ಎರಡು ವರ್ಷದ ಅಡಿಕೆ ಗಿಡಗಳ ಪಾಲನೆ ಪೋಷಣೆ ಹೇಗಿರಬೇಕು?

ಎರಡು ವರ್ಷ ಕಳೆದ ಅಡಿಕೆ ಸಸಿ

ಅಡಿಕೆ ಬೆಳೆಗಾರರು ಅಡಿಕೆ ಸಸಿಯನ್ನು ಮಕ್ಕಳಂತೆ ಸಾಕಬೇಕು. ಹಾಗಿದ್ದರೆ ಅದು ನಿರೀಕ್ಷೆಯೆ ಸಮಯಕ್ಕೆ ಫಲ ಕೊಡುತ್ತದೆ. ಧೀರ್ಘ ಕಾಲದ ತನಕವೂ ಫಲ ಕೊಡುತ್ತಾ ಇರುತ್ತದೆ. ಫಲ ಬರಲು ಪ್ರಾರಂಭವಾದ ನಂತರ ಸಾಕಿದರೆ ಏನೂ ಪ್ರಯೋಜನ ಇಲ್ಲ. ಅದಕ್ಕಾಗಿ ನೆಟ್ಟು ಮೊದಲ ವರ್ಷ ಕಳೆದು ಎರಡು ವರ್ಷಕ್ಕೆ ಕಾಲಿಡುವಾಗ ಯಾವ ಯಾವ ಪಾಲನೆ ಪೋಷಣೆ  ಮಾಡಿ ಅದನ್ನು ಸಲಹಬೇಕು ಎಂಬ ಪೂರ್ತಿ ಮಾಹಿತಿ ಇಲ್ಲಿದೆ.

ನೆಟ್ಟ ಸಸಿಯನ್ನು ತಕ್ಷಣದಿಂದ ಹೇಗೆ ಸಾಕಬೇಕು ಎಂಬ ಬಗ್ಗೆ ಈ ಹಿಂದೆ ಸವಿಸ್ತಾರವಾದ ಲೇಖನವನ್ನು  ಪ್ರಕಟಿಸಿದ್ದೇವೆ. ನೆಟ್ಟ ಮೊದಲ ವರ್ಷ  ಅದು ಮಳೆಗಾಲ ಪೂರ್ವದಲ್ಲಿ ನೆಟ್ಟಿದ್ದರೆ, ಮಳೆ, ಅಥವಾ ಬೇಸಿಗೆಯ ಬಿಸಿಲಿಗೆ ಒಂದಷ್ಟು ಬೆಳೆವಣಿಗೆ ನ್ಯೂನತೆಗಳು ಉಂಟಾಗುವುದು ಸಹಜ. ಇದೆಲ್ಲವನ್ನೂ ಪಾಸ್ ಆಗಿ ಮೊದಲ ವರ್ಷ ಪೂರ್ತಿಗೊಂಡು ಉಳಿಯುವ ಗಿಡಗಳಲ್ಲಿ ,ಎರಡನೇ ವರ್ಷದಲ್ಲಿ ಸ್ಕ್ರೀನಿಂಗ್ ಎಂಬ ಕೆಲಸವನ್ನು ಮಾಡುವುದು ಪ್ರಮುಖ ಕೆಲಸವಾಗಿರುತ್ತದೆ.

ತೃಪ್ತಿಕರ ಬೆಳವಣಿಗೆ ಇಲ್ಲದ ಗಿಡಗಳನ್ನು ತೆಗೆಯುವುದು:

 • ಎರಡನೇ ವರ್ಷಕ್ಕೆ ಕಾಲಿಡುವ ಅಡಿಕೆ ಅಡಿಕೆ ಗಿಡಗಳಲ್ಲಿ ಕೆಲವು ತೃಪ್ತಿಕರ ಬೆಳವಣಿಗೆ ಹೊಂದಿರದ ಗಿಡಗಳು ಇರುತ್ತವೆ.
 • ಗಿಡದ ಎಲೆಗಳು ಹಚ್ಚ ಹಸುರಾಗಿ ಇರಬೇಕಾದ್ದು ಅತೀ ಮುಖ್ಯ.
 • ಇದುವೇ ಅದರ ಆರೋಗ್ಯದ ಕನ್ನಡಿ. ಸಾಮಾನ್ಯವಾಗಿ ಎರಡನೇ ವರ್ಷಕ್ಕೆ ಕಾಲಿಡುವ ಗಿಡ ಸುಮಾರು 6 ಕ್ಕಿಂತ ಹೆಚ್ಚಿನ ಆರೋಗ್ಯವಂತ ಎಲೆಗಳನ್ನು ಹೊಂದಿರಬೇಕು.
 • ಸಾಮಾನ್ಯವಾಗಿ ಬುಡ ಬಿಟ್ಟಿರಬೇಕು. ಹಾಳೆಯ ರಚನೆ ಆಗಿರಬೇಕು.
 • ಗಿಡದ ಎತ್ತರ ಸುಮಾರು  ಭುಜದಷ್ಟು ಆದರೂ ಬೆಳೆದಿರಬೇಕು.
 • ಅಂತಹ ಗಿಡ ಮಾತ್ರ ಆರೋಗ್ಯಕರ ಬೆಳವಣಿಗೆ ಗುಣ ಪಡೆದಿದೆ ಎಂದು ಭಾವಿಸಬಹುದು.
ಇಂತಃ ಗಿಡ ಯಾವಾಗಲೂ ಏಳಿಗೆ ಅಗಲಾರದು
ಇಂತಃ ಗಿಡ ಯಾವಾಗಲೂ ಏಳಿಗೆ ಅಗಲಾರದು
 • ಇಷ್ಟು ಬೆಳವಣಿಗೆ ಹೊಂದದ ಗಿಡಗಳು ಇದ್ದರೆ ಅಂತಹ ಗಿಡಗಳನ್ನು ಗುರುತು ಮಾಡಿ ಅದಕ್ಕೆ ಬೂಸ್ಟರ್ ಡೋಸ್ ಆಗಿ ಗೊಬ್ಬರ ಕೊಡಿ.
 • ಸಾವಯವ ಗೊಬ್ಬರ ಕೊಡುವುದಾದರೆ ಹಸುವಿನ ಸಗಣಿ 20 ಕಿಲೋ ಮತ್ತು 5 ಕಿಲೋ ಸೇಂಗಾ ಅಥವಾ ಹರಳು( ಔಡಲ) ಹಿಂಡಿ ಬೆರೆಸಿ ಒಂದೆರಡು ದಿನ ಕೊಳೆಯಿಸಿ ಪ್ರತೀ ಗಿಡದ ಬುಡಕ್ಕೆ 1 ಲೀ. ನಂತೆ  ಎರೆದು ಒಂದು ತಿಂಗಳ ಕಾಲ ನೋಡಿ.
 • ಗಿಡ ಹಚ್ಚ ಹಸುರಾಗಿ ಬೆಳೆದು ಉದ್ದದ ಸುಳಿ ಬಂತೆಂದರೆ ಅಂತಹ ಗಿಡಗಳು ಏಳಿಗೆ ಆಗಬಹುದು.
 • ಹರಳು ಹಿಂಡಿ ಸೇರಿಸುವುದರಿಂದ ಮಣ್ಣು ಜನ್ಯ ಜಂತು ಹುಳಗಳ ನಿಯಂತ್ರಣ ಆಗುತ್ತದೆ.
 • ರಸ ಗೊಬ್ಬರ ಕೊಡುವವರು 19:19:19 ಪ್ರಮಾಣದ ರಸ ಗೊಬ್ಬರವನ್ನು ಪ್ರತೀ ಗಿಡಕ್ಕೆ 25  ಗ್ರಾಂ ಪ್ರಮಾಣದಲ್ಲಿ ದ್ರವ ರೂಪದಲ್ಲಿ ಕೊಟ್ಟು ಒಂದು ತಿಂಗಳಲ್ಲಿ ಅದರ ಫಲಿತಾಂಶವನ್ನು ಗುರುತಿಸಬಹುದು.

ಇಷ್ಟಲ್ಲದೆ ಒಮ್ಮೆ 1 ಕಿಲೋ  19:19:19 ಗೊಬ್ಬರ ಮತ್ತು 200  ಗ್ರಾಂ ಸೂಕ್ಷ್ಮ ಪೊಷಕಾಂಶ (Chelated micronutrient ) ಮತ್ತು 50  ಗ್ರಾಂ ಮೆಗ್ನೀಶಿಯಂ (Chelated) 100 ಲೀ. ನೀರಿನಲ್ಲಿ ಕರಗಿಸಿ ಎಲೆಗಳ ಅಡಿ ಮತ್ತು ಮೇಲಿನ ಭಾಗಕ್ಕೆ ಸಂಜೆ ಹೊತ್ತು ಸಿಂಪರಣೆ ಮಾಡಿ. ಗಿಡಕ್ಕೆ ಶಕ್ತಿ ದೊರೆತು ಹೊಸ ಸುಳಿ ಸಧೃಢವಾಗಿ ಬರುತ್ತದೆ. ಗೋಮೂತ್ರದ ಸಿಂಪರಣೆ ಗಿಡವನ್ನು ಬೇಗೆ ಬೆಳೆಯುವಂತೆ ಮಾಡುತ್ತದೆ.

