ಅಡಿಕೆಮರಗಳಿಗೆ ಈಗ ಯಾಕೆ, ಮತ್ತು ಯಾವ ಗೊಬ್ಬರ ಹಾಕಬೇಕು?

by | May 31, 2021 | Horticulture Crops (ತೋಟದ ಬೆಳೆಗಳು), Arecanut (ಆಡಿಕೆ) | 6 comments

ಅಡಿಕೆ ಮರಗಳಿಗೆ ಮುಂಗಾರು ಪೂರ್ವದಲ್ಲಿ ಗೊಬ್ಬರ ಹಾಕಿದರೆ ಅದರ ಫಲಿತಾಂಶ ಅಪಾರ. ಮುಂಗಾರು ಪೂರ್ವದಲ್ಲಿ ಗೊಬ್ಬರ  ಹಾಕಲು ಮಿಸ್ ಮಾಡಿಕೊಳ್ಳಬೇಡಿ. ಇದರಿಂದ ಮುಂದಿನ ವರ್ಷದ ಬೆಳೆಗೆ ತೊಂದರೆ ಆಗುತ್ತದೆ.

ಬೇಸಿಗೆ ಕಾಲ ಕಳೆದು ಮಳೆಗಾಲ ಪ್ರಾರಂಭವಾಗುವ ಈ ಸಮಯದಲ್ಲಿ  ಋತುಮಾನದ ಬದಲಾವಣೆ ಉಂಟಾಗುತ್ತದೆ. ಆಗ ಸಸ್ಯಗಳ ಬೆಳೆವಣಿಗೆಯಲ್ಲಿ ಒಂದು ಬದಲಾವಣೆಯೂ ಆಗುತ್ತದೆ. ಈ ಸಮಯದಲ್ಲಿ ಎಲ್ಲಾ ಸಸ್ಯಗಳಲ್ಲೂ  ಬೇರಿನ ಬೆಳವಣಿಗೆ, ಹೊಸ ಬೇರು ಮೂಡುವುದು, ಸಸ್ಯದ ಎಲೆಗಳು ಹೆಚ್ಚು ಚಟುವಟಿಕೆಯಲ್ಲಿ ಇರುತ್ತವೆ. ಬೇಸಿಗೆಯಲ್ಲಿ ಭಾಗಶಃ ಒಣಗಿದ್ದರೂ ಸಹ ಮಳೆ ಬಂದ ತಕ್ಷಣ ಅದು ಹೊಸ ಚೈತನ್ಯದಲ್ಲಿ ಬೆಳವಣಿಗೆ ಪ್ರಾರಂಭಿಸುತ್ತದೆ. ಇದನ್ನು ಸಂಕ್ಷಿಪ್ತವಾಗಿ ಸಸ್ಯಗಳಿಗೆ ಹಸಿವಿನ ಕಾಲ ಎಂದು ಹೇಳಬಹುದು.

 • ಹಸಿವು ಇರುವಾಗ ಆಹಾರ ತಿನ್ನಬೇಕು.
 • ಆಗ ಅದು ದೇಹಕ್ಕೆ ತೆಗೆದುಕೊಳ್ಳುತ್ತದೆ.
 • ಅದರಿಂದ ಶಕ್ತಿ ಲಭ್ಯವಾಗುತ್ತದೆ. ಇದು ಸಸ್ಯಗಳಿಗೂ ಅನ್ವಯ.
 • ಬಹಳ ಜನ ಮಳೆಗಾಲದಲ್ಲಿ ಗೊಬ್ಬರ ಕೊಟ್ಟರೆ ಅದು ಮಳೆ ನೀರಿಗೆ ತೊಳೆದು ಹೋಗುತ್ತದೆ ಎಂದು  ಕೊಡುವುದಿಲ್ಲ.
 • ಮಳೆ ನೀರಿಗೆ ತೊಳೆದು ಹೋಗದಂತೆ ರಕ್ಷಣೆ ಮಾಡಿ ಗೊಬ್ಬರ ಕೊಡಬೇಕು.
fresh arecanut yield - ಬೆಳೆಯುತ್ತಿರುವ ಅಡಿಕೆ
ಬೆಳೆಯುತ್ತಿರುವ ಅಡಿಕೆ

