ಅಡಿಕೆ ಬೆಳೆಯುವವರು ಗಮನಿಸಿ- ಉತ್ತಮ ಫಲ ಪಡೆಯಲು ಗಿಡ ಹೇಗೆ ಬೆಳೆಯ ಬೇಕು.

ಒಂದು ವರ್ಷ ದಾಟುತ್ತಿರುವ ಅಡಿಕೆ ಗಿಡ ಹೀಗೆ ಬೆಳೆದರೆ ಉತ್ತಮ ಫಸಲು ಗ್ಯಾರಂಟಿ.

ಅಡಿಕೆಗೆ ಬೆಲೆ ಏರಿಕೆ ಆದಂತೆ ಬೆಳೆಯುವ ರೈತರೂ ಹೆಚ್ಚಾಗುತ್ತಾರೆ. ಭತ್ತ , ಜೋಳ, ಹತ್ತಿ, ತರಕಾರಿ ಬೆಳೆ ಬೆಳೆದು ಹೊಟ್ಟೆ ಬಟ್ಟೆಗೂ ಸಾಕಾಗದ ಸ್ಥಿತಿಯಲ್ಲಿ ಬದುಕು ಸಾಗಿಸುವುದಕ್ಕಿಂತ ಏನಾದರೂ ಹೆಚ್ಚುವರಿ ಆದಾಯ ಪಡೆಯಬಹುದೆಂಬ ಅಸೆ ಸಹಜ. ಆದರೆ ಕೆಲವರು ತಮ್ಮ ತೋಟದ ಅಡಿಕೆ ಗಿಡಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿ ಸಲಹೆ ಕೇಳುವಾಗ, ಇಂತಹ ಸಸಿಗಳಿಂದ ಅಡಿಕೆ ಫಸಲು ಪಡೆಯಬಹುದೇ ಎಂಬ ಸಂಶಯವೂ ಬರುತ್ತದೆ. ಮುಖ್ಯವಾಗಿ ಅಡಿಕೆ ತೋಟ ಮಾಡುವ ವಿಧಾನ ಜಠಿಲ ಅಲ್ಲದಿದ್ದರೂ, ಕಾಲ ಕಾಲಕ್ಕೆ ಅನುಗುಣವಾಗಿ ಸಸ್ಯ ಬೆಳವಣಿಗೆಯನ್ನು ಗುರುತಿಸುವಷ್ಟು ಜ್ಞಾನ ಇರಲೇ ಬೇಕು.ಎಳವೆಯಲ್ಲಿ ಚೆನ್ನಾಗಿ ಸಾಕಿದರೆ ಮುಂದೆ ಉತ್ತಮ ಫಲ ಪಡೆಯಬಹುದು.

ಅಡಿಕೆ ತೋಟ ಚೆನ್ನಾಗಿ ಫಸಲು ಕೊಡಬೇಕಾದರೆ ಮುಖ್ಯವಾಗಿ ಎಳೆ ಪ್ರಾಯ ಅಂದರೆ ನಾಟಿ ಮಾಡಿ ಫಲ ಬರುವ ತನಕ ಮಕ್ಕಳಂತೆ ಸಾಕಾಣೆ ಮಾಡಬೇಕು. ಮನುಷ್ಯರಿಗೂ ಹಾಗೆ. ಎಳೆ ಪ್ರಾಯದಲ್ಲೇ ಬೆಳವಣಿಗೆಯ ಅಡಿಪಾಯ ಸರಿಯಾಗಿರಬೇಕು. ಇಲ್ಲವಾದರೆ ಜೀವಮಾನ ಪರ್ಯಂತ ಏನಾದರೂ ಸಮಸ್ಯೆ ಇದ್ದೇ ಇರುತ್ತದೆ. ಅಡಿಕೆ- ತೆಂಗು ಸಸ್ಯಗಳಲ್ಲಂತೂ ಎಳೆವೆಯ ಸಾಕಾಣಿಕೆಯಲ್ಲಿ  ಎಡವಿದರೆ ಮುಂದೆ ಫಸಲು ಬರುವುದೇ ಇಲ್ಲ. ಅದು ಆಸ್ತಿಯಾಗುವ ಬದಲು ಹೊರೆಯಾಗುತ್ತದೆ. ಮೊದಲು ಅಡಿಕೆ ಗಿಡ ಹಾಕುವಾಗಲೇ ಸರಿಯಾಗಿ ನೆಡಬೇಕು. ಆರೈಕೆ ಮಾಡಬೇಕು. ಕಾಲ ಕಾಲಕ್ಕೆ ಸಮರ್ಪಕ ಬೆಳವಣಿಗೆ ಹೊಂದಿರದ ಸಸಿಗಳನ್ನು ತೆಗೆದು ಬೇರೆ ನಾಟಿ ಮಾಡುವುದಕ್ಕೆ ಹಿಂದೇಟು ಹಾಕಬಾರದು.

