ನೆಲಕ್ಕೆ ಸಗಣಿ ಸಾರಿಸಲು ಸ್ವಲ್ಪ ಸಗಣಿ ಕೊಡಿ ಎಂದು ಹಸು ಸಾಕದವರು ಸಾಕುವವರಲ್ಲಿ ಯಾವಾಗಲೂ ಕೇಳುತ್ತಾ ಇರುತ್ತಾರೆ. ಅವರಿಗೆ ನಿರ್ಧಾಕ್ಷಿಣ್ಯವಾಗಿ ಹೀಗೆ ಹೇಳಿ. ಒಂದು ಬುಟ್ಟಿ ಸಗಣಿ ಬೇಕಾದರೆ ರೂ. 500 ಆಗುತ್ತದೆ ಎಂದು. ಯಾಕೆ ಇಷ್ಟು ಬೆಲೆ ಎಂದು ಕೇಳಿಯೇ ಕೇಳುತ್ತಾರೆ.ಆಗ ಈ ರೀತಿ ಅದರ ಉತ್ಪಾದನಾ ವೆಚ್ಚವನ್ನು ವಿವರಿಸಿ. ಸಗಣಿಯ ಉತ್ಪಾದನಾ ವೆಚ್ಚ ರೂ.1000 ಕ್ಕಿಂತಲೂ ಹೆಚ್ಚು ಇರುವಾಗ ಅದನ್ನು ಕಡಿಮೆ ಬೆಲೆಗೇ ಕೊಡಲಾಗುತ್ತದೆ.
ಹಸು ತಿಂದ ಮೇವು ಅದು ಹಸಿ ಹುಲ್ಲು ಇರಲಿ, ಒಣ ಹುಲ್ಲು ಆಗಿರಲಿ, ಅದನ್ನು ಜಗಿದು, ಅದಕ್ಕೆ ತನ್ನ ಜೊಲ್ಲು ರಸವನ್ನು ಸೇರಿಸಿ ತನ್ನ ಜಠರದ ಮೂಲಕ ಮುಂದೆ ಸರಿಸುತ್ತಾ ದೇಹಪೊಷಣೆಗೆ ಬೇಕಾದ ಸತ್ವಗಳನ್ನು ಬಳಸಿಕೊಂಡು ಉಳಿದದ್ದನ್ನು ಸಗಣಿ ಅಥವಾ ಮಲದ ರೂಪದಲ್ಲಿ ಹೊರ ಹಾಕುತ್ತದೆ. ಇದು ಹಸು, ಎಮ್ಮೆಗಳು ತಿಂದು ಹೊರ ಹಾಕಿದ ನಿರುಪಯುಕ್ತವಾದ ವಸ್ತುವಾಗಿದ್ದರೂ ಅದರ ಉತ್ಪಾದನಾ ವೆಚ್ಚ ಲೆಕ್ಕಹಾಕಿದವರು ಉಚಿತವಾಗಿ ಕೊಡಲಾರರು.
ರೈತ ಯಾವತ್ತೂ ಸೋತದ್ದು ಇದ್ದರೆ ಅವನ ದಾಕ್ಷಿಣ್ಯದಲ್ಲಿ. ಬಹುತೇಕ ರೈತರು ತಮ್ಮಲ್ಲಿರುವ ಯಾವುದೇ ಕೃಷಿ ಉತ್ಪನ್ನ ಅಥವಾ ಇನ್ಯಾವುದೇ ವಸ್ತುವನ್ನು ಬೇರೆಯವರಿಗೆ ಕೊಡುವಾಗ ಹೇಳುವ ಅದರ ಮೌಲ್ಯ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇರುತ್ತದೆ. ಜನ ಅದಕ್ಕಾಗಿಯೇ ರೈತರಿಂದ ನೇರ ಖರೀದಿಯನ್ನು ಬಯಸುತ್ತಾರೆ. ಯಾವುದೇ ಗ್ರಾಹಕರೂ ಸಹ ರೈತರಿಂದ ಖರೀದಿ ಮಾಡುವಾಗ ಸಾಕಷ್ಟು ಚರ್ಚೆ ಮಾಡಿಯೇ ಖರೀದಿಗೆ ಮುಂದಾಗುತ್ತಾರೆ. ಈ ವ್ಯವಹಾರದಲ್ಲಿಯೂ ರೈತನಿಗೆ ನ್ಯಾಯ ಸಿಗುವುದಿಲ್ಲ. ದಾಕ್ಷಿಣ್ಯ ಎಂಬ ರೈತನ ಹುಟ್ಟು ಗುಣ ಅವನ ಇಡೀ ವೃತ್ತಿ ಜೀವನವನ್ನು ಭಾರೀ ಪ್ರಮಾಣದಲ್ಲಿ ಘಾಸಿಗೊಳಿಸುತ್ತದೆ. ಒಂದು ವೇಳೆ ರೈತವರ್ಗದಲ್ಲಿ ವ್ಯಾವಹಾರಿಕತನವನ್ನು ಬೆಳೆಸಿಕೊಂಡವರಿದ್ದರೆ ಅದು ಕೇವಲ ಶೇ:1 ರಷ್ಟು ಮಂದಿ ಮಾತ್ರ. ಮಧ್ಯಾನ್ಹದ ಹೊತ್ತಿಗೆ ಬಂದವರಿಗೆ ಉಚಿತ ಊಟ, ಬೆಳೆಗ್ಗೆ ಬಂದರೆ ಚಹ, ಹೀಗೆ ಅಥಿತಿ ಸತ್ಕಾರದ ಜೊತೆಗೆ ಚರ್ಚೆಯಲ್ಲಿ ವ್ಯವಹಾರ ಮಾಡುವವರಿದ್ದರೆ ಅದು ಕೃಷಿಕರು ಮಾತ್ರ.