ಅಡಿಕೆಮರಗಳಿಗೆ ಈಗ ಗೊಬ್ಬರ  ಕೊಡುವುದರ ಪ್ರಯೋಜನ:

 • ಅಡಿಕೆಮರದಲ್ಲಿ ಈಗ ಫಸಲು ಇರುತ್ತದೆ. ಮುಂದಿನ ಸಾಲಿನ ಫಸಲಿನ ಹೂ ಗೊಂಚಲು ಸಹ ಎಲೆ ಕಂಕುಳಲ್ಲಿ ಸಣ್ಣದಾಗಿ ಮೂಡಲು ಸಿದ್ದವಾಗಿರುತ್ತದೆ.
 • ಒಂದು ಮರದಲ್ಲಿ 8-10 ಎಲೆಗಳಿರುತ್ತವೆ. ಸುಳಿ ಭಾಗದ ಒಂದೆರಡು ಎಲೆಗಳ ಕಂಕುಳಲ್ಲಿ  ಮುಂದಿನ ವರ್ಷದ ಹೂ ಗೊಂಚಲಿನ ಮೂಡುವಿಕೆ ಪ್ರಾರಂಭವಾಗಿರುತ್ತದೆ. 
 • ಬೆಳೆಯುತ್ತಿರುವ ಕಾಯಿಗಳಿಗೆ ಅಗತ್ಯವಾಗಿ ಪೋಷಕಾಂಶಗಳು ಬೇಕು.
 • ಜೊತೆಗೆ ಮುಂದಿನ ವರ್ಷದ ಹೂ ಗೊಂಚಲಿನ ಬೆಳವಣಿಗೆಗೂ ಸಹ ಅಗತ್ಯವಾಗಿ ಬೇಕು.
 • ಒಂದು ವೇಳೆ ಈಗ ಗೊಬ್ಬರವನ್ನು ಕೊಡದೆ ಇದ್ದರೆ, ಇರುವ ಕಾಯಿಗಳು ಹೇಗಾದರೂ ಲಭ್ಯವಿರುವ ಪೋಷಕಗಳನ್ನು ಬಳಸಿ ಬೆಳೆಯಬಹುದು.
 • ಸ್ವಲ್ಪ  ಬೆಳವಣಿಗೆ ನಿಧಾನವಾಗಬಹುದು. ಕಾಯಿಗಳು ಅಲ್ಪ ಸ್ವಲ್ಪ ಸಣ್ಣದೂ ಆಗಬಹುದು.
 • ಆದರೆ ಮುಂದಿನ ವರ್ಷದ ಹೂ ಗೊಂಚಲಿಗೆ ಮಾತ್ರ ಆಹಾರದ ಕೊರತೆಯಾಗುತ್ತದೆ.
 • ಇದರಿಂದ ಮುಂದಿನ ಸೀಸನ್  (ಜನವರಿ – ಫೆಬ್ರವರಿ) ನಲ್ಲಿ ಬರುವ ಹೂ ಗೊಂಚಲಿನ ಗಾತ್ರ ಕಡಿಮೆಯಾಗಬಹುದು.
 • ಮಿಡಿ ಉದುರುವುದು, ಹೂ ಗೊಂಚಲು ಒಣಗುವುದು ಇತ್ಯಾದಿ ಸಮಸ್ಯೆಗಳ ಸಾಧ್ಯತೆ ಹೆಚ್ಚು.
 • ಇದಕ್ಕೆಲ್ಲಾ ಪರಿಹಾರ ಮುಂಗಾರು ಪೂರ್ವದಲ್ಲಿ ಗೊಬ್ಬರ ಕೊಡುವುದು. ಅಥವಾ ಹಸಿವು ಇರುವಾಗ ಗೊಬ್ಬರ ಕೊಡುವುದು.

