾಡಿಕೊಳ್ಳಲು ಮಾಡಬೇಕಾದ  ಕೆಲಸ ದಿನಾಲೂ ಅರ್ಧ –ಒಂದು ಚೀಲದಂತೆ ಮಾರಾಟ ಮಾಡುತ್ತಾ ಇರುವುದು ಒಂದೇ.
  • ಯಾವಾಗಲೂ ಕಡಿಮೆ ಪ್ರಮಾಣದಲ್ಲಿ ಒಂದು ಚಲನೆಯಲ್ಲಿ ಮಾರುಕಟ್ಟೆಗೆ ಅಡಿಕೆ ಬರುತ್ತಿದ್ದರೆ ಬೆಲೆ ಇಳಿಕೆ ಆಗುವುದು ನಿಧಾನವಾಗುತ್ತದೆ. 
  • ಈ ತಂತ್ರವನ್ನು ಎಲ್ಲಾ ಬೆಳೆಗಾರರೂ ಅನುಸರಿಸಿದಲ್ಲಿ  ಸರಾಸರಿ ಉತ್ತಮಬೆಲೆಯನ್ನೇ ಪಡೆಯಬಹುದು. 

ಯಾಕೆ ದರ ಎರಿಕೆ ಆಗುತ್ತಿದೆ?

  • ಹೊಸನಗರದ ಒಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ  ನಿನ್ನೆ ದಿನ  6050 ಚೀಲ ರಾಶಿ ಅಡಿಕೆ ಆವಕವಾಗಿದೆ.
  • ಇಷ್ಟು ಅಡಿಕೆಗೆ ಸರಾಸರಿ ಕಿಲೋ ಗೆ 500 ರೂ. ಆದರೂ ಸಹ ಸುಮಾರು 18 ಕೋಟಿ ರೂ. ಹಣ ಬೇಕು.
  • ಇದು ನಿತ್ಯ ಹೆಚ್ಚು ಕಡಿಮೆ ಆಗುವ ವ್ಯಾಪಾರ. ಇಡೀ ರಾಜ್ಯದ  ಕೆಂಪಡಿಕೆ ಕೊಳ್ಳುವ ಎಪಿಎಂಸಿ ಗಳಲ್ಲಿ ನಿನ್ನೆ ದಿನ 571200 ಕಿಲೋ ರಾಶಿ ಅಡಿಕೆ ವ್ಯಾಪಾರ ಆಗಿದೆ.
  • ಇಷ್ಟು ಅಡಿಕೆಗೆ ಕಿಲೋ 500 ರೂ. ನಂತೆಯಾದರೂ 28,56,00,000 ಹಣ ಬೇಕು. 
  • ಇಷ್ಟು ಮೊತ್ತದ ಹಣವನ್ನು ಯಾವ ಖರೀದಿದಾರನಿಗೆ ದಿನಾ ಹೊಂದಾಣಿಕೆ ಮಾಡಲು ಸಾಧ್ಯವಾಗುತ್ತದೆಯೋ ಅವರಿಗೆ  ಮಾರುಕಟ್ಟೆಯನ್ನು ಹೇಗೂ ಮೇಲೆತ್ತಬಹುದು.
  • ಇಷ್ಟೊಂದು ಹಣ ಇದ್ದರೆ ನಾವೂ ಅಡಿಕೆ ಮಾರುಕಟ್ಟೆಯಲ್ಲಿ  ತಲ್ಲಣ ಉಂಟು ಮಾಡಬಹುದು.
  • ಕೆಳಕ್ಕೂ ಹಾಕಬಹುದು.
  • ಈಗ ಮಾರುಕಟ್ಟೆ ಮೇಲೇರಲು ಯಾರೋ  ದೊಡ್ಡ ಮೊತ್ತದ ಹೂಡಿಕೆದಾರರ ಪ್ರವೇಶ ಆದಂತಿದೆ.
  • ಕೆಲವು ಮೂಲಗಳ ಪ್ರಕಾರ ಚಿತ್ರದುರ್ಗದಂತ ಮಾರುಕಟ್ಟೆಯಲ್ಲಿ  ಹಿಂದೆ ಒಂದೆರಡು ಮಂದಿ ಪ್ರಭಾವೀ ವ್ಯಾಪಾರಿಗಳಿದ್ದರಂತೆ.
  • ಈಗ ಒಂದು ವರ್ಷದಿಂದ ಮತ್ತೊಬ್ಬರು ಅಡಿಕೆ ವ್ಯಾಪಾರ ಕ್ಷೇತ್ರಕ್ಕೆ ಪ್ರವೇಶವಾಗಿ ಪ್ರತೀ ದಿನ ಹೆಚ್ಚು ಹೆಚ್ಚು ದರಕ್ಕೆ ಖರೀದಿ ಮಾಡುತ್ತಿದ್ದಾರೆ ಎಂಬುದಾಗಿ ಹೇಳುತ್ತಾರೆ.
  • ಹಿಂದೆಯೂ (7-8 ವರ್ಷದ ಹಿಂದೆ) ಒಮ್ಮೆ ಹೀಗೇ ಆಗಿತ್ತಂತೆ.
  • ಯಾರದ್ದೋ  ದೊಡ್ಡ ಫಂಡಿಂಗ್ ನಲ್ಲಿ  ಅಡಿಕೆ ವ್ಯಾಪಾರದಲ್ಲಿ ಸಟ್ಟಾ ವ್ಯವಹಾರ ನಡೆಯುತ್ತಿದೆ.
  • ಈ ಸಟ್ಟಾ ಇದೇ ರೀತಿಯಲ್ಲಿ ಎಲ್ಲಾ ಸಮಯದಲ್ಲೂ ನಡೆಯುತ್ತಾ ಇದ್ದರೆ ರೈತರಿಗೆ ಅನುಕೂಲ.
  • ಒಮ್ಮೆ ಅವರು ಇದರಿಂದ ಹೊರಹೋಗಲೇ (Exit) ಬೇಕು. ಅಥವಾ ಹೊರ ಹೋಗಿಯೇ ತೀರುತ್ತಾರೆ. 
  • ಆಗ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಆಗುತ್ತದೆ.
  • ಯಾವ ಎಗ್ಸಿಟ್ ಆಗುತ್ತಾರೆ ಎಂಬುದು ತಿಳಿದುಕೊಳ್ಳುವುದು ಅಸಾಧ್ಯ.
  • ಎಂಟ್ರಿ  ಗೊತ್ತಾಗುತ್ತದೆ. ಎಗ್ಸಿಟ್ ಗೊತ್ತಾಗುವುದಿಲ್ಲ. ಶೇರು ವ್ಯಾಪಾರದಂತೆ.

