ಅಡಿಕೆ ಮಾರುಕಟ್ಟೆ  ಕೆಲವೇ ದಿನಗಳಲ್ಲಿ ತೇಜಿಯಾಗಲಿದೆ.

ಅಡಿಕೆ ಮಾರುಕಟ್ಟೆ ಕೆಲವೇ ದಿನಗಳಲ್ಲಿ ತೇಜಿಯಾಗಲಿದೆ.

ಅಡಿಕೆ ಅಥವಾ ಇನ್ಯಾವುದೇ ಮಾರುಕಟ್ಟೆ ಯಾವಾಗ  ತೇಜಿಯಾಗುತ್ತದೆ, ಯಾವಾಗ ಮಂದಿಯಾಗುತ್ತದೆ ಎಂದು ಯಾರೂ ಊಹಿಸಲೂ ಸಾಧ್ಯವಾಗಲಾರದು.  ಮಾರುಕಟ್ಟೆ ವ್ಯವಹಾರದಲ್ಲಿರುವವರ ಲೆಕ್ಕಾಚಾರಗಳೇ ಬೇರೆ, ಕೃಷಿಕರ ಊಹನೆಯೇ ಬೇರೆ. ಇವಕ್ಕೆರಡಕ್ಕೂ ಹೊಂದಾಣಿಕೆ ಆಗುವುದು ತುಂಬಾ ಕಷ್ಟ. ಈ ವರ್ಷ ನಮ್ಮ ರಾಜ್ಯದಲ್ಲಿ ಚುನಾವಣೆ ಇದ್ದರೂ ಸಹ ದರ ಎರುವ ಸಾಧ್ಯತೆ ಕಂಡು ಬರುತ್ತಿದೆ. ಈಗಾಗಲೇ ಇದರ ಸೂಚನೆ ದೊರೆತಿದೆ.

ಕಳೆದ ಒಂದು ವಾರದಿಂದ ಕೆಂಪಡಿಕೆ ಮಾರುಕಟ್ಟೆ ಮಲಗಿದ್ದುದು ಎದ್ದು  ನಿಂತಿದೆ. ಈ ಹಿಂದೆ ಎರಡು ತಿಂಗಳುಗಳ ಕಾಲ ಮಾರುಕಟ್ಟೆಯಲ್ಲಿ ಖರೀದಿದಾರರ ಉತ್ಸಾಹವೇ ಇರಲಿಲ್ಲ. ಒಂದೆರಡು ಖರೀದಿದಾರರು ಅಲ್ಪ ಸ್ವಲ್ಪ ಖರೀದಿ ನಡೆಸುತ್ತಿದ್ದರು.  ಹಾಗಾಗಿ ಗರಿಷ್ಟ ದರ 45,000 ಇತ್ತಾದರೂ ಸರಾಸರಿ 43,000 ದ ಆಸುಪಾಸಿನಲ್ಲೇ ಖರೀದಿ ನಡೆಯುತ್ತಿತ್ತು. ಈಗ ಒಂದೆರಡು ವಾರಗಳಿಂದ ಮತ್ತೆ ಮಾರುಕಟ್ಟೆ ಚುರುಕಾಗಿದೆ. ರಾಶಿ ಅಡಿಕೆ ಗರಿಷ್ಟ ಖರೀದಿ ದರ ಇನ್ನೇನು ಒಂದೆರಡು ದಿನಗಳಲ್ಲಿ 50,000 ತಲುಪಿದರೂ ಅಚ್ಚರಿ ಇಲ್ಲ. ಈಗಾಗಲೇ 48,000 ದ ಅಸುಪಾಸಿನಲ್ಲಿ  ಸರಾಸರಿ ದರ ಇದೆ. ಗರಿಷ್ಟ ದರ 49,600 ದಾಟಿದೆ. ಮಾರುಕಟ್ಟೆಯಲ್ಲಿ ಖರೀದಿದಾರರ ಉತ್ಸಾಹ ಇದೆ. ಬೇಡಿಕೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

