ಪ್ರಪಂಚದಲ್ಲಿ ಕೇವಲ 12 ಗಂಟೆ ಒಳಗೆ ನಾವು ಕೊಡುವ ಹಸಿ, ಒಣ ಹುಲ್ಲನ್ನು ತಿಂದು ಜೀರ್ಣಿಸಿ ಅದನ್ನು ಸಗಣಿ ರೂಪದ ಗೊಬ್ಬರವಾಗಿ ಬುಟ್ಟಿಯಷ್ಟು ಇದ್ದುದನ್ನು ಬೊಗಸೆ ಯಷ್ಟಕ್ಕೆ ಪರಿವರ್ತಿಸಿಕೊಡುವ ಒಂದು ಜೀವಂತ ಗೊಬ್ಬರ ಮಾಡುವ ಯಂತ್ರ ಇದ್ದರೆ ಅದು ಹಸು/ಎಮ್ಮೆ/ಆಡು, ಕುರಿ ಮಾತ್ರ. ಅದರಲ್ಲೂ ನಮ್ಮ ಸುತ್ತಮುತ್ತ ಅನಾದಿ ಕಾಲದಿಂದ ಸಾಕಣೆಯಲ್ಲಿದ್ದ ಸ್ಥಳೀಯ ಹಸುವಿನ ಈ ಸಗಣಿಯಲ್ಲೇ ಉಪಯೋಗ ಹೆಚ್ಚು.
ದೇಸೀ ಹಸು ಅಥವಾ ಸ್ಥಳೀಯ ನಾಟಿ ಹಸು ಅಥವಾ ಮೇಯಲು ಬಿಟ್ಟು ಸಾಕುವ ಹಸುಗಳ ಸಗಣಿಯನ್ನು ಬೇರೆ ಬೇರೆ ಉಪಯೋಗಕ್ಕೆ ಬಳಕೆ ಮಾಡಲು ಸಾಧ್ಯವಾಗುತ್ತದೆ. ನಮ್ಮಲ್ಲಿ ಒಂದು ಮಾತು ಇದೆ,”ಮುದುಕರಿಗೆ ಬಿಸಿನೀರು ಶಕ್ತಿ. ಗೆರಸಿಗೆ ಸಗಣಿ ಶಕ್ತಿ.” ಇದರ ವಿವರ ವಿಶಾಲ. ಗೆರಸಿ ಎಂದರೆ ಆಹಾರ ಪದಾರ್ಥಗಳನ್ನು ಗೇರುವ ಒಂದು ಸಾಧನ. ಇದನ್ನು ಬಿದಿರು ಅಥವಾ ಕೆಲವು ಬಳ್ಳಿಗಳನ್ನು ಸಿಗಿದು ಮಾಡುತ್ತಾರೆ. ಹಾಗೆಯೇ ಬೆತ್ತದ ಬುಟ್ಟಿ ಇವೆಲ್ಲಾ ವರ್ಷಾನು ವರ್ಷ ಬಾಳ್ವಿಕೆ ಬರುವಂತೆ ಮಾಡಬೇಕಾದರೆ ಅದಕ್ಕೆ ಕಾಲ ಕಾಲಕ್ಕೆ ಸಗಣಿಯ ಲೇಪನ ಮಾಡುತ್ತಿರಬೇಕು.
