ಅಡಿಕೆ ಮಾರುಕಟ್ಟೆಯಲ್ಲಿ ದರ ಕುಸಿತದ ಸುದ್ದಿ ಹಬ್ಬುತ್ತಿದೆ. ಕೆಂಪಡಿಕೆ ಕೊಯಿಲು ಪ್ರಾರಂಭವಾಗಿದೆ. ಚಾಲಿ ಅಡಿಕೆ ಮಾಡುವ ಪ್ರದೇಶಗಳಲ್ಲೂ ಒಂದು ಕೊಯಿಲಿನ ಅಡಿಕೆ ಹಣ್ಣಾಗಿ ಅಗಿದೆ. ಹೊಸತು ಹಳತಾಗಿದೆ. ಹೊಚ್ಚ ಹೊಸತು ಬರಲಾರಂಭಿಸಿದೆ. ಈ ಮಧ್ಯೆ ಅಡಿಕೆ ಧಾರಣೆ ಏರಿಕೆ ಆಗುವ ಸುಳಿವು ಇಲ್ಲ. ಹೊಸತು ಮಾರುಕಟ್ಟೆಗೆ ಬರುವ ಈ ಸಮಯಕ್ಕೆ ಹಳೆ ಅಡಿಕೆಗೆ ದರ ಸ್ವಲ್ಪವಾದರೂ ಹೆಚ್ಚಾಗಬೇಕಿತ್ತು. ಆದರೆ ಹಳೇ (ಡಬ್ಬಲ್) ಅಡಿಕೆಗೆ ಬೇಡಿಕೆಯೇ ಇಲ್ಲದ ಸ್ಥಿತಿ ಉಂಟಾಗಿದೆ. ಎಲ್ಲೋ ಒಂದೆಡೆ ಅಡಿಕೆ ಧಾರಣೆ ಕುಸಿಯುವ ಸುಳಿವು ಕಾಣಿಸುತ್ತಿದೆ. ಈ ವರ್ಷ ಕೆಂಪಡಿಕೆ 35,000 ಕ್ಕೆ ಕುಸಿಯಬಹುದು ಎಂಬ ಸುದ್ದಿ ಹರಿದಾಡುತ್ತಿದೆ.
ಕರಾವಳಿಯ ಅಡಿಕೆ ಬೆಳೆಗಾರರು ಕ್ಯಾಂಪ್ಕೋ ಮಹಾಸಭೆಯ ಮುಂಚೆ ದಾರಣೆ ಏರಿಕೆಯಾಗುತ್ತದೆ ಎಂಬ ಕುತೂಹಲದಲ್ಲಿದ್ದರು. ಆದರೆ ದರ ಎರಿಕೆಯಾಗಲಿಲ್ಲ. ತುಂಬಾ ಇಳಿಕೆಯೂ ಆಗಲಿಲ್ಲ. ಮಹಾಸಭೆ ಮುಗಿದಿದೆ. ಕಳೆದ ವರ್ಷ ಮಹಾಸಭೆಯ ನಂತರ ದರ ಏರಿಕೆಯಾಗಿದೆ ಹಾಗಾಗಿ ಈ ವರ್ಷವೂ ಹಾಗೆ ಆಗಬಹುದು ಎಂಬ ಮತ್ತೊಂದು ಆಸೆಯಲ್ಲಿದ್ದಾರೆ. ಬಹಳಷ್ಟು ದೊಡ್ಡ ಬೆಳೆಗಾರರಲ್ಲಿ ಹಿಂದಿನ ವರ್ಷದ ಅಡಿಕೆ ದಾಸ್ತಾನು ಇದೆ. ಬಹುಶಃ ಡಬ್ಬಲ್ ಚೊಲ್ ಅಡಿಕೆಯ ದರ ಸಧ್ಯಕ್ಕೆ ಏರಿಕೆ ಆಗುವ ಸಂಭವ ಇಲ್ಲ. ಜೊತೆಗೆ ಹೊಸ ಅಡಿಕೆಯ ದರವೂ ಇಳಿಕೆಯಾಗಬಹುದು. ಕೆಂಪಡಿಕೆ ದರವೂ ಕುಸಿಯಬಹುದು ಎಂಬ ಅನುಮಾನ ಇದೆ. ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರು ಮಹಾಸಭೆಯಲ್ಲಿ ಅಡಿಕೆ ವ್ಯವಹಾರದಲ್ಲಿ ನಷ್ಟವಾಗಿಲ್ಲ. ಸಂಸ್ಥೆ ಲಾಭದತ್ತ ಸಾಗುತ್ತಿದೆ ಎಂಬ ಸಮಾಧಾನದ ಮಾತುಗಳನ್ನು ಹೇಳಿದ್ದಾದೆ.