 • ಇತ್ತ ಚಾಲಿ ಮಾರುಕಟ್ಟೆಯಲ್ಲಿಯೂ ತೇಜಿ ಆರಂಭವಾಗಿದೆ. ಭಾರೀ ಕುಸಿತ ಕಂಡಿದ್ದ, ಧಾರಣೆ ಮತ್ತೆ ಏರಿಕೆ ಪ್ರಾರಂಭವಾಗಿದೆ.  
 • ದೈತ್ಯ ಖರೀದಿದಾರರು ದಾಸ್ತಾನು ಇಟ್ಟಿದ್ದ ಅಡಿಕೆ ಮಾರಾಟವಾಗಲು ಪ್ರಾರಂಭವಾಗಿದೆ.
 • ಖರೀದಿ ಕೆಂದ್ರಗಳಲ್ಲಿ ದಾಸ್ತಾನಿಗೆ ಸ್ಥಳಾವಕಾಶ ಏರ್ಪಟ್ಟಿದೆ. ಹಾಗಾಗಿ ಖಾಸಗಿಯವರು ದಿನದಿಂದ ದಿನಕ್ಕೆ ಸ್ವಲ್ಪ ಸ್ವಲ್ಪ ಸ್ವಲ್ಪ ದರ ಏರಿಕೆ ಮಾಡುತ್ತಿದ್ದಾರೆ.
 • ಅದಕ್ಕನುಗುಣವಾಗಿ ಸಾಂಸ್ಥಿಕ ಖರೀದಿದಾರರೂ ಏರಿಕೆ ಮಾಡುತ್ತಿದ್ದಾರೆ.
 • ಬೆಳೆಗಾರರು ಏರಿಕೆ ಸೂಚನೆ ಕಂಡು ಬಂದ ತಕ್ಷಣ ಇನ್ನೂ ಏರಬಹುದು ಎಂದು ಮಾರಾಟವನ್ನು ನಿಲ್ಲಿಸಿದ್ದಾರೆ.

ಯಾವ ಕಾರಣಕ್ಕೆ ಬೆಲೆ ಏರಿದೆ:

ಚಾಲಿ ಅಡಿಕೆ
 • ಮುಖ್ಯವಾಗಿ ಬೆಲೆ ತೇಜಿಯಾಗಲು ಕಾರಣ ಸ್ಥಳೀಯ ವ್ಯಾಪಾರಿಗಳಿಗೆ ಉತ್ತರ ಭಾರತದ ಖರೀದಿದಾರರಿಂದ  ಹೆಚ್ಚಿದ ಬೇಡಿಕೆ.
 • ಇದು ಯಾವಾಗಲೂ ಹಾಗೆಯೇ. ನಿರಂತರ ಸ್ವಲ್ಪ ಪ್ರಮಾಣದಲ್ಲಿ ವ್ಯಾಪಾರ ನಡೆಯುತ್ತಾ ಇರುತ್ತದೆ.
 • ಹೆಚ್ಚಿನ ಬೇಡಿಕೆ ಬರುವುದು ಸ್ವಲ್ಪ ಸ್ವಲ್ಪ ವಿರಾಮದ ತರುವಾಯ. ಖರೀದಿದಾರರ ಸ್ಟಾಕು ಕಡಿಮೆಯಾದಾಗ ಸಹಜವಾಗಿ ಬೇಡಿಕೆ ಪ್ರಾರಂಭವಾಗುತ್ತದೆ.
 • ಎರಡು ಮೂರು ತಿಂಗಳಿಂದ ಉತ್ತರ ಭಾರತದ ಖರೀದಿದಾರರಿಂದ ಬೇಡಿಕೆ ಇಲ್ಲದೆ ಖರೀದಿಸಿದ ಸ್ಟಾಕು ಸ್ಥಳೀಯವಾಗಿಯೇ ದಾಸ್ತಾನು ಇತ್ತು.
 • ಸ್ಟಾಕ್ ಅನ್ನು ಬ್ಯಾಂಕ್ ಗೆ ಪ್ಲೆಡ್ಜ್ ಮಾಡಿ ಇರುವ ಹಣದಲ್ಲಿ ಕಡಿಮೆ ಬೆಲೆಗೆ ಅಲ್ಪ ಸ್ವಲ್ಪ ಖರೀದಿ ಮಾಡುತ್ತಿದ್ದರು.
 • ಈಗ ಬೇಡಿಕೆ ಬಂದ ಕಾರಣ ಸ್ಥಳೀಯ ಮಾರುಕಟ್ಟೆ ದರವನ್ನು ಏರಿಸಿ ತಮ್ಮ ಸ್ಟಾಕು ಕ್ಲೀಯರೆನ್ಸ್ ಮಾಡಲಾಗುತ್ತಿದೆ.
 • ಬೇಡಿಕೆ ಮುಂದುವರಿದರೆ ದರ ಏರುತ್ತಾ ಹೋಗುತ್ತದೆ. ಕಡಿಮೆಯಾದರೆ ದರ ಇಳಿಕೆಯೂ ಆಗಬಹುದು.
 • ಇನ್ನೊಂದು ಪ್ರಮುಖ ವಿಚಾರ ಈಗ ಚುನಾವಣೆ ಇರುವ ಕಾರಣ ದರ ಎರಿಕೆ  ಅಗದು ಎಂಬ ಲೆಕ್ಕಾಚಾರ ನಿಜವಲ್ಲ.
 • ಚುನಾವಣಾ ನೀತಿ ಸಂಹಿತೆಯಂತೆ ಕಪ್ಪು ಹಣದ ಚಲಾವಣೆ ಆಗುವುದಕ್ಕೆ ಅಡ್ಡಿಯಾಗುತ್ತದೆ, ಹಾಗಾಗಿ ಹಣದ ಕೊರತೆ ಉಂಟಾಗುತ್ತದೆ ದರ ಇಳಿಕೆಯಾಗುತ್ತದೆ ಎಂಬುದು ಹೆಚ್ಚಿನವರ ಊಹನೆ.
 • ಹಿಂದೆ ಇದು ಸರಿಯಾಗಿರಬಹುದು. ಆದರೆ ಈಗ ಸ್ಥಿತಿ ಸ್ವಲ್ಪ ಕಠಿಣವಾಗಿದೆ.
 • ಹೆಚ್ಚಿನ ವ್ಯಾಪಾರಿಗಳು ಈಗ ದೋ- ನಂಬರ್ ವ್ಯವಹಾರವನ್ನು ಕಡಿಮೆಮಾಡಿದ್ದಾರೆ.
 • ಇಂತಹ ವ್ಯವಹಾರ ಮಾಡಿ ಸಿಕ್ಕಿಬಿದ್ದರೆ ಉತ್ಪನ್ನದ ಮೌಲ್ಯಕ್ಕಿಂತ ಸ್ಠಳದಲ್ಲೇ ಹತ್ತು ಪಟ್ಟು ದಂಡ ವಿಧಿಸುವ ಮುಕ್ತ ಅವಕಾಶವನ್ನು ಸರಕಾರ ಅಧಿಕಾರಿಗಳಿಗೆ ನೀಡಿದೆ.
 • ಇದರ ಜೊತೆಗೆ ಕಳ್ಳ ವ್ಯವಹಾರವನ್ನು ಬಯಲಿಗೆಳೆದವರಿಗೆ ಪದೋನ್ನತಿ ಹಾಗೆಯೇ ಇನ್ ಸೆಂಟಿವ್ ಸಹ ಭಾರತ ಸರಕಾರ ನೀಡುತ್ತದೆ.
 • ಇದರಿಂದ  ಕಳ್ಳ ವ್ಯವಹಾರ ಕಡಿಮೆಯಾಗುತ್ತಿದೆ. ನೇರ ವ್ಯವಹಾರಕ್ಕೆ ಯಾವ ಚುನಾವಣೆಯೂ ಆಡ್ಡಿಯಾಗಲಾರದು.
 • ಇದೇ ಕಾರಣಕ್ಕೆ ದರ ಏರಿಕೆ ಆಗಿರುವ ಸಾಧ್ಯತೆ ಇದೆ.
 • ಮೂರನೆಯದಾಗಿ ಮಾರುಕಟ್ಟೆಯಲ್ಲಿ ಅಂಜಿಕೆಯ ವಾತಾವರಣವನ್ನು  ಸೃಷ್ಟಿಸಿ, ಕಡಿಮೆ ಬೆಲೆಗೆ ಖರೀದಿ ಮಾಡಲು ದರ ಇಳಿಸಲಾಗುತ್ತದೆ.
 • ಬೇಡಿಕೆ ಇಲ್ಲದ ಸ್ಥಿತಿಯನ್ನು ಉಂಟುಮಾಡಲಾಗುತ್ತದೆ. ದೊಡ್ಡ ಖರೀದಿದಾರರು ಅಧಿಕ ಪ್ರಮಾಣದಲ್ಲಿ ಸ್ಟಾಕ್ ಮಾಡುವುದೇ ಈ ಕಾರಣಕ್ಕೆ.
 • ಸ್ಟಾಕು ಹೆಚ್ಚಿಸಿಕೊಂಡಾಗ ಸ್ವಲ್ಪ ವಿರಾಮ ನೀಡಲಿಕ್ಕೆ ಆಗುತ್ತದೆ. ಸದ್ಯ ಮಾಲು ಬೇಡ ಎಂದು ಖರೀದಿದಾರರು ಹೇಳಿದರೆ  ಸ್ಥಳೀಯ ಮಾರುಕಟ್ಟೆ ವಿಚಲಿತವಾಗುತ್ತದೆ.
 • ಅಂಜಿಕೆಯ ವಾತಾವರಣ ಉಂಟಾಗುತ್ತದೆ. ಮಾಲು ರವಾನೆಯಾಗುತ್ತಿರುವ ಕಾರಣ ಸ್ಟಾಕು ಮುಗಿಯಲಾರಂಭಿಸಿದೆ. ಹಾಗಾಗಿ ಬೇಡಿಕೆ ಬರಲಾರಂಭಿಸಿದೆ.  
ಅಡಿಕೆ ಮಂಡಿಗಳಲ್ಲಿ ಖರೀದಿಯ ಭರಾಟೆ
ಅಡಿಕೆ ಮಂಡಿಗಳಲ್ಲಿ ಖರೀದಿಯ ಭರಾಟೆ

