ನಿಮ್ಮ ಹೊಲದ ಮಣ್ಣಿಗೆ ಯಾವಾಗ ಎಷ್ಟು ನೀರಾವರಿ ಮಾಡಬೇಕು.

arecanut

ನಿಮ್ಮಲ್ಲಿ ನೀರು ಎಷ್ಟೇ ಇರಲಿ. ಬೆಳೆಗಳಿಗೆ ಎಷ್ಟೇ ನೀರುಣಿಸಿರಿ. ಆದರೆ ಸಸ್ಯಕ್ಕೆ ಅದು ಲಭ್ಯವಾಗುವುದು ಮಣ್ಣಿನ ಗುಣದ ಮೇಲೆ.ಯಾವುದೇ ಬೆಳೆ ಇರಲಿ, ಅದಕ್ಕೆ ಬೇಕಾದಷ್ಟೇ ನೀರಾವರಿ ಮಾಡಬೇಕು. ಅದರಲ್ಲೂ ಅಡಿಕೆ, ತೆಂಗು ಮುಂತಾದ ಬೆಳೆಗಳಿಗೆ ನೀರು ಬೇಕಾಗುವುದು ಕಡಿಮೆ. ಹೆಚ್ಚಾದರೆ ಅದು ಎಲೆಗಳ ಮೂಲಕ ಬಾಷ್ಪೀಭವನ ಕ್ರಿಯೆಯಲ್ಲಿ  ಹೊರ ಹಾಕುತ್ತವೆ.

ಕೆಲವರು ತಮ್ಮ ಹೊಲಕ್ಕೆ ಎಷ್ಟೇ ನೀರುಣಿಸಿದರೂ ಮರುದಿನ ಒಣಗುತ್ತದೆ ಎನ್ನುತ್ತಾರೆ. ಕೆಲವರಲ್ಲಿ  ನೀರಾವರಿ ಮಾಡಿದ ನಂತರ ತೇವಾಂಶ  ಹೆಚ್ಚು ಸಮಯದ ತನಕ ಉಳಿಯುತ್ತದೆ. ಬೆಳೆಗಳಿಗೆ ನೀರು ಸಾಕಾಗುವುದು, ಕಡಿಮೆಯಾಗುವುದು, ನೀರಾವರಿ ಮಾಡಿದ್ದು ಹೆಚ್ಚು ಸಮಯದ ತನಕ ಉಳಿದುಕೊಳ್ಳುವುದು ಎಲ್ಲವೂ ಮಣ್ಣಿನ ಗುಣದ ಮೇಲೆ ಅವಲಂಭಿಸಿದೆ. ಮಣ್ಣು ಹೇಗಿರುತ್ತದೆ ಅದಕ್ಕನುಗುಣವಾಗಿ ನೀರಾವರಿ ಮಾಡಬೇಕು.ನಾವು ಕೊಡುವ ನೀರನ್ನು ಸಸ್ಯಗಳು ಎಲೆಗಳ ಮೂಲಕ ಬಾಷ್ಪೀಬವನ ಕ್ರಿಯೆಯಲ್ಲಿ ಹೊರ ಹಾಕುತ್ತವೆ. ನೆಲಕ್ಕೆ ಬಿಸಿಲು ಬಿದ್ದು ಅದು ಆವೀಕರಣದ ಮೂಲಕ ವಾತಾವರಣ ಸೇರುತ್ತದೆ. ಇವೆರಡು ಕ್ರಿಯೆಯಲ್ಲಿ ನಾವು ಕೊಡುವ ನೀರು ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗುತ್ತದೆ. ಉಳಿದದ್ದನ್ನು ಸಸ್ಯದ ಬೇರುಗಳು ಬೇಕಾದಷ್ಟೇ ಬಳಸಿಕೊಳ್ಳುತ್ತವೆ.

ನೀರಾವರಿ ಮಾಡಿದಾಗ ಅದು ಈ ರೀತಿ ಹಬ್ಬಿ ಪಸರಿಸಬೇಕು.
ನೀರಾವರಿ ಮಾಡಿದಾಗ ಅದು ಈ ರೀತಿ ಹಬ್ಬಿ ಪಸರಿಸಬೇಕು.

ಯಾವಾಗ ನೀರಾವರಿ ಪ್ರಾರಂಭಿಸಬೇಕು:

 • ಮಣ್ಣಿನ ಮೇಲ್ಪದರ ನೀರನ್ನು ಸ್ವೀಕರಿಸುವ ಸ್ಥಿತಿಗೆ ಬಂದಾಗ ನೀರಾವರಿ ಪ್ರಾರಂಭಿಸಬೇಕು.
 • ಬಹಳ ಜನ ಮಳೆಗಾಲ ಕಳೆದ ತಕ್ಷಣ ನೀರಾವರಿ ಪ್ರಾರಂಭಿಸಬೇಕು ಎನುತ್ತಾರೆ.
 • ಮಳೆಗಾಲ ಕಳೆದ ತರುವಾಯ ಮಣ್ಣಿನ ಮೇಲ್ಪದರ ಸುಮಾರು 2-3 ಇಂಚಿನಷ್ಟು ಒಣಗಿದ ನಂತರ ನೀರಾವರಿ ಪ್ರಾರಂಭಿಸಿದರೆ ಒಳ್ಳೆಯದು.
 • ನೆಲದಲ್ಲಿ ಹುಲ್ಲು, ನೀರುಕಡ್ಡಿ ಗಿಡ ಮಧ್ಯಾನ್ಹದ ಅವಧಿಯಲ್ಲಿ ಬಾಡಿದಂತೆ ಕಂಡ ಬಂದಾಗ ನೀರಾವರಿ ಮಾಡಬೇಕು.
 • ಅವುಗಳ ಬೇರು 1-2-3 ಇಂಚಿನ ಒಳಗೇ ಇರುತ್ತವೆ.
 • ಆಗ ಮಣ್ಣು ನೀರನ್ನು ಹೀರಿಕೊಳ್ಳುವ ಸ್ಥಿತಿಯಲ್ಲಿರುತ್ತದೆ.
 • ಬೆಳೆಗಳಿಗೆ ಋತುಮಾನ ಬದಲಾವಣೆಯ ಅನುಭವ ಗೊತ್ತಾಗುವಂತಿರಬೇಕು.
 • ಮೂರು ಋತುಮಾನಗಳೂ ಸಸ್ಯ ಬೆಳವಣಿಗೆ ಮತ್ತು ಇಳುವರಿಯ ಮೇಲೆ ಪ್ರಭಾವ ಬೀರುವ ಅಂಶಗಳಾಗಿವೆ.
 • ಮಣ್ಣಿನಲ್ಲಿ ನೀರು ಗುರುತ್ವ ಶಕ್ತಿಯಿಂದ ಕೆಳಕ್ಕೆ ಚಲಿಸುತ್ತದೆ.
 • ನೀರನ್ನು ಮಣ್ಣು ಸ್ವೀಕರಿಸುವಾಗ ಅದರಲ್ಲಿ ಸೇರಿರುವ ಅನಿಲ ಹೊರ ಬರುತ್ತದೆ.
 • ತೇವಾಂಶ ಒಳಗೊಂಡ ಮಣ್ಣಿನಲ್ಲಿ ಅನಿಲ ಹೊರ ಹೋಗಿರುತ್ತದೆ.
 • ತೇವಾಂಶ ಕಡಿಮೆಯಾದಾಕ್ಷಣ ಮಣ್ಣಿನ ಕಣಗಳ ಎಡೆಯಲ್ಲಿ ಅನಿಲ (ಹವೆ) ಸೇರಿಕೊಳ್ಳುತ್ತದೆ.
 • ಮಣ್ಣು ನೀರನ್ನು ಎಷ್ಟು ಪ್ರಮಾಣದಲ್ಲಿ ಹೀರಿಕೊಳ್ಳುತ್ತದೆ,ಅಷ್ಟು ಮಾತ್ರ ನೀರಾವರಿ ಮಾಡಬೇಕು.
 • ಸಾಮಾನ್ಯವಾಗಿ ಎರೆಮಣ್ಣು ಹೆಚ್ಚು ಹವೆಯನ್ನು ಸ್ವೀಕರಿಸಿ ನೀರಾವರಿ ಮಾಡಿದಾಗ   ಅಧಿಕ ಪ್ರಮಾಣದಲ್ಲಿ ಹೀರಿಕೊಳ್ಳುತ್ತದೆ.
 • ಮರಳು ಮಣ್ಣು ನೀರನ್ನು ಹೀರಿಕೊಂಡಂತೆ ಕೆಳಕ್ಕೆ  ಬಿಟ್ಟು ಕೊಡುತ್ತದೆ.
 • ನೀರಾವರಿ ಮಾಡಿ ಒಂದೇ ದಿನದಲ್ಲಿ ತೇವಾಂಶ ಆರಿ ಹೋಗುವ ಮಣ್ಣಿನಲ್ಲಿ ಮರಳಿನ ಅಂಶ ಹೆಚ್ಚಾಗಿರುತ್ತದೆ.
 • ಅಂತಹ ಮಣ್ಣಿಗೆ ಹಿತ ಮಿತವಾಗಿ, ನಿರಂತರ ನೀರಾವರಿ ಮಾಡಿ ನೀರು ಗುರುತ್ವ ಶಕ್ತಿಯಿಂದ ಕೆಳಕ್ಕೆ ಇಳಿಯದಂತೆ ನೋಡಿಕೊಳ್ಳಬೇಕು.
 • ಮರಳು ಮಣ್ಣಿಗೆ ಸೂಕ್ಷ್ಮ ತುಂತುರು,(Micro sprinkler)  ನೀರಾವರಿ ಚೆನ್ನಾಗಿ ಹೊಂದಿಕೊಳ್ಳುತ್ತವೆ.
 • ಹನಿ ನೀರಾವರಿ ಮಾಡುವುದಾದರೆ ಕಡಿಮೆ ಪ್ರಮಾಣದಲ್ಲಿ ಹೆಚ್ಚು ಜಾಗ ತೇವವಾಗುವಂತೆ ( ನಾಲ್ಕು ದಿಕ್ಕಿನಲ್ಲಿ) ನೀರು ತೊಟ್ಟಿಕ್ಕುವ ವ್ಯವಸ್ಥೆ ಮಾಡಬೇಕಾಗುತ್ತದೆ.
 •  ಮೆಕ್ಕಲು ಮಣ್ಣಿಗೆ ಬಿದ್ದ ನೀರು ಹರಡುವ ಕಾರಣ ಅದು ವಿಶಾಲ ಪ್ರದೇಶಕ್ಕೆ ಹರಡಿ, ತಳಕ್ಕೆ ಇಳಿಯುವುದು ನಿಧಾನವಾಗುತ್ತದೆ.
ಮರಳು ಮಿಶ್ರ ಮಣ್ಣಿಗೆ ಕಡಿಮೆ ನೀರಿನಲ್ಲಿ ಹೆಚ್ಚು ಜಾಗವನ್ನು ತೇವಗೊಳಿಸಲು ಇನ್ ಲೈನ್ ಡ್ರಿಪ್ ಸಹಾಯಕ
ಮರಳು ಮಿಶ್ರ ಮಣ್ಣಿಗೆ ಕಡಿಮೆ ನೀರಿನಲ್ಲಿ ಹೆಚ್ಚು ಜಾಗವನ್ನು ತೇವಗೊಳಿಸಲು ಇನ್ ಲೈನ್ ಡ್ರಿಪ್ ಸಹಾಯಕ

ಎಷ್ಟು ನೀರು ಬೇಕು:

 • ಸಸ್ಯಗಳ ಬೇರುಗಳಿಗೆ ಆಹಾರ ಸ್ವೀಕರಿಸಲು ಮಣ್ಣಿನಲ್ಲಿ ತೇವಾಂಶ ಇರಬೇಕು.
 • ತೇವಾಂಶ ಉಳ್ಳ ಮಣ್ಣಿನಲ್ಲಿ ಇರುವ ನೀರನ್ನಷ್ಟೇ ಸಸ್ಯಗಳು ಬಳಸಿಕೊಳ್ಳುವುದು.
 • ಮರಳು ಹೆಚ್ಚು ಇರುವ ಮಣ್ಣಿಗೆ ಅತಿಯಾಗಿ ನೀರು ಕೊಟ್ಟಾಗ ಅದು ಕೆಳಕ್ಕೆ ಇಳಿದು ಹೋಗುತ್ತದೆ.
 • ನೀರು ತಳಕ್ಕೆ ಇಳಿದರೆ ಅದು ಜೊತೆಗೆ ಪೋಷಕಾಂಶಗಳನ್ನೂ ಕೆಳಗೆ ಒಯ್ಯುತ್ತದೆ.
 • ಎರೆ ಅಂಟು ಮಣ್ಣಿಗೆ  ಹೆಚ್ಚು ನೀರು ಕೊಟ್ಟಾಗ ಅದು ಮೇಲ್ಪದರದಲ್ಲಿ  ತಂಗುತ್ತದೆ.
 • ನೀರು ಮೇಲ್ಭಾಗದಲ್ಲಿ ನಿಂತರೆ ಅದು ಕೊಳೆಯುವಿಕೆಗೆ ಕಾರಣವಾದ ಶಿಲೀಂದ್ರಗಳ ಬೆಳವಣಿಗೆಗೆ ಅನುಕೂಲಮಾಡಿಕೊಡುತ್ತದೆ.
 • ಮಣ್ಣಿನಲ್ಲಿ  ಎಷ್ಟು ಆಳದ ತನಕ ತೇವಾಂಶ ಉಳ್ಳ ಮಣ್ಣು ಇದೆಯೋ ಆ ಮಟ್ಟದ ತನಕ ಮಣ್ಣು ತೇವವಾಗುವಷ್ಟು ಮಾತ್ರ ನೀರನ್ನು ಉಣಿಸಬೇಕು.
 • ಒಂದು ಗುದ್ದಲಿಯಲ್ಲಿ ಅಗೆದು ನೋಡಿದರೆ ಇದು ಗೊತ್ತಾಗುತ್ತದೆ.
 • ಸಸ್ಯಕ್ಕೆ ಬೇಕಾದಷ್ಟೇ ನೀರನ್ನು ಕೊಡುತ್ತಾ ಇರಬೇಕು.
 • ಮಣ್ಣಿನ ಕೆಳ ಪದರದಲ್ಲಿ ಇರುವ  ನೀರಿನ ತೇವಾಂಶ ಅಷ್ಟು ಬೇಗೆ ಮಣ್ಣನ್ನು ತೇವಾಂಶ ಆರಲು ಬಿಡುವುದಿಲ್ಲ.

ಸಸ್ಯಗಳು ಮತ್ತು ನೀರು:

ನಿಯಮಿತವಾಗಿ ನೀರುಣಿಸಿದರೆ ಮರಳು ಮಣ್ಣಿಗೆ ಸ್ಪ್ರಿಂಕ್ಲರ್ ನೀರು ಒಳ್ಳೆಯದು
ನಿಯಮಿತವಾಗಿ ನೀರುಣಿಸಿದರೆ ಮರಳು ಮಣ್ಣಿಗೆ ಸ್ಪ್ರಿಂಕ್ಲರ್ ನೀರು ಒಳ್ಳೆಯದು
 • ನೀರು ಮುಖ್ಯವಾಗಿ ಸಸ್ಯಗಳ ಪೋಷಣೆಗೆ ಅಗತ್ಯವಾಗಿರುವುದರಿಂದ  ಅದು ಸ್ವತಹ ಆಹಾರವೆನಿಸಿದೆ.
 • ಬೆಳೆ ಪೋಷಣೆಗೆ ನಾವು ಕೊಡುವ ಆಹಾರ ಪದಾರ್ಥಗಳನ್ನು ತನ್ನ ಜೊತೆಗೆ ಮಣ್ಣಿನಿಂದ ಸಸ್ಯ ಭಾಗಗಳಿಗೆ ಕೊಂಡೊಯ್ಯುವ ಮಧ್ಯವರ್ತಿ ನೀರು.
 • ಬೆಳೆಯುವ ಸಸ್ಯಗಳು ಬಾಷ್ಪೀಭವನ ಕ್ರಿಯೆಯ ಮೂಲಕ  ಅಧಿಕ ಪ್ರಮಾಣದ ನೀರನ್ನು ಹೊರಹಾಕುತ್ತದೆ.
 • ನೀರು ಬಹುತೇಕ ಮಣ್ಣಿನ ಮುಖಾಂತರವೇ ಬರಬೇಕಾಗುತ್ತದೆ.
 • ಮಣ್ಣಿನ ನೀರು ಬೇರು ರೋಮಗಳಿಂದ ಹೀರಿಕೊಳ್ಳಲ್ಪಡುತ್ತದೆ.
 • ಸಸ್ಯ ಕೋಶಗಳ ಕ್ರಿಯೆಗೆ ನೀರು ಅಗತ್ಯ. ನೀರಿಲ್ಲದೆ ಸಸ್ಯ ಬೆಳವಣಿಗೆ ಆಗಲಾರದು.

ಒಂದು ಹಿಂಡಿ ಮಣ್ಣನ್ನು ಎರಡೂ ಕೈಯಲ್ಲಿ ಹಿಡಿದು ಬಲವಾಗಿ ಜಗ್ಗಿದಾಗ ಅದರಲ್ಲಿ ಒಂದು ತೊಟ್ಟೂ ನೀರು ಹೊರಬರಬಾರದು. ಪ್ರಮಾಣದ ತೇವಾಂಶ ಸಸ್ಯಗಳಿಗೆ ಆಹಾರ ಸರಬರಾಜಿಗೆ ಸಾಕಾಗುತ್ತದೆ.

ಇಂತಹ ಮಣ್ಣಿನಲ್ಲಿ ನೀರು ತಳಕ್ಕಿಳಿಯದೆ ಹರಡಿ ಹೆಚ್ಚು ಪ್ರದೇಶವನ್ನು ತೇವಗೊಳಿಸುತ್ತದೆ.
ಇಂತಹ ಮಣ್ಣಿನಲ್ಲಿ ನೀರು ತಳಕ್ಕಿಳಿಯದೆ ಹರಡಿ ಹೆಚ್ಚು ಪ್ರದೇಶವನ್ನು ತೇವಗೊಳಿಸುತ್ತದೆ.
 • ಉನ್ನತ ಸಸ್ಯಗಳು ಮಣ್ಣಿನ ಅಡಿ ಭಾಗದಲ್ಲಿ ಬೇರನ್ನು ಇಳಿಸಿರುವ ಕಾರಣ ಅವು ಅಲ್ಲಿ ಸಂಗ್ರಹವಾಗಿರುವ ತೇವಾಂಶವನ್ನು ಬಳಸಿಕೊಂಡು ನೀರಿಲ್ಲದೆಯೂ ಬದುಕುತ್ತವೆ.
 • ಆದರೆ ಮೇಲ್ಪದರದಲ್ಲಿ ಬೇರು ಹಬ್ಬಿ ಬೆಳೆಯುವ ಸಸ್ಯಗಳು  ಹಾಗಿಲ್ಲ.
 • ಅವು ಮೇಲ್ಪದರ ಒಣಗಿದಾಕ್ಷಣ ಸೊರಗಲು ಪ್ರಾರಂಭವಾಗುತ್ತವೆ.
 • ಆದರೂ ಅಂತಹ ಸಸ್ಯಗಳ ಬೇರು ಬಲೆಯಂತೆ ಹೆಣೆದಿರುವ ಕಾರಣ ತೇವಾಂಶ ಆರಲು ಬಿಡುವುದಿಲ್ಲ.

ಹೊಲದ ಸಾಮರ್ಥ್ಯಕ್ಕಿಂತ ಹೆಚ್ಚಾದ ನೀರು ಅನವಶ್ಯಕ ನೀರು. ಮಣ್ಣು ತೇವವಾಗುವಷ್ಟೇ ಪೂರೈಕೆ ಮಾಡುವುದು ಅವಶ್ಯಕವಾದಷ್ಟೇ ನೀರು. ಬೇರು ವಲಯಕ್ಕಿಂತ ಕೆಳಭಾಗಕ್ಕೆ ಇಳಿದು ಹೋಗುವ ನೀರು ಅಲಭ್ಯ ನೀರು.

ಸಸ್ಯಗಳು ನೀರನ್ನು ಹೇಗೆ ಪಡೆದುಕೊಳ್ಳುತ್ತದೆ?

 • ಯಾವಾಗಲೂ ಮಣ್ಣಿನಲ್ಲಿ ಸ್ವಲ್ಪ ನೀರು ಸಸ್ಯದ ಬೇರಿನ ಸಮೀಪ ಇದ್ದೇ ಇರುತ್ತದೆ.
 • ಚಾಪೆಯಂತೆ ಬೇರುಗಳು ಹರಡಿ ತೇವಾಂಶವನ್ನು ಉಳಿಸಿಕೊಂಡಿರುತ್ತವೆ.
 • ನೀರನ್ನು ಪೂರೈಕೆ ಮಾಡುತ್ತಿರುವಾಗ ಮತ್ತು ಬೇರು ಬೆಳವಣಿಗೆಯ ಕಾಲದಲ್ಲಿ   ಬೇರು ಹೆಚ್ಚು ಹೆಚ್ಚು ಬೆಳೆಯುತ್ತದೆ ಮತ್ತು ಉದ್ದಕ್ಕೂ ಬೆಳೆಯುತ್ತದೆ.
 • ಹೊರ ಮೂಲದಿಂದ ಪೂರೈಕೆ ಮಾಡುವ ನೀರು ಕಡಿಮೆಯಾದಾಗ ಸಸ್ಯಗಳು ಮಣ್ಣಿನಿಂದ ಎಲ್ಲಿ ನೀರು ಇದೆಯೋ ಅಲ್ಲಿಂದ ಆಕರ್ಷಣೆ ಮಾಡಿ ನೀರನ್ನು ಪಡೆಯುವ ಗುಣ ಪಡೆದಿವೆ.

ನೀರಿನ ಮಿತವ್ಯಯ:

 • ನೆಲಕ್ಕೆ ದರಗು, ಹುಲ್ಲು, ಸೊಪ್ಪು, ಕೃಷಿ ತ್ಯಾಜ್ಯಗಳನ್ನು ಹರಡುವುದರಿಂದ ಗರಿಷ್ಟ ನೀರಿನ ಆವೀಕರಣ ತಡೆಯಲ್ಪಡುತ್ತದೆ.
 • ಕಡಿಮೆ ನೀರು ಸಾಕಾಗುತ್ತದೆ.
 • ಒಣ ತ್ಯಾಜ್ಯಗಳನ್ನು  ಹಾಕಿದಾಗ ಅದರ ಮೇಲೆ ನಿಯಮಿತ ಪ್ರಮಾಣದಲ್ಲಿ ನೀರು ಸಿಂಚನ ಆಗುತ್ತಿದ್ದರೆ ಅದು  ಎಲ್ಲಾ ಕಾಲದಲ್ಲೂ ಕಳಿಯುತ್ತಾ ನಿಯಮಿತ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಮಣ್ಣಿಗೆ ಬಿಡುಗಡೆ ಮಾಡುತ್ತಾ ಇರುತ್ತದೆ.
 • ಒಣಗುತ್ತಾ ಇದ್ದರೆ ಮಳೆ ಬಂದಾಗ ಮಾತ್ರ ಅದು ಕಳಿತು ಗೊಬ್ಬರವಾಗಿ ಮಾರ್ಪಡುತ್ತದೆ. 
 • ಆಗ ಅದು ಕೊಚ್ಚಣೆಗೆ ಒಳಪಡುವುದೂ ಇದೆ.
 • ಮಿಶ್ರ ಬೆಳೆಗಳನ್ನು ಬೆಳೆದಾಗ ನೆಲಕ್ಕೆ ನೇರವಾಗಿ ಬಿಸಿಲಿನ ಹೊಡೆತ ಬೀಳುವುದು ತಪ್ಪಿ ಆವೀಕರಣ ಕಡಿಮೆಯಾಗುತ್ತದೆ.
 • ಒಂದು ಚರದ ಅಡಿ ಸ್ಥಳದಲ್ಲಿ ಆವೀಕರಣ ಎಷ್ಟು ಆಗುತ್ತದೆ ಎಂಬುದನ್ನು ನಾವು ಸುಲಭವಾಗಿ ತಿಳಿಯಬಹುದು.
 • ಒಂದು ಕಿಲೋ ಹಸಿ ಕರಿಮೆಣಸು, ಅಥವಾ ಹಣ್ಣಾದ ಅಡಿಕೆಯನ್ನು ಬಿಸಿಲಿಗೆ ಹರಡಿ.
 • ಸಂಜೆ ಬಿಸಿಲು ಆರಿದ ನಂತರ  ತೂಕ ಮಾಡಿದಾಗ ಆವೀಕರಣ ಆದ ನೀರಿನ ಪ್ರಮಾಣದ ಲೆಕ್ಕ ಸಿಗುತ್ತದೆ.
 • ಅಷ್ಟೇ ನೀರು  ನಮ್ಮ ತೋಟದ ನೆಲದಿಂದಲೂ ಆವಿಯಾಗುತ್ತದೆ.
 • ನೆಲದಲ್ಲಿ ಹಾವಸೆ ಬೆಳೆದರೆ ನೀರಿನ ಆವೀಕರಣ ಕಡಿಮೆಯಾಗುತ್ತದೆ.
 • ಬೇಸಿಗೆಯಲ್ಲಿ ಕಳೆ ಉಳಿಸಿದರೆ ತೇವಾಂಶ ಸಂರಕ್ಷಣೆಗೆ ಸಹಾಯವಾಗುತ್ತದೆ.

ರೈತರು ಸಾಧ್ಯವಾದಷ್ಟು ತಮ್ಮ ಹೊಲದ ಮಣ್ಣನ್ನು ಫಲವತ್ತಾದ ಮೆಕ್ಕಲು ಮಣ್ಣಾಗಿ ಪರಿವರ್ತಿಸುವ ಕಡೆಗೆ ತಮ್ಮ ಬೇಸಾಯ ವಿಧಾನವನ್ನು ಬದಲಾವಣೆ ಮಾಡುತ್ತಾ ಬರಬೇಕು. ಅಧಿಕ ನೀರು ಫಲವತ್ತತೆಯನ್ನು ಕಡಿಮೆ ಮಾಡುತ್ತದೆ. ಫಲವತ್ತಾದ ಮೆಕ್ಕಲು ಮಣ್ಣು ನೀರನ್ನು ಸಮರ್ಪಕವಾಗಿ ಹೀರಿಕೊಂಡು ಬೆಳೆಗಳ ಬೇರುಗಳಿಗೆ ಬೇಕಾದಂತೆ ಪೂರೈಕೆ ಮಾಡುತ್ತದೆ.

2 thoughts on “ನಿಮ್ಮ ಹೊಲದ ಮಣ್ಣಿಗೆ ಯಾವಾಗ ಎಷ್ಟು ನೀರಾವರಿ ಮಾಡಬೇಕು.

Leave a Reply

Your email address will not be published. Required fields are marked *

error: Content is protected !!