ಕೋಟಿ ಸಂಪಾದನೆಗಾಗಿ ಜೀವಕ್ಕೆ ಅಪಾಯ ಇರುವ , ಅತ್ಯಧಿಕ ತಲೆಬಿಸಿ ಇರುವ ಬೆಳೆಗಳ ಹಿಂದೆ ಹೋಗಿ ಪಶ್ಚಾತ್ತಾಪ ಪಡಬೇಡಿ. ಶ್ರಮ ಪಟ್ಟು ದುಡಿದರೆ ಕೋಟಿ ಸಂಪಾದನೆಗೆ ಬೇರೆ ತೋಟಗಾರಿಕಾ ಬೆಳೆಗಳೂ ಇವೆ.
ಜನ ಅಧಿಕ ಆದಾಯದ ಬೆಳೆ ಬೇಕು ಎಂದು ಅತ್ಯಂತ ರಿಸ್ಕ್ ಇರುವ ಶ್ರೀ ಗಂಧದಂತಹ ಬೆಳೆಯ ಹಿಂದೆ ಹೋಗುತ್ತಿದ್ದಾರೆ, ಬುದ್ಧಿವಂತ ರೈತರು ಅಷ್ಟು ವರ್ಷ ಕಾಯದೆ, ಕೆಲವೇ ವರ್ಷಗಳಲ್ಲಿ ಸ್ವಂತ ಭೂಮಿ ಇಲ್ಲವೇ ಲೀಸ್ ಗೆ ಪಡೆದ ಭೂಮಿಯಲ್ಲಾದರೂ ಅನನಾಸು ಬೆಳೆದು ಕೋಟಿಯನ್ನು ಕಂಡವರಿದ್ದಾರೆ. ಈ ಬೆಳೆಗೆ ಕಳ್ಳರ ಭಯ ಇಲ್ಲ.ಬೆಳೆದ ಮೇಲೆ ನಾವೂ ಅದನ್ನು ಅನುಭವಿಸುತ್ತೇಯೋ ಇಲ್ಲವೋ ಎಂಬ ಆತಂಕವೂ ಇಲ್ಲ. ಜೀವಕ್ಕೆ ಅಪಾಯ ಇಲ್ಲ. ಮಲೆನಾಡಿನ ಸಾಗರ, ಸೊರಬ, ಬನವಾಸಿ ಹಾಗೆಯೇ ಕರಾವಳಿಯಲ್ಲಿ ಕೆಲವರು ಹಠ ಹಿಡಿದು ಬೆಳೆ ಬೆಳೆದು ಅನನಾಸಿನಲ್ಲಿ ತಮ್ಮ ಉತ್ತಮ ಬದುಕನ್ನು ಕಂಡವರಿದ್ದಾರೆ.
ಇದು ಒಂದು ಯಶೋಗಾಥೆ:
- ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಚಂದ್ರ ಗುತ್ತಿ ಹೊಸಕೊಪ್ಪದ ರೈತರಾದ ಶ್ರೀ ಶ್ರೀಧರ ಗೌಡ ಇವರು ಎಲ್ ಎಲ್ ಬಿ ವ್ಯಾಸಂಗ ಮಾಡಿ, ಕೃಷಿ ವೃತ್ತಿಗೆ ಬಂದವರು.
- ಇಂದು ಇವರು ಸುಮಾರು 100 ಎಕ್ರೆಯಷ್ಟು ( ಅವಿಭಕ್ತ ಕುಟುಂಬ) ಜಮೀನು ಮಾಡಿಕೊಂಡಿದ್ದಾರೆ.
- ಒಂದು ವೇಳೆ ನೌಕರಿ ಮಾಡಲು ಹೋಗಿದ್ದರೆ ಅಲ್ಲಿ ಇಷ್ಟು ಸಂಪಾದನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎನ್ನುತ್ತಾರೆ.
- ಜೀವನದಲ್ಲಿ ಕುಷಿಯನ್ನು ಕೃಷಿಯಲ್ಲಿ ಕಂಡಿದ್ದೇನೆ.