ಮುಂದೆ ಏನಾಗಬಹುದು?

 • ಈ ಬೆಲೆ ಏರಿಕೆಗೆ ತುದಿ ಎಲ್ಲಿ. ಎಲ್ಲಿತನಕ ದರ ಏರಿಕೆಯಾಗಬಹುದು? ಎಷ್ಟು ಸಮಯದ ತನಕ ಈ ದರ ಮುಂದುವರಿಯಬಹುದು ಇದು ನಮ್ಮೆಲ್ಲರ ಪ್ರಶ್ಣೆ.
 • ಇದಕ್ಕೆ ಉತ್ತರ ಬಹುಶಃ ಕಷ್ಟ.
 • ಆದರೆ ವ್ಯಾಪಾರಸ್ಥರ ಸ್ಟಾಕು ಕ್ಲೀಯರ್ ಆಗುವ ತನಕ ಹಾಗೂ ಉತ್ತರ ಭಾರತದ ಖರೀದಿದಾರರಿಗೆ  ಎರಡು ಮೂರು ತಿಂಗಳಿಗೆ ಬೇಕಾಗುವಷ್ಟು ಸ್ಟಾಕು ಆಗುವ ತನಕ ದರ ಏರಿಕೆ ಆಗುತ್ತ ಇರುತ್ತದೆ.
 • ಆ ನಂತರ ದರ ಇಳಿಕೆ ಅಥವಾ ಏರಿಕೆ ಆಗದೆ ಹಾಗೆಯೇ ಇರುತ್ತದೆ.
 • ಬೇಡಿಕೆ ಕಡಿಮೆಯಾದಾಗಾಗ ಗುಣಮಟ್ಟಕ್ಕೆ ಪ್ರಾತಿನಿಧ್ಯ ಬರುತ್ತದೆ.
 • ಸ್ಥಳೀಯ ಖರೀದಿದಾರರು ಒಳ್ಳೆಯದಿದ್ದರೆ ಈ ದರ ಮತ್ತೆ ಮಾಲು ನೋಡಿ ದರ ಎಂದು ಹೇಳುವ ಸ್ಥಿತಿ ಬಂದಾಗ ದರ ಇಳಿಕೆಯಾಗುವ ಮುನ್ಸೂಚನೆ.
 • ಈಗ ಮಾರುಕಟ್ಟೆಯಲ್ಲಿ ಅಲ್ಪ ಸ್ವಲ್ಪ ಗುಣಮಟ್ಟ ಬೇಕಾಗುತ್ತದೆಯಾದರೂ ಕೆಲವೇ ಸಮಯದಲ್ಲಿ ಈ ಪ್ರಾತಿನಿದ್ಯ ಕಡಿಮೆಯಾಗಬಹುದು.
 • ಈ ತನಕದ  ಮಾರುಕಟ್ಟೆ ಸ್ಥಿತಿಯಂತೆ ಒಂದೆರಡು ತಿಂಗಳು ಏರಿಕೆ ಆಗುತ್ತಾ ಮುಂದುವರಿಯುವುದು ಮತ್ತೆ ಎರಡು ಮೂರು ತಿಂಗಳು ಇಳಿಕೆ.
 • ಈ ರೀತಿಯಾಗಿ  ವ್ಯಾಪಾರಿ ವರ್ತುಲ ಮುಂದುವರಿಯುತ್ತಿದೆ.
 • ಹಾಗಾಗಿ ಈ ದರ ಏರಿಕೆ ಈಗ ಪ್ರಾರಂಭವಾಗಿದ್ದು,  ಇನ್ನು ಒಂದು ಒಂದುವರೆ ತಿಂಗಳ ಕಾಲ ಮುಂದುವರಿಯಬಹುದು.
 • ಮಳೆಗಾಲದಲ್ಲಿ ಕೆಲವು ಸಮಯ ತನಕ ಇಳಿಕೆಯಾಗಿ  ಮತ್ತೆ ಏರಿಕೆಯಾಗಬಹುದು.

