ತೆಂಗು ಬೆಳೆಗಾರರನ್ನು ಉಳಿಸಿ- ಇಲ್ಲವಾದರೆ ತೆಂಗು ಬೆಳೆಯೇ ಕ್ಷೀಣಿಸಬಹುದು!

ತೆಂಗು ಬೆಳೆಗಾರರನ್ನು ಉಳಿಸಿ- ಇಲ್ಲವಾದರೆ ತೆಂಗು ಬೆಳೆಯೇ ಕ್ಷೀಣಿಸಬಹುದು!

ತೆಂಗು ಬೆಳೆಗಾರರ ನೆರವಿಗೆ ಸರಕಾರ ಮತ್ತು ತೆಂಗಿನ ಉತ್ಪನ್ನ ಬಳಕೆದಾರರು ಬಾರದೆ ಇದ್ದರೆ ಕೆಲವೇ ಸಮಯದಲ್ಲಿ ತೆಂಗಿನ ಬೆಳೆಯನ್ನೇ ರೈತರು ಬಿಡುವ ಸ್ಥಿತಿ ಬರಬಹುದು. ಕಲ್ಪವೃಕ್ಷ ತೆಂಗು, ಯಾವತ್ತೂ ಭವಿಷ್ಯವಿರುವ ಬೆಳೆ ಎಂದು ನಂಬಿದ್ದ ಬೆಳೆಗಾರರಿಗೆ ಯಾವತ್ತೂ  ಆಕರ್ಷಕ ಬೆಲೆ ಬರಲೇ ಇಲ್ಲ. ತೆಂಗಿನ ಬೆಳೆ ಕಡಿಮೆ ಇದ್ದ 30-40 ವರ್ಷಗಳ ಹಿಂದೆ ಇದ್ದ ಬೆಲೆಗಿಂತಲೂ ಕಡಿಮೆ ಬೆಲೆ ಈಗ ತೆಂಗಿನ ಕಾಯಿಯದ್ದು. ಈ ಬೆಲೆಯಲ್ಲಿ ತೆಂಗು ಬೆಳೆಗಾರರು ಉಳಿಯುವುದು ಸಾಧ್ಯವೇ? ಖಂಡಿತವಾಗಿಯೂ ಇಲ್ಲ. ಸರಕಾರ ತೆಂಗು ಬೆಳೆಗಾರರ ನೆರವಿಗೆ ಬಾರದಿದ್ದರೆ  ರೈತರು ತೆಂಗಿನ ಮರ ಕಡಿದು ಅಡಿಕೆ ಹಾಕಿದರೂ ಅಚ್ಚರಿ ಇಲ್ಲ.

ತೆಂಗು ಒಂದು ಆಹಾರ ಬೆಳೆ ಎಂದರೆ ತಪ್ಪಾಗಲಾರದು. ಪ್ರತೀಯೊಬ್ಬರೂ ದಿನಕ್ಕೆ ಒಂದೋ ಎರಡೋ ತೆಂಗಿನ ಕಾಯಿಯನ್ನು ಬಳಕೆ ಮಾಡದೆ ಇರುವುದಿಲ್ಲ. ತೆಂಗು ಬೆಳೆಯಲು ಹೊಂದಾಣಿಕೆಯಾಗುವ ಎಲ್ಲಾ ಪ್ರದೇಶಗಳಲ್ಲೂ  ಪ್ರತೀ ಮನೆಯವರೂ ತಮ್ಮ ತಮ್ಮ  ಸ್ಥಳಕ್ಕನುಗುಗುಣವಾಗಿ ತೆಂಗಿನ ಸಸಿ ನೆಟ್ಟು ಬೆಳೆಸುತ್ತಾರೆ. ತೆಂಗಿನ ಕಾಯಿಯ ಕಚ್ಚಾ ಬಳಕೆ ಒಂದು. ಹಾಗೆಯೇ ತೆಂಗಿನ ಕಾಯಿಯನ್ನು ಒಣಗಿಸಿ ಅದರ ಕೊಬ್ಬರಿಯನ್ನು ತಿನ್ನುವುದು ಸಹ ಉತ್ತರ ಭಾರತದಲ್ಲಿ ಚಾಲ್ತಿಯಲ್ಲಿದೆ. ತೆಂಗಿನ ಕಾಯಿಯ ಕೊಬ್ಬರಿಯಿಂದ ತಯಾರಿಸುವ ಖಾದ್ಯ ಎಣ್ಣೆಯಂತೂ  ಅಮೃತ ಸಮಾನವಾದದ್ದು. ಇನ್ನು ಪಾನೀಯಗಳಲ್ಲಿ  ಎಳನೀರು ಸರ್ವಶ್ರೇಷ್ಟ. ಇಷ್ಟೊಂದು ಬಳಕೆ ಇರುವ ತೆಂಗಿನ ಕಾಯಿಗೆ ಯಾಕೆ ಬೆಲೆ ಕುಸಿಯುತ್ತದೆ ಎಂಬುದು ಅತೀ ಗೊಡ್ಡ ರಹಸ್ಯ.

ತೆಂಗಿನ ಕಾಯಿ ಬೆಲೆ ಹಿಂದೆ –ಈಗ.

 • ಸುಮಾರು 40 ವರ್ಷಗಳ ಹಿಂದೆ ಒಂದು ತೆಂಗಿನ ಕಾಯಿಗೆ  ಸುಮಾರು 1 ರೂ,ನಷ್ಟು ಬೆಲೆ ಇತ್ತು.
 • ಇಷ್ಟು ಬೆಲೆಗೆ  ಕೆಲವು ಹೋಟೇಲಿನಲ್ಲಿ ಚಹಾ ತಿಂಡಿ ಸಹ ಸಿಗುತ್ತಿತ್ತು. 
 • ಈಗ ತೆಂಗಿನ ಕಾಯಿಗೆ 10-12 ರೂ. ಈ ಬೆಲೆಗೆ ಈಗ ಒಂದು ಕಪ್ ಚಹ ಸಹ ಸಿಗದ ಸ್ಥಿತಿ.
 • ಹಾಗಾದರೆ ಹಿಂದೆ ಇದ್ದ ಬೆಲೆಯೂ ಈಗ ಇಲ್ಲ.ಈಗಿನ ಬೆಳೆ ಖರ್ಚು ವೆಚ್ಚ ಇವೆಲ್ಲಾ ನೋಡಿದಾಗ ತೆಂಗಿನ ಕಾಯಿಯ ಬೆಲೆಯಂತೂ ಏನೇನೂ ಅಲ್ಲ.
 • ತೆಂಗಿನ ಕಾಯಿಯ ಆರೋಗ್ಯ ಗುಣ ಮತ್ತು ಅದರ ಉಪಯೋಗ ಲೆಕ್ಕಾಚಾರ ಹಾಕಿದರೆ  ಕಾಯಿಯೊಂದಕ್ಕೆ ರೂ. 20-25 ಏನೇನೂ ಅಲ್ಲ.
 • ಆದರೆ ಅದರ ಅರ್ಧ ಬೆಲೆಯೂ ಇಲ್ಲದಾಯಿತಲ್ಲ. ನಾವು ಅಂಗಡಿಯಿಂದ ತರುವ ಒಂದು ಸೇಬು ಹಣ್ಣಿಗೂ 25 ರೂ. ಬೆಲೆ ಇದೆ.
 • ಮಾವಿನ ಹಣ್ಣಿಗೂ 30-40 ರೂ. ತನಕ ಬೆಲೆ ಇದೆ. ಅದನ್ನು ನಾವು ಬೇಸರ ಇಲ್ಲದೆ ಖರೀದಿಸುತ್ತೇವೆ.
 • ಆದರೆ ಗ್ರಾಹಕರು ತೆಂಗಿನ ಕಾಯಿಯ ಬೆಲೆ ಸ್ವಲ್ಪ ಏರಿದರೆ ಸಾಕು ಬೊಬ್ಬಿಡುತ್ತಾರೆ.
 • ಅದೇ ಕಾರಣಕ್ಕೆ ಪ್ರಸ್ತಾವನೆಯಲ್ಲಿ ಹೇಳಿದ್ದು, ಸರಕಾರ ಮತ್ತು ಗ್ರಾಹಕರು ತೆಂಗಿನ ಬೆಳೆ ಉಳಿಸುವ ಸಲುವಾಗಿಯಾದರೂ ತೆಂಗಿಗೆ ಬೆಲೆ ಕೊಡಬೇಕಾಗಿದೆ.

ಯಾವ ಕಾರಣಕ್ಕೆ ತೆಂಗಿಗೆ ಬೆಲೆ ಕುಸಿಯುತ್ತದೆ?

ಎಳನೀರು ತೆಗೆದ ಮರದಲ್ಲಿ ವರ್ಷ ಪೂರ್ತಿ ಏಕ ಪ್ರಕಾರ ಇಳುವರಿ
ಎಳನೀರು ತೆಗೆದ ಮರದಲ್ಲಿ ವರ್ಷ ಪೂರ್ತಿ ಏಕ ಪ್ರಕಾರ ಇಳುವರಿ
 • ತೆಂಗಿನ ಕಾಯಿ ತಾಜಾ ಬಳಕೆಗೆ (ಬೇಗ ಹಾಳಾಗುವ) ಮಾತ್ರ ಬರುವಂತಹ ವಸ್ತು.
 • ಸಮರ್ಪಕವಾಗಿ ಬಲಿತ ತೆಂಗಿನ ಕಾಯಿ ಮಾತ್ರ ಗುಣಮಟ್ಟವನ್ನು ಹೊಂದಿರುತ್ತದೆ.
 • ತೆಂಗಿನ ಕಾಯಿಯನ್ನು ಹೆಚ್ಚು ಸಮಯದ ತನಕ ಉಳಿಸಬೇಕಾದರೆ ಅದನ್ನು ಸಿಪ್ಪೆ ಇರುವ ಸ್ಥಿತಿಯಲ್ಲೇ ಸಿಪ್ಪೆ ಒಣಗುವಂತೆ ದಾಸ್ತಾನು ಇಡಬೇಕು. 
 • ಸಿಪ್ಪೆಗೆ ತೇವಾಂಶ ದೊರೆತಾಗ ಅದು ಮೊಳಕೆ ಒಡೆದು ಹಾಳಾಗುತ್ತದೆ.
 • ಒಣ ವಾತಾವರಣದಲ್ಲಿ ಸಂಗ್ರಹಿಸಿ ಇಟ್ಟರೆ ಅದರ ತಿರುಳು (ಕೊಬ್ಬರಿ) ಒಣಗಿ ಹಾಳಾಗದೆ ಉಳಿಯುತ್ತದೆ.ಅದೂ ಸಹ ಹೆಚ್ಚೆಂದರೆ 1  ವರ್ಷ ತನಕ ಮಾತ್ರ.
 • ಹಸಿ ಕಾಯಿಯನ್ನು ಒಡೆದು ಬಿಸಿಲು ಇಲ್ಲವೇ ಡ್ರೈಯರ್ ನಲ್ಲಿ ಒಣಗಿಸಿ ಅದರ ಎಣ್ಣೆ ತೆಗೆದರೆ ಅದನ್ನು 6 ತಿಂಗಳ ತನಕ ದಾಸ್ತಾನು ಇಡಬಹುದು.
 • ಎಳನೀರು ಒಂದೆರಡು ದಿನಗದಲ್ಲಿ ಬಳಕೆ ಮಾಡಿ ಮುಗಿಸಬೇಕಾದ ವಸ್ತು.
 • ಒಟ್ಟಿನಲ್ಲಿ ಸಂಸ್ಕರಣೆ ಮಾಡದಿದ್ದರೆ ತೆಂಗಿನ ಕಾಯಿಗೆ ಬಾಳ್ವಿಕೆ ಕಡಿಮೆ.
 • ನಮ್ಮ ಕೆಲವು ಬೆಳೆಗಾರರು ಬಲಿಯದ ತೆಂಗಿನ ಕಾಯಿಯನ್ನು ಕಿತ್ತು ಸ್ವಲ್ಪ ಒಣಗಿಸಿ ಮಾರಾಟ ಮಾಡುತ್ತಾರೆ.
 • ಇದು ತಿನ್ನಲು ಯೋಗ್ಯ ಕಾಯಿಯಾಗಿರುವುದಿಲ್ಲ. ತೆಂಗಿನ ಕಾಯಿಯ ಕೊಬ್ಬರಿಯನ್ನು ಸಮರ್ಪಕವಾಗಿ ಒಣಗಿಸದೆ ಇದ್ದರೆ ಅದು ಬೂಸ್ಟ್ ಬಂದು ಹಾಳಾಗುತ್ತದೆ.
 • ಸರಿಯಾಗಿ ಒಣಗಿಸದೆ ಇರುವ ಕೊಬ್ಬರಿಯಿಂದ ತಯಾರಾದ  ಎಣ್ಣೆ ಜಿಡ್ದು ಬರುತ್ತದೆ.
 • ತೆಂಗಿನ ಕಾಯಿಯ ಮೌಲ್ಯವರ್ಧಿತ ಉತ್ಪನ್ನಗಳಾದ ಡೆಸಿಕೇಟೆಡ್ ಕೋಕೋನಟ್ ಸಹ  ಉತ್ತಮ ಗುಣಮಟ್ಟದ ತೆಂಗಿನ ಕಾಯಿ ಆಗಿದ್ದರೆ ಮಾತ್ರ  ಚೆನ್ನಾಗಿರುತ್ತದೆ.
 • ಇಲ್ಲವಾದರೆ ಹಾಳಾಗುತ್ತದೆ.
 • ಮಾರುಕಟ್ಟೆಯ ಒಳಹೊಕ್ಕು ನೋಡಿದರೆ  ಈ ಮೇಲಿನ ಎಲ್ಲಾ ಬಳಕೆಗಳಲ್ಲೂ  ಕೆಲವು ನ್ಯೂನತೆಗಳು  ಗೋಚರಿಸುತ್ತದೆ.
 • ಬೆಳೆಗಾರರು ತೂಕದ ಆಸೆಗಾಗಿ ಎಳೆ ಕಾಯಿ ತೆಗೆಯುವುದೂ ಇದೆ.
 • ಈ ಕಾಯಿಯಿಂದ ತಯಾರಾದ ಡೆಸಿಕೇಟೆಡ್ ಕೋಕೋನಟ್ ನ ಗುಣಮಟ್ಟ ಚೆನ್ನಾಗಿರುವುದಿಲ್ಲ.
 • ಎಣ್ಣೆಗೆ ಕಲಬೆರಕೆ ಮಾಡಿ ಅದರ  ಗ್ರಾಹಕರನ್ನೂ ಕಳೆದುಕೊಳ್ಳುತ್ತಿದ್ದೇವೆ.
 • ಇದೂ ಹೊರ ನೋಟಕ್ಕೆ ತೆಂಗಿನ ಕಾಯಿಯ ಬೆಲೆ ಕುಸಿತಕ್ಕೆ ಕಂಡುಬರುವ ಕಾರಣಗಳು.  
ಹೆಚ್ಚಿನ ಬೇಡಿಕೆಯ ಎಳನೀರಿನ ಕುಬ್ಜ ತಳಿ ಗೆಂದಾಳಿ (COD)
ಹೆಚ್ಚಿನ ಬೇಡಿಕೆಯ ಎಳನೀರಿನ ಕುಬ್ಜ ತಳಿ ಗೆಂದಾಳಿ (COD)

ಗ್ರಾಹಕರಿಗೆ ಗೊಂದಲಗಳು:

 • ತೆಂಗಿನ ಕಾಯಿಯ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಭಾರೀ ಔಷಧೀಯ ಗುಣವನ್ನು ಹೊಂದಿದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ.
 • ಆದರೆ ಬಳಕೆ ಮಾಡಲು ಜನ ಹಿಂಜರಿಯುತ್ತಾರೆ.
 • ಕೊಬ್ಬರಿಯಿಂದ ಮಾಡಿದ ಎಣ್ಣೆ ಉತ್ತಮ, ಆದರೆ ಕೊಬ್ಬರಿ ಎಣ್ಣೆ  ಎಂಬ ಹೆಸರಿನಲ್ಲಿ ಕೆಲವು ತಯಾರಕರು  ಮಿಶ್ರಣ ಮಾಡುವ ಧಂಧೆಯ ಬಗ್ಗೆ ಜನ ಭಯಭೀತರಾಗಿದ್ದಾರೆ.
 • ಯಾವ ಎಣ್ಣೆಗೆ ಕಲಬೆರಕೆ ಇಲ್ಲ, ಇದೆ ಎಂಬುದು ತಿಳಿಯದಾಗಿ ಆ ಎಣ್ಣೆಯ ಸಹವಾಸವೇ ಬೇಡ ಎಂದು ಅಬ್ಬರದ ಪ್ರಚಾರ ಉಳ್ಳ ರೀಫೈನ್ಡ್ ಆಯಿಲ್ ನತ್ತ  ಬದಲಾಗುತ್ತಿದ್ದಾರೆ.
 • ಕೆಲವು ಎಣ್ಣೆ ತಯಾರಕು ಹೆಚ್ಚು ಎಣ್ಣೆ ಇಳುವರಿಗೋಸ್ಕರ ಸಮರ್ಪಕವಾಗಿ ಒಣಗಿಸದೆ ಎಣ್ಣೆ ತೆಗೆಯುವ ಕಾರಣ ಖರೀದಿ ಮಾಡಿದಎಣ್ಣೆ ಜಿಡ್ಡು ಬಂದ ಸ್ಥಿತಿಯಲ್ಲಿ ಇರುತ್ತದೆ.
 • ಇಂಥಃ ಎಣ್ಣೆಯನ್ನು ಕೊಂಡವರು ಮತ್ತೆ ಎಣ್ಣೆ ಖರೀದಿಗೆ ಮುಂದಾಗದ ಸ್ಥಿತಿ ಬರುತ್ತದೆ.
 • ಗ್ರಾಹಕರಿಗೆ ಶುದ್ಧ ಎಣ್ಣೆ ಯಾವುದು , ಕಲಬೆರಕೆ ಎಣ್ಣೆ ಯಾವುದು ಎಂಬುದೂ ತಿಳಿಯದ ಸ್ಥಿತಿಯೂ ಆಗಿದೆ.
 • ಕೆಲವು ಪ್ರವಾಸಿ ಕೇಂದ್ರಗಳಲ್ಲಿ ಬಾಟಲಿ, ಕ್ಯಾನುಗಳಲ್ಲಿ ತುಂಬಿ ಕೊಡುವ ಎಣ್ಣೆಯ ರುಚಿ ನೋಡಿ, ಎದುರೆದುರೇ ಎಣ್ಣೆ ತೆಗೆದು ಕೊಟ್ಟರೂ ನಂಬದ ಸ್ಥಿತಿ ಗ್ರಾಹಕವರ್ಗದಲ್ಲಿ  ಉಂಟಾಗಿದೆ ಎಂದರೆ ತಪ್ಪಾಗಲಾರದು.
 • ಹಳ್ಳಿ ಹಳ್ಳಿಗಳಲ್ಲಿ ಸ್ಥಳೀಯ ಎಣ್ಣೆ ಗಿರಣಿಗಳು ತೆರೆಯುವಂತಾಗಬೇಕು.
 • ಗ್ರಾಹಕರು ಗೊತ್ತಿಲ್ಲದ ಬ್ರಾಂಡ್ ನ ಎಣ್ಣೆ ಖರೀದಿ ಮಾಡುವ ಬದಲಿಗೆ ತಮ್ಮ ಕಣ್ಣೆದುರೇ ಎಣ್ಣೆ ತೆಗೆದು ಕೊಡುವ ಗಿರಣಿಗಳಿದ್ದಲ್ಲಿ ಸ್ಥಳೀಯರಿಗೆ ತುಂಬಾ ಅನುಕೂಲ.
 • ಇದು ತೆಂಗಿನೆಣ್ಣೆ ಬಳಕೆ ಹೆಚ್ಚಿಸುತ್ತದೆ.
 • ತೆಂಗಿನ ಎಣ್ಣೆಯಲ್ಲಿ ವೈವಿಧ್ಯತೆಗಳು ಬಂದು ಮತ್ತೂ ಗ್ರಾಹಕರು ಗೊಂದಲಕ್ಕೀಡಾಗಿದ್ದಾರೆ.
 • ಈಗಿನ ಸಾಮಾಜಿಕ ಮಾಧ್ಯಮಗಳು ಇಂತಹ ಗೊಂದಲಗಳನ್ನು ಹುಟ್ಟು ಹಾಕಿವೆ ಎಂದರೂ ತಪ್ಪಾಗಲಾರದು.
 • ಯಂತ್ರದಲ್ಲಿ ತೆಗೆದ ಎಣ್ಣೆ ಉತ್ತಮವಲ್ಲ. ಗಾಣದಿಂದ ತೆಗೆದದ್ದೇ ಶ್ರೇಷ್ಟ  ಎನ್ನುವವರು.
 • ಒಣ ಕೊಬ್ಬರಿಯಿಂದ ತೆಗೆದ ಎಣ್ಣೆಗಿಂತ ಹಸಿ ಕೊಬ್ಬರಿಯಿಂದ ತೆಗೆದ ಎಣ್ಣೆ (ವರ್ಜಿನ್ ಕೊಕೋನಟ್ ಆಯಿಲ್) ಶ್ರೇಷ್ಟ ಎಂಬ ಪ್ರಚಾರ ಸಹ ತೆಂಗಿನೆಣ್ಣೆಯ ಬೇಡಿಕೆಯನ್ನು ಕಡಿಮೆ ಮಾಡುವಂತೆ ಮಾಡಿದೆ ಎನ್ನಬಹುದು.

ಎಳನೀರಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು:

ಎಳನೀರನ್ನು ಈ ರೀತಿ ಮಾರಟ ಮಾಡುವ ಕಾರಣ ಈಗ ಇಷ್ಟಾದರೂ ಬೆಲೆ ಉಳಿದಿದೆ
ಎಳನೀರನ್ನು ಈ ರೀತಿ ಮಾರಟ ಮಾಡುವ ಕಾರಣ ಈಗ ಇಷ್ಟಾದರೂ ಬೆಲೆ ಉಳಿದಿದೆ
 • ತೆಂಗು ಎಷ್ಟಾದರೂ ಬೆಳೆಸಿ. ಆದರೆ ಅರ್ಧಕ್ಕೂ ಹೆಚ್ಚು ಎಳನೀರಿಗೆ ಮಾರಾಟ ಮಾಡುವುದು ಅತ್ಯಗತ್ಯ.
 • ಎಳನೀರಿಗೆ ಸರಾಸರಿ 20 ರೂ. ತನಕ ಬೆಲೆ ಸಿಗುತ್ತದೆ. ತೆಂಗಿನ ಕಾಯಿಯ ಬೆಲೆ ಯಾವಾಗಲೂ ಅಸ್ಥಿರವೇ.
 • ಅದು ಬೇಡಿಕೆಯನ್ನು  ಅವಲಂಭಿಸಿದೆ. ಎಳನೀರಿಗೆ ಭಾರೀ ಬೇಡಿಕೆ ಇದೆ.
 • ಇನ್ನೂ ಉತ್ಪಾದನೆ ದುಪ್ಪಟ್ಟಾದರೂ ಬೆಲೆ ಕುಸಿಯದು. ಎಳನೀರು ಕೀಳುವುದರಿಂದ ತೆಂಗಿನಲ್ಲಿ ಇಳುವರಿ ಹೆಚ್ಚಳವಾಗುತ್ತದೆ.
 • ತೆಂಗಿನ ಕಾಯಿಯಲ್ಲಿ ತಿರುಳು ಅಂಶ ಕೂಡಲು ಹೆಚ್ಚು ಪೋಷಕಾಂಶಗಳು ಹೆಚ್ಚು ವ್ಯಯವಾಗುತ್ತದೆ.
 • ಎಳನೀರಿನ ಹಂತದಲ್ಲಿ ಕಡಿಮೆ. ಅಷ್ಟು ಪೊಷಕಾಂಶಗಳು ಉಳಿತಾಯವಾಗುವ ಕಾರಣ ಎಳನೀರು ತೆಗೆಯುವುದರಿಂದ ಇಳುವರಿ ಹೆಚ್ಚಳವಾಗುತ್ತದೆ.
 • ಮಧ್ಯಮ ಎತ್ತರದ ಹೈಬ್ರೀಡ್ ತಳಿಗಳನ್ನು(DXT)ಎಳನೀರಿಗಾಗಿಯೇ ಬೆಳೆಸುವುದು,
 • ಹಾಲೀ ಇರುವ ಎತ್ತರದ ತಳಿಗಳನ್ನು ಕಾಯಿಗಾಗಿಯೇ ಉಪಯೋಗಿಸುವುದು ಮಾಡುವುದರಿಂದ ತೆಂಗು ಬೆಳೆಗಾರರು ಬಚಾವಾಗಲು ಸಾಧ್ಯ

ತೆಂಗಿನ ಎಣ್ಣೆ ಸಾರ್ವತ್ರಿಕ ಖಾದ್ಯ ಎಣ್ಣೆಯಾಗಬೇಕು:

 • ಕರ್ನಾಟಕ, ತಮಿಳುನಾಡು, ಕೇರಳ , ಆಂದ್ರ ಪ್ರದೇಶ ರಾಜ್ಯಗಳಲ್ಲಿ ತೆಂಗು ಪ್ರಾಮುಖ್ಯ ತೋಟಗಾರಿಕಾ ಬೆಳೆಯಾಗಿದೆ.
 • ಇಲ್ಲಿನ ಜನತೆ ತೆಂಗಿನೆಣ್ಣಯ ಬಳಕೆಯನ್ನು ಹೆಚ್ಚು ಮಾಡಿದರೆ ತೆಂಗಿನ ಕಾಯಿಗೆ ಬೆಲೆ ಹೆಚ್ಚಳವಾಗುತ್ತದೆ.
 • ತೆಂಗಿನೆಣ್ಣೆ ಆರೋಗ್ಯ ದೃಷ್ಟಿಯಿಂದ ಅತ್ಯುತ್ತಮ ಎಣ್ಣೆಯಾಗಿದ್ದು,  ಇದನ್ನು ಎಲ್ಲಾ ವಯಸ್ಸಿನವರೂ ಯಾವುದೇ ಅಂಜಿಕೆ ಇಲ್ಲದೆ ಬಳಕೆ ಮಾಡಬಹುದು.
 • ವಿಪರ್ಯಾಸ ಎಂದರೆ ತೆಂಗಿನ ಕಾಯಿ ಬೆಳೆಯುವ ನಾಡಿನಲ್ಲೂ ತೆಂಗಿನೆಣ್ಣೆ ಬಳಸದ ಜನ ಬಹಳಷ್ಟು ಇದ್ದಾರೆ.
 • ಹಿಂದುಗಳ ದೇವಾಲಯಗಳಲ್ಲಿ ದೀಪ, ಆರತಿ ಉದ್ದೇಶಕ್ಕೆ ಸಾರ್ವತ್ರಿಕವಾಗಿ ತೆಂಗಿನೆಣ್ಣೆ ಬಳಕೆಯಾದರೂ ಈಗಿನ ದರ 25-30% ಏರಿಕೆಯಾಗಲು ಸಾಧ್ಯ.
 • ಈ ನಿಟ್ಟಿನಲ್ಲಿ ಬೆಳೆಗಾರರು, ಗ್ರಾಹಕರು  ಚಿಂತನೆ ನಡೆಸಬೇಕಾಗಿದೆ.

ಕೊಬ್ಬರಿ ಬೆಲೆ ಏರಿಕೆಯಾಗುವುದು ವ್ಯವಹಾರದಲ್ಲಿ ಸಟ್ಟಾ  ಪ್ಯಾಪಾರ ಪ್ರಾರಂಭವಾದಾಗ ಮಾತ್ರ. ಅವರು ಕೈಬಿಟ್ಟಾಗ ದರ ಇಳಿಕೆಯಾಗುತ್ತದೆ. ಮತ್ತೆ ಯಾರಾದರೂ ಈ ಉತ್ಪನ್ನದ ವ್ಯವಹಾರಕ್ಕೆ ಕೈ ಹಾಕಿದರೆ  ಮಾತ್ರ ಏರಿಕೆಯಾಗುತ್ತದೆ. ಏರಿಕೆ ಆಗುವುದು ಒಳ್ಳೆಯದೇ. ಆದರೆ ಅದರ ತುದಿ ಬುಡ ಗೊತ್ತಾಗದ ಕಾರಣ  ರೈತರಿಗೆ ಇದು ಹೆಚ್ಚಿನ ಪ್ರಯೋಜನ ಕೊಡಲಾರದು. ಮಾಮೂಲಿನಂತೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಬೆಲೆ ಆಕರ್ಷಕವಾಗಿದ್ದರೆ ಮಾತ್ರ ರೈತರಿಗೆ ಅನುಕೂಲ.

Leave a Reply

Your email address will not be published. Required fields are marked *

error: Content is protected !!