ಸಟ್ಟಾ ವ್ಯಾಪಾರ ಮತ್ತು ಅಡಿಕೆ:

  • ನಮ್ಮ ದೇಶದಲ್ಲಿ ದಕ್ಷಿಣ ಭಾರತದಾದ್ಯಂತ ಜನ ಅಕ್ಕಿ ತಿನ್ನುತ್ತಾರೆ. 
  • ಉತ್ತರ ಭಾರತದಾದ್ಯಂತ ಗೋಧಿ ತಿನ್ನುತ್ತಾರೆ.  ಕಾಫೀ ಕುಡಿಯುತ್ತಾರೆ.
  • ಕರಿಮೆಣಸು ಬಳಸುತ್ತಾರೆ. ಇವು ರಪ್ತೂ ಸಹ ಆಗುತ್ತದೆ.
  • ತರಕಾರಿಗಳಾಗಿ  ಟೊಮಾಟೋ ಆಲೂಗಡ್ಡೆ, ಹೀಗೆ ಹಲವಾರು ಕೃಷಿ ಉತ್ಪನಗಳನ್ನು ನಿತ್ಯ ತಿನ್ನುತ್ತಾರೆ.
  • ಅದೂ ಅಡಿಕೆ ತಿನ್ನುವುದಕ್ಕಿಂತ ಮೂರು ನಾಲ್ಕು ಪಟ್ಟು.
  • ಆದರೆ ಅದರ ಬೆಲೆ ಏರಿಕೆ ಆಗುವುದೇ ಇಲ್ಲ.
  • ಕಾರಣ ಈ ಉತ್ಪನ್ನಗಳಲ್ಲಿ ಸಟ್ಟಾ ವ್ಯಾಪಾರ ನಡೆಯುವುದಿಲ್ಲ.
  • ಒಂದು ವೇಳೆ ಇದರಲ್ಲೂ ಸಟ್ಟಾ ವ್ಯಾಪಾರ ನಡೆಯುವುದೇ ಆಗಿದ್ದರೆ, ಇವುಗಳ ದರವೂ ಭಾರೀ ಏರುಪೇರು ಆಗುತ್ತಿತ್ತು.
  • ಅಡಿಕೆಯ ವ್ಯಾಪಾರದಲ್ಲಿ ಆಗಾಗ ಇದೇ ರೀತಿ ಸಟ್ಟಾ ವ್ಯಾಪಾರ ಆಗುತ್ತಾ ಇರುತ್ತದೆ.
  • ಅದರ ಪರಿಣಾಮ ಮತ್ತೆ ಪಾತಾಳಕ್ಕೆ ಕುಸಿಯುವುದೇ ಆಗಿರುತ್ತದೆ.

