ಹೆಬ್ಬಲಸಿನ ಕಾಯಿ- ಹಣ್ಣಿಗೂ ಭಾರೀ ಬೆಲೆ ಬಂದಿದೆ.

ಹೆಬ್ಬಲಸಿನ ಹಣ್ಣು

ಹೆಬ್ಬಲಸಿನ ಕಾಯಿ- ಹಣ್ಣು ಎರಡಕ್ಕೂ ಬೆಲೆ ಇದೆ. ಇದನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವವರಿದ್ದಾರೆ. ಇದರ ಮರ ಬೆಲೆಬಾಳುವ ನಾಟ ಸಹ. ಮನುಷ್ಯ ಪಶು ಪಕ್ಷಿ ಎಲ್ಲದಕ್ಕೂ ಆಹಾರ ಕೊಡುವ ವೃಕ್ಷ.

ಯಾವಾಗಲೂ ಒಂದು ವಸ್ತು ಅಳಿಯುತ್ತಾ ಬಂದಾಗ ಅದಕ್ಕ್ಕೆ ಬೇಡಿಕೆ ಬರುತ್ತದೆ. ಹಾಗಾಗಿದೆ ಈ ಹೆಬ್ಬಲಸಿನ ಕಾಯಿಯ ಕಥೆ. ಹೆಬ್ಬಲಸಿನ ಹಣ್ಣು,ಅಳಿದು ಹೋಗುತ್ತಿರುವ ಒಂದು ಅಮೂಲ್ಯ ಹಣ್ಣಿನ ಕಥೆ ಇಲ್ಲಿದೆ.

ಹೆಬ್ಬಲಸಿನ ಹಣ್ಣಿನ ಕಥೆ: 

 •  ಆಗ ಕೊನೇ  ಪರೀಕ್ಷೆ ನಡೆಯುವುದು ಎಪ್ರೀಲ್ ತಿಂಗಳ ತರುವಾಯ.
 • ನಾವು ಓದುತ್ತಿದ್ದುದು ತಂಪು ಇರುವ ಮರದ ಕೆಳಗೆ. ಆಗ ಕರೆಂಟ್ ಇರಲಿಲ್ಲ.
 • ತಂಪು ಮರದ ಬುಡದಲ್ಲೇ.
 • ಆಗ ಪೆಜಕಾಯಿ ಮರದಲ್ಲಿ ಕಾಯಿ ಹಣ್ಣಾಗಲಾರಂಭಿಸುತ್ತದೆ.
 • ಆಗಾಗ ಹಣ್ಣಾದ ಪೆಜಕ್ಕಾಯಿ ದೊಪ್ಪನೆ ನೆಲಕ್ಕೆ ಬೀಳುತ್ತದೆ.
 •  ನೆಲಕ್ಕೆ ಬಿದ್ದಾಕ್ಷಣ ಅಲ್ಲೇ ಹಾಜರಿರುವ ಹಸುಗಳು ತಿನ್ನಲು ಹತ್ತಿರ ಬರುತ್ತವೆ. ಅದನ್ನು ತಿನ್ನುತ್ತವೆ.
 • ಆಗಾಗ ನಾನೂ ಬಿದ್ದ ಹಣ್ಣಿನ ಸ್ಥಿತಿಗತಿ ನೋಡಿ ಅದರ ಸೊಳೆಯನ್ನು ಚೀಪಿ ತಿಂದುದ್ದುಂಡು.
 • ಕೆಲವರು ಪೆಜಕಾಯಿಯ ಹಣ್ಣಿನ ತೊಳೆಯೊಳಗೆ ದೊರೆಯುವ ಬೀಜಗಳನ್ನು ಆರಿಸಿ ತಂದು ಅದನ್ನು ಸುಟ್ಟು ಬೇಯಿಸಿ ತಿನ್ನುವುದಿತ್ತು.
 • ಕೆಲವರು ಬೀಜದಿಂದ ಎಣ್ಣೆ ತೆಗೆಯುತ್ತಿದ್ದರು