- ಮಕ್ಕಳನ್ನು ಉತ್ತಮ ವಿಧ್ಯಾಭ್ಯಾಸ ಕೊಟ್ಟು ಉತ್ತಮ ವೃತ್ತಿಯಲ್ಲಿ ಸೇರಿಕೊಳ್ಳುವಂತೆ ಮಾಡಿದ್ದೇನೆ.
- ಮಗಳು ಇಂಜಿನಿಯರ್ ಆಗಿ ಉದೋಗದಲ್ಲಿದ್ದರೆ, ಮಗ ವೈಧ್ಯಕೀಯ ಕ್ಷೇತ್ರಕ್ಕೆ ಹೋಗಿದ್ದಾರೆ.
- ಎಲ್ಲಾ ಅಣ್ಣ ತಮ್ಮಂದಿರಿಗೂ ಜಮೀನು ಆಗಿದೆ. ಮೂಲ ಭೂಮಿಯನ್ನು ಹರಿದು ಹಂಚಿ ವಿಭಾಗ ಮಾಡಿಕೊಂಡಿಲ್ಲ.
- ಅಡಿಕೆ, ತೆಂಗು, ರಬ್ಬರ್, ಬಾಳೆ, ದಾಲ್ಚಿನಿ, ಶುಂಠಿ ಗೇರು ಮುಂತಾದ ಆ ಪ್ರದೇಶಕ್ಕೆ ಹೊಂದುವ ಬೆಳೆಗಳನ್ನು ಬೆಳೆದಿದ್ದಾರೆ.
- ಸುಮಾರು 40 ವರ್ಷಕ್ಕೆ ಹಿಂದೆ ಈ ಭಾಗಕ್ಕೆ ಅನನಾಸು ಬೆಳೆ ಪರಿಚಯವಾದಾಗಲೇ ತಾವೂ ಬೆಳೆ ಬೆಳೆಸಲು ಪ್ರಾರಂಭಿಸಿ ಇಂದಿನ ತನಕವೂ ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
- ಅನನಾಸು ನೆಡುವುದು, ಜೊತೆಗೆ ಅಡಿಕೆ ಸಸಿಯನ್ನೂ ನೆಡುವುದು.
- ಎರಡು ವರ್ಷ ಕಾಲ ಅನನಾಸು ಬೆಳೆದಾಗ ತೋಟ ಮಾಡಿದ ಖರ್ಚು ಮತ್ತು ಬಂದು ಮಿಗತೆಯಾಗುತ್ತದೆ.
- ನಂತರ ಶುಂಠಿಯನ್ನೂ ಬೆಳೆಸುತ್ತಾರೆ. ಅಡಿಕೆ ಮರ ಫಲ ಕೊಡುವ ಸಮಯಕ್ಕೆ ಹೊಲ ಮತ್ತು ಕೃಷಿಯ ಎಲಾ ಖರ್ಚನ್ನೂ ಮಿಶ್ರ ಬೆಳೆಗಳಿಂದ ಹೊಂದಿಸಿಕೊಂಡಿದ್ದಾರೆ.
- ಎಲ್ಲಾ ಕೃಷಿ ಅಭಿವೃದ್ದಿಗೆ ಅನನಾಸು ಬೆಳೆಯೇ ಪಂಚಾಂಗ.
- ಅನನಾಸು ಬೆಳೆ ಅಲ್ಲದಿದ್ದರೆ ನಾನು ಸೇರಿದಂತೆ ಇಲ್ಲಿ ಹಲವಾರು ಜನ ತಮ್ಮ ಜೀವನದಲ್ಲಿ ಸಾಧಿಸಬೇಕಾದುದನ್ನು ಸಾಧಿಸಲಾಗುತ್ತಿರಲಿಲ್ಲ.
- ಅಲ್ಪಾವಧಿಯಲ್ಲಿ ಗರಿಷ್ಟ ಲಾಭ ತಂದುಕೊಡಬಲ್ಲ ಬೆಳೆ ಎನ್ನುತ್ತಾರೆ.