 ಇದನ್ನು ಮಾಡದೆ ಬೆಲೆ ಸ್ಥಿರತೆ ಆಗಲಾರದು:

  • ನಮ್ಮಲ್ಲಿ ಇಷ್ಟೊಂದು ಜನ ಮಾರುಕಟ್ಟೆ ತಜ್ಞರುಗಳು ಇದ್ದಾರೆ. ಬುದ್ದಿವಂತರು ಇದ್ದಾರೆ.
  • ಯಾರಾದರೂ ನಮ್ಮ ರಾಜ್ಯದ ಎಪಿಎಂಸಿ ಗಳಲ್ಲಿ ವರ್ಷದಲ್ಲಿ  ಮಾರಾಟವಾಗು ಅಡಿಕೆ ಎಷ್ಟು ಎಂಬ ಲೆಕ್ಕಾಚಾರ ಮಾಡಿದವರು ಉಂಟೇ? 
  • ಒಟ್ಟು ದೇಶದ ವಿವಿಧ ರಾಜ್ಯಗಳಲ್ಲಿ ಮಾರಾಟವಾಗುವ ಗುಟ್ಕಾ ಎಷ್ಟು ಎಂಬುದಕ್ಕೆ ಏನಾದರೂ  ಲೆಚ್ಚಾಚಾರ ಇದೆಯೇ?
  • ಇವಿಷ್ಟನ್ನು ನಿಖರವಾಗಿ ಮಾಡಿದ್ದೇ ಆದರೆ ನಾವು  ಬೆಳೆಯುವ ಅಡಿಕೆಗೆ  ಎಷ್ಟು ಭವಿಷ್ಯ ಇದೆ ಎಂಬುದು ಸ್ಪಷ್ಟವಾಗುತ್ತದೆ.
  • ಬಹುತೇಕ ಗುಟ್ಕಾ ಅನಧಿಕೃತವಾಗಿ ಸಾಗಾಟ ಆಗುತ್ತದೆ. ಮಾರಾಟ ಆಗುತ್ತದೆ ಇದು ಎಲ್ಲರಿಗೂ ಗೊತ್ತಿರುವ ಸತ್ಯ. 
  • ಈ ಕಾರಣದಿಂದ ಅಡಿಕೆ ವ್ಯಾಪಾರದಲ್ಲಿ ಲೆಕ್ಕಾಚಾರ ಸಿಗುತ್ತಿಲ್ಲ.

ಅಡಿಕೆಗೆ ಅದು ಚಾಲಿ ಇರಲಿ, ಕೆಂಪು ಇರಲಿ, ದರ ಏರಿದರೆ ಸಂತೋಷ. ಏರಿದ ಬೆಲೆ ಇಳಿಕೆ ಆಗಬಾರದು. ಕಳೆದ ಎರಡು ಮೂರು ವರ್ಷಗಳಿಂದ ವಿಸ್ತರಣೆ ಆದ ಅಡಿಕೆ ಬೆಳೆಗಾರರೂ ಬೆಲೆ ಅನುಕೂಲವನ್ನು ಪಡೆಯಲೇ ಬೇಕು. ಇಲ್ಲವಾದರೆ ಅದು ದೊಡ್ಡ ದುರಂತವೇ ಆಗಬಹುದು. ಸರಕಾರ ಬೆಳೆ ಮತ್ತು ಬಳಕೆ ಲೆಕ್ಕಾಚಾರವನ್ನು ಸಂಗ್ರಹಿಸುವ ಮೂಲಕ ಅಡಿಕೆ ಬೆಳೆಯುವ ಲಕ್ಷಾಂತರ ಬೆಳೆಗಾರರ ಆಕಾಂಕ್ಷೆಗೆ ಸ್ಪಂದಿಸಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!