ಹೇಗೆ ಗೊಬ್ಬರ ಕೊಡಬೇಕು:

 • ಅಡಿಕೆಮರಗಳಿಗೆ ಪೋಷಕಾಂಶ ಕೊಡುವಾಗ ಬುಡ ಭಾಗದಿಂದ 2 ಅಡಿ ದೂರದಲ್ಲಿ ಕೊಡುವುದು ಸೂಕ್ತ.
 • ಬುಡಕ್ಕೆ ಗೊಬ್ಬರ ಕೊಡಬಾರದು. ಅಲ್ಲಿ ಪೋಷಕಗಳನ್ನು ಹೀರುವ ಬೇರುಗಳು ಇರುವುದಿಲ್ಲ.
 • ಅನುಕೂಲ ಇದ್ದರೆ ಮರದ /ಸಸಿಯ ಬುಡಭಾಗವನ್ನು 1-2 ಇಂಚಿನಷ್ಟು ಮಣ್ಣು ಕೆರೆದು ಆ ಭಾಗಕ್ಕೆ ಹಾಕಬೇಕಾದ ಗೊಬ್ಬರವನ್ನು ಹಾಕಿ ಮಣ್ಣನ್ನು ಮುಚ್ಚಬೇಕು.
 • ಕೆಲಸದವರ ಸಮಸ್ಯೆಯಾದರೆ ಮರದ ನಾಲ್ಕೂ ದಿಕ್ಕಿನಲ್ಲಿ ಹಾರೆಯಲ್ಲಿ 3-4 ಇಂಚಿನಷ್ಟು ಮಣ್ಣನ್ನು ತೆಗೆದು ಆ ಭಾಗಕ್ಕೆ  ಗೊಬ್ಬರವನ್ನು ಸಮಪಾಲು ಮಾಡಿ ಹಂಚಿ ಹಾಕಿ ಮಣ್ಣು ಮುಚ್ಚಬೇಕು.
 • ಹನಿ ನೀರಾವರಿ ಮಾಡಿದ ತೋಟವಾದರೆ ನೀರು ತೊಟ್ಟಿಕ್ಕುವ ಭಾಗದಲ್ಲಿ ಬೇರಿಗೆ ಪೆಟ್ಟಾಗದಂತೆ ಮಣ್ಣು ಕೆರೆದು ಆ ಭಾಗಕ್ಕೆ ಗೊಬ್ಬರವನ್ನು ಹಾಕಿ ಮುಚ್ಚಬೇಕು.
 • ಹನಿ ನೀರಾವರಿ ವ್ಯವಸ್ಥೆಯಲ್ಲಿ ಎಲ್ಲಿ ನೀರು ತೊಟ್ಟಿಕ್ಕುತ್ತದೆಯೋ ಅಲ್ಲೇ ಬೇರಿನ ಸಾಂದ್ರತೆ ಹೆಚ್ಚು ಇರುತ್ತದೆ.
 • ಅಲ್ಲಿಗೆ ಗೊಬ್ಬರ ಕೊಟ್ಟರೆ ಅದು ಸಮರ್ಪಕವಾಗಿ ಲಭ್ಯವಾಗುತ್ತದೆ.
 • ಮರದ ನಾಲ್ಕೂ ದಿಕ್ಕಿನಲ್ಲಿ ತೂತು ಮಾಡಿ ಗೊಬ್ಬರ ಕೊಡುವುದು ಉತ್ತಮ ವಿಧಾನ.
 • ಇದನ್ನು ಪ್ಯಾಕೆಟ್ ಮೆನ್ಯೂರಿಂಗ್ ಎಂದು ಕರೆಯಲಾಗುತ್ತದೆ.
 • ಈ ವಿಧಾನದಲ್ಲಿ ಗೊಬ್ಬರ ಹಾಕಿದರೆ ಬೇರಿಗೆ ಹಾನಿ ಉಂಟಾಗುವುದಿಲ್ಲ.
 • ಹಾಕಲು ಸುಲಭವಾಗುತ್ತದೆ. ಸ್ವಲ್ಪ ನಿಧಾನವಾಗಿ ಲಭ್ಯವಾಗುತ್ತದೆ.
Dabble dose is must if there is intercrop - ಮಿಶ್ರ ಬೆಳೆ ಇದ್ದಾಗ ದುಪ್ಪಟ್ತು ಗೊಬ್ಬರ ಕೊಡಬೇಕು
ಮಿಶ್ರ ಬೆಳೆ ಇದ್ದಾಗ ದುಪ್ಪಟ್ತು ಗೊಬ್ಬರ ಕೊಡಬೇಕು

ಎಷ್ಟು ಗೊಬ್ಬರ ಕೊಡಬೇಕು?