- ತನ್ನ ಜೀವನಕ್ಕೆ ಒಂದು ಹೊಸ ಆಯಾಮ ಕೊಟ್ಟಂತಹ ಬಲು ಪ್ರೀತಿಯ ಬೆಳೆ ಇದು ಎನ್ನುತ್ತಾರೆ ಶ್ರೀಧರ ಗೌಡರವರು.
ಅಧಿಕ ಲಾಭಕ್ಕೆ ತೋಟಗಾರಿಕಾ ಬೆಳೆ:
- ತೋಟಗಾರಿಕಾ ಬೆಳೆಗಳಲ್ಲಿ ಹಣ್ಣಿನ ಬೆಳೆಯಿಂದ ಉತ್ತಮ ವರಮಾನ ಪಡೆಯಲು ಸಾಧ್ಯ.
- ಅದೇ ರೀತಿಯಲ್ಲಿ ಸಾಂಬಾರು ಬೆಳೆಯಾದ ಶುಂಠಿಯಿಂದಲೂ ಸಾಧ್ಯ.
- ಬಯಲು ಸೀಮೆಯಲ್ಲಿ ಕೆಲವು ರೈತರು ದಾಳಿಂಬೆ ಬೆಳೆದು ಕೋಟಿ ಸಂಪಾದನೆ ಮಾಡಿದವರಿದ್ದಾರೆ.
- ಕೋಟಿ ಅಲ್ಲದಿದ್ದರೂ ಇತರ ಬೆಳೆಗಳಿಂದ ದುಪ್ಪಟ್ಟು, ಮೂರು ಪಟ್ಟು ಆದಾಯ ಪಡೆಯಬೇಕಿದ್ದರೆ ಅದಕ್ಕೆ ಹೊಂದುವಂತದ್ದು, ತೋಟಗಾರಿಕಾ ಬೆಳೆ ಮಾತ್ರ.
- ತೋಟಗಾರಿಕಾ ಬೆಳೆ ಅಲ್ಲದಿದ್ದರೆ ನಮ್ಮ ರೈತರ ಸ್ಥಿತಿ ಏನೇನೂ ಸುಧಾರಣೆ ಆಗುತ್ತಿರಲಿಲ್ಲ.
- ಇಲ್ಲಿ ಕುಳಿತು ತಿನ್ನಲು ಆಗುವುದಿಲ್ಲ. ಶ್ರಮ ಪಡಬೇಕು. ಆದಾಯ ಸಾಕಷ್ಟಿದೆ.
ಅನನಾಸು ಬೆಳೆ:
- ಅನನಾಸು ಬೆಳೆಯು ಕರಾವಳಿ, ಮಲೆನಾಡಿನ ಪ್ರದೇಶಗಳಲ್ಲಿ ಚೆನ್ನಾಗಿ ಬರುತ್ತದೆ.
- ಉಳಿದೆಡೆ ಇದರ ಬೆಳೆ ಇಲ್ಲ. ಎಕ್ರೆಗೆ ಸುಮಾರು 12-15 ಸಾವಿರ ತನಕ ಸಸಿ ಹಿಡಿಯುತ್ತದೆ.
- ನೆಟ್ಟು 8-9 ತಿಂಗಳಿಗೆ ಹೂ ಬರಲು ಪ್ರಾರಂಭವಾಗುತ್ತದೆ. ಒಮ್ಮೆ ನೆಟ್ಟ ಬೆಳೆಯಿಂದ ಎರಡು ಬೆಳೆ ಪಡೆಯಬಹುದು.
- ಪ್ರತೀ ಗಿಡದಿಂದ ಸರಾಸರಿ 2 ಕಿಲೋ ತೂಕದ ಕಾಯಿ ಬರುತ್ತದೆ.