ಸಸಿಗಳ ಎಲೆ ಹಚ್ಚ ಹಸುರಾಗಿ ಇದ್ದರೆ ಬೆಳವಣಿಗೆಗೆ ಅನುಕೂಲ
ಸಸಿಗಳ ಎಲೆ ಹಚ್ಚ ಹಸುರಾಗಿ ಇದ್ದರೆ ಬೆಳವಣಿಗೆಗೆ ಅನುಕೂಲ
 • ಒಂದು ತಿಂಗಳ ನಂತರ ಸಧೃಢ ಸುಳಿ ಬಾರದೆ ಇರುವ ಎಲೆಗಳು ಹಸುರು ಬಣ್ಣಕೆ ತಿರುಗದೆ ಇರುವ ಸಸಿಗಳನ್ನು ಯಾವ  ಮುಲಾಜೂ ಇಲ್ಲದೆ ತೆಗೆದು ಬೇರೆ ಸಸಿ ನೆಡಬೇಕು.
 • ಅದಕ್ಕಾಗಿ ಹಿಂದೆ ಹೇಳಿದಂತೆ  ನಾವು 1000 ಗಿಡಕ್ಕೆ 200 ರಷ್ಟು ಹೆಚ್ಚುವರಿ ಸಸಿಗಳನ್ನು ಪಾತಿಯಲ್ಲಿ ದೂರ ದೂರ ಇಟ್ಟು ಬೆಳೆಸಿ ಪೊಷಿಸುತ್ತಾ ಇರಬೇಕು.
 • ಇದೇ ಗಿಡವನ್ನು ನಾಟಿ ಮಾಡಿದರೆ ಉಳಿದ ಗಿಡಗಳ ಜೊತೆಗೆ ಚೆನ್ನಾಗಿ ಬೆಳವಣಿಗೆ ಆಗುತ್ತದೆ.

ಬುಡದಲ್ಲಿ ಕಳೆ ಬೆಳೆಯಲು ಬಿಡಬೇಡಿ:

 • ಸಸಿ ನೆಟ್ಟು1-2-3 ವರ್ಷದ ತನಕ ಯಾವುದೇ ರೀತಿ ಕಳೆಗಳು ಬುಡದಲ್ಲಿ ಬೆಳೆಯಬಾರದು.
 • ಬಂದ ಕಳೆಗಳನ್ನು ಕೈಯಿಂದ ಆಗಾಗ ತೆಗೆಯುತ್ತಾ ಇರಬೇಕು. 
 • ಕಳೆಗಳನ್ನು ಬೆಳೆಯಲು ಬಿಟ್ಟರೆ ಅವುಗಳು ಅಡಿಕೆ ಸಸ್ಯಕ್ಕೆ ಕೊಟ್ಟ ಆಹಾರವನ್ನು ಬೇಗನೆ ಕಬಳಿಸುತ್ತವೆ.
 • ಅಡಿಕೆ ಸಸ್ಯದ ಬೇರುಗಳು ದೊಡ್ಡ ಮರದ ಬೇರುಗಳಷ್ಟು ಸಧೃಢವಾಗಿಲ್ಲದ ಕಾರಣ ಅವುಗಳು ಪೋಷಕಾಂಶ ಹೀರುವ ಮುಂಚೆಯೇ ಇವುಗಳು ಹೀರಿಕೊಂಡು ಬಿಡುತ್ತವೆ.
 • ಹಾಗಾಗಿ ಗಿಡದ ಬೆಳವಣಿಗೆ ಸೊರಗುತ್ತದೆ.
 • ಬುಡ ಭಾಗದ ಕಳೆ ತೆಗೆಯಲು ವೀಡ್ ಕಟ್ಟರ್ ಉಪಯೋಗಿಸಬೇಡಿ.
 • ಎಳೆಯ ಸಸಿಗಳಾದರೆ ಅವುಗಳ ಎಲೆಗೆ ಹಾನಿ ಆಗುತ್ತದೆ.
 • ಎರಡನೇ  ವರ್ಷದ ಸಸಿ ಆದರೆ ಅದರ ಹಸುರು ಕಾಂಡದ ಭಾಗಕ್ಕೆ ಪೆಟ್ಟಾಗುತ್ತದೆ. ಅದು ನಂತರ ದೊಡ್ಡ ಗಾಯವಾಗುತ್ತದೆ.
 • ಕಳೆನಾಶಕ ಬಳಕೆ ಮಾಡಬೇಡಿ. ಅಪ್ಪಿ ತಪ್ಪಿ ಎಲೆಗಳಿಗೆ ಬೀಳಬಹುದು, ಅಥವಾ ಹಸುರು ಭಾಗಕ್ಕೆ ಬೀಳಬಹುದು.ಆದ  ಕಾರಣ ಕಳೆ ನಾಶಕ ಬೇಡ.
 • ಕಳೆ ತೆಗೆದ ಒಂದು ತಿಂಗಳಲ್ಲೇ ಬದಲಾವಣೆಗಳನ್ನು ಗಮನಿಸಬಹುದು.