ಆದರೆ ಎಲ್ಲೋ ಒಂದು ಕಡೆ ಸಾವಿರಾರು ಟನ್ ಅಡಿಕೆ ಡಂಕಿ ಬಂದು ಹಾಳಾಗಿದೆ. ಅದನ್ನು ಭಾರೀ ಕಡಿಮೆ ದರಕ್ಕೆ ಮಾರಬೇಕಾದ ಪರಿಸ್ಥಿತಿ ಇದೆ ಎಂಬ ಗುಸು ಗುಸು ಸುದ್ದಿಗಳು ಕೇಳಿ ಬರುತ್ತಿವೆ. ದಾಸ್ತಾನು ಕೇಂದ್ರಗಳಲ್ಲಿ, ಖರೀದಿ ಕೇಂದ್ರಗಳಲ್ಲಿ ಸ್ಟಾಕು ಹೆಚ್ಚಾದಂತೆ ಅಲ್ಲಿಯೇ ಅಡಿಕೆ ಹಾಳಾಗುತ್ತಿದೆ.ಉತ್ತರ ಭಾರತದ ಬೇಡಿಕೆ ಕಡಿಮೆಯಾಗಿ ಬಹುತೇಕ ಎಲ್ಲಾ ಕಡೆ ದಾಸ್ತಾನು ಹೆಚ್ಚಾಗುತ್ತಿದೆ. ಇದು ಪರಿಸ್ಥಿತಿಯನ್ನು ಎಲ್ಲಿಗೆ ಕೊಂಡೊಯ್ಯಬಹುದು ಎಂದು ಊಹಿಸುವುದೂ ಕಷ್ಟ.
ಆಮದು ಹೆಚ್ಚಾಗುತ್ತಿದೆ- ಸ್ಥಳೀಯ ಅಡಿಕೆಗಿಂತ ಕಡಿಮೆ ಬೆಲೆಗೆ:
- ಸ್ಥಳೀಯ ಅಡಿಕೆ ದರಕ್ಕಿಂತ ಕಡಿಮೆ ಬೆಲೆಗೆ ಇಂಡೋನೇಶಿಯಾ, ಮೂಲದ ಅಡಿಕೆ ಭಾರೀ ಪ್ರಮಾಣದಲ್ಲಿ ಆಮದು ಆಗುತ್ತಿದೆ.
- ಆಗಾಗ ಒಂದೆರಡು ಕನ್ಸೈನ್ಮೆಂಟ್ ಮುಟ್ಟುಗೋಲು ಹಾಕಿದ ವರದಿಗಳು ಬರುತ್ತಿವೆಯಾದರೂ ಅದರ ಹತ್ತು ಪಟ್ಟು ಆಮದು ನಡೆಯುತ್ತಿದೆ ಎಂಬುದಾಗಿ ಕೆಲವು ವರ್ತಕರು ಹೇಳುತ್ತಾರೆ.
- ಆಮದು ಆಗುವ ಅಡಿಕೆಯಲ್ಲಿ ಗುಟ್ಕಾ ಕ್ಕೆ ಹೊಂದುವಂತದ್ದು ಹೆಚ್ಚಿನ ಪ್ರಮಾಣದಲ್ಲಿದ್ದು ಇದು ಕೆಂಪಡಿಕೆ ಮಾರುಕಟ್ಟೆಯ ಮೇಲೆ ಹಾಗೂ ಚಾಲಿಯಲ್ಲಿ ಸೆಕೆಂಡ್ ದರ್ಜೆಯ ಅಡಿಕೆ ಮೇಲೆ ನೇರ ಪರಿಣಾಮ ಉಂಟಾಗುತ್ತದೆ.
- ಇಂಡೋನೇಶಿಯಾ, ಬಾಂಗ್ಲಾ ದೇಶ, ಬೂತಾನ್ ಹಾಗೂ ಮಯನ್ಮಾರ್ ನಿಂದ ಬರುವ ಅಡಿಕೆ ಬಹುತೇಕ ಗುಟ್ಕಾ ಬಳಕೆಗೆ ಸಲ್ಲುವಂತದ್ದಾದ ಕಾರಣ ಕೆಂಪಡಿಕೆ ಮಾರುಕಟ್ಟೆ ಮೇಲೆ ಪರಿಣಾಮ ಉಂಟಾಗಬಹುದು.