ದೇಸೀ ಹಸು ಎಂದಾಕ್ಷಣ ಅದು ಹಾಲು ಕೊಡುವುದು ಕಡಿಮೆ, ಹಾಲು ಕರೆಯಲು ಕಷ್ಟ ಕೊಡುತ್ತದೆ ಎಂದೆಲ್ಲಾ ಹೇಳುವವರೇ ಜಾಸ್ತಿ. ವಾಸ್ತವವಾಗಿ ಹಾಲು ಕೊಡುವುದು ಕಡಿಮೆ ನಿಜ. ಆದರೆ ಕೊಡುವ ಹಾಲು ಸತ್ವಪೂರ್ಣವಾಗಿರುತ್ತದೆ. ಒದರುವುದು ಇತ್ಯಾದಿ ತಂಟೆಗಳು ನಾವು ಅದರ ಜೊತೆಗೆ ಬೆರೆಯುವುದರ ಮೇಲೆ ನಿಂತಿದೆ. ಹಿಂದಿನ ಹಿರಿಯರು ಇದ್ದರೆ ಹೇಳಿಯಾರು, ಮೇಯಲು ಹೋದ ಹಸುಗಳನ್ನು ಹೆಸರು ಹೇಳಿ ಕರೆದರೆ ಹಟ್ಟಿಗೆ ಬಂದು ಕೂಡುತ್ತವೆ ಎಂದು. ರಾತ್ರೆಯಾದರೂ ಹಾಲು ಕೊಡುತ್ತದೆ.ಕಾಮಧೇನು ಎಂದು ಕರೆದದ್ದು ಇದಕ್ಕಾಗಿಯೇ. ಇಂತಹ ಹಸುಗಳು ಮೇಯಲು ಹೋಗುವ ಸ್ಥಳದಲ್ಲಿ ತಿನ್ನುವ ವೈವಿಧ್ಯಮತವಾದ ಆಹಾರ ವಸ್ತುಗಳೇ ಆ ಹಸುವಿನ ಸಗಣಿಯಲ್ಲಿ ಇರುವ ಶಕ್ತಿ. ದೇಸೀ ಹಸುವಿನ ಸಗಣಿ ನೆಲ ಸಾರಿಸಲು ಬಳಸುವುದು ಯಾಕೆಂದರೆ ಅದರಲ್ಲಿ ಉಪಕಾರೀ ಬ್ಯಾಕ್ಟೀರಿಯಾಗಳು ಇವೆ ಎಂಬ ಕಾರಣಕ್ಕೆ. ದೇಸೀ ಹಸು ಅಥವಾ ಸ್ಥಳೀಯ ಹಸುವಿನ ಸಗಣಿ ಸಂಪೂರ್ಣವಾಗಿ ಮೆಲುಕು ಹಾಕಿ ಜೀರ್ಣಕ್ರಿಯೆಗೆ ಒಳಪಟ್ಟ ಕಾರಣ ಅದರಲ್ಲಿ ಕಣಗಳು ತೀರಾ ಸಣ್ಣದಾಗಿ ಅದು ನೆಲಕ್ಕೆ ಲೇಪಿಸಿದಾಗ ಚೆನ್ನಾಗಿ ಅಂಟಿಕೊಂಡು ತುಂಬಾ ಸಮಯದ ತನಕ ಉಳಿಯುತ್ತದೆ. ಇಂತಹ ಹಲವಾರು ಉಪಯೋಗಗಳು ಹಾಗೂ ಬಳಕೆಗಳ ಬಗ್ಗೆ ಇಲ್ಲಿ ವಿವರವಾಗಿ ತಿಳಿಯೋಣ.
ಸ್ಥಳೀಯ ಹಸುಗಳ ವಿಶೇಷ:
- ಸ್ಥಳೀಯ ಹಸುಗಳ ವಿಶೇಷ ಎಂದರೆ ಅವುಗಳ ಬಾಯಿ ಒಳ್ಳೆಯದು.
- ನೀವು ಏನನ್ನು ಕೊಟ್ಟರೂ ತಿನ್ನುತ್ತವೆ. ಸೊಪ್ಪು ಸದೆಗಳನ್ನೂ ತಿನ್ನುತ್ತವೆ.
- ಎಲ್ಲಾ ನಮೂನೆಯ ಹಸಿರು ಕುಡಿಗಳನ್ನೂ ತಿನ್ನುತ್ತವೆ.
- ತಿನ್ನಬಾರದು ಎಂಬುದಿದ್ದರೆ ರಾಶಿಯೊಡನೆ ತಪ್ಪಿ ಬಂದರೂ ಅವು ತಿನ್ನುವುದಿಲ್ಲ.
- ಇತ್ತೀಚೆಗೆ ಹುಲ್ಲು ಕೊಯ್ಯುವವ ಅನುಭವಿಗಳು ಕಡಿಮೆಯಾಗಿದ್ದು, ಹುಲ್ಲು ಕೆತ್ತುವುದು,(ಸವರುವುದು) ಮಾಡುವುದೇ ಹೆಚ್ಚು.
- ಆಗ ಎಲ್ಲಾ ಕಸಕಡ್ಡಿಗಳು, ಕೆಸು ಎಲೆಗಳು ,ಜೊತೆಗೆ ಪ್ಲಾಸ್ಟಿಕ್ ಗಳು ಹಗ್ಗಗಳು ಏನಿದ್ದರೂ ಜೊತೆಗೇ ಬರುತ್ತವೆ.