ಬುಡಕ್ಕೆ ಸುಣ್ಣ ಲೇಪಿಸಿ ಇಲ್ಲವೇ ಗರಿ ಮುಚ್ಚಿ:

ಸುಣ್ಣ ಬಳಿಯಿರಿ ಅಥವಾ ಹೀಗೆ ಮಾಡಿ
ಸುಣ್ಣ ಬಳಿಯಿರಿ ಅಥವಾ ಹೀಗೆ ಮಾಡಿ
 • ಹಿಂದೆ ಅಡಿಕೆ ತೋಟವನ್ನು ಕಣಿವೆಯಂತಹ ಪ್ರದೇಶಗಳಲ್ಲಿ ಮಾತ್ರ ಬೆಳೆಯುತ್ತಿದ್ದರು.
 • ಅಂತಹ ಪ್ರದೇಶಗಳಲ್ಲಿ  ಅಡಿಕೆ ತೋಟ ಮಾಡಿದಾಗ ಅದಕ್ಕೆ ಯಾವ ರಕ್ಷಣೆಯೂ ಬೇಕಾಗುವುದಿಲ್ಲ.
 • ಅದರೆ ಅಂತಹ ಪ್ರದೇಶಗಳು ಈಗ ಇಲ್ಲ. ಎಲ್ಲವೂ ಅಡಿಕೆ ತೋಟಗಳಾಗಿವೆ.
 • ಹೊಸ ಪ್ರದೇಶಗಳೆಲ್ಲಾ ತೆರೆದ ಪ್ರದೇಶಗಳಾದ ಕಾರಣ ಬಿಸಿಲು ತಡೆ ಬೇಕೇ ಬೇಕು.
 • ಇಲ್ಲವಾದರೆ 30-40  ವರ್ಷ ಬದುಕಿ ಫಲ ಕೊಡುವ ಅಡಿಕೆ ಮರ 10-15 ವರ್ಷಗಳಲ್ಲಿ ತನ್ನ ಆಯುಶ್ಯವನ್ನು ಮುಗಿಸುವಂತಾಗುತ್ತದೆ.
 • ಆದ ಕಾರಣ ಎಳೆಯ ಸಸಿಯ ಬುಡ ಹೊರಗೆ  ಕಾಣಿಸುವಾಗಲೇ ಕಾಂಡಕ್ಕೆ ಪಶ್ಚಿಮ ದಿಕ್ಕಿಗೆ ನೆರಳು ಮಾಡುತ್ತಾ ಇರಬೇಕು. 
 • ಅದು ಸುಣ್ಣವನ್ನಾದರೂ ಲೇಪಿಸಬಹುದು, ಅಡಿಕೆ ಮರದ ಗರಿಗಳನ್ನಾದರೂ ಕಟ್ಟಬಹುದು.

ಎಲೆಗೆ ಸುಣ್ಣದ ದ್ರಾವಣ ಸಿಂಪರಣೆ:

ಸುಣ್ಣದ ದ್ರಾವಣ ಸಿಂಪಡಿಸಿದ ಗಿಡದ ಎಲೆ ಹಸುರಾಗಿ ಇರುತ್ತದೆ.
ಸುಣ್ಣದ ದ್ರಾವಣ ಸಿಂಪಡಿಸಿದ ಗಿಡದ ಎಲೆ ಹಸುರಾಗಿ ಇರುತ್ತದೆ.
 • ಚಳಿಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ಎಷ್ಟು ಜಾಗರೂಕತೆ ವಹಿಸಿದರೂ ಎಲೆಗಳು ಬಿಸಿಲಿನ ತಾಪಕ್ಕೆ ಹಾನಿಗೊಳಗಾಗುತ್ತವೆ.
 • ಎಲೆಗಳು ಶಕ್ತಿ ಕಳೆದುಕೊಂಡರೆ ಸಸ್ಯ ಬೆಳವಣಿಗೆ ಕುಂಠಿತವಾಗುತ್ತದೆ.
 • ಮೈಟ್ ಇತ್ಯಾದಿ ಸಮಸ್ಯೆ ಹೆಚ್ಚಾಗುತ್ತದೆ. ಅದಕ್ಕೆ ಎಲೆಗೆ ಅಡಿ ಮತ್ತು ಮೇಲು ಭಾಗಕ್ಕೆ ತೆಳುವಾಗಿ ಶೇ.1 ರ ಸುಣ್ಣದ ದ್ರಾವಣ ಸಿಂಪರಣೆ ಸೂಕ್ತ.
 • ಇದು ಎಲೆಗೆ ಬಿಸಿಲಿನ ತಾಪವನ್ನು ಸಗ್ಗಿಸುತ್ತದೆ. ಮೈಟ್ ಹಾವಳಿ ಕಡಿಮೆಯಾಗುತ್ತದೆ.
 • ಬಟ್ಟ ಬಯಲು ಸ್ಥಳದಲ್ಲಿ ತೋಟ ಮಾಡುವಾಗ ಪಶ್ಚಿಮ ದಿಕ್ಕಿಗೆ ಸಾಗುವಾನಿ ಸಸಿ ನೆಟ್ಟು ಬೆಳೆಸಿದರೆ ಬಹಳ ಅನುಕೂಲ. ಇದು ಬಹಳಷ್ಟು ನೆರಳನ್ನು ಕೊಡುತ್ತದೆ.

