100 ತೆಂಗಿನ ಮರಕ್ಕೆ 10000 ಕಾಯಿ ಹೇಗೆ ಪಡೆಯಲು ಬೇಕಾದ ಆರೈಕೆ.

by | Feb 24, 2022 | Horticulture Crops (ತೋಟದ ಬೆಳೆಗಳು), Coconut (ತೆಂಗು) | 3 comments

ತೆಂಗಿನ ಮರವೊಂದರ ಇಳುವರಿ ಸಾಮರ್ಥ್ಯದಷ್ಟನ್ನು ನಾವು ಪಡೆಯುತ್ತಿಲ್ಲ.  ಯಾರಿಗೆ 100 ತೆಂಗಿನ ಮರಕ್ಕೆ 10,000 ತೆಂಗಿನಕಾಯಿ ಆಗುತ್ತದೆಯೋ ಅವರಿಗೆ ತೆಂಗು ಕೃಷಿ ಲಾಭದಾಯಕ. 10000 ಕಾಯಿಗಿಂತ ಹೆಚ್ಚು ಪಡೆಯಲು ಹಾಕಬೇಕಾದ ಗೊಬ್ಬರ ಮತ್ತು ಮಾಡಬೇಕಾದ ಆರೈಕೆ  ಇವು.

ತೆಂಗು ಒಂದು ಏಕದಳ ಸಸ್ಯ. ಇದಕ್ಕೆ ತಾಯಿ ಬೇರು ಇಲ್ಲ. ಇರುವ ಎಲ್ಲಾ ಹಬ್ಬು ಬೇರುಗಳೂ ಆಹಾರ ಸಂಗ್ರಹಿಸಿ ಕೊಡುವ ಬೇರುಗಳಾಗಿದ್ದು, ನಿರಂತರವಾಗಿ ನಿರ್ದಿಷ್ಟ ಪ್ರಮಾಣದ ಪೋಷಕಗಳನ್ನು ಕೊಟ್ಟರೆ ಇದು ಗರಿಷ್ಟ ಇಳುವರಿಯನ್ನು ಕೊಡಬಲ್ಲುದು. ತೆಂಗಿನ ಉತ್ತಮ ಇಳುವರಿಗೆ  ಫಲವತ್ತಾದ ಮಣ್ಣು,  ಯತೇಛ್ಚ ನೀರು,  ಹೆಚ್ಚಿನ ಗೊಬ್ಬರ ಕೊಡಬೇಕು. 

100 ತೆಂಗಿನ ಮರ ಇದ್ದರೆ ಅದರಲ್ಲಿ ವಾರ್ಷಿಕ ಕನಿಷ್ಟ 10,000 ತೆಂಗಿನ ಕಾಯಿ ಆಗಬೇಕು. ಮನೆ ಹಿತ್ತಲಲ್ಲಿ ಎರಡು ಮರ ಇದ್ದರೆ ಆ ಕುಟುಂಬಕ್ಕೆ ವರ್ಷಕ್ಕೆ ಬೇಕಾಗುವಷ್ಟು ಕಾಯಿ ಲಭ್ಯವಾಗಬೇಕು. ಉತ್ತಮ ಇಳುವರಿ ಎಂದರೆ ಎಲ್ಲಾ ತಿಂಗಳಲ್ಲು ಕೊಯಿಲಿಗೆ ಕಾಯಿ ಸಿಗಬೇಕು.  ಇದು ತೆಂಗಿನ ಮರದ ಇಳುವರಿ ಸಾಮರ್ಥ್ಯ.

ಯಾಕೆ ಇಳುವರಿ ಬರುತ್ತಿಲ್ಲ:

  • ತೆಂಗಿನ ಮರವು ವರ್ಷದುದ್ದಕ್ಕೂ ಬೆಳೆವಣಿಗೆಯಲ್ಲಿ  ಇರುವಂತದ್ದು.
  • ಅದೇ ಕಾರಣಕ್ಕೆ ಇದು ವರ್ಷ ಪೂರ್ತಿ ಪೋಷಕಾಂಶಗಳನ್ನು ಬಯಸುತ್ತದೆ.
  • ಫಲ ಬಿಡುವ ಮರವು ಪ್ರತೀ ಹೂ ಹೊಂಚಲು, ಮತ್ತು ಕಾಯಿಗಳಿಗೆ ಮಣ್ಣಿನಲ್ಲಿರುವ ಪೋಷಕಗಳನ್ನೇ ಬಳಸುವ ಕಾರಣ ಸಹಜವಾಗಿ ಮರಕ್ಕೆ ಅದರ ಕೊರತೆ ಆಗುತ್ತದೆ.
  • ಎರಡು ದೊಡ್ಡ ಗೊನೆ (ಸರಾಸರಿ 15 ಕಾಯಿ) ಬಿಟ್ಟ ನಂತರ ಬರುವ ನಂತರದ ಗೊನೆಯಲ್ಲಿ ಸರಾಸರಿ 7-8 ಕಾಯಿ ಬಿಡುತ್ತದೆ. ಕಾರಣ ಅದಕ್ಕೆ ಪೋಷಕಾಂಶದ ಕೊರತೆ.
  • ನಾವು ತೆಂಗಿನ ಮರಕ್ಕೆ ಕೊಡುವ ಪೋಷಕಾಂಶಗಳು ಸಾಕಾಗುವುದಿಲ್ಲ ಮತ್ತು ಬಹುತೇಕ ಅಸಮತೋಲನದಲ್ಲಿರುತ್ತವೆ.
  • ಬಹಳಷ್ಟು ಜನ ಕಾಂಪ್ಲೆಕ್ಸ್ ಗೊಬ್ಬರಗಳನ್ನು ಕೊಡುತ್ತಾರೆ.
  • ಈ ಕಾಂಪ್ಲೆಕ್ಸ್ ಗೊಬ್ಬರದಲ್ಲಿ ಪೋಷಕಗಳ ಅಸಮತೋಲನ ಉಂಟಾಗುತ್ತದೆ.
  • ವರ್ಷದಲ್ಲಿ ಒಂದು ಬಾರಿ ಮಾತ್ರ ಪೋಷಕಗಳನ್ನು ಕೊಡುವುದು ಸೂಕ್ತವಲ್ಲ.
  • ತೆಂಗಿಗೆ ವರ್ಷಕ್ಕೆ ಕನಿಷ್ಟ ಮೂರು ಬಾರಿ ವಿಭಜಿತ ಕಂತುಗಳ ಮೂಲಕ ಗೊಬ್ಬರವನ್ನು ಕೊಡಬೇಕು.
  • ಪ್ರತೀ ಹೂ ಗೊಂಚಲಿಗೆ ಬೆಳವಣಿಗೆಗೆ  ಸಹಾಯಕವಾಗುವಂತೆ ಕೊಟ್ಟರೆ ಉತ್ತಮ.
  • ನಾವು ಕೊಡುವ ಪೋಷಕಗಳು ಹೆಚ್ಚಿನ ನೀರಾವರಿಯಿಂದ ಬೇರು ವಲಯಕ್ಕಿಂತ ಕೆಳಕ್ಕೆ ಇಳಿದು ನಷ್ಟವಾಗುತ್ತವೆ.
ಉತ್ತಮ ಬೆಳವಣಿಗೆ ಲಕ್ಷಣದ ತೆಂಗು

ಉತ್ತಮ ಬೆಳವಣಿಗೆ ಲಕ್ಷಣದ ತೆಂಗು

ಬೇರಿಗೆ ಗಾಯಗಳಾಗದಂತೆ ನೋಡಿಕೊಳ್ಳಬೇಕು. ಉಳುಮೆ ಮಾಡಬೇಕಾಗಿಲ್ಲ. ಬೇರು ವಿಶಾಲ ಜಾಗಕ್ಕೆ ಹಬ್ಬುವಂತಿದ್ದರೆ, ಹೆಚ್ಚು ಇಳುವರಿ ಬರುತ್ತದೆ. ಅಗೆದು ಹಾಕಿದ ಮಣ್ಣಿನಲ್ಲಿ ತೆಂಗಿನ ಇಳುವರಿ ಹೆಚ್ಚು ಇದೇ ಕಾರಣಕ್ಕೆ.