ಒಂದು ವರ್ಷಕ್ಕೆ ಅಡಿಕೆ ಗಿಡ ಕನಿಷ್ಟ ಇಷ್ಟು ಬೆಳವಣಿಗೆ ಆಗಿರಬೇಕು. ಇವುಗಳಲ್ಲಿ ಬೆಳೆವಣಿಗೆ ಕುಂಠಿಸಿಕೊಂಡ ಸಸಿಗಳನ್ನು ತಕ್ಷಣ ಬದಲಿಸಬೇಕು.
ಒಂದು ವರ್ಷಕ್ಕೆ ಕನಿಷ್ಟ ಇಷ್ಟು ಬೆಳವಣಿಗೆ ಆಗಿರಬೇಕು. ಇವುಗಳಲ್ಲಿ ಬೆಳೆವಣಿಗೆ ಕುಂಠಿಸಿಕೊಂಡ ಸಸಿಗಳನ್ನು ತಕ್ಷಣ ಬದಲಿಸಬೇಕು.

ನೆಡುವ ಗಿಡ ಹೇಗಿರಬೇಕು?

 • ಅಡಿಕೆ ಬೆಳೆಗಾರರಿಗೆ ಹೇಳುವ ಪ್ರಾಮುಖ್ಯ ಸಲಹೆ ಎಂದರೆ ಸ್ಥಳೀಯವಾಗಿ ಇರುವ ತಳಿಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು.
 • ತಳಿ ಮೂಲ ಯಾವುದೇ ಇರಲಿ, ಸ್ಥಳೀಯ ಅಂದರೆ ಸುತ್ತಮುತ್ತ ಯಾರಾದರೂ ಬೆಳೆದವರಿದ್ದರೆ ಅಥವಾ ತಮ್ಮಲೇ ಅಡಿಕೆ ಮರಗಳಿದ್ದು, ತೃಪ್ತಿಕರವಾಗಿ ಇಳುವರಿ ಕೊಡುತ್ತಿದರೆ, ಅದರ ಬೀಜದ ಆಯ್ಕೆಗೆ ಪ್ರಥಮ ಪ್ರಾಶಸ್ತ್ಯ ನೀಡಿ.
 • ಒಂದು ವೇಳೆ ಸುತ್ತಮುತ್ತ ಅಡಿಕೆ ತೋಟಗಳೇ ಇಲ್ಲದಿದ್ದರೆ ಸಾಧ್ಯವಾದಷ್ಟು ಸಮೀಪದ ಊರಿನಿಂದ ಆಯ್ಕೆ ಮಾಡಿ.
 • ಈ ಹಂತದಲ್ಲಿ  ನೀವು ಪಾಸ್ ಆದರೆ ಮುಂದಿನ ನಿಮ್ಮ ಹೆಜ್ಜೆ ಸುಗಮ.
ನಾಟಿ ಮಾಡಿ ಒಂದು ತಿಂಗಳಲ್ಲಿ ಸಸಿ ಹಿಂದಿಗಿಂತ ಉದ್ದದ ಹೊಸ ಸುಳಿ ಬಿಟ್ಟುಇಷ್ಟಾದರೂ ಬೆಳೆದಿರಬೇಕು.