ಸಗಣಿಯ ಉತ್ಪಾದನೆಗೆ ಖರ್ಚು ಎಷ್ಟು?
- ಒಂದು ಸಾಧಾರಣ ನಾಟಿ ಹಸು ತನ್ನ ದೇಹ ತೂಕಕ್ಕೆ ಅನುಗುಣವಾಗಿ ಸರಾಸರಿ 25 ಕಿಲೋದಷ್ಟು ಹಸಿ ಹುಲ್ಲನ್ನು ಸೇವಿಸುತ್ತದೆ. (ಕೊಟ್ಟರೆ ಇನ್ನೂ ಹೆಚ್ಚು ತಿನ್ನುತ್ತದೆ)
- ಹಸಿ ಹುಲ್ಲಿನಲ್ಲಿ 90% ಕ್ಕೂ ಹೆಚ್ಚು ನೀರಿನ ಅಂಶ ಇರುತ್ತದೆ. ಇದು ಮೂತ್ರವಾಗಿ ಹೊರ ಹಾಕಲ್ಪಟ್ಟರೆ, ಉಳಿದವು ಘನ ಪದಾರ್ಥವಾಗಿ ಸಗಣಿ ರೂಪದಲ್ಲಿ ಹೊರ ಹಾಕಲ್ಪಡುತ್ತದೆ.
- ಅಂದರೆ 25 ಕಿಲೋ ಹಸಿ ಹುಲ್ಲನ್ನು ತಿಂದ ಒಂದು ಹಸು ಹೊರ ಹಾಕುವ ಸಗಣಿಯ ಪ್ರಮಾಣ ಹೆಚ್ಚೆಂದರೆ 2-3 ಕಿಲೋ.
- ಒಂದು ಬುಟ್ಟಿ ತುಂಬಲು ಸುಮಾರಾಗಿ 10-15 ಕಿಲೊ ಸಗಣಿ ಬೇಕಾಗುತ್ತದೆ.
- ಒಂದು ಬುಟ್ಟಿಯಷ್ಟು ಸಗಣಿ ತಯಾರಾಗಬೇಕಿದ್ದರೆ ಒಂದು ಹಸು ಎರಡು ದಿನಗಳ ಕಾಲ ಕನಿಷ್ಟ 60-70 ಕಿಲೊ ಹಸಿ ಹುಲ್ಲು ಸೇವಿಸಬೇಕಾಗುತ್ತದೆ.
ಒಣ ಹುಲ್ಲು ಬಳಸುವುದೇ ಆದರೆ ಒಂದು ಹಸು 10-15 ಕಿಲೋ ಸಗಣಿಯನ್ನು ವಿಸರ್ಜಿಸಬೇಕಾದರೆ ಅದು ಈಗಿನ ಎರಡು ರೋಲ್ (ಒಂದು ರೋಲ್ ಸುಮಾರು 15 ಕಿಲೋ) ಒಣ ಹುಲ್ಲನ್ನು ತಿನ್ನಬೇಕಾಗುತ್ತದೆ. ಇದರಲ್ಲಿ ಶೇ. 5 ಕ್ಕಿಂತಲೂ ಕಡಿಮೆ ಪಶು ಆಹಾರ ಸೇರಬಹುದು. ಉಳಿದವುಗಳೆಲ್ಲಾ ನಾವು ಕೊಡುವ ಮೇವು.