ತೆಂಗಿನ ಮರಕ್ಕೆ ಇಂತಿಷ್ಟೇ ಸಾರಜನಕ , ರಂಜಕ ಮತ್ತು ಪೊಟ್ಯಾಶ್ ಗೊಬ್ಬರ ಕೊಡಬೇಕು ಎಂಬ ಶಿಫಾರಸು ಇದೆ. ಆ ಪ್ರಕಾರ ಗೊಬ್ಬರ ಕೊಡಬೇಕು. ಸಾರಜನಕವು ಹೆಚ್ಚಾದರೆ ಮರ ಸೊಕ್ಕಿ ಬೆಳೆಯುತ್ತದೆ. ಕಾಯಿ ಉದುರುತ್ತದೆ. ರಂಜಕ ಹೆಚ್ಚಾದರೆ ಹೂ ಗೊಂಚಲು ಬರುತ್ತದೆ. ಆದರೆ ಮಿಡಿ ಕಡಿಮೆ ಇರುತ್ತದೆ. ಪೊಟ್ಯಾಷ್ ಕಡಿಮೆಯಾದರೆ ಕಾಯಿ ಉದುರುತ್ತದೆ. ಕಾಯಿಯ  ತಿರುಳು ತೆಳುವಾಗುತ್ತದೆ.ಮೂರು ಸಮತೊಲನದಲ್ಲಿದ್ದರೆ ಗುಣಮಟ್ಟದ ಫಸಲು.

ಯಾವ ಗೊಬ್ಬರಗಳು ಅಗತ್ಯ:

  • ತೆಂಗು ಬೆಳೆಗೆ ಮುಖ್ಯ ಪೊಷಕಾಂಶಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಅಲ್ಲದೆ, ದ್ವಿತೀಯ ಪೊಷಕಾಂಶಗಳಾದ ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಗಂಧಕ ಹಾಗೂ ಲಘು ಪೋಷಕಾಂಶಗಳಾದ ಸತು, ಬೋರಾನ್, ಕ್ಲೋರಿನ್ ಅಗತ್ಯವಾಗಿ ಬೇಕು.
  • ವಾರ್ಷಿಕ ಸರಾಸರಿ 40 ಕಾಯಿ ಕೊಡುವ ಮರವು 320 ಗ್ರಾಂ ಸಾರಜನಕ 159 ರಂಜಕ ಮತ್ತು 489 ಪೊಟ್ಯಾಶ್ ಪೋಷಕವನ್ನು ಬಳಸಿ ಮಣ್ಣಿನಿಂದ ಖಾಲಿ ಮಾಡುತ್ತದೆ.
  • ಹೆಚ್ಚು ಕಾಯಿ ಬಿಟ್ಟಂತೆ ಇದರ ಪ್ರಮಾಣ ಹೆಚ್ಚು ಇರುತ್ತದೆ. ಮರದ ಕಾಂಡದ ದಪ್ಪ,ಉದ್ದ ಮತ್ತು ಎಲೆಗಳ ಸಂಖ್ಯೆ, ಬೇರಿನ ವೈಶಾಲ್ಯಕ್ಕೆ ಅನುಗುಣವಾಗಿ  ಪೋಷಕಗಳ ಬಳಕೆ ಹೆಚ್ಚಾಗುತ್ತದೆ.
  • ಹೆಚ್ಚು ಸಾರಜನಕ ಕೊಡುವುದು, ರಂಜಕ , ಪೊಟ್ಯಾಶ್ ಕಡಿಮೆ ಮಾಡಿದರೆ ಕಾಯಿಗಳು ಕಡಿಮೆಯಾಗುತ್ತದೆ.
  • ಶಿಲೀಂದ್ರ ರೋಗಗಳು ಹೆಚ್ಚಾಗುತ್ತವೆ.
  • ತೆಂಗಿಗೆ ಸಾರಜನಕ ಮತ್ತು ಪೊಟ್ಯಾಶಿಯಂ ಪೋಷಕವು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ.
  • ರಂಜಕವು ಇಳುವರಿ ಹೆಚ್ಚಳಕ್ಕೆ ಉಳಿದೆರಡಕ್ಕಿಂತ ಕಡಿಮೆ ಸಾಕಾಗುತ್ತದೆ.
    ಒಂದು ತೆಂಗಿನ ಮರಕ್ಕೆ ವಾರ್ಷಿಕ 500 ಗ್ರಾಂ ಸಾರಜನಕ, 320 ಗ್ರಾಂ ರಂಜಕ ಮತ್ತು 1200 ಗ್ರಾಂ ಪೊಟ್ಯಾಶ್ ಪೋಷಕ ಬೇಕು.
  • ಇದು ಸರಾಸರಿ 60 ಕಾಯಿ ಪಡೆಯಲು ಬೇಕಾಗುವ ಪೋಷಕವಾಗಿದ್ದು, ಹೆಚ್ಚಿನ ಇಳುವರಿಗೆ ಇನ್ನೂ ಹೆಚ್ಚು ಕೊಡಬೇಕಾಗುತ್ತದೆ.
  • ಯೂರಿಯಾ ರೂಪದಲ್ಲಿ ಸಾರಜನಕ ಕೊಡಲು 1200 ಗ್ರಾಂ ಮತ್ತು ಸೂಪರ್ ಫೋಸ್ಫೇಟ್/ ರಾಕ್ ಫೋಸ್ಫೇಟ್ ರೂಪದಲ್ಲಿ ರಂಜಕ ಕೊಡಲು 2 ಕಿಲೋ ಮತ್ತು ಮ್ಯುರೇಟ್ ಆಫ್ ಪೊಟ್ಯಾಶ್ ರೂಪದಲ್ಲಿ ಪೊಟ್ಯಾಶಿಯಮ್ ಕೊಡಲು 2 ಕಿಲೋ ಕೊಡಬೇಕು.
  • DAP ಗೊಬ್ಬರ ಆದರೆ 650 ಗ್ರಾಂ ಹಾಗೂ ಯೂರಿಯಾ 900 ಗ್ರಾಂ ಹಾಗೂ ಮ್ಯೂರೇಟ್ ಆಫ್ ಪೊಟ್ಯಾಶ್ 2 ಕಿಲೋ ಕೊಡಬೇಕು.
  • ಕಾಂಪ್ಲೆಕ್ಸ್ ಗೊಬ್ಬರ ಕೊಡುವಾಗ ಮೇಲಿನ ಶಿಫಾರಸಿಗೆ ಸರಿ ಹೊಂದುವ ಪ್ರಮಾಣದಲ್ಲಿ NPK ಇದ್ದರೆ ಮಾತ್ರ ಕೊಡಿ. ಇಲ್ಲವಾದರೆ ಆಸಮತೋಲನ ಉಂಟಾಗುತ್ತದೆ.
ಪ್ರತಿ ತಿಂಗಳು ಕೊಯಿಲಿಗೆ ಸಿಗುವ ಮರದ ಲಕ್ಷಣ