- ಸರಾಸರಿ 14 ರೂ . ತನಕ ಬೆಲೆ ಇರುತ್ತದೆ. ಒಂದು ಎಕ್ರೆಗೆ ಸರಾಸರಿ 7 ಲಕ್ಷ ವರಮಾನ ಇದೆ.
- ಎರಡನೇ ಬೆಳೆ ಅಷ್ಟು ಉತ್ಪಾದನೆ ಕೊಡಲಾರದಾದರೂ ಅದರ ¾ ಭಾಗದಷ್ಟು ಉತ್ಪತ್ತಿ ಕೊಡುತ್ತದೆ.
- ಸುಮಾರು 10-20 ಎಕ್ರೆಯಲ್ಲಿ ಅನನಾಸು ಬೆಳೆದರೆ ಕೋಟಿಯ ಸಂಪಾದನೆ ಕಷ್ಟವಿಲ್ಲ.
- ಇಷ್ಟು ವರಮಾನಕ್ಕೆ ಹತ್ತಾರು ವರ್ಷ ಕಾಯಬೇಕಾಗಿಲ್ಲ.
- ಗಿಡಕ್ಕೆ ಮೈಕ್ರೋ ಚಿಪ್ ಹಾಕಬೇಕಾಗಿಲ್ಲ. ಗನ್ ಮ್ಯಾನ್ ಬೇಕಾಗಿಲ್ಲ.
- ಸುಖವಾಗಿ ನಿದ್ರೆ ಮಾಡಬಹುದು. ಎರಡೇ ವರ್ಷದಲ್ಲಿ ಆದಾಯ ತಂದು ಕೊಡುವ ಬೆಳೆ.
- ಒಟ್ಟು ಉತ್ಪತ್ತಿಯಲ್ಲಿ ½ ಪಾಲು ಬೆಳೆಯ ಖರ್ಚಿಗೆ ಬೇಕಾಗುತ್ತದೆಯಾದರೂ ಲಾಭವಿದೆ.
ಹಿಂದೆ ಇದು ಮಲೆನಾಡಿನಲ್ಲಿ ಮಳೆಯಾಶ್ರಿತ ಬೆಳೆಯಾಗಿತ್ತು. ಈಗ ನೀರಾವರಿ ಬೆಳೆಯಾಗಿದೆ. ಕಡಿಮೆ ನೀರು ಸಾಕು. ಕಡಿಮೆ ಗೊಬ್ಬರ ಸಾಕು.ಬೇಕಾದ ಸಮಯದಲ್ಲು ಹೂ ಬರಿಸಿ, ಮಾರುಕಟ್ಟೆಯ ಅನುಕೂಲ ನೋಡಿಕೊಂಡು ಬೆಳೆ ತೆಗೆಯಬಹುದು. ಅನನಾಸು ಬೆಳೆದರೆ ಮಣ್ಣು ಫಲವತ್ತಾಗುತ್ತದೆ. ಅದರ ತ್ಯಾಜ್ಯಗಳು ಗೊಬ್ಬರವಾಗುತ್ತದೆ. ಹಾಗೆಯೇ ಹಸಿ ತ್ಯಾಜ್ಯಗಳು ಪಶು ಮೇವೂ ಆಗುತ್ತದೆ.
ಕೋಟಿಗಾಗಿ ಅಧಿಕ ರಿಸ್ಕ್ ಇರುವ ಬೆಳೆಗಳ ಹಿಂದೆ ಹೋಗದಿರಿ. ಕೋಟಿ ಗಳಿಸಲು ಇತರ ಬೆಳೆಗಳೂ ಇವೆ. ನೆಮ್ಮದಿಯ ಕೋಟಿ ಇದ್ದರೆ ಸುಖ ನಿದ್ರೆ ಬರಬಹುದೇ ವಿನಹ ನಿತ್ಯ ಚಿಂತೆಯನ್ನು ಉಂಟು ಮಾಡುವ ಬೆಳೆಗಳು ನಿದ್ರೆ ಕೊಡಲಾರದು. ಆರೋಗ್ಯವನ್ನೂ ಕೊಡಲಾರದು.
good information