- ಸ್ಥಳೀಯ ಹಸುಗಳು ಅದನ್ನು ತಿನ್ನುವಾಗ ಬೇಡದ್ದನ್ನು ಬಿಟ್ಟು ಬೇಕಾದದದ್ದನ್ನು ಮಾತ್ರ ತಿನ್ನುತ್ತವೆ.
- ರಸ್ತೆ ಬದಿಯಯಲ್ಲಿ ಸುತ್ತಾಡುವ ಹಸುಗಳು ಅವು ಸ್ಥಳೀಯವೇ ಆಗಿದ್ದರೆ ಅವು ಆಯ್ದು ಆಹಾರ ತಿನ್ನುತ್ತವೆ.
- ಇದು ಅವುಗಳ ಜೀನ್ ಗುಣ.ತರಬೇತಿ ಕೊಟ್ಟಲ್ಲಿ ನಿಮ್ಮ ಕಷ್ಟಗಳನ್ನೂ ಅವು ಅರ್ಥ ಮಾಡಿಕೊಳ್ಳುತ್ತವೆ.
- ಒಂದು ಸ್ಥಳೀಯ ಹಸು ಎರಡು ವರ್ಷ ತನಕವೂ ಹಾಲು ಕೊಡುತ್ತಾ ಸಾಕಿದವನಿಗೆ ಕೃತಜ್ಞವಾಗಿರುತ್ತವೆ.
- ಕಡಿಮೆ ಆಹಾರ ಕೊಟ್ಟರೂ ಹೊಂದಿಕೊಳ್ಳುತ್ತವೆ. ಒಂದು ವೇಳೆ ನಿಮಗೆ ಕರೆಯಲು ಅಸಾಧ್ಯವಾದರೆ ಕರು ಹಾಲು ತಿನ್ನುತ್ತದೆ.
- ಯಾವುದೇ ರೋಗ ರುಜಿನಗಳಿಲ್ಲ. ಪಶು ವೈದ್ಯರ ಸಹವಾಸವೇ ಬೇಡ.
- ಇಂತಹ ಜೀನ್ ಹೊಂದಿದ ಹಸು ನಿಜಕ್ಕೂ ಕಾಮಧೇನು.
- ಸುಮಾರಾಗಿ ಸ್ಥಳೀಯ ಹಸುಗಳಿಗೆ ಮಿಶ್ರ ತಳಿಯ ಕೃತಕ ಗರ್ಭಧಾರಣೆ ಮಾಡಿಸಿದರೂ ಈ ಹುಟ್ಟುಗುಣ ಇದ್ದೇ ಇರುತ್ತದೆ.
ಹಸುವಿನ ಸಗಣಿಯಿಂದ ರೋಗ ಶಮನ:
- ಹಸುವಿನ ಸಗಣಿಯನ್ನು ಅಥವಾ ಸಗಣಿ ಒಳಗೊಂಡ ಕೊಟ್ಟಿಗೆ ಗೊಬ್ಬರವನ್ನು ಬೆಳೆಗಳಿಗೆ ಬಳಸಿದಾಗ ರೋಗ ನಿರೋಧಕ ಶಕ್ತಿ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗುತ್ತದೆ.
- ಕಾರಣ ಹಸುಗಳಿಗೆ ವೈವಿಧ್ಯಮಯವಾದ ಹಸಿ ಹುಲ್ಲು ತಿನ್ನಿಸಲಾಗುತ್ತದೆ.
- ರೈತರು ಸಾಕುವ ಹಸುಗಳಿಗೆ ಹೊಲದಲ್ಲಿ ಬೆಳೆಯುವ ಹುಲ್ಲು, ಹಾಗೂ ಕೆಲವು ಬೆಳೆ ಉಳಿಕೆಗಳನ್ನು ತಿನ್ನಿಸಿದಾಗ ಅದರಲ್ಲಿ ಒಂದೆಲಗ, ಭದ್ರಮುಷ್ಟಿ, ನೆಲನೆಲ್ಲಿ, ಉತ್ತರಣೆ (ಅಪಾಮಾರ್ಗ) ಮುಟ್ಟಿದರೆ ಮುನಿ, ಹೀಗೆ ಹಲವಾರು ಬಗೆಯ ಮೂಲಿಕಾ ಗಿಡಗಳು ಇರುತ್ತವೆ,
- ಇವೆಲ್ಲವನ್ನೂ ಒಟ್ಟಿಗೆ ಸೇರಿಸಿ ತಿಂದಾಗ ಆ ಹಸುವಿಗೆ ರೋಗ ನಿರೋಧಕ ಶಕ್ತಿ ಸಹಜವಾಗಿ ಬರುತ್ತದೆ.