- ಈಗಾಗಲೇ ಕೆಂಪಡಿಕೆ ರಾಶಿಯ ಸರಾಸರಿ ಬೆಲೆ 44,000-45,000 ಕ್ಕೆ ಇಳಿಕೆಯಾಗಿದೆ.
- ಮುಂದಿನ ದಿನಗಳಲ್ಲಿ ಇನ್ನೂ ಸ್ವಲ್ಪ ಇಳಿಕೆಯಾಗುವ ಸಾಧ್ಯತೆ ಕಾಣಿಸುತ್ತದೆ.
- ಆಮದಾಗುವ ಅಡಿಕೆ ತುಂಡು ಮಾಡಿದ ಅಡಿಕೆಯಾಗಿದ್ದು, ಡೈಯರ್ ನಲ್ಲಿ ಒಣಸಿರುತ್ತಾರಂತೆ.
- ಒಳಗೆ ಹಾಳಾದರೆ ಮೇಲು ನೋಟಕ್ಕೆ ತಿಳಿಯುವಂತಿರುತ್ತದೆ ಎನ್ನುತ್ತಾರೆ.
ಅಡಿಕೆ ಹಾಳಾದ ಕಾರಣ ದರ ಕುಸಿಯಬಹುದು:
- ದಾಸ್ತಾನು ಇಟ್ಟ ಅಡಿಕೆ ಹಾಳಾದರೆ ಒಂದೋ ಅದನ್ನು ಕಸಕ್ಕೆ ಹಾಕಬೇಕು ಇಲ್ಲವಾದರೆ ಕೇಳಿದ ದರಕ್ಕೆ ಮಾರಾಟ ಮಾಡಬೇಕು.
- ಸ್ಥಳೀಯ ಖರೀದಿದಾರರು (ಅದು ಸಹಕಾರಿ ಇರಲಿ, ಖಾಸಗಿ ಇರಲಿ) ಉತ್ತರ ಭಾರತದ ಖರೀದಿದಾರರು ಬೇಕು ಎಂದು ಕೇಳುವಾಗ ಪೂರೈಕೆ ಮಾಡಲು ಸ್ವಲ್ಪವಾದರೂ ದಾಸ್ತಾನು ಇಡಲೇಬೇಕಾಗುತ್ತದೆ.
- ಇನ್ನು ಸಹಕಾರಿಗಳು ಬೆಳೆಗಾರರು ತಂದ ಅಡಿಕೆಯನ್ನು ಖರೀದಿದಾರರ ಬೇಡಿಕೆ ಇಲ್ಲದಿದ್ದರೂ ತೆಗೆದುಕೊಳ್ಳಬೇಕಾಗುತ್ತದೆ.
- ಬೇಡ ಎನ್ನುವಂತಿಲ್ಲ.
- ಮಾರುಕಟ್ಟೆಗೆ ಬರುವ ಪ್ರಮಾಣಕ್ಕಿಂತ ಬೇಡಿಕೆ ಕಡಿಮೆಯಾದರೆ , ಅಥವಾ ಖರೀದಿ ಮಾಡಿದ ಬೆಲೆಗಿಂತ ಕಡಿಮೆ ಬೆಲೆಗೆ ಕೇಳಿದರೆ ಅನಿವಾರ್ಯವಾಗಿ ದಾಸ್ತಾನು ಇಡಲೇಬೇಕಾಗುತ್ತದೆ.
- ಹೆಚ್ಚು ಸಮಯ ದಾಸ್ತಾನು ಇಟ್ಟಾಗ ಅದು ಹಾಳಾಗುವುದು ಸ್ವಾಭಾವಿಕ.
- ಈಗ ಅಡಿಕೆ ಹಾಳಾದ ಕಾರಣ ಅದನ್ನು ಹೇಗಾದರೂ ಮಾಡಿ ಮಾರಾಟ ಮಾಡಲೇಬೇಕಾಗುತ್ತದೆ.
- ಹಾಳಾದ ಚಾಲಿ ಅಡಿಕೆ ಗುಟ್ಕಾ ತಯಾರಕರಿಗೆ ಮಾರಾಟವಾಗಬೇಕು.
- ಹಾಗಾಗಿ ಕಡಿಮೆ ಬೆಲೆಗೆ ಈ ಅಡಿಕೆ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಕಾರಣ ಕೆಂಪಡಿಕೆ ದರ ಇಳಿಕೆಯಾಗಿದೆ.
- ಈ ದಾಸ್ತಾನು ಮುಗಿಯುವ ತನಕ ದರ ಎರಿಕೆ ಕಷ್ಟ.
