ಪಶುಗಳ ಅದರಲ್ಲೂ ದನಗಳ ಚರ್ಮಗಂಟು ರೋಗ ತೀವ್ರ ರೂಪ ತಳೆಯುತ್ತಿದ್ದು, ಈಗಾಗಲೇ ಸಾವಿರಾರು ಹಸುಗಳು ಮರಣ ಹೊಂದಿವೆ. ಸಾವಿರಾರು ಜೀವನ್ಮರಣ ಹೋರಾಟದಲ್ಲಿವೆ. ಕೊರೋನಾ, ಅಥವಾ ಸಿಡುಬು ತರಹದ ಸಾಂಕ್ರಾಮಿಕ ರೋಗವೊಂದು ಹಸು ಸಾಕುವರ ಮನೆಯಲ್ಲಿ ಸೂತಕದ ವಾತಾವರಣವನ್ನು ಉಂಟುಮಾಡಿದೆ. ಯಾವಾಗ ಯಾವುದಕ್ಕೆ ಬರಬಹುದೋ ಎಂಬ ಆತಂಕ ಉಂಟಾಗಿದೆ.
ಹೊಸ ತಲೆಮಾರಿಗೆ ಕೊರೋನಾ ರೋಗ ಹೇಗೆ ಮನುಷ್ಯ ಮನುಷ್ಯರನ್ನು ದೂರ ದೂರ ಮಾಡುವ ಸನ್ನಿವೇಶ ಉಂಟು ಮಾಡಿತ್ತು ಎಂಬುದರ ಅರಿವು ಇದೆ. ಸುಮಾರು 70 ರ ದಶಕದಲ್ಲಿ ಸಿಡುಬು ಎಂಬ ರೋಗವೂ ಹೀಗೆ ಅನಾಹುತವನ್ನು ಸೃಷ್ಟಿಸಿತ್ತಂತೆ. ಅದು ಮಾನವನಿಗೆ ಬಂದ ರೋಗ.ಹಾಗಾಗಿ ಏನೋ ತ್ವರಿತವಾಗಿ ಲಸಿಕೆ ಹುಡುಕಲಾಯಿತು ಸಿಡುಬನ್ನು ನಿರ್ಮೂಲನೆ ಸಹ ಮಾಡಲಾಯಿತು. ಕೊರೋನಾ ಲಸಿಕೆ ಬಂದರೂ ಅದನ್ನು ನಿರ್ಮೂಲನೆ ಮಾಡಲಾಗಲಿಲ್ಲ. ಇದು ಪಶುಗಳಿಗೆ ಬಂದ ರೋಗ. ಇದಕ್ಕೂ ಈಗಿನ ವೈಜ್ಞಾನಿಕ ಯುಗದಲ್ಲಿ ತ್ವರಿತವಾಗಿ ಲಸಿಕೆ ಕಂಡುಹಿಡಿದಾರು. ಆ ತನಕ ಇದು ಒಂದು ತಲೆನೋವೇ ಆಗಿರುತ್ತದೆ.
ಜಾನುವಾರುಗಳ ಚರ್ಮಗಂಟು (LUMPY SKIN DISEASE LSD) ರೋಗ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ದೇಶದಾದ್ಯಂತ ಭಾರೀ ಹಾನಿ ಮಾಡಿದೆ. ಲಕ್ಷಾಂತರ ಹಸುಗಳು ಮರಣವನ್ನಪ್ಪಿವೆ ಎಂಬುದಾಗಿ ವರದಿಗಳಿವೆ. ಕೆಲವು ಲೆಕ್ಕಾಚಾರಗಳ ಪ್ರಕಾರ ನಮ್ಮ ರಾಜ್ಯದಲ್ಲೇ ಸುಮಾರು 237194 ಹಸುಗಳಿಗೆ ಈ ರೋಗ ತಗಲಿದ ವರದಿಯನ್ನು ರಾಜ್ಯದ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ತಿಳಿಸುತ್ತಾರೆ. ರಾಜ್ಯದ 15977 ಹಳ್ಳಿಗಳಲ್ಲಿ, 234 ತಲೂಕುಗಳಲ್ಲಿ ಈ ರೋಗ ತಾಂಡವವಾಡುತ್ತಿದೆ. 164254 ಹಸುಗಳು ಈ ರೋಗ ಬಂದು ಗುಣಮುಖವಾಗಿವೆ. ಹಾಗೆಯೇ ಸಮರೋಪಾದಿಯಲ್ಲಿ ಪಶು ಚಿಕಿತ್ಸಾಲಯ, ಹಾಲಿನ ಡೈರಿಗಳ ಮೂಲಕ ಲಸಿಕೆ ನೀಡಲಾಗುತ್ತಿದೆ. ದಿನದಿಂದ ದಿನಕ್ಕೆ ರೋಗ ಹೆಚ್ಚಾಗುತ್ತಿರುವುದನ್ನು ನೋಡಿದಾಗ ಪಶುಸಂಪತ್ತಿನ ಮೇಲೆ ಈ ರೋಗ ಹಗೆ ತೀರಿಸಿಕೊಳ್ಳುವಂತೆ ಭಾಸವಾಗುತ್ತಿದೆ.
