ಅಡಿಕೆ ಮಾರುಕಟ್ಟೆಯಲ್ಲಿ ಭಾರೀ ತಲ್ಲಣಿಕೆ ಉಂಟಾಗಿದ್ದು, ವ್ಯಾಪಾರಿಗಳಿಗೇ ಅಂಜಿಕೆ ಹುಟ್ಟಿದೆ. ಎಲ್ಲಾ ಅಡಿಕೆ ವರ್ತಕರಿಗೂ ಮುಂದೇನಾಗುವುದೋ ಎಂಬ ಚಿಂತೆ ಉಂಟಾಗಿದೆ. ಇರುವ ದಾಸ್ತಾನನ್ನು ಹೇಗಾದರೂ ವಿಲೇವಾರಿ ಮಾಡುವ ಚಿಂತೆಯಲ್ಲಿದ್ದಾರೆ. ಖರೀದಿದಾರರು ಭಾರೀ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಧಾರಣೆ ಕುಸಿತವೂ ಆಗಬಹುದು. ಹೀಗೆಯೇ ಮುಂದುವರಿಯಲೂ ಬಹುದು.
ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಚೋಲ್ ಅಡಿಕೆ ಬೇಡ ಎಂಬ ಸ್ಥಿತಿ ಉಂಟಾಗಿ ಅಘೋಷಿತ ದರ ಕುಸಿತ ಉಂಟಾಗಿದೆ. ಖರೀದಿದಾರರಲ್ಲಿ ಭಾರೀ ಪ್ರಮಾಣದ ಸ್ಟಾಕು ಇದೆ ಎಂಬ ವರ್ತಮಾನ ಇದೆ. ಗೋಡೌನು, ಖರೀದಿ ಕೇಂದ್ರಗಳಲ್ಲಿ ಅಡಿಕೆ ಇಡಲು ಸ್ಥಳ ಇಲ್ಲದ ಸ್ಥಿತಿ ಉಂಟಾಗಿದೆ. ಬೆಳೆಗಾರರು ದುಂಬಾಲು ಬಿದ್ದು ಮಾರಾಟ ಮಾಡದಂತೆ ತಡೆಯಲು “ದರ ಎರಿಕೆಯಾಗುತ್ತದೆ. ಈಗ ಮಾರಬೇಡಿ. ಸ್ವಲ್ಪ ಕಾಯಿರಿ” ಎಂಬ ಪತ್ರಿಕಾ ಹೇಳಿಕೆ ಬರುವುದೊಂದೇ ಬಾಕಿ. ಮಾರುಕಟ್ಟೆಯಲ್ಲಿ ಪ್ರಕಟವಾಗುವ ದರ ಪಟ್ಟಿ ಒಂದಾದರೆ ಕೊಳ್ಳುವ ದರವೇ ಬೇರೆ. ಖಾಸಗಿ ವರ್ತಕರು ಹಣ ಇಲ್ಲದೆ ಅಡಿಕೆ ಬೇಡ ಎನ್ನುವ ಸ್ಥಿತಿಯೂ ಬಂದಿದೆ.
