ಬಾಳೆ ಕಾಯಿಗೆ ಬೇಡಿಕೆ ಇರುವ ತಿಂಗಳುಗಳಿಗೆ 9-10 ತಿಂಗಳ ಮುಂಚೆ ನಾಟಿ ಮಾಡುವುದರಿಂದ ಬೆಳೆದವರಿಗೆ ಉತ್ತಮ ಬೆಲೆ ಸಿಕ್ಕಿ ಲಾಭವಾಗುತ್ತದೆ. ಸಾಮಾನ್ಯವಾಗಿ ಹಬ್ಬದ ದಿನಗಳು ಪ್ರಾರಂಭವಾಗುವ ನಾಗರ ಪಂಚಮಿ, ಕೃಷ್ಣಾಷ್ಟಮಿ,ಚೌತಿ ಹಬ್ಬ ನವರಾತ್ರೆ, ಮತ್ತು ದೀಪಾವಳಿಗೆ ಕಠಾವಿಗೆ ಸಿಗುವಂತೆ ಒಂದು ತಿಂಗಳ ಮಧ್ಯಂತರದಲ್ಲಿ ಬಾಳೆ ಸಸಿ ನೆಟ್ಟು ಬೆಳೆಸಿದರೆ ಎಲ್ಲಾ ಹಬ್ಬದ ಸಮಯದಲ್ಲೂ ಕಠಾವಿಗೆ ಸಿಗುತ್ತದೆ.
ಹೆಚ್ಚಿನವರು ಬಾಳೆ ನಾಟಿ ಮಾಡಲು ಆಯ್ಕೆ ಮಾಡುವುದು ಮಳೆಗಾಲ ಪ್ರಾರಂಭದ ದಿನಗಳನ್ನು. ಎಲ್ಲರೂ ಇದೇ ಸಮಯದಲ್ಲಿ ನಾಟಿ ಮಾಡಿದರೆ ಮಾರುಕಟ್ಟೆಯಲ್ಲಿ ಅವಕ ಹೆಚ್ಚಾಗುತ್ತದೆ. ಬೆಲೆ ಕಡಿಮೆಯಾಗುತ್ತದೆ. ಇಷ್ಟಕ್ಕೂ ಮಳೆಗಾಲದ ಪ್ರಾರಂಭದಲ್ಲಿ ಬಾಳೆ ನಾಟಿ ಮಾಡಿದರೆ ಉತ್ತಮ ಗುಣಮಟ್ಟದ ಗೊನೆ ಸಿಗುವುದಿಲ್ಲ. ಪುಟ್ಟು ಬಾಳೆಯಂತಹ ಬಾಳೆಗೆ ಅಧಿಕ ಬೇಡಿಕೆ ಇರುವ ಆಗಸ್ಟ್ – ಸಪ್ಟೆಂಬರ್- ನವೆಂಬರ್ ತಿಂಗಳಲ್ಲಿ ಗೊನೆ ಲಭ್ಯವಾಗುವಂತೆ 9-10 ತಿಂಗಳ ಮುಂಚೆ ನಾಟಿ ಮಾಡಬೇಕು.
ಮಳೆಗಾಲದಲ್ಲಿ ನೆಡುವುದು ಸೂಕ್ತವಲ್ಲ:
- ಮಳೆಗಾಲದಲ್ಲಿ ಬಾಳೆ ನಾಟಿ ಮಾಡಿದರೆ 1-5 ತಿಂಗಳ ತನಕ ( ಪ್ರದೇಶ ಹೊಂದಿ) ನೀರಾವರಿ ಬೇಕಾಗುವುದಿಲ್ಲ ಎಂಬುದು ಬಹುತೇಕ ರೈತರ ಅಭಿಪ್ರಾಯ.
- ನೀರಾವರಿ ಕರಾವಳಿ ಮಲೆನಾಡಿನಲ್ಲಿ ಸುಮಾರು 5 ತಿಂಗಳ ತನಕ ಬೇಕಾಗುವುದಿಲ್ಲ.
- ಮಳೆ ಕಡಿಮೆ ಬರುವ ಪ್ರದೇಶಗಳಲ್ಲೂ 1-2 ತಿಂಗಳ ತನಕ ನೀರು ಬೇಕಾಗುವುದಿಲ್ಲ.