ನಾಟಿ ಮಾಡಿ ಒಂದು ತಿಂಗಳಲ್ಲಿ ಸಸಿ ಹಿಂದಿಗಿಂತ ಉದ್ದದ ಹೊಸ ಸುಳಿ ಬಿಟ್ಟುಇಷ್ಟಾದರೂ ಬೆಳೆದಿರಬೇಕು.
 • ನೆಡುವ ಸಸಿ ತುಂಬಾ ಸಣ್ಣದೂ ಅಲ್ಲ. ದೊಡ್ಡದೂ ಅಲ್ಲದ ಹಂತದಲ್ಲಿರಬೇಕು.
 • ಸುಮಾರು 5 ಎಲೆಗಳಿರುವ ಹೆಚ್ಚು ಉದ್ದ ಎಲೆಗಳಿಲ್ಲದ ಬುಡ ಭಾಗ ದಪ್ಪ ಇರುವ ಸಸಿಗಳನ್ನು ಆಯ್ಕೆ ಮಾಡಬೇಕು.
 • ಅವರವರೇ ಸಸಿ ಮಾಡುವಾಗ 1000 ಗಿಡ ಬೇಕಾದರೆ 1250  ಬೀಜ ಹಾಕಿ ಸಸಿ ಮಾಡಿ ಅದರಲ್ಲಿ ಉತ್ತಮ ಬೆಳವಣಿಗೆ  ಹೊಂದಿದ  ಗಿಡ ಆಯ್ಕೆ ಮಾಡಬೇಕು.
 • ಸಣಕಲು ಗಿಡವನ್ನು ಪ್ರಾರಂಭಿಕ ಹಂತದಲ್ಲೇ ತಿರಸ್ಕರಿಸಬೇಕು.
 • ನೆಟ್ಟು ಆದ ನಂತರ 10% ಗಿಡವನ್ನು ಉಳಿಸಿಕೊಳ್ಳಬೇಕು.
 • ಅದನ್ನು ಸ್ವಲ್ಪ ನೆರಳು ಉಳ್ಳ ಕಡೆ  ನೆಲದಲ್ಲೇ ಪಾತಿಮಾಡಿ ಸುಮಾರು 1 ಅಡಿ ಅಂತರದಲ್ಲಿ ನೆಟ್ಟು ಬೆಳೆಸುತ್ತಾ ಇರಿ.
ಇಂತಹ ಸಸಿ ಆದರೆ ಉತ್ತಮ.ಸುಮಾರಾಗಿ ಇಂತಹ ಸಸಿಯನ್ನು ಮಾತ್ರ ಆಯ್ಕೆ ಮಾಡಿ. ಚಿತ್ರ: ವೈಷ್ಣವಿ ನರ್ಸರಿ
ಇಂತಹ ಗಿಡ ಆದರೆ ಉತ್ತಮ.ಸುಮಾರಾಗಿ ಇಂತಹ ಸಸಿಯನ್ನು ಮಾತ್ರ ಆಯ್ಕೆ ಮಾಡಿ. ಚಿತ್ರ: ವೈಷ್ಣವಿ ನರ್ಸರಿ

ಹೊಂಡ ಮಾಡಿ ನೆಡಿ:

 • ಅಡಿಕೆ ಸಸಿ ನೆಡುವಾಗ ಕನಿಷ್ಟ 2.5X2.5X2.5 ಅಳತೆಯ ಹೊಂಡ ಮಾಡಿ, ಅದರಲ್ಲಿ ಅರ್ಥ ಪಾಲು ಸಡಿಲ ಮೇಲು ಮಣ್ಣು ತುಂಬಿ ನಾಟಿ ಮಾಡಬೇಕು.
 • ಹೊಂಡ ಮಾಡಿ ಮರಳಿ ತುಂಬುವ ಮಣ್ಣಿಗೆ ಕೊಟ್ಟಿಗೆ ಗೊಬ್ಬರ ಮತ್ತು ರಸ ಗೊಬ್ಬರ ಕೊಡುವುದಿದ್ದರೆ ಮಿಶ್ರಣ ಮಾಡಿ ಕೊಡಿ.  ಬುಡಕ್ಕೆ ಗುಪ್ಪೆಯಂತೆ  ಹಾಕಬೇಡಿ.
 • ನೀರು ನಿಲ್ಲಲಿ, ನಿಲ್ಲದೆ ಇರಲಿ ಪ್ರತೀ ಎರಡು ಗಿಡದ ಬುಡದಲ್ಲಿ ಸಂಗ್ರಹವಾಗುವ ಹೆಚ್ಚುವರಿ ನೀರು ಬಸಿಯಲು ಹೊಂಡಕ್ಕಿಂತ ½  ಅಡಿ ಹೆಚ್ಚಿನ ಆಳದ ಬಸಿಗಾಲುವೆ ಮಾಡಬೇಕು.
 • ಹೊಂಡ ಮಾಡಿ ನೆಡದಿದ್ದರೆ ಏನೂ ಆಗುವುದಿಲ್ಲ.
 • ಕಾರಣ ಇವುಗಳ ಬೇರು ಮೇಲುಸ್ಥರದಲ್ಲೇ ಬೆಳೆಯುವುದು ಕ್ರಮ.
 • ಆದರೂ ಕೆಲವೊಮ್ಮೆ ಮಳೆ ಹೆಚ್ಚಾದಾಗ ಮಣ್ಣು ಸಡಿಲವಾಗಿ ಮರ ವಾಲಬಹುದು.
 • ಜೊತೆಗೆ ಬೇರುಗಳು ಸ್ವಲ್ಪ ಕೆಳಸ್ಥರದಲ್ಲಿ ಇದ್ದು ಗಟ್ಟಿತನಕ್ಕೆ ನೆರವಾಗುತ್ತದೆ.
 • ಅಂಟು ಜಿಗುಟು ಮಣ್ಣು ಆಗಿದ್ದರೆ ಪ್ರತೀ ಸಸಿ ಬುಡದಿಂದ ಬಸಿಗಾಲುವೆಗೆ ಸಂಪರ್ಕ ಕೊಡಬೇಕು.
 • ಬಸಿಗಾಲುವೆ ಮರದ ಬೇರುಗಳ ಶ್ವಾಸೋಚ್ವಾಸಕ್ಕೆ ಅಗತ್ಯ. ಇದರಿಂದಲೇ ಸಸಿ ಆರೋಗ್ಯವಾಗಿ ಬೆಳೆದು ಉತ್ತಮ ಫಲ ಕೊಡುತ್ತದೆ.
 • ಬಸಿಗಾಲುವೆ ಸಸಿ ಬೆಳೆದ ನಂತರ ಮಾಡಬಾರದು. ಮೊದಲ ವರ್ಷದಲ್ಲೇ ಮಾಡಬೇಕು.
ನೆಡುವಾಗ ತೀರಾ ಆಳದಲ್ಲಿ ನಾಟಿ ಮಾಡಿದರೆ ನೀರು ಬಸಿಯುವುದಿಲ್ಲ. ಅರ್ಧ ಮುಚ್ಚಿ ನೆಡಿ. ಬುಡಕ್ಕೆ ಮಲ್ಚಿಂಗ್ ಮಾಡಿ.
ನೆಡುವಾಗ ತೀರಾ ಆಳದಲ್ಲಿ ನಾಟಿ ಮಾಡಿದರೆ ನೀರು ಬಸಿಯುವುದಿಲ್ಲ. ಅರ್ಧ ಮುಚ್ಚಿ ನೆಡಿ. ಬುಡಕ್ಕೆ ಮಲ್ಚಿಂಗ್ ಮಾಡಿ. ಬಸಿ ಕಾಲುವೆ ಹೀಗೆ ಮಾಡಿ.