ಹೊಸ ವರ್ಷ 2023 ರ ತಿಂಗಳ ಎರಡನೇ ವಾರದಲ್ಲಿ ಹೊಸ ಚಾಲಿಗೆ ರೂ.10 ಏರಿಕೆಯಾಯಿತು. ಹಾಗೆಯೇ ಹಳೆಯದಕ್ಕೂ ಈ ತಿಂಗಳಲ್ಲಿ ರೂ.10 ಏರಿಕೆಯಾಯಿತು. ಬೆಳೆಗಾರರು ಅಡಿಕೆಗೆ ಬೇಡಿಕೆ ಪ್ರಾರಂಭವಾಗಿದೆ. ಹಾಗಾಗಿ ದರ ಏರಿಕೆಯಾಗಿದೆ ಎಂದು ತಿಳಿದುಕೊಂಡರು. ಹಾಗೆಯೇ ಅಡಿಕೆ ಮಾರಾಟ ಮಾಡುವುದನ್ನು ಮುಂದೂಡಿದರು. ದರಪಟ್ಟಿ ಪ್ರಕಟಣೆಯಲ್ಲಿ ಮಾತ್ರ ದರ ಎರಿಕೆಯಾದದ್ದೇ ಹೊರತು ಕೊಳ್ಳುವುದಕ್ಕಲ್ಲ. ಶುಕ್ರವಾರ ಮೊದಲ್ಗೊಂಡು ದರ ಇಳಿಕೆಯಾಗಲಾರಂಭಿಸಿದೆ. ಸಹಕಾರೀ ದೈತ್ಯ ಸಂಸ್ಥೆ ದರ ಸ್ಥಿರತೆ ತರಲು ಹೆಣಗಾಡುತ್ತಿದೆ. ಖಾಸಗಿಯವರು ಹತ್ತಾರು ಅಡಿಕೆ ಕತ್ತರಿಸಿ ಮೂಸಿ ಬೇರೆ ವ್ಯಾಪಾರಿಗಳಲ್ಲಿಗೆ ಸಾಗಹಾಕುತ್ತಿದ್ದಾರೆ.
- ಹಿಂದೆ ಅಡಿಕೆ ಧಾರಣೆ ಏನಾಗಬಹುದು? ಚಾಲಿ ಅನಿಶ್ಚಿತ ಎಂದಿದ್ದೆವು. ಇಂದೂ ಅದನ್ನೇ ಹೇಳಬೇಕಾಗುತ್ತದೆ.
- ಹೊಸ ಚಾಲಿ ಖರೀದಿ ರೂ.370-370 ನಡೆಯುತ್ತಿದೆ. ಅಂತಹ ಗುಣಮಟ್ಟ ಇದ್ದರೆ 380-385 ತನಕ ಇದೆ.
- ಹಳೆ ಚಾಲಿ ದರ ರೂ. 500 ಘೋಷಣೆಗೆ ಮಾತ್ರ ಸರಾಸರಿ 475-480 ಮಾತ್ರ. ಖಾಸಗಿಯವರು ಇನ್ನೂ ರೂ.10 ಹಿಂದೆ ಇದ್ದಾರೆ.
- ಹಾಗಾಗಿ ಈ ದರ ಏರಿಕೆಯ ಒಳ ಮರ್ಮ ಏನೆಂದೇ ತಿಳಿಯುವುದಿಲ್ಲ.
- ಕೆಲವು ಮೂಲಗಳ ಪ್ರಕಾರ ಉತ್ತರ ಭಾರತದಿಂದ ಬೇಡಿಕೆ ಇಲ್ಲ. ಅದಕ್ಕಾಗಿ ಈ ಒಂದು ಗಿಮಿಕ್ ಎನ್ನಲಾಗುತ್ತಿದೆ.
- ಆ ಗಿಮಿಕ್ ಗೆ ಬಗ್ಗದ ಕಾರಣ ದಿನದಿಂದ ದಿನಕ್ಕೆ ಅಘೋಷಿತ ದರ ಕುಸಿತ ಉಂಟಾಗಿದೆ.
ಅಡಿಕೆ ದಾಸ್ತಾನು ಸಿಕ್ಕಾಪಟ್ಟೆ ಇದೆ:
- ಕೆಲವು ಮೂಲಗಳ ಪ್ರಕಾರ ಕಳೆದ ಮೂರು ತಿಂಗಳಿನಿಂದ ಉತ್ತರ ಭಾರತದಿಂದ ಚಾಲಿ ಅಡಿಕೆಗೆ ಭಾರೀ ಬೇಡಿಕೆ ಇಲ್ಲ ಎಂಬ ಸುದ್ದಿ ಇದೆ.
- ಹಾಗೆಂದು ಅಲ್ಪ ಸ್ವಲ್ಪ ಬೇಡಿಕೆ ಇರಬಹುದು. ಹಣ ಬರುವುದಿಲ್ಲ. ಒತ್ತಾಯದಲ್ಲಿ ಕೊಡುವ ಸ್ಥಿತಿ ಇದೆ.
