ಯಾವಾಗಲೂ ಕತ್ತಲಾಗುತಲೇ ನಿಮ್ಮ ಮನೆಯ ವಿದ್ಯುತ್ ದೀಪಕ್ಕೆ ಒಂದು ದೊಡ್ದ ದುಂಬಿ ಬಂದು ನೆಲಕ್ಕೆ ಬೀಳುತ್ತದೆ. ಅದರಲ್ಲಿ ಹೆಚ್ಚಿನದು ತೆಂಗಿನ ಮರದ ಸುಳಿಯನ್ನು ಕೊರೆಯುವ ಕುರುವಾಯಿ ದುಂಬಿಯಾಗಿರುತ್ತದೆ. ಇದು ವಂಶಾಭಿವೃದ್ದಿಯಾಗುವುದು ಕೊಟ್ಟಿಗೆ ಗೊಬ್ಬರ ಅಥವಾ ಸಾವಯವ ಗೊಬ್ಬರದಲ್ಲಿ. ಕುರುವಾಯಿ ನಿಯಂತ್ರಣವಾಗಬೇಕಿದ್ದರೆ ಸಾವಯವ ಗೊಬ್ಬರವನ್ನು ಉಪಚರಿಸಿ ಬಳಕೆ ಮಾಡಬೇಕು.
- ತೆಂಗಿನ ಮರವನ್ನು ಕೊಲ್ಲದೇ, ಅದನ್ನು ಏಳಿಗೆಯಾಗಲು ಬಿಡದ ಒಂದು ಸಾಮಾನ್ಯ ಕೀಟ ಕುರುವಾಯಿ.
- ನಮ್ಮ ಹಿರಿಯರು ಹೇಳುವುದಿದೆ, ಒಂದು ಕುರುವಾಯಿ ಕೊಂದರೆ 1 ದೇವಾಸ್ಥಾನ ಕಟ್ಟಿದ ಪುಣ್ಯವಿದೆ ಎಂದು.
- ತೆಂಗು ನಾವೆಲ್ಲಾ ಪೂಜಿಸುವ ಕಲ್ಪವೃಕ್ಷ.
- ಆದ ಕಾರಣ ವೃಕ್ಷಕ್ಕೆ ತೊಂದರೆ ಕೊಡುವ ಕೀಟ ಎಂಬ ಭಾವನೆಯಿಂದಲಾದರೂ ಅದು ನಶಿಸಲಿ ಎಂದು ಹಾಗೆ ಹೇಳಿರಬೇಕು.
ಕುರುವಾಯಿ ಬಾಧೆಯ ಲಕ್ಷಣ:
- ತೆಂಗಿನ ಸಸಿಯ/ಮರದ ಮೂಡುತ್ತಿರುವ ಇನ್ನೂ ಅರಳಿರದ ಸುಳಿಯ ಭಾಗದಲ್ಲಿ ಕುಳಿತು ಎಲೆ ಮತ್ತು ಅದರ ದಂಟನ್ನು ಕೊರೆಯುತ್ತಾ ರಸ ಹೀರುವ ಕೀಟಕ್ಕೆ ಕುರುವಾಯಿ ಎಂಬುದು ರೂಡಿಯಲ್ಲಿನ ಹೆಸರು.
- ಸುಳಿ ಕೊರೆಯುವಾಗ ಅದರ ಎಲೆಗಳಿಗೆ ಮತ್ತು ಹೂ ಗೊಂಚಲಿಗೆ ತೀವ್ರ ಹಾನಿಯಾಗುತ್ತದೆ.
- ಎಳೆಯದಿರುವಾಗ ಕೊರೆಯಲ್ಪಟ್ಟ ಭಾಗ ಬೆಳೆದಂತೇ ಹರಿದ ಎಲೆಗಳಾಗಿ ಕಾಣಿಸುತ್ತದೆ.
- ಹೆಚ್ಚಿನ ಸಲ ದಂಟಿನ ಭಾಗ ಕೊರೆಯಲ್ಪಟ್ಟು ಸುಳಿ ಮೇಲೆ ಬೆಳೆಯುತ್ತಿದ್ದಂತೆ ದಂಟಿನಲ್ಲಿ ಶಕ್ತಿ ಇಲ್ಲದೆ ಮುರಿದು ಬೀಳುತ್ತದೆ.
- ಹೂ ಗೊಂಚಲಿನಲ್ಲಿ ಕೊರೆದು ಆ ಹೂಗೊಂಚಲು ಬೆಳೆಯದೆ ಅಲ್ಲೇ ಒಣಗಿ ಹೋಗುತ್ತದೆ.
- ದೊಡ್ಡ ಮರಗಳಲ್ಲಿ ಈ ಕೀಟದ ಹಾನಿಯಿಂದ ಮರ ಸಾಯಲಾರದು.
- ಎಳೆ ಸಸಿಗಳಾದರೆ ಸಾಯುವ ಸಾಧ್ಯತೆ ಇದೆ.
ಸಾವಯವ ಗೊಬ್ಬರ ಮತ್ತು ಕುರುವಾಯಿ:
- ಸಾಮಾನ್ಯವಾಗಿ ಎಲ್ಲರೂ ತೆಂಗಿ ಇರಲಿ ಇನ್ಯಾವುದೇ ಬೆಳೆ ಇರಲಿ, ಕೊಟ್ಟಿಗೆ ಗೊಬ್ಬರ ಹಾಕುತ್ತೇವೆ.
- ಹಸು ಕೊಟ್ಟಿಗೆ ಇಲ್ಲದವರು ಕುರಿ ಗೊಬ್ಬರ, ಕಾಂಪೋಸ್ಟು, ಕೋಳಿ ಗೊಬ್ಬರ ಹಾಕುತ್ತಾರೆ.
- ಸೊಪ್ಪು ತರಗೆಲೆಯನ್ನು ಒಂದೆಡೆ ರಾಶಿ ಹಾಕಿದರೂ ಅದರಲ್ಲಿ ಹುಳಗಳು ಉಂಟಾಗುತ್ತವೆ.
- ಇವು ಎರೆಹುಳುವಿಗಿಂತ ಬೇಗ ಸಾವಯವ ವಸ್ತುಗಳನ್ನು ವಿಘಟನೆ ಮಾಡುತ್ತವೆ.
- ಸಾವಯವ ವಸ್ತುಗಳನ್ನು ಕಾಂಪೋಸ್ಟಿಂಗ್ ಮಾಡುವ ಹುಳಗಳೇ ಕುರುವಾಯಿ ದುಂಬಿಯ ಲಾರ್ವೆಗಳು.
- ಈ ದುಂಬಿ ಹುಳವಾಗಿದ್ದಾಗ, ನಮಗೆ ಉಪಕಾರಿ. ದುಂಬಿ ಆದಾಗ ಅದು ಮಾರಿ.
- ಹಾಗಾಗಿ ಇವು ಬೇಕು. ಇವೆ ಎಲ್ಲಾ ಸಾವಯವ ಗೊಬ್ಬರದಲ್ಲಿ ಇದ್ದೇ ಇರುತ್ತವೆ.
- ಕೊಟ್ಟಿಗೆ ಅಥವಾ ಸಾವಯವ ಗೊಬ್ಬರ ಹಾಕಬೇಕು. ಅದು ಕಳಿತು ಹುಡಿಯಾದರೆ ಮಾತ್ರ ಸಸ್ಯಗಳು ಬಳಸಿಕೊಳ್ಳುತ್ತವೆ.
- ಹಾಗಾಗಿ ಈ ಹುಳವನ್ನು ನಾಶ ಮಾಡುವುದಕ್ಕಿಂತ ದುಂಬಿಯನ್ನು ತೆಂಗಿನ ಮರದ ಸುದ್ದಿಗೆ ಬಾರದಂತೆ ನೋಡಿಕೊಳ್ಳುವುದೇ ಉತ್ತಮ.
ಎಲ್ಲಿ ಹೆಚ್ಚು :
- ಮರವು ಸುಮಾರು 20 ಅಡಿಗಿಂತ ಎತ್ತರಕ್ಕೆ ಬೆಳೆದ ಮೇಲೆ ಇದರ ಉಪಟಳ ಕಡಿಮೆ.
- ಎಳೆಯ ಸಸಿಗಳಿಗೆ ಹೆಚ್ಚು. ಹೆಚ್ಚು ಮೃದು ಜಾತಿಯ ತಳಿಗಳಿಗೆ ತೀವ್ರ ಉಪಟಳ.
- ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟು ಗೊಬ್ಬರ, ಸೊಪ್ಪು ತರಗೆಲೆ,ತೆಂಗಿನ ಗರಿ ಬುಡಕ್ಕೆ ಬಳಕೆ ಮಾಡುವಲ್ಲಿ ಇದು ಜಾಸ್ತಿ.
- ತೆಂಗಿನ ನಾರು ಮತ್ತು ಹುಡಿ ಬಳಕೆ ಮಾಡುವಲ್ಲಿಯೂ ಜಾಸ್ತಿ. ಕುರಿ ಗೊಬ್ಬರ, ಕೊಳಿ ಗೊಬ್ಬರ ಕಾಂಪೋಸ್ಟು ಆಗುವುದು ಇದರ ಮೂಲಕ.
ಪರಿಣಾಮ:
- ಸಸಿ/ಮರದ ಎಲೆ ಸಂಖ್ಯೆ ಕಡಿಮೆಯಾಗಿ ದ್ಯುತಿಸಂಸ್ಲೇಶಣ ಕ್ರಿಯೆ ಸಮರ್ಪಕವಾಗಿ ನಡೆಯದೆ ಸಸ್ಯ ಬೆಳವಣಿಗೆ ಕುಂಠಿತವಾಗುತ್ತದೆ.
- ಹೂಗೊಂಚಲು ಹಾನಿಯಾಗಿಯೂ ಇಳುವರಿ ಕ್ಷೀಣಿಸುತ್ತದೆ. ಕುರುವಾಯಿ ದುಂಬಿಯಿಂದ ತೆಂಗಿನಲ್ಲಿ 10-25 % ಇಳುವರಿ ನಷ್ಟವಾಗುತ್ತದೆ.
- ಇದು ತೆಂಗು ಬೆಳೆಯಲಾಗುವ ಎಲ್ಲಾ ಕಡೆಗಳಲ್ಲೂ ಕಂಡು ಬರುತ್ತದೆ.
- ಕುರುವಾಯಿ ಬಾಧಿಸಿದ ಭಾಗದಲ್ಲಿ ಮರದ ಕಾಂಡದಲ್ಲಿ ಗಾಯ ಉಂಟಾಗುತ್ತದೆ.
- ಕೆಲವೊಮ್ಮೆ ಗಾಳಿಗೆ ಮರ ಬೀಳುವುದಿದ್ದರೆ ಈ ಭಾಗದಿಂದ.
ಎಲ್ಲವೂ ಕುರುವಾಯಿ ಅಲ್ಲ:
- ನಮ್ಮ ಪರಿಸರದಲ್ಲಿ ಹಲವಾರು ಕುರುವಾಯಿಯನ್ನು ಹೋಲುವ ದುಂಬಿಗಳಿವೆ.
- ಎಲ್ಲವೂ ತೆಂಗಿನ ಮರಕ್ಕೆ ತೊಂದರೆ ಮಾಡುವ ದುಂಬಿಗಳಲ್ಲ.
- ಇದರಲ್ಲಿ ಹಲವಾರು ಪರಾಗ ಸ್ಪರ್ಷಕ್ಕೆ ನೆರವಾಗುವ ಉಪಕಾರೀ ದುಂಬಿಗಳೂ ಸೇರಿವೆ.
- ತೆಂಗಿನ ಮರಕ್ಕೆ ಹಾನಿ ಮಾಡುವ ದುಂಬಿಯೆಂದರೆ ಖಡ್ಗ ಜೀರುಂಡೆ ಮಾತ್ರ (Rhinoceros Beetle)
- ಇದಕ್ಕೆ ತನ್ನ ಬಾಯಿಯ ಮೇಲೆ ಒಂದು ಖಡ್ಗದಂಥ ರಚನೆ ಇರುತ್ತದೆ.
- ಪ್ರೌಢ ದುಂಬಿ ಕಪ್ಪಗೆ ಬಣ್ಣದಲ್ಲಿರುತ್ತದೆ.
- ಹೆಚ್ಚಿನ ಕುರುವಾಯಿಯನ್ನು ಹೋಲುವ ದುಂಬಿಗಳು ನಿಮ್ಮ ಮನೆಯ ದೀಪದ ಬೆಳಕಿಗೆ ಬರುತ್ತವೆ.
- ಅದರಲ್ಲಿ ಖಡ್ಗ ಜೀರುಂಡೆಯೇನಾದರೂ ಇದ್ದರೆ ಅದನ್ನು ಕೊಂದುಬಿಡಿ. ಪಾಪ ಇಲ್ಲ.
- ತೆಂಗಿನ ಸಸಿಯ/ ಮರದ ಸುಳಿಗಳು ಮೂಡುವ ಭಾಗದಲ್ಲಿ ಚೀಪಿ ಹೊರ ಹಾಕಿದ ತಾಜಾ ನಾರಿನಂತ ಚೂರುಗಳಿದ್ದರೆ ಆಲ್ಲಿ ಕುರುವಾಯಿ ಕೀಟ ಇದೆ ಎಂದರ್ಥ.
- ಹೀಗೆ ಕೊರೆಯುವಾಗ ಕೆಲವೊಮ್ಮೆ ಅದು ಕಾಂಡ ಭಾಗದ ವರೆಗೂ ಹೋಗುತ್ತದೆ.
- ಅಂತಹ ಚಿನ್ಹೆ ಗರಿ ಉದುರಿದ ನಂತರ ಕಾಣುವ ಕಾಂಡದಲ್ಲಿ ಗಾಯದಂತೇ ಕಾಣಿಸುತ್ತದೆ.

ಕುರುವಾಯಿ ದುಂಬಿ ಅಗುವ ಗೊಬ್ಬರದ ಹುಳ
ಜೀವನ ಚಕ್ರ:
- ಕುರುವಾಯಿ ಕೀಟ ಕೇವಲ ರಸ ಹೀರುವುದಕ್ಕೆ ಮಾತ್ರ ತೆಂಗಿನ ಮರವನ್ನು ಆಶ್ರಯಿಸುತ್ತದೆ.
- ತನ್ನ ಸಂತಾನಾಭಿವೃದ್ದಿಯನ್ನು ನೆಲದಲ್ಲಿ ಕಾಂಪೊಸ್ಟು ಮಾಡುವ ಗೊಬ್ಬರದ ರಾಶಿಯಲ್ಲಿ ನಡೆಸುತ್ತದೆ.
- ಕೆಲವೊಮ್ಮೆ ಕಳಿಯುತ್ತಿರುವ ಮರಗಳಿದ್ದರೆ ಅಲ್ಲಿಯೂ ಸಂತಾನಾಭಿವೃದ್ದಿಯಾಗುತ್ತದೆ.
- ನಾವು ಗೊಬ್ಬರದ ರಾಶಿಯಲ್ಲಿ ಗೊಬ್ಬರದ ಹುಳುಗಳನ್ನು ಕಂಡವರು.
- ಇದುವೇ ನಂತರ ಉರುವಾಯಿಯಾಗುವುದು.
- ಹೆಣ್ಣು ದುಂಬಿ 70-100 ಮೊಟ್ಟೆ ಇಡುತ್ತದೆ. 14 ದಿನದಲ್ಲಿ ಮೊಟ್ಟೆ ಒಡೆಯುತ್ತದೆ.
- ಹುಳುವಾಗಿ ನಿರಂತರ ಕಳಿಯುವ ಸಾವಯವ ವಸ್ತುಗಳನ್ನು ಭಕ್ಷಿಸುತ್ತಾ 4 ತಿಂಗಳ ಕಾಲ ಬೆಳೆದು ನಂತರ ಸುಪ್ತಾವಸ್ಥೆಗೆ (ಪ್ಯೂಪೆ) ತಲುಪುತ್ತದೆ.
- ಇದು ಗೊಬ್ಬರದ ರಾಶಿಯಲ್ಲಿ5 ಮೀ. ನಿಂದ 1 ಮೀಟರ್ ತನಕವೂ ಇರುತ್ತದೆ.
- ಪ್ಯೂಪೆಯಾಗಿ ಸುಮಾರು 16-24 ದಿನಗಳ ಕಾಲ ಇರುತ್ತದೆ. ನಂತರ ಅದು ದುಂಬಿಯಾಗುತ್ತದೆ.
- ಹೊಸ ದುಂಬಿ ತಿಳಿ ಕಂದು ಬಣ್ಣದಲ್ಲಿರುತ್ತದೆ. 1-3 ವಾರಕಾಲ ಚಟುವಟಿಕೆಯಲ್ಲಿರದೇ, ನಂತರ ಹಾರಿ ಮರವನ್ನು ಹುಡುಕಿ ಕೊರೆಯಲಾರಂಭಿಸುತ್ತದೆ.
- ಒಂದು ವರ್ಷದಲ್ಲಿ ಇದು ಮೂರು ತಲೆಮಾರನ್ನು ಪೂರೈಸುತ್ತದೆ.
- ಒಂದು ದುಂಬಿ 6 ತಿಂಗಳ ಕಾಲ ಬದುಕಿರುತ್ತದೆ.
- ಒಂದು ಜೊತೆ ದುಂಬಿಯು 3 ವರ್ಷದಲ್ಲಿ 15 ಕೋಟಿ ಮರಿಗಳನ್ನು ಉತ್ಪಾದಿಸುತ್ತದೆ.

ಒಂದು ಗೊಬ್ಬರದ ಹುಳ ದಿನಕ್ಕೆ ಹತ್ತು ಎರೆಹುಳುವಿನಷ್ಟು ಗೊಬ್ಬರ ಹುಡಿ ಮಾಡಿ ಕೊಡುತ್ತದೆ.
ನಿಯಂತ್ರಣ:
- ಕುರುವಾಯಿ ಕೀಟದ ಸಂತಾನಾಭಿವೃದ್ದಿಯು ಕಳಿಯುತ್ತಿರುವ ಸಾವಯವ ವಸ್ತುಗಳ ರಾಶಿಯಲ್ಲಿ ನಡೆಯುವ ಕಾರಣ ಅಲ್ಲಿ ಅದರ ನಿಯಂತ್ರಣ ಮಾಡುವುದು ಸುಲಭ.
- ಅಲ್ಲಲ್ಲಿ ಸಗಣಿ ಕಂಪೋಸ್ಟು ರಾಶಿಗಳನ್ನು ಮಾಡಿದರೆ, ಅದಕ್ಕೆ 2-3 ತಿಂಗಳಿಗೊಮ್ಮೆ ತಿರುವಿ ಹಾಕುತ್ತಿದ್ದರೆ ಹುಳಗಳನ್ನು ಇರುವೆ, ಹಕ್ಕಿ ತಿನ್ನುತ್ತದೆ. ಅಲ್ಲಿಂದಲೇ ಹುಳ ಮತ್ತು ಮೊಟ್ಟೆಗಳನ್ನು ನಾಶ ಮಾಡಬಹುದು.
- ತೆಂಗಿನ ಮರದ ಬುಡಕ್ಕೆ ಹಾಗೂ ಅಡಿಕೆ ಮರದ ಬುಡಕ್ಕೆ ಕೊಟ್ಟಿಗೆ ಗೊಬ್ಬರವನ್ನು ಹಾಕಿದರೆ ಅಲ್ಲಿಯೂ ಮೊಟ್ಟೆ ಇಟ್ಟು ಮರಿಯಾಗುತ್ತದೆ.
- ಆದರೆ ಅಲ್ಲಿಯೂ ನಿರ್ವಹಣೆ ಮಾಡಿದರೆ ನಿಯಂತ್ರಣ ಸಾಧ್ಯ. ಬುಡಕ್ಕೆ ಹಾಕುವ ಬದಲು ಕಾಂಫೋಸ್ಟು ಮಾಡಿ ಹಾಕಿ.
- ಕೆಲವು ಜಾತಿಯ ಕಳೆ ಗಿಡ ‘ಇಟ್ಟೆವು’ನಿರ್ಗುಂಡಿ ಸಸ್ಯವನ್ನು ಕಾಂಪೋಸ್ಟುನೊಂದಿಗೆ ಮಿಶ್ರಣ ಮಾಡುವುದರಿಂದ ಕುರುವಾಯಿ ಕೀಟ ಸಂತಾನಾಭಿವೃದ್ದಿಯಾಗುವುದಿಲ್ಲ
- ಇದು ತೆಂಗು ಅಭಿವೃದ್ದಿ ಮಂಡಳಿಯವ ರ ಸಲಹೆ. ಕೆಲವು ಬ್ಯಾಕ್ಟೀರಿಯಾ, ಶಿಲೀಂದ್ರ ಹಾಗೂ ಹಕ್ಕಿಗಳು ಇದರ ನಾಶಕ್ಕೆ ನೆರವಾಗುತ್ತದೆಯಾದರೂ ಅದು ಅನುಸರಿಸಲು ಕಷ್ಟ.
ಮರ/ ಸಸಿಯಲ್ಲಿಯೂ ಕೀಟವನ್ನು ಕೊಲ್ಲಬಹುದು. ತುದಿ ಕೊಕ್ಕೆಯಂತಿರುವ ಕಬ್ಬಿಣದ ಕಡ್ಡಿಯನ್ನು ದುಂಬಿ ತಿಂದು ಹೊರ ಹಾಕಿದ ತಾಜಾ ಚೂರುಗಳಿರುವಲ್ಲಿಗೆ ಚುಚ್ಚಿ, ತಿರುವಿ ದುಂಬಿಯನ್ನು ತೆಗೆದು ನಾಶಮಾಡಬಹುದು.
- ಮರ/ ಸಸಿಯ ಗರಿಗಳು ಮೂಡುದ ಸುಳಿ ಭಾಗಕ್ಕೆ, ಮರಳು ಮತ್ತು ಡೇಲ್ಟ್ರಾಮೆಥ್ರಿನ್ ಸಿಂಪಡಿಸಿದರೆ ಸುಮಾರು 2 ತಿಂಗಳ ತನಕ ಅಲ್ಲಿ ದುಂಬಿ ಬರಲಾರದು.
- ನಾಪ್ಥಾಲಿನ್ ಗುಳಿಗೆಯನ್ನೂ ಜೊತೆಗೆ ಇಡಬಹುದು.
- 5 ಗ್ರಾಂ ಥಿಮೇಟನ್ನು ಒಂದು ಪ್ಲಾಸ್ಟಿಕ್ ಪೌಚ್‍ನಲ್ಲಿ ಹಾಕಿ ಬಾಯಿ ಕಟ್ಟಿ ಮಧ್ಯೆ ಒಂದೆರಡು ತೂತು ಮಾಡಿ, ಸುಳಿ ಭಾಗದಲ್ಲಿ ಗುಂಡು ಸೂಜಿಯಲ್ಲಿ ಚುಚ್ಚಿ ಇಟ್ಟರೆ, ಅದರ ವಾಸನೆಗೆ ಕೀಟ ಬರಲಾರದು.
- ನಾಪ್ಥಾಲಿನ್ ಗುಳಿಗೆ ಸುಳಿ ಭಾಗದಲ್ಲಿ ಇಟ್ಟರೆ ದುಂಬಿ ದೂರವಾಗುತ್ತದೆ.
ಕುರುವಾಯಿಯನ್ನು ಲಿಂಗಾಕರ್ಷಕ ಬಲೆ ಹಾಕಿ ಸಂತಾನ ಕ್ಷೀಣಿಸಬಹುದು.ಇದು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದನ್ನು ತೋಟದಲ್ಲಿ ಇಟ್ಟರೆ ಅದನ್ನು ಅರಸಿ ಗಂಡು ದುಂಬಿಗಳು ಬರುತ್ತವೆ.
- ಗಂಡು ದುಂಬಿ ಸಂತತಿ ಕಡಿಮೆಯಾದರೆ ಹೆಣ್ಣು ಮೊಟ್ಟೆ ಇಡದೆ ಸಂತಾನಾಭಿವೃದ್ದಿ ಕಡಿಮೆಯಾಗುತ್ತದೆ.
ಸುಲಭ ವಿಧಾನ;
- ಕುರುವಾಯಿ ದುಂಬಿಗಳನ್ನು ಆಕರ್ಷಿಸಲು ನಮ್ಮಲ್ಲಿ ಕೆಲವರು ಮಣ್ಣಿನ ಪಾತ್ರೆಯಲ್ಲಿ ನೆಲಕಡ್ಲೆ ಹಿಂಡಿಯನ್ನು ಹಾಕಿ ಕೊಳೆಯಿಸಿ ಹೊಲದಲ್ಲಿ ಇಡುತ್ತಾರೆ.
- ಇದರ ಕೊಳೆತ ವಾಸನೆಗೆ ದುಂಬಿಗಳು ಬಂದು ಬೀಳುತ್ತವೆ.
- ಇದು ಉತ್ತಮ ಆಕರ್ಷಣೆ ವಿಧಾನವಾಗಿರುತ್ತದೆ. ಈ ಮಿಶ್ರಣಕ್ಕೆ ವಾಸನೆ ರಹಿತ ಕೀಟ ನಾಶಕ ಹಾಕಿದರೆ ದುಂಬಿ ಸತ್ತು ಹೋಗುತ್ತದೆ.
- ನೆಲಕಡ್ಲೆ ಹಿಂಡಿ, ಹರಳು ಹಿಂಡಿ, ಜೊತೆಗೆ ಇದ್ದರೆ ಹಾಳಾಗಿ ಕೊಳೆಯುವ ಬಾಳೆ ಹಣ್ಣುಗಳನ್ನು ಹಾಕಿದರೆ ಅಲ್ಲಿಗೆ ಕೆಲವೊಮ್ಮೆ ಕೆಂಪು ಮೂತಿ ದುಂಬಿಯೂ ಬರುತ್ತದೆ.
- ಈ ರೀತಿ ಬಂಧಿಸಿ ತುಂಬಾ ದುಂಬಿಗಳನ್ನು ನಾಶ ಮಾಡಬಹುದು.
- ಇದಕ್ಕೆ ಹೆಚ್ಚು ಖರ್ಚು ಆಗಲಾರದು.
- ತೆಂಗಿನ ಸಸಿಯ ಸುಳಿ ಭಾಗಕ್ಕೆ ಬಲೆ ಕಟ್ಟಿ ದುಂಬಿಯನ್ನು ದೂರ ಮಾಡಬಹುದು.
ಪರಭಕ್ಷಕಗಳು:
- ತೆಂಗಿನ ಮರದ ಕುರುವಾಯಿ ಕೀಟವನ್ನು ಹೊಲದಲ್ಲಿ ಇರುವ ಬಲೆ ಹೆಣೆಯುವ ಜೇಡವು ಬಂಧಿಸುತ್ತದೆ.
- ಆದ ಕಾರಣ ಎತ್ತರದಲ್ಲಿ ಬಲೆ ಕಟ್ಟಿ ವಾಸಿಸುವ Tiger spider ಜೇಡದ ಬಲೆಯನ್ನು ನಾಶ ಮಾಡಬೇಡಿ.
ತೆಂಗಿನ ಮರಕ್ಕೆ ಕುರುವಾಯಿ ಕೀಟ ಬಾಧಿಸದೆ ಇದ್ದರೆ ಆ ಮರ ನಿಗದಿತ ಸಮಯಕ್ಕೆ ಇಳುವರಿ ಕೊಡುತ್ತದೆ.ಮರಕ್ಕೆ ಉತ್ತಮ ಆರೋಗ್ಯವೂ ಇರುತ್ತದೆ. ಎಲ್ಲಾ ಬೆಳೆವಣಿಗೆಗೆ ಬೇಕಾಗುವುದು ಆರೋಗ್ಯವಂತ ಎಲೆಗಳಾದ ಕಾರಣ ಎಲೆಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ತೆಂಗಿನಲ್ಲಿ ಉತ್ತಮ ಇಳುವರಿ ಮತ್ತು ಬೇಗ ಇಳುವರಿಯನ್ನು ಪಡೆಯಬಹುದು.ಕುರುವಾಯಿ ಕೀಟದಿಂದ ತೆಂಗನ್ನು 5 ವರ್ಷ ತನಕ ರಕ್ಷಿಸಿದರೆ ತೆಂಗಿನ ಬೆಳೆ ಕೈ ಹಿಡಿಯುತ್ತದೆ.
0 Comments