- ಆದರೆ ಮಳೆಗಾಲ ಬಾಳೆಯ ಉತ್ತಮ ಬೆಳವಣಿಗೆಗೆ ಸಹಾಯಕವಲ್ಲ.
- ಮಳೆಗಾಲದಲ್ಲಿ ಬಾಳೆಯ ಬೆಳವಣಿಗೆಗೆ ಹಲವಾರು ಅಡ್ಡಿಗಳು ಉಂಟಾಗಿ, ಬಾಳೆ ಬೆಳವಣಿಗೆಗೆ ತೊಂದರೆಯಾಗಿ ಮುಂದೆ ಗೊನೆ ಹಾಳಾಗುತ್ತದೆ.
ಮಳೆ ಬರುವಾಗ ಸಸಿ ಸಣ್ಣದಿರುತ್ತದೆ. ಆಗ ನೆಲದ ಮಣ್ಣು ಎಲೆಗಳಿಗೆ ಸಿಡಿದು, ಎಲೆಗೆ ರೋಗ ಬರುತ್ತದೆ. ಜೊತೆಗೆ ಈ ಸಮಯದಲ್ಲಿ ಎಲೆ ತಿನ್ನುವ ಕಂಬಳಿ ಹುಳ ಇತ್ಯಾದಿಗಳ ಸಮಸ್ಯೆಯೂ ಹೆಚ್ಚು. ಅದುದರಿಂದ ಮಳೆಗಾಲದಲ್ಲಿ ಬಾಳೆ ನಾಟಿ ಮಾಡಿದರೆ ಸಸಿ ಏಳಿಗೆ ಆಗುವುದಿಲ್ಲ.
- ಬಾಳೆಯ ಬೇರಿನ ಬೆಳವಣಿಗೆಗೆ ಮಳೆಗಾಲದ ಅಧಿಕ ಮಳೆ ಅನುಕೂಲಕರವಲ್ಲ.
- ಬೇರು ಬೆಳವಣಿಗೆ ಕುಂಠಿತವಾಗುತ್ತದೆ. ಬಾಳೆ ಸೊರಗುತ್ತದೆ.
- ಒಂದು ವೇಳೆ ಬಾಳೆ ಚೆನ್ನಾಗಿ ಬಂದರೂ ಸಹ ಮಳೆ ಮುಗಿಯುವ ಸಮಯ ಅಥವಾ ಮಳೆಗಾಲ ಮಧ್ಯದಲ್ಲಿ ಎಲೆ ಚುಕ್ಕೆ ರೋಗ, ಸೊರಗು ರೋಗಗಳು ಬಂದು ಮತ್ತೆ ಬಾಳೆಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
- ಇದರ ನಿರ್ವಹಣೆಗೆ ಖರ್ಚು ಹೆಚ್ಚು ಮಾಡಬೇಕಾಗುತ್ತದೆ.
- ಎಲೆಗಳು ಹಳದಿಯಾಗಿ ಒಣಗಲು ಪ್ರಾರಂಭವಾದರೆ ಗೊನೆ ಪುಷ್ಟಿಯಾಗಿ ಬೆಳೆಯಲಾರದು.
- ಇದಕ್ಕೆ ಮಾರುಕಟ್ಟೆ ಮೌಲ್ಯವೂ ಇರುವುದಿಲ್ಲ.
ಬಾಳೆಯಲ್ಲಿ ಮೊದಲ 5-6 ತಿಂಗಳ ಬೆಳವಣಿಗೆಯ ಮೇಲೆ ಅದರ ಗೊನೆಯ ಬೆಳವಣಿಗೆ ನಿರ್ಧಾರವಾಗುತ್ತದೆ.
ನೆಡಲು ಸೂಕ್ತ ಕಾಲ:
- ಬಾಳೆಯನ್ನು ನೆಲ ಬೆಚ್ಚಗೆ ಇರುವ ಸಮಯದಲ್ಲಿ ನಾಟಿ ಮಾಡಬೇಕು. ಹಾಗೆಂದು ತೀರಾ ನೆಲ ಒಣಗಿದಾಗ ಅಲ್ಲ.