ಹೆಬ್ಬಲಸಿನ ಹಣ್ಣು

ಜೀವ ವೈವಿಧ್ಯಗಳ ಆಹಾರ:

 • ಹಿಂದೆ ನಮ್ಮ ಕರಾವಳಿ ಮಲೆನಾಡಿನ ಕಾಡುಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ  ಇರುತ್ತಿದ್ದ ಮರಮಟ್ಟೆಂದರೆ ಹೆಬ್ಬಲಸಿನ ಮರ.
 • ಇದನ್ನು ತಿನ್ನಲು ಬಾವಲಿಗಳು, ಹಕ್ಕಿಗಳು, ಕೋತ್ರಿ, ಅಳಿಲು, ಕರಡಿ ಮುಂತಾದ ಹಲವಾರು ಜೀವಿಗಳು ಆಶ್ರಯಿಸಿರುತ್ತಿದ್ದವು.
 • ಆನೆಗಳಿಗೆ, ಹಸು, ಎಮ್ಮೆಗಳಿಗೆ  ಇದರ ಹಸಿ ಎಲೆ ತಿನ್ನಲು ಇಷ್ಟ.
 • ಹಣ್ಣಾದ ಸ್ಥಿತಿಯಲ್ಲಿ ಉದುರಿ ಬೀಳುವ ಎಲೆಗಳನ್ನು ತಕ್ಷಣ ತಿನ್ನಲು ಮರದಡಿಯಲ್ಲೇ ಹಸುಗಳು ಸುತ್ತಾಡುತ್ತಿರುತ್ತವೆ.
 • ಆಗಿನ ಕಾಲದ ಒಂದೊಂದು ಹೆಬ್ಬಲಸಿನ ಮರ ಒಂದುಎರಡು ಹಸುಗಳ ಹೊಟ್ಟೆ ತುಂಬಿಸುವಷ್ಟು ಹಿರಿದಾಗಿ ಬೆಳೆದಿರುತ್ತಿತ್ತು.
 • ಒಂದೊಂದು ಪೆಜಕ್ಕಾಯಿ ಮರ ಸಾವಿರಾರು ಕಾಯಿಗಳನ್ನು ಬಿಡುತ್ತಿತ್ತು.
 • ಮರವನ್ನು ಎರಡು ಜನ ಸೇರಿದರೆ ಮಾತ್ರ ಕೈ ಯಿಂದ ಹಿಡಿಯಲು ಸಾಧ್ಯ.
 • ಇಂಥಃ ಪೆಜಕ್ಕಾಯಿ ಮರಗಳು ಇನ್ನು ನೋಡಲಿಕ್ಕಿಲ್ಲ. ಅವುಗಳೆಲ್ಲಾ ಈಗ ನಾಟಾ ಆಗಿ ಮನೆಯ ಬಾಗಿಲು, ಕಿಟಕಿ ಚೌಕಟ್ಟು, ಪೀಠೋಪಕರಣ, ಜಂತಿಗಳಲ್ಲಿ ಸೇರಿಕೊಂಡಿದೆ.
 • ಕಾಡಿನಲ್ಲಿ ಪೆಜಕ್ಕಾಯಿಯ  ಮರಗಳೇ ಇಲ್ಲದೆ ಕೋತಿಗಳು ಆಹಾರಕ್ಕಾಗಿ ರೈತರ ಹೊಲಕ್ಕೆ ಲಗ್ಗೆ ಇಡುತ್ತಿವೆ.

ಕನ್ನಡದಲ್ಲಿ  ಹೆಬ್ಬಲಸು, ಕಾಡು ಹಲಸು  ಹೆಸ್ವ, ಕಬ್ಹಲಸು ಎಂದು ಕರೆಯಲ್ಪಡುವ ಇದರ ತುಳುವಿನ ಹೆಸರೇ ಪೆಜಕ್ಕಾಯಿಇಂಗ್ಲೀಷಿನಲ್ಲಿ  ಇದನ್ನು ವೈಲ್ಡ್ ಜಾಕ್, ಮಲಯಾಳಂನಲ್ಲಿ ಅಂಜಿಲಿ, ತಮಿಳಿನಲ್ಲಿ ಐನಿ ಎಂಬುದಾಗಿ ಕರೆಯುತ್ತಾರೆ.