ಕಳೆದ ವರ್ಷ ಮಳೆಯ ಕಾರಣದಿಂದ ಅಡಿಕೆಯ ಗುಣಮಟ್ಟ ರೈತರ ಮಟ್ಟದಲ್ಲೇ ಹಾಳಾಗಿದೆ. ಮತ್ತೆ ಅದು ಸ್ವಲ್ಪ ವ್ಯಾಪಾರಿಗಳ ಕೈಯಲ್ಲಿ ಹಾಳಾಯಿತು. ಹಾಗಾಗಿ ದರ ಕುಸಿತ ಉಂಟಾಯಿತು. ಈ ವರ್ಷ ಅಡಿಕ್ಕೆ ಬೆಳೆಗಾರರಿಗೆ ಸಮರ್ಪಕವಾಗಿ ಅಡಿಕೆ ಒಣಗಿಸಲು ಯಾವುದೇ ಅಡ್ದಿ ಉಂಟಾಗಿಲ್ಲ. ಹೊಸ ಅಡಿಕೆಯ ಗುಣಮಟ್ಟ ಚೆನ್ನಾಗಿ ಒಣಗಿದ ಕಾರಣ ಹಾಳಾಗಿಲ್ಲ. ಆದ ಕಾರಣ ಅದಕ್ಕೆ ಹೊಸ ಅಡಿಕೆಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಬೆಲೆಯೂ ಹೆಚ್ಚಾಗಬಹುದು. ಹಳೆ ಅಡಿಕೆ ಹೊಸತಕ್ಕೆ ಹೆಚ್ಚಾದಂತೆ ಅದನ್ನು ಸ್ವಲ್ಪ ಸ್ವಲ್ಪ ದೂಡಿಕೊಂಡು ಹೋಗಬಹುದು ಅಷ್ಟೇ.