- ಹಾಗಾಗಿ ಖಾಸಗಿಯವರು ಅಡಿಕೆ ಬರುವುದು ಕಡಿಮೆಯಾಗಲಿ ಎಂದು ದರ ಏರಿಕೆ ಮಾಡುತ್ತಿಲ್ಲ.
- ಸಾಂಸ್ಥಿಕ ಖರೀದಿದಾರರ ಬಳಿ 5 ಲಕ್ಷ ಚೀಲಕ್ಕೂ ಹೆಚ್ಚು ದಾಸ್ತಾನು ಇದೆಎಂಬ ಸುದ್ದಿ ಹರಿದಾಡುತ್ತಿದೆ.
- ಹಾಗೆಯೇ ಗಾರ್ಬಲಿಂಗ್ ಮಾಡುವವರಲ್ಲೂ ಇದೆ. ಅದಕ್ಕೆ ಪೂರಕವಾಗಿ ಖರೀದಿ ಕೇಂದ್ರಗಳಲ್ಲಿ ಚೀಲಗಳ ರಾಶಿ ಏರಿಕೆಯಾಗುತ್ತಿದೆಯೇ ಹೊರತು ಖಾಲಿಯಾಗುತ್ತಿಲ್ಲ!

ಮಾರುಕಟ್ಟೆಯಲ್ಲಿ ಸ್ಥಿತಿ ಹೇಗಿದೆ:
- ಕೆಲವರ ಪ್ರಕಾರ ಅಡಿಕೆ ಮಾರುಕಟ್ಟೆ ಎಂಬುದು ಸಂತೃಪ್ತ ಸ್ಥಿತಿಗೆ ಮುಟ್ಟಿಯಾಗಿದೆ ಎನ್ನುವವರಿದ್ದಾರೆ.
- ಅವರು ಹೇಳುವ ಮಾತಿನಲ್ಲೂ ಹುರುಳು ಇಲ್ಲದಿಲ್ಲ. ಅಡಿಕೆಗೆ ಈ ತನಕ ತಿಂದು ಉಗುಳುವ ಉಪಯೋಗ ಹೊರತಾಗಿ ಬೇರೆ ಯಾವ ಉಪಯೋಗವೂ ಇಲ್ಲ.
- ಹಾಗಿರುವಾಗ ಇಷ್ಟು ಬೆಲೆಯ ಅಡಿಕೆಯನ್ನು ಜನ ಎಷ್ಟು ಸಮಯದ ತನಕ ತಿನ್ನಬಹುದು?
- ಬೀಡಾಕ್ಕೆ 4-5 ರೂ ತನಕ ಜನ ಕೊಂಡು ತಿನ್ನಬಹುದು.
- ಅದಕ್ಕಿಂತ ಹೆಚ್ಚಾದರೆ ಸ್ವಲ್ಪ ಅಡಿಕೆ ವೀಳ್ಯದೆಲೆ,ಮುಂತಾದ ಕಚ್ಚಾ ಸಾಮಾಗ್ರಿಗಳನ್ನು ತಾವೇ ಇಟ್ಟುಕೊಂಡು ಬೀಡಾ ತಿನ್ನುತ್ತಾರೆ.
- ಆಗ ಅಡಿಕೆ ಮಾರಾಟದ ಒಂದು ಕೌಂಟರ್ ಇಲ್ಲದಾಗುತ್ತದೆ.
- ಕಳೆದ ಮೂರು ವರ್ಷಗಳಿಂದ ಅಡಿಕೆ ಧಾರಣೆ ಏರಿಕೆಯಾಗಲು ಕಾರಣವಾಗಿ ಕೊರೋನಾ – ಲಾಕ್ ಡೌನ್ ಅನ್ನು ಉಲ್ಲೇಖಿಸಲಾಗುತ್ತಿದೆ.
- ಆದರೆ ಕಳೆದ ವರ್ಷ ಕೊರೋನಾ- ಲಾಕ್ ಡೌನ್ ಇರಲೇ ಇಲ್ಲ.