ತಿಂಗಳಿಗೊಮ್ಮೆ ಗೊಬ್ಬರ ಕೊಡಿ:

 • ಎಳೆಪ್ರಾಯದ ಅಡಿಕೆ ಸಸ್ಯ ಒಂಡು ವರ್ಷ ಕಳೆದು ಎರಡನೇ ವರ್ಷಕ್ಕೆ ಬಂದಾಗ ಅದರ ಬೇರುಗಳ ವೈಶಾಲ್ಯತೆ ಸುಮಾರು 2 -2.5 ಸುತ್ತಳತೆಯಲ್ಲಿ ಮಾತ್ರ ಇರುತ್ತವೆ.
 • ಹೆಚ್ಚೆಂದರೆ 50 -60 ಸಂಖ್ಯೆಯ ಬೇರುಗಳು ಇರುತ್ತವೆ. ಇಷ್ಟು ಬೇರುಗಳು ಒಮ್ಮೆಲೇ ಆಥವಾ ಎರಡು ಬಾರಿ ಕೊಟ್ಟ ಗೊಬ್ಬರವನ್ನು ಹೀರಿಕೊಳ್ಳಲು ಸಾಧ್ಯವಿಲ್ಲ.
 • ಸ್ವಲ್ಪ ಸ್ವಲ್ಪವೇ ವಿಭಜಿತ ಕಂತುಗಳಲ್ಲಿ ಗೊಬ್ಬರವನ್ನು  ಕೊಟ್ಟಾಗ ಅವುಗಳ ನಿಯಮಿತ ಬೇರುಗಳಿಗೆ ಹೀರಿಕೊಳ್ಳಲು ಅನುಕೂಲವಾಗುತ್ತದೆ.
 • ಕೊಡಮಾಡಲ್ಪಟ್ಟ ಪೋಷಕಗಳ ಬಳಕೆ ಸಮರ್ಪಕವಾಗುತ್ತದೆ. ಈ ಸಮಯದಲ್ಲಿ ಸಮತೋಲನ ಪ್ರಮಾಣದಲ್ಲಿ ಗೊಬ್ಬರ ಕೊಡುವುದನ್ನು ಅಭ್ಯಾಸ ಮಾಡಿ.
 • ಸಾರಜನಕ- ರಂಜಕ ಮಾತ್ರ ಹೆಚ್ಚಾಗಿ ಕೊಡುವುದು, ಪೊಟ್ಯಾಶ್ ಕೊಡದೆ ಇರುವುದು ಅಥವಾ ತೀರಾ ಕಡಿಮೆ ಪ್ರಮಾಣದಲ್ಲಿ ಕೊಡುವುದು ಮಾಡಿದರೆ ಕಾಂಡ ದಪ್ಪ ಆಗಿ ಮುಂದೆ ಫಲ ಕೊಡುವ ಸಮಯದಲ್ಲಿ ಇದರಿಂದ ತುಂಬಾ ನಷ್ಟವಾಗುತ್ತದೆ.
 • ಗಂಟುಗಳು ದೂರ ದೂರ ಬೆಳೆದು  ಮರಕ್ಕೆ ಶಕ್ತಿ ಕಡಿಮೆಯಾಗುತ್ತದೆ.
 • ಸಾವಯವ ಗೊಬ್ಬರಗಳನ್ನೇ ಕೊಡುವವರೂ ಸಹ ಪೊಟ್ಯಾಶ್ ಸತ್ವಕ್ಕಾಗಿ ಅಲ್ಪ ಸ್ವಲ್ಪವಾದರೂ ಬೂದಿಯನ್ನು ಕೊಟ್ಟು ಮರದ ಬೆಳವಣಿಗೆಯಲ್ಲಿ ಗಟ್ಟಿತನ ಉಂಟಾಗುವಂತೆ ನೋಡಿಕೊಳ್ಳಿ.
 • ಗೊಬ್ಬರ ಹಾಕುವಾಗ ಬುಡ ಭಾಗಕ್ಕೆ ಹಾಕಬೇಡಿ. ಬುಡ ಭಾಗದಲ್ಲಿ  ಬೇರುಗಳು ಕಾಣಿಸುತ್ತದೆಯಾದರೂ ಸಹ ಅಲ್ಲಿರುವ ಬೇರುಗಳು ಆಹಾರ ಹೀರಿಕೊಳ್ಳುವ ಬೇರುಗಳಾಗಿರುವುದಿಲ್ಲ.
 • ಅವು ಬೊಡ್ಡೆಯಿಂದ ಮೂಡುವ ಬೇರುಗಳಾಗಿದ್ದು, ಅದು ಸುಮಾರು 1 ಅಡಿ ಬೆಳೆದ ಮೇಲೆ ಕವಲು ಬೇರನ್ನು ಬಿಡುತ್ತದೆ.
 • ಅಲ್ಲಿ ಗೊಬ್ಬರವನ್ನು ಕೊಡಬೇಕು. ಸಾವಯವ ಗೊಬ್ಬರಗಳನ್ನೂ ಸಹ ಬುಡಕ್ಕೆ ತಾಗುವಂತೆ ಹಾಕಬಾರದು.
 • ಕಳಿಯದ ಗೊಬ್ಬರವನ್ನು ಕೊಡುವಾಗ ಬುಡದಿಂದ 2 ಅಡಿ ದೂರದಲ್ಲಿ ಗುಪ್ಪೆ ಹಾಕಿ 10 ದಿನ ಕಳೆದ ಮೇಲೆ ಅದನ್ನು ಬುಡಕ್ಕೆ ದೂಡಿ.
 • ಇಲ್ಲವಾದರೆ ಬುಡ ಭಾಗಕ್ಕೆ ಹಾನಿ ಉಂಟಾಗುತ್ತದೆ.

