ಜೇನುತುಪ್ಪ ತಿನ್ನುವವರು ಇದನ್ನೊಮ್ಮೆ ಓದಿ.

ಪಕ್ವವಾದ ಜೇನು

ಪ್ರಕೃತಿಯಲ್ಲಿ ಮನುಷ್ಯವ ಹಸ್ತಕ್ಷೇಪ ಇಲ್ಲದೆ ಸಿದ್ಧವಾಗುವ ಪ್ರಾಕೃತಿಕ ವಸ್ತು ಜೇನು. ಇದು ಪುಷ್ಪಗಳಲ್ಲಿ ಉತ್ಪತ್ತಿಯಾಗಿ ಜೇನು ನೊಣಗಳಿಂದ ಸಂಗ್ರಹಿಸಲ್ಪಡುತ್ತದೆ. ಅವುಗಳೇ ಅದನ್ನು ಪರಿಷ್ಕರಿಸಿಯೂ ಕೊಡುತ್ತವೆ.

ವಿಜ್ಞಾನ ಎಷ್ಟೇ ಮುಂದುವರಿದರೂ ಜೇನುತುಪ್ಪವನ್ನು ತಯಾರಿಸಲು ಯಾವ ವಿಜ್ಞಾನಿಗಳಿಗೂ ಇನ್ನೂ ಸಾಧ್ಯವಾಗಿಲ್ಲ. ಜೇನುತುಪ್ಪ ಮಾಡಲು ಜೇನ್ನೊಣಗಳಿಂದ ಮಾತ್ರ ಸಾಧ್ಯ. ಅದಕ್ಕೆ ಹೇಳುವುದು ಪ್ರಕೃತಿಗೆ ಪ್ರಕೃತಿಯೇ ಸಾಟಿ ಎಂದು.

ಪರಾಗ ಸಂಗ್ರಹಿಸುವ ಕೆಲಸದಲ್ಲಿ ಜೇನು ನೊಣ.

 ಜೇನು ತಯಾರಾಗುವುದು ಹೀಗೆ:

  • ಹೂವು ಅರಳುವುದರ ಸೂಚನೆ ಜೇನು ನೊಣಗಳ ಗಮನಕ್ಕೆ ಅದರ ಸುಪಾಸನೆ ಮೂಲಕ ದೊರೆಯುತ್ತದೆ.
  • ಮಾನವನ ಮೂಗಿಗೆ  ಗೊತ್ತಾಗುವ ಪರಿಮಳ ಇರಲಿ, ಇಲ್ಲದಿರಲಿ, ಜೇನು ನೊಣಗಳ ಆಘ್ರಾಣಿಸುವ ಶಕ್ತಿಗೆ ಅದು ಗೊತ್ತಾಗುತ್ತದೆ.
  • ಆ ಸುವಾಸನೆ ಬೀರುವ ಸ್ಥಳಕ್ಕೆ ಕರಾರುವಕ್ಕಾಗಿ ತಲುಪಿ ವಿಳಂಬ ಮಾಡದೆ ಮಧು ರೂಪದಲ್ಲಿರುವ ಜೇನಿನ ದ್ರವವನ್ನು  ನೊಣಗಳು ತಮ್ಮ ಶರೀರದೊಳಗೆ ತುಂಬಿಸಿಕೊಂಡು ತಮ್ಮ ವಾಸಸ್ಥಾನಕ್ಕೆ ಬರುತ್ತವೆ.
  • ಹೂವಿನಿಂದ ಪುಷ್ಪರಸವನ್ನು ಸಂಗ್ರಹಿಸಿ, ಗೂಡಿಗೆ ಬರುವಾಗ ಜೇನ್ನೊಣವು ಸುಮಾರು ಅರವತ್ತು ಬಾರಿ ಬಾಯಿಯಿಂದ ತನ್ನ ಶರೀರದಲ್ಲಿ ಇರುವ ಜೇನು ಕೋಶಕ್ಕೆ, ಜೇನು ಕೋಶದಿಂದ ಬಾಯಿಗೆ ವರ್ಗಾಯಿಸುತ್ತಾ ಬರುತ್ತದೆ.
  • ಆಗ ಕೆಲವು ಕಿಣ್ವಗಳು ಸೇರಿ ರಾಸಾಯನಿಕ ಪರಿವರ್ತನೆ ಹೊಂದಿ ಜೇನುತುಪ್ಪವಾಗಿ ಮಾರ್ಪಾಡಾಗುತ್ತದೆ.
  • ಜೇನ್ನೊಣವು ಇದನ್ನು ಗೂಡಿನಲ್ಲಿರುವ ಎರಿಯ ಕೋಶದೊಳಗೆ ಉಗುಳುತ್ತದೆ.
  • ಸಂಸ್ಕೃತದಲ್ಲಿ ಜೇನುತುಪ್ಪಕ್ಕೆ “ಮಧೂಚ್ಛಿಷ್ಟ” ಎನ್ನುವರು.ಅಂದರೆ ಜೇನ್ನೊಣದ ಎಂಜಲು.)
ಜೇನು ಸಂಗ್ರಹ ಪಾತ್ರೆ
  • ಹೂವಿನಲ್ಲಿರುವ ಸಿಹಿ ಅಥವಾ ಮಧುವಿಗೂ,ಅದನ್ನು ಹೀರಿ,ನೊಣಗಳು ತಮ್ಮ ದೇಹದೊಳಗೆ ಸೇರಿಸಿ ಕೊಂಡು  ತಮ್ಮ ಗೂಡಿನ ಎರಿಯ ಅವಕಾಶದ ಒಳಗೆ ಉಗುಳುವಾಗ ಅದರಲ್ಲಿ ಸಾಕಷ್ಟು ಪರಿವರ್ತನೆ ಆಗುತ್ತದೆ. 
  • ಒಂದು ಎರಿ ಕೋಣೆಗೆ ಒಂದೇ ಸಲ ಜೇನನ್ನು ತುಂಬಿಸುವುದಲ್ಲ.
  • ಅದು ತುಂಬುವ ವರೆಗೂ ತಂದು ತಂದು ಹಾಕುತ್ತವೆ.
  • ಅದು ತುಂಬಿದ ನಂತರ ಮತ್ತೊಂದು ಕೋಣೆಯನ್ನು ಆಯ್ಕೆ ಮಾಡುತ್ತದೆ.
  • ಮಧುವನ್ನು ತಂದು ಉಗುಳಿದಾಗಿನಿಂದ  ಕೋಣೆ ತುಂಬುವ ವರೆಗೂ ಅದರ ಮೇಲ್ಭಾಗದಲ್ಲೆ ಕೆಲವು ಕೆಲಸಗಾರ ನೊಣಗಳು ತಮ್ಮ ರೆಕ್ಕೆಯ ಮೂಲಕ ಗಾಳಿ ಹಾಕುತ್ತಾ ಅದನ್ನು ಮತ್ತೂ ಮತ್ತೂ ಪರಿಷ್ಕರಣೆಗೆ ಒಳಪಡಿಸುತ್ತವೆ.
  • ಅವುಗಳಿಗೆ ತೃಪ್ತಿಯಾಗುವಷ್ಟು ಪರಿಷ್ಕರಣೆ ಆದ ನಂತರ ಆ ಕೋಣೆಯನ್ನು ಅವು ಮುಚ್ಚಿ ಸೀಲ್ ಮಾಡುತ್ತವೆ. ಇದು ಪರಿಶುದ್ಧವಾದ ಜೇನು ಆಗಿರುತ್ತದೆ.
ಜೇನು ನೊಣ

ಜೇನು ಆಗಬೇಕಾದರೆ ಎಷ್ಟು ಕಷ್ಟ ಇದೆ?