 • ಅಡಿಕೆಮರಕ್ಕೆ ವರ್ಷಕ್ಕೆ ಬೇಕಾಗುವ NPK ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಗೊಬ್ಬರಗಳು 100-40-140.
 • ಅಧಿಕ ಇಳುವರಿ ಕೊಡುವ ತಳಿಗಳಿಗೆ 120-60-150 ಪ್ರಮಾಣದಲ್ಲಿ ಕೊಡಲು ಶಿಫಾರಸು ಇದೆ.
 • ಇದನ್ನು ಮೂಲ ಗೊಬ್ಬರ ರೂಪದಲ್ಲಿಯೂ  (Basic fertiliser) ಕೊಡಬಹುದು.
 • ಕಾಂಪ್ಲೆಕ್ಸ್ ಗೊಬ್ಬರವಾಗಿಯೂ ಕೊಡಬಹುದು. ಒಟ್ಟಿನಲ್ಲಿ ಈ ಪ್ರಮಾಣಕ್ಕನುಗುಣವಾಗಿ ಸಮತೋಲನದಲ್ಲಿ ಕೊಡಬೇಕು.
 • ಸಾವಯವ ಗೊಬ್ಬರವಾಗಿ ಕೊಡುವುದಿದ್ದರೆ ಮರದ ಅವಶ್ಯಕತೆಗೆ ಬೇಕಾದಷ್ಟು ಮೂರನ್ನೂ ಸೇರಿಸಿ ಕೊಡಬೇಕು.
 • ಕುರಿ ಗೊಬ್ಬರ, ಕೋಳಿ ಗೊಬ್ಬರ ಕೊಡುವವರು ಪ್ರತೀ ಮರಕ್ಕೆ 2-3 ಕಿಲೋ ದಷ್ಟು ಬೂದಿಯನ್ನು ಹಾಕಬೇಕು.
 • ಸುಡುಮಣ್ಣು ಮುಂತಾದವುಗಳನ್ನು ಬುಟ್ಟಿ ಲೆಕ್ಕದಲ್ಲಿ ಹಾಕುವಾಗ ಪೊಟ್ಯಾಶ್ ಸತ್ವ ಪೂರೈಕೆಯಾಗುತ್ತದೆ. ಗೊಬ್ಬರ ಕೊಡುವಾಗ ಅದು ರಾಸಾಯನಿಕ ಗೊಬ್ಬರ ಆಗಿದ್ದಲ್ಲಿ ಅದನ್ನು ಮೂರು ಭಾಗ ಮಾಡಿ  ಕೊಡುವುದು  ಉತ್ತಮ. ಕನಿಷ್ಟ ಪಕ್ಷ ಎರಡು ಬಾರಿಯಾದರೂ ಕೊಡಬೇಕು. ಅದು ಮೇ ಕೊನೆವಾರ ದಿಂದ ಜೂನ್ ಎರಡನೇ ವಾರದ ತನಕ ಎರಡನೇ ಕಂತು ಸಪ್ಟೆಂಬರ್ ಕೊನೆ ವಾರದಿಂದ ಅಕ್ಟೋಬರ್ ಎರಡನೇ ವಾರದ ಒಳಗೆ. ಮೂರನೆಯದ್ದು. ಜನವರಿ ಕೊನೇ ವಾರದಿಂದ ಫೆಬ್ರವರಿ ಮೂರನೇ ವಾರದ ಒಳಗೆ ಕೊಡಬೇಕು.