ಕಳೆದ ವರ್ಷದಿಂದ ಜಾನುವಾರುಗಳ ಚರ್ಮಗಂಟು ರೋಗ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಹಾಗೆಯೇ ಕೆಲವು ANTIBIOTICS ಹಾಗೂ ಇನ್ನಿತರ ಆರೈಕೆಯಲ್ಲಿ ಇದನ್ನು ಹದ್ದುಬಸ್ತಿಗೆ ತರಲಾಗಿತ್ತು. ಔಷಧಿಯೇ ಇಲ್ಲದ ಈ ರೋಗಕ್ಕೆ ಶಾರೀರಿಕ ಶಕ್ತಿ ಹೆಚ್ಚಿಸಿಕೊಳ್ಳುವುದೇ IMMUNE SYSTEM DEVELOPMENT ಒಂದೇ ಪರಿಹಾರವಾಗಿದೆ.
ಇದು ಒಂದು ವೈರಸ್ ಖಾಯಿಲೆ:
ಚರ್ಮ ಗಂಟು ರೋಗ ಎಂಬುದು ಹಿಂದೆಯೂ ಜಾನುವಾರುಗಳಿಗೆ ಬರುತ್ತಿತ್ತು,ಪಶು ಸೊರಗಿ ಸಾಯುತಿತ್ತು. ಹರಡುವುದು ಸಹ ಇತ್ತು ಎನ್ನುತ್ತಾರೆ ಹಿರಿಯರು. ಅದು ಈ ರೋಗಕಾರಕದ ಕಾರಣವೋ ಬೇರೆಯೋ ಎಂಬುದು ಅವರಿಗೆ ತಿಳಿಯದು. ಈಗ ಬಂದ ನಂಜಾಣು ರೋಗವಂತೂ ಭಯಾನಕವೇ ಸರಿ. ಅಪರೂಪದಲ್ಲಿ ಅಲ್ಲಲ್ಲಿ ಕಾಣಿಸುತ್ತಿದ್ದ ಈ ರೋಗ ಈಗ ಎಲ್ಲಾ ಕಡೆಯಲ್ಲೂ ವ್ಯಾಪಿಸಲಾರಂಭಿಸಿದೆ. ಒಂದೆಡೆ ಹಸು ಸಾಕಣೆ ಮಾಡಲು ಮನಸ್ಸಿದ್ದರೂ ಮೇವು, ಆಹಾರ ಮುಂತಾದ ಖರ್ಚಿನ ಲೆಕ್ಕಾಚಾರ ಹಾಕಿ ಹೇಗಾದರೂ ಈ ವೃತ್ತಿಯಿಂದ ನಿರ್ಗಮಿಸಬೇಕು ಎಂಬ ಮನೋಸ್ಥಿತಿ ಹೆಚ್ಚಿನವರದ್ದು. ಅದಕ್ಕೆ ಸರಿಯಾಗಿ ಈ ರೋಗ ಮತ್ತೆ ರೂಪಾಂತರಿಯಾಗಿ ಹೆಚ್ಚಿನ ತೀವ್ರತೆ ಪಡೆದುಕೊಂಡಿದೆ.