ಬೆಳವಣಿಗೆ ಗಮನಿಸುತ್ತಾ ಇರಬೇಕು:

 • ಸಸಿ ನಾಟಿ ಮಾಡಿದ ಸುಮಾರು 1 ತಿಂಗಳಲ್ಲಿ ಹೊಸ ಸುಳಿ ಬರಬೇಕು. 
 • ಗಿಡ ಹಚ್ಚ ಹಸುರಾಗಿ ಬೆಳೆಯುತ್ತಿರಬೇಕು. ಹಳದಿ ಬಣ್ಣಕ್ಕೆ ತಿರುಗಬಾರದು. 
 • ಬರುವ ಸುಳಿಯು ಹಿಂದಿನ ಎಲೆಗಿಂತ ಉದ್ದ ಇರಬೇಕು.
 • ಒಂದು ವೇಳೆ ಅದು ಗಿಡ್ದವಾಗಿ ಬಂದರೆ  ಸುಳಿ ಬರುವುದು ತಡವಾದರೆ, ಸುಳಿಯಲ್ಲಿ ಮಣ್ಣು ಸೇರಿಕೊಂಡಿದೆಯೇ ಎಂದು ಗಮನಿಸಿ. ಅದು ಸರಿಯಾಗಿದ್ದರೆ ಬುಡ ಭಾಗದಲ್ಲಿ ಮಣ್ಣು ಸಮಸ್ಯೆ ಇದೆ ಎಂದರ್ಥ.
 • ಎಲೆ ಪೇಲವಾಗಿದ್ದರೆ ಬುಡ ಭಾಗದಲ್ಲಿ ಸಮಸ್ಯೆ ಇದೆ ಎಂದರ್ಥ.
 • ನೆಡುವಾಗ ಕಳಿಯದ ಕೊಟ್ಟಿಗೆ ಗೊಬ್ಬರ ಹಾಕಿದ್ದರೆ, ರಾಸಾಯನಿಕ ಗೊಬ್ಬರ ಹಾಕುವಾಗ ಬೇರಿಗೆ ತಾಗುವಂತೆ ಹೆಚ್ಚು ಹಾಕಿದ್ದರೆ, ನೀರು ನಿಂತಿದ್ದರೆ ಬೇರಿಗೆ ಬೆಳವಣಿಗೆಗೆ ತೊಂದರೆ ಆಗಿ  ಅದು ಬೆಳವಣಿಗೆ ಅಗಿಲ್ಲ ಎಂದರ್ಥ.
 • ಅಂಟು ಜಿಗುಟು ಮಣ್ಣು ಆಗಿದ್ದರೆ ನೀರು ನಿಲ್ಲುವ ಸಮಸ್ಯೆ ಹೆಚ್ಚು ಇರುತ್ತದೆ.