ಪ್ರತಿ ತಿಂಗಳು ಕೊಯಿಲಿಗೆ ಸಿಗುವ ಮರದ ಲಕ್ಷಣ

ಪೋಷಕಾಂಶಗಳ ಪಾತ್ರ:

  • ಸಾರಜನಕವು (N) ತೆಂಗಿನ ಎಲೆಗಳಿಗೆ ಮತ್ತು ಬೆಳೆವಣಿಗೆಗಳಾದ ಹೂ ಗೊಂಚಲಿನ ಮಿಡಿಗೆ, ಕಾಯಿಯ ಗಾತ್ರಗಳಿಗೆ ಅಗತ್ಯ.
  • ಸಾರಜನಕ ಹೆಚ್ಚಾದರೆ ಕಾಯಿ ಉದುರುತ್ತದೆ.
  • ಪೊಟ್ಯಾಶ್ ಕಾಯಿಯ ಗುಣಮಟ್ಟ,ಕಾಯಿ ಕಚ್ಚಲು ಮತ್ತು ಸಾರಜನಕದ ಸಮರ್ಪಕ ಬಳಕೆಗೆ ಸಹಕಾರಿ.
  • ಪೊಟ್ಯಾಶ್ ಹೆಚ್ಚಾದರೆ ಸಾರಜನಕದ ಬಳಕೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಮೆಗ್ನೀಶಿಯಂ ಮತ್ತು ಮ್ಯಾಂಗನೀಸ್ ಲಭ್ಯತೆಯನ್ನು ಕಡಿಮೆ ಮಾಡುತ್ತದೆ.
  • ಗಂಧಕದ ಅಭ್ಯತೆ ಮೇಲೂ ಪರಿಣಾಮ ಬೀರುತ್ತದೆ.
  • ರಂಜಕವು ಮರದ ಕಾಂಡದ ದಪ್ಪ, ಎಲೆಗಳ ಹೆಚ್ಚಳ, ಬೇರಿನ ಬೆಳೆವಣಿಗೆ, ಹೂ ಗೊಂಚಲು ಬೆಳವಣಿಗೆಗೆ ಅಗತ್ಯ.