- ಚಾಲಿ ಅಡಿಕೆ ಅದರಲ್ಲೂ ಚೋಲ್ ಅಡಿಕೆ ಈಗ ಬಹಳ ಚಿಂತಾಜನಕ ಸ್ಥಿತಿಯಲ್ಲಿದೆ.
- ಒಬ್ಬ ವರ್ತಕರು ಹೇಳುವಂತೆ ಖಾಸಗಿಯವರು ಖರೀದಿಗೆ ಮನಸ್ಸು ಮಾಡುವುದೇ ಇಲ್ಲವಂತೆ.
- ಒಂದು ವೇಳೆ ಖರೀದಿ ಮಾಡಿದರೂ ಅದನ್ನು ನಂತರ ಸಹಕಾರೀ ಸಂಸ್ಥೆಗೇ ಮಾರಾಟ ಮಾಡುವುದಂತೆ.ಹಾಗಾಗಿ ಸಹಕಾರಿ ವ್ಯವಸ್ಥೆಗೆ ದಾಸ್ತಾನು ದೊಡ್ಡ ಸಮಸ್ಯೆ.
- ದಾಸ್ತಾನಿನ ಮೇಲೆ ಬ್ಯಾಂಕಿನಿಂದ ಮುಂಗಡ ಪಡೆಯಬೇಕು. ಅದಕ್ಕೆ ಲಕ್ಷಾಂತರ ರೂಪಾಯಿಗಳ ಬಡ್ಡಿ ಕಟ್ಟಬೇಕು.
- ಇಂತಹ ಸ್ಥಿತಿಯಲ್ಲಿ ದರ ಎರಿಕೆ ಆಗುವುದು ತುಂಬಾ ಕಷ್ಟ.
- ಉತ್ತರ ಭಾರತದಲ್ಲಿ ಅದರಲ್ಲೂ ಚಾಲಿ ಅಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕೇಳುವವರು ಗುಜರಾತ್ ಮತ್ತು ಉತ್ತರ ಪ್ರದೇಶಗಳು ಮಾತ್ರ.
- ಇಲ್ಲೆಲ್ಲಾ ಈಗ “ನಯಾ ಸುಪಾರೀ” ಸಿಂಗಲ್ ಚೋಲ್ ಅಡಿಕೆಗೆ (2022-23 ಸಾಲಿನ) ಬೇಡಿಕೆ ಬರುತ್ತಿದೆಯಂತೆ.
- ಹಾಗಾಗಿ ಈ ವರ್ಷ ಐತಿಹಾಸಿಕ ಎಂಬಂತೆ ಹಳತು ಮತ್ತು ಹೊಸತು ಎಂಬ ವರ್ಗೀಕರಣಕ್ಕೆ ದರ ಒಂದೇ ರೀತಿ ಆಗಲೂಬಹುದು ಎನ್ನುತ್ತಾರೆ.
ಇಂದಿನ ಚಾಲಿ ಅಡಿಕೆ ದಾರಣೆ:
- ಹೊಚ್ಚ ಹೊಸತು: 340-380
- ಚೋಲ್:430-440-445
- ಡಬ್ಬಲ್ ಚೋಲ್:450-465-470
- ಫಟೋರಾ: 300-360-365
- ಕರಿಕೋಕಾ:200-280
- ಉಳ್ಳಿ ಗಡ್ಡೆ:280-300
ಬೆಳ್ತಂಗಡಿ, ಸುಳ್ಯ, ಮತ್ತು ಕಾರ್ಕಳಗಳಲ್ಲಿ ಡಬ್ಬಲ್ ಚೊಲ್ ಸುಪಾರಿಯ ಮಾರಾಟದ ಒತ್ತಡ ಹೆಚ್ಚಾಗಿದೆ. ಮಾರಾಟದ ಒತ್ತಡ ಹೆಚ್ಚಾದರೆ ದರ ಸ್ವಲ್ಪ ಇಳಿಕೆಯಾಗುವ ಸೂಚನೆ:
ಕೆಂಪಡಿಕೆ ಧಾರಣೆ:
- ರಾಶಿ ಅಡಿಕೆ ಶಿವಮೊಗ್ಗದಲ್ಲಿ 45,500-48000
- ಶಿರಸಿ: ರಾಶಿ.46,200-48,500
- ಚೆನ್ನಗಿರಿ ರಾಶಿ:44,000-47,000
- ಸಾಗರ: 45,700-46200
- ಚಿತ್ರದುರ್ಗ ರಾಶಿ:44,000-44,700
- ಹೊಳಲ್ಕೆರೆ ರಾಶಿ:46,000-47,300
- ತೀರ್ಥಹಳ್ಳಿ ರಾಶಿ:45200-46,600
- ಯಲ್ಲಾಪುರ ರಾಶಿ:49,000-55,000
- ಸಿದ್ದಾಪುರ ರಾಶಿ:44,000-47,200
- ಅಡಿಕೆ ಬೆಳೆಗಾರರು ಇನ್ನೂ ಹಳೆ ಅಡಿಕೆಗೆ ದರ ಏರಿಕೆಯಾಗುತ್ತದೆ ಎಂದು ದಾಸ್ತಾನು ಇಟ್ಟು ಕಾಯಬೇಡಿ.