  • ಒಂದು ಚಮಚ ಜೇನುತುಪ್ಪ ತಯಾರಿಸಲು ಈ ಪುಟ್ಟ ಜೇನ್ನೊಣ ಏಳು ಸಾವಿರ ಹೂವಿನ ಬಳಿಗೆ ಹೋಗಬೇಕಾಗುತ್ತದೆ.
  • ಹೀಗೆ ಉಗುಳಿದ ಜೇನುತುಪ್ಪದಲ್ಲಿ ಇರುವ ನೀರಿನ ಅಂಶವನ್ನು ಗೂಡಿನೊಳಗೆ ಇರುವ ಜೇನ್ನೊಣಗಳು ರೆಕ್ಕೆಗಳ ಮೂಲಕ ಗಾಳಿ ಹಾಕಿ ತೆಗೆದು ಪರಿಶುದ್ಧವಾದ ಅನಂತರ ಜೇನುಮೇಣದಿಂದ ಸೀಲ್ ಮಾಡುತ್ತವೆ.
  • ಈ ರೀತಿ ಸೀಲ್ ಮಾಡಿದ ಜೇನುತುಪ್ಪವನ್ನು ಮೆಶಿನ್ ನ ಸಹಾಯದಿಂದ ತೆಗೆದು ಬಾಟಲ್ ಗಳಲ್ಲಿ ತುಂಬಿಸಿಟ್ಟರೆ ಹಲವು ವರ್ಷಗಳ ತನಕ ಕೆಡದಂತೆ ಸಂಗ್ರಹಿಸಿಟ್ಟುಕೊಳ್ಳಬಹುದು.
  • ಜೇನುತುಪ್ಪಕ್ಕೆ ಚಿಕ್ಕ ಹನಿ ನೀರು ಸೇರಿದರೂ ಕೆಡಬಹುದು.
  • ಆದ ಕಾರಣ ಜೇನು ತುಪ್ಪ ತೆಗೆಯುವವರು ಅದನ್ನು ತೆಗೆಯುವಾಗ ಬಳಸುವ ಯಾವುದೇ ಸಾಧನ ಸಲಕರಣೆಗಳನ್ನು ಪೂರ್ತಿಯಾಗಿ ಒಣಗಿಸಿ, ಸ್ವಲ್ಪವೂ ನೀರಿನ ಅಂಶ , ಕಲ್ಮಶ ಇಲ್ಲದಂತೆ ಮಾಡಿಕೊಂಡೂ ಜೇನು ಸಂಗ್ರಹಿಸುತ್ತಾರೆ.
  • ಜೇನು ತುಪ್ಪವನ್ನು ತೆಗೆದ ಮೇಲೆ  ಅದನ್ನು ಅಗಲದ ಪಾತ್ರೆಯಲ್ಲಿ ಹಾಕಿ ಒಂದು ಶುದ್ಧವಾದ ಬಟ್ಟೆ ಮುಚ್ಚಿ ಒಂದು ದಿನ ಪೂರ್ತಿ ಪ್ರಖರವಾದ ಬಿಸಿಲಿನಲ್ಲಿ ಇಡುವ ಪ್ರತೀತಿ ಇರುತ್ತದೆ.
  • ಕಾರಣ ಏನಾದರೂ ತೇವಾಂಶ ಇದ್ದರೆ ಅದು ಅವಿಯಾಗಿ ಹೋಗಲಿ ಎಂಬುದು.
ಜೇನಿನ ಪ್ರಮುಖ ಆಗರ ಕುಂಟು ನೇರಳೆ
ಮರೆಯಾಗುತ್ತಿರುವ ಜೇನಿನ ಪ್ರಮುಖ ಆಗರ ಕುಂಟು ನೇರಳೆ

ಜೇನು ತುಪ್ಪವನ್ನು ಹೇಗೆ ಸಂಗ್ರಹಿಸಬೇಕು:

  • ಜೇನು ತುಪ್ಪವನ್ನು ಅಹಿಂಸಾತ್ಮಕ ವಿಧಾನದಲ್ಲಿ ಸಂಗ್ರಹಿಸುವುದಕ್ಕೆ ಜೇನು ಸಾಕಣೆ ಎನ್ನುತ್ತಾರೆ.
  • ಈ ರೀತಿ ಸಂಗ್ರಹಿಸಿದ ಜೇನು ಸಾಮಾನ್ಯವಾಗಿ  3-4 ವರ್ಷ ಇಟ್ಟರೂ ಏನೂ ರುಚಿ ಕೆಡುವುದಿಲ್ಲ. 
  • ಇದನ್ನು ಹಿಂದೆ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ ಇಡುತ್ತಿದ್ದರು.
  • ಅದು ಉತ್ತಮ. ಆದರೆ ಈಗ ಗಾಜಿನ ಬಾಟಲಿಗಳ ಲಭ್ಯತೆ ಹಾಗೂ ಸಾಗಾಣಿಕೆ ದೃಷ್ಟಿಯಿಂದ ಆಹಾರ ಯೋಗ್ಯ  ಬಾಟಲಿಯಲ್ಲಿ ಸಂಗ್ರಹಿಸಿ ಇಡಲಾಗುತ್ತದೆ.
  • ಈ ಬಾಟಲಿಗಳನ್ನು ತಂಪಾದ  ಕೋಣೆಯಲ್ಲಿ (ಕವಾಟಿನ ಒಳಗೆ,ಅಥವಾ ಗೂಡಿನ ಒಳಗೆ) ಇಡುವುದು ವಾಡಿಕೆ.
  • ಅಲ್ಲಿಂದ ಬಳಕೆಗೆ ಬೇಕಾದಾಗ ತೆಗೆದು ಮತ್ತೆ ಅಲ್ಲೇ ಇಡಬೇಕು.
  • ಬಿಸಿಲು ಬೀಳುವಲ್ಲಿ, ಹೆಚ್ಚು ಸೆಖೆ ಇರುವಲ್ಲಿ ದಾಸ್ತಾನು ಇಡುವುದು ಯುಕ್ತವಲ್ಲ.  
  • ಜೇನುತುಪ್ಪವನ್ನು ಫ್ರಿಜ್ ನಲ್ಲಿ ಇಟ್ಟರೆ ಔಷಧೀಯ ಗುಣ ಇಲ್ಲದಂತಾಗುತ್ತದೆ.
  • ಶುದ್ಧ ಜೇನುತುಪ್ಪವನ್ನು ಫ್ರಿಜ್ ನಲ್ಲಿ ಇಡುವ ಅಗತ್ಯ ಇಲ್ಲ.
  • ಅದು ತಂಪಾದ ಜಾಗದಲ್ಲಿಟ್ಟರೆ ಕೆಡುವುದೇ ಇಲ್ಲ.
  • ಹಾಕುವ ಚಮಚ ಇತ್ಯಾದಿಗಳು ಒಣಗಿ ಸ್ವಚ್ಚವಾಗಿರಬೇಕು.
ಸೀಸನ್ ನ ಮೊದಲ ಜೇನು ಕೊಡುವ ಹೂವು

