ಈಗಲೇ ಕೆಲವು ವೈದ್ಯರು ಹಾಲು ಬಿಡಿ. ಆರೋಗ್ಯವಾಗಿರುತ್ತೀರಿ ಎನ್ನುತ್ತಿದ್ದಾರೆ. ಮುಂದೆ ಎಲ್ಲರೂ ಹೀಗೇ ಹೇಳುತ್ತಾ ಬಂದರೆ ಜೀವನೋಪಾಯಕ್ಕಾಗಿ ಹಸು ಸಾಕುವವರಿಗೆ ಭಾರೀ ನಷ್ಟವಾದೀತು.
ಹಸುಗಳನ್ನು ಸಾಕುವಾಗ ಅದನ್ನು ಸಾಕಿದ ಖರ್ಚು ನಮಗೆ ಬರಬೇಕು. ಲಾಭ ಆಗಬೇಕು. ಈ ಉದ್ದೇಶದಲ್ಲಿ ನಾವು ಹಸುವೊಂದರ ಜೀವದೊಂದಿಗೆ ಆಟ ಆಡುತ್ತಿದ್ದೇವೆ ಎಂದರೆ ತಪ್ಪಾಗಲಾರದು. ಹಸುಗಳಿಗೆ ಬೇಕೋ ಬೇಡವೋ ನಮಗೂ ಗೊತ್ತಿಲ್ಲ. ಶಿಫಾರಸು ಮಾಡುವವರಿಗೂ ಗೊತ್ತಿಲ್ಲ. ಹೆಚ್ಚು ಹೆಚ್ಚು ಪಶು ಆಹಾರ, ಖನಿಜ ಮಿಶ್ರಣ ಹಾಗೆಯೇ ವಿಟಮಿನ್ ಮುಂತಾದವುಗಳನ್ನು ಕೊಟ್ಟು ಹಸುವಿನ ಆರೋಗ್ಯವನ್ನು ನಾವು ಹಾಳು ಮಾಡುತ್ತಿದ್ದೇವೆ. ಇದು ಹಸುವಿನ ಆರೋಗ್ಯ ಅಲ್ಲದೆ ಹಾಲು ಕುಡಿದವರ ಆರೋಗ್ಯಕ್ಕೂ ತೊಂದರೆ ಮಾಡುತ್ತದೆ.
- ಮೊನ್ನೆ ಒಬ್ಬ ಮೆಡಿಕಲ್ ಶಾಪ್ ನವರು ನಾಯಿಯ ಹೊಟ್ಟೆ ಹುಳಕ್ಕಾಗಿ ಔಷಧಿಯೊಂದನ್ನು ಕೊಟ್ಟರು.
- ಮರಿ ನಾಯಿ ಎಂದು ಹೇಳಿದ್ದೆ.
- ಅವರು ಒಂದು ಬಾಟಲು 10 ಮಿಲಿ. ಎರಡು ಪಾಲು ಮಾಡಿ ಇಂದು ಒಮ್ಮೆ ಕೊಡಿ, ನಾಲ್ಕು ದಿನ ಬಿಟ್ಟು ಮತ್ತೆ ಅರ್ಧ ಪಾಲು ಮಾಡಿ ಇನ್ನೊಮ್ಮೆ ಕೊಡಿ ಎಂದರು.
- ಪ್ರತಿಷ್ಟಿತ ಕಂಪೆನಿಯ ಉತ್ಪನ್ನ. ಅದರಲ್ಲಿ ಯಾವ ಡೋಸೇಜ್ ಹೇಗೆ ಎಂದು ಬರೆದಿಲ್ಲ.
- ಅದರ ಬಗ್ಗೆ ಕೆಲವು ಕಡೆ ಹುಡುಕಾಡಿದೆ.
- ಕೊನೆಗೆ ಮಿತ್ರರಾದ ಒಬ್ಬ ಅನುಭವಿ ಪಶು ವೈದ್ಯಕೀಯ ಕಲಿತವರಲ್ಲಿ ವಿಚಾರಿಸಿದೆ.