ಯಾವ ಯಾವ ಗೊಬ್ಬರ ಹೇಗೆ:

 • ಯೂರಿಯಾ, ರಾಕ್ ಫೋಸ್ಫೇಟ್  ಮತ್ತು ಮ್ಯೂರೇಟ್ ಆಫ್  ಪೊಟ್ಯಾಶ್ ರೂಪದಲ್ಲಿ ಕೊಡುವುದಾದರೆ ಒಂದು ಮರಕ್ಕೆ ಮಳೆಗಾಲದ ಮೊದಲ ಕಂತು 220/3 = 75 (Round figur)   ಗ್ರಾಂ, ಯೂರಿಯಾ, 200/3= 70 ಗ್ರಾಂ ರಾಕ್ ಫೋಸ್ಫೇಟ್  ಮತ್ತು   230/3= 75 ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ಕೊಡಬೇಕು.
 • ಇದನ್ನು ರೌಂಡ್ ಫಿಗರ್ ಮಾಡಿ 75kg+75 kg+ 75 ಯನ್ನು ಮಿಶ್ರಣ ಮಾಡಿ ಪ್ರತೀ ಮರಕ್ಕೆ 150 ಗ್ರಾಂ ನಂತೆ ಹಾಕಬಹುದು. ಒಟ್ಟು 1000 ಗಿಡಗಳಿಗೆ ಸಾಕಾಗುತ್ತದೆ.
 • ಅಧಿಕ ಮಳೆಯಾಗುವ ಕಡೆ ಯೂರಿಯಾವನ್ನು 50 ಗ್ರಾಂ ಮಾಡುವುದು ಉತ್ತಮ. ಮಳೆಗಾಲದಲ್ಲಿ ಸಾಕಷ್ಟು ಸಾರಜನಕ ಮಣ್ಣಿಗೆ ಸೇರಿಕೊಳ್ಳುತ್ತದೆ.
 • ಅದನ್ನು ಮುಂದಿನ ಕಂತಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು.
 • ಮಳೆ ಕಡಿಮೆ ಇರುವಲ್ಲಿ ಈ ಪ್ರಮಾಣವನ್ನೇ ಮುಂದುವರಿಸಬಹುದು. ಇದು ಮೂರು ಕಂತುಗಳಲ್ಲಿ ಒಂದು ಕಂತಿನ ಗೊಬ್ಬರ.

10:26:26  ಗೊಬ್ಬರ ಕೊಡುವಾಗ;

 • 10:26:26 ಒಂದು ಮರಕ್ಕೆ 100 ಗ್ರಾಂ ಪ್ರಮಾಣದಲ್ಲಿ ಹಾಕಿದರೆ ಮರವೊಂದಕ್ಕೆ 10 ಗ್ರಾಂ ಸಾರಜನಕ 26 ಗ್ರಾಂ ರಂಜಕ ಮತ್ತು  26 ಗ್ರಾಂ ಫೋಟ್ಯಾಶ್ ಕೊಟ್ಟಂತೆ ಆಗುತ್ತದೆ. 
 • 100-40-140 ರ ಶಿಫಾರಿತ  ಪ್ರಮಾಣದಲ್ಲಿ ಸಾರಜನಕ  ಮತ್ತು ಪೊಟ್ಯಾಶ್  ಕೊಡುವಾಗ  26  ಗ್ರಾಂ ಸಾರಜನಕ ಕಡಿಮೆಯಾಗುತ್ತದೆ.
 • ಅದಕ್ಕೆ 50 ಗ್ರಾಂ ಯೂರಿಯಾ ಸೇರಿಸಬೇಕು. ರಂಜಕ ಸ್ವಲ್ಪ ಹೆಚ್ಚಾದರೂ ತೊಂದರೆ ಇಲ್ಲ. ಪೊಟ್ಯಾಶ್ ಕಡಿಮೆಯಾಗುತ್ತದೆ.
 • 45 ಗ್ರಾಂ ಪೊಟ್ಯಾಶ್ ಬದಲಿಗೆ 26  ಗ್ರಾಂ ಮಾತ್ರ ಕೊಟ್ಟಂತೆ ಆಗುತ್ತದೆ.
 • ಅದಕ್ಕಾಗಿ  ಮತ್ತೆ 40 ಗ್ರಾಂ ಪೊಟ್ಯಾಶ್ ಸೇರಿಸಬೇಕು.
 • 2 ಚೀಲ 10:26:26  ಗೊಬ್ಬರಕ್ಕೆ 1 ಚೀಲ ಯೂರಿಯಾ ಮತ್ತು 1 ಚೀಲ ಮ್ಯುರೇಟ್ ಆಫ್ ಪೊಟ್ಯಾಶ್ ಸೇರಿಸಬೇಕು. ಇದನ್ನು 200 ಗ್ರಾಂ ನಂತೆ ಪ್ರತೀ ಮರಕ್ಕೂ ಒಟ್ಟು 1000 ಸಸಿಗಳಿಗೆ ಕೊಡಬಹುದು. 
 • ಅಧಿಕ ಮಳೆಯಾಗುವ ಕಡೆ, ಅಧಿಕ ಕೊಟ್ಟಿಗೆ ಗೊಬ್ಬರ, ಕುರಿ ಕೋಳಿ ಗೊಬ್ಬರ  ಹಾಕುವವರು ಯೂರಿಯಾ ಬಿಡಬಹುದು.  ಪೊಟ್ಯಾಶ್ ಮಾತ್ರ ಸೇರಿಸಲೇಬೇಕು.
Mulching is important in rainy season - ಮಳೆಗಾಲಕ್ಕೆ ಬುಡಕ್ಕೆ ಮುಚ್ಚಿಗೆ ಅಗತ್ಯ
ಮಳೆಗಾಲ ದಲ್ಲಿ ಬುಡಕ್ಕೆ ಮುಚ್ಚಿಗೆ ಅಗತ್ಯ