ಜೇನು ತುಪ್ಪ ಶುದ್ಧವಾಗಿದೆಯೇ ತಿಳಿಯುವುದು ಹೀಗೆ:

  • ಪ್ರಯೋಗಾಲಯದಲ್ಲಿ ಶುದ್ಧತೆಯ ಬಗ್ಗೆ ಸರಿಯಾದ ಮಾಹಿತಿ ಸಿಗಬಹುದಾದರೂ ನಮ್ಮಲ್ಲೇ ಕೆಲವು ಪರೀಕ್ಷೆಗಳನ್ನು ಸುಲಭವಾಗಿ ಮಾಡಬಹುದು.
  • ವೃತ್ತಪತ್ರಿಕೆಗೆ ಸ್ವಲ್ಪ ಜೇನುತುಪ್ಪವನ್ನು ಹಾಕಿ ಸ್ವಲ್ಪ ಹೊತ್ತು ಬಿಟ್ಟು ಜೇನುತುಪ್ಪವನ್ನು ಕೈಯಲ್ಲಿ ಒರೆಸಿ ತೆಗೆದಾಗ ಶುದ್ಧ ಜೇನುತುಪ್ಪ ಆದರೆ ಪತ್ರಿಕೆ ಒದ್ದೆಯಾಗದೆ ಮೊದಲಿನಂತಿರುವುದನ್ನು ಕಾಣಬಹುದು.
  • ಕಲಬೆರಕೆ ಆದರೆ ಪತ್ರಿಕೆ ಒದ್ದೆಯಾಗುತ್ತದೆ.
  •  ಪಾತ್ರೆಯಲ್ಲಿರುವ ನೀರಿಗೆ ಸ್ವಲ್ಪ ಜೇನುತುಪ್ಪವನ್ನು ಹಾಕಿದಾಗ ಶುದ್ಧ ಜೇನುತುಪ್ಪ ಆಗಿದ್ದರೆ ನೇರವಾಗಿ ಪಾತ್ರೆಯ ತಳಭಾಗದಲ್ಲಿ ಹೋಗಿ ಸೇರಿಕೊಳ್ಳುತ್ತದೆ.
  • ನೀರಿನೊಂದಿಗೆ ಬೇಗನೆ ಮಿಶ್ರವಾಗುವುದಿಲ್ಲ. ಕಲಬೆರಕೆ ಆಗಿದ್ದರೆ ನೀರಿನೊಂದಿಗೆ ಬೆರೆತು ಹೋಗುತ್ತದೆ.
  • ಜೇನುತುಪ್ಪ ಹರಳುಗಟ್ಟಿದಾಗ ಕಲಬೆರಕೆ ಎಂದು ಭಾವಿಸುವುದಿದೆ.
  • ಆದರೆ ಅದು ಕಲಬೆರಕೆ ಅಲ್ಲ.
  • ರಬ್ಬರ್ ಮರದ ಚಿಗುರಿನಿಂದ ಬರುವ ಜೇನುತುಪ್ಪ ಹರಳು ಗಟ್ಟಬಹುದು.
  • ಶುದ್ಧ ಜೇನುತುಪ್ಪವನ್ನು ಫ್ರಿಜ್ ನಲ್ಲಿ ಇಟ್ಟರೂ ಹರಳುಗಟ್ಟುವ ಸಾಧ್ಯತೆ ಇದೆ.
Advertisement 4