- ಈಗ ಹರಿದಾಡುತ್ತಿರುವ ಸುದ್ದಿಯಾದ “ಗರಿಷ್ಟ ದಾಸ್ತಾನು” ಅಡಿಕೆ ಧಾರಣೆಯನ್ನು ಭಾರೀ ಅನಿಶ್ಚಿತತೆಯತ್ತ ಕೊಂಡೊಯ್ಯಲಿದೆ.
- ಹೆಚ್ಚಿನ ಅಡಿಕೆ ವ್ಯಾಪಾರಸ್ತರು ತಮ್ಮಲ್ಲಿರುವ ದಾಸ್ತಾನಿನ ಮೇಲೆ ಬ್ಯಾಂಕು ಗಳಿಂದ ಅಡಮಾನ ಸಾಲವನ್ನು ಪಡೆದು ವ್ಯವಹಾರ ಮಾಡುತ್ತಾರೆ.
- ಇದಕ್ಕೂ ಒಂದು ಮಿತಿ ಇರುತ್ತದೆ.ಒಂದು ವೇಳೆ ಇನ್ನು ಒಂದೆರಡು ವಾರದ ಅವಧಿಯಲ್ಲಿ ಅಡಿಕೆಗೆ ಬೇಡಿಕೆ ಬಾರದೇ ಇದ್ದರೆ ಮಾರುಕಟ್ಟೆ ಭಾರೀ ಹಿನ್ನಡೆ ಕಾಣಬಹುದು.
- ಈಗ ಬೇಡಿಕೆ ಇಲ್ಲದಿಲ್ಲ.ಆದರೆ ಅವರು ಕೇಳುವ ದರ ಇಲ್ಲಿ ಖರೀದಿ ದರಕ್ಕಿಂತ ಕಡಿಮೆಯಾಗಿದೆ.
- ಕೊನೆಗೆ ವಿಲೇವಾರಿ ಉದ್ದೇಶಕ್ಕೆ ಅವರ ಅಪೇಕ್ಷೆಯ ದರಕ್ಕೆ ಕೊಡಬೇಕಾಗಿ ಬಂದರೆ ಮಾತ್ರ ಧಾರಣೆ ಮತ್ತೆ ಭಾರೀ ಕುಸಿಯುವ ಸಾದ್ಯತೆ ಇದೆ.
ಅಡಿಕೆಗೆ ಈಗ ಇರುವ ದರ ವಾಸ್ತವಿಕ ದರ ಅಲ್ಲ:
- ಅಡಿಕೆ ಬೆಳೆಗಾರರು ಹುಟ್ಟು ಹಾಕಿದ ಅಡಿಕೆ ಮಾರಾಟ ಮತ್ತು ಸಂಸ್ಕರಣಾ ಸಂಸ್ಥೆಯ ಮೂಲೋದ್ಧೇಶವೇ ಬೆಲೆ ಸ್ಥಿರತೆಯನ್ನು ಕಾಪಾಡುವುದು.
- ಇದಕ್ಕೆ ಬದ್ಧರಾಗಿ ಈಗ ದರ ಸ್ಥಿರತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ.
- ಒಂದು ವೇಳೆ ದರವನ್ನು ಸಂಸ್ಥೆಯೇ ಇಳಿಕೆ ಮಾಡಿದ್ದರೆ ಮಾರುಕಟ್ಟೆ ಅಲ್ಲೋಲಕಲ್ಲೋಲವಾಗುವ ಸಾಧ್ಯತೆ ಇತ್ತು.
- ಹಾಗೆಂದು ಇಳಿಕೆ ಮಾಡದೆ ಇರಲಿಕ್ಕೆ ಆಗುವುದಿಲ್ಲ.
- ಬೇಡಿಕೆ ಕಡಿಮೆ ಅಥವಾ ನಮ್ಮ ಬೆಲೆಗೆ ಖರೀದಿದಾರರು ಬಗ್ಗದೆ ಇದ್ದರೆ ದಾಸ್ತಾನು ಹೆಚ್ಚಳ ಮಾಡಲು ಅಸಾಧ್ಯವಾದಾಗ ದರ ಇಳಿಕೆ ಮಾಡಬೇಕಾಗುತ್ತದೆ.
