ಜೇನಿನಲ್ಲಿ ಕಲಬೆರಕೆ ಯಾಕೆ ಆಗುತ್ತಿದೆ?

honey comb

ಒಬ್ಬ ಜೇನು  ಸಾಕಾಣಿಕೆ ಮಾಡುವವನು ಅಂಗಡಿಯ ಜೇನನ್ನು ಉಚಿತವಾಗಿ ಕೊಟ್ಟರೂ ಖರೀದಿ ಮಾಡಲಾರ. ಅವನಿಗೆ ಗೊತ್ತಿದೆ ಯಾವುದು ಶುದ್ಧ ಜೇನು ಎಂದು.
Honey coms in the box

 • ಜನರಿಗೆ ಅರೋಗ್ಯ ಕಳಕಳಿ ಹೆಚ್ಚುತ್ತಿದೆ. ಅವರು ಆರೋಗ್ಯಕ್ಕಾಗಿ ಮಾಡುವುದೆಲ್ಲಾ ಅನಾರೋಗ್ಯವನ್ನು ಆಹ್ವಾನಿಸುತ್ತದೆ.
 • ಜನ ಮಂಗ ಆಗುತ್ತಾರೆಯೇ ಹೊರತು ಮಂಗ ಮಾಡುವುದಲ್ಲ.

ಜೇನು ಸಂತತಿ ಕಡಿಮೆಯಾಗಿದೆ. ಪರಾಗದಾನಿಗಳು ಇಲ್ಲದೆ ಬೆಳೆ ನಷ್ಟವಾಗುತ್ತಿದೆ ಎಂಬುದಾಗಿ ಬಲ್ಲವರು  ಎಚ್ಚರಿಸುತ್ತಿದ್ದಾರೆ. ಕಾಡು ಕಡಿಮೆಯಾಗಿದೆ. ಪುಷ್ಪಗಳು ಇಲ್ಲದಾಗಿದೆ. ಆಹಾರ ಇಲ್ಲದೆ ಜೇನಿನ ಸಾಕಾಣಿಕೆಗೆ ತೊಂದರೆಯಾಗಿದೆ ಎಂದು ಎಲ್ಲಾ ಕಡೆಯಲ್ಲೂ ಎಚ್ಚರಿಕೆಗಳು ಕೇಳಿ ಬರುತ್ತಿದ್ದರೆ,

 • ಕಳೆದ ಕೆಲವು ವರ್ಷಗಳಿಂದ ಜೇನಿನ ವ್ಯವಹಾರ ಗರಿಕೆದರಿದೆ.
 • ಜೇನು ತಿನ್ನುವವರಿಗೆ ನನ್ನದು ಉತ್ತಮ, ನನ್ನದು ಉತ್ತಮ ಎಂದು ಸಾಲು ಸಾಲು ಮಾರಾಟಗಾರರು ಇದ್ದಾರೆ.

ಜೇನು ಉತ್ಪಾದನೆ ಸರಳ ಅಲ್ಲ.

honey comb

 • ಜೇನು ಪೆಟ್ಟಿಗೆ ಇಟ್ಟುಕೊಂಡವರು, ಅಥವಾ ಅಹಿಂಸಾತ್ಮಾವಾಗಿ ಜೇನನ್ನು ಸಂಗ್ರಹಿಸಿದವರು ಯಾವುದೇ ಕಾರಣಕ್ಕೆ ಕಿಲೋ.500  ರೂ. ಗಳಿಗಿಂತ ಕಡಿಮೆ ಬೆಲೆಗೆ ಜೇನು ಕೊಡಲಾರರು.
 • ಅದು ಅವರ ಶ್ರಮಕ್ಕೆ ಪೂರೈಸಲಾರದು.
 • ಅಂಗಡಿಯಲ್ಲಿ ದೊರೆಯುವ ಶುದ್ಧ ಹೆಸರಿನ ಬಾಟಲಿ ಜೇನಿಗೆ ನಮೂದಿಸಿದ ದರ ನೋಡಿದಾಗಲೇ ಅದರ ನೈಜ  ಬಣ್ಣ ಗೊತ್ತಾಗುತ್ತದೆ.
 • ಅದರಲ್ಲಿ ಜೇನಿನ ನೈಜ ಬೆಲೆ ರೂ. 100 ಕ್ಕಿಂತ ಹೆಚ್ಚು ಇರಲಾರದು. ಉಳಿದದ್ದೆಲ್ಲಾವೂ ಇತರ ವೆಚ್ಚಗಳು.