ಕೆಲವು ಗಿಡಗಳನ್ನು ತೆಗೆದು ಬಿಡಿ.

ಇಂತಹ ಗಿಡ ಈಗಲೆ ತೆಗೆಯಿರಿ
ಇಂತಹ ಗಿಡ ಈಗಲೆ ತೆಗೆಯಿರಿ
 • ಚಿತ್ರದಲ್ಲಿ ತೋರಿಸಿದಂತಹ ಬೆಳವಣಿಗೆ ಹೊಂದಿದ ಕೆಲವು ಗಿಡಗಳನ್ನು ಉಳಿಸಿಕೊಳ್ಳಬೇಡಿ.
 • ಅವು ಮುಂದೆ ಉತ್ಪಾದಕ ಗಿಡಗಳಾಗುವುದಿಲ್ಲ.ಅದನ್ನು ತೆಗೆದು ಬೇರೆ ಗಿಡ ನೆಡಿ. 
 • ತೋಟ ಮಾಡುವುದು ದೊಡ್ದದಲ್ಲ. ಆ ತೋಟದಲ್ಲಿ 90% ಆದರೂ ಉತ್ಪಾದಕ ಮರಗಳು ಇರುವಂತೆ ತೋಟ ಮಾಡುವುದು ಅಗತ್ಯ.
 • ಅದಕ್ಕೆ ತಯಾರಿ ಎರಡನೇ ವರ್ಷಕ್ಕೆ ಸಸಿ ಕಾಲಿಡುವಾಗಲೇ ಮಾಡುತ್ತಾ  ಬರಬೇಕು.
 • ಇದನ್ನು ಮೂರನೇ ವರ್ಷದ ತನಕವೂ ಮುಂದುವರಿಸಿ ಮೂರನೇ ವರ್ಷಕ್ಕೆ ಅದು ಪೂರ್ಣಗೊಳ್ಳಬೇಕು.
ಇಂಥಹ ಬಿಸಿಲು ಬಿದ್ದು ಗಾಯವಾದ ಸಸಿ ಫಲ ಕೊಟ್ಟು ಒಂದೆರಡು ವರ್ಷಗಳಲ್ಲೇ ಸಾಯುವ ಸಾಧ್ಯತೆ ಹೆಚ್ಚು. ಇದನ್ನು ತೆಗೆದು ಬೇರೆ ನೆಡುವುದು ಉತ್ತಮ.
ಇಂಥಹ ಬಿಸಿಲು ಬಿದ್ದು ಗಾಯವಾದ ಸಸಿ ಫಲ ಕೊಟ್ಟು ಒಂದೆರಡು ವರ್ಷಗಳಲ್ಲೇ ಸಾಯುವ ಸಾಧ್ಯತೆ ಹೆಚ್ಚು. ಇದನ್ನು ತೆಗೆದು ಬೇರೆ ನೆಡುವುದು ಉತ್ತಮ.