- ನೆಡುವ ಮಣ್ಣಿನಲಿ ತೇವಾಂಶ ಇರಬೇಕು. ತೀರಾ ಥಂಡಿಯೂ ಆಗಿರಬಾರದು.
- ಅಂತಹ ಮಣ್ಣಿನಲ್ಲಿ ಬಾಳೆ ಸಸಿಯನ್ನು ಅಥವಾ ಕಂದನ್ನು ನಾಟಿ ಮಾಡಿದಾಗ ಬೇರುಗಳು ಬೇಗನೆ ಬೆಳೆದು ಬಾಳೆ ಚೆನ್ನಾಗಿ ಬೆಳೆಯುತ್ತದೆ.
- ಕಂದು ನೆಡುವುದರಿಂದ ಸ್ವಲ ಬೇಗ ಇಳುವರಿ ಬರುತ್ತದೆ.
- ಅಂಗಾಂಶ ಕಸಿಯ ಬಾಳೆ ಸಸ್ಯವನ್ನು ಮಳೆಗಾಲದಲ್ಲಿ ಬದುಕಿಸಲು ತುಂಬಾ ಶ್ರಮ ಪಡಬೇಕಾಗುತ್ತದೆ.
- ಚಳಿಗಾಲ ಪ್ರಾರಂಭವಾಗುವ ಮುಂಚೆ ( ಅಕ್ಟೋಬರ್ ನಂತರ) ಬಾಳೆ ನೆಟ್ಟರೆ ಅದಕ್ಕೆ ಸುಮಾರು 5 -6 ತಿಂಗಳ ತನಕ ಮಾತ್ರ ನೀರಾವರಿ ಅಗತ್ಯವಿರುತ್ತದೆ.
- ಬಾಳೆ ಸಸ್ಯಕ್ಕೆ ಸುಮಾರು 5-6 ತಿಂಗಳ ಬೆಳವಣಿಗೆಯ ಹಂತದಲ್ಲಿ ಹೆಚ್ಚಿನ ನೀರಾವರಿ ಬೇಕಾಗುವುದಿಲ್ಲ.
- ಆ ನಂತರವೇ ಹೆಚ್ಚಿನ ನೀರಾವರಿ ಬೇಕಾಗುವುದು.
- ಮಳೆಗಾಲ ಪ್ರಾರಂಭವಾಗುವಾಗ ಬಾಳೆ ಗೊನೆ ಹಾಕುವ ಹಂತಕ್ಕೆ ಬಂದಿರಬೇಕು.
- ನವೆಂಬರ್ – ಡಿಸೆಂಬರ್ ತಿಂಗಳಲ್ಲಿ ನಾಟಿ ಮಾಡುವಾಗ ಹೆಚ್ಚಿನ ಚಳಿಯೂ ಪ್ರಾರಂಭವಾಗಿರುವುದಿಲ್ಲ.
ಜೂನ್ ತಿಂಗಳ ತನಕ ಬೆಳೆದಾಗ ಬಾಳೆಯಲ್ಲಿ ಬೇರುಗಳು ಚೆನ್ನಾಗಿ ಪಸರಿಸಿರುತ್ತವೆ. ಹೆಚ್ಚಿನ ಬೆಳವಣಿಗೆಯೂ ಆಗಿರುರುತ್ತದೆ. ಮಳೆ ಬಂದ ತಕ್ಷಣ ಮತ್ತೆ ಶಕ್ತಿ ಶಾಲಿಯಾಗಿ ಬೆಳೆಯುತ್ತದೆ. ಇದು ಸುಮಾರು 1 ತಿಂಗಳ ಮುಂಚೆಯೇ ಗೊನೆ ಹಾಕಲು ಸಿದ್ದವಾಗುತ್ತದೆ.
- ಮಳೆಗಾಲ ಕಳೆದ ತಕ್ಷಣ ನೆಟ್ಟ ಬಾಳೆ ಜುಲಾಯಿ ಆಗಸ್ಟ್ ಸುಮಾರಿಗೆ ಗೊನೆ ಹಾಕುತ್ತದೆ.
- ಅಕ್ಟೋಬರ್ – ನವೆಂಬರ್ ತಿಂಗಳಿಗೆ ಕಠಾವಿಗೆ ಸಿದ್ದವಾಗುತ್ತದೆ.