 • ನೆಡುವಾಗ ಬುಡಭಾಗಕ್ಕೆ ಸ್ವಲ್ಪ ಸೊಪ್ಪು ಅಥವಾ ಒಣ ತ್ಯಾಜ್ಯಗಳನ್ನು ಹಾಕದೆ ಇದ್ದರೆ  ನೀರಾವರಿ  ಅಥವಾ ಮಳೆಗೆ ನೆಲದ , ಹೊಂಡದ ಬದಿಯ  ಮಣ್ಣು ಸಿಡಿದು ಸುಳಿ ಭಾಗದಲ್ಲಿ ಸಂಗ್ರಹವಾಗಿ ಸುಳಿ ಬರಲು ತೊಂದರೆ ಆಗುತ್ತದೆ.
 • ಇದನ್ನು ಗುರುತಿಸಿ ಮಣ್ಣನ್ನು ನೀರು ಹಾಕಿ ತೆಗೆದು ಸ್ವಚ್ಚ ಮಾಡಿದರೆ ಮತ್ತೆ ಸುಳಿ ಚೆನ್ನಾಗಿ ಬರುತ್ತದೆ.
 • ಹೊಸ ಸುಳಿ ಗಿಡ್ದ ಬಂದ ಸಸಿಗಳನ್ನು ಮುಂದಿನ ಗರಿ ಬಿಡುವ ತನಕ ಗಮನಿಸಿ ಅದೂ ಸಣ್ಣದಾಗಿಯೇ ಬಂದರೆ ಆ ಗಿಡವನ್ನು  ಬದಲಿಸಿ ಬೇರೆ ನೆಡುವುದೇ ಸೂಕ್ತ.
 • ಆಗ ಬುಡ ಭಾಗ ಸಡಿಲವಾಗಿದೆಯೇ , ಏನಾದರೂ ಸಮಸ್ಯೆ ಇದೆಯೇ, ಕೊಳೆಯುವ ಸ್ಥಿತಿ ಇದೆಯೇ ಎಂದು ಗಮನಿಸಿ, ಅಂತಹ ಸಮಸ್ಯೆ ಇದ್ದರೆ ಬುಡ ಭಾಗವನ್ನು ನಾಲ್ಕಾರು ಒಣ ತೆಂಗಿನ ಸಿಪ್ಪೆ ಹಾಕಿ ಸುಟ್ಟು ಮಣ್ಣನ್ನು ಬಿಸಿ ಮಾಡಿ ನಂತರ ನೆಡಿ.
 • ಆಗ ಏನಾದರೂ ರೋಗಕಾರಕ, ಕೀಟ ಇದ್ದರೆ ಸಾಯುತ್ತದೆ. ಸುಡುವಾಗ ಬೆಂಕಿ ಜ್ವಾಲೆ ಬಾರದೆ ಸುಡಬೇಕು.
ಇಂತಹ ಗಿಡ ಇದ್ದರೆ ಕೂಡಲೇ ಬದಲಿಸಿ ಬೇರೆ ನೆಡಿ. ಇದು ಏಳಿಗೆ ಆಗುವುದಿಲ್ಲ.
ಇಂತಹ ಗಿಡ ಇದ್ದರೆ ಕೂಡಲೇ ಬದಲಿಸಿ ಬೇರೆ ನೆಡಿ. ಇದು ಏಳಿಗೆ ಆಗುವುದಿಲ್ಲ.