DAP  ಗೊಬ್ಬರ  ಕೊಡುವವರು ಹೀಗೆ ಕೊಡಿ:

 • DAP ಯಲ್ಲಿ 18% ಸಾರಜನಕ + 48%  ರಂಜಕ ಇರುತ್ತದೆ. ಪೊಟ್ಯಾಶ್ ಇಲ್ಲ. ಅದನ್ನು ಹಾಕುವವರು ಯೂರಿಯಾ ಮತ್ತು ಮ್ಯುರೇಟ್ ಆಫ್ ಪೊಟ್ಯಾಶ್ ಸೇರಿಸಬೇಕು.
 • 100:40:40 ಪ್ರಮಾಣವನ್ನು 3 ವಿಭಾಗ ಮಾಡಿ ಅದಕ್ಕೆ ಅನುಗುಣವಾಗಿ ಗೊಬ್ಬರ ಕೊಡಬೇಕು.
 • 50 ಗ್ರಾಂ DAP ಯಲ್ಲಿ 9% ಸಾರಜನಕ 24% ರಂಜಕ ಇರುತ್ತದೆ. ಇಲ್ಲಿ ರಂಜಕ ಸಾಕು.
 • ಸಾರಜನಕ ಮೂಲಕ್ಕೆ 25 ಗ್ರಾಂ ಸಾರಜನಕ ಸೇರಿಸಬೇಕು.ಅಂದರೆ 50  ಗ್ರಾಂ  ಯೂರಿಯಾ ಸೇರಿಸಬೇಕು.
 • ಪೊಟ್ಯಾಶ್ ಗಾಗಿ ಮ್ಯುರೇಟ್ ಆಫ್ ಪೊಟ್ಯಾಶ್ ಅನ್ನು 60  ಗ್ರಾಂ ಸೇರಿಸಬೇಕು.

50 ಕಿಲೋ DAP ಮತ್ತು 50 ಕಿಲೊ ಯೂರಿಯಾ ಮತ್ತು 60 ಕಿಲೋ ಮ್ಯುರೇಟ್ ಆಫ್ ಪೊಟ್ಯಾಶ್ ಮಿಶ್ರಣ  ಮಾಡಿ ಪ್ರತೀ ಮರಕ್ಕೆ 160  ಗ್ರಾಂ ನಂತೆ ಹಾಕಿದರೆ 1000 ಗಿಡಕ್ಕೆ ಬರುತ್ತದೆ.  ಇದರ ಶೇ. ವಾರು 33:24:36 ಆಗುತ್ತದೆ.