ಯಾಕೆ ಸಗಣಿ ಇಷ್ಟು ದುಬಾರಿ:
- ಹಸುಗಳು ಸಗಣಿ ಹಾಕಬೇಕಿದ್ದರೆ ಅದಕ್ಕೆ ಬರೇ ದಾಣಿ (ಪಶು ಆಹಾರ) ಮಿಶ್ರಣವನ್ನು ಕೊಟ್ಟರೆ ಸಾಕಾಗುವುದಿಲ್ಲ.
- ದಾಣಿ ಮಿಶ್ರಣ ಎಂಬುದು ದೇಹ ಪೋಷಣೆಗೆ ಮತ್ತು ಹಾಲಿನ ಉತ್ಪಾದನೆಗೆ ಆಗತ್ಯ ಅಷ್ಟೇ.
- ಪಶುಗಳ ನೈಜ ಆಹಾರ ಮೇವು. ಅದು ಹಸಿರು ಹುಲ್ಲು ಆಗಿದ್ದರೆ ಅತ್ಯುತ್ತಮ. ಒಣ ಆಹಾರವವೂ ಆಗುತ್ತದೆ.
- ಪಶುಗಳಿಗೆ ನಾರಿನ ಅಂಶ ಇರುವ ಆಹಾರ ಹೆಚ್ಚಿನ ಪ್ರಮಾಣದಲ್ಲಿ ಬೇಕು . ಆದನ್ನು ಜಗಿದು ಪಚನ ಮಾಡಿ ಸಗಣಿಯಾಗಿ ಹೊರ ಹಾಕುತ್ತವೆ.
- ಹಸಿ ಹುಲ್ಲು ಉತ್ಪಾದಿಸಲು ತಗಲುವ ಖರ್ಚಿನ ಲೆಕ್ಕಾಚಾರ ಹಾಕಿ.
- ಹಾಗೆಯೇ ತೋಟದಲ್ಲಿ ಬೆಳೆಯುವ ಕಳೆ ಹುಲ್ಲುಗಳನ್ನು ಒಟ್ಟು ಸೇರಿಸುವ ಖರ್ಚು ಲೆಕ್ಕಾಚಾರ ಹಾಕಿದ್ದೇ ಆದರೆ ಸಗಣಿ ಎಂಬ ವಸ್ತು ಎಷ್ಟು ದುಬಾರಿ ಎಂಬುದು ಹಸು ಸಾಕುವವರೂ ಸೇರಿದಂತೆ ಉಚಿತವಾಗಿ ಸಗಣಿ ಕೇಳುವವರಿಗೂ ಮನವರಿಕೆಯಾಗುತ್ತದೆ.
- ಇಂದು ಒಂದು ರೋಲ್ ಹುಲ್ಲಿನ ಬೆಲೆ ಸ್ಥಳೀಯವಾಗಿ ಗದ್ದೆಗಳು ಇದ್ದರೆ ಸುಮಾರು 250 ರೂ.ಗಳು.
- ಸ್ವಲ್ಪ ದೂರದ ಊರಿಗೆ ಆದರೆ ಅದು ರೂ 300 ಆಗುತ್ತದೆ.
- ಎರಡು ರೋಲ್ ಹುಲ್ಲು ಸೇವನೆ ಮಾಡಿದಾಗ ಒಂದು ಬುಟ್ಟು ಸಗಣಿಯ ಉತ್ಪಾದನೆ ಸಾಧ್ಯ ಎಂದಾದರೆ ಸಗಣಿಯ ಉತ್ಪಾದನಾ ವೆಚ್ಚ ಎಷ್ಟು ಎಂದು ಆಂದಾಜು ಮಾಡಿ.
- ಹಾಗೆಯೇ ಹಸಿ ಹುಲ್ಲನ್ನು ಮೇವಾಗಿ ಕೊಡುವುದಾದರೆ ಪಶು ಒಂದಕ್ಕೆ ಇದನ್ನು ತಂದು ಹಾಕುವ ಖರ್ಚು, ಮತ್ತು ಅದನ್ನು ಬೆಳೆಸುವ ಖರ್ಚು ರೂ.500 ಕ್ಕಿಂತ ಹೆಚ್ಚು.
- ತೋಟದ ಕಳೆ ಸಸ್ಯಗಳನ್ನು ಹಸುರು ಮೇವಾಗಿ ಕೊಡುವುದೇ ಆದರೆ ಅದನ್ನು ತರುವ ಖರ್ಚು ಲೆಕ್ಕಾಚಾರ ಹಾಕಿದರೆ ಒಂದು ಬುಟ್ಟಿ ಸಗಣಿಯ ಉತ್ಪಾದನೆಗೆ ರೂ. 1000 ತನಕವೂ ಬರಬಹುದು.
- ಒಬ್ಬ ಕೆಲಸದವರ ದಿನದ ಹಸಿ ಹುಲ್ಲು ಕೀಳುವ ಸಾಮರ್ಥ್ಯ ಕೇವಲ 50-60 ಕಿಲೊ ದಷ್ಟು ಮಾತ್ರ.