- ಆದು ತಿಂದ ಆಹಾರದಲ್ಲಿ ಸ್ವಲ್ಪ ತನ್ನ ದೇಹಕ್ಕೆ ಬಳಕೆಯಾಗಿ ಉಳಿದವು ಮಲ ಮೂತ್ರದ ಮೂಲಕ ಹೊರ ಹಾಕುತ್ತದೆ.
- ಇದರಲ್ಲಿ ಆ ರೋಗ ನಿರೋಧಕ ಶಕ್ತಿಯ ಗುಣ ಇರುವ ಕಾರಣ ಅದನ್ನು ಬಳಸಿದ ಬೆಳೆಗಳಿಗೂ ಅಲ್ಪ ಸ್ವಲ್ಪ ರೋಗ ನಿರೋಧಕ ಶಕ್ತಿ ಬರುತ್ತದೆ.
- ವೈಜ್ಞಾನಿಕವಾಗಿ ಹೇಳುವುದಿದ್ದರೆ ಈ ಸಗಣಿ, ಹಾಗೂ ಹಸುವಿನ ಕಾಲ ಬುಡಕ್ಕೆ ಹಾಕಿದ ಸೊಪ್ಪು ಸದೆಗಳಲ್ಲಿ ಹ್ಯೂಮಸ್ ಅಂಶ ಹೆಚ್ಚಳಾಗಿ ಅಲ್ಲಿ ಮಣ್ಣು ಜನ್ಯ ಉಪಕಾರಿ ಬ್ಯಾಕ್ಟೀರಿಯಾಗಳ,ಶಿಲೀಂದ್ರಗಳು ಅಭಿವೃದ್ದಿಯಾಗಿ ಅವು ಸಸ್ಯಕ್ಕೆ ರಕ್ಷೆಯನ್ನು ಕೊಡುತ್ತವೆ.
ಹುಲ್ಲು ಇತ್ಯಾದಿ ಕತ್ತರಿಸುವಾಗ ಕತ್ತಿ ತಾಗಿದರೆ ಆ ಭಾಗಕ್ಕೆ ಸಗಣಿಯ ಲೇಪನ ಮಾಡಿದರೆ ರಕ್ತ ಒಸರುವುದು ನಿಲ್ಲುತ್ತದೆ. ಗಾಯ ಬೇಗ ಗುಣವಾಗುತ್ತದೆ. ಸಗಣಿ, ಮತ್ತು ಮೂತ್ರಕ್ಕೆ ವಿಶೇಷ ಶಕ್ತಿ ಇದೆ ಎಂಬುದನ್ನು ಅರಿತೇ ನಮ್ಮ ಪೂರ್ವಜರು ಇದನ್ನು ಪಂಚಗ್ವ್ಯ ಎಂಬ ತಯಾರಿಕೆಗೆ ಬಳಸುವುದನ್ನು ಪ್ರಾರಂಭಿಸಿದ್ದರು. ಆರೋಗ್ಯವಂತ ಹಸುವಿನ ಸಗಣಿಯನ್ನು ಕೈಯಲ್ಲಿ ಮುಟ್ಟಿದರೆ ಕೈಗೆ ತಾಗಿದ್ದೂ ಗೊತ್ತಾಗದು. ವಾಸನೆಯೂ ಬಾರದು. ಇದು ನಾವು ಸಾಕುವುದರಲ್ಲಿ ಇರುವುದು.
ಎಲ್ಲೆಲ್ಲಿ ಬಳಕೆ ಮಾಡಲಾಗುತ್ತದೆ:
- ತೀವ್ರ ತರದ ರೋಗಗಳಲ್ಲದಿದ್ದರೂ ಸಾಮಾನ್ಯ ರೋಗಗಳ ಹರಡುವಿಕೆ ತಡೆಗೆ ಸಗಣಿ ಒಂದು ಔಷಧಿ ಎನ್ನಬಹುದು.