- ಬ್ಯಾಂಕು ಇತ್ಯಾದಿಗಳಲ್ಲಿ ಸಾಲಗಳಿದ್ದರೆ ಅದನ್ನು ಅಡಿಕೆ ಮಾರಾಟ ಮಾಡಿ ಚುಕ್ತಾ ಮಾಡಿ.
- ಇನ್ನು ಏರಿಕೆಯಾಗುವ ದರಕ್ಕಿಂತ ಬಡ್ಡಿಯೇ ಹೆಚ್ಚಾಗಬಹುದು.
- ನವರಾತ್ರೆ ಕಳೆದ ನಂತರ ದರ ಸ್ವಲ್ಪ ಏರಬಹುದು ಎಂಬುದಾಗಿ ಕೆಲವು ವ್ಯಾಪಾರಿಗಳು ಉಚಿತ ಸಲಹೆ ಕೊಡುತ್ತಾರೆ.
- ನವರಾತ್ರೆ ಕಳೆಯಲಿ, ದೀಪಾವಳಿ ಬರಲಿ, ಮಾರುಕಟ್ಟೆ ಅಂತಹ ದೊಡ್ಡ ನೆಗೆತ ಕಾಣುವ ಸೂಚನೆ ಇಲ್ಲ.
- ಉತ್ತರ ಭಾರತದ ಖರೀದಿದಾರರಿಂದ ಬೇಡಿಕೆ ಬಂದರೆ ಶೇ. 1-2 ರಷ್ಟು ಮಾತ್ರ ಏರಿಕೆಯಾಗಬಹುದು.
- ಹಳೆಯ ಅಡಿಕೆಯ ಗುಣಮಟ್ಟ ಕೆಲವೊಮ್ಮೆ ಚೆನ್ನಾಗಿಲ್ಲದಿದ್ದರೆ ದರ ತುಂಬಾ ಕಡಿಮೆಯೂ ಆಗಬಹುದು.
ಬೆಳೆಗಾರರು ಯಾವುದೇ ಕಾರಣಕ್ಕೆ 10-20 ಕ್ವಿಂಟಾಲು ಒಮ್ಮೆಗೇ ಮಾರುಕಟ್ಟೆಗೆ ಒಯ್ಯಬೇಡಿ. ಅದನ್ನು ದಿನಬಿಟ್ಟು ದಿನ ಕೊಡಿ. ಒಮ್ಮೆಲೇ ಬಂದರೆ ಮರುದಿನವೇ ದರ ಕುಸಿಯುತ್ತದೆ. ಇಷ್ಟಕ್ಕೂ ಕಳೆದ ವರ್ಷದ ಅಡಿಕೆ ಹಾಳಾಗಲು ಮುಖ್ಯ ಕಾರಣ ಒದ್ದೆಯಾದ ಸಮರ್ಪಕ ಒಣಗದ ಅಡಿಕೆ. ಈ ಅಡಿಕೆಯನ್ನು ಖರೀದಿಸಿದವರು ತುಂಬಾ ನಷ್ಟಕ್ಕೊಳಗಾಗಿರಬೇಕು. ಗುಜರಾತ್ ನ ಮಾರುಕಟ್ಟೆಯಲ್ಲಿ ಚಾಲಿ ಅಡಿಕೆ ಖರೀದಿ ಮಾಡಿದರೆ ಹೊರಗೆ ನೋಡಲು ಚೆನ್ನಾಗಿದ್ದರೂ ಒಳಗೆ 50% ಹಾಳಾಗಿರುತ್ತದೆ ಎಂದು ಓರ್ವ ವ್ಯಕ್ತಿ ತಿಳಿಸುತ್ತಾರೆ. ಇದೇ ಕಾರಣಕ್ಕೆ ಇರಬಹುದು ಖರೀದಿದಾರರು ಹಳತು ಬೇಡ. ಹೊಸತೇ ಆಗಬಹುದು ಎನ್ನುವುದು.