ಕೀಟ ನಿಯಂತ್ರಣ:

 • ಎಳೆ ಸಸಿಗಳಿಗೆ ಸ್ಪಿಂಡಲ್ ಬಗ್ ಹಾಗೂ ಎಲೆ ಮೈಟ್ ಸಮಸ್ಯೆ ಹೆಚ್ಚಾಗಿರುತ್ತದೆ.
 • ಇದನ್ನು ಬಾರದಂತೆ ಮುನ್ನೆಚ್ಚರಿಕೆ ವಹಿಸುತ್ತಾ ಇರಬೇಕು. ಇದು ಬಂದರೆ ಸಸ್ಯ ಬೆಳವಣಿಗೆ ಕುಂಠಿತವಾಗುತ್ತದೆ.
 • ಅದಕ್ಕಾಗಿ ಸಸಿ ಹಂತದಲ್ಲಿ ಪ್ರತೀ 2-3 ತಿಂಗಳಿಗೊಮ್ಮೆ ಮಳೆಗಾಲ ಹೊರತುಪಡಿಸಿ ವೆಟ್ಟೆಬಲ ಸಲ್ಫರ್ ಸಿಂಪರಣೆ ಮಾಡುತ್ತಾ ಇರಬೇಕು.
 • ಇದು ವಿಷ ರಹಿತ ಹಾನಿ ರಹಿತವಾದ ಕಾರಣ ಪರಭಕ್ಷಕಗಳನ್ನು ನಾಶ ಮಾಡುವುದಿಲ್ಲ.
 • ಅಡಿಕೆ ತೋಟದಲ್ಲಿ ಅಥವಾ  ಯಾವುದೇ ಬೆಳೆಯ ತೋಟದಲ್ಲಿ ಪರಭಕ್ಷಕಗಳು ಇರಲೇಬೇಕು ಈಗ ಇವು ಕಡಿಮೆಯಾಗಿ ಕೃಷಿಗೆ ಆತಂಕ ಉಂಟಾಗಿದೆ.
 • ಹಾಗಾಗಿ ಸಾಧ್ಯವಾದಷ್ಟು ಹಾನಿ ರಹಿತ ಕೀಟ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದು ಅಗತ್ಯ.
 • ಗಿಡ ಕೊಳೆತು ಸತ್ತರೆ ಅದನ್ನು ಹಾಗೆಯೇ ಅಲ್ಲಿ ಬಿಡಬಾರದು. ಅದು ಶಿಲೀಂದ್ರ ರೋಗವಾಗಿದ್ದು, ಗಾಳಿಯ ಮೂಲಕ ಮತ್ತೊಂದಕ್ಕೆ ಹರಡುತ್ತದೆ.
 • ಅದನ್ನು ತೆಗೆದು ಕೊಳೆಯ ಭಾಗವನ್ನು ಸುಡಬೇಕು. ಉಳಿದ ಭಾಗವನ್ನು ಬಿಸಿಲಿಗೆ ದೂರ ಹಾಕಿ ಒಣಗಿಸಬೇಕು.
 • ಮತ್ತೆ ಅದೇ ಜಾಗದಲ್ಲಿ ನೆಡುವಾಗ ಶಿಲೀಂದ್ರ ನಾಶಕ (SAAF ಅಥವಾ ಇನ್ಯಾವುದಾದರೂ ) ಡ್ರೆಂಚಿಂಗ್ ಮಾಡಿ ನೆಡಿ.
 • ಇಲ್ಲದಾದರೆ ಮಣ್ಣು ಬಿಸಿ ಮಾಡಿ ನೆಡಬೇಕು.
ಪಶ್ಚಿಮ ದಿಕ್ಕಿಗೆ ಸಾಗುವಾನಿ ಸಸಿ ನೆಡಿ. ತೋಟ ಸೇಪ್
ಪಶ್ಚಿಮ ದಿಕ್ಕಿಗೆ ಸಾಗುವಾನಿ ಸಸಿ ನೆಡಿ. ತೋಟ ಸೇಪ್

ಅಡಿಕೆ ಮರದ ಕಾಡಕ್ಕೆ ನಿರಂತರ ಬಿಸಿಲಿನ ಹೊಡೆತ ಬೀಳುವುದರಿಂದ ಆ ಭಾಗ ಬಿಸಿಯಾಗುತ್ತದೆ. ಮೊದಲಿಗೆ ಬಿಸಿಲು ತಾಗಿದ ಭಾಗ ಹಳದಿ ಮಿಶ್ರ ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ. ವರ್ಷ ಕಳೆದಾಗ ಅಲ್ಲಿ ಸಣ್ಣ ಒಡಕು ಕಾಣಿಸುತ್ತದೆ. ಎರಡು ಮೂರು ವರ್ಷ ಕಳೆದಾಗ ಆ ಭಾಗ ನಿರ್ಜೀವವಾಗುತ್ತದೆ. ಅದು ಎದ್ದು ಬರಲೂ ಬಹುದು. ಗಾಳಿಗೆ ಬೀಳಲೂ ಬಹುದು. ಇದನ್ನು ತಡೆಯುವ ಉಪಾಯ ಮರದ ಕಾಂಡಕ್ಕೆ ಎರಡನೇ ವರ್ಷದಿಂದ ಸಾದ್ಯವಾದಷ್ಟು ವರ್ಷದ ತನಕ ಸುಣ್ಣದ ಲೇಪನ ಒಂದೇ.