- ಮರಮಟ್ಟುಗಳ ಗೆಲ್ಲು ಕತ್ತರಿಸಿ ಆ ಭಾಗಕ್ಕೆ ಶಿಲೀಂದ್ರ ಸೋಂಕು ಆಗದಂತೆ ತಡೆಯಲು ಕಡಿದ ಭಾಗಕ್ಕೆ ಸಗಣ್ಯ ಲೇಪನ ಮಾಡಿದರೆ ಬೇರೆ ಯಾವ ಶಿಲೀಂದ್ರ ನಾಶಕದ ಅಗತ್ಯ ಇಲ್ಲ.
- ಗೆಲ್ಲುಗಳನ್ನು ಬೇರು ಬರಿಸಿ ಸಸಿ ಮಾಡುವಾಗ ಕಡಿದ ತುದಿ ಭಾಗಕ್ಕೆ ಸಗಣಿಯನ್ನು ಸ್ವಲ್ಪ ಮೆತ್ತುವುದರಿಂದ ಆ ಭಾಗ ಕೊಳೆಯುವುದನ್ನು ತಡೆಯಬಹುದು.
- ಯಾವುದಾದರೂ ಗೆಲ್ಲು ಸಿಗಿದುಕೊಂಡಾಗ ಅದನ್ನು ಒಟ್ಟು ಸೇರಿಸಿ ಕಟ್ಟುವಾಗ ಸಗಣಿಯ ಲೇಪನ ಮಾಡಿದರೆ ಅಲ್ಲಿ ಶಿಲೀಂದ್ರ ಸೋಂಕು ಉಂಟಾಗುವುದಿಲ್ಲ. ಆ ಭಾಗ ಬೇಗ ಕೂಡಿಕೊಳ್ಳುತ್ತದೆ.
- ಕೆಲವು ಸಸ್ಯಗಳ ಪುನಃಶ್ಚೇತನ ಮಾಡಬೇಕಾಗುತ್ತದೆ. ಆ ಸಮಯದಲ್ಲಿ ಕತ್ತರಿಸಿದ ಭಾಗಕ್ಕೆ ಸಗಣಿಯ ಲೇಪನ ಮಾಡುವುದರಿಂದ ಅಲ್ಲಿ ಕೊಳೆಯುವಿಕೆ ತಡೆಯಲ್ಪಡುತ್ತದೆ.
- ಗಡ್ಡೆ ಗೆಣಸುಗಳಾದ ಕೆಸುವಿನ ಗಡ್ಡೆ, ಸುವರ್ಣ ಗಡ್ಡೆ ಇತ್ಯಾದಿಗಳಿಗೆ ಸಗಣಿಯ ಲೇಪನ ಮಾಡಿ ದಾಸ್ತಾನು ಇಟ್ಟಾಗ ಅದು ಕೊಳೆಯುವ ಸಾಧ್ಯತೆ ಇರುವುದಿಲ್ಲ.
- ಸಸ್ಯವನ್ನು ತೆಗೆದು ಒಂದು ಎರಡು ದಿನ ನೆಡಲು ವಿಳಂಬವಾಗುವುದಿದ್ದರೆ ಅದರ ಬೇರಿನ ಭಾಗವನ್ನು ಸಗಣಿ ದ್ರಾವಣದಲ್ಲಿ ಅದ್ದಿ ಇಡುವುದರಿಂದ ಅದು ಬಾಡಿ ಹೋಗುವುದಿಲ್ಲ.
- ನೆಲಕ್ಕೆ ಸಗಣಿ ಸಾರಿಸುವುದರಿಂದ ನೆಲದಲ್ಲಿ ಇರುವೆ ಇತ್ಯಾದಿ ಬರುವುದು ಕಡಿಮೆ ಎನ್ನುತ್ತಾರೆ.
- ಹಾಗೆಯೇ ಈ ಸಗಣಿಗೆ ಅರಶಿನ ಸೇರಿಸುವ ಕ್ರಮ ತಮಿಳುನಾಡಿನ ಕೆಲವು ಕಡೆ ಕಾಣಸಿಗುತ್ತದೆ.
- ತೆಂಗಿನ ಮರದ ಕಾಂಡದ ರಸ ಸೋರುವ ಸಮಸ್ಯೆ ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ರಸ ಸೋರುವ ಭಾಗಕ್ಕೆ ಸಗಣಿಯ ಲೇಪನ ಮಾಡುವುದರಿಂದ ಶಿಲೀಂದ್ರ ಹರಡುವುದು ತಪ್ಪುತ್ತದೆ. ರಸ ಸೋರುವಾಗ ಅದರ ವಾಸನೆಗೆ ಕೆಲವು ವಾಹಕ ಕೀಟಗಳು ಬರುತ್ತವೆ. ಆ ಕೀಟಗಳಿಗೆ ರಸದ ವಾಸನೆ ಸಿಗದಂತೆ ಸಗಣಿ ರಕ್ಷಣೆ ಕೊಡುತ್ತದೆ.