ಈ ಪೇಟೆಯ ಜನ, ಅದೇನೋ ಭಾರೀ ತಿಳಿದುಕೊಂಡವರು. ಪ್ರಾಮಾಣಿಕವಾಗಿ 10 ರೂ. ಕೇಳಿದರೆ ಓಡಿಸುವ  ಜನ ಯಾರಾದರೂ ಟೋಪಿ ಹಾಕುವವ ಬಂದರೆ 1000 ರೂ. ಹೋದರೂ ಬೇಸರ ಇಲ್ಲದೆ ಬಿಚ್ಚುತ್ತಾರೆ. ಈ ಮನೋಸ್ಥಿತಿಯನ್ನು  ನಗದೀಕರಣ  ಮಾಡಿಕೊಂಡು ಪೇಟೆಯ ಜನರನ್ನು ಗುರಿಯಾಗಿಸಿಕೊಂಡು ಕೆಲವರು ಭಾರೀ ವ್ಯವಹಾರಕ್ಕೆ ಇಳಿದು ಭಾರೀ ಸಂಪಾದನೆಯನ್ನೂ ಮಾಡಿಕೊಂಡಿದ್ದಾರೆ.

Pure honey

ಇದು ನಿಮ್ಮ ತಿಳುವಳಿಕೆಯಲ್ಲಿ ಇರಲಿ:

 •  ಉಡುಪಿ ಪಾಂಗಾಳದಲ್ಲೊಬ್ಬ ಹಿರಿಯರು ಆಯುರ್ವೇದ ಔಷಧಿ ತಯಾರಿಕೆ ಮಾಡುತ್ತಿದ್ದವರು
 • ಅದನ್ನು ಬಿಟ್ಟೇ ಬಿಟ್ಟಿದ್ದೇನೆ ಎಂದು ಹೇಳಿದ್ದರು.
 • ಕಾರಣ ಆಯುರ್ವೇದ ಹೆಸರಿನಲ್ಲಿ ಪ್ರಾಮಾಣಿಕವಾಗಿ ವ್ಯವಹಾರ ಮಾಡಲು ಆಗುವುದಿಲ್ಲವಂತೆ.
 • ಉದಾಹರಣೆಗೆ ಕಸ್ತೂರಿ ಮಾತ್ರೆ. ಕಸ್ತೂರಿ ಮೃಗವನ್ನು ಸಾಕುವುದು ಕಾನೂನು ಪ್ರಕಾರ ಶಿಕ್ಷಾರ್ಹ ಆಪರಾಧ.
 • ಕಸ್ತೂರಿ ಮೃಗದ ಮಲವನ್ನು ಬಳಸಿ ಕಸ್ತೂರಿ ಮಾತ್ರೆ ತಯಾರಿಸಬೇಕು.
 • ಕಸ್ತೂರಿ  ಮಾತ್ರೆ ತಯಾರಿಸುವವರು ಎಷ್ಟು ಜನ ಕಸ್ತೂರಿ ಮೃಗ ಸಾಕಿದ್ದಾರೆ?
 • ಇದು ಗೊತ್ತಿದ್ದೂ ಯಾಕೆ ಆ ಕ್ಷೇತ್ರದಲ್ಲಿ ನಾವು ಮುಂದುವರಿಯಬೇಕು ಎಂದು ಸುಮಾರು 25 ವರ್ಷಗಳ ಹಿಂದೆ ಹೇಳಿದ್ದರು.
 • ಇದು ಈಗ ಜೇನಿಗೂ ಅನ್ವಯ.

ಹೂವುಗಳೇ ಇಲ್ಲ ಜೇನು ಎಲ್ಲಿಂದ?:

 • ನಾವೂ ಬಹಳ ಹಿಂದಿನಿಂದಲೂ ಜೇನು ಸಾಕಾಣಿಕೆ ಮಾಡುತ್ತಿದ್ದೆವು.1
 • ನಾನು ಸಣ್ಣವನಿದ್ದಾಗ ಸುಮಾರು ಅಲ್ಲಲ್ಲಿ ಸುಮಾರು 30 ಜೇನು ಪಟ್ಟಿಗೆಗಳಿದ್ದವು.
 • ಆಗ ಜೇನು ಉತ್ಪಾದನೆ ಚೆನ್ನಾಗಿಯೇ ಇತ್ತು. ಅದರೆ ಈಗ ಹಾಗಿಲ್ಲ.
 • ಜೇನು ಕೊಡುವ ಹೂವುಗಳ ಮರಗಳೇ ಇಲ್ಲ. ಪೆಟ್ಟಿಗೆಗಳು ಖಾಲಿ ಖಾಲಿ.
 • ಒಂದು ಜೇನು ಕುಟುಂಬದಿಂದ ಹಿಂದೆ ವರ್ಷಕ್ಕೆ 10-20 ಲೀ. ಗೂ ಹೆಚ್ಚು ಜೇನು ಉತ್ಪಾದನೆಯಾಗುತ್ತಿತ್ತು.
 • ಈಗ ಅದು ಅದರ ಅರ್ಧವೂ ಆಗುತ್ತಿಲ್ಲ.
 • ಆದರೆ ಮಾರುಕಟ್ಟೆಯಲ್ಲಿ ಜೇನಿಗೆ ಬರವೇ ಇಲ್ಲ.
 • ಎಲ್ಲಿಂದ ಬರುತ್ತದೆಯೋ ಗೊತ್ತಿಲ್ಲ.
 • ವೈವಿಧ್ಯಮಯ ಬ್ರಾಂಡ್ ಗಳು. ಅದರಲ್ಲಿ ಮತ್ತೆ ವೈವಿಧ್ಯತೆ.
 • ರಬ್ಬರ್ ತೋಟಗಳು ಬಂದು ಸ್ವಲ್ಪ ಜೇನು ಆಗಿರಬಹುದಾದರೂ ಈಗ ಮಾರುಕಟ್ಟೆಯಲ್ಲಿ ಲಭ್ಯವಾಗುವ ಜೇನಿನಷ್ಟು ಉತ್ಪಾದನೆ ಮಾತ್ರ ಸಂಶಯದ್ದು.

ಕಾಡಿನ ಜೇನು ಎಂಬ ಸುಳ್ಳು:

 • ಕಾಡಿನಲ್ಲಿ ಜೇನು ಕುಟುಂಬ ಹುಡುಕಿ ಅದರಿಂದ ಜೇನು ತೆಗೆದು ಅದನ್ನು ಮಾರಾಟ ಮಾಡುವುದು
 • ನಿಜಕ್ಕೂ ಲಾಭದ ವ್ಯವಹಾರ ಅಲ್ಲವೇ ಅಲ್ಲ.
 • ಕಾಡಿನಲ್ಲಿ ಹೆಜ್ಜೇನು ಗಳು ಮರದ ತುದಿಯಲ್ಲಿ ಕುಳಿತುಕೊಂಡಿರುತ್ತದೆ.
 • ಆ ಮರವನ್ನು ಹತ್ತಬೇಕಾದರೆ ಇರುವ ಕಷ್ಟ ಅಷ್ಟಿಷ್ಟಲ್ಲ.
 • ಇಷ್ಟಕ್ಕೂ ಮರ ಹತ್ತಿ ಜೇನು ತೆಗೆದಾಗ ಅದರಲ್ಲಿ ಜೇನು ಎಷ್ಟು ಸಿಗಬಹುದು ಎಂಬುದು ಮರ ಏರಿ ನೊಣ ಓಡಿಸಿದ ನಂತರವೇ ತಿಳಿಯುವುದು.
 • ಸಾಧಾರಣವಾಗಿ ಕಾಡಿನಲ್ಲಿ ಪೆಟ್ಟಿಗೆಯಲ್ಲಿ ಸಾಕಬಹುದಾದ  ಜೇನು ಕುಟುಂಬ ( epis indica) ಹೆಚ್ಚು ಇರುವುದಿಲ್ಲ.
 • ಮರದ ಪೊಟರೆಯಲ್ಲಿ ಇದ್ದರೆ ಅದನ್ನು ತೆಗೆಯಬೇಕಾದರೆ ಕೆಲಸದ ಮಜೂರಿ ಹುಟ್ಟಲಾರದು.
 • ಹುತ್ತಗಳಲ್ಲಿ ಇರುವ ಜೇನನ್ನು ಕರಡಿ ಇತ್ಯಾದಿ ಕಾಡು ಪ್ರಾಣಿಗಳು ತಿನ್ನುತ್ತವೆ.
 • ಕೆಲವರು ಎಪ್ರೀಲ್- ಮೇ ತಿಂಗಳಲ್ಲಿ ಜೇನು ಹುಡುಕಾಟ ಮಾಡುವವರಿದ್ದರೂ ಸಹ
 • ಅವರ ಕೆಲಸದ ಮಜೂರಿ ಹುಟ್ಟುವಷ್ಟು ಜೇನು ಸಂಗ್ರಹ ಮಾಡಲಿಕ್ಕೆ ಸಾಧ್ಯವಾಗುವುದಿಲ್ಲ.
 • ಅದಕ್ಕೆ ಬೆಲ್ಲದ ಪಾಕವನ್ನು ಮಿಶ್ರಣ ಮಾಡಿ ಜೇನು ಹೆಚ್ಚು ಮಾಡಿ ಮಾರಾಟ ಮಾಡಲಾಗುತ್ತದೆ.
 • ಇಂತಹ ಜೇನನ್ನು ಸ್ಥಳೀಯ ಅಂಗಡಿಗಳವರು ಕೊಳ್ಳುವುದೂ ಕಿಲೋ 200 ರೂ. ಗಿಂತ ಕಡಿಮೆ ಬೆಲೆಗೆ.