ಈ ರೀತಿ ಮರದ ನಾಲ್ಕು ದಿಕ್ಕಿನಲ್ಲಿ ತೂತು ಮಾಡಿ ಗೊಬ್ಬರ ಕೊಡುವುದು ಸುಲಭ.
ಈ ರೀತಿ ಮರದ ನಾಲ್ಕು ದಿಕ್ಕಿನಲ್ಲಿ ತೂತು ಮಾಡಿ ಗೊಬ್ಬರ ಕೊಡುವುದು ಸುಲಭ.
 • ಸುಫಲಾ ಗೊಬ್ಬರ ಹಾಕುವವರು 200 ಗ್ರಾಂ ಸುಫಲಾ ಹಾಕಿದರೆ ಒಂದು ಮರಕ್ಕೆ 30  ಗ್ರಾಂ ಸಾರಜನಕ 30  ಗ್ರಾಂ ರಂಜಕ ಮತ್ತು 30 ಗ್ರಾಂ ಪೊಟ್ಯಾಶ್ ಕೊಟ್ಟಂತೆ ಆಗುತ್ತದೆ.
 • ಇಷ್ಟು ಪ್ರಮಾಣ ಕೊಟ್ಟರೆ ಮುಂದಿನ ಕಂತಿನಲ್ಲಿ ಕೊಡಬೇಕಾದ ರಂಜಕ ಬರೇ 10  ಗ್ರಾಂ ಮಾತ್ರ. 
 • ಆಗ ಕಡಿಮೆ ಮಾಡಿ ಉಳಿದ ಗೊಬ್ಬರಕ್ಕಾಗಿ ಯೂರಿಯಾ ಹಾಗೂ ಮ್ಯುರೇಟ್ ಆಫ್ ಪೊಟ್ಯಾಶ್ ಅನ್ನು ಸೇರಿಸಬೇಕು.
 • ಒಂದು ಮರಕ್ಕೆ ಈಗ 200  ಗ್ರಾಂ ಸುಫಲಾ 15:15:15  ಗೊಬ್ಬರವನ್ನು ಕೊಡಬಹುದು.
 • ಈ ಸಮಯದಲ್ಲಿ ಎಕ್ರೆಗೆ 50 ಕಿಲೋ ಪ್ರಮಾಣದಲ್ಲಿ ಮೆಗ್ನೀಶಿಯಂ ಸಲ್ಫೇಟ್  ಹಾಗೂ ಎಕ್ರೆಗೆ 25 ಕಿಲೋ ಸತುವಿನ ಸಲ್ಫೇಟ್ ಕೊಡುವುದು ಅಗತ್ಯ. 
 • ಶಿಫಾರಿತ ಪ್ರಮಾಣ 100:40:140  ಅನ್ನು 120:50:150 ಕ್ಕೆ ಏರಿಸುವುದರಿಂದ ಉತ್ತಮ ಫಲಿತಾಂಶ ಇದೆ.
 • ಕರಿಮೆಣಸು ಬಳ್ಳಿಗೆ ಒಂದು ಅಡಿಕೆ ಮರಕ್ಕೆ ಕೊಡುವಷ್ಟೇ ಪ್ರಮಾಣದಲ್ಲಿ ಪೋಷಕಗಳನ್ನು ಕೊಡಬೇಕು.
 • ಕೊಕ್ಕೋ ಇದ್ದರೆ ಅದಕ್ಕೂ ಆಷ್ಟೇ ಕೊಡಬೇಕು. ಬಾಳೆಗೂ ಕೊಡಬೇಕು. ಇಲ್ಲವಾದರೆ ಅವು ಮೊದಲು ಅಡಿಕೆಗೆ ಕೊಟ್ಟ ಗೊಬ್ಬರವನ್ನು ಕಸಿದುಕೊಂಡು ಬಿಡುತ್ತವೆ.

ಸಾವಯವ ವಿಧಾನದಲ್ಲೂ ಅಡಿಕೆ ಬೆಳೆಯಬಹುದು. ಅದು ಅಸಾಧ್ಯ ಅಲ್ಲವೇ ಅಲ್ಲ. ಗೊಬ್ಬರವನ್ನು ಒಮ್ಮೆಲೇ ಕೊಡುವುದು ಅಧಿಕ ಇಳುವರಿಗೆ ಸೂಕ್ತವಲ್ಲ. ಜೇಬಿಗೂ ಸೂಕ್ತವಲ್ಲ.