ವೈರಾಣು ಖಾಯಿಲೆ (Viral disease) ಎಂದರೆ ಅದು ಸ್ವಲ್ಪ ಭೀಕರ ಎಂದೇ ಹೇಳಬಹುದು.ಇದಕ್ಕೆ ಲಸಿಕೆಗಳ ಮೂಲಕ ರೋಗ ಹರಡದಂತೆ ತಡೆಯಬಹುದು. ರೋಗ ಬಂದ ನಂತರ ಅದರ ಶಾರೀರಿಕ ಬಲದ ಮೇಲೆ ಅದು ಗುಣಮುಖವಾಗಬೇಕಷ್ಟೇ. ಈ ರೋಗವು poxviridae ಎಂಬ ವೈರಾಣುವಿನಿಂದ ಬರುತ್ತದೆ. ಇದಕ್ಕೆ ಈಗ ಲಸಿಕೆ ಇಲ್ಲ. ಸದ್ಯಕ್ಕೆ ಮೇಕೆಗಳ ಚರ್ಮಗಂಟು ರೋಗಕ್ಕೆ ಇರುವ ಲಸಿಕೆಯನ್ನು ಕೊಡಲಾಗುತ್ತಿದೆ. ಈ ರೋಗದ ತೀವ್ರತೆ ಹೇಗಿರುತ್ತದೆ ಎಂದರೆ ಅದನ್ನು ವಿವರಿಸಲೂ ಸಹ ಭಯವಾಗುತ್ತದೆ. ಮೊದಲು ಕಾಲು ಊರುವುದು ಕಷ್ಟವಾಗುತ್ತದೆ.ನಂತರ ಒಂದೆರಡು ದಿನಗಳಲ್ಲಿ ಮೈಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಕೆಲವು ದಿನಗಳ ತರುವಾಯ ಅದು ಒಡೆಯುತ್ತದೆ. ಒಡೆದಾಗ ಮೈಯಲ್ಲೆಲ್ಲಾ ಹುಣ್ಣುಗಳಾಗುತ್ತವೆ. ಹುಣ್ಣುಗಳಿಗೆ ನೊಣ , ಸೊಳ್ಳೆ ಮುತ್ತುತ್ತದೆ. ಆ ಸೊಳ್ಳೆ ಬೇರೆ ಆರೋಗ್ಯವಂತ ಹಸುಗಳಿಗೆ ಚುಚ್ಚಿದಾಗ ಅದು ಅದಕ್ಕೂ ಹರಡುತ್ತದೆ. ಆ ಹಸುವಿನ ಶಾರೀರಿಕ ಅಂತಃಶಕ್ತಿ ಬಲವಾಗಿದ್ದರೆ ಏನೂ ಆಗದೆಯೂ ಇರಬಹುದು. ದುರ್ಬಲವಾಗಿದ್ದರೆ ಆದು ಹರಡಬಹುದು.