ಮಾರುಕಟ್ಟೆಯ ಜೇನು ತಿನ್ನುವುದೇ ಅಪಾಯ:

 • ಅಂಗಡಿಗಳಲ್ಲಿ ಮಾರಲ್ಪಡುವ ಜೇನು ಖಂಡಿತವಾಗಿಯೂ ಶುದ್ಧ ಜೇನಾಗಿರಲು ಸಾದ್ಯವಿಲ್ಲ.
 • ಇದನ್ನು  ತಿಂದರೆ ಆರೋಗ್ಯಕ್ಕೆ ಉತ್ತಮ ಎಂಬ ಭಾವನೆ ಇದ್ದರೆ ಅದನ್ನು ಬಿಟ್ಟು ಬಿಡಿ.

ಜೇನು ತಿನ್ನಲೇ ಬೇಕಿದ್ದರೆ ಜೇನು ಪೆಟ್ಟಿಗೆ ಇಟ್ಟುಕೊಂಡವರ ಬಳಿಯಿಂದ ಅವರು ಹೇಳುವ ದರಕ್ಕೆ  ಚೌಕಾಶಿ ಮಾಡದೆ ಜೇನನ್ನು ಖರೀದಿ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ. ದಿನಕ್ಕೆ -2 ಚಮಚ  ತಿನ್ನುವವರು ಎರಡು ದಿನಕ್ಕೊಮ್ಮೆ ತಿಂದರೂ ಅಡ್ಡಿಇಲ್ಲ.

 • ಮಾರುಕಟ್ಟೆಯಲ್ಲಿ ಲಭ್ಯವಾಗುವ  ಜೇನನ್ನು  ಬಳಸಬೇಡಿ.
 • ಜೇನು ಪೆಟ್ಟಿಗೆ ಇಟ್ಟರೆ ಅದರಿಂದ ಜೇನು ತನ್ನಷ್ಟಕ್ಕೇ ನಳ್ಳಿಯಲ್ಲಿ ಬರಲಾರದು.
 • ಶುದ್ಧ ಜೇನು ಉತ್ಪಾದನೆ ಅಷ್ಟು ಸುಲಭದ ಕೆಲಸವಲ್ಲ.
 • ಜೇನು ನೊಣಗಳು ಕಷ್ಟಪಟ್ಟು ಜೇನು ಸಂಗ್ರಹಿದಷ್ಟೇ ಕೆಲಸ ಜೇನು ಕುಟುಂಬ ಸಾಕಿ , ಜೇನು ಉತ್ಪಾದನೆ ಮಾಡಲು ಇರುತ್ತದೆ.

ಜೇನು ತಿನ್ನುವುದನ್ನು ಕಡಿಮೆ ಮಾಡಿ. ಸಾಧ್ಯವಾದರೆ ನೀವೂ ಜೇನು ಸಾಕಿ. ಅದು ಕಷ್ಟದ ಕೆಲಸವಲ್ಲ. ತಾಳ್ಮೆ ಎಂಬುದು ಇದ್ದರೆ ಜೇನು ಸಾಕಣೆ ಸುಲಭ. ಜೇನು ನೊಣ ಅದರಷ್ಟಕ್ಕೆ ಕಚ್ಚುವುದಿಲ್ಲ, ನಮ್ಮ ಗಾಬರಿ ಅದನ್ನು ಕಚ್ಚುವಂತೆ ಮಾಡುತ್ತದೆ. ಸ್ಥಳೀಯ ಜೇನು ಸಾಕುವವರು ಇದ್ದರೆ ಅವರಿಗೆ ಪ್ರೋತ್ಸಾಹಿಸಿ. ಇಲ್ಲವೇ ತೊಂದರೆ ಮಾಡಬೇಡಿ.

Leave a Reply

Your email address will not be published. Required fields are marked *

error: Content is protected !!