ಸೂಕ್ಷ್ಮ ಪೋಷಕಾಂಶಗಳು:

ಈ ರೀತಿ ದೂರದಲ್ಲಿ ಗೊಬ್ಬರ ಹಾಕಿ,ಮುಚ್ಚಿಗೆ ಮಾಡಬೇಕು

ಈ ರೀತಿ ದೂರದಲ್ಲಿ ಗೊಬ್ಬರ ಹಾಕಿ,ಮುಚ್ಚಿಗೆ ಮಾಡಬೇಕು

  • ತೆಂಗಿನ ಮರಕ್ಕೆ ಕ್ಯಾಲ್ಸಿಯಂ ಪೋಷಕವು ಅದರ ಕೋಶ ಗೊಡೆ ( Cell wall) ಅಭಿವೃದ್ದಿಗೆ ಅಗತ್ಯ.
  • ಒಂದು ತೆಂಗಿನ ಮರಕ್ಕೆ ½ ಕಿಲೋ ಪ್ರಮಾಣದಲ್ಲಿ ಡೊಲೋಮೈಟ್ ಸುಣ್ಣವನ್ನು ಬೇರು ವಲಯ ಪಸರಿಸಿದ ಸುಮಾರು 4 ಮೀ.ಸುತ್ತಳತೆಗೆ ಹರಡುವಂತೆ ಕೊಡಬೇಕು.
  • ಇದು ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಸತ್ವವನ್ನು ಕೊಡುತ್ತದೆ. ಬೇರೆ ಕ್ಯಾಲ್ಸಿಯಂ ಸತ್ವವನ್ನೂ ಕೊಡಬಹುದು.
  • ಬೋರಾನ್ ಕಾಯಿಯ ಪರಾಗ ಕಣಗಳ ಅಭಿವೃದ್ದಿಗೆ ಸಹಾಯಕ ಪೋಷಕವಾಗಿದ್ದು, ವರ್ಷಕ್ಕೆ ಮರವೊಂದಕ್ಕೆ 10-15 ಗ್ರಾಂ ಪ್ರಮಾಣದಲ್ಲಿ ಇದನ್ನು ಕೊಡಬೇಕು.
  • ಮೆಗ್ನಿಶಿಯಂ ಎಲೆಗಳ ಪತ್ರ ಹರಿತ್ತು ಅಭಿವೃದ್ದಿಗೆ ಸಹಾಯಕ. ಎಲೆಗಳು ಹಸಿರಾಗಿದ್ದರೆ ಇಳುವರಿ ಹೆಚ್ಚು.
  • ಇದಲ್ಲದೆ ಗಂಧಕ ಕ್ಲೋರಿನ ಮತ್ತು ಸೋಡಿಯಂ ಪೋಷಕವೂ ಬೇಕು.

ಮರವೊಂದಕ್ಕೆ ಸತುವಿನ ಸಲ್ಫೇಟ್ ವರ್ಷಕ್ಕೆ 50 ಗ್ರಾಂ ಮತ್ತು ಮೆಗ್ನೀಶಿಯಂ ಸಲ್ಹೇಟ್ 150-200 ಗ್ರಾಂ ಪ್ರಮಾಣದಲ್ಲಿ ಕೊಟ್ಟಾಗ ಪ್ರತ್ಯೇಕ ಗಂಧಕ ಕೊಡಬೇಕಾಗಿಲ್ಲ. ಮರಕ್ಕೆ ಸುಮಾರು ½ ಕಿಲೋ ಪ್ರಮಾಣದಲ್ಲಿ ಉಪ್ಪನ್ನು ಕೊಡುವುದರಿಂದ ಸೋಡಿಯಂ ಪೋಷಕಾಂಶ ಲಭಿಸುತ್ತದೆ.

ಸಾವಯವ ಗೊಬ್ಬರಗಳು:

ಹನಿ ನೀರಾವರಿಯಲ್ಲಿ ನಾಲ್ಕು ಬದಿಗೆ ನೀರು ಬೀಳಬೇಕು

ಹನಿ ನೀರಾವರಿಯಲ್ಲಿ ನಾಲ್ಕು ಬದಿಗೆ ನೀರು ಬೀಳಬೇಕು

  • ಪರ್ತೀ ಮರಕ್ಕೆ ವರ್ಷಕ್ಕೆ ಕನಿಷ್ಟ 50 ಕಿಲೋ ಹಸುರೆಲೆ ಸೊಪ್ಪು, ಮತ್ತು 10 ಕಿಲೋ ಒಣ ತೂಕದ ಸಾವಯವ ಪ್ರಾಣಿಜನ್ಯ ಗೊಬ್ಬರ ಅಥವಾ ಎರೆಗೊಬ್ಬರವನ್ನು ಕೊಡಬೇಕು.
  • ಆ ಮರದ ತ್ಯಾಜ್ಯಗಳನ್ನು ಅದಕ್ಕೆ ಬಳಕೆ ಮಾಡಬೇಕು.
  • ತೆಂಗಿನ ಮರಕ್ಕೆ ನೀರು ಹೆಚ್ಚು ಕೊಟ್ಟರೆ ತೊಂದರೆ ಇಲ್ಲ.
  • ಇದು ನೀರು ಹೆಚ್ಚು ಬಯಸುವ ಸಸ್ಯ.
  • ಇದರ ಮೂಲವೇ ನೀರಾಶ್ರಯದ ಹಳ್ಳ ಹೊಳೆ, ಸಮುದ್ರ ದಂಡೆ.
  • ತೆಂಗಿಗೆ ಬುಡ ಭಾಗ ಸುಮಾರು 2 ಮೀಟರ್ ತನಕ ಒದ್ದೆಯಾಗುವಂತೆ ನೀರಾವರಿ ಮಾಡಬೇಕು.
  • ನೀರು ನಿಲ್ಲಿಸುವ ಕಡೆ ಉತ್ತಮ ಇಳುವರಿ ಬರುತ್ತದೆ.
  • ಬುಡ  ಭಾಗ ಸುಮಾರು 2-3 ಮೀ.ತನಕ ಮುಚ್ಚಿಗೆ ಮಾಡುವುದರಿಂದ ಆವೀಕರಣ ಕಡಿಮೆಯಾಗುತ್ತದೆ.
  • ಮೈಕ್ರೊಸ್ಪ್ರಿಂಕ್ಲರ್ ಹಾಕಿದರೆ ಸಾವಯವ ವಸ್ತು ನಿರಂತರ ಕೊಳೆಯುತ್ತಾ  ಪೋಷಕ ನಿರಂತರ ಸಿಗುತ್ತಾ ಇರುತ್ತದೆ.
  • ಸಾವಯವ ಗೊಬ್ಬರವನ್ನೆ ಕೊಡುವವರು ಕನಿಷ್ಟ 10 ಬುಟ್ಥಿ ಕೊಟ್ಟಿಗೆ ಗೊಬ್ಬರ ಕೊಟ್ಟು 2 ಬುಟ್ಟಿ ಬೂದಿ ಕೊಡಬೇಕು.
  • ಬುಡ ಭಾಗ ಸುಮಾರು 3 ಮೀ ಸುತ್ತಳತೆ ತನಕ ಮಣ್ಣು ಸಡಿಲವಾಗಿರಬೇಕು.
  • ಪೋಷಕಗಳನ್ನು ಈ ವಿಸ್ತಾರದ ತನಕ ಹರಡಿ ಕೊಡಬೇಕು.
  • ತೆಂಗಿನ ಮರದ ಬುಡದಲ್ಲಿ ಬೇಸಿಗೆಯಲ್ಲಿ ದ್ವಿದಳ ಸಸ್ಯಗಳನ್ನು ಬೆಳೆಸಿ.
  • ಇಲ್ಲವೇ ಸಿಹಿ ಗೆಣಸು ಬೆಳೆಸಿ. ತೇವಾಂಶ ಉಳಿಯುತ್ತದೆ.
  • ನೀರಾವರಿಯ ಅಗತ್ಯವನ್ನು ಅವು ಬಾಡಿದಾಗ ತಿಳಿಯಬಹುದು.ಉತ್ತಮ ತೆಂಗಿನ ತಳಿಯ ಉತ್ಪಾದನಾ ಸಾಮರ್ಥ್ಯ ಸುಮಾರು 200 ಕಾಯಿಗಳು.ಇಷ್ಟು ಇಳುವರಿ ಪಡೆದರೆ ಮಾತ್ರ ಇದು ಲಾಭದಾಯಕ. ಅದಕ್ಕೆ ಉತ್ತಮ ಪೋಷಕಾಂಶಗಳನ್ನು ಕೊಟ್ಟು ಸಾಕಬೇಕು

3 Comments

  1. Uday Kumar

    Sir wt about manure for during 1year plant

    Reply
  2. Raghavendra

    I need exact hoe much fertilizer has to give .four years coconet tree.
    240 trees planted.
    Plea guide us.

    Reply
    • hollavenur

      N -900 (1800 graM Urea) grams, P;350 (Two Kg Supher phosphate) graams K 1200 grams (2Kg MOP) in three split doses. Also apply 250 gram megnisium slphate, 50 gram Zink sulphate at pre monsonn time. apply these at wet area 1.5 miter far from bole.
      If any doubt please contact.
      Radhakrishna Holla
      Editor.

      Reply

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!