- ಹೆಚ್ಚು ಹೆಚ್ಚು ದಾಸ್ತಾನು ಇಟ್ಟು ಕೊನೆಗೆ ಕಡಿಮೆ ಬೆಲೆಗೆ ಮಾರಾಟ ಮಾಡುವಂತಾದರೆ ನಷ್ಟವಾದರೆ ಅದರ ಜವಾಬ್ದಾರಿಯನ್ನೂ ಆಡಳಿತ ಮಂಡಳಿ ಹೊರಬೇಕಾಗುತ್ತದೆ.
- ಇದರ ನಂತರದ ಪರಿಣಾಮವೂ ಸಹ ದರ ಇಳಿಕೆಯೇ ಆಗಿರುತ್ತದೆ.
ದರ ಏರಬಹುದೇ?
- ಏರಿಕೆಯ ಸಾಧ್ಯತೆಯೂ ಇದೆ. ಇಳಿಕೆಯ ಸಾಧ್ಯತೆಯೂ ಸಮ ಸಮವಾಗಿ ಇದೆ.
- ಒಂದು ವೇಳೆ ಇಲ್ಲಿನ ವ್ಯಾಪಾರಿಗಳ ದರಕ್ಕೆ ಒಪ್ಪಿ ಖರೀದಿ ನಡೆದರೆ ದರ ಎರಿಕೆಯಾಗುತ್ತದೆ ಅಥವಾ ಇದೇ ರೀತಿ ಸ್ಥಿರವಾಗುತ್ತದೆ.
- ಒಂದು ವೇಳೆ ಖರೀದಿದಾರರು ದರ ಏರಿಕೆಗೆ ಒಪ್ಪದೆ ಪಟ್ಟು ಹಿಡಿದರೆ ಇಳಿಕೆ ಸಾಧ್ಯತೆ ಹೆಚ್ಚು.
- ಹಾಗೆಂದು ಗ್ರಾಹಕರಿಗೆ ಪೂರೈಕೆ ಕಡಿಮೆಯಾದಾಗ ಖರೀದಿದಾರರು ಹೊಂದಾಣಿಕೆಗೆ ಬರುವ ಸಾದ್ಯತೆಯೂ ಇಲ್ಲದಿಲ್ಲ.
- ಮಾಧ್ಯಮಗಳು ನಿಖರ ಮಾಹಿತಿ ಇಲ್ಲದೆ ಅಷ್ಟು ಇಷ್ಟು ಆಮದು ಆಗಿದೆ ಎಂಬುದನ್ನು ಪ್ರಕಟಿಸದೆ ಇದ್ದರೆ ಮಾರುಕಟ್ಟೆ ಸ್ಥಿತರೆಯಾದರೂ ಆಗಬಹುದು.
- ಭಾರತ ಬಿಟ್ಟು ಉಳಿದ ದೇಶಗಳಲ್ಲಿ ಒಟ್ಟು ಇರುವ ಅಡಿಕೆ ಬೆಳೆ ಕೇವಲ 15% ಮಾತ್ರ. ಅಲ್ಲೆಲ್ಲಾ ಅಡಿಕೆಯ ಬಳಕೆಯೂ ಇದೆ.
- ಹಾಗಾಗಿ ಆಮದು ಅಡಿಕೆ ಧಾರಣೆಯ ಮೇಲೆ ಭಾರೀ ಪರಿಣಾಮವನ್ನು ಬೀರುವುದೇ ಇಲ್ಲ.
- ಯಾರೋ ಒಬ್ಬರು ಪತ್ರಿಕಾ ಪ್ರಕಟಣೆ ಕೊಟ್ಟರೆ ದರ ಏರಿಕೆಯಾಗುವುದು, ಇಳಿಕೆಯಾಗುವುದು ಇದೆಲ್ಲಾ ನಡೆದೇ ಅಡಿಕೆ ಧಾರಣೆ ಅಸ್ತಿರತೆಯತ್ತ ಹೋಗಿರುವುದು.
0 Comments