ಮಾರಾಟದ ಅಂಗಡಿಯಲ್ಲಿ ಹೆಬ್ಬಲಸಿನ ಹಣ್ಣು

 ಹೆಬ್ಬಲಸಿನ ಉಪಯೋಗ:

 • ಇದರ ಸಸ್ಯ ಶಾಸ್ತ್ರೀಯ ಹೆಸರು ಅರ್ಟೋಕಾರ್ಪಸ್ ಹಿರ್ಸುಟಾ (Artocarpus hirsuta).,ಮೋರೇಸೀ (Moraceae)) ಕುಟುಂಬಕ್ಕೆ ಸೇರಿದೆ.
 • ಇದರಲ್ಲಿ ಜನವರಿ ಫೆಬ್ರವರಿಯಲ್ಲಿ  ಹೂವು ಅಗಿ (ಮಿಡಿಕಾಯಿ) ಎಪ್ರೀಲ್ ನಿಂದ ಜೂನ್ ತನಕ ಹಣ್ಣುಗಳಿರುತ್ತವೆ.
 • ಇದರ ಬೆಳೆಯುತ್ತಿರುವ ಕಾಯಿಯನ್ನು ಕೊಯಿದು ಉಪ್ಪಿನ ಕಾಯಿ ಮಾಡುತ್ತಾರೆ.
 • ಇದು ಮುಂಬಯಿಗೆ   ಮಾರಾಟವಾಗುತ್ತದೆ.
 • ಇಂದಿಗೂ ಮಂಗಳೂರಿನಲ್ಲಿ ಹೆಬ್ಬಲಸಿನ ಕಾಯಿ, ಹಣ್ಣುಗಳನ್ನು ಮಾರುವವರಿದ್ದಾರೆ.

ಬಲಿಯುತ್ತಿರುವ ಕಾಯಿಯೊಳಗೆ ಇನ್ನೂ ಬೀಜದ ತೊಗಟೆ ( ಹಲಸಿನ ಬೀಜದಲ್ಲಿ ಇರುವ ತೊಗಟೆ ತರಹದ) ಗಟ್ಟಿಯಾಗದ ಕಾಯಿಗಳನ್ನು ಕೊಯಿಲು ಮಾಡಿ ಅದರ ಮುಳ್ಳುಗಳನ್ನು ಹೆರಸಿ ಉಪ್ಪಿನಲಿ  ಹಾಕಿಟ್ಟು ಸಂಗ್ರಹಿಸಿ ಬೇಡಿಕೆಗನುಗುಣವಾಗಿ ಉಪ್ಪಿನಕಾಯಿ ಮಾಡಿ ಕೊಡುವ ಒಂದಷ್ಟು ಗೃಹ ಉದ್ದಿಮೆಗಳು ಕರಾವಳಿಯಲ್ಲಿ ಇದೆ.

 • ಹೆಬ್ಬಲಸಿನಲ್ಲಿ  ಗಂಡು ಮತ್ತು ಹೆಣ್ಣು  ಎಂಬ ಎರಡು ವಿಧಗಳಿವೆ.  ಗಂಡಿನಲ್ಲಿ  ಕಾಯಿಯಾಗುವುದೇ ಇಲ್ಲ

ಹಣ್ಣಿನಲ್ಲಿ ಏನು ಸತ್ವ ಇದೆ:

 •  ಹೆಬ್ಬಲಸಿನ ಹಣ್ಣಿನಲ್ಲಿ ಶರ್ಕರ ಪಿಷ್ಠಗಳು, ಸಸಾರಜನಕ ಮತ್ತು  ಖನಿಜಾಂಶಗಳಿವೆ.
 • ಹಣ್ಣಿನ ಸಿಪ್ಪೆ, ಎಲೆ ತಿಂದ ಹಸುಗಳು ಸ್ವಲ್ಪ ಹೆಚ್ಚು ಹಾಲು ಕೊಡುತ್ತವೆ .
 •  ಬೀಜಗಳಲ್ಲಿ ಹೇರಳವಾಗಿ ಪಿಷ್ಠ ಇರುತ್ತದೆ.
 • ತಾಜಾವಾಗಿ ತಿನ್ನಲು ಹಣ್ಣಿನ ತೊಳೆ ಹುಳಿ ಸಿಹಿ ರುಚಿ. ಬೀಜ  ಒಗರು ರುಚಿ.
 • ಸೊಳೆಯು ಕೇಸರಿ  ಬಣ್ಣದಲ್ಲಿರುತ್ತದೆ. ಇದರಲ್ಲಿ ಔಷಧೀಯ ಗುಣಗಳೂ ಇವೆ.
 • ಇದರ ತೊಗಟೆಯಿಂದ ಮೊಡವೆ, ಮುಖದ ಬಿರುಕು, ವೃಣ ಮತ್ತು ಮುಖ ಕಾಂತಿಯನ್ನು ಹೆಚ್ಚಿಸುವ ಔಷದಿಗಳಲ್ಲಿ ಬಳಕೆ ಮಾಡುತ್ತಾರೆ.
 • ದೇಹದ ಗಡ್ಡೆ , ಬಾವುಗಳಿಗೆ ಎಲೆಯಿಂದ ಔಷಧಿ  ತಯಾರಿಸುತ್ತಾರಂತೆ.
 • ಎಲೆ, ಹಣ್ಣು, ಮತ್ತು ತೊಗಟೆಗಳಿಂದ ಅತಿಸಾರ, ಚರ್ಮ ರೋಗ, ವಿಷ ಸೇವನೆಯ ಶಮನಕ್ಕೆ ಔಷದಿ ತಯಾರಿಸುತ್ತಾರಂತೆ.
 • ಹೆಬ್ಬಲಸಿನ ತೊಗಟೆ ಕ್ಯಾನ್ಸರ್ ಚಿಕೆತ್ಸೆಗೂ ಸಹಕಾರಿ ಎನ್ನುತ್ತಾರೆ  ಆಯುರ್ವೇದ  ಪರಿಣತರು.

ಇದರ ಮೂಲ ಭಾರತ ದೇಶ. ಮರದ ಪ್ರತೀಯೊಂದು ಭಾಗದಲ್ಲೂ ಗಾಯವಾದಾಗ ಹಾಲು ಒಸರುತ್ತದೆ. ಹಲಸು, ದಿವಿ ಹಲಸು, ವಾಟೆ ಹುಳಿ, ಎಲ್ಲವೂ ಒಂದೇ ಕುಟುಂಬಕ್ಕೆ ಸೇರಿಸ ಸಸ್ಯವರ್ಗಗಳು.  

ಪ್ಯಾಕಿಂಗ್ ಅದ ಹೆಬ್ಬಲಸಿನ ಕಾಯಿ

 • ಇದು ಮಳೆ ಹೆಚ್ಚು ಇರುವ ಕಾಡುಗಳಲ್ಲಿ  ಬೆಳೆಯುವ ಸಸ್ಯ. ನೆಟ್ಟು ಬೆಳೆಸಿದರೂ ಬೆಳೆಯುತ್ತದೆ. ನೂರಾರು ವರ್ಷ ಬದುಕುತ್ತದೆ.
 • ಪ್ರಾಯವಾದಾಗ ಎಲೆಗಳೆಲ್ಲಾ ಒಣಗಿ ಸಾಯುತ್ತದೆ.
 • ನೆಟ್ಟು ಬೆಳೆಸಿದರೆ ಸುಮಾರು 30-40 ವರ್ಷಕ್ಕೆ  ನಾಟಾಕ್ಕೆ ಕಡಿಯಬಹುದು.
 • 10-15 ವರ್ಷದಲ್ಲಿ ಕಾಯಿ ಬಿಡಲಾರಂಭಿಸುತ್ತದೆ. ನೈಸರ್ಗಿಕವಾಗಿ ಹಕ್ಕಿ, ಬಾವಲಿ, ಕೋತಿ, ಅಳಿಲು ತಿಂದು ಚೀಪಿ ಹಾಕ್ಕಿದ ಬೀಜ ಮೊಳೆತು ಸಸಿಗಳಾಗುತ್ತವೆ
 • ಬೀಜ ಬಿತ್ತಿ ಎಲ್ಲರೂ ಸಸಿ ಮಾಡಬಹುದು.