ಅಹಿಂಸಾತ್ಮಕ ಜೇನು ಸಾಕಾಣಿಕೆ ಅಥವಾ ಸಂಗ್ರಹಕ್ಕೆ ಹೊಂದುವ ಏಕೈಕೆ ಜೇನು ಪ್ರವರ್ಗ ಎಪಿಸ್ ಸೆರೆನಾ ಅಥವಾ ಎಪಿಸ್ ಇಂಡಿಕಾ. ಉಳಿದೆಲ್ಲಾ ಪ್ರವರ್ಗದ ಜೇನನ್ನು ( ಹೆಜ್ಜೇನು, ಕೋಲ್ಜೇನು, ಮುಜಂಟಿ) ಕೈಯ ಸ್ಪರ್ಶ ಇಲ್ಲದೆ ತೆಗೆಯಲಿಕ್ಕೆ ಆಗುವುದಿಲ್ಲ. ದನ್ನು ಪೆಟ್ಟಿಗೆಯಲ್ಲಿ ಸಾಕಿ ಯಂತ್ರದಲ್ಲಿ ಜೇನು ತೆಗೆಯಲಿಕ್ಕೆ ಆಗುವುದಿಲ್ಲ.

 ಕೆಲವೊಂದು ಹೂವಿನಿಂದ ಸಿಗುವ ಜೇನುತುಪ್ಪ ಸ್ವಲ್ಪ ಕಹಿ ರುಚಿ, ಬಣ್ಣದಲ್ಲಿ ವ್ಯತ್ಯಾಸ ಇರಬಹುದು. ಅದು ಕಲಬೆರಕೆ ಅಲ್ಲ. ಹೂವನ್ನು ಹೊಂದಿಕೊಂಡು ಜೇನಿಗೆ ಸ್ವಲ್ಪ ಸ್ವಲ್ಪ ಬಣ್ಣ ಬದಲಾವಣೆ ಬರುತ್ತದೆ.ಅದೇ ರೀತಿಯಲ್ಲಿ ದಪ್ಪ ಸಹ ಸ್ವಲ್ಪ ಬದಲಾವಣೆ ಬರುತ್ತದೆ. ಕೆಲವೊಂದು ಪುಷ್ಪಗಳು ಈಗ ವಿರಳವಾದ ಕಾರಣ ಹಿಂದಿನಂತೆ ವೈವಿಧ್ಯಮಯವಾದ ಜೇನನ್ನು ಸಂಗ್ರಹಿಸುವುದು ಅಸಾಧ್ಯವಾಗಬಹುದು. ಹಿಂದೆ ಪ್ರತೀ ಸೀನನ್ ನಲ್ಲೂ ಆಯಾ ಹೂವಿನ ಜೇನು ಎಂದು ಪ್ರತ್ಯೇಕ ಪ್ರತ್ಯೇಕವಾಗಿ ಸಂಗ್ರಹಿಸುವವರೂ ಇದ್ದರು.

ಜೇನು ತಿನ್ನುವವರು ಮೊದಲು  ಪರಿಶುದ್ಧವಾದ ಜೇನು ಸವಿಯುವಾಗ ಯಾವ ರುಚಿಯನ್ನು  ಗಮನಿಸಿದ್ದೀರೋ ಅದನ್ನು ನೆನಪಿಟ್ಟುಕೊಂಡು ಜೇನಿನ  ಪರಿಶುದ್ದತೆಯ ಬಗ್ಗೆ  ತೀರ್ಮಾನವನ್ನು ಹೊಂದಬೇಕು. 

ಶಿರಂಕಲ್ಲು ಕೃಷ್ನ ಭಟ್

                   ಲೇಖನ; ಶಿರಂಕಲ್ಲು ಕೃಷ್ಣ ಭಟ್, ಇವರು ಹಿರಿಯ ಜೇನು ವ್ಯವಸಾಯಗಾರರು. ತಮ್ಮ ತೋಟದಲ್ಲಿ ಜೇನು ಪೆಟ್ಟಿಗೆ ಇಟ್ಟು ಅದರಿಂದ ಅಹಿಂಸಾತ್ಮಕವಾಗಿ ಜೇನು ಸಂಗ್ರಹಿಸುವವರು. 7975159138

5 thoughts on “ಜೇನುತುಪ್ಪ ತಿನ್ನುವವರು ಇದನ್ನೊಮ್ಮೆ ಓದಿ.

Leave a Reply

Your email address will not be published. Required fields are marked *

error: Content is protected !!