ಬೆಳೆಗಾರರು ಏನು ಮಾಡಬೇಕು:

 •  ಈಗಾಗಲೇ ಬಹಳಷ್ಟು ಬೆಳೆಗಾರರು ಹಣಕಾಸಿನ ಅಗತ್ಯಕ್ಕಾಗಿ ಅಡಿಕೆ ಮಾರಾಟ ಮಾಡಿದ್ದಿರಬಹುದು.
 • ಹೊಸ ಅಡಿಕೆ  ಹೆಚ್ಚಿನವರಲ್ಲಿ ದಾಸ್ತಾನು ಇದೆ. ಹಳತನ್ನು ಸಾಧ್ಯವಾದಷ್ಟು ಸ್ವಲ್ಪ ಸ್ವಲ್ಪವೇ ಮಾರಾಟ ಮಾಡುವುದು ಸೂಕ್ತ.
 • ಹೊಸತು ಮಾಲು ಸಿದ್ದವಾದಾಗ ಹಳೆಯ ಮಾಲನ್ನು ವಿಲೇವಾರಿ ಮಾಡಬೇಕು.
 • ಕೆಲವೊಂದು ಸಂಧರ್ಭಗಳಲ್ಲಿ  ಹಳೆಯ ಅಡಿಕೆಗೆ ಉಗ್ರಾಣ  ಕೀಟಗಳು ಬಾಧಿಸುವ ಸಾದ್ಯತೆ ಇರುತ್ತದೆ.
 • ಹಾಗೇನಾದರೂ ಆದರೆ  ಬಹಳ ಕಡಿಮೆ ದರಕ್ಕೆ ಮಾರಾಟ -ಮಾಡಬೇಕಾಗಬಹುದು.
 • ಕೇವಲ 7-8 % ಹೆಚ್ಚಿನ ಬೆಲೆಗೆ ( ಕ್ವಿಂಟಾಲಿಗೆ 2500-3000 ರೂ.) ಆಸೆ ಪಟ್ಟು ಬಹಳ ರಿಸ್ಕ್ ನಲ್ಲಿ ದಾಸ್ತಾನು ಇಡುವ ಬದಲಿಗೆ ನಗದೀಕರಣ ಮಾಡಿ  ಈಗಿನ ಬಡ್ಡಿ ದರದಲ್ಲಿ ಠೇವಣಿ ಇಟ್ಟರೂ ಅಷ್ಟು ಲಾಭ ಬರುತ್ತದೆ.

ಅಡಿಕೆ ಬೆಳೆ ವಿಸ್ತರಣೆ ಬಹಳಷ್ಟು ಆಗಿದೆ. ಇದಕ್ಕೆ ಬ್ರೇಕ್ ಹಾಕಲೆಂದೋ ಏನೋ ಈ ವರ್ಷ ಪ್ರಕೃತಿ ನೀರಿನ ಕೊರತೆಯನ್ನು ಸೃಷ್ಟಿಸಿದೆ. ಈ ವರ್ಷದಷ್ಟು ಕೊಳವೆ ಬಾವಿ ವೈಪಲ್ಯ ಈ ತನಕ ಆಗಿಲ್ಲ ಎನ್ನುತ್ತಾರೆ. ಹಾಗೆಯೇ ಈ ವರ್ಷ ಭಾರೀ ಪ್ರಮಾಣದಲ್ಲಿ ಕೊಳವೆ ಬಾವಿ ಕೊರೆಯಲ್ಪಡುತ್ತಿದೆ. ನೀರಿನ ಇಳುವರಿ ಭಾರೀ ಕಡಿಮೆಯಾಗಿದೆ. ಬಹಳಷ್ಟು ಅಡಿಕೆ ತೋಟಗಳು ಬಿಸಿಲಿನ ಝಳಕ್ಕೆ ಮತ್ತು  ನೀರಿನ ಅಭಾವಕ್ಕೆ ತತ್ತರಿಸಿ ಹೋಗಿದೆ. ಆದ ಕಾರಣ ಅಡಿಕೆ ಬೆಳೆ ವಿಸ್ತರಣೆ ಮಾರುಕಟ್ತೆಯ ಮೇಲೆ  ಸಧ್ಯಕ್ಕೆ ಅಂತಹ ಸಮಸ್ಯೆಯನ್ನು ಕೊಡಲಾರದು. ಬೆಳೆಗಾರರಿಗೆ ಆಸೆ ಇರಲಿ. ದುರಾಸೆ ಬೇಡ.  ಅಗತ್ಯಕ್ಕನುಗುಣವಾಗಿ ಮಾರಾಟ ಮಾಡುತ್ತಾ ಲಾಭ ಮಾಡಿಕೊಳ್ಳಿ.

Leave a Reply

Your email address will not be published. Required fields are marked *

error: Content is protected !!