ಯಾಕೆ ಸುಣ್ಣವೇ ಉತ್ತಮ?

 • ಹಿಂದೆ ಇಂತಹ ಬಿಸಿಲು ಬೀಳುವ ಮರಗಳಿಗೆ ತೆಂಗಿನ ಗರಿ . ಅಡಿಕೆ ಮರದ ಗರಿ ಕಟ್ಟುತ್ತಿದ್ದರು.
 • ಅದು ಮಾಡಲು ಸಾಧ್ಯವಾದರೆ ಈಗಲೂ ಮಾಡಬಹುದು. ಅದು ಉತ್ತಮ. ಆದರೆ ಸುಣ್ಣದ ಲೇಪನ ಈಗಿನ ಕಾಲಕ್ಕೆ ಸುಲಭ.
 • ಸುಣ್ಣ ಬಿಳಿಯಾಗಿದ್ದು, ಸೂರ್ಯನ ಬೆಳಕಿನ ಪ್ರಖರತೆಯನ್ನು ಕಡಿಮೆ ಮಾಡಿ ತಂಪು ಕೊಡುತ್ತದೆ.
 • ಸುಣ್ಣಕ್ಕೆ ಇರುವಷ್ಟು ಅಂಟುವ ಗುಣ ಮತ್ತೊಂದು ವಸ್ತುವಿಗೆ ಇಲ್ಲ. ಇದು ಅಗ್ಗವೂ ಸಹ.
 • ನಾವೆಲ್ಲಾ ಕೆಲವು ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ನಡೆದು ಹೋಗುವ ದಾರಿಗೆ ಬಿಳಿ ಬಣ್ಣ ಕೊಡುವುದನ್ನು ಕಂಡಿದ್ದೇವೆ.
 • ಆ ಭಾಗದಲ್ಲಿ ನಡೆಯುವಾಗ ಇರುವ ತಂಪು, ಬಣ್ಣ ಕೊಡದ ಭಾಗದಲ್ಲಿ ಇರುವುದಿಲ್ಲ. 
 • ಅದೇ ಸ್ಥಿತಿಯನ್ನು ಇಲ್ಲಿಯೂ ನಾವು ಪಡೆಯಬಹುದು.ಸುಣ್ಣದ ಮೂಲಕ ಬಸವನ ಹುಳು ಇತ್ಯಾದಿ ಹರಿದುಕೊಂಡು ಹೋಗುವುದು ಕಡಿಮೆ ಅದಕ್ಕೂ ಇದು ಪ್ರಯೋಜನಕಾರಿ.
 • ತೊಳೆದು ಹೋದಾಗ ಅದು ಗಿಡಕ್ಕೆ ಪೋಷಕವೂ ಸಹ.

ಅಡಿಕೆ ಬೆಳೆಸುವುದು ದೊಡ್ಡದಲ್ಲ. ಸಾವಿರ ಸಾವಿರ ಮರಗಳನ್ನು ಸಾಕುವುದಕ್ಕಿಂತ ಸ್ವಲ್ಪ ಕಡಿಮೆ ಮಾಡಿ ಹೆಚ್ಚು ನಿಗಾದಲ್ಲಿ ಬೆಳೆಸಿದರೆ ಉತ್ತಮ ತೋಟ ಮಾಡಲು ಸಾಧ್ಯ. ಈಗ ಅಡಿಕೆ ತೋಟ ಮಾಡುವುದು ಹಿಂದಿನಷ್ಟು ಸುಲಭವಲ್ಲ.ತೋಟ ಮಾಡುವ ಜಾಗ, ಹವಾಮಾನ ಹಾಗೂ ಇನ್ನಿತರ ಸಮಸ್ಯೆಗಳಿಂದ ಹಿಂದಿನಷ್ಟು ಸುಲಭವಾಗಿ ತೋಟ ಮಾಡಲು ಆಗುವುದಿಲ್ಲ. ತೀವ್ರ ನಿಗಾದಲ್ಲಿ ಸೈ ಹಂತದಿಂದ ಬೆಳೆಸುತ್ತಾ ಬಂದರೆ ಮಾತ್ರ ಉತ್ಪಾದಕ ತೋಟವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!