ಎಳೆ ಸಸಿ ಬುಡದಲ್ಲಿ ಕಳೆ ಬೆಳೆಯಬಾರದು:

 • ಎಳೆಯ ಸಸಿ ಸುಮಾರು ಎರಡು ವರ್ಷ ತುಂಬುವ ತನಕ ಬುಡದಲ್ಲಿ ಯಾವ ಕಳೆಯೂ ಬೆಳೆಯದಂತೆ  ನೋಡಿಕೊಳ್ಳಬೇಕು.
 • ಬುಡಕ್ಕೆ ಸೊಪು ತರಗೆಲ ಅಥವಾ ಇನ್ಯಾವುದಾದರೂ ಕೃಷಿ ತ್ಯಾಜ್ಯ ಹಾಕಿ ಕಳೆ ನಿಯಂತ್ರಣ ಮಾಡಬೇಕು. 
 • ಬುಡದಲ್ಲಿ ಮತ್ತು ಸಸಿಗೆ ಹತ್ತಿರವಾಗಿ ಬೆಳೆಯುವ ಹುಲ್ಲು, ಕಳೆ ಸಸ್ಯಗಳನ್ನು ಆಗಾಗ ಕೈಯಿಂದ ತೆಗೆಯುತ್ತಾ ಇರಬೇಕು.
 • ಯಾವುದೇ ಕಾರಣಕ್ಕೂ ಕಳೆ ನಾಶಕ ಬಳಸಬಾರದು. ಮುಚ್ಚಲು ಬೆಳೆ ಬೆಳೆಸಬೇಡಿ.
 • ಆಗ ನೀವು ಕೊಡುವ ಗೊಬ್ಬರ ಸಸಿಗೆ ಚೆನ್ನಾಗಿ ಬಳಕೆಯಾಗುತ್ತದೆ. ಬುಡಕ್ಕೆ ಸಾವಯವ ತ್ಯಾಜ್ಯಗಳನ್ನು ಕೊಡುವುದರಿಂದ ಎರೆಹುಳು ಬೆಳೆದು ಬುಡಭಾಗ ಸಡಿಲವಾಗಿರುತ್ತದೆ. 
 • ಬೇರು ಚೆನ್ನಾಗಿ ಬೆಳೆಯುತ್ತದೆ.  ಎಳೆ ಸಸಿಗೆ ಎರಡು ತಿಂಗಳಿಗೊಮ್ಮೆ 10 ಗ್ರಾಂ ಪ್ರಮಾಣದಲ್ಲಿ NPK ಮೂರೂ ಒಳಗೊಂಡ 15:15:15 ಮುಂತಾದ ಗೊಬ್ಬರ ಕೊಡುತ್ತಾ ಇರಬೇಕು.
 • ಮೂರು ತಿಂಗಳಿಗೊಮ್ಮೆ ಪತ್ರ ಸಿಂಚನವಾಗಿ 19:19:19 1 ಕಿಲೋ ಮತ್ತು 100 ಮಿಲಿ ಸೂಕ್ಷ್ಮ ಪೋಷಕಾಂಶ ವನ್ನು 100 ಲೀ. ನೀರಿನಲ್ಲಿ  ಬೆರೆಸಿ  ಎಲೆಗಳ ಎರಡೂ ಬದಿಗೆ ಸಂಜೆ ಹೊತ್ತು ಸಿಂಪಡಿಸುತ್ತಿದ್ದರೆ ಸಸಿ ಚೆನ್ನಾಗಿ ಬೆಳೆಯುತ್ತದೆ.
 • ಸಸಿ ಬೆಳೆಯುತ್ತಿರುವಾಗ ವ್ಯತ್ಯಾಸ ಕಂಡು ಬಂದರೆ ಅದನ್ನು ಮುಂದೆ ನೋಡುವ ಎಂದು ಬಿಡುವ ಬದಲು ಆಗಲೇ ಬೇರೆ ನೆಟ್ಟು ಬೆಳೆಸಿದರೆ ತುಂಬಾ ಉತ್ತಮ.
ನೆಟ್ಟು ತಕ್ಷಣ ಈ ರೀತಿ ನೆರಳು ಮಾಡಬೇಕು.
ನೆಟ್ಟು ತಕ್ಷಣ ಈ ರೀತಿ ನೆರಳು ಮಾಡಬೇಕು.