- ಮನೆಯವರೇ ಹುಲ್ಲು ಮಾಡುವುದಾದರೂ ಉಳಿದ ಕೆಲಸಗಳ ಜೊತೆಗೆ ಮಾಡುವಾಗ ಅದು ಸಹ 50-60 ಕಿಲೋ ಮೀರುವುದಿಲ್ಲ.
- ಇಷ್ಟಕ್ಕೆ ಒಬ್ಬ ಆಳಿಗೆ 500 ರೂ ಸಂಬಳ ಕೊಡಬೇಕಾಗುತ್ತದೆ. ಈಗ ನಾವು ಹೇಳಿದ ಸಗಣಿಯ ಉತ್ಪಾದನಾ ವೆಚ್ಚದ ಕಥೆ ಮನವರಿಕೆಯಾಗಿರಬಹುದು!
ಸಗಣಿ ಎಂಬುದು ಬಹಳ ದುಬಾರಿ ವಸ್ತು. ಇದನ್ನು ಉಚಿತವಾಗಿ ಯಾರಿಗೂ ಕೊಡಬೇಡಿ. ಇದನ್ನು ಮೌಲ್ಯವರ್ಧನೆ ಮಾಡುವ ಬಗ್ಗೆ ಚಿಂತನೆ ನಡೆಸಿ. ಸಗಣಿಯನ್ನು ಭಸ್ಮ ತಯಾರಿಕೆಗೆ ಬಳಕೆ ಮಾಡಲಾಗುತ್ತದೆ. ಒಂದು ಉಂಡೆ ಭಸ್ಮ ತಯಾರಿಕೆಗೆ ಸುಮಾರು 5 ಕಿಲೋ ಹಸಿ ಸಗಣಿ ಬೇಕು. ಹಸಿ ಸಗಣಿಯನ್ನು ಬೆರಣಿ ಮಾಡಿ ಒಣಗಿಸಿ ಅದನ್ನು ಸುಟ್ಟು ಬೂದಿ ಮಾಡಿ, ಅ ಬೂದಿಯನ್ನು ಗೋ ಮೂತ್ರದಲ್ಲಿ ಕಲಸಿ ಅದನ್ನು ಉಂಡೆ ಮಾಡಿ ಮತ್ತೆ ಪುನಹ ಕೆಂಡದಲ್ಲಿ ಬಿಸಿ ಮಾಡುವ ಮೂಲಕ ತಯಾರಿಸಲಾಗುತ್ತದೆ.
ಸಗಣಿಯನ್ನು ಮೂಲವಸ್ತುವಾಗಿಟ್ಟುಕೊಂಡು ರಾಸಾಯನಿಕ ಮುಕ್ತ ಸೊಳ್ಳೆ ವಿಕರ್ಷಕವನ್ನು ತಯಾರಿಸಬಹುದು. ಕಾಡಿನಲ್ಲಿ ಇರುವ ದೂಪದ ಮರ (ಗಣಪತಿ ಕಾಯಿ ಮರ Vateria Indica) ದ ಅಂಟು ಹಾಗೂ ನೆಕ್ಕಿ ಸೊಪ್ಪನ್ನು ಸೇರಿಸಿ ತಯಾರಿಸಿದ ಸೊಳ್ಳೆ ವಿಕರ್ಷಕ ಆರೋಗ್ಯದಾಯಕ. ಅದೆಲ್ಲಾ ಕೆಲಸ ಅಪೇಕ್ಷಿಸುವಂತದ್ದು. ತಾಜಾ ಸಗಣಿಯನ್ನು ತಮ್ಮ ಕೃಷಿಗೆ ಸಾವಯವ ತ್ಯಾಜ್ಯಗಳ ಜೊತೆಗೆ ಮಿಶ್ರಣ ಮಾಡಿ ಬಳಕೆ ಮಾಡಿದರೆ ಅದರಲ್ಲಿ ಮಣ್ಣಿನ ಗುಣ ವೃದ್ದಿಯಾಗುತ್ತದೆ. ಜನ ಹಸು ಸಾಕುವುದನ್ನು ಬಿಡುತ್ತಿದ್ದಾರೆ. ಆದರೆ ಸಗಣಿ ಬೇಕು ಎನ್ನುತ್ತಾರೆ. ಅವರಿಗೆ ನೀವು ಉಚಿತವಾಗಿ ಸಗಣಿ ಕೊಟ್ಟದ್ದೇ ಆದರೆ ಅವರು ಮತ್ತೆ ಹಸು ಸಾಕಾಣಿಕೆ ಮಾಡಲಾರರು.