- ಈ ಸಮಯದಲ್ಲಿ ದೀಪಾವಳಿ ಹಬ್ಬ, ನಂತರ ಧನುರ್ಮಾಸ ಮಕರ ಸಂಕ್ರಮಣ ಮುಂತಾದ ವಿಶೇಷ ದಿನಗಳು ಇರುತ್ತವೆ.
- ಈ ಸಮಯಕ್ಕೆ ಮಾರುಕಟ್ಟೆಯಲ್ಲಿ ಬಾಳೆ ಹಣ್ಣಿನ ಕೊರತೆ ಇರುತ್ತದೆ.
- ಅದಕ್ಕನುಗುಣವಾಗಿ ಬಾಳೆ ನಾಟಿ ಮಾಡಬೇಕು.
- ಅಕ್ಟೋಬರ್ ತಿಂಗಳಿಗೇ ನಾಟಿ ಮಾಡಿದರೆ ಚೌತಿ, ನವರಾತ್ರೆ ಸಮಯಕ್ಕೆ ಬಾಳೆ ಗೊನೆ ಕಠಾವಿಗಿ ಸಿಗುತ್ತದೆ.
- ಆಗ ಬೇಡಿಕೆ ಚೆನ್ನಾಗಿರುತ್ತದೆ. ಬೆಲೆಯೂ ಉತ್ತಮವಾಗಿರುತ್ತದೆ.
- ಈ ಸಮಯದಲ್ಲಿ ಬಾಳೆ ಗೊನೆ ವಾತಾವರಣ ತಂಪಾಗಿದ್ದು, ಜೊತೆಗೆ ಮಳೆಯೂ ಇರುವ ಕಾರಣ ಪುಷ್ಟಿಯಾಗಿ ಬೆಳೆಯುತ್ತದೆ.
- ಚೆನ್ನಾಗಿ ಪಕ್ವವಾಗುತ್ತದೆ.
ಮಳೆಗಾಲದ ನಿರ್ವಹಣೆ:
- ಮಳೆಗಾಲ ಬರುವಾಗ ಬುಡ ಭಾಗದಲ್ಲಿ ನೀರು ನಿಲ್ಲದಂತೆ ನೊಡಿಕೊಳ್ಳಬೇಕು.
- ಎಲೆಗಳು ಹಣ್ಣಾಗಿರುವುದನ್ನು ತೆಗೆಯುತ್ತಾ ಇರಬೇಕು.
- ಅತಿಯಾಗಿ ಮಳೆ ಬರುವ ಸಮಯಕ್ಕೆ ಮುಂಚಿತವಾಗಿ ಎಲೆಗಳ ಅಡಿ ಭಾಗಕ್ಕೆ ಶಿಲೀಂದ್ರ ನಾಶಕ ಸಿಂಪರಣೆ ಮಾಡಬೇಕು.
- ಬಾಳೆಯನ್ನು ಕಟ್ಟಿ ಬೀಳದಂತೆ ರಕ್ಷಿಸಬೇಕು.
- ಗೊನೆ ಹಾಕಿದ ಸಮಯದಲ್ಲಿ ಕಾಂಡ ಕೊರೆಯುವ ಹುಳುವಿನ ನಿಯಂತ್ರಣ ಮಾಡಬೇಕು.
ಬಾಳೆ ಬೆಳೆಯುವಾಗ ಬೇಸಿಗೆಯ ಕಾಲದಲ್ಲಿ ಗೊನೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆದರೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗುತ್ತದೆ. ವಿಪರೀತ ಬಿಸಿಯ ವಾತಾವರಣದಲ್ಲಿ ಬಾಳೆ ಬೇಗ ಬೆಳವಣಿಗೆಯಾಗಿ ಕಾಯಿ ಪುಷ್ಟಿಯಾಗುವುದಿಲ್ಲ. ಬಾಳೆ ಅಡ್ಡ ಬೀಳುತ್ತದೆ.ನಷ್ಟವೂ ಜಾಸ್ತಿ. ಆದ ಕಾರಣ ಬಾಳೆ ಬೆಳೆಯುವವರು ಮಳೆಗಾಲ ಕಳೆದ ತರುವಾಯ ನೆಡುವುದು ಸೂಕ್ತ.