ನೆರಳು ಮಾಡಲೇಬೇಕು:

ಇಂತಹ ಸಮಸ್ಯೆ ಉಂಟಾದರೆ ತಕ್ಷಣ ವೆಟ್ಟೆಬಲ್ ಸಲ್ಪರ್ ಸಿಂಪಡಿಸಿ.
ಇಂತಹ ಸಮಸ್ಯೆ ಉಂಟಾದರೆ ತಕ್ಷಣ ವೆಟ್ಟೆಬಲ್ ಸಲ್ಪರ್ ಸಿಂಪಡಿಸಿ.
 • ಎಳೆ ಸಸಿ ನೆಡುವುದಕ್ಕೆ ಮುಂಚೆ ನೆರಳು ಅಥವಾ ಆಂಶಿಕ ನೆರಳಿನಲ್ಲಿ ಇರುತ್ತದೆ.
 • ಅದನ್ನು ಹೊಲದಲ್ಲಿ ನಾಟಿ ಮಾಡುವಾಗ ನೇರೆ ಬಿಸಿಲು ಬಿದ್ದಾಗ ಅದಕ್ಕೆ ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ.
 • ಹಾಗಾಗಿ ಪಶ್ಚಿಮ ದಿಕ್ಕಿಗೆ ನೆರಳು ಮಾಡಲೇ ಬೇಕು. ನೆರಳಿಗಾಗಿ ತೆಂಗಿನ  ಗರಿ ಇಲ್ಲವೇ, ಎಲೆ ಉದುರಿಸದ ಮರದ ಟೊಂಗೆಗಳನ್ನು ಊರಿ  ಅದಕ್ಕೆ ಅಲಸಂಡೆ ಬಳ್ಳಿ ಬಿಡಬಹುದು.
 • ಅದಕ್ಕೆ ಪ್ರತ್ಯೇಕ ಗೊಬ್ಬರ ಕೊಡಬೇಕು. ಮಿಶ್ರ ಬೆಳೆಯಾಗಿ ಮೊದಲ ಮೂರು ವರ್ಷ ಬಾಳೆ ಹಾಕಬೇಡಿ.
 • ಶುಂಠಿ, ಅರಸಿನ, ಅನನಾಸು, ಸಿಹಿ ಗೆಣಸು, ತೊಂಡೆ ಇತ್ಯಾದಿ ಚಪ್ಪರದ ತರಕಾರಿ ( ಈ ಬೆಳೆ ಬೆಳೆದಲ್ಲಿ ಪ್ರತ್ಯೇಕ ನೆರಳು ಬೇಡ) ಬೆಳೆಯಿರಿ.
 • ಬಾಳೆ ಹೆಚ್ಚಿನ ನೆರಳನ್ನು ಕೊಡುತ್ತದೆ.ಬೇರುಗಳು ಪೋಷಕಗಳನ್ನು ಕಬಳಿಸುತ್ತವೆ.
ಸುಳಿ ತಿಗಣೆಯ ಈ ಸಮಸ್ಯೆ ಬಾರದಂತೆ ನೋಡಿಕೊಳ್ಳಿ.
ಸುಳಿ ತಿಗಣೆಯ ಈ ಸಮಸ್ಯೆ ಬಾರದಂತೆ ನೋಡಿಕೊಳ್ಳಿ.
 • ಎಳೆಯ ಸಸಿಗಳ ಎಲೆಯ ಪತ್ರಹರಿತ್ತಿಗೆ ಯಾವ ತೊಂದರೆಯೂ ಆಗಬಾರದು. 
 • ಬಿಸಿಲು ಜಾಸ್ತಿ ಆದಾಗ ಈ ತೊಂದರೆ ಹೆಚ್ಚು. ಅದಕ್ಕೇ ನೆರಳು ಮಾಡಬೇಕು.
 • ಮೈಟ್ ಗಳಿಂದ, ತಿಗಣೆಗಳಿಂದ, ಬಿಸಿಲಿನ ಗಾಯ ಆದರೆ ಸಸ್ಯ ಬೆಳೆವಣಿಗೆ ಕುಂಠಿತವಾಗುತ್ತದೆ.
 • ಅದಕ್ಕಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಚಳಿಗಾಲದಿಂದ ಬೇಸಿಗೆ ಕೊನೆ ವರೆಗೆ ಪ್ರತೀ ಮೂರು ತಿಂಗಳಿಗೊಮ್ಮೆ ವೆಟ್ಟೆಬಲ್ ಸಲ್ಫರ್ ಎಲೆ ಅಡಿ ಭಾಗಕ್ಕೆ ಸಿಂಪರಣೆ ಮಾಡಬೇಕು.
 • ಒಮ್ಮೆಲೇ ವಿಷ ರಾಸಾಯನಿಕ ಔಷಧಿ ಸಿಂಪರಣೆ ಬೇಡ. ಕೊನೆಯ ಆಯ್ಕೆ ಆಗಿರಲಿ.

ಎಳೆ ಸಸಿಯ ಆರೈಕೆ ಚೆನ್ನಾಗಿದ್ದರೆ ಮಾತ್ರ ಆ ತೊಟ ಉತ್ತಮವಾಗಿ ಬರುತ್ತದೆ. ಎಲ್ಲಾ ಸಸಿಗಳೂ ಏಕಪ್ರಕಾರ ಬೆಳೆಯುವಂತೆ ಮೊದಲ ಮೂರು ವರ್ಷಗಳಲ್ಲಿ ನಿರ್ವಹಣೆ ಮಾಡುವುದೇ ಉತ್ತಮ ಆಡಿಕೆ ಬೆಳೆಯ ಒಟ್ಟಾರೆ ಅನುಭವ.

ಮುಂದೆ: ಎರಡನೇ ವರ್ಷದಲ್ಲಿ ಗಿಡ ಹೇಗಿರಬೇಕು. ಏನೇನು ಮಾಡಬೇಕು? ಮಾಹಿತಿ ಪ್ರಕಟವಾಗಲಿದೆ.

Leave a Reply

Your email address will not be published. Required fields are marked *

error: Content is protected !!