ಅಡಿಕೆ ಬೆಳೆಗಾರರು, ತೆಂಗು ಮೆಣಸು, ಕೊಕ್ಕೋ , ಬಾಳೆ ಇತ್ಯಾದಿ ಬೆಳೆಗಳನ್ನು ಬೆಳೆಯುವಾಗ ಎಲ್ಲದಕ್ಕೂ ಪ್ರತ್ಯೇಕವಾಗಿ ಗೊಬ್ಬರ ಕೊಟ್ಟು ಪೋಷಣೆ ಮಾಡುವುದು ಅತೀ ಅಗತ್ಯ. ಕಳೆ ನಿಯಂತ್ರಣ ಮಾಡಬೇಕು. ಮಣ್ಣು ಕೊಚ್ಚಣೆ ತಡೆಯಬೇಕು. ಹೀಗೆ ಮಾಡಿದರೆ ದುಬಾರಿ ಗೊಬ್ಬರವನ್ನು ಕಡಿಮೆ ಮಾಡಬಹುದು.

6 Comments

 1. Dinesh BS

  Good message

  Reply
  • hollavenur

   thank you for visiting this page. Please suggest your friends. Any enquires please contact us.

   Reply
 2. ramesh kb

  sir savayava gobbara yavadhu ede dayavittu thilisi mattu already nsvu honge soppu hakidhini mattu malegaladhalli savayava gobbara kodabeku yavadhu sooktha mattu dr soil liqid uttamave mattu bere yavadhu ede dayavittu uttama savayava gobbara yavahu thilisi

  Reply
  • hollavenur

   ಸಾವಯವ ಗೊಬ್ಬರದಲ್ಲಿ 1. ಕೊಟ್ಟಿಗೆ ಗೊಬ್ಬರವನ್ನು ಕಾಂಪೊಸ್ಟು ಮಾಡಿದಗೊಬ್ಬರ.2. ಪ್ರಾಣಿಜನ್ಯ ಕುರಿ, ಅಡು, ಕೊಳಿ, ಗೊಬ್ಬರ 3 ಹಿಂಡಿ ಗೊಬ್ಬರಗಳಾದ ಹರಳು ಹಿಂಡಿ, ಬೇವಿನ ಹಿಂಡಿ, ಹೊಂಗೆ ಹಿಂಡಿಗಳು, ಕಾರ್ಖಾನೆ ತ್ಯಾಜ್ಯಗಳಾದ ಪ್ರೆಸ್ ಮಡ್, ಗಳು ಸಾವಯವ ಗೊಬ್ಬರಗಳು. ಇದರಲ್ಲಿ ರಂಜಕ ಮತ್ತು ಪೊಟ್ಯಾಶ್ ಕಡಿಮೆ. ಪೊಟ್ಯಾಶ್ ಮೂಲವಾಗಿ ಮರ ಸುಟ್ಟ ಬೂದಿ ಬಳಸಬಹುದು. ಒಂದು ಚೀಲ ಕುರಿ , ಕೋಳಿ ಗೊಬ್ಬರಕ್ಕೆ 5-6 ಕಿಲೋ ಸೇರಿಸಿದರೆ ಅದು ಸಮತೋಲನ ಆಗುತ್ತದೆ. ಕಡಿಮೆ ಬೆಲೆಗೆ ಸಿಕ್ಕಿದರೆ ಬಯೋ NPK ಜೈವಿಕ ಗೊಬ್ಬರ ಬಳಸಿ. ಉತ್ತಮ ಇಳುವರಿ ಬರುತ್ತದೆ.
   ಈ ಪುಟಕ್ಕೆ ಭೇಟಿ ಕೊಟ್ಟದ್ದಕ್ಕೆ ಧನ್ಯವಾದಗಳು. ನಿಮ್ಮ ಸಲಹೆ ಸೂಚನೆಗಳಿಗೆ ಸ್ವಾಗತ.
   ಸಂಪಾದಕ.

   Reply
 3. Prakash

  Thanks for suggesting fertilizers in arcanet field

  Reply
  • hollavenur

   thank you for your faith. If any doubt ask with any time. 9663724066

   Reply

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!