- ಸಗಣಿಯಲ್ಲಿ ಬೀಜವನ್ನು ಬಿತ್ತಿದರೆ ಅದರ ಮೊಳಕೆ ಸಧೃಢವಾಗಿ ಬರುತ್ತದೆ. ಹಸುಗಳು ಯಾವುದಾದರೂ ಹಣ್ಣು ತರಕಾರಿ ತಿಂದು ಸಗಣಿಯ ಮೂಲಕ ಹೊರ ಹಾಕಿದಾಗ ಅದು ಬೀಜೋಪಚಾರಕ್ಕೆ ಒಳಗಾಗಿ ಚೆನ್ನಾಗಿ ಮೊಳಕೆ ಒಡೆಯುತ್ತದೆ.
- ಕೊಳೆಯದೆ ಇರುವ ಸಾವಯವ ವಸ್ತುಗಳ ಜೊತೆಗೆ ಸಗಣಿಯನ್ನು ಸೇರಿಸಿದಾಗ ಅದನ್ನು ಕೊಳೆಯುವಂತೆ ಮಾಡಲು ಇದು ಸಹಕರಿಸುತ್ತದೆ.
- ನಾವು ಈಗ ಕೃಷಿಯಲ್ಲಿ ಬಳಕೆ ಮಾಡುತ್ತಿರುವ ಬಹುತೇಕ ಸೂಕ್ಷ್ಮಾಣು ಜೀವಿಗಳು ಬದುಕಿ ಉಳಿಯಲು ಸಗಣಿ ಮಿಶ್ರಿತ ಸಾವಯವ ಗೊಬ್ಬರ ಮೂಲಾಧಾರ.
ದೇಸೀ ಹಸು ಹಾಲು ಕೊಡುವುದು ಕಡಿಮೆ ಎಂದು ನಿರ್ಲಕ್ಷ್ಯ ಮಾಡಬೇಡಿ.ಇದರ ಬಹು ಉಪಯೋಗವನ್ನು ಈಗಾಗಲೇ ವಿಜ್ಞಾನವೂ ಕಂಡುಕೊಂಡು ವೇಸ್ಟ್ ಡೀಕಂಪೋಸರ್ (waste decomposer ) ಎಂಬ ಉತ್ಪನ್ನವನ್ನು ಬಿಡುಗಡೆ ಮಾಡಲಾಗಿದೆ. ಇದರ ಮೂಲಕ ಈಗಾಗಲೇ ಹ್ಯೂಮಿಕ್ ಆಮ್ಲ, ಗ್ರೋಥ್ ಪ್ರಮೋಟರ್ ಇತ್ಯಾದಿ ತಯಾರು ಮಾಡುವವರೂ ಇದ್ದಾರೆ. ( ಇವರ ಬಗ್ಗೆ ಲೇಖನ ಪ್ರಕಟಿಸುತ್ತೇವೆ)ಮುಂದಿನ ದಿನಗಳಲ್ಲಿ ನೈಸರ್ಗಿಕ ಮೂಲದ ಬೆಳೆ ಪೋಷಕಗಳು, ಮೂಲಿಕಾ ಔಷಧಿಗಳು ಸಹ ತಯಾರಾದರೂ ಅಚ್ಚರಿ ಇಲ್ಲ. ಹಾಗಾಗಿ ಸ್ಥಳೀಯ ಹಸುಗಳನ್ನು ಕಟುಕರಿಗೆ ಕೊಡಬೇಡಿ.ಒಂದೆರಡಾದರೂ ಸಾಕಿ. ಮನೆಯ ಅಕ್ಕಚ್ಚು ತ್ಯಾಜ್ಯಗಳು ಅವುಗಳಿಗೆ ಆಹಾರವಾಗುತ್ತದೆ.
ವೆಸ್ಟ್ ಡಿಕಾಂಪೋಸರ್ ಜೋತೆಗೆ ಸಗಣಿಯನ್ನು ಬಳಸಬಹುದೆ ತಿಳಿಸಿ