- ಅವರು ಹೇಳಿದ್ದು, ಒಂದು ಕಿಲೋ ತೂಕಕ್ಕೆ ಒಂದು ಮಿಲಿ ಯಷ್ಟು ಗರಿಷ್ಟ ಪ್ರಮಾಣ.
- ಅದಕ್ಕಿಂತ ಕಡಿಮೆಯಾದರೂ ತೊಂದರೆ ಇಲ್ಲ.
- ಹೆಚ್ಚು ಹಾಕಬಾರದು. ಲಿವರ್ ಡ್ಯಾಮೇಜ್ ಆಗಬಹುದು ಎಂದರು.
ಇಂತಹ ಸಂಧರ್ಭಗಳು ಹಲವಾರು ಜನಕ್ಕೆ ಬಂದಿರಬಹುದು. ಯಾರೂ ಕ್ರಾಸ್ ವೇರಿಫಿಕೇಶನ್ ಮಾಡಲು ಹೋಗುವುದಿಲ್ಲ. ಕೊಟ್ಟವರು ಹೇಳಿದಂತೆ ಕೊಡುತ್ತಾರೆ. ಇದರಿಂದಾಗಿ ಒಂದು ಜೀವ ಹೋದರೂ ಹೋಗಬಹುದು. ಹೈನುಗಾರಿಕೆಯಲ್ಲಿ ಈಗ ಆಗುತ್ತಿರುವುದು ಇದೇ.
ಹಸುಗಳಿಗೆ ಆಹಾರ:
- ಪಶು ಆಹಾರಕ್ಕೆ ಬಳಕೆಯಾಗುವಷ್ಟು ಯೂರಿಯಾ ಬಹುಷಃ ನಮ್ಮ ರೈತರು ಕೃಷಿ ಹೊಲಕ್ಕೆ ಬಳಕೆ ಮಾಡುತ್ತಿಲ್ಲ.
- ಆದೇ ಕಾರಣಕ್ಕೆ ಸರಕಾರ ವಾಸನೆ ಬರಲಿ ಎಂದು ಯೂರಿಯಾಗೆ ಬೇವಿನ ಎಣ್ಣೆಯ ವಾಸನೆಯನ್ನು ಸೇರಿಸಿದ್ದಾರೆ.
- ಬೇವಿನೆಣ್ಣೆಯ ವಾಸನೆ ಇದ್ದರೂ ಅದನ್ನು ಹೋಗಲಾಡಿಸಿ ಈಗಲೂ ಪಶು ಆಹಾರದಲ್ಲಿ ಯೂರಿಯಾವನ್ನು ಬಳಕೆ ಮಾಡಲಾಗುತ್ತದೆ.
- ಹಲವು ವಸ್ತುಗಳ ಜೊತೆಗೆ ಯೂರಿಯಾ ಸೇರಿದಾಗ ಅದರ ವಾಸನೆ ನಗಣ್ಯವಾಗುತ್ತದೆ ಅಥವಾ ಹಸುಗಳಿಗೆ ಅದು ಒಗ್ಗಿಕೊಳ್ಳುತ್ತದೆ.
- ಕೆಲವು ಮೂಲಗಳ ಪ್ರಕಾರ ಒಂದು ಕಿಲೋ ಸಿದ್ದ ಪಶು ಆಹಾರದಲ್ಲಿ 200 ಗ್ರಾಂ ಯೂರಿಯಾ ಇದೆ ಎಂಬ ವರದಿಗಳು ಇವೆ.
- ಅಧಿಕ ಹಾಲು ಕೊಡುವ ಹಸುವೊಂದಕ್ಕೆ ದಿನಕ್ಕೆ ಏನಿಲ್ಲವೆಂದರೂ ನಾವು 1 ಕಿಲೋ ಯೂರಿಯಾ ತಿನ್ನಿಸುತ್ತೇವೆ!
- ಯಾವ ಪಶು ಆಹಾರ ತಯಾರಕರೂ ಯೂರಿಯಾ ಹಾಕದೆ ಪಶು ಆಹಾರ ತಯಾರಿಸಲಾರ.
- ಯಾರ ಆಹಾರದಲ್ಲಿ ಹೆಚ್ಚು ಹಾಲು ಲಭ್ಯವೋ ಅವರದ್ದರಲ್ಲಿ ಹೆಚ್ಚು ಯೂರಿಯಾ ಬೆರೆಸಿರುತ್ತದೆ.
ಇದಕ್ಕೇ ಪಶು ಆಹಾರ ತಯಾರಿಸುವವರು ಹಸು ಸಾಕಣೆ ಮಾಡದೆ ಇರುವುದು. ಪಶು ವೈದ್ಯಕೀಯ ಕಲಿತವರೂ ಸಹ ಸಲಹಾಕಾರರಾಗಿ ಕೆಲಸ ಮಾಡುತ್ತಾರೆಯೇ ಹೊರತು ಹಸು ಸಾಕಣೆ ಗೋಜಿಗೆ ಹೋಗುವುದಿಲ್ಲ.
- ಯೂರಿಯಾ ಹೆಚ್ಚು ಹೆಚ್ಚು ದೇಹಕ್ಕೆ ಹೋದಂತೆ ಅದು ವಿಷಕಾರಿ. ಮನುಷ್ಯ ಸೇರಿ ಎಲ್ಲ ಪ್ರಾಣಿಗಳಲ್ಲಿ ಚಯಾಪಚಯ ಕ್ರಿಯೆಯಲ್ಲಿ ಉತ್ಪತ್ತಿಯಾಗುವ ವಿಷಕಾರಿ ಅಂಶ ಅಮೋನಿಯ.
- ಈ ಅಮೋನಿಯ ದೇಹದಲ್ಲಿ ಹೆಚ್ಚು ಹೊತ್ತು ಇರಕೂಡದು.
- ನಮ್ಮ ಲಿವರ್ ನಲ್ಲಿ ಅಮೋನಿಯವು ಇಂಗಾಲದ ಡೈ ಆಕ್ಸೈಡ್ ಜೊತೆ ಸೇರಿ ಯೂರಿಯಾ ಅಗಿ ಪರಿವರ್ತನೆ ಆಗುತ್ತದೆ.
- ಯೂರಿಯಾ ಕಡಿಮೆ ವಿಷಕಾರಿಯಾಗಿದ್ರೂ ಕೂಡ ದೇಹದಲ್ಲಿ ಉಳಿಯಬಾರದು.
- ಅದು ರಕ್ತದಲ್ಲಿ ಸೇರಿ ಮೂತ್ರಕೋಶದಲ್ಲಿ ಸೋಸಿ ಮೂತ್ರದ ಮೂಲಕ ದೇಹದಿಂದ ಹೊರಹಾಕುವ ಪ್ರಕ್ರಿಯೆ ನಡೆಯುತ್ತದೆ.
- ಹಸು ಸಾಕಣೆ ಮಾಡುವ ನಾವು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅತಿಯಾಗಿ ಯೂರಿಯಾವನ್ನು ಪಶುಗಳ ದೇಹಕ್ಕೆ ಸೇರಿಸುತ್ತಿದ್ದೇವೆ.
- ಮೇವಿನ ಹುಲ್ಲನ್ನು ಬೆಳೆಸುವುದೇ ಯೂರಿಯಾ ಹಾಕಿ. ಅದು ಅಂತಿಮವಾಗಿ ಹಸುವಿನ ದೇಹದಲ್ಲಿ ಸೇರಿಕೊಳ್ಳುವುದು.
- ಹಾಲಿನ ಮೂಲಕ ಹಾಲು ಕುಡಿಯುವವರಿಗೆ ವರ್ಗಾವಣೆ ಆಗುವುದು.
- ಈ ಅತಿಯಾದ ಯೂರಿಯಾ ಕಾರಣದಿಂದಲೇ ನಾವು ಸಾಕುವ ಹಸುಗಳು ಮೂರು ಕರು ಹಾಕಿದ ತರುವಾಯ ನಿತ್ರಾಣಕ್ಕೆ ಒಳಗಾಗುತ್ತವೆ.
- ನಾಲ್ಕನೇ ಕರುವಿನ ತರುವಾಯ ಅದನ್ನು ಮಾಂಸಕ್ಕೆ ಮಾರಲಾಗುತ್ತದೆ!
ಸಾಧ್ಯವಾದಷ್ಟು ನೀವೇ ಕಚ್ಚಾ ಸಾಮಾಗ್ರಿ ತಂದು ಪಶು ಆಹಾರ ತಯಾರಿಸಿಕೊಳ್ಳಿ. ಹೆಚ್ಚಿನ ಖನಿಜಗಳು, ವಿಟಮಿನ್ ಗಳು ಅದರಲ್ಲಿ ಇರುತ್ತವೆ.
ಖನಿಜ- ವಿಟಮಿನ್ ಮಿಶ್ರಣ:
- ನಿಮ್ಮ ದೇಹಕ್ಕೆ ಯಾವ ಖನಿಜ ಬೇಕು, ಯಾವ ವಿಟಮಿನ್ ಬೇಕು ಎಂಬುದನ್ನು ತಿಳಿಯಬೇಕಿದ್ದರೆ ಅದಕ್ಕೆ ಕೆಲವು ಪರೀಕ್ಷೆಗಳು ಇವೆ.
- ಅದೇ ರೀತಿಯಲ್ಲಿ ಪಶುಗಳಿಗೂ ಸಹ.
- ಪಶುವಿನ ದೇಹದಲ್ಲಿ ಯಾವ ಖನಿಜ ಅಂಶ ಕಡಿಮೆ ಇದೆ, ಯಾವುದು ಸರಿಯಾಗಿ ಇದೆ ಎಂಬುದನ್ನು ಕೊಡುವಾಗ ಪರೀಕ್ಷೆ ಮಾಡಿ ಕೊಡಬೇಕಾದದ್ದು ಕ್ರಮ.
- ದೇಹದ ತೂಕಕ್ಕೆ ಇಷ್ಟು ಎಂದು ಕೊಡುವುದು ವ್ಯಾಪಾರ ಉದ್ದೇಶವೇ ಆಗಿರುತ್ತದೆ.
- ಚೀನಾ ಮೂಲದಿಂದ ಪಶು, ಕುಕ್ಕುಟ ಉದ್ದಿಮೆಗೆ ಬೇಕಾಗುವ ಕಳಪೆ ಗುಣಮಟ್ಟದ ಖನಿಜ, ವಿಟಮಿನ್ ಕ್ಯಾಲ್ಸಿಯಂ ಮಿಶ್ರಣವನ್ನು ಆಮದು ಮಾಡಿ, ಇಲ್ಲಿ ಅದನ್ನು ಮರು ಪ್ಯಾಕಿಂಗ್ ಮಾಡಿ ಕೊಡಲಾಗುತ್ತದೆ.
- ಇದರಿಂದ ಹಾಲಿನ ಉತ್ಪಾದನೆ ಏನೋ ಹೆಚ್ಚಾಗಬಹುದು.
- ಆದರೆ ಅದು ಪಶುವಿನ ದೇಹವನ್ನು ನಿಧಾನವಾಗಿ ಸೊರಗುವಂತೆ ಮಾಡುತ್ತದೆ.
- ಹಾಲು ಕುಡಿಯುವವರಿಗೆಲ್ಲಾ ಪ್ರಸಾದ ರೂಪದಲ್ಲಿ ವರ್ಗಾವಣೆ ಆಗುತ್ತದೆ.
- ಹಸುಗಳಿಗೆ ಅಗತ್ಯವೋ ಇಲ್ಲವೋ ಎಂಬುದನ್ನು ಕೂಲಂಕುಶವಾಗಿ ತಿಳಿಯದೆ ಇಂತಹ ಪ್ರಚೋದಕಗಳನ್ನು ನೀಡುವುದರಿಂದ ಹಸುವಿನ ಆರೋಗ್ಯ ಕ್ಷೀಣಿಸುತ್ತಾ ಬರುತ್ತದೆ.
ಹಸುಗಳನ್ನು ಹೇಗೆ ಸಾಕಬೇಕು:
- ಹಸುಗಳಿಗೆ ನೈಸರ್ಗಿಕವಾಗಿ ಖನಿಜಗಳು, ವಿಟಮಿನ್ ಗಳು, ಕ್ಯಾಲ್ಸಿಯಂ ಗಳು ಸಿಗುವಂತೆ ಮಾಡಿದರೆ ಅವುಗಳ ಆರೋಗ್ಯ ಸ್ಥಿರವಾಗಿ ಉಳಿಯುತ್ತದೆ.
- ಹಿಂದೆ ನಮ್ಮ ಹಿರಿಯರು ಒಂದು ಹಸುವಿನಲ್ಲಿ 10 ಕ್ಕೂ ಹೆಚ್ಚು ಕರು ಪಡೆಯುತ್ತಿದ್ದರು.
- ಆದರೂ ಹಸು ಎದ್ದೇಳಲು ಕಷ್ಟಪಡುತ್ತಿರಲಿಲ್ಲ.
- ಅದಕ್ಕೆ ಕಾರಣ ಆ ಹಸುಗಳಿಗೆ ಕಾಡಿನ ಸೊಪ್ಪು ಸದೆ ಗಳು ಸಿಗುತ್ತಿತ್ತು.
- ಮೈಗೆ ಚೆನ್ನಾಗಿ ಬಿಸಿಲು ಬೀಳುತ್ತಿತ್ತು.
- ಅಂಗಾಂಗಗಳ ಚಲನ ವಲನ ಇದ್ದ ಕಾರಣ ಶಕ್ತಿ ತಾನಾಗಿಯೇ ದೊರೆಯುತ್ತಿತ್ತು.
- ಅದುವೇ ಅದರ ಆರೋಗ್ಯದ ಗುಟ್ಟಾಗಿತ್ತು.
- ಈಗ ಅದಕ್ಕೆ ವಿರುದ್ಧವಾದ ಪರಿಸ್ಥಿತಿ ಉಂಟಾಗಿದೆ.
ಹೈನುಗಾರಿಕೆ ಮಾಡುವವರು ತಿಳಿದಿರಬೇಕಾದ ಮಹತ್ವದ ಸಂಗತಿ ಎಂದರೆ ಈ ವೃತ್ತಿಯಲ್ಲಿ ಯಾವುದೇ ಸಂಚಲನವಾದರೂ, ಅದರ ಅಂತಿಮ ಪರಿಣಾಮ ಹಾಲು ಉತ್ಪಾದಕರ ಮೇಲೆ. ಹಾಲಿನ ಡೈರಿ ಮುಚ್ಚಬಹುದು. ಪಶ್ ಆಹಾರ ತಯಾರಕರು ಬೇರೆ ತಯಾರಿ ಮಾಡಬಹುದು. ಆದರೆ ಹಾಲಿನ ಹೆಸರು ಹಾಳಾದರೆ ಇಡೀ ರೈತ ಸಮುದಾಯಕ್ಕೆ ತೊಂದರೆ ಆದುದರಿಂದ ಸ್ವಚ್ಚ ಪರಿಶುದ್ಧ ಹಾಲನ್ನು ಉತ್ಪಾದಿಸುವ ಬಗ್ಗೆ ಯೋಚಿಸಿ.
One thought on “ಹಸುಗಳ ಆರೋಗ್ಯ ಮತ್ತು ನಾವು ಕೊಡುವ ಆಹಾರ.”