ಅಸಾಧಾರಣ ನೋವು:
ಚರ್ಮಕ್ಕೆ ಬಿಸಿ ಕಾಯಿಸಿಟ್ಟ ತರಹ ಕಲೆಗಳು ಕಾಣಿಸುತ್ತಿವೆ. ಬೊಬ್ಬೆ ಹಾಕುತ್ತವೆ. ನೋವು ತಾಳಲಾರದೆ ಬಿಟ್ಟ ತಕ್ಷಣ ಹುಚ್ಚುಕಟ್ಟಿ ಓಡುವುದೂ ಇದೆ. ಪಾಪ ಬಾಯಿ ಬಾರದ ಜೀವ ಎಷ್ಟು ನೋವು ಅನುಭವಿಸುತ್ತದೆಯೋ? ತಿನ್ನುವುದನ್ನು ಬಿಡುತ್ತದೆ. ಒಂದು ವೇಳೆ ತಿಂದರೂ ಜೀರ್ಣವಾಗದ ಸ್ಥಿತಿ. ಕೆಲವು ಹಸು/ ಕರುಗಳಿಗೆ ಮೈಯಲ್ಲಿ ಗಂಟುಗಳು (ಗುಳ್ಳೆಗಳು) ಇಲ್ಲವಾದರೂ ಬಹಳ ಡಲ್ ಇವೆ. ಮೈಯ್ಯೆಲ್ಲಾ ಬಿಸಿ ಇರುವಂತೆ ಕಾಣಿಸುತ್ತಿದೆ. ಕಣ್ಣು ಕೆಂಪಗಾಗಿದೆ. ಕಣ್ಣಿನಲ್ಲಿ ನೀರು ಬರುತ್ತಿದೆ. ಕಾಲು ನೋವಿನ ತರಹ ಕಾಣಿಸುತ್ತಿವೆ. ಪಶು ವೈದ್ಯರಲ್ಲಿ ಕೇಳಿದರೆ ಅಂದು ಒಂದು ಸೀನು ಬಂದರೂ ಕೊರೋನಾ ಇರಬೇಕು ಎಂದು ಸಂಶಯ ಪಟ್ಟು ಫೋನಿನಲ್ಲೇ ಸಮಾಧಾನ ಹೇಳಿದಂತೆ ಈಗ ಇದು ಚರ್ಮ ಗಂಟು ರೋಗ ಇರಬಹುದು ಗುಣ ಆದರೂ ಆಗಬಹುದು ಅಗದೆಯೂ ಇರಬಹುದು ಎಂದು ಕೆಲವು ಮಾತ್ರೆ ಮತ್ತು ಹೋಮಿಯೋಪತಿ ಔಷಧಿಗೆ ಚೀಟಿ ಕೊಡುತ್ತಾರೆ.ದೂರ ಕಟ್ಟಿಹಾಕಬೇಕು ಎನ್ನುತ್ತಾರೆ. ಮೇಲೆ ಯಾವ ಹೊದಿಕೆಯೂ ಇಲ್ಲದೆ, ಚಳಿ ಗಾಳಿಗೆ ತೆರೆದಿರುವ ಜಾಗದಲ್ಲಿ ಕಟ್ಟಿ ಅದನ್ನು ಒಂದು ಕೈದಿಯಂತೆ ಕಾಣಲಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಮಾಡಲು ವ್ಯವಸ್ಥೆಗಳೂ ಬೇಕಲ್ಲವೇ?
ಹೇಗೆ ಹರಡುತ್ತದೆ:
ಇದು ಗಾಳಿಯ ಮೂಲಕ ಮತ್ತು ಕಚ್ಚುವ ಸೊಳ್ಳೆ ನೊಣಗಳ ಮೂಲಕ ಹರಡುತ್ತದೆ. ಸೊಳ್ಳೆಗಳಿಂದ ಪ್ರಸಾರವಾಗುತ್ತದೆ. ಒಟ್ಟೊಟ್ಟೊಗೆ ಪಶುಗಳನ್ನು ಕಟ್ಟುವುದರಿಂದ ಸೊಳ್ಳೆಗಳು ಕಚ್ಚಿ ಹರಡುವ ಸಾಧ್ಯತೆ ಹೆಚ್ಚು.
ಆರೋಗ್ಯ ಸುಸ್ಥಿತಿಯಲ್ಲಿಡಬಯಸುವವರ ಆಹಾರಾಭ್ಯಾಸಗಳು ಹೀಗಿರುತ್ತವೆ.
ರೋಗ ಎಲ್ಲಿಂದ ಬಟು, ಹೇಗೆ ಬಂತು ಎಂದು ಅದರ ಮೂಲ ಹುಡುಕುವುದು, ಇತ್ಯಾದಿ ಮಾಡುವುದರಿಂದ ಫಲವಿಲ್ಲ. ಹಾಗೆ ನೋಡಿದರೆ ರೋಗ ಪಿಡಿತ ಪಶು ಇರುವಲ್ಲಿಗೆ ನಾವು ಹೋದರೂ, ನಮ್ಮ ಬಟ್ಟೆ ಬರೆಯ ಮೂಲಕ ರೋಗಾಣು ಬರಬಹುದು. ಹಾಗೆಂದು ಎಲ್ಲಾ ಪಶುಗಳಿಗೂ ಇದು ಪ್ರಸಾರವಾಗುತ್ತದೆ ಎಂಬಂತಿಲ್ಲ. ಹಿಂದೆ ಸಿಡುಬು ರೋಗ ಬಂದಾಗ ಕೆಲವು ಮನೆಯಲ್ಲಿ ಹೆಚ್ಚಿನವರಿಗೆ ರೋಗ ಬಂದರೂ ಜೊತೆಗಿದ್ದ ಕೆಲವರಿಗೆ ಬಂದಿರಲಿಲ್ಲ.ಹಾಗೆಯೇ ಈ ರೋಗವೂ ಎಲ್ಲಾ ಪಶುಗಳಿಗೂ ಬರುತ್ತದೆ ಎಂದಿಲ್ಲ. ಉತ್ತಮ ಆಹಾರ, ಉತ್ತಮ ಮೇವು ಕೊಟ್ಟು ಪಶುಗಳ ಅಂತಃ ಶಕ್ತಿಯನ್ನು ಹೆಚ್ಚಿಸಬಹುದು. ಸಧ್ಯದ ಸ್ಥಿತಿಯಲ್ಲಿ ಆಧಿಕ ಹಾಲಿನ ಉತ್ಪಾದನೆ ಆಸೆಯಿಂದ ಹೆಚ್ಚು ಹೆಚ್ಚು ಪಶು ಆಹಾರಗಳನ್ನು ಕೊಡದೆ ನಿಯಮಿತವಾಗಿ ಕೊಡುವುದು ಉತ್ತಮ. ಸಾಧ್ಯವಾದಷ್ಟು ತೋಟದಲ್ಲಿ ಬೆಳೆಯುವ ವೈವಿಧ್ಯಮಯ ಹುಲ್ಲುಗಳನ್ನು ಮೇವಾಗಿ ಕೊಡುವುದು ಒಳ್ಳೆಯದು.
ಹಟ್ಟಿಯ ಸ್ವಚ್ಚತೆ :
ಹಟ್ಟಿಯಲ್ಲಿ ಸೊಳ್ಳೆಗಳನ್ನು ದೂರಮಾಡುವುದಕ್ಕಾಗಿ ದಿನಾ ಹಟ್ಟಿ ತೊಳೆಯುವುದು, ಸಗಣಿ ಹಾಗೂ ಸ್ಲರಿಗಳ ದಾಸ್ತಾನು ಇದ್ದರೆ ಅದಕ್ಕೆ ಕೆರೋಸಿನ್ ಇತ್ಯಾದಿ ಹಾಕಿ ಸೊಳ್ಳೆ ಮೊಟ್ಟೆ ಒಡೆಯದಂತೆ ತಡೆಯಬೇಕು. ಫ್ಯಾನ್ ಇದ್ದರೆ ರಾತ್ರೆ ಹೊತ್ತು ನಡೆಸುವುದು ಉತ್ತಮ. ದಿನಕ್ಕೊಮ್ಮೆ ಸಂಜೆಗೆ ಗೃಹ ಬಳಕೆಗೆ ಶಿಫಾರಿತವಾದ ಸೊಳ್ಳೆ ನಿಯಂತ್ರಕ ಕೀಟನಾಶಕ DECIS Deltramethrin 2.8 EC 1 ಮಿಲಿ 1 ಲೀ. ನೀರಿಗೆ ಬೆರೆಸಿ ಸಿಂಪಡಿಸಿ. ರೋಗ ಬಂದು ಹುಣ್ಣುಗಳಾದ ಹಸು, ಕರುವಿನ ಗಾಯದ ಮೇಲೆ ನೊಣ ಕುಳಿತುಕೊಳ್ಳದಂತೆ ನೊಡಿಕೊಳ್ಳಿ. ಹಳ್ಳಿಯಲ್ಲಿ ಬಳಕೆ ಮಾಡುವ ಕೀವು ಉಂಟಾಗದ ಎಣ್ಣೆಗಳನ್ನು ಹಚ್ಚಿ ಗುಣಪಡಿಸಬಹುದು.ಸಂಜೆ ಹೊತ್ತಿನಲ್ಲಿ ಸೊಳ್ಳೆ ಬತ್ತಿಯನ್ನು ಹಚ್ಚಿ ಸೊಳ್ಳೆಗಳನ್ನು ದೂರಮಾಡಬಹುದು.
ಹಳ್ಳಿ ಮದ್ದು ಪ್ರಯತ್ನಿಸಬಹುದು:
ಹಳ್ಳಿಯಲ್ಲಿ ಅದರಲ್ಲೂ ಕರಾವಳಿಯ ಭಾಗಗಳಲ್ಲಿ ಹುಣ್ಣುಗಳಾದಾಗ ಎಣ್ಣೆ ಹಚ್ಚುವ ಕ್ರಮ ಇದೆ.ಇದನ್ನು ವೈದ್ಯಕೀಯ ಶಾಸ್ತ್ರ ಒಪ್ಪುತ್ತದೆಯೋ ಇಲ್ಲವೋ , ಈಗಲೂ ಈ ಕ್ರಮ ಚಾಲನೆಯಲ್ಲಿದೆ. ಅಂತಹ ಎಣ್ಣೆಗಳಲ್ಲಿ ಮನೆ ಬೀಳು ( ಹಿಂದೆ ಮನೆ ಕಟ್ಟುವಾಗ ಮರ – ಬಿದಿರುಗಳನ್ನು ಈ ಹಗ್ಗದಿಂದ ಕಟ್ಟುತ್ತಿದ್ದರು. ಇದರಿಂದ ಸಣ್ಣ ಬುಟ್ಟಿ ಇತ್ಯಾದಿಗಳನ್ನೂ ಮಾಡುತ್ತಾರೆ) ಇದರ ಸೊಪ್ಪು ಜಜ್ಜಿ ಕಾಯಿಸಿದ ಎಣ್ಣೆ ಒಂದು. ಇದು ನೋವಿ ನಿವಾರಕವಾಗಿ ಹಾಗೂ ಕೀವು ನಿಯಂತ್ರಕ ಕೆಲಸ ಮಾಡುತ್ತದೆ. ಇದರ ಎಣ್ಣೆಯನ್ನು ಗಾಯಗಳಿಗೆ ಹಚ್ಚಿ ಗಾಯ ಬೇಗ ವಾಸಿ ಆಗುವಂತೆ ಮಾಡಿದವರಿದ್ದಾರೆ. ಹಾಗೆಯೇ ಪಲ್ಲಿ ಸೊಪ್ಪು ಎಂಬುದು ಸಹ ಒಂದು. ಹಿಂದೆ ಸಿಡುಬು ರೋಗ ಬಂದಾಗ ಹುಣ್ಣು ಆದದ್ದಕ್ಕೆ ಇದರ ಎಣ್ಣೆಯನ್ನು ಗಾಯಗಳಿಗೆ ಹಚ್ಚಿ ವಾಸಿ ಮಾಡಿದ ಬಗ್ಗೆ ಹಿರಿಯರು ಹೇಳುತ್ತಾರೆ. ಈ ಸೊಪ್ಪನ್ನು ಜಜ್ಜಿ ಎಣ್ಣೆ ಮಾಡಿ ಹಚ್ಚಿದರೆ ಗಾಯ ಸ್ವಲ್ಪ ಬೇಗ ವಾಸಿಯಾಗುತ್ತದೆ ಎನ್ನುತ್ತಾರೆ. (ಮಾಡುವವರು ಇದನ್ನು ಉಳಿದ ಔಷದೋಪಚಾರದ ಜೊತೆಗೆ ಮಾಡಿ)
ಈ ರೋಗ ಕ್ರಮೇಣ ಕೊರೋನಾದಂತೆ ಕಡಿಮೆಯಾಗುತ್ತದೆ. ಆ ತನಕ ಅಲ್ಲಲ್ಲಿ ಹರಡಿ ಬಹಳ ಹಾನಿ ಉಂಟುಮಾಡಬಹುದು. ಲಸಿಕೆ ಹಾಕಿಸಿಕೊಳ್ಳದವರು ತಪ್ಪದೆ ಹಾಕಿಸಿಕೊಳ್ಳಿ.