ಹೆಬ್ಬಲಸು ಬೆಳೆಸುವಿಕೆ:

 • ಇದು ಬೀಜದಿಂದ ಸಸ್ಯಾಭಿವೃದ್ದಿಯಾಗುತ್ತದೆ. ಫೆಬ್ರವರಿಯಿಂದ ಮೇ ತನಕ ಹಣ್ಣುಗಳಾಗುತ್ತವೆ.
 • ಹಕ್ಕಿಗಳು ತಿಂದು ಬಿಟ್ಟ ಬೀಜ, ಹಣ್ಣಾಗಿ ಬೀಳುವ ಹಣ್ಣುಗಳ ಬೀಜ ಹುಟ್ಟುತ್ತದೆ.
 • ಇದನ್ನು ಬೆಳೆಸಿ ಸಸ್ಯಾಭಿವೃದ್ದಿ ಮಾಡಬಹುದು. ವೇಗವಾಗಿ ಬೆಳೆಯುತ್ತದೆ.
 • 35 – 40 ವರ್ಷಕ್ಕೆ ನಾಟಾ ಆಗುತ್ತದೆ.ನೂರಾರು ವರ್ಷ ಬದುಕುವ ವೃಕ್ಷ.
 • ವರ್ಷ ಹೆಚ್ಚಾದಂತೆ ಡೆಪಾಸಿಟ್ ಬಡ್ಡಿ ಹೆಚ್ಚಾದಂತೆ ಮೌಲ್ಯ ಹೆಚ್ಚಾಗುತ್ತದೆ. 
 • ಇದು ಹಲಸಿಗಿಂತಲೂ ಉತ್ತಮ ಮರಮಟ್ಟು ಎನ್ನಬಹುದು.

ತೀವ್ರವಾದ ಕೃಷಿ ವಿಸ್ತರಣೆಯಿಂದ ಮತ್ತು ವಯಸ್ಸಾಗಿ ಸಾಯುವ ಮರಗಳ ಬದಲಿಗೆ  ಹೊಸ ಸಸಿ ನಾಟಿಮಾಡದೆ ಇರುವ ಕಾರಣ ಹೆಬ್ಬಲಸು ಮರಗಳು ತುಂಬಾ ಕಡಿಮೆಯಾಗುತ್ತಿವೆ. ಹೆಬ್ಬಲಸಿನ ನಾಟಾಕ್ಕೆ ಭಾರಿ ಬೆಲೆ ಬಂದಿದೆ. ಇದರ ನಾಟಾಕ್ಕೆ ಗೆದ್ದಲು ಹಾಗೂ ಶಿಲೀಂದ್ರಗಳೂ ಸೋಂಕಲಾರವು

 • ಬೀಜಗಳನ್ನು  ಸಸಿಮಾಡಿ ನೆಟ್ಟು ಬೆಳೆಸಿದರೆ ಕೃಷಿಕರಿಗೆ ತುಂಬಾ ಲಾಭವಿದೆ.
 • ಇದು ಜೀವಮಾನ ಪರ್ಯಂತ ಸಾಕಷ್ಟು ಪ್ರಮಾಣದ  ತರಗೆಲೆ, ಹಣ್ಣು ಕೊಡುತ್ತದೆ.

ಇದು ಕೃಷಿಗೆ ಗೊಬ್ಬರ, ಹಸುಗಳಿಗೆ ಆಹಾರ. ಕೊನೆಯದಾಗಿ ಜೀವಮಾನದಲ್ಲಿ ನೀಡಿದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ತನ್ನ ಮರಮಟ್ಟಿನ ಮೂಲಕ ನೀಡುತ್ತದೆ.

Leave a Reply

Your email address will not be published